Thursday, September 10, 2009

ಹರಿದ ಚಪ್ಪಲಿ, ಮುರಿದ ಬಕೀಟುಗಳ ನಡುವೆ...


ನಾನು ಬರೆದ ಒಂದಿಷ್ಟು ಚಿಲ್ಲರೆ ಕತೆ, ಕವಿತೆಗಳನ್ನೆಲ್ಲ ಕಾಲ ತನ್ನ ತಕ್ಕಡಿಯಲ್ಲಿಟ್ಟು ತೂಗಿ ‘ತಕೋ...ಇದರ ಬೆಲೆ ಇಷ್ಟು’ ಎಂದು ಎತ್ತಿ ಮೂಲೆಗೆಸೆದಿವೆ. ಹರಿದ ಚಪ್ಪಲಿ, ಮುರಿದ ಬಕೀಟು, ನಜ್ಜುಗುಜ್ಜಾದ ಡಬ್ಬಗಳಿಂದಾವೃತವಾದ ಗುಜರಿ ಅಂಗಡಿಯ ರಾಶಿಗಳಲ್ಲಿ ಬೆಲೆಬಾಳುವಂತದ್ದೇನಾದರೂ ಇರಬಹುದೋ ಎಂದು ತಡಕಾಡುವ ಗುಜರಿ ಆಯುವ ಹುಡುಗನ ಆಸೆ ಮಾತ್ರ ಇನ್ನೂ ಹಾಗೇ ಇದೆ(ನಂಬಿಕೆ). ಗುಜರಿ ಅಂಗಡಿಯ ಮಧ್ಯದಲ್ಲಿ ರಾಜಮಾನವಾಗಿರುವ ತಕ್ಕಡಿಯ ಮುಳ್ಳುಗಳು ನನ್ನಾಳದಲ್ಲಿ ಎಲ್ಲೋ ಆಗಾಗ ಕದಲುತ್ತವೆ. ಏನೋ ಬರೆಯಬೇಕು ಅನ್ನಿಸುತ್ತದೆ. ಬರೆಯಬೇಕು ಬರೆಯಬೇಕು...ಹೀಗೆ ಭಾವಿಸುತ್ತಲೇ ಬದುಕುತ್ತಾ ಬಂದಿದ್ದೇನೆ...
ಶಬ್ದಗಳನ್ನು ರಕ್ತದಂತೆ ಕಕ್ಕಬೇಕು. ಎದೆಯ ಭಾರವನ್ನು ಹಗುರ ಮಾಡಬೇಕು. ಆದರೆ, ಪ್ರತಿ ಕವಿತೆಗಳನ್ನು ಬರೆದು ಮುಗಿಸಿದಾಗಲೂ, ನಾನು ಬರೆಯಲು ಹೊರಟದ್ದು ಇದಾಗಿರಲಿಲ್ಲ ಎಂಬ ಗಾಢ ನಿರಾಶೆ. ಗರ್ಭಪಾತವಾದ ಹೆಣ್ಣಿನ ಹತಾಶೆ...ಖಿನ್ನತೆ! ಬರಹ ಸುಖ ಕೊಡುತ್ತದೆ ಎಂದು ಹೇಳಿದ ಆ ಪುಣ್ಯಾತ್ಮ ಯಾರೋ!? ಎಲ್ಲವನ್ನೂ ಬಿಟ್ಟು ಹೀಗೇ...ಪತ್ರಿಕೆ, ರಾಜಕೀಯ ಸಮಾಜ, ದೇಶ ಎಂಬಿತ್ಯಾದಿ ಹೊರಗಿನ ಗದ್ದಲಗಳಲ್ಲಿ ಕಳೆದುಹೋಗುವುದೇ ಕೆಲವೊಮ್ಮೆ ಹೆಚ್ಚು ನೆಮ್ಮದಿ ಖುಷಿ ಕೊಡುತ್ತದೆ. ನನ್ನೊಳಗಿನ ಧ್ವನಿಯೇ ಕೇಳದಷ್ಟು ದೂರ ನಡೆದೇ ಬಿಡಬೇಕು ಎನ್ನುವ ಬಯಕೆ. ಆದರೂ ಎಲ್ಲೋ ಆಳದಲ್ಲಿ ಬಾಯಾರಿದ ಮಗುವೊಂದು ಅತ್ತೂ ಅತ್ತೂ ಸುಸ್ತಾಗಿ ಏದುಸಿರು ಬಿಡುತ್ತಿರುವಂತೆ ಅನ್ನಿಸುತ್ತದೆ...ಒಮ್ಮೊಮ್ಮೆ ತಟ್ಟನೆ ತಲ್ಲಣಿಸಿ ನಿಂತು ಬಿಡುತ್ತೇನೆ.

ಈ ಬ್ಲಾಗ್ ಎನ್ನುವುದು, ಶಬ್ದಗಳ ಸಂತೆಯಿಂದ ಒಂದಿಷ್ಟು ದೂರದಲ್ಲಿ ನಾನು ತೆರೆದ ಗುಜರಿ ಅಂಗಡಿ. ಸಂತೆಗಳೆಲ್ಲ ಮುಗಿದ ಬಳಿಕ ದೊಡ್ಡದೊಂದು ಗೋಣಿ ಚೀಲದೊಂದಿಗೆ ಸಂತೆಯ ಮೈದಾನದಲ್ಲಿ ಅಳಿದುಳಿದ ಏನೇನನ್ನೋ ಹುಡುಕುವ, ಆಯ್ದು ಚೀಲದೊಳಗೆ ತುಂಬಿಸುವ ಹುಡುಗನಂತೆ ನನ್ನ ಮಾತುಗಳನ್ನು ತುಂಬಿಸಿ ಈ ಗುಜರಿ ಅಂಗಡಿಯಲ್ಲಿ ವ್ಯಾಪಾರಕ್ಕಿಡಲು ಹೊರಟಿದ್ದೇನೆ. ನನ್ನ ಕತೆ, ಕವಿತೆ ಮತ್ತು ತೀರಾ ಒಳಗಿನ ಮಾತುಗಳನ್ನು ಈ ಬ್ಲಾಗ್ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ.

ಒಂದು ರೀತಿಯಲ್ಲಿ ಹೇಳದೆ ಕೇಳದೆ ಮನೆ ಬಿಟ್ಟು ಹೋದ ಬೇಜವಾಬ್ದಾರಿ ಮಗ ನಾನು. ಮತ್ತೆ ಕವಿತೆಯ ಬಾಗಿಲು ತಟ್ಟುತ್ತಿದ್ದೇನೆ.
ತುಂಬಾ ದಿನಗಳ ಹಿಂದೆ ನನ್ನ ಗೆಳೆಯನೊಬ್ಬ ಕೇಳಿದ್ದ “ನೀನು ಪಕ್ಕಾ ಬ್ಯಾರಿ ಅಂದರೆ ಬ್ಯಾರಿ ಮಾರಾಯ. ಒಂದೇ ಒಂದು ಬಾಳೇ ಗೊನೆಯನ್ನು ಹಿಡಿದುಕೊಂಡು ಅದೆಷ್ಟು ಸಂತೆಗಳಲ್ಲಿ ವ್ಯಾಪಾರ ಮಾಡಿದ್ದೀಯ?”

ಆ ಮಾತಿನಲ್ಲಿ ಸತ್ಯ ಇದೆ ಅನ್ನಿಸುತ್ತದೆ. ‘ಬಾಳೆ ಗಿಡ ಗೊನೆ ಹಾಕಿತು” ನನ್ನ ಒಂದೇ ಒಂದು ಕತಾ ಸಂಕಲನ.(ಲೋಹಿಯಾ ಪ್ರಕಾಶನ ಇದನ್ನು ಹೊರತಂದಿದೆ. ಮೈಸೂರಿನ ಚದುರಂಗ ಪ್ರತಿಷ್ಠಾನದವರು ಇದಕ್ಕೊಂದು ಪ್ರಶಸ್ತಿಯನ್ನು ನೀಡಿದ್ದಾರೆ. ಜೊತೆಗೆ ಹತ್ತು ಸಾವಿರ ರೂಪಾಯಿಯನ್ನೂ ಕೂಡ) ಆದರೂ ನನ್ನ ಕೆಲವು ಗೆಳೆಯರು ಆಗಾಗ ‘ಹೊಸ ತಲೆಮಾರಿನ ಕತೆಗಾರ’ ಎಂದೆಲ್ಲ ಕೊಂಡಾಟ ಮಾಡುವುದಿದೆ. ಬಹುಶಃ ಅದು ಈ ಗೆಳೆಯನ ಹೊಟ್ಟೆಕಿಚ್ಚಿಗೆ ಕಾರಣವಿರಬೇಕು. ನಾನು ಕೆಲ ಸಮಯ ಮುಂಬಯಿಯಲ್ಲಿದ್ದೆ. ಸುಮಾರು ಐದು ವರ್ಷ. ಮುಂಬೈಯ ಧಾರಾವಿಯಲ್ಲಿ. ಆಗ ಒಂದಿಪ್ಪತ್ತೈದು ಕವಿತೆಗಳನ್ನು ಒಟ್ಟು ಸೇರಿಸಿ ಪುಸ್ತಕ ಮಾಡಿದ್ದೆ. “ಪ್ರವಾದಿಯ ಕನಸು” ಎಂದು ಹೆಸರು ಕೊಟ್ಟಿದ್ದೆ. ಆಗ ಅದಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ಸಿಕ್ಕಿದಾಗ ನನಗಾದ ಖುಷಿ, ಸಂಭ್ರಮಗಳ ಬಗ್ಗೆಯೇ ಯೋಚಿಸುತ್ತೇನೆ. ಈಗ ಯಾಕೆ ಅದೇ ತರಹ ಖುಷಿ ಸಂಭ್ರಮಗಳಿಲ್ಲ. ಒಂದು ಕವಿತೆ ಪತ್ರಿಕೆಯಲ್ಲಿ ಪ್ರಕಟವಾದರೆ ಆಗೆಲ್ಲ ಅದೆಷ್ಟು ರೋಮಾಂಚನ...ಸಡಗರ..ಈಗ ಮಾತ್ರ...ಊಹೂಂ...

ಇದೀಗ...ಕೈಯಲ್ಲಿ ಒಂದಿಷ್ಟು ಚಿಲ್ಲರೆ ಕತೆಗಳು, ಕವಿತೆಗಳನ್ನು ಇಟ್ಟುಕೊಂಡು ಗುಜರಿ ಅಂಗಡಿಯ ಮುಂದೆ ನಿಂತಿದ್ದೇನೆ. ತಕ್ಕಡಿಯೋ ಅದನ್ನು ನಿಕೃಷ್ಟ ಕಣ್ಣಲ್ಲಿ ನೋಡಿ ತಲೆಯಾಡಿಸುತ್ತಿದೆ....ನನ್ನ ಬ್ಲಾಗಿನ ಕುರಿತಂತೆ ಇಷ್ಟು ಸಾಕು ಅನ್ನಿಸುತ್ತದೆ.
ದಿನ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಪತ್ರಿಕೆಯಲ್ಲಿ ಸಂಪಾದಕೀಯ, ಸಿನಿಮಾ, ವ್ಯಂಗ್ಯ, ಲೇಖನ, ವಿಮರ್ಶೆ, ವರದಿ, ಸುದ್ದಿ ಎಂದು ಪ್ರತಿ ವಾರ ಬರೆಯುತ್ತಲೇ ಇರುತ್ತೇನೆ. ಅದಾವುದರ ಭಾರವನ್ನೂ ಇಲ್ಲಿ ನಿಮ್ಮ ಬೆನ್ನ ಮೇಲೆ ಹೊರಿಸಲಾರೆ ಎಂಬ ಭರವಸೆಯನ್ನು ನೀಡುತ್ತೇನೆ.

Monday, September 7, 2009


ಗುಜರಿ ಆಯುವ ಹುಡುಗ!

ಕಾಯಿ ವ್ಯಾಪಾರಕ್ಕೆ ಸಂತೆಗೆ ಬಂದ
ಬ್ಯಾರಿಯಂತೆ ಅಪ್ಪ
ಹುಟ್ಟಿದ

ಗಿಡದಲ್ಲಿ ತೂಗುವ ಮಾವು
ಗೇರು, ಆಗಷ್ಟೇ ಕಣ್ಣು ಬಿಟ್ಟ ಗೊನೆ
ಹೂವು ಎಲ್ಲವನ್ನು
ಸರಕಿನಂತೆ ನೋಡಿದ

ವ್ಯಾಪಾರವೆನ್ನುವುದು ಅವನಿಗೆ
ಜೂಜಿನಂತೆ ಅಂಟಿತು
ಬದುಕನ್ನೇ ಒತ್ತೆ ಇಟ್ಟು
ಆಡಿದ

ಹಸಿವನ್ನು ಹೂಡಿ
ದಿನಸಿ ಅಂಗಡಿ ತೆರೆದ
ಗೆದ್ದ
ಗೆಲುವನ್ನು ಜವಳಿ ಅಂಗಡಿಗೆ
ಮಾರಿ ಸೋತ...
ಸಾಲಕ್ಕೆ ಹಳೆಯ
ಹೆಂಚನ್ನೇ ಮಾರಿದ
ಸೂರುವ ಸೂರನ್ನು
ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ಗಂಜಿಗೆ ನೆಂಜಿಕೊಳ್ಳುವುದಕ್ಕೆಂದು
ತಂದ ಸಿಗಡಿಯ ರುಚಿ ಹಿಡಿದು
ಕಡಲ ತಡಿಗೆ ಹೋದ
ಮೀನಿನ ವ್ಯಾಪಾರಕ್ಕಿಳಿದ

ದುಂದುಗಾರ ಅಪ್ಪ
ಸವಕಲು ಮಾತುಗಳನ್ನೇ
ನಾಣ್ಯಗಳಂತೆ ಚಲಾವಣೆಗೆ ಬಿಟ್ಟ
ಅಮ್ಮನ ಮೌನದ ತಿಜೋರಿಯನ್ನೇ
ದೋಚಿದ

ಜೂಜಿನ ನಿಯಮವ ಮರೆತು
ನಂಬಬಾರದವರನ್ನೆಲ್ಲ ನಂಬಿದ
ಸೋಲಿನ ರುಚಿಯನ್ನು ಹಿಡಿದ
ಸೋಲಿಗಾಗಿಯೇ ಆಡ ತೊಡಗಿದ...

ಕೊನೆಗೆ ಎಲ್ಲ ಬಿಟ್ಟು
ಗುಜರಿ ಅಂಗಡಿ ಇಟ್ಟ
ಹರಿದ ಚಪ್ಪಲಿ, ತುಕ್ಕು ಹಿಡಿದ ಡಬ್ಬ
ಮುರಿದ ಬಕೀಟುಗಳ ರಾಶಿಯ
ನಡುವೆ ಆ
ರಾಮ ಕುರ್ಚಿಗೆ ಒರಗಿದ
ಅವನ ಮೌನದ ತಿಜೋರಿ ತುಂಬಾ
ಸಾಲ ಪತ್ರಗಳು
ಅಂಗಡಿಯ ಬಾಗಿಲಲ್ಲಿ
ಕಾಲ
ವಸೂಲಿಗೆಂದು ಕುಕ್ಕರಗಾಲಿನಲ್ಲಿ ಕೂತಿದ್ದಾನೆ

ನಾನು ಅವನ ಮಗ
ಅವನ ಮೌನದ ಮನೆಯ
ಹಿತ್ತಲಲ್ಲಿ ನಿಂತ
ಗುಜರಿ ಆಯುವ ಹುಡುಗ

*