Thursday, March 1, 2012

ಗೋರಿಗಳ ತೋಟದ ಕಾವಲುಗಾರರು

ರಸ್ತೆ ಅಗಲೀಕರಣಕ್ಕೆ ಶಿವರಾಮಕಾರಂತರ ಮನೆ ನೆಲಸಮ! ಈ ಕುರಿತಂತೆ ಕಾರಂತರ ಅಭಿಮಾನಿಯೊಬ್ಬರು ಗೋಳಾಡುತ್ತಿದ್ದರು. ದಕ್ಷಿಣ ಕನ್ನಡದಲ್ಲಿ ರಸ್ತೆ ಅಗಲೀಕರಣ, ಸೆಝ್, ಕೈಗಾರಿಕೆ ಇತ್ಯಾದಿಗಳ ಹೆಸರು ಸಹಸ್ರಾರು ಮನೆಗಳು ನೆಲ ಸಮವಾಗಿವೆ. ಹಸಿರು ತೋಟಗಳು ಬುಡ ಕಳಚಿ ಬಿದ್ದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸಾವಿರಾರು ಬಡ ಕುಟುಂಬಗಳು ಬೀದಿ ಪಾಲಾಗಿವೆ. ಶಿವರಾಮಕಾರಂತರ ಮನೆ ನೆಲಸಮವಾಗಿರುವುದು ಇವೆಲ್ಲಕ್ಕಿಂತ ಭಿನ್ನವೆಂದು ಸ್ವೀಕರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಒಂದು ರೀತಿಯಲ್ಲಿ, ಪ್ರದರ್ಶನಕ್ಕಷ್ಟೇ ಇದ್ದ ಈ ಮನೆ ಬಿದ್ದರೂ, ಹೋದರು ದೊಡ್ಡ ನಷ್ಟವೆಂದು ಅನ್ನಿಸುತ್ತಿಲ್ಲ. ಕಾರಂತರ ಸಾಹಿತ್ಯಕ್ಕೂ ಆ ಮನೆಗೂ ಯಾವ ಸಂಬಂಧವನ್ನೂ ಕಲ್ಪಿಸಲು ನನಗೆ ಸಾಧ್ಯವಾಗುತ್ತಿಲ್ಲ.ಕರಾವಳಿಯ ಸಹಸ್ರಾರು ಜನರ ಬದುಕೇ ಈ ಅಭಿವೃದ್ಧಿಯ ಪಾಲಾಗುತ್ತಿರುವಾಗ, ಸ್ಮಾರಕದಂತಿರುವ ಈ ಮನೆ ಹೋದರೆಷ್ಟು ಬಿದ್ದರೆಷ್ಟು? ಎಲ್ಲಿಯವರೆಗೆ ನಮ್ಮ ನಾಡುವೆ ಕಾರಂತರ ಕೃತಿಗಳು, ಚಿಂತನೆಗಳು ಜೀವಂತವಿರುತ್ತದೋ ಅಲ್ಲಿಯವರೆಗೆ ನಾವು ಈ ಸ್ಮಾರಕಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ.

 ತುಂಬಾ ವರ್ಷಗಳ ಹಿಂದೆ ಮೂಡಿಗೆರೆಯ ತೇಜಸ್ವಿ ಅಭಿಮಾನಿಯೊಬ್ಬರು ಇತ್ತೀಚೆಗೆ ದೂರವಾಣಿಯಲ್ಲಿ ಮಾತನಾಡುತ್ತಾ, ತೇಜಸ್ವಿ ಅವರ ಮನೆ, ತೋಟವನ್ನು ಮಾರುತ್ತಿದ್ದಾರಂತೆ ಎಂದು ಆತಂಕದಿಂದ ನುಡಿದರು. ‘ನಾವು ಈ ಕುರಿತಂತೆ ಅವರ ಕುಟುಂಬದ ಜೊತೆಗೆ ವಿಚಾರಿಸಿದೆವು. ಅಂತಹ ಪ್ರಸ್ತಾಪವಿಲ್ಲ ಎಂದು ಅವರು ನಮಗೆ ಸಮಜಾಯಿಶಿ ನೀಡಿದರು. ಅವರ ಸಮಜಾಯಿಶಿ ಕೇಳಿ ಒಂದಿಷ್ಟು ಸಮಾಧಾನವಾಯಿತು ’ ಎಂದೆಲ್ಲ ಬಡಬಡಿಸಿದರು. ಈ ಹಿಂದೆ ಲಂಕೇಶರ ಮಾವಿನ ತೋಟವನ್ನು ಅವರ ಪುತ್ರ ಮಾರಿದ್ದಾರಂತೆ ಎಂದು ಲಂಕೇಶ್ ಅಭಿಮಾನಿಯೊಬ್ಬರು, ಅಘಾತದಂದ ತಮ್ಮ ದುಃಖವನ್ನು ತೋಡಿಕೊಂಡಿದ್ದರು. ‘ನೋಡಿ ಸಾರ್, ಲಂಕೇಶ್‌ಗೆ ಎಂತಹ ಅವಮಾನ ಮಾಡಿ ಬಿಟ್ರು...?’ ಎಂದು ಗೋಳಾಡಿದ್ದರು. ಲಂಕೇಶರ ಅಲೋಚನೆಗಳಿಗೆ, ಚಿಂತನೆಗಳಿಗೆ ದ್ರೋಹವಾದಾಗ ಇದೇ ಮನುಷ್ಯ ಲಂಕೇಶ್ ವಿರೋಧಿಗಳ ಗುಂಪಿನಲ್ಲಿ ನಿಂತು ಮಾತನಾಡಿದ್ದು, ನಂತರದ ವಿಷಯ.
 
 ಒಬ್ಬ ಸಾಹಿತಿಯ ಆಸ್ತಿ, ಮನೆ ಇತ್ಯಾದಿಗಳನ್ನು ಅವರ ಕುಟುಂಬ ಮಾರುವುದನ್ನು ತಡೆಯುವುದರಿಂದ ಸಾಹಿತ್ಯಕ್ಕೆ ಯಾವ ರೀತಿಯಲ್ಲಿ ಲಾಭವಾಗುತ್ತದೆ ಎನ್ನುವುದು ನನಗೆ ಅರ್ಥವಾಗಲಿಲ್ಲ. ತೋಟ, ಆಸ್ತಿ ಇತ್ಯಾದಿಗಳನ್ನು ಮಾಡುವುದು ಸಾಹಿತ್ಯಿಕ ಕಾರಣಗಳಿಗಾಗಿ ಅಲ್ಲ. ಅದರ ಹಿಂದೆ ಆರ್ಥಿಕ ಕಾರಣಗಳಿರುತ್ತವೆ. ತೇಜಸ್ವಿ, ಲಂಕೇಶರು ಪಕ್ಕಾ ವ್ಯವಹಾರಿಗಳೂ ಆಗಿದ್ದರು. ತೇಜಸ್ವಿಯಲ್ಲಿ ಯಾವುದೇ ಭೂಮಾಲಕನಿಗೆ ಸಲ್ಲುವ ಸಿಟ್ಟು, ಸಿಡುಕು, ಅಹಂಕಾರ ಅವರಲ್ಲಿತ್ತು. ಅವರ ‘ಪುಸ್ತಕ ಪ್ರಕಾಶನ’ ಮತ್ತು ಅವರ ತೋಟ ಪಕ್ಕಾ ವ್ಯಾವಹಾರಿಕ ಲಾಭನಷ್ಟಗಳ ಲೆಕ್ಕಾಚಾರದಲ್ಲಿ ರೂಪುಗೊಂಡದ್ದು. ತೇಜಸ್ವಿಯವರ ತೋಟವನ್ನು ಮಾರಬೇಕೋ ಬೇಡವೋ ಎಂದು ತೀರ್ಮಾನಿಸುವವರು ತೇಜಸ್ವಿಯ ನಂತರದ ವಾರಸುದಾರರೇ ಹೊರತು ಸ್ವಯಂಘೋಷಿತ ತೇಜಸ್ವಿ ಅಭಿಮಾನಿಗಳಲ್ಲ. ತನ್ನ ತೋಟದ ವಿಷಯದಲ್ಲಿ ‘ಅಭಿಮಾನಿ’ಗಳೆಂದು ಕರೆಸಿಕೊಂಡವವರು ಮೂಗು ತೂರಿಸುವುದು ತೇಜಿಸ್ವಿಗೆ ಇಷ್ಟವಾಗುವ ವಿಷಯವೂ ಅಲ್ಲ. ನಾವು ಭೂಮಾಲಕ ತೇಜಸ್ವಿ ಮತ್ತು ಸಾಹಿತಿ ತೇಜಸ್ವಿಯನ್ನು ಈ ಸಂದರ್ಭದಲ್ಲಿ ಬೇರೆ ಬೇರೆಯಾಗಿ ನೋಡಲೇ ಬೇಕಾಗುತ್ತದೆ. ತೇಜಸ್ವಿಯ ತೋಟದಲ್ಲಿ ಒಂದು ವೇಳೆ, ಅವರ ಗೋರಿ ಇದ್ದಿದ್ದರೂ ಅದಕ್ಕಾಗಿ ನಾವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿದ್ದಿರಲಿಲ್ಲ. ನಾವು ನಿಜವಾಗಿಯೂ ತೇಜಸ್ವಿಯ ಅಭಿಮಾನಿಗಳಾಗಿದ್ದರೆ, ನಾವು ತೇಜಸ್ವಿಯನ್ನು ಹುಡುಕಬೇಕಾದದ್ದು, ತೇಜಸ್ವಿಯನ್ನು ಉಳಿಸಬೇಕಾದದ್ದು ಅವರ ಚಿಂತನೆ, ಬರಹಗಳು, ಕೃತಿಗಳ ಮೂಲಕ. ತೇಜಸ್ವಿ ಬೆಳೆಸಿದ ವಾಣಿಜ್ಯ ತೋಟದಲ್ಲಿ ಸಾಹಿತ್ಯಾಭಿಮಾನಿಗಳಿಗೇನು ಕೆಲಸ? ಆ ತೋಟದಲ್ಲಿ ತೇಜಸ್ವಿಯ ಬೆವರಿಗಿಂತ ಹೆಚ್ಚು ಅನಾಮಿಕ ಕಾರ್ಮಿಕರ ಬೆವರೇ ಹರಿದಿದೆ. ತೋಟದ ಒಡೆಯ ತೇಜಸ್ವಿಯೇ ಆಗಿರಬಹುದು. ಆದರೆ ಆ ಮರಗಿಡಗಳನ್ನು ಕೇಳಿದರೆ ಅದು ತನಗೆ ನೀರುಣಿಸಿದ ಯಾವನೋ ಕಾರ್ಮಿಕನನ್ನು, ತನಗೆ ನೆರಳು ಕೊಟ್ಟ ಯಾವುದೋ ಕೂಲಿಯವನ ಹೆಸರನ್ನು ಪಿಸುಗುಟ್ಟಬಹುದು. ತೇಜಸ್ವಿ ಎಂಬ ಮಹಾನ್ ಸಾಹಿತಿಯ ಹೆಸರು ಆ ತೋಟದ ಮರಗಿಡಗಳಿಗೆ ಗೊತ್ತಿದೆಯೋ ಇಲ್ಲವೋ ಎನ್ನುವುದನ್ನು ಅರಿತವರು ಯಾರು? ತೇಜಸ್ವಿ ತಮ್ಮ ತೋಟದ ಪ್ರತಿ ಗಿಡಗಳನ್ನು ಪ್ರೀತಿಸಿರಬಹುದು. ಆದರೆ ಯಾರು ಯಾರನ್ನು ಹೆಚ್ಚು ಪ್ರೀತಿಸಿರಬಹುದು? ಆ ಮರಗಿಡಗಳು ತೇಜಸ್ವಿಯನ್ನು ಅಷ್ಟೇ ಪ್ರೀತಿಯಿಂದ ಕಾಣುವುದಕ್ಕೆ ಅವುಗಳ ಬಳಿಯೂ ಒಂದಿಷ್ಟು ಕಾರಣಗಳು ಬೇಡವೇ? ಯಾವ ಕೂಲಿ ಕಾರ್ಮಿಕನ ಬೆರಳ ಸ್ಪರ್ಶದಿಂದ ಆ ಗಿಡಗಳು ಅರಳಿದವೋ, ಯಾವ ರೈತನ ಬೆವರ ಪರಿಮಳದಿಂದ ಗಿಡಗಳು ಚಿಗುರಿದವೋ, ಯಾವ ಕೆಲಸದಾಳು ಸುರಿದ ನೀರಿನಿಂದ ಆ ಗಿಡಗಳು ತಮ್ಮ ದಾಹ ಇಂಗಿಸಿಕೊಡವೋ ಆ ಜನರ ಸ್ಮಾರಕ ಆ ಗಿಡಗಳು. ಅಷ್ಟೇ ಹೊರತು, ಆ ತೋಟ ಯಾವ ಕಾರಣಕ್ಕೂ ತೇಜಸ್ವಿಯ ಸ್ಮಾರಕವಾಗಲಾರದು. ತೇಜಸ್ವಿ ಅದರ ಮಾಲಕರು ಅಷ್ಟೇ. ಸದ್ಯ ತೇಜಸ್ವಿ ಇಲ್ಲ. ಅದರ ವಾರಸುದಾರರು ತೇಜಸ್ವಿ ಕುಟುಂಬ. ಸಹಜವಾಗಿಯೇ ಅದನ್ನು ಮಾರಲು ಹೊರಟಿದ್ದಾರೆ. ಇಲ್ಲಿ ಸಾಹಿತ್ಯ, ಭಾವನೆ ಇತ್ಯಾದಿಗಳ ಪ್ರಶ್ನೆ ಎಲ್ಲಿ ಬಂತು?

ಸಾಹಿತಿ, ಚಿಂತಕನೊಬ್ಬ ಸತ್ತಾಕ್ಷಣ ಅವರು ಬದುಕಿದ ಮನೆ, ತೋಟ ಅವನನ್ನು ಮಣ್ಣು ಮಾಡಿದ ಸ್ಥಳ ಇತ್ಯಾದಿಗಳಲ್ಲಿ ಆತನನ್ನು ಹುಡುಕುವ ಪ್ರಯತ್ನ ನಡೆಸುತ್ತೇವೆ. ಒಂದು ಸಂಸಾರ ಬಾಳಿ ಬದುಕಿ, ಜೀವ ತುಂಬ ಬೇಕಾದ ಮನೆಯನ್ನು ಸಾಹಿತಿಯ ಹೆಸರಿನಲ್ಲಿ ನಾವು ‘ಗೋರಿ’ಯನ್ನಾಗಿ ಪರಿವರ್ತಿಸುತ್ತೇವೆ. ಯಾವ ಸಾಹಿತಿಯೂ ತಾನು ಬದುಕಿ, ಬಾಳಿದ ಮನೆ ಮನುಷ್ಯರಿಲ್ಲದ, ಮಕ್ಕಳ ಚಿಲಿಪಿಲಿಯಿಲ್ಲದ, ನಗು, ಅಳುವಿಲ್ಲದ ಶ್ಮಶಾನವಾಗಲು ಬಯಸುವುದಿಲ್ಲ. ನಾವು ಯಾವ ಕಾರಣಕ್ಕಾಗಿ ಆತ ಬದುಕಿದ ಮನೆಯನ್ನು ನೋಡಬೇಕು. ಒಬ್ಬ ಸಾಹಿತಿಯ ಕುರಿತಂತೆ ನಮಗೆ ನಿಜಕ್ಕೂ ಕಾಳಜಿಯಿದ್ದರೆ, ನಾವು ಉಳಿಸಬೇಕಾದದ್ದು ಆತನ ಚಿಂತನೆಗಳನ್ನು, ಆಲೋಚನೆಗಳನ್ನು ಆತನ ಕೃತಿಗಳನ್ನು, ಸಾಹಿತಿಗಳ ಆಲೋಚನೆ, ಚಿಂತನೆಗಳು, ಆತನ ಸಾಹಿತ್ಯಕ ಕೊಡುಗೆಗಳು ನಮ್ಮ ಕಣ್ಮುಂದೆಯೇ ಇಲ್ಲವಾಗುತ್ತಿರುವಾಗ, ನಾವು ಆತನ ಮನೆ, ಕಕ್ಕಸು, ಬಚ್ಚಲು ಮನೆ, ತೋಟ ಇತ್ಯಾದಿಗಳನ್ನು ಉಳಿಸಿ, ಅದನ್ನು ಸ್ಮಾರಕವಾಗಿಸಿ ಸಾಧಿಸುವುದಾದರೂ ಏನನ್ನು? ಈ ನಾಡನ್ನು ನಾವು ಸಾಹಿತಿಗಳ ಗೋರಿಗಳ ತೋಟವನ್ನಾಗಿಸಲು ಹೊರಟಿದ್ದೇವೆಯೇ? ಎಲ್ಲಿ ಕವಿಯನ್ನು ಜೀವಂತವಾಗಿ ಉಳಿಸಲು ನಮಗೆ ಸಾಧ್ಯವಿತ್ತೋ ಅಲ್ಲಿ ಆತನನ್ನು ಉಳಿಸುವ ಪ್ರಯತ್ನ ಮಾಡದೇ, ಆತನ ಮನೆ, ತೋಟ ಇತ್ಯಾದಿಗಳನ್ನು ಗೋರಿಗಳನ್ನಾಗಿಸಿ ಆರಾಧಿಸಲು ಹೊರಟಿರುವ ನಾವು ಕವಿ, ಸಾಹಿತಿಗಳಿಗೆ ನಿಜಕ್ಕೂ ಗೌರವ ಸಲ್ಲಿಸುತ್ತಿದ್ದೇವೆ ಎಂದೆನಿಸುತ್ತದೆಯೇ?

ತೇಜಸ್ವಿ, ಲಂಕೇಶ್ ಇಲ್ಲದ ಈ ದಿನಗಳ ಕುರಿತಂತೆ ನಾವು ಒಂದಿಷ್ಟು ಯೋಚಿಸೋಣ. ಅವರು ಯಾವ ಶಕ್ತಿಯನ್ನು ವಿರೋಧಿಸುತ್ತಿದ್ದರೋ ಆ ಶಕ್ತಿ ಇಂದು ಕರ್ನಾಟಕದಲ್ಲಿ ವಿಜೃಂಭಿಸುತ್ತಿದೆ. ಬಿಜೆಪಿಯ ವಿರುದ್ಧ ತನ್ನ ಜೀವಮಾನದುದ್ದಕ್ಕೂ ತೇಜಸ್ವಿ ಮಾತನಾಡಿದರು.. ಆದರೆ ಇಂದು ಆಗುತ್ತಿರುವುದೇನು? ತೇಜಸ್ವಿಯ ನೆಲದಲ್ಲಿ ಸಂಘಪರಿವಾರ ತನ್ನ ಹೆಡೆಯನ್ನು ಬಿಚ್ಚಿದೆ. ಲಂಕೇಶ್, ರಾಮ್‌ದಾಸ್, ತೇಜಸ್ವಿ ಇಲ್ಲದ ಈ ದಿನಗಳಲ್ಲಿ ‘ಗಬ್ಬು’ ಸಾಹಿತಿಗಳಿಗೆ ಹುಚ್ಚು ಧೈರ್ಯ ಬಂದಿದೆ. ಕೆ.ವಿ.ತಿರುಮಲೇಶ್, ಸರಜೂಕಾಟ್ಕರ್, ಚಿದಾನಂದ ಮೂರ್ತಿ, ಟಿ.ಎನ್.ಸೀತಾರಾಂ, ಭೈರಪ್ಪ... ಹೀಗೆ... ಪರಸ್ಪರರ ನಡುವಿನ ಪರದೆ ತೆಳುವಾಗಿದೆ. ಇಂತಹ ದಿನಗಳಲ್ಲಿ ನಾವು ತೇಜಸ್ವಿ, ಲಂಕೇಶ್, ಕಾರಂತರ ಬರಹಗಳನ್ನು, ಕೃತಿಗಳನ್ನು ಜೀವಂತವಾಗಿಡಲು ಶ್ರಮಿಸಬೇಕು ಹೊರತು ಅವರ ಗೋರಿಗಳನ್ನಲ್ಲ. ಶಿವರಾಮ ಕಾರಂತರು ಬಾಳಿ ಬದುಕಿದ ಕರಾವಳಿಯ ಇಂದಿನ ಸ್ಥಿತಿ ಹೇಗಿದೆ? ಅಭಿವೃದ್ಧಿ ದಾಪುಗಾಲಿಡುತ್ತಿದೆ. ಪರಿಸರ ಕೆಟ್ಟು ಕೆರಹಿಡಿಯುತ್ತಿದೆ. ಇಂತಹ ವಾತಾವರಣದಲ್ಲಿ ಶಿವರಾಮಕಾರಂತರ ಮನೆ ನೆಲಸಮವಾಗುವುದು ಒಂದು ರೂಪಕದಂತಿದೆ. ಅಷ್ಟೇ.

ನಾವು ಈ ನಾಡಿನಲ್ಲಿ ಸಾಹಿತಿಗಳ, ಕವಿಗಳ, ಚಿಂತಕರ ಗೋರಿಗಳ ತೋಟವನ್ನು ಬೆಳೆಯುವುದು ಬೇಡ. ಅದರ ಕಾವಲುಗಾರರಾಗುವುದು ಬೇಡ. ಕುವೆಂಪು ಬಾಳಿದ ಮನೆಗೂ, ಮಲೆನಾಡಿನ ಒಬ್ಬ ‘ಗುತ್ತಿ’ ಬಾಳಿದ ಮನೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಬರೇ ಕಲ್ಲು ಗೋಡೆಗಳವು. ಈ ನಾಡಿನಲ್ಲಿ ಎಲ್ಲ ಸಾಹಿತಿಗಳ ಸ್ಮಾರಕಗಳು, ಮನೆಗಳು ಬಿದ್ದು ಹೋಗಲಿ. ಉಳಿವುದಿದ್ದರೆ ಅವರ ಆಲೋಚನೆಗಳು, ಚಿಂತನೆಗಳು, ಬರಹಗಳು, ಕೃತಿಗಳು ಉಳಿಯಲಿ. ಅವುಗಳ ತಳಹದಿಯಲ್ಲಿ ಸುಭದ್ರ ಕನ್ನಡ ನಾಡು ರೂಪು ಪಡೆಯಲಿ. ಕವಿ, ಸಾಹಿತಿಗಳ ಗೋರಿಗಳ ಮೇಲೆ ಈ ನಾಡನ್ನು ಕಟ್ಟುವ ಆಲೋಚನೆಗಳನ್ನು ಬಿಟ್ಟು ಬಿಡೋಣ. ಒಂದು ವೇಳೆ ಒಬ್ಬ ಕವಿಯ ಗೋರಿ, ಮನೆ, ತೋಟ ಮಹತ್ವವನ್ನು ಪಡೆಯುತ್ತದೆಯೆಂದಾದರೆ ಆ ಮಹತ್ವ ಆ ಕವಿಯ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಲಿ. ಅದರ ಮಹತ್ವವನ್ನು ನಿರ್ಧರಿಸುವ ಸ್ವಾತಂತ್ಯ ಅವರಿಗೆ ಮಾತ್ರ ಇರಲಿ.

Tuesday, February 28, 2012

ಪಾಲು ಮತ್ತು ಇತರ ಕತೆಗಳು

ಮಾತು
ಸಂತನ ಪ್ರೀತಿಯ ಒಬ್ಬ ಶಿಷ್ಯನಿಗೆ ಬಾಯಿ ಬರುತ್ತಿರಲಿಲ್ಲ.
ಒಂದು ದಿನ ಅವನನ್ನು ಕರೆದು ‘‘ನೀನು ವಿದೇಶಗಳಿಗೆ ತೆರಳಿ ನನ್ನ ಸಂದೇಶವನ್ನು ಹರಡು’’ ಎಂದು ಸಂತ ಹೇಳಿದ.
ಉಳಿದ ಶಿಷ್ಯರಿಗೆ ಅಸೂಯೆ.
‘‘ಗುರುಗಳೇ, ಅವನಿಗೆ ಬಾಯಿ ಬರುವುದಿಲ್ಲ. ವಿದೇಶಿಯರ ಜೊತೆ ಹೇಗೆ ಯಾವ ಭಾಷೆಯಲ್ಲಿ ಮಾತನಾಡಬಲ್ಲ’’
‘ಸಂತ ನಕ್ಕು ಉತ್ತರಿಸಿದ ‘‘ಯಾವ ದೇಶಕ್ಕೆ ಹೋದರೂ, ಕೋಗಿಲೆಯ ಭಾಷೆ ಒಂದೇ. ಯಾವ ದೇಶಕ್ಕೇ ಹೋಗಿ ಗುಬ್ಬಚ್ಚಿಗಳಿಗೆ ಗುಬ್ಬಿಚ್ಚಿಗಳ ಮಾತು ಅರ್ಥವಾಗುತ್ತದೆ. ಅಂತೆಯೇ ಮೂಕ ಮಾತ್ರ ಎಲ್ಲರ ಭಾಷೆಯಲ್ಲಿ ಮಾತನಾಡಬಲ್ಲ’’

ಗೆಳೆತನ
‘‘ಅವನ ಗೆಳೆತನವನ್ನು ಬಿಟ್ಟು ಬಿಡು. ನಿನ್ನ ಪ್ರಾಣಕ್ಕೆ ಅದರಿಂದ ಅಪಾಯವಿದೆ’’ ಅವನು ಸಲಹೆ ನೀಡಿದ.
‘‘ಗೆಳೆತನಕ್ಕಾಗಿ ಪ್ರಾಣ ಕೊಡುವುದರಲ್ಲೇ ಮಜಾ ಇರುವುದು’’ ಇವನು ಉತ್ತರಿಸಿದ.

ಭಯ
ನಿರಪರಾಧಿಯೊಬ್ಬನಿಗೆ ನ್ಯಾಯವಾದಿಗಳ ಕುಯುಕ್ತಿಯಿಂದ ಮರಣದಂಡನೆ ಶಿಕ್ಷೆಯಾಯಿತು.
ಸಹ ಕೈದಿಯೊಬ್ಬ ಕೇಳಿದ ‘‘ಭಯವಾಗುತ್ತಿಲ್ಲವೆ?’’
‘‘ನನಗೇಕೆ ಭಯವಾಗಬೇಕು. ನಾನು ನಿರಪರಾಧಿ. ನನ್ನನ್ನು ಗಲ್ಲಿಗೇರಿಸಲು ಹೊರಟವರು ಭಯಪಡಬೇಕು.’’

ಊರು
‘‘ಗೊತ್ತಿಲ್ಲದ ಊರದು. ಅಲ್ಲಿ ಹೋದರೆ ಎಲ್ಲಿ ಉಳ್ಕೋತೀಯ? ಹೇಗೆ ಬದುಕುತ್ತೀಯ?’’
ಪ್ರಯಾಣ ಹೊರಟ ಅವನನ್ನು ಕೇಳಿದರು.
‘‘ಈ ಭೂಮಿಗೆ ಬರುವಾಗಲೂ ನನಗೆ ಇದು ಅಪರಿಚಿತ ಊರಾಗಿತ್ತು. ಎಲ್ಲಿ ಉಳ್ಕೊಳ್ಳೋದು, ಹೇಗೆ ಬದುಕೋದು ಎನ್ನುವುದೊಂದೂ ಗೊತ್ತಿರಲಿಲ್ಲ. ಆಗಲೇ ಇಲ್ಲದ ಚಿಂತೆ ಈಗ ಯಾಕೆ?’’

ಜೀವ
 ಮಸೀದಿಯ ಸ್ಮಶಾನದಲ್ಲಿ ಗೋರಿಗಳನ್ನು ಮೊದಲೆ ತೋಡಿರುತ್ತಾರೆ. ಆ ಬಾರಿ ತೋಡಿದ ಗೋರಿಗಳು ಹಾಗೆಯೇ ಉಳಿಯಿತು. ಯಾರೂ ಸಾಯಲಿಲ್ಲ. ಮಳೆಗಾಲ. ತೋಡಿದ ಗುಂಡಿ ನೀರು ತುಂಬಿ ವ್ಯರ್ಥವಾಗುವುದು ಬೇಡ ಎಂದು ಅದರಲ್ಲಿ ತೆಂಗಿನ ಗಿಡಗಳನ್ನು ನೆಟ್ಟರು. ಮಳೆಗಾಲ ಮುಗಿಯುವ ಹೊತ್ತಿಗೆ ಗಿಡಗಳು ಜೀವ ಹಿಡಿದು, ಅವುಗಳಲ್ಲಿ ಹೊಸ ತೆಂಗಿನ ಗರಿಗಳು ನಳನಳಿಸುತ್ತಿದ್ದವು.

ಪಾಲು
ತಂದೆ ತೀರಿ ಹೋದ ಒಂದು ತಿಂಗಳಲ್ಲಿ ಮಕ್ಕಳೆಲ್ಲ ಸೇರಿ ಮನೆಯನ್ನು ಪಾಲು ಮಾಡಲು ಹೊರಟರು.
ಎಲ್ಲವನ್ನು ತುಂಡು ಮಾಡಾಯಿತು.
ತಮಗೆ ಬಂದುದನ್ನು ಕಿತ್ತುಕೊಂಡರು.
ಕಟ್ಟ ಕಡೆಯಲ್ಲಿ ತಾಯಿಯೊಬ್ಬಳು ಉಳಿದಳು.
ಮಕ್ಕಳು ಪರಸ್ಪರ ಪಿಸುಗುಟ್ಟಿದರು ‘‘ಅಮ್ಮನನ್ನು ಹೇಗೆ ಪಾಲು ಮಾಡುವುದು?’’
 ತಾಯಿ ನಕ್ಕು ಹೇಳಿದಳು ‘‘ಮಕ್ಕಳೆ, ನನ್ನನ್ನು ಎಂದೋ ನಿಮಗೂ ನಿಮ್ಮ ತಂದೆಗೂ ಪಾಲು ಮಾಡಿ ಹಂಚಿಯಾಗಿದೆ. ಇಲ್ಲಿ ಪಾಲು ಮಾಡುವುದಕ್ಕೆ ಏನೂ ಉಳಿದಿಲ್ಲ. ನಿಮ್ಮ ನಿಮ್ಮ ಪಾಲಿನೊಂದಿಗೆ ನೀವು ಮೊದಲು ಇಲ್ಲಿಂದ ಹೊರಡಿ’’

ಕಿವುಡ
ಅವನೇನೋ ಹೊಸತನ್ನು ಹೇಳುತ್ತಿದ್ದ.
ಅದನ್ನು ಕೇಳಲು ಸಿದ್ಧನಿಲ್ಲದ ಇವನು ತನ್ನೆರಡು ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡ. ಕಿವಿ ತೆರೆದಾಗ ಜಗತ್ತಿನ ಪಾಲಿಗೆ ಇವನು ಶಾಶ್ವತ ಕಿವುಡನಾಗಿದ್ದ.

ಕಣ್ಣು
‘‘ಕುರುಡರ ಜಗತ್ತಿನಲ್ಲಿ ಹುಟ್ಟಿದ್ದೀಯ. ಕುರುಡನಂತೆ ನಟಿಸಿ ಬದುಕುವುದಕ್ಕೆ ಕಲಿ’’
ಅವನು ಸಲಹೆ ನೀಡಿದ.
‘‘ಕಣ್ಣಿದ್ದೂ ಕುರುಡನಂತೆ ನಟಿಸಿ ಬದುಕುವುದಕ್ಕಿಂತ ಅವರ ಕಣ್ಣು ತೆರೆಸುವ ಪ್ರಯತ್ನದಲ್ಲಿ ಹುತಾತ್ಮನಾಗಲು ಇಷ್ಟಪಡುವೆ’’
ಇವನು ಉತ್ತರಿಸಿದ.

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Sunday, February 26, 2012

ಕಳೆದು ಹೋದ ಬಾಲ್ಯ....

ಕಟ್ಟಕಡೆಗೆ ನ್ಯಾಯಾಲಯ ಹೇಳಿತು
‘‘ಅಗೆಯಿರಿ’’

ದೇವಾಲಯವೊಂದನ್ನು ಹುಡುಕುತ್ತಾ
ಮಸೀದಿಯ ಅಗೆದರು
ಮಸೀದಿಯ ಹುಡುಕುತ್ತಾ
ದೇವಾಲಯವ ಬಗೆದರು

ಅಗೆದಂತೆ ಅವರಿಗೆ
ಓಣಿಯೊಂದು ತೆರೆಯಿತು

ಇಬ್ಬದಿಯಲ್ಲೂ ಸುಟ್ಟು ಹೋದ ಕಾಡು
ನಡೆದಂತೆ ಮುಂದೆ...
ಮುರಿದು ಬಿದ್ದ ಒಂದು ನಾಡು!
ಆ ಪಾಳು ನಗರದಲ್ಲಿ
ಅಶಾಂತ ಆತ್ಮಗಳ ಊಳು
ಅರೆ! ಭೂತವನ್ನು ಅಗೆಯುತ್ತಾ
ಭವಿಷ್ಯವನ್ನು ತಲುಪುತ್ತಿದ್ದೇವೆಯೋ
ಯಾರೋ ಅನುಮಾನಪಟ್ಟರು!

ಅಗೆಯುತ್ತಾ ಹೋದವರು
ಥಟ್ಟನೆ ನಿಂತರು
ಒಂದಾಗಿ ಚೀರಿದರು
‘‘ಕೊನೆಗೂ ಸಿಕ್ಕಿತು’’
ಸಿಕ್ಕಿದ್ದಾದರೂ ಏನು?
ಶಂಖಾಕಾರವಾಗಿದೆ ಎಂದರು
ಅರ್ಧಚಂದ್ರನನ್ನು ಹೋಲುತ್ತಿದೆ ಎಂದರು
 ಉಜ್ಜಿದಂತೆ ಹೊಳೆಯತೊಡಗಿತು
ಅದರ ಬೆಳಕಿಗೆ ಕಣ್ಣು ಕುರುಡಾಯಿತು
ಮೂಸಿ ನೋಡಿದರು
ಮೊದಲ ಮಳೆ ಬಿದ್ದ
ಮಣ್ಣಿನ ಪರಿಮಳದ ಕಂಪು...
ಕವಿಯೊಬ್ಬ ಸ್ಪರ್ಶ ಮಾತ್ರದಿಂದ ಹೇಳಿದ
‘‘ಇದು ಕಳೆದು ಹೋದ ನಮ್ಮ ಬಾಲ್ಯ’’
(2002)

Saturday, February 25, 2012

ದಿ ಆರ್ಟಿಸ್ಟ್: ಮಾತು-ವೌನಗಳ ನಡುವಿನ ಸಂಘರ್ಷ


ಆಸ್ಕರ್ ಪ್ರಶಸ್ತಿಗಾಗಿ ಹತ್ತು ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ದಿ ಆರ್ಟಿಸ್ಟ್ ಚಿತ್ರವನ್ನು ನೋಡಿದ ಖುಷಿಯನ್ನಿಲ್ಲಿ ಹಂಚಿಕೊಂಡಿದ್ದೇನೆ. 

ಆಸ್ಕರ್ ಪ್ರಶಸ್ತಿಗಾಗಿ ಹತ್ತು ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವ ‘ದಿ ಆರ್ಟಿಸ್ಟ್’ ಚಿತ್ರವನ್ನು ನೋಡು ನೋಡುತ್ತಿದ್ದಂತೆಯೇ ಅದು ನಿಮ್ಮನ್ನು ದಿಗ್ಭ್ರಮೆಗೆ ಕೆಡಹುತ್ತದೆ. ಅರೆ...ಇದೇನಿದು! ಎನ್ನುವು ಉದ್ಗಾರವೊಂದು ನಿಮ್ಮಿಂದ ಹೊರ ಬಿದ್ದರೂ ಬೀಳಬಹುದು. ಆಧುನಿಕ ಸಿನಿಮಾಗಳ ವ್ಯಾಕರಣಗಳಲ್ಲಿ ಒಂದಾಗಿ ಬಿಟ್ಟಿರುವ ತಂತ್ರಜ್ಞಾನ, ಮಾತಿನ ಅಬ್ಬರ, ಅದ್ದೂರಿತನ ಇವೆಲ್ಲವುಗಳಿಂದ ನಿಮ್ಮನ್ನು ಸುಮಾರು 80 ವರ್ಷಗ ಹಿಂದಕ್ಕೆ ಕೊಂಡೊಯ್ಯುತ್ತದೆ. ಮಾತುಗಳಾಚೆಯ ವೌನವೊಂದರಲ್ಲಿ ನೀವು ಕಳೆದು ಹೋಗಿ ಬಿಡುತ್ತೀರಿ.

   ಹೌದು. ದಿ ಆರ್ಟಿಸ್ಟ್ ಚಿತ್ರ ಒಂದು ರೀತಿಯಲ್ಲಿ ಮೂಕ ಚಿತ್ರ. ಎಲ್ಲಕ್ಕಿಂತ ಮುಖ್ಯವಾಗಿ ಬ್ಲಾಕ್‌ಎಂಡ್ ವೈಟ್ ಚಿತ್ರ. ಪುರಾತನ ತಂತ್ರಜ್ಞಾನಗಳನ್ನೇ ಬಳಸಿ ತೆಗೆದ ಚಿತ್ರ. ಆದರೆ ಕತೆ ಹೇಳುವ ತಂತ್ರ ಮತ್ತು ಒಟ್ಟು ಸಿನಿಮಾದ ನಿರೂಪಣೆ ಮಾತ್ರ ಅತ್ಯಾಧುನಿಕವಾದುದು. ಮೂಕಿ-ಟಾಕಿ ಚಿತ್ರಗಳ ನಡುವಿನ ಸಂಘರ್ಷದಂತೆ ಕಾಣುವ ಈ ಚಿತ್ರ ಮಾತು-ವೌನಗಳ ನಡುವಿನ ತಿಕ್ಕಾಟವೂ ಹೌದು. ಮೂಕಿ ಚಿತ್ರಗಳ ಯುಗದಲ್ಲಿ ಸ್ಟಾರ್ ಆಗಿದ್ದ ಕಥಾನಾಯಕ, ಟಾಕಿ ಚಿತ್ರಗಳನ್ನು ಒಪ್ಪಿಕೊಳ್ಳಲು ಸಿದ್ಧನಾಗದೆ ತನ್ನ ವೌನದೊಳಗೇ ಕುಸಿಯುತ್ತಾ ಹೋಗುವ ಕತೆ ‘ದಿ ಆರ್ಟಿಸ್ಟ್’. ಅವನ ಅಹಂ ಬರೇ ಚಿತ್ರದ ಮಾತುಗಳಿಗೆ ಮಾತ್ರವಲ್ಲ, ತಾನು ಇಷ್ಟ ಪಡುವ ತರುಣಿಯ ಮಾತುಗಳಿಗೂ ಕಿವುಡಾಗುತ್ತದೆ. ಅವಳೊಳಗಿನ ಮಾತುಗಳನ್ನು ಕೇಳಿಸಿಕೊಳ್ಳುವಲ್ಲೂ ವಿಫಲನಾಗುತ್ತಾನೆ. ಒಂಟಿಯಾಗುತ್ತಾನೆ. ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಕೊನೆಗೂ ತನ್ನ ಅಹಂನ್ನು ಬಿಟ್ಟುಕೊಡಲು ಸಿದ್ಧನಿಲ್ಲದ ನಾಯಕ ಆತ್ಮಹತ್ಯೆಗೆ ಮುಂದಾಗುತ್ತಾನೆ. ಆದರೆ ಕಟ್ಟಕಡೆಯಲ್ಲಿ ಕಥಾನಾಯಕಿಯ ಮಾತುಗಳನ್ನು ಕಿವಿಕೊಡುವ ಧೈರ್ಯ ತೋರಿ ಉಳಿಯುತ್ತಾನೆ. ಅಲ್ಲಿಯವರೆಗೆ ಮೂಕವಾಗಿದ್ದ ಚಿತ್ರ ಒಮ್ಮಿಂದೊಮ್ಮೆ ಮಾತನಾಡತೊಡಗುತ್ತದೆ. 

ಅದು ಮೂಕಿ ಚಿತ್ರಗಳ ಯುಗ... ನಟ ಜಾರ್ಜ್ ವಾಲೆಂಟಿನ್ (ಜೀನ್ ಡುಜಾರ್ಡಿನ್) ಆಗ ಮೂಕಿಚಿತ್ರರಂಗದ ಅನಭಿಷಕ್ತ ರಾಜನೇ ಆಗಿದ್ದ. ಆತನಿಗೆ ಭಾವನೆಗಳನ್ನು ವ್ಯಕ್ತಪಡಿಸಲು ಮಾತುಗಳ ಅಗತ್ಯವೇ ಇಲ್ಲ. ಆತ ತನ್ನ ಮುಖ ಹಾಗೂ ಅಂಗಿಕ ಹಾವಭಾವಗಳ ಮೂಲಕ ಯಾವುದೇ ಭಾವನೆಗಳಿಗೂ ಜೀವತುಂಬಬಲ್ಲ. ಆತನಿಗೆ ತನ್ನ ಚಿತ್ರ ಸೂಪರ್ ಹಿಟ್ ಆಗಲು ಸಹನಟರ ಅಗತ್ಯವೇ ಇಲ್ಲ. ಬೆಳ್ಳಿ ತೆರೆಯಲ್ಲಿ ವಾಲೆಂಟಿನ್‌ನ ಅಚ್ಚುಮೆಚ್ಚಿನ ಸಂಗಾತಿಯೆಂದರೆ, ಅತ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ಆತನ ಮುದ್ದಿನ ನಾಯಿ ಮಾತ್ರ. ಹೀಗೆ ಸಿನೆಮಾದಲ್ಲಿ ಯಾವುದೇ ಪಾತ್ರ ಮಾಡಲಿ, ಜನಮುಗಿಬಿದ್ದು ಆತನ ಚಿತ್ರ ನೋಡುತ್ತಾರೆ. ಚಿತ್ರ ಭರ್ಜರಿ ಯಶಸ್ಸು ಪಡೆಯುತ್ತದೆ.
 
ಆದರೆ ಕಾಲ ಚಲಿಸುತ್ತಿರುತ್ತದೆ. ಮೊತ್ತ ಮೊದಲ ಬಾರಿಗೆ ಅವನ ಮೂಕಿ ಚಿತ್ರಗಳ ಕೋಟೆಯೊಳಗೆ ಮಾತಿನ ಪಿಸುಮಾತು ಕೇಳುತ್ತದೆ. ನಿಧಾನವಾಗಿ ಟಾಕಿ ಚಿತ್ರಗಳ ಯುಗ ಆರಂಭವಾಗುತ್ತದೆ. ಆದರೆ ನಾಯಕ ಅದನ್ನು ಸ್ವೀಕರಿಸಲು ಸಿದ್ಧನಿಲ್ಲ. ಸಿನಿಮಾದಲ್ಲಿ ಮಾತು ಎನ್ನುವುದು ಅವನಿಗೆ ತಮಾಷೆಯ ವಸ್ತುವಾಗುತ್ತದೆ. ಆದರೆ ಹೊಸ ತಲೆಮಾರು ಇವನನ್ನು ಕಾಯುವುದಿಲ್ಲ. ಅದು ಇವನನ್ನು ಬದಿಗೆ ತಳ್ಳಿ ಮುಂದುವರಿಯುತ್ತದೆ. ಚಾರ್ಜ್‌ನಿಂದಲೇ ನಟಿಯಾಗುವ ಸೌಭಾಗ್ಯಕಂಡ ಪೆಪ್ಪಿಮಿಲ್ಲರ್ ಮೊದಲ ಬಾರಿ ಬೆಳ್ಳಿತೆರೆಯಲ್ಲಿ ಮಾತನಾಡತೊಡಗುತ್ತಾಳೆ. ಟಾಕಿ ಚಿತ್ರಕ್ಕೆ ಸವಾಲಾಗಿ ಜಾರ್ಜ್ ವ್ಯಾಲೆಂಟಿನ್ ಕೂಡ ಒಂದು ಮೂಕಿ ಚಿತ್ರವನ್ನು ತೆಗೆಯುತ್ತಾನೆ. ಅದರ ಹೆಸರು ಟಿಯರ್ಸ್‌ ಆಫ್ ಲವ್. ತನ್ನೆಲ್ಲ ಸಂಪತ್ತನ್ನು ಅದರಲ್ಲಿ ಹೂಡುತ್ತಾನೆ. ತಾನೆ ನಾಯಕ, ನಿರ್ದೇಶಕ, ನಿರ್ಮಾಪಕ. ಆದರೆ ಇತ್ತ ಟಾಕಿ ಚಿತ್ರದ ನಾಯಕಿ ಅವನೇ ಬೆಳೆಸಿದ ಪೆಪ್ಪಿ ಮಿಲ್ಲರ್. ಜಾರ್ಜ್‌ನ ಚಿತ್ರ ಮೊದಲ ದಿನವೇ ಮುಗ್ಗರಿಸುತ್ತದೆ. ಆದರೆ ಮೊದಲ ದಿನ ಪೆಪ್ಪಿ ಮಿಲ್ಲರ್ ಆ ಚಿತ್ರವನ್ನು ಬಾಲ್ಕನಿಯಲ್ಲಿ ಕೂತು ನೋಡುತ್ತಿರುತ್ತಾಳೆ. ಅವಳು ಆ ಚಿತ್ರವನ್ನು ನೋಡಿ ಕಣ್ಣೀರು ಸುರಿಸುತ್ತಾಳೆ. ಆ ಮೂಕ ಚಿತ್ರದ ಸಂದೇಶ ಅವಳನ್ನು ತಟ್ಟಿರುತ್ತದೆ. ಅವಳು ತನ್ನ ಅಭಿನಂದನೆಯನ್ನು ತಿಳಿಸಲು ಜಾರ್ಜ್ ವ್ಯಾಲೆಂಟಿನ್ ಮನೆಗೆ ಬರುತ್ತಾಳೆ. ಆದರೆ ಅಷ್ಟರಲ್ಲೇ ಪತನದ ಅಂಚಿನಲ್ಲಿದ್ದ ಅವನಿಗೆ ಪೆಪ್ಪಿ ಮಿಲ್ಲರ್ ತನ್ನನ್ನು ವ್ಯಂಗ್ಯ ಮಾಡುವುದಕ್ಕೆ ಬಂದಿದ್ದಾಳೆ ಎಂದು ತಪ್ಪು ತಿಳಿಯುತ್ತಾನೆ. ಅವಳೊಳಗಿನ ಮೂಕ ಮಾತುಗಳಿಗೆ ಕಿವುಡಾಗುತ್ತಾನೆ.
‘‘ನಾನು ನಿನ್ನ ಚಿತ್ರವನ್ನು ನೋಡಿದೆ...’’ ಎಂದು ನಾಯಕಿ ಹೇಳುತ್ತಾಳೆ.
‘‘ಓಹೋ...ಟಿಕೆಟ್‌ನ ಹಣವನ್ನು ವಾಪಾಸ್ ಕೇಳಲು ಬಂದೆಯ?’’ ನಾಯಕ ಅಣಕಿಸುತ್ತಾನೆ.
   ಒಬ್ಬ ಕಲಾವಿದ ಆಧುನಿಕತೆಗೆ ತೆರೆದುಕೊಳ್ಳದೆ, ಹೊರಗಿನ ಮಾತುಗಳಿಗೆ ಕಿವುಡಾಗುತ್ತಾ, ತನ್ನೊಳಗಿನ ಅಹಂನ್ನು ಪೋಷಿಸುತ್ತಾ ಹೋದಾಗ ಏನಾಗುತ್ತದೆಯೋ ಅದೇ ಅವನಿಗೂ ಆಗುತ್ತದೆ. ಅವನಿಗೆ ಕನಸು ಬೀಳುತ್ತದೆ. ಅದರಲ್ಲಿ ಎಲ್ಲವೂ ಸದ್ದು ಮಾಡತೊಡಗಿವೆ. ಆಕಾಶದಿಂದ ಉದುರಿದ ಹಕ್ಕಿ ಗರಿ ನೆಲಕ್ಕೆ ಬಿದ್ದಾಗ ದೊಡ್ಡ ಬಾಂಬ್ ಸ್ಫೋಟಿಸಿದಂತಹ ಸದ್ದು ಅವನಿಗೆ ಕೇಳಿಸುತ್ತದೆ. ಅವನು ತನ್ನ ಸುತ್ತಲೂ ಕಟ್ಟಿಕೊಂಡ ಮೂಕ ಜಗತ್ತಿನ ಕೋಟೆಗೆ ಮಾತು ದೊಡ್ಡ ಬಿರುಕನ್ನು ಮಾಡಿತ್ತು.
 
ಮೂಕಿ ಯುಗದ ನಾಯಕ ಜಾರ್ಜ್ ವ್ಯಾಲೆಂಟನ್‌ನ ಪಾತ್ರದಲ್ಲಿ ಜೀನ್ ಡುವಾರ್ಜಿನ್ ಅದ್ಬುತ ಅಭಿನಯ ನೀಡಿದ್ದಾರೆ. ಆತ ನಿಜಕ್ಕೂ ನಮ್ಮನ್ನು 1920ರ ದಶಕದ ಮೂಕಿ ಚಿತ್ರಗಳ ಲೋಕಕ್ಕೆ ಕೊಂಡೊಯ್ಯುತ್ತಾರೆ. ಆತನ ತುಂಟತನದ ಮೀಸೆ,ನೀಟಾಗಿ ಬಾಚಿದ ಕೂದಲು, ಜಂಭತನ ಹಾಗೂ ನೃತ್ಯದ ಮೂಲಕ ಮೂಕಿಚಿತ್ರಗಳ ಗತವೈಭವವನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ. ಚಿತ್ರದಲ್ಲಿ ಕೊನೆಯವರೆಗೂ ನಾಯಕನಿಗೆ ಸಾಥ್ ನೋಡುವ ಪುಟ್ಟ ನಾಯಿ ಮಾತುಗಳನ್ನು ಮೀರಿ ನಮ್ಮನ್ನು ತಲುಪುತ್ತದೆ. ನಾಯಕನಿಗೆ ಕೊನೆಯವರೆಗೂ ಮನುಷ್ಯ ಭಾಷೆಯನ್ನು ಅರಿಯದ ಈ ಮೂಕ ನಾಯಿ ಧ್ವನಿಯಾಗುತ್ತದೆ.
  ಚಿತ್ರವನ್ನು ಮೂಕಿ ಚಿತ್ರವಾಗಿ, 1930ರ ಸಂದರ್ಭದ ಚಿತ್ರದಂತೆಯೇ ತೋರಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಚಿತ್ರವನ್ನು ಲವಲವಿಕೆಯಿಂದ, ತಮಾಷೆಯ ರೂಪದಲ್ಲಿ ಹೇಳುತ್ತಾ ವೌನವಾಗಿ ಹೇಳುತ್ತಾ ಹೋಗುತ್ತಾರೆ ಹಾಗೆಂದು ಇದು ಸಂಪೂರ್ಣವಾಗಿ ಮೂಕಿಚಿತ್ರವೆನ್ನುವಂತಿಲ್ಲ. ಅಲ್ಲಲ್ಲಿ ಸದ್ದುಗಳನ್ನು ರೂಪಕದಂತೆ ಬಳಸಿದ್ದಾರೆ. ಚಿತ್ರದ ಕ್ಲೈಮಾಕ್ಸ್ ಮಾತಿನೊಂದಿಗೆ ಆರಂಭವಾಗುತ್ತದೆ.ನಿರ್ದೇಶಕ ಮೈಕೆಲ್ ಹಝಾನಾವಿಸಿಯಸ್ ಪ್ರತಿಭೆಗೆ ಸಾಟಿಯೇ ಇಲ್ಲ. ಒಂದು ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಬ್ಬರದಲ್ಲಿ ಮೈಮರೆತಿರುವ ಹಾಲಿವುಡ್‌ನ್ನು ತನ್ನ ಪುಟ್ಟ ಮೂಕಿ ಚಿತ್ರದ ಮೂಲಕ ಅಣಕಿಸುತ್ತಾರೆ. ಈ ಮೂಕ, ಕಪ್ಪು ಬಿಳುಪು ಚಿತ್ರದ ಮುಂದೆ ಬಾಲಿವುಡ್ ಅಬ್ಬರಗಳು, ಅದ್ದೂರಿತನ ಅರ್ಥಹೀನವಾಗಿಬಿಡುತ್ತವೆ.

  ಸಂಭಾಷಣೆಯೇ ಇಲ್ಲದ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಅತ್ಯಂತ ಮಧುರವಾಗಿದೆ. ಚಾರ್ಲಿ ಚಾಪ್ಲಿನ್ ಚಿತ್ರಗಳ ಹಿತಾನುಭವವನ್ನು ಆರ್ಟಿಸ್ಟ್ ಚಿತ್ರ ನಮಗೆ ನೀಡುತ್ತದೆ. ಒಂದರ್ಥದಲ್ಲಿ ಆರ್ಟಿಸ್ಟ್ ಮೂಕಿ ಚಿತ್ರಗಳ ಯುಗಕ್ಕೆ ಸಲ್ಲಿಸಿದ ಶ್ರದ್ಧಾಂಜಲಿ ಎಂದರೂ ತಪ್ಪಾಗಲಾರದು.

Thursday, February 23, 2012

ಕೋಳಿ ಅಂಕಕ್ಕೆ ಒಂದು ಸುತ್ತು....

 
ಜನವರಿ-18- 2008ರಲ್ಲಿ ನಾನು ಬರೆದ ಒಂದು ಲೇಖನ ಇದು.

‘ಅಮಾನವೀಯ’ ‘ಬರ್ಬರ’ ‘ಅನಾಗರಿಕ’!
ಕಳೆದ ಒಂದು ವಾರದಿಂದ ಮಾಧ್ಯಮಗಳಲ್ಲಿ, ಟಿ.ವಿ. ಚಾನೆಲ್‌ಗಳಲ್ಲಿ ‘ಮಾನವೀಯತೆ’, ‘ನಾಗರಿಕತೆ’ಗಳ ಕುರಿತು ಪಾಠವೋ ಪಾಠ! ಯಾವುದೋ ದೌರ್ಜನ್ಯ, ಹತ್ಯಾಕಾಂಡಕ್ಕಾಗಿ ಈ ಮಾಧ್ಯಮಗಳು ಹಾಹಾಕಾರ ಮಾಡುತ್ತಿವೆ ಎಂದು ಕಿವಿ, ಕಣ್ಣು ತೆರೆದು ನೋಡಿದವರಿಗೆ ಅಲ್ಲಿ ನಿರಾಸೆ ಕಾದಿತ್ತು. ತಮಿಳುನಾಡಿನಲ್ಲಿ ಗ್ರಾಮೀಣ ಜನರ ಸಾಂಪ್ರದಾಯಿಕ ‘ಜಲ್ಲಿಕಟ್ಟು’ ಎಂಬ ಕ್ರೀಡೆಯ ಕುರಿತಂತೆ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆದಾಗಲೇ ನ್ಯಾಯಾಲಯ ಈ ಜಲ್ಲಿಕಟ್ಟು ಕ್ರೀಡೆಯನ್ನು ಅಮಾನವೀಯ ಎಂದು ನಿರ್ಧರಿಸಿ, ಅದಕ್ಕೆ ನಿಷೇಧ ಹೇರಿತ್ತು. ನ್ಯಾಯಾಲಯದ ತೀರ್ಪಿಗೆ ಮಾಧ್ಯಮಗಳು ತಮ್ಮ ಹಿಮ್ಮೇಳವನ್ನು ಬಾರಿಸುತ್ತಿದ್ದವು. ಆದರೆ ಗ್ರಾಮೀಣ ಜನರೆಲ್ಲ ಒಂದಾಗಿ ಈ ತೀರ್ಪಿನ ವಿರುದ್ಧ ತಿರುಗಿ ಬಿದ್ದುದರಿಂದ, ತಾತ್ಕಾಲಿಕವಾಗಿ ನಿಷೇಧವನ್ನು ನ್ಯಾಯಾಲಯ ಹಿಂದಕ್ಕೆ ತೆಗೆದುಕೊಂಡಿತ್ತು. ಜಲ್ಲಿಕಟ್ಟು ತಮಿಳುನಾಡಿನ ಗ್ರಾಮೀಣ ಜನರಿಗೆ ಒಂದು ಕ್ರೀಡೆ ಮಾತ್ರ ಆಗಿರಲಿಲ್ಲ. ಅವರ ಪಾಲಿಗೆ ಅದೊಂದು ಪರಂಪರೆಯೂ ಆಗಿತ್ತು. ಆ ಸಾಹಸದ ಆಟಕ್ಕಾಗಿ ಅವರು ವರ್ಷವಿಡೀ ತುದಿಗಾಲಲ್ಲಿ ಕಾದು ನಿಲ್ಲುತ್ತಾರೆ. ಆ ಆಟ ಊರಿಗೊಬ್ಬ ಸಾಹಸಿಗನನ್ನು, ‘ಹೀರೋ’ನನ್ನು ಸೃಷ್ಟಿ ಮಾಡುತ್ತಿತ್ತು. ‘ಹೀರೋ’ ಆಗುವುದಕ್ಕೆ ತರುಣರು ತಮ್ಮ ಪ್ರಾಣವನ್ನೇ ಪಣವಿಟ್ಟು ಅಂಕಣಕ್ಕೆ ಇಳಿಯುತ್ತಿದ್ದರು. ಕೊಬ್ಬಿದ ಗೂಳಿಯನ್ನು ಸಿಟ್ಟಿಗೆಬ್ಬಿಸಿ ಅದನ್ನು ಮಣಿಸುವುದು ‘ಜಲ್ಲಿಕಟ್ಟು’ ಕ್ರೀಡೆಯ ಪ್ರಧಾನ ಅಂಶ. ಆದರೆ ಇದು ಅಷ್ಟೇ ಅಪಾಯಕಾರಿಯಾದ ಆಟ ಕೂಡಾ ಆಗಿದೆ. ಹಲವರ ಪ್ರಾಣಗಳಿಗೆ ಈ ಆಟ ಕುತ್ತು ತಂದಿತ್ತು. ಪ್ರಾಣಿ ಹಿಂಸೆಯೂ ಈ ಸಂದರ್ಭದಲ್ಲಿ ನಡೆಯುತ್ತಿತ್ತು. ಮನುಷ್ಯರ ದೃಷ್ಟಿಯಿಂದಲೂ, ಪ್ರಾಣಿಯ ದೃಷ್ಟಿಯಿಂದಲೂ ಈ ಆಟ ನಿಷೇಧಕ್ಕೆ ಎಲ್ಲ ಅರ್ಹತೆಯನ್ನು ಹೊಂದಿದೆ. ಆದರೆ ಈ ಸಂದರ್ಭದಲ್ಲಿ ಒಂದು ಮುಖ್ಯ ಪ್ರಶ್ನೆ ಎದುರಾಗುತ್ತದೆ. ಈ ದೇಶದಲ್ಲಿ ಪ್ರಾಣಕ್ಕೆ ಅಪಾಯವಿರುವ ಅದೆಷ್ಟೋ ಆಟಗಳನ್ನು ಸರಕಾರವೇ ಪ್ರಾಯೋಜಿಸುತ್ತಿರುವಾಗ, ನ್ಯಾಯದ ಕಣ್ಣು ಈ ಆಟದ ಮೇಲೆ ಮಾತ್ರ ಯಾಕೆ ಬಿತ್ತು?

ಕರಾವಳಿಯನ್ನೇ ತೆಗೆದುಕೊಳ್ಳೋಣ. ಇಲ್ಲಿ ‘ಕೋಳಿ ಅಂಕ’ ಎಂಬ ಕ್ರೀಡೆಯಿದೆ. ಗ್ರಾಮೀಣ ಪ್ರದೇಶದಲ್ಲಿ ತುಳುವರು ಈ ಆಟಕ್ಕಾಗಿ ಮನೆ, ಮಾರು ಕಳೆದುಕೊಂಡವರಿದ್ದಾರೆ. ಕೋಳಿಕಟ್ಟ ಎನ್ನುವುದು ತುಳುನಾಡಿನಲ್ಲಿ ಅದೆಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದರೆ, ಇಲ್ಲಿ ಹುಂಜವನ್ನು ಸಾಕುವುದು ಮಾಂಸಕ್ಕಾಗಿ ಮಾತ್ರವಲ್ಲ. ಕೋಳಿಕಟ್ಟಕ್ಕಾಗಿಯೇ ಹುಂಜವನ್ನು ಸಾಕುವವರಿದ್ದಾರೆ. ಇವರ ಪಾಲಿಗೆ ಹುಂಜ ಎಂದರೆ ಬರೇ ಹುಂಜ ಮಾತ್ರವಲ್ಲ. ಅದರಲ್ಲೂ ವಿವಿಧ ಬಗೆಯನ್ನು ಅವರು ಗುರುತಿಸುತ್ತಾರೆ. ತಮ್ಮ ಪತ್ನಿಗಿಂತಲೂ ಹೆಚ್ಚಾಗಿ ತಾವು ಕೋಳಿಕಟ್ಟಕ್ಕಾಗಿ ಸಾಕಿದ ಹುಂಜವನ್ನು ಪ್ರೀತಿಸುವವರಿದ್ದಾರೆ. ಹುಂಜಗಳ ಗಾಂಭೀರ್ಯ, ಬಣ್ಣ , ನೆಗೆತ ಇತ್ಯಾದಿಗಳಿಗೆ ಪೂರಕವಾಗಿ ಅವರು ಅದಕ್ಕೆ ನಾಮಕರಣವನ್ನು ಮಾಡುತ್ತಾರೆ. ಕೆಲವು ಕೋಳಿಕಟ್ಟಗಳು ಆಸುಪಾಸಿನಲ್ಲೇ ಅತ್ಯಂತ ಪ್ರಸಿದ್ಧ. ಎಷ್ಟೋ ಮೈಲು ದೂರದಿಂದ ತಮ್ಮ ಕೋಳಿಗಳನ್ನು ಹಿಡಿದುಕೊಂಡು ಬರುತ್ತಾರೆ. ಅದರ ಹಿಂದೆಯೇ ಆ ಕೋಳಿಯ ಅಭಿಮಾನಿಗಳು ಆಗಮಿಸುತ್ತಾರೆ. ಬೆಳ್ತಂಗಡಿ ಸಮೀಪದ ಮುಗೇರಡ್ಕ ಎಂಬಲ್ಲಿ ಪ್ರತಿ ವರ್ಷ ಜಾತ್ರೆಯೊಂದು ನಡೆಯುತ್ತದೆ. ಇಲ್ಲಿ ಭೂತಸ್ನಾನಗಳಿದ್ದು, ಪ್ರತಿ ವರ್ಷ ನೇಮ ನಡೆಯುವ ಸಂದರ್ಭದಲ್ಲಿ ಈ ಜಾತ್ರೆ ಜರಗುತ್ತದೆ. ನೇಮಕ್ಕೆ ಮುಂಚೆ ಇಲ್ಲಿ ಮೂರು ದಿನಗಳ ಕಾಲ ಕೋಳಿ ಅಂಕ ನಡೆಯುತ್ತದೆ. ಮುಗೇರಡ್ಕ ಜಾತ್ರೆಯನ್ನು ಕೋಳಿಗಳ ಜಾತ್ರೆ ಎಂದೇ ಕರೆಯಬಹುದು. ಕೋಳಿ ಅಂಕದ ಆ ಮೂರು ದಿನಗಳಿಗಾಗಿ ಆಸುಪಾಸಿನ ಜನಗಳು ಇಡೀ ವರ್ಷ ಚಾತಕ ಪಕ್ಷಿಯಂತೆ ಕಾಯುತ್ತಾರೆ. ಅದಕ್ಕಾಗಿ ಸಿದ್ಧತೆ ನಡೆಸುತ್ತಿರುತ್ತಾರೆ. ಈ ಕೋಳಿ ಅಂಕ ಪ್ರವೀಣರಿಗೆ ಯಾರ ಬಳಿ ಎಂತಹ ಕೋಳಿಗಳಿವೆ. ಯಾವ ಕೋಳಿ ಎಷ್ಟು ಗರ್ವವನ್ನು ಹೊಂದಿದೆ. ಯಾವ ಕೋಳಿ ಹೆಚ್ಚು ನೆಗೆಯುತ್ತದೆ ಇತ್ಯಾದಿಗಳ ಮಾಹಿತಿಗಳಿರುತ್ತವೆ. ಒಬ್ಬನ ಗರ್ವವನ್ನು ಮುರಿಯುವುದಕ್ಕಾಗಿಯೇ ಇನ್ನೊಬ್ಬ ಕೋಳಿಯನ್ನು ಸಾಕುವುದಿದೆ. ತಮ್ಮ ತಮ್ಮ ಸೇಡುಗಳನ್ನು ಕೋಳಿಯನ್ನು ಛೂ ಬಿಡುವ ಮೂಲಕ ತೀರಿಸುವುದಿದೆ. ತನ್ನ ಪ್ರೀತಿಯ ಕೋಳಿಗೆ ಇನ್ನೊಂದು ಕೋಳಿ ಎದೆಗೆ ಇರಿದದ್ದನ್ನು ನೋಡಲಾಗದೆ ಕಣ್ಣೀರಿಟ್ಟವರಿದ್ದಾರೆ. ಹರಿದ ಕೋಳಿಯ ಹೊಟ್ಟೆಯನ್ನು ಸ್ಥಳದಲ್ಲೇ ಹೊಲಿದು ಮತ್ತೆ ಅಂಕಕ್ಕೆ ಇಳಿಸಿ ಗೆದ್ದವರಿದ್ದಾರೆ. ಎದುರಾಳಿ ಕೋಳಿಯ ಕಾಲಿಗೆ ಕಟ್ಟಿದ ಕತ್ತಿ ಇರಿಯುವುದು ಇನ್ನೊಂದು ಕೋಳಿಯ ಹೊಟ್ಟೆಯನ್ನೇ ಆದರೂ, ಅದರ ನೋವು ಮಾಲಕನಿಗೆ ಎನ್ನುವುದು ಕೋಳಿಗಳಿಗೂ ಗೊತ್ತಿದೆ. ತಮ್ಮ ಗೌರವವನ್ನು, ಅಭಿಮಾನವನ್ನು ಕೋಳಿಯ ಮೇಲೆ ಅವಾಹಿಸಿ, ಕಣಕ್ಕಿಳಿಸುತ್ತಾರೆ. ಇದು ಕೋಳಿ ಅಂಕ ತುಳುವ ಜನರ ಬದುಕಿನಲ್ಲಿ ಬೆರೆತಿರುವ ರೀತಿ.

ಕೋಳಿ ಅಂಕ ಹಿಂಸೆ ನಿಜ. ಅದೊಂದು ಜೂಜಾಟವೆನ್ನೂದು ನಿಜ. ಹಲವರು ಈ ಜೂಜಾಟದಲ್ಲಿ ಹಣವನ್ನು ಕಳೆದುಕೊಂಡವರಿದ್ದಾರೆ. ಹಾಗೆಯೇ ಇದು ಎರಡು ಗುಂಪುಗಳ ನಡುವೆ ಕಿಚ್ಚನ್ನೂ ಹಚ್ಚಿದೆ. ಹೊಡೆದಾಟಗಳಾಗಿ, ಪ್ರಕರಣಗಳು ಪೊಲೀಸ್ ಠಾಣೆಯನ್ನು ತುಳಿದಿವೆ. ಆದರೆ, ಅಷ್ಟಕ್ಕೆ ಇದನ್ನು ಏಕಾಏಕಿ ನಿಷೇಧಿಸುವುದು ಎಷ್ಟರ ಮಟ್ಟಿಗೆ ಸರಿ? ಈ ರಾಜ್ಯದಲ್ಲಿ ಜೂಜನ್ನು ಹೋಲುವ ಯಾವ ಕ್ರೀಡೆಯೂ ನಡೆಯದೇ ಇದ್ದಲ್ಲಿ ಇದನ್ನು ನಿಷೇಧಿಸುವುದರಲ್ಲಿ ಅರ್ಥವಿತ್ತು. ಆದರೆ, ಜನ ಸಾಮಾನ್ಯರ ಬದುಕಿನೊಂದಿಗೆ ತಳಕು ಹಾಕಿರುವ ಕೋಳಿ ಅಂಕವನ್ನು ನಿಷೇಧಿಸುವಾಗ, ಕಾನೂನಿಗೆ ಮುಖ್ಯವಾಗುವುದು ಅಂದೊಂದು ‘ಅನಾಗರಿಕರ ಕ್ರೀಡೆ’ ಎನ್ನುವುದು. ಇಲ್ಲಿ ಕೋಳಿ ಮೇಲೆ ಹಣ ಹೂಡಿ ಕಳೆದುಕೊಳ್ಳುವುದನ್ನೇ ಜೂಜು ಎಂದು ಕರೆಯುವುದಾದರೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಕುದುರೆಯ ಮೇಲೆ ಹಣ ಹೂಡೆ ಕಳೆದುಕೊಳ್ಳುವುದನುನ ಸರಕಾರ ಯಾಕೆ ನಿಷೇಧಿಸುವುದಿಲ್ಲ? ನಿಜ, ಕೋಳಿ ಅಂಕ ನಿಷೇಧಿಸತಕ್ಕಂತಹ ಕ್ರೀಡೆಯೇ ಆಗಿದೆ. ಹಾಗೆಯೇ ಕುದುರೆ ರೇಸ್ ಕೂಡಾ ನಿಷೇಧಿಸತಕ್ಕಂತಹ ಜೂಜೆ ಆಗಿದೆ. ಒಂದೆಡೆ ಶ್ರೀಮಂತರ ಖಯಾಳಿಗಳನ್ನು ಪೋಷಿಸುತ್ತಾ, ಬಡವರ ಖಯಾಲಿಗಳನ್ನು ನಿಷೇಧಿಸುವ ಕ್ರಮ ಎಷ್ಟು ಸರಿ?
ಪತ್ರಿಕೆಗಳಲ್ಲಿ ಒಮ್ಮಿಮ್ಮೆ ಸುದ್ದಿ ಓದುವಾಗ ನಗು ಬರುತ್ತದೆ. ‘ಕೋಳಿ ಅಂಕಕ್ಕೆ ದಾಳಿ: ಎರಡು ಕೋಳಿಗಳ ವಶ’ ಎಂಬ ಸುದ್ದಿ ಪ್ರಕಟವಾಗುತ್ತದೆ. ಕಾರ್ಯಾಚರಣೆಯಲ್ಲ್ಲಿ ಭಾಗವಹಿಸಿದ ಮಹಾನ್ ಸಾಹಸಿ ಪೊಲೀಸರ ಹೆಸರುಗಳೂ ಕೆಳಗಡೆ ಪ್ರಕಟವಾಗುತ್ತದೆ. ಆದರೆ, ವಶಪಡಿಸಿದ ಕೋಳಿಗಳು ಎಲ್ಲಿ ಹೋಗುತ್ತವೆ ಎನ್ನುವ ಕುರಿತಂತೆ ಯಾವ ಮಾಹಿತಿಯೂ ಇರುವುದಿಲ್ಲ. ಯಾಕೆಂದರೆ ಕಾರ್ಯಾಚರಣೆ ನಡೆಸಿದ ಪೊಲೀಸರ ಹೊಟ್ಟೆಯೊಳಗೆ ಆ ಕೋಳಿಗಳು ಜೀರ್ಣವಾಗಿರುತ್ತದೆ. ಕೋಳಿ ಅಂಕಕ್ಕೆ ದಾಳಿ ನಡೆಸಿ, ಬಡವರಿಂದ ಹತ್ತು, ಇಪ್ಪತ್ತು ದೋಚುವುದು ಪೊಲೀಸರಿಗೆ ಅತ್ಯಂತ ಸುಲಭ ಕಾರ್ಯಾಚರಣೆಯಾಗಿದೆ.

ಕ್ರೀಡೆಯಲ್ಲಿ ಹಿಂಸೆ ಕೂಡದು ಎನ್ನುವುದಾದರೆ, ಬಾಕ್ಸಿಂಗ್ ಕ್ರೀಡೆಗೆ ನ್ಯಾಯಾಲಯ ತಕ್ಷಣ ನಿಷೇಧ ಹೇರಬೇಕು. ಮನುಷ್ಯನನ್ನು ಮನುಷ್ಯನ ವಿರುದ್ಧ ಛೂ ಬಿಟ್ಟು, ಅದನ್ನು ಮನರಂಜನೆ ಎಂದು ಕರೆಯುವ ವಿಕೃತ ಹಿಂಸೆಯನ್ನು ನಿಷೇಧ ಮಾಡುವ ಅಗತ್ಯವಿದೆ. ಬಾಕ್ಸಿಂಗ್‌ನಿಂದಾಗಿ ಪ್ರಾಣ ಕಳೆದುಕೊಂಂಡ ಅದೆಷ್ಟೋ ಕ್ರೀಡಾಳುಗಳಿದ್ದಾರೆ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಅಮಾನವೀಯವಾಗಿ ಥಳಿಸುವುದು ಯಾವ ರೀತಿಯ ಕ್ರೀಡೆ ? ‘ರೆಸ್ಲಿಂಗ್’ ಹೆಸರಿನಲ್ಲಿ ಯದ್ವಾ ತದ್ವಾ ಥಳಿಸುವುದನ್ನು ನಾವು ಟಿ.ವಿ. ವಾಹಿನಿಯಲ್ಲಿ ನೋಡುತ್ತಿದ್ದೇವೆ. ಅದು ಯಾವ ವರ್ಗದ ಜನರ ಮನರಂಜನೆ? ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಥಳಿಸುವುದು ನಮ್ಮನ್ನು ರಂಜಿಸುತ್ತದೆ ಎಂದಾದರೆ ಗುಜರಾತ್ ಹತ್ಯಾಕಾಂಡವೂ ನಮ್ಮನ್ನು ರಂಜಿಸಬಲ್ಲದು. ನಮ್ಮ ಹೃದಯಾಳದಲ್ಲಿ ಕೆನೆಗಟ್ಟಿರುವ ಕ್ರೌರ್ಯದ ದೆಸೆಯಿಂದ ಬಾಕ್ಸಿಂಗ್ ನಮ್ಮನ್ನು ರಂಜಿಸುತ್ತದೆ. ಆ ಕ್ರೌರ್ಯವೇ, ಗುಜರಾತ್ ಹತ್ಯಾಕಾಂಡದ ಕುರಿತಂತೆ ನಮ್ಮನ್ನು ವೌನ ವಹಿಸುವಂತೆ ಮಾಡುತ್ತದೆ.

‘ಕಾಬೂಲ್ ಎಕ್ಸ್‌ಪ್ರೆಸ್’ ಎಂಬ ಸಿನಿಮಾದಲ್ಲಿ ಒಂದು ದೃಶ್ಯ ಬರುತ್ತದೆ. ತಾಲಿಬಾನ್‌ಗಳು ಅಘ್ಘಾನಿಸ್ತಾನವನ್ನು ಅದಾಗಲೇ ಬಿಟ್ಟು ಹೋಗಿದ್ದಾರೆ. ಅಲ್ಲೊಂದು ಗ್ರಾಮೀಣ ಕ್ರೀಡೆಯಿತ್ತು. ಒಂದು ಆಡಿನ ದೇಹವನ್ನು ಮೈದಾನದಲ್ಲಿ ಎಸೆಯಲಾಗುತ್ತದೆ. ಆ ಬಳಿಕ ನೂರಾರು ಒಂಟೆ ಸವಾರರು ಆ ಆಡಿನ ದೇಹಕ್ಕಾಗಿ ಪೈಪೋಟಿ ನಡೆಸುವುದು. ಈ ಕ್ರೀಡೆ ನಡೆಯುತ್ತಿರುವ ಸ್ಥಳದಲ್ಲಿ ಸ್ಥಳೀಯ ಅಫ್ಘಾನಿಯೊಬ್ಬ ಪ್ರವಾಸಿಗರಲ್ಲಿ ಹೇಳುತ್ತಾನೆ ‘‘ತಾಲಿಬಾನ್ ಆಡಳಿತ ಕಾಲದಲ್ಲಿ ಈ ಆಟವನ್ನು ನಿಷೇಧಿಸಲಾಗಿತ್ತು’’ ಪ್ರವಾಸಿಗರು ಕೇಳುತ್ತಾರೆ ‘‘ಯಾಕೆ’’?
ಅಘ್ಘಾನಿ ನಗುತ್ತಾ ಹೇಳುತ್ತಾನೆ ‘‘ರಕ್ತಪಾತ ಆಗುತ್ತದೆ ಎಂಬ ಕಾರಣಕ್ಕೆ ತಾಲಿಬಾನರು ಈ ಆಟವನ್ನು ನಿಷೇಧಿಸಿದ್ದರು’’
ಈ ಸಣ್ಣ ದೃಶ್ಯ ಹಿಂಸೆಯ ಕುರಿತ ಅದೆಂತಹ ಪರಿಣಾಮಕಾರಿ ವಿಡಂಬನೆ ಅಲ್ಲವೆ?
(ಜನವರಿ-18- 2008, ಶುಕ್ರವಾರ)

Thursday, February 16, 2012

ಯೋಧ ಹೇಳಿದ ಕತೆ...

ಅವನು ಒಂದು ಪುರಾತನ ಮರದಂತೆ ಅಲ್ಲಿ ಕುಳಿತಿದ್ದ. ಗಾಳಿಗೆ ಅದುರುವ ಎಲೆಗಳಂತೆ ಅವನ ತುಟಿ, ಕಣ್ಣ ರೆಪ್ಪೆಗಳು, ಹಣೆಯ ಮೇಲೆ ಬಿದ್ದ ಒಣಗಿದ ಕೂದಲರಾಶಿ ಕಂಪಿಸುತ್ತಿದ್ದವು. ಅವನ ನೆರಳಿನ ಸುತ್ತಲೂ ಅಷ್ಟೂ ಮಕ್ಕಳು ನೆರೆದಿದ್ದರು. ಅವನು ಕತೆ ಹೇಳುತ್ತಿದ್ದ. ತಾನು ಎದುರಿಸಿದ ಕೊನೆಯ ಯುದ್ಧದ ಕತೆ. ಮಕ್ಕಳೆಲ್ಲ ಕಣ್ಣು, ಕಿವಿ ಬಿಟ್ಟು ಅವನ ಮಾತುಗಳನ್ನು ಆಲಿಸುತ್ತಿದ್ದವು. ಅದಾಗಲೇ ಅವರೆಲ್ಲ ತಮ್ಮ ಇರವನ್ನು ಮರೆತು ಕೆಂಡ ಸುರಿಯುವ ಯುದ್ಧ ಭೂಮಿಯನ್ನು ಸೇರಿದ್ದರು.

‘‘ಅದು ನಾನು ಎದುರಿಸಿದ ಕೊನೆಯ ಯುದ್ಧ...ಮತ್ತು ನಾನು ಆವರೆಗೆ ಕಂಡರಿಯದ ಶ್ರೇಷ್ಠ ಯುದ್ಧ. ಆ ಯುದ್ಧಕ್ಕಾಗಿಯೇ ನನಗೀ ಪದಕ ದೊರಕಿತು...’’
ಮಕ್ಕಳ ಕಣ್ಣೆಲ್ಲ ಅವನ ಎದೆಯ ಮೇಲೆ ನೇತಾಡುತ್ತಿದ್ದ ಪದಕಗಳತ್ತ ಹರಿಯಿತು. ‘‘ಸರಿ, ಮುಂದೆ ಹೇಳು....’’ ಮಕ್ಕಳು ಅವಸರಿಸಿದರು.
‘‘ಮೊದಲ ದಿನವೇ ನಮ್ಮ ಪಾಲಿಗೆ ವಿಜಯದ ದಿನವಾಗಿತ್ತು. ಶತ್ರುಗಳನ್ನು ನಾವೆಲ್ಲ ಸೇರಿ ನಡುಗಿಸಿದೆವು. ಒಂದೇ ದಿನದಲ್ಲಿ 200 ಸೈನಿಕರನ್ನು ಕೊಂದು ಮುಂದುವರಿದೆವು...’’
‘‘ಇನ್ನೂರು ಸೈನಿಕರನ್ನು ಕೊಂದಿರಾ...?’’ ಮಕ್ಕಳು ಬಾಯಗಲಿಸಿದರು. ‘‘ಅವರೆಲ್ಲ ಅಲ್ಲೇ ಸತ್ತರಾ...ಒಂದೇ ದಿನದಲ್ಲಿ ಯುದ್ಧ ಮುಗಿಯಿತೆ?’’
ಯೋಧ ನಕ್ಕ ‘‘ಹತ್ತು ಸಾವಿರಕ್ಕೂ ಅಧಿಕ ಶತ್ರು ಸೈನಿಕರು ಆ ಕಡೆಯಿರುವಾಗ ಬರೇ ಇನ್ನೂರು ಸೈನಿಕರನ್ನು ಕೊಂದರೆ ಯುದ್ಧ ಮುಗಿಯುತ್ತದೆಯೆ? ಆದರೂ ಅವರೆಲ್ಲ ಹೆದರಿ ಬಿಟ್ಟರು. ಅಂದ ಹಾಗೆ, ಆ 200 ಸೈನಿಕರೂ ಸ್ಥಳದಲ್ಲೇ ಸತ್ತಿದ್ದರು’’
‘‘ಮುಂದೆ...’’
‘‘ಮರುದಿನ ನನ್ನ ಪಾಲಿಗೆ ಶೌರ್ಯದ ದಿನ. ಯಾಕೆಂದರೆ ಯುದ್ಧದಲ್ಲಿ ನಾನು ವೀರೋಚಿತವಾಗಿ ಹೋರಾಡಿದ್ದೆ. ನನ್ನ ಹೋರಾಟಕ್ಕೆ ನನ್ನ ಕಡೆಯ ಸೈನಿಕರೇ ದಂಗು ಬಡಿದು ಹೋಗಿದ್ದರು. ಅವತ್ತು ನಾನೊಬ್ಬನೇ 50 ಸೈನಿಕರನ್ನು ಕೊಂದಿದ್ದೆ....’’
‘‘ಒಬ್ಬರೇ....’’ ಮಕ್ಕಳೆಲ್ಲ ಮತ್ತೊಮ್ಮೆ ಅವನ ಎದೆಯಲ್ಲಿ ನೇತಾಡುತ್ತಿದ್ದ ಪದಕಗಳತ್ತ ನೋಡಿದರು.
‘‘ಹೌದು ಒಬ್ಬನೆ. ನನ್ನ ಪಾಲಿಗೆ ಎರಡನೆಯ ದಿನ ಒಂದು ಸಣ್ಣ ಆರಂಭವಾಗಿತ್ತು....ಮೂರನೆಯ ದಿನ ನನಗೆ ಹೊಸ ಹುರುಪು ಬಂದಿತ್ತು. ನಾನು ಯಾವ ಭಯವೂ ಇಲ್ಲದೆ ಮುನ್ನುಗ್ಗುತ್ತಲೇ ಇದ್ದೆ....ಅದು ನನ್ನ ಪಾಲಿಗೆ ಇನ್ನೊಂದು ಹೆಗ್ಗಳಿಕೆಯ ದಿನವಾಗಿತ್ತು...ಅಂದು ನಾನು ಒಟ್ಟು ನೂರು ಶತ್ರುಗಳನ್ನು ಕೊಂದು ಹಾಕಿದ್ದೆ....ಒಬ್ಬ ಶತ್ರುವನ್ನಂತೂ ಚೂರಿಯಿಂದಲೇ ಇರಿದು ಹಾಕಿದೆ...’’
ಮಕ್ಕಳ ಉಸಿರು ಅಡಗಿತ್ತು. ಅವರು ನಿಧಾನಕ್ಕೆ ಭೀತರಾಗುತ್ತಿದ್ದರು. ಅವನೋ ಯಾವುದೋ ಉನ್ಮಾದಕ್ಕೊಳಗಾದವನಂತೆ ಮುಂದುವರಿಸಿದ ‘‘ಅದು ನಾಲ್ಕನೆಯ ದಿನ. ನನ್ನ ಸೈನಿಕರು ನನ್ನನ್ನು ಎತ್ತಿ ಮೆರೆದಾಡಿದ ದಿನ. ನಾನಂದು ನೂರಕ್ಕೂ ಅಧಿಕ ಅಂದರೆ ಲೆಕ್ಕವಿರದಷ್ಟು ಜನರನ್ನು ಚೆಂಡಾಡಿದ್ದೆ. ಮುಖ್ಯವಾಗಿ ಶತ್ರುಸೇನೆಯ ಇಬ್ಬರು ಹಿರಿಯ ಅಧಿಕಾರಿಗಳನ್ನೇ ಕೊಂದು ಹಾಕಿದ್ದೆ. ಬಹುತೇಕ ಭೂಮಿ ನಮ್ಮ ವಶವಾಗಿತ್ತು....’’
ಇದ್ದಕ್ಕಿದ್ದಂತೆಯೇ ಯೋಧ ವೌನವಾದ. ಆ ವೌನವೂ ಏನೋ ಹೇಳುತ್ತಿದೆಯೆಂದು ಭಾವಿಸಿ ಮಕ್ಕಳು ಸುಮ್ಮಗೆ ಆಲಿಸುತ್ತಿದ್ದರು.

ಅಷ್ಟರಲ್ಲಿ ಒಬ್ಬ ಹುಡುಗ ಕೇಳಿದ ‘‘ಐದನೆಯ ದಿನ ಏನಾಯ್ತು?’’
‘‘ಹೌದು, ಏನಾಯ್ತು...?’’ ಮಕ್ಕಳೆಲ್ಲ ಒಟ್ಟಾಗಿ ಮತ್ತೆ ಕೇಳಿದರು.
ಯೋಧನ ಗಂಟಲು ಕಟ್ಟಿತ್ತು ‘‘ಅದು ನನ್ನ ಬದುಕಿನ ಸರ್ವ ಶ್ರೇಷ್ಟ ದಿನ...ನಾನಿಂದಿಗೂ ನನ್ನ ಎದೆಯಲ್ಲಿ ಹೊತ್ತು ಕೊಂಡು ತಿರುಗುತ್ತಿರುವ ದಿನ....’’
‘‘ಹೌದೆ? ಎಷ್ಟು ಶತ್ರುಗಳನ್ನು ಕೊಂದಿರಿ?’’ ಮಕ್ಕಳು ಹುಚ್ಚೆದ್ದು ಒಟ್ಟಾಗಿ ಕೇಳಿದರು.
ಯೋಧ ವೌನವಾಗಿದ್ದ.
ಮಕ್ಕಳೇ ಪ್ರಶ್ನಿಸಿದರು ‘‘500 ಶತ್ರುಗಳನ್ನು....?’’
ಯೋಧ ಉತ್ತರಿಸಲಿಲ್ಲ.
‘‘1000?’’ ಮಕ್ಕಳೇ ಕೇಳಿದರು.
ಯೋಧ ಯಾವುದೋ ಗುಂಗಿನಲ್ಲಿ ವೌನವಾಗಿಯೇ ಇದ್ದ.
‘‘ಒಂದು ಲಕ್ಷ?’’ ಮಕ್ಕಳು ಮತ್ತೆ ಉತ್ಸಾಹದಿಂದ ಅಂಕಿಯನ್ನು ಮುಂದಿಟ್ಟರು.
ಊಹುಂ...ಯೋಧ ಮಾತನಾಡುತ್ತಿಲ್ಲ.
‘‘ಒಂದು ಕೋಟಿ...?’’ ಮಕ್ಕಳು ಮತ್ತೇ ಜೋರಾಗಿ ಕೇಳಿದರು.
ಯೋಧ ಈಗ ಬಾಯಿ ತೆರೆದ ‘‘ಇಲ್ಲ...ಅವತ್ತು ಒಬ್ಬ ಸೈನಿಕನನ್ನು ನಾವೆಲ್ಲರೂ ಸೇರಿ ಕೊಂದು ಹಾಕಿದೆವು’’
‘‘ಬರೇ ಒಬ್ಬನನ್ನೇ...’’ ಮಕ್ಕಳು ನಿರಾಶೆಯಿಂದ ಕೇಳಿದರು. ಅವರ ಉತ್ಸಾಹ ಒಮ್ಮೆಲೆ ಕುಗ್ಗಿತ್ತು.
‘‘ಹೌದು, ಒಬ್ಬನನ್ನು’’ ಯೋಧ ಮತ್ತೊಮ್ಮೆ ಉಚ್ಚರಿಸಿದ.
‘‘ಆ ಸೈನಿಕ ಅಷ್ಟು ಬಲಿಷ್ಟನಾಗಿದ್ದನೆ?’’ ಮಕ್ಕಳು ಅಚ್ಚರಿಯಿಂದ ಕೇಳಿದರು.
 ‘‘ಹೂಂ...ಈ ಜಗತ್ತಿನ ಯಾವ ಯೋಧರೂ ಎದುರಿಸಲಾಗದಷ್ಟು ಅವನು ಬಲಿಷ್ಟನಾಗಿದ್ದ....’’ ಒಂದು ಕ್ಷಣ ವೌನವಾಗಿದ್ದ ಯೋಧ ಮುಂದುವರಿಸಿದ ‘‘ಹೌದು, ಅದು ಐದನೆಯ ದಿನ. ನಾನು ಗುಂಪಿನಿಂದ ಬೇರೆಯಾಗಿ ಶತ್ರುಗಳೆಡೆಗೆ ಉನ್ಮಾದದಿಂದ ದಾವಿಸುತ್ತಲೇ ಇದ್ದೆ. ಒಬ್ಬೊಬ್ಬರ ಹೆಣಗಳೂ ಉರುಳುತ್ತಿದ್ದವು. ಹಾಹಾಕಾರ, ಚೀತ್ಕಾರ...ನಮ್ಮವರದೋ, ಶತ್ರುಗಳದೋ ಎಂದು ಗುರುತಿಸುವುದು ಕಷ್ಟವಾಗುತ್ತಿತ್ತು. ಯಾಕೆಂದರೆ ಸಾವಿನ ಚೀತ್ಕಾರ ಎಲ್ಲವೂ ಒಂದೇ ಥರ ಕೇಳಿಸುತ್ತದೆ. ಅದಕ್ಕೆ ದೇಶ, ಭಾಷೆ, ಜಾತಿ, ಧರ್ಮಗಳ ಹಂಗಿಲ್ಲ...ಅವೆಲ್ಲದಕ್ಕೂ ಕಿವುಡನಾಗಿ ನಾನು ಮುಂದುವರಿಯುತ್ತಿದ್ದೆ. ಇದ್ದಕ್ಕಿದ್ದಂತೆ ಅದೆಲ್ಲಿಂದ ಧಾವಿಸಿ ಬಂತೋ...ಒಂದು ಗುಂಡು ನನ್ನ ಬಲಭಾಗದ ಎದೆಯನ್ನು ಸೀಳಿತು....ಇನ್ನೊಂದು ನನ್ನ ತೊಡೆಯನ್ನು ಮುರಿದು ಹಾಕಿತು. ನಾನು ಯುದ್ಧಭೂಮಿಯ ಪಕ್ಕದಲ್ಲೇ ಇದ್ದ ಕಂದರಕ್ಕೆ ಉರುಳಿ ಬಿದ್ದಿದ್ದೆ....’’
ಮಕ್ಕಳೆಲ್ಲ ‘‘ಓಹ್....’’ ಎಂದು ಬಾಯಿಗೆ ಕೈಯಿಟ್ಟು ಉದ್ಗರಿಸಿದರು. ಯೋಧನೂ ಒಂದರೆಕ್ಷಣ ವೌನವಾದ.

  ‘‘ಸುಮಾರು ನಾಲ್ಕು ಗಂಟೆ....ನಾಲ್ಕು ಗಂಟೆ ನಾನು ಸಾವು ಬದುಕಿನ ನಡುವೆ ಒದ್ದಾಡುತ್ತಲೇ ಇದೆ. ನನ್ನ ನಾಲಗೆ ಸೂರ್ಯನ ಝಳಕ್ಕೆ ಕುದಿಯುತ್ತಿರುವ ಮರೂಭೂಮಿಯಂತೆ ಸುಡುತ್ತಿತ್ತು. ನನಗೆ ಬೇಕಾಗಿದ್ದದ್ದು ಒಂದು ಗುಟುಕು, ಒಂದೇ ಒಂದು ಗುಟುಕು ನೀರು....ನಾನು ‘ನೀರು...ನೀರು’ ಎಂದು ಆರ್ತನಾದಗೈಯುತ್ತಿದ್ದೆ. ಆದರೆ ನನ್ನ ಧ್ವನಿ ನನಗೇ ಕೇಳುತ್ತಿರಲಿಲ್ಲ...ನಿಧಾನಕ್ಕೆ ಆಕಾಶದ ಬಣ್ಣ ಬದಲಾಗುತ್ತಿತ್ತು. ನನ್ನ ಸುತ್ತಮುತ್ತಲಿದ್ದ ಗಿಡಮರಗಳ ಬಣ್ಣವೂ ಕೆಂಪಾಗುತ್ತಿತ್ತು. ನಾನು ಸಾವಿನ ಅಂಚಿಗೆ ಜಾರುತ್ತಿದ್ದೆ....ಅಷ್ಟರಲ್ಲಿ ದೂರದಿಂದ ಯಾರೋ ಬರುತ್ತಿದ್ದ ಹಾಗೆ ಕಂಡಿತು....ಯಾವನೋ ದೇವದೂತನಂತೆ ಮೊದಲು ಕಂಡರೂ ಅವನು ಹತ್ತಿರ ಹತ್ತಿರವಾದ ಹಾಗೆ ಮನುಷ್ಯ ರೂಪವನ್ನು ಪಡೆಯುತ್ತಿದ್ದ. ಇನ್ನೂ ಹತ್ತಿರವಾದಂತೆ ಆ ಸ್ಥಿತಿಯಲ್ಲೂ ನಾನು ಬೆಚ್ಚಿ ಬಿದ್ದೆ. ಶತ್ರು ಸೈನಿಕನನ್ನು ಯಾವ ಸ್ಥಿತಿಯಲ್ಲೂ, ಎಷ್ಟು ದೂರದಲ್ಲೂ ಗುರುತು ಹಿಡಿಯುವವನು ನಾನು. ಬರುತ್ತಿದ್ದವನು ಶತ್ರು ಸೈನಿಕನಾಗಿದ್ದ....ಸರಿ...ಹೇಗೂ ಸಾಯಲಿದ್ದ ನಾನು ಅವನ ಕೈಯಲ್ಲಿ ಸಾಯುವುದಕ್ಕೆ ಅಣಿಯಾದೆ....’’
‘‘ಓಹ್....’’ ಮಕ್ಕಳೆಲ್ಲ ಮತ್ತೆ ಚೀತ್ಕರಿಸಿದರು.

‘‘ಆ ಶತ್ರು ಸೈನಿಕ ಇನ್ನೂ ಹತ್ತಿರವಾದಂತೆ ಅವನ ಹೆಗಲಲ್ಲಿರುವ ಕೋವಿ ನನಗೆ ಸ್ಪಷ್ಟವಾಗಿ ಕಾಣ ತೊಡಗಿತು. ಅವನು ನನ್ನನ್ನು ನೋಡಿದ್ದಾನೆ....ನನ್ನೆಡೆಗೆ ಧಾವಿಸಿ ಬರುತ್ತಿದ್ದ...ಅಂದಹಾಗೆ ಅವನ ಕೈಯಲ್ಲಿ ಇನ್ನೇನೋ ಇತ್ತು. ಇನ್ನಷ್ಟು ಹತ್ತಿರವಾದಾಗ ನನಗೆ ಗೊತ್ತಾಯಿತು. ಅವನ ಕೈಯಲ್ಲಿ ನೀರಿನ ಬ್ಯಾಗೊಂದಿತ್ತು....ಆದರೆ ನನಗೆ ಅದರ ಮೇಲೆ ಯಾವ ನಿರೀಕ್ಷೆಯೂ ಇರಲಿಲ್ಲ. ನನ್ನ ಗಮನವೆಲ್ಲ ಅವನ ಹೆಗಲ ಮೇಲಿದ್ದ ಕೋವಿಯ ಮೇಲಿತ್ತು’’
‘‘ಆದರೆ ಯುದ್ಧ ಭೂಮಿಯಲ್ಲಿ ನಡೆಯಲೇ ಬಾರದಂತಹ ಒಂದು ವಿಚಿತ್ರ ಅಲ್ಲಿ ನಡೆಯಿತು. ಅವನು ನೇರ ನನ್ನ ಬಳಿ ಸಾರಿದವನೇ ಬಾಗಿದ. ನನ್ನ ಬಾಯಿಂದ ಅಯಾಚಿತವಾಗಿ ‘ನೀರು’ ಎಂಬ ಶಬ್ದ ಹೊರಬಿತ್ತು. ಅವನು ನನ್ನ ತಲೆಯನ್ನು ಎತ್ತಿ ಅವನ ತೊಡೆಯ ಮೇಲೆ ಇಟ್ಟುಕೊಂಡ. ಬಳಿಕ ಒಂದು ಮಗುವಿನ ಬಾಯಿಗೆ ಹಾಲೂಡಿಸುವಂತೆ ತನ್ನಲ್ಲಿದ್ದ ನೀರನ್ನು ಹನಿ ಹನಿಯಾಗಿ ನನ್ನ ಬಾಯಿಗೆ ಹನಿಸತೊಡಗಿದ. ಅವನಲ್ಲಿದ್ದ ಆ ನೀರು ನಿಜಕ್ಕೂ ನೀರಾಗಿರಲಿಲ್ಲ. ಅದು ಅಮತವಾಗಿತ್ತು. ಒಂದೊಂದು ಹನಿ ನನ್ನ ನನ್ನೊಳಗನ್ನು ಸೇರುತ್ತಿದ್ದ ಹಾಗೆಯೇ ನಾನು ಚೇತರಿಸಿಕೊಳ್ಳುತ್ತಿದ್ದೆ...ಇನ್ನು ಸಾಕು ಎನ್ನುವವರೆಗೆ ನನ್ನ ಬಾಯಿಗೆ ನೀರು ಸುರಿದ. ಬಳಿಕ ಗಾಯಗಳಿಗೆ ತನ್ನಲ್ಲಿದ್ದ ಬಟ್ಟೆಯಿಂದ ರಕ್ತ ಸೋರದಂತೆ ಮಾಡಿದ. ಎತ್ತಿ ಪಕ್ಕದ ಮರದ ಕೆಳಗೆ ನನ್ನನ್ನು ಒರಗಿಸಿದ....’’

ಮಕ್ಕಳು ದಿಗ್ಭ್ರಮೆಗೊಂಡಿದ್ದರು. ‘‘ಆಮೇಲೆ ಏನಾಯ್ತು...ಆಮೇಲೆ....ಅವನೇನಾದ...ಎಲ್ಲಿ ಹೋದ....ಅವನನ್ನು ನಮ್ಮ ದೇಶಕ್ಕೆ ಕರೆದುಕೊಂಡು ಬಂದಿರಾ?’’ ಹುಡುಗನೊಬ್ಬ ಆತುರದಿಂದ ಕೇಳಿದ.
ಯೋಧನ ಗಂಟಲು ಗೊಗ್ಗರು ಸ್ವರ ಹೊರಡಿಸುತ್ತಿತ್ತು. ಕೆಮ್ಮಿ ಗಂಟಲನ್ನು ಸರಿಪಡಿಸಿಕೊಂಡ. ಮತ್ತು ಹೇಳಿದ ‘‘ಅಷ್ಟರಲ್ಲಿ ನಮ್ಮವರ ತಂಡ ನನ್ನೆಡೆಗೆ ಧಾವಿಸಿ ಬಂತು. ಆ ಸೈನಿಕನನ್ನು ನಮ್ಮವರು ಕೊಂದು ಹಾಕಿದರು....’’
‘‘ಯಾಕೆ? ಯಾಕೆ ಕೊಂದರು. ಅವನೇನು ತಪ್ಪು ಮಾಡಿದ್ದ?’’ ಹುಡುಗನೊಬ್ಬ ಅಳುತ್ತಾ ಕೇಳಿದ.
ಒಂದು ಕ್ಷಣ ವೌನವಾಗಿದ್ದ ಯೋಧ ಹೇಳಿದ ‘‘ಯಾಕೆಂದರೆ, ಅವನು ನಮ್ಮ ದೇಶದ ಶತ್ರುವಾಗಿದ್ದ’’

Tuesday, February 14, 2012

ಎರಡು ಮಂಚಗಳು

ಮದುವೆಯೆಂದರೆ
ಎರಡು ಮಂಚಗಳನ್ನು
ಒಂದಾಗಿ ಜೋಡಿಸುವುದೆ?

ಯಾವ ಮರದ ಹಲಗೆಯೋ,
ಯಾವ ಬಡಿಗ ಕೆತ್ತಿದ ಕಾಲೋ
ಮದುವೆಯ ರಾತ್ರಿ
ಎರಡು ಮಂಚಗಳನ್ನು ತಂದು ಜೋಡಿಸಿದ್ದಾರೆ!

ಹೊದಿಸಿದ್ದಾರೆ ಹಾಸಿಗೆಯನ್ನು
ನೀಳ ಗಾಯವೊಂದಕ್ಕೆ
ಬಿಳಿ ಬಟ್ಟೆಯೊಂದನ್ನು
ಬಿಗಿದು ಕಟ್ಟುವಂತೆ

ಅದೆಷ್ಟೋ ರಾತ್ರಿಗಳು
ಉರುಳಿವೆ
ಹಾಸಿಗೆ ಎತ್ತಿ ನೋಡಿದರೆ
ಗಾಯವಿನ್ನೂ
ತೆರೆದೇ ಇದೆ...!