Thursday, February 27, 2014

ಜೈ ಹಿಂದ್ ಘೋಷಣೆಯ ಹಿಂದಿರುವ ಜೈನುಲ್ ಆಬಿದೀನ್

 

 ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ಬಳಿಕವೂ ಸ್ವಾತಂತ್ರ ಚಳವಳಿಯಲ್ಲಿ ಬಳಸಲಾದ ಘೋಷಣೆಗಳು ಇಂದಿಗೂ ವಿವಿಧ ರಾಜಕೀಯ ರೂಪಗಳಲ್ಲಿ ವರ್ತಮಾನವನ್ನು ಕಾಡುತ್ತಲೇ ಬರುತ್ತಿದೆ. ಅವು ಈ ದೇಶವನ್ನು ಒಂದಾಗಿಸುವುದಕ್ಕೆ ಸ್ಫೂರ್ತಿಯಾಗಬೇಕಾಗಿತ್ತು. ದುರದೃಷ್ಟವಶಾತ್ ರಾಜಕೀಯ ಶಕ್ತಿಗಳು ಅವುಗಳನ್ನು ತಮ್ಮ ಸ್ವಾರ್ಥ ಉದ್ದೇಶಕ್ಕೆ ಬಳಸಿಕೊಳ್ಳುತ್ತಿವೆ. ‘ವಂದೇ ಮಾತರಂ’ ಘೋಷಣೆಯನ್ನು ಆರೆಸ್ಸೆಸ್ ಜನರು ಅದು ಹೇಗೆ ವಿರೂಪಗೊಳಿಸಿದರು ಎನ್ನುವುದನ್ನು ನಾವು ನೋಡಿದ್ದೇವೆ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಎಲ್ಲರನ್ನು ಒಗ್ಗೂಡಿಸಲು ಬಳಸಲಾಗಿದ್ದ ವಂದೇಮಾತರಂ ಘೋಷಣೆಯನ್ನು ಇಂದು ಕೆಲವು ಶಕ್ತಿಗಳು ಹಿಂದೂ-ಮುಸ್ಲಿಮರನ್ನು ಒಡೆಯಲು ಬಳಸುತ್ತಿದ್ದಾರೆ. ಬಂಕಿಮಚಂದ್ರ ಚಟರ್ಜಿ ತನ್ನ ಆನಂದ ಮಠ ಕಾದಂಬರಿಯಲ್ಲಿ ‘ವಂದೇಮಾತರಂ’ ಹಾಡನ್ನು ಬಳಸಿದ್ದರು. ಅದರಲ್ಲಿ ಮ್ಲೇಚ್ಛರನ್ನು ಅಥವಾ ಮುಸ್ಲಿಮರನ್ನು ಕೊಂದು ಹಾಕಲು ಆನಂದ ಮಠದ ಉಗ್ರವಾದಿ ಸನ್ಯಾಸಿಗಳು ಈ ಹಾಡನ್ನು ಬಳಸುತ್ತಾರೆ. ಇದೊಂದು ದುರ್ಗೆಯ ಆರಾಧನೆಯೂ ಆಗಿದೆ. ಆದರೆ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ‘ವಂದೇ ಮಾತರಂ’ ಘೋಷಣೆ ಬೇರೆ ಅರ್ಥದಲ್ಲಿ ಬಳಸಲ್ಪಟ್ಟಿತು.

ಅಂತೆಯೇ ‘ಅಲ್ಲಾಹು ಅಕ್ಬರ್’ ಎನ್ನುವ ಘೋಷಣೆ ಮುಸ್ಲಿಮರಿಗೆ ಸೀಮಿತವಾದುದೇನೋ ಹೌದು. ಆದರೆ ಖಿಲಾಫತ್‌ಚಳವಳಿ ಮತ್ತು ಇನ್ನಿತರ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಈ ‘ಅಲ್ಲಾಹು ಅಕ್ಬರ್’ ಎನ್ನುವ ಘೋಷಣೆಯ ಜೊತೆ ಜೊತೆಗೇ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಮದ್ರಸದ ಉಲೇಮಾಗಳೂ ಈ ‘ಅಲ್ಲಾಹು ಅಕ್ಬರ್’ ಅಂದರೆ ‘ದೇವರಷ್ಟೇ ದೊಡ್ಡವನು’ ಎನ್ನುವ ಘೋಷಣೆಯನ್ನು ಬಳಸಿಕೊಂಡು ಬ್ರಿಟಿಷರ ವಿರುದ್ಧ ನಿಂತರು.
‘ಇಂಕ್ವಿಲಾಬ್ ಜಿಂದಾಬಾದ್’ ಭಗತ್ ಸಿಂಗ್ ಸಮಕಾಲೀನರು ಉದ್ಗರಿಸಿದ ಘೋಷಣೆ. ಆದರೆ ಇಂದು ಈ ಘೋಷಣೆ ಕೇವಲ ಕಮ್ಯುನಿಷ್ಟರಿಗೆ ಸೀಮಿತಗೊಂಡಿದೆ. ಕ್ರಾಂತಿ ಚಿರಾಯುವಾಗಲಿ ಎನ್ನುವುದು ಎಂದೆಂದಿಗೂ, ಎಲ್ಲೆಲ್ಲೂ ಸಲ್ಲಬಹುದಾದ ಘೋಷಣೆಯಾಗಿದೆ. ಆದರೆ ಈ ಘೋಷಣೆಯನ್ನೂ ರಾಜಕೀಕರಣ ಗೊಳಿಸಲಾಗಿರುವುದು ವಿಪರ್ಯಾಸ.

ಅಂತೆಯೇ ನಮ್ಮ ನಡುವೆ ಇನ್ನೊಂದು ಘೋಷಣೆ ಚಿರಸ್ಥಾಯಿಯಾಗಿ ಉಳಿದಿದೆ. ಅದುವೇ ‘ಜೈಹಿಂದ್’. ಈ ಘೋಷಣೆಯನ್ನು ಸ್ಮರಿಸುವಾಗ ನಮ್ಮ ಕಣ್ಮುಂದೆ ನಿಲ್ಲುವವರು ನೇತಾಜಿ ಸುಭಾಶ್ ಚಂದ್ರಭೋಸ್. ಆದರೆ ಈ ಘೋಷಣೆಗೆ ಅತ್ಯಂತ ಕುತೂಹಲಕರವಾದ ಹಿನ್ನೆಲೆಯಿದೆ. ಈ ಹಿನ್ನೆಲೆ ಒಂದು ಕೃತಿಯ ಮೂಲಕ ಹೊರ ಬಿದ್ದಿದೆ. ಆ ಕೃತಿಯ ಹೆಸರು ‘ಲೆಜೆಂಡೋಟ್ಸ್ ಆಫ್ ಹೈದರಾಬಾದ್’. ಹಿರಿಯ ನಿವೃತ್ತ ಐಎಎಸ್ ಅಧಿಕಾರಿಯೂ ಆಗಿರುವ ನರೇಂದ್ರ ಲೂಥೆರ್ ಹೊರ ತಂದಿರುವ ಈ ಕೃತಿ, ಇತಿಹಾಸದ ಧೂಳಿನಲ್ಲಿ ಮುಚ್ಚಿ ಹೋಗಿರುವ ಹತ್ತು ಹಲವು ಕುತೂಹಲಕಾರಿ ಸಂಗತಿಗಳನ್ನು ಹೊರಗೆ ತಂದಿದೆ. ಅವುಗಳಲ್ಲಿ ‘ಜೈ ಹಿಂದ್’ ಘೋಷಣೆಯ ಹಿಂದಿರುವ ಕುತೂಹಲಕಾರಿ ಅಂಶವೂ ಒಂದು.

ಜೈ ಹಿಂದ್ ಘೋಷಣೆಯನ್ನು ತನ್ನ ಹೋರಾಟದ ಪ್ರಧಾನ ಅಸ್ತ್ರವಾಗಿ ಮಾಡಿಕೊಂಡವರು ನೇತಾಜಿ ಸುಭಾಶ್ ಚಂದ್ರಭೋಸ್. ಭಾರತೀಯರಿಗೆ ಭಾರತೀಯ ರೀತಿಯಲ್ಲೇ ಶುಭಾಶಯವನ್ನು ಹೇಳಲು ನೇತಾಜಿ ‘ಜೈಹಿಂದ್’ ಘೋಷಣೆಯನ್ನು ಜರ್ಮನಿಯಲ್ಲಿ ಬಳಸಿಕೊಂಡರು. ಆದರೆ ಅವರಿಗೆ ಈ ಘೋಷಣೆಯ ಸಲಹೆಯನ್ನು ನೀಡಿದ್ದು ಅವರ ಪ್ರೀತಿಯ ಶಿಷ್ಯ, ಐಎನ್‌ಎಯ ಪ್ರಧಾನ ಭಾಗವಾಗಿದ್ದ ಜೈನುಲ್ ಆಬಿದೀನ್ ಹಸನ್ ಅವರು.

ಜೈನುಲ್ ಆಬಿದೀನ್ ಅವರು ನೇತಾಜಿಯನ್ನು ಸೇರಿಕೊಂಡ ಸಂದರ್ಭವೇ ಅವಿಸ್ಮರಣೀಯವಾದುದು. ಜೈನುಲ್ ಆಬಿದೀನ್ ಅವರು ಹೈದರಾಬಾದಿನ ಕಲೆಕ್ಟರ್ ಒಬ್ಬರ ಪುತ್ರ. ಎಂಜಿನಿಯರಿಂಗ್ ಕಲಿಕೆಗಾಗಿ ಜರ್ಮನಿಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ ನೇತಾಜಿ ಸುಭಾಶ್ ಚಂದ್ರ ಭೋಸ್ ಜರ್ಮನಿಯಲ್ಲಿ ಬ್ರಿಟಿಷರ ವಿರುದ್ಧ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು. ಅದಕ್ಕಾಗಿ ಜರ್ಮನಿಯಲ್ಲಿರುವ ಭಾರತೀಯರನ್ನು ಸಂಘಟಿಸುತ್ತಿದ್ದರು. ಹೀಗಿರುವಾಗ, ವಿದ್ಯಾರ್ಥಿಯಾಗಿರುವ ಆಬಿದೀನ್ ಅವರು ಸುಭಾಶ್‌ಚಂದ್ರ ಬೋಸ್ ಅವರಿಂದ ತೀವ್ರ ಪ್ರಭಾವಕ್ಕೊಳಗಾದರು. ಗಡಿಪಾರಿಗೊಳಗಾಗಿರುವ ಭಾರತೀಯ ಕೈದಿಗಳನ್ನು ಸಂಘಟಿಸಿ ನೇತಾಜಿ ಸಭೆ ನಡೆಸುತ್ತಿದ್ದಾಗ ಅದರಲ್ಲಿ ಆಬಿದೀನ್ ಭಾಗವಹಿಸಿದರು. ಅಂದು ಅವರು ನೇತಾಜಿಯವರನ್ನು ಭೇಟಿ ಮಾಡಿದರು ‘‘ನನ್ನ ಕಾಲೇಜು ವಿದ್ಯಾಭ್ಯಾಸ ಮುಗಿದದ್ದೇ, ನಿಮ್ಮ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ’’ ಎಂದು ಆಬಿದೀನ್ ನೇತಾಜಿಯಲ್ಲಿ ಕೇಳಿಕೊಂಡರಂತೆ. ಆದರೆ ನೇತಾಜಿಯವರು ಆಬಿದೀನ್ ಮಾತನ್ನು ಒಪ್ಪಲಿಲ್ಲ ‘‘ಶಾಲೆ, ಕಾಲೇಜು ಎಂದು ಸಣ್ಣ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಂಡರೆ, ದೊಡ್ಡ ವಿಷಯಗಳನ್ನು ಯೋಚಿಸಲೂ ಸಾಧ್ಯವಿಲ್ಲ. ನನ್ನ ಹೋರಾಟಕ್ಕೆ ಕೈಜೋಡಿಸುವ ಬಯಕೆಯಿದ್ದರೆ, ದೇಶಕ್ಕಾಗಿ ಹೋರಾಡುವ ಆಸೆಯಿದ್ದರೆ ಅದು ಈ ಕ್ಷಣದಿಂದಲೇ ಶುರುವಾಗಲಿ’’ ಎಂದು ಕರೆ ನೀಡಿದರು. ಅಷ್ಟೇ. ಆಬಿದೀನ್ ತನ್ನ ಕಾಲೇಜನ್ನು ತ್ಯಜಿಸಿ, ನೇತಾಜಿಯವರ ಸೇನೆಯನ್ನು ಸೇರಿಕೊಂಡರು.

ಅಷ್ಟೇ ಅಲ್ಲ, ನೇತಾಜಿಯವರ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು. ಐಎನ್‌ಎಯಲ್ಲಿ ಅವರು ಮೇಜರ್ ಆಗಿ ದುಡಿದರು. ರಣಭೂಮಿಯಲ್ಲಿ ಹೋರಾಡಿದರು. ತನ್ನ ಸೇನೆಯಲ್ಲಿ ಭಾರತೀಯತೆಯನ್ನು ಉದ್ದೀಪಿಸುವ ಶುಭಾಶಯ ಘೋಷಣೆಯೊಂದು ಇದೇ ಸಂದರ್ಭದಲ್ಲಿ ಸುಭಾಶ್ ಚಂದ್ರ ಭೋಸರಿಗೆ ಬೇಕಾಗಿತ್ತು. ಆಗ ಸೇನೆಯಲ್ಲಿರುವ ಹಲವರು ಹಲವು ಸಲಹೆಗಳನ್ನು ನೀಡಿದರು. ಜೈನುಲ್ ಆಬಿದೀನ್ ಹಸನ್ ಮೊದಲು ‘ಹಲೋ’ ಎನ್ನುವ ಘೋಷಣೆಯ ಸಲಹೆ ನೀಡಿದರು. ಆದರೆ ಅದು ನೇತಾಜಿಗೆ ಸಮ್ಮತವಾಗಲಿಲ್ಲ.

ಇದಾದ ಬಳಿಕ ಆಬಿದೀನ್ ‘ಜೈ ಹಿಂದ್’ ಘೋಷಣೆಯನ್ನು ಪ್ರಸ್ತಾಪ ಮಾಡಿದರು. ಇದು ನೇತಾಜಿಗೆ ಭಾರೀ ಇಷ್ಟವಾಯಿತು. ಮಾತ್ರವಲ್ಲ, ಐಎನ್‌ಎಯ ಸಾಹಸಗಾಥೆಯಲ್ಲಿ ಜೈ ಹಿಂದ್ ಘೋಷಣೆ ಕೊನೆಯವರೆಗೂ ಉಳಿಯಿತು ಮತ್ತು ಇಂದಿಗೂ ಆ ಪದ ಅನುರಣಿಸುತ್ತಲೇ ಇದೆ. ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಐಎನ್‌ಎ ಸೇನೆ ಬರ್ಮಾ ಗಡಿ ದಾಟಿ ಇಂಫಾಲ ತಲುಪುವ ಹೊತ್ತಿನಲ್ಲಿ, ತಂಡದಲ್ಲಿದ್ದ ಜೈನುಲ್ ಆಬಿದೀನ್ ಹಸನ್ ತೀವ್ರಗಾಯಗೊಂಡರು. ಆ ಘರ್ಷಣೆಯಲ್ಲಿ ಅವರು ಅಂಗವಿಕಲರಾದರು.
ಇಂದು ಜೈನುಲ್ ಆಬಿದೀನ್ ಹಸನ್‌ರಂತಹ ನೂರಾರು ಯೋಧರ ‘ಜೈಹಿಂದ್’ ಉದ್ಗಾರಗಳನ್ನು ದೇಶ ಮರೆತು ಬಿಡುತ್ತಿದೆ. ಆ ದೇಶಪ್ರೇಮಿಗಳ ನೆನಪನ್ನು ಅಳಿಸುವ ಪ್ರಜ್ಞಾಪೂರ್ವಕ ಕೆಲಸವೂ ನಡೆಯುತ್ತಿದೆ. ಬದಲಿಗೆ ದೇಶದ ಸ್ವಾತಂತ್ರ್ಯದ ಹೋರಾಟಲ್ಲಿ ಯಾವ ಪಾತ್ರವೂ ಇಲ್ಲದ ಆರೆಸ್ಸೆಸ್‌ನ ನಾಯಕರನ್ನು ಮುನ್ನೆಲೆಗೆ ತರುವ ಕೃತ್ಯ ಜರಗುತ್ತಿದೆ. ಇದು ದೇಶದ ದುರಂತವೇ ಸರಿ.

ಅಂದ ಹಾಗೆ ಪಾಕಿಸ್ತಾನ ರಚನೆಯಾಗುವ ಸಂದರ್ಭದಲ್ಲೂ ಆಳದಲ್ಲಿ ಜಿನ್ನಾ ಅವರಿಗೆ ಅದು ಜಾತ್ಯತೀತ ರಾಷ್ಟ್ರವಾಗಿರಬೇಕು ಎನ್ನುವ ಆಶಯವಿತ್ತು. ಇದನ್ನೇ ಅಡ್ವಾಣಿಯವರು ಪಾಕಿಸ್ತಾನದಲ್ಲಿ ಹೇಳಿದ್ದರು. ಪಾಕಿಸ್ತಾನದ ಮೊತ್ತ ಮೊದಲ ರಾಷ್ಟ್ರಗೀತೆಯನ್ನು ಜಿನ್ನಾ ಅವರು ಲಾಹೋರ್‌ನ ಜಗನ್ನಾಥ್ ಆಝಾದ್ ಕೈಯಲ್ಲಿ ಬರೆಸಿದರು. ಸುಮಾರು ಒಂದೂವರೆ ವರ್ಷಗಳ ಕಾಲ ಪಾಕಿಸ್ತಾನ ಇದನ್ನು ರಾಷ್ಟ್ರಗೀತೆಯಾಗಿ ಒಪ್ಪಿಕೊಂಡಿತ್ತು. ಈ ಗೀತೆಯನ್ನು ಬರೆಯಲು ಜಗನ್ನಾಥ್ ಅವರಿಗೆ ಜಿನ್ನಾ ಅವರು ಐದು ದಿನಗಳಷ್ಟನ್ನೇ ನೀಡಿದ್ದರಂತೆ. ಈ ಐದು ದಿನಗಳ ಒತ್ತಡದಲ್ಲಿ ಹಾಡನ್ನು ಬರೆದರೂ ನಾನು ಪಾಕಿಸ್ತಾನದ ರಾಷ್ಟ್ರಗೀತೆಗೆ ನ್ಯಾಯವನ್ನು ನೀಡಿದ್ದೆ ಎನ್ನುತ್ತಾರೆ ಜಗನ್ನಾಥ್ ಆಝಾದ್. ಆದರೆ ಉತ್ತರ ಪಂಜಾಬ್ ಮತ್ತು ಇನ್ನಿತರ ಕಡೆ ಹಿಂಸೆ ವ್ಯಾಪಿಸಿದಂತೆ ಜಗನ್ನಾಥ್ ಆಝಾದ್ ಭಾರತಕ್ಕೆ ವಲಸೆ ಬಂದರು. ಪಾಕಿಸ್ತಾನ ಸ್ವತಂತ್ರಗೊಂಡ ಒಂದೂವರೆ ವರ್ಷದೊಳಗೆ ಪಾಕಿಸ್ತಾನದಲ್ಲಿ ಈ ರಾಷ್ಟ್ರಗೀತೆ ಬದಲಾಯಿತು. ಇದೆಲ್ಲವನ್ನು ನಾವು ಯಾಕೆ ಮತ್ತೆ ಮತ್ತೆ ನೆನೆಯಬೇಕೆಂದರೆ ಈ ದೇಶ ಯಾವುದೇ ಒಂದು ಧರ್ಮ ಅಥವಾ ಜಾತಿಯಿಂದ ನಿರ್ಮಾಣವಾದುದಲ್ಲ.

ಎಲ್ಲ ಜಾತಿ ಧರ್ಮಗಳ ಜನರ ಕೊಡುಗೆಗಳಿಂದ, ವೈವಿಧ್ಯ ಭಾರತವಾಗಿ ಅರಳಿದೆ ನಮ್ಮ ನೆಲ. ಬಹುತ್ವವೇ ಇದರ ವೈಶಿಷ್ಟ. ಈ ವೈಶಿಷ್ಟವನ್ನು ಅಳಿಸುವ ಪ್ರಯತ್ನ ಕೆಲವು ಶಕ್ತಿಗಳಿಂದಾಗುತ್ತಿದೆ. ಆ ಶಕ್ತಿಯನ್ನು ವಿಫಲಗೊಳಿಸಿ, ದೇಶವನ್ನು ಒಂದಾಗಿ ಉಳಿಸಬೇಕೆಂದರೆ, ಇಂತಹ ನೆನಪುಗಳನ್ನು ನಾವು ಸದಾ ಹಸಿರಾಗಿ ಇಟ್ಟುಕೊಳ್ಳಬೇಕು.

ಜೈಹಿಂದ್ ಎನ್ನುವ ಘೋಷಣೆಯೊಂದಿಗೆ ತನ್ನ ಬದುಕನ್ನೇ ದೇಶಕ್ಕಾಗಿ ಅರ್ಪಿಸಿದ ಜೈನುಲ್ ಆಬಿದೀನ್ ಹಸನ್, ಹಾಗೆಯೇ ಜಿನ್ನಾ ಅವರ ಆತ್ಮೀಯರಾಗಿದ್ದುಕೊಂಡು ಪಾಕಿಸ್ತಾನಕ್ಕೆ ತುಂಬು ಹೃದಯದೊಂದಿಗೆ ರಾಷ್ಟ್ರಗೀತೆಯನ್ನು ಬರೆದುಕೊಟ್ಟ ಜಗನ್ನಾಥ್ ಆಝಾದ್ ಇಂತಹ ಹೆಸರುಗಳ ನೂಲುಗಳಿಂದ ನಾವು ಹರಿದ ಭಾಗಗಳಿಗೆ ಮತ್ತೆ ತೇಪೆ ಹಾಕಬೇಕು. ಹಿಂದು, ಮುಸ್ಲಿಮ್, ಬ್ರಾಹ್ಮಣ, ದಲಿತ ಇತ್ಯಾದಿಗಳೆಲ್ಲ ವೈವಿಧ್ಯವಾಗಿಯಷ್ಟೇ ನಮ್ಮ ನಡುವೆ ಇರಲಿ. ಅದು ನಮ್ಮನ್ನು ಪರಸ್ಪರ ಒಡೆಯದಿರಲಿ. ಬದಲಿಗೆ ನಮ್ಮನ್ನು ಇನ್ನಷ್ಟು ಒಂದಾಗಿಸುವುದಕ್ಕೆ ಆ ಅಸ್ಮಿತೆಗಳು ನೆಪವಾಗಲಿ.

Saturday, February 22, 2014

ಪೊಳ್ಳು-ನಿಜಗಳ ನಡುವಿನ ಹೈವೇ ಪಯಣ

ಶ್ರೀಮಂತ, ಸ್ನಿಗ್ಧ ಸೌಂದರ್ಯ ಹೊಂದಿರುವ  ಬಾಲೆ, ಅವಳನ್ನು ಅಪಹರಿಸುವ ಒಬ್ಬ ಗೂಂಡಾ, ಒಂದು ಲಾರಿ ಹಾಗೂ ಅವರು ಚಲಿಸುವ ಹೈವೇ! ಇಷ್ಟನ್ನು ಬಳಸಿಕೊಂಡು ಇಮ್ತಿಯಾಝ್ ಅಲಿ ಒಂದು ತಿಳಿಯಾದ, ಹದಯಸ್ಪರ್ಶಿಯಾದ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಹೈವೇಯ ಸೌಂದರ್ಯವನ್ನು ಕಣಕಣದಲ್ಲಿ ಹಿಡಿದುಕೊಂಡಿರುವ ಈ ಚಿತ್ರ, ಮನೆಯಲ್ಲಿ ಕಳೆದುಕೊಂಡುದನ್ನು ಹೈವೇಯಲ್ಲಿ ಮರಳಿ ಗಳಿಸುವ ತರುಣಿಯೊಬ್ಬಳ ಪ್ರಯತ್ನವನ್ನು ಹೇಳುತ್ತದೆ. ಬದುಕಿನಲ್ಲಿನ ಪೊಳ್ಳುಗಳಿಂದ ರೋಸಿ ಹೋಗಿರುವ ತರುಣಿಯೊಬ್ಬಳು ಹೈವೇ, ಗೂಂಡಾ, ಲಾರಿಯ ಜೊತೆ ಜೊತೆಜೊತೆಗೇ ಸಾಗುತ್ತಾ, ಪ್ರಕತಿಯ ತಿಳಿಯಾದ ವಾತಾವರಣದಲ್ಲಿ ತನ್ನ ಬದುಕನ್ನು ಹುಡುಕುವ ಕತೆಯೇ ‘ಹೈವೇ’. ಇಲ್ಲಿ ಕತೆಯ ಎಳೆ ತೀರಾ ಸಣ್ಣದು ಮತ್ತು ನೇರವಾದುದು. ಆದರೆ ಅದು ನಮಗೆ ಕೊಡುವ ಅನುಭವ ಗಾಢವಾದುದು. ಇನ್ನೂ ಏನೋ ಇರಬೇಕಾಗಿತ್ತು ಎನ್ನುವ ಅತಪ್ತಿಯೊಂದು ಚಿತ್ರಮಂದಿರದಿಂದ ಹೊರಬರುವಾಗ ನಮ್ಮನ್ನು ಕಾಡುವುದು ಮಾತ್ರ ಸತ್ಯ. ಆ ಕಾಡುವಿಕೆಯನ್ನೇ ಒಟ್ಟು ಸಿನಿಮಾದ ಗೆಲುವು ಎಂದು ಕರೆಯೋಣವೆ? ಪ್ರೇಕ್ಷಕರಿಗೆ ಬಿಟ್ಟದ್ದು.
ಅದೊಂದು ಅದ್ದೂರಿ ಮೇಲ್‌ಶ್ರೀಮಂತ ವರ್ಗದ ಮದುವೆ. ಆದರೆ ಮದುಮಗಳು ಮದುವೆಯ ದಿನ ಕತಕತೆಯ ಸಂಭ್ರಮದಿಂದ ರೋಸಿ ಹೋಗಿದ್ದಾಳೆ. ರಾತ್ರಿ ತನ್ನ ಗೆಳೆಯನ ಜೊತೆಗೆ ಹೈವೇ ವರೆಗೆ ಹೋಗಿ ಬರೋಣ ಎಂದು ಒತ್ತಾಯಿಸುತ್ತಾಳೆ. ಅವಳ ಒತ್ತಾಯಕ್ಕೆ ಮಣಿದು ಗುಟ್ಟಾಗಿ ಇಬ್ಬರು ಹೈವೇ ತಲುಪುತ್ತಾರೆ. ಅಲ್ಲಿಂದ ಚಿತ್ರದ ದಾರಿ ತೆರೆದುಕೊಳ್ಳುತ್ತದೆ. ಆಕಸ್ಮಿಕವಾಗಿ ಗೂಂಡಾಗಳ ತಂಡವೊಂದನ್ನು ಅವರು ಎದುರಿಸಬೇಕಾಗುತ್ತದೆ. ಗೂಂಡಾಗಳ ನಾಯಕ ಮಹಾಬೀರ ಭಾಟಿ ತರುಣಿಯನ್ನು ಅಪಹರಿಸಿಕೊಂಡು ಹೋಗುತ್ತಾನೆ. ಆದರೆ ಆತನಿಗೆ ಗೊತ್ತಿಲ್ಲ, ತಾನು ಅಪಹರಿಸಿದ ತರುಣಿ ಸರಕಾರದೊಂದಿಗೆ ಸಂಬಂಧವನ್ನು ಹೊಂದಿರುವ ಪ್ರತಿಷ್ಠಿತ ಉದ್ಯಮಿಯ ಪುತ್ರಿ ಎಂದು. ವಿಷಯ ಗೊತ್ತಾದಾಗ ಎಲ್ಲ ಕೈ ಮೀರಿರುತ್ತದೆ. ಪೊಲೀಸರು ನಾಲ್ಕು ದಿಕ್ಕುಗಳಿಂದ ಸುತ್ತುವರಿಯುವ ಮೊದಲು ಅವಳಿಂದ ಕಳಚಿಕೊಳ್ಳಬೇಕಾಗಿದೆ. ಮಹಾವೀರ ತನ್ನ ಇಬ್ಬರು ಹಿಂಬಾಲಕರ ಜೊತೆಗೆ ಆಕೆಯನ್ನು ಲಾರಿಯಲ್ಲಿ ಎತ್ತಿ ಹಾಕಿ ಹೈವೇ ಉದ್ದಕ್ಕೂ ಮುನ್ನಡೆಯುತ್ತಾನೆ.
ಆದರೆ ಇಲ್ಲೊಂದು ಸಣ್ಣದೊಂದು ತಿರುವು ಘಟಿಸುತ್ತದೆ. ನಿಧಾನಕ್ಕೆ ಅಪಹರಿಸಲ್ಪಟ್ಟ ತರುಣಿಗೆ ಆ ಪಯಣ ಇಷ್ಟವಾಗಿ ಬಿಡುತ್ತದೆ. ಅದು ಅವಳೇ ಬಯಸಿದ ಪಯಣ. ತನ್ನ ಮನೆಯೊಳಗಿನ ಸುಳ್ಳು ಮತ್ತು ಕ್ರೌರ್ಯಗಳಿಂದ ಪಾರಾಗಲು ಹೈವೇ ಮತ್ತು ಗೂಂಡಾನ ಸ್ನೇಹ ಅವಳ ಪಾಲಿಗೆ ಒಂದು ಹೆದ್ದಾರಿಯಾಗಿ ಪರಿಣಮಿಸುತ್ತದೆ. ಗೂಂಡಾಗಳಿಂದ ಪಾರಾಗಲು ಯತ್ನಿಸಬೇಕಾಗಿದ್ದ ತರುಣಿಯೇ ಗೂಂಡಾಗಳಿಗೆ ಸಹಕರಿಸಲು ತೊಡಗುತ್ತಾಳೆ. ಮಹಾವೀರನಿಗೆ ಈ ತರುಣಿ ಇನ್ನಷ್ಟು ಸಮಸ್ಯೆಯಾಗುತ್ತಾಳೆ. ನಿಧಾನಕ್ಕೆ ಇಬ್ಬರು ಕಳೆದುಕೊಂಡ ತಮ್ಮ ತಮ್ಮ ಬದುಕನ್ನು ತಮಗರಿವಿಲ್ಲದೆ ಹುಡುಕ ತೊಡಗುತ್ತಾರೆ. ಹೈವೇ ಪ್ರಯಾಣ ಬೆಳೆದಂತೆ ಅವರಿಬ್ಬರ ಬದುಕಲ್ಲೂ ಬದಲಾವಣೆಗಳ ತಿರುವುಗಳು ಕಾಣಿಸತೊಡಗುತ್ತವೆ. ‘ಎಲ್ಲಿಂದ ಬಂದಿದ್ದೇನೆಯೋ ಅಲ್ಲಿಗೆ ತಲುಪುವುದೂ ನಾಯಕಿಗೆ ಇಷ್ಟವಿಲ್ಲ. ಎಲ್ಲಿಗೆ ಹೋಗಬೇಕಾಗಿದೆಯೋ ಅದನ್ನು ಮುಟ್ಟುವುದು ಅವಳಿಗೆ ಇಷ್ಟವಿಲ್ಲ. ಈ ದಾರಿಯ ಪಯಣವನ್ನಷ್ಟೇ ಅವಳು ಇಷ್ಟಪಡುತ್ತಿದ್ದಾಳೆ’. ಅಂತಿಮವಾಗಿ ಶಿಮ್ಲಾ ದಾಟಿ, ಬೆಟ್ಟ ಗುಡ್ಡಗಳ ನಡುವೆ ರಮ್ಯವಾಗಿ ಹರಿಯುವ ನದಿಯ ತಟದಲ್ಲಿ ಒಂದು ಪುಟ್ಟ ಗುಡಿಸಲಲ್ಲಿ ಬದುಕುವ ಕನಸನ್ನು ಇಬ್ಬರೂ ಕಾಣುತ್ತಾರೆ. ಇತ್ತ ಗೂಂಡಾ ಮಹಾವೀರ ತಾನು ಕಳೆದುಕೊಂಡ ತಾಯಿಯನ್ನು ಅವಳ ಮೂಲಕ ಕಾಣಲು ಪ್ರಯತ್ನಿಸುತ್ತಾನೆ. ಆದರೆ ಇದೆಲ್ಲಕ್ಕೂ, ಆ ಹೈವೈಯ ಇಕ್ಕೆಲಗಳಲ್ಲಿ ಬದುಕುತ್ತಿರುವ ನಾಗರಿಕರೆಂದು ಕರೆಸಿಕೊಂಡ ವ್ಯವಸ್ಥೆ ಸಮ್ಮತಿಸುತ್ತದೆಯೆ?
 
ಇಡೀ ಚಿತ್ರದಲ್ಲಿ ಆಪ್ತವಾಗುವುದು ನಾಯಕಿ ವೀರಾ ಪಾತ್ರದಲ್ಲಿ ಆಲಿಯಾ ಭಟ್. ಪ್ರಕತಿಯಷ್ಟೇ ತಿಳಿಯಾಗಿರುವ ಆಕೆಯ ಸೌಂದರ್ಯ ಮತ್ತು ವಿಷಾದ ಇಡೀ ಚಿತ್ರದ ಕೇಂದ್ರ ವಸ್ತು. ಒಂದು ರೀತಿಯಲ್ಲಿ ತುಸು ಮಾನಸಿಕ ವಿಕ್ಷಿಪ್ತೆಯನ್ನು, ಅತಿ ಭಾವುಕತೆಯನ್ನು ಮೈಗೂಡಿಸಿಕೊಂಡ ಪಾತ್ರ ವೀರಾಳದ್ದು. ಬಾಲ್ಯದಲ್ಲಿ ಅವಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಅವಳ ಮಾನಸಿಕ ಸ್ಥಿತಿಗೆ ಕಾರಣವನ್ನುಕೊಡುತ್ತದೆ. ಗೂಂಡಾ ಮಹಾಬೀರ್ ಪಾತ್ರದಲ್ಲಿ ರಣ್‌ದೀಪ್ ಹೂಡ ಅಷ್ಟೇ ಪರಿಣಾಮಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಎಲ್ಲ ಕೆಲಸವನ್ನೂ ಛಾಯಾಗ್ರಹಣ ಮಾಡುತ್ತದೆ. ಹೈವೇಯ ಇಕ್ಕೆಡೆಗಳ ಸೌಂದರ್ಯವನ್ನು ಪ್ರತಿ ಫ್ರೇಮುಗಳಲ್ಲೂ ಒಂದು ಅನುಭವದಂತೆ ಛಾಪಿಸುತ್ತಾ ಹೋಗುತ್ತದೆ. ಎ. ಆರ್. ರೆಹಮಾನ್ ಅವರ ಹಿನ್ನೆಲೆ ಸಂಗೀತ ಹೈವೇಯುದ್ದಕ್ಕೂ ನಮ್ಮನ್ನು ಕೈ ಹಿಡಿದು ನಡೆಸುತ್ತದೆ. ರಸ್ತೆಯನ್ನು, ಹೆದ್ದಾರಿಯನ್ನು ಕೇಂದ್ರವಾಗಿಟ್ಟು ಹಲವು ಚಿತ್ರಗಳು ಬಂದಿವೆ. ಹಿಂದಿಯಲ್ಲೇ ರೋಡ್ ಎನ್ನುವ ಚಿತ್ರ ನಿಮಗೆ ನೆನಪಿರಬಹುದು. ಅದೊಂದು ಥ್ರಿಲ್ಲರ್ ಚಿತ್ರವಾಗಿಯಷ್ಟೇ ಇಷ್ಟವಾಗುತ್ತದೆ. ಆದರೆ ಹೈವೇ ಕಲಾತ್ಮಕ ಅನುಭವವೊಂದನ್ನು ನಮ್ಮದಾಗಿಸುತ್ತದೆ. ‘ಜಿಂದಗಿ ನಾ ಮಿಲೇಗಿ ದೋಬಾರ’ ಚಿತ್ರಕ್ಕೂ ಇದನ್ನು ಹೋಲಿಸುವಂತಿಲ್ಲ. ಅದಕ್ಕಿಂತ ಒಂದಿಷ್ಟು ಗಂಭೀರವಾಗಿದೆ. ಅಲ್ಲಿಯ ಪಯಣಕ್ಕೂ ಇಲ್ಲಿಯ ಪಯಣಕ್ಕೂ ಅಜಗಜಾಂತರ. ಒಂದು ಬಾರಿ ಲಾರಿ ಹತ್ತಿ ಹೈವೇ ದರ್ಶನವನ್ನು ಮಾಡುವುದಕ್ಕೆ ಯಾವ ಅಡ್ಡಿಯೂ ಇಲ್ಲ.

Friday, February 21, 2014

ಊರು ಮತ್ತು ಇತರ ಕತೆಗಳು

ಪತ್ರ
ಗುಜರಿ ಅಂಗಡಿಯ ಮಾಲಕ ರದ್ದಿ ತೂಗುತ್ತಿದ್ದ. ರದ್ದಿಯ ಮಧ್ಯದಲ್ಲಿ ಒಂದು ಪತ್ರ.
ನೋಡಿದರೆ ಅದೊಂದು ಪ್ರೇಮಪತ್ರ.
ನಿಟ್ಟುಸಿರಿಟ್ಟು ಅದನ್ನು ತೆಗೆದು ಜಾಗರೂಕತೆಯಿಂದ ಕಡತದೊಳಗಿಟ್ಟ. ಅಲ್ಲಿ ಹೀಗೆ ಸಿಕ್ಕಿದ ನೂರಾರು ಪ್ರೇಮಪತ್ರಗಳಿದ್ದವು.
ಅದರ ತಳದಲ್ಲಿದ್ದ ಪತ್ರ ಸ್ವತಃ ಅವನೇ ಅವನ ಗೆಳತಿಗೆಂದು ಬರೆದುದಾಗಿತ್ತು.

ಊರು
‘‘ಈ ಊರಲ್ಲೊಂದು ಬರ್ಬರ ಕೊಲೆಯಾಯಿತಂತೆ ಹೌದೇ?’’
‘‘ಹೌದು. ಆ ಕೊಲೆಯ ಬಳಿಕವೇ ಇದನ್ನು ಎಲ್ಲರೂ ಊರು ಎಂದು ಗುರುತಿಸಲು ಆರಂಭಿಸಿದ್ದು’’

ವಾಚು
‘‘ಅಪ್ಪಾ...ಹೊಸ ವಾಚು ಬಿದ್ದು ಒಡೆದು ಚೂರಾಯಿತು’’ ಮಗ ಆತಂಕದಿಂದ ಹೇಳಿದ.
‘‘ಒಡೆದದ್ದು ವಾಚು ಮಾತ್ರ ತಾನೆ. ಸಮಯವಲ್ಲವಲ್ಲ...’’ ಅಪ್ಪ ಸಮಾಧಾನಿಸಿದ

ಮೊಬೈಲ್
ಮಗ ಹೇಳಿದ ‘‘ಅಪ್ಪಾ ಇದು ತುಂಬಾ ಒಳ್ಳೆ ಮೊಬೈಲ್. ನನಗೆ ತುಂಬಾ ತಪ್ತಿಕೊಟ್ಟಿದೆ’’
ಹಿರಿಯರು ನಗುತ್ತಾ ಹೇಳಿದರು ‘‘ಮೊಬೈಲ್ ತಪ್ತಿ ಕೊಡುವುದಿಲ್ಲ ಮಗ. ನಿನ್ನ ಆ ಕಡೆಯಿರುವ ವ್ಯಕ್ತಿಯೇ ಮಾತುಗಳು ನಿನಗೆ ತಪ್ತಿ ಕೊಡಬೇಕು.
ಒಳ್ಳೆಯ ಮೋಡೆಲ್ ಮೊಬೈಲ್ ಆಯ್ಕೆ ಮಾಡಲು ನೀನು ಪಡುವ ಪ್ರಯತ್ನ, ಆ ಮೊಬೈಲ್ ಮೂಲಕ ಮಾತನಾಡುವ ವ್ಯಕ್ತಿಯನ್ನು ಆಯ್ಕೆ ಮಾಡುವಾಗಲೂ ಇರಲಿ.’’

ನೆಂಟ
‘‘ಈ ಮೀನನ್ನು ತಂದು ಮೂರು ದಿನ ಆಯಿತು. ಆದರೂ ಯಾಕೆ ಸಾರು ಮಾಡಲು ಬಿಡುತ್ತಿಲ್ಲ?’’ ಪತ್ನಿ ಕೇಳಿದರು.
‘‘ಬಂದ ನೆಂಟರಿಗೆ ಗೊತ್ತಾಗಲಿ. ಮೂರು ದಿನ ಕಳೆದರೆ ನೆಂಟ ಮತ್ತು ಮೀನು ಕೊಳೆಯ ತೊಡಗುತ್ತದೆ ಎನ್ನುವುದು’’ ಪತಿ ಹೇಳಿದ

ಓಟು
ಗುಡಿಸಲಲ್ಲಿ ಸಂಭ್ರಮ.
ಚುನಾವಣೆ ಹತ್ತಿರ ಬರ್ತಾ ಇದೆ.
ಅಕ್ಕಿ ಸಿಗತ್ತೆ. ಸೀರೆ ಸಿಗತ್ತೆ, ಹೆಂಡ ಸಿಗತ್ತೆ.
ಯಾರೋ ಹೇಳಿದರು ‘‘ನಿಮ್ಮ ಓಟನ್ನು ಮಾರ್ಬೇಡಿ...’’
ಗುಡಿಸಲ ಜನ ಕೇಳಿದರು ‘‘ಮತ್ತೇನು ಮಾಡ್ಬೇಕು. ಬ್ಯಾಂಕಾಗ ಮಡಗಿದ್ರೆ ಬಡ್ಡಿ ಕೊಡ್ತಾರಂತ?’’

ತಪ್ಪು
ಅವಳು ತನ್ನ ಮಗನ ಗೆಳೆಯನಿಗೆ ತಿಂಡಿ ಹಿಡಿದುಕೊಂಡು ಬಂದಳು.
‘‘ತುಂಬಾ ಮುದ್ದಾಗಿದ್ದೀಯ...ನಿನ್ನ ಹೆಸರೇನಪ್ಪ..’’
ಹುಡುಗ ನಾಚಿ ಹೆಸರು ಹೇಳಿದ.
 ‘‘ಅಯ್ಯೋ...ತಪ್ಪಾಗಿ ಬಿಟ್ಟಿತು ಕಣಪ್ಪಾ...ನಿನ್ನ ಬಣ್ಣ ನೋಡಿ ನಮ್ಮೋನಿರಬಹುದು ಎಂದು ತಪ್ಪು ತಿಳ್ಕಂಡೆ. ಇರಲಿ. ಹೊರಗೆ ಬಾ...ಇಲ್ಲಿ ಕೂತು ತಿನ್ನು....’’

ಪಾಲು
‘‘ಅಪ್ಪ ನನ್ನ ಮನೆಯಲ್ಲಿರಲಿ. ಅಮ್ಮ ನಿನ್ನ ಮನೆಯಲ್ಲಿರಲಿ’’ ದೊಡ್ಡ ಮಗ ಹೇಳಿದ.
‘‘ಅಮ್ಮನ ಕಿರಿಕಿರಿಯನ್ನು ನನ್ನ ತಲೆಯ ಮೇಲೆ ಹಾಕುವ ಯೋಚನೆಯೋ...ಅಮ್ಮನಿಗೂ ನನ್ನ ಹೆಂಡತಿಗೂ ಸರಿಬರುವುದಿಲ್ಲ’’ ತಮ್ಮ ಹೇಳಿದ.
ಅಷ್ಟರಲ್ಲಿ ಆ ಮನೆಯಲ್ಲಿ ಜೀವತೇದ ಕೆಲಸದವರ ಮುಂದೆ ಬಂದ.
‘‘ನಾನೂ ಈ ಮನೆಯ ಸದಸ್ಯ. ನನಗೂ ನಿಮ್ಮ ಆಸ್ತಿಯಲ್ಲಿ ಪಾಲು ಬೇಕು. ಅಪ್ಪ ಅಮ್ಮ ಇಬ್ಬರೂ ನನ್ನ ಮನೆಯಲ್ಲಿರಲಿ’’ 


ಹಾವು
ಒಬ್ಬನಿಗೆ ಹಾವುಗಳ ಜೊತೆಗೆ ಸರಸವೆಂದರೆ ಇಷ್ಟ.
ಹಾವುಗಳ ಜೊತೆಗೇ ಇರುವನು.
ಯಾರೋ ಕೇಳಿದರು ‘‘ಹಾವು ಒಂದಲ್ಲ ಒಂದು ದಿನ ನಿನಗೆ ಕಚ್ಚುತ್ತದೆ...’’
ಅವನು ಉತ್ತರಿಸಿದ ‘‘ನಾವು ಸಹವಾಸ ಮಾಡುವ ಮನುಷ್ಯ ಅದೆಷ್ಟೋ ಬಾರಿ ನಮಗೆ ಕಚ್ಚುತ್ತಾನೆ. ಹಾವಿನ ವಿಶೇಷತೆಯೆಂದರೆ, ಅದು ಹಿಂದಿನಿಂದ  ಬಂದು ಕಚ್ಚುವುದಿಲ್ಲ...’’

Monday, February 17, 2014

ಕುಂವೀ ಮಾತುಗಳ ಹಿಂದಿನ ವಿರೋಧಾಭಾಸಗಳು...

ಜ್ಞಾನಪೀಠದ ಕುರಿತಂತೆ ತಾನೇಕೆ ಅಸಹನೆಯಿಂದ ಮಾತನಾಡಿದೆ ಎನ್ನುವುದನ್ನು ಕುಂ.ವೀ. ಅವರು ಈಗಾಗಲೇ ವಿವಿಧ ಮಾಧ್ಯಮಗಳಲ್ಲಿ ತೋಡಿಕೊಂಡಿದ್ದಾರೆ. ಇಷ್ಟಾದ ಬಳಿಕವೂ ಕುಂ.ವೀ. ವ್ಯಕ್ತಪಡಿಸಿದ ಟೀಕೆಗಳು ಸಮರ್ಥನೀಯವೆಂದು ಅನ್ನಿಸದೇ ಇರುವುದಕ್ಕೆ ಮುಖ್ಯ ಕಾರಣ ಅವರದೇ ಮಾತುಗಳಲ್ಲಿರುವ ವಿರೋಧಭಾಸಗಳು. ಏಕಾಏಕಿ ಜ್ಞಾನಪೀಠ ಪ್ರಶಸ್ತಿ ಟೀಕೆ, ಚರ್ಚೆಗೆ ಅರ್ಹವಾಗುವಷ್ಟು ತುರ್ತು ಸಂದರ್ಭ ನಮ್ಮ ನಡುವೆ ಇದೆಯೆ? ಎನ್ನುವುದನ್ನು ಕೇಳಿಕೊಂಡಷ್ಟು, ಜ್ಞಾನಪೀಠ ಕುರಿತಂತೆ ಕುಂವೀ ಮಾತುಗಳು ಪ್ರಜ್ಞಾಪೂರ್ವಕವಾಗಿ ಸಷ್ಟಿಯಾದವುಗಳು ಎಂದೇ ನನಗನ್ನಿಸುತ್ತದೆ.
ಅಂದಿನ ಸಭೆಯಲ್ಲಿ ಜ್ಞಾನಪೀಠದ ಕುರಿತಂತೆ ಮಾತುಗಳು ಯಾಕೆ ಹುಟ್ಟಿಕೊಂಡವು ಎನ್ನುವುದಕ್ಕೆ ಅವರು ನೀಡುವ ಮುಖ್ಯ ಕಾರಣ ಮೂರು. 1. ಪ್ರತಿ ಸಭೆಯಲ್ಲಿ ಕುಂವೀ ಅವರಿಗೂ ಜ್ಞಾನಪೀಠ ಸಿಗಲಿ ಎಂಬ ಹಾರೈಕೆ ಸಿಟ್ಟಿಗೆ ಕಾರಣವಾಯಿತು. 2. ಶಾಲಾ ಕಾಲೇಜುಗಳಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಫೋಟೋಗಳನ್ನು ಛಾಪಿಸಿ, ಇವರೇ ಅಂತಿಮ ಎಂದು ಘೋಷಿಸುವುದು ಎಷ್ಟು ಸರಿ? ಇವರಿಗಿಂತ ಬೇರೆ ಲೇಖಕರಿಲ್ಲವೆ? ಎಂಬ ಭಾವನೆ ಮಕ್ಕಳಲ್ಲಿ ಮೂಡುವುದಿಲ್ಲವೆ ಎಂಬ ಕುಂವೀ ಅನಿಸಿಕೆ. 3. ಅನಂತಮೂರ್ತಿಯವರು ವಶೀಲಿ ಬಾಜಿ ಮೂಲಕವೇ ಆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
  ಕುಂ. ವೀ. ಅವರ ಮೂರೂ ಅಸಹನೆಗಳೂ ಸಕಾರಣವುಳ್ಳದ್ದೇ. ಇದರಲ್ಲಿ ಎರಡು ಮಾತಿಲ್ಲ. ಆದರೆ ಕುಂವೀ ಅವರು ಜ್ಞಾನಪೀಠವನ್ನು ಸಾರಾಸಗಟಾಗಿ ತಿರಸ್ಕರಿಸಿಲ್ಲ ಎನ್ನುವುದೂ ಇದೇ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಒಂದು ಪ್ರಶಸ್ತಿಯನ್ನು ನಾನ್ಸೆನ್ಸ್ ಎಂದು ಕರೆದು, ಮಗದೊಂದೆಡೆ ಪಡೆದ ಇಬ್ಬರನ್ನು ಅಪಾತ್ರರು ಎಂದೂ ಪ್ರತ್ಯೇಕಿಸಿದ ಬಳಿಕ, ಆ ಪ್ರಶಸ್ತಿಯನ್ನೇ ಕುಂವೀ ನೀವಾಳಿಸಿಬಿಡಬೇಕಾಗುತ್ತದೆ. ಆದರೆ ಜ್ಞಾನಪೀಠ ಸಿಕ್ಕಿದರೆ ಬೇಕು ಎನ್ನುವ ಒಳಆಸೆಯೂ ಅವರಲ್ಲಿದೆ. ನನಗೆ ಸಿಕ್ಕಿದರೆ ಬೇಡ ಎಂದು ಬಹಿರಂಗವಾಗಿ ಹೇಳುವ ಯಾವ ಗಟ್ಟಿತನವನ್ನು ಅವರು ಪ್ರದರ್ಶಿಲ್ಲ್ಲ. ಶಾಲೆಯ ಗೋಡೆಯ ಮೇಲಿರುವ ಸಾಹಿತಿಗಳನ್ನು ನೋಡಿ ಸಾಹಿತಿಗಳನ್ನು ನಿರ್ಧರಿಸುವ ಸಮಯ ಪ್ರೌಢಶಾಲಾ ಕಾಲಕ್ಕೆ ಮುಗಿಯುತ್ತದೆ. ಬೆಳೆಯುತ್ತಾ ಹೋದ ಹಾಗೆ ನಾವು ಫೋಟಗಳನ್ನು ಪಕ್ಕಕ್ಕಿಟ್ಟು ಪುಸ್ತಕಗಳನ್ನು ಎತ್ತಿಕೊಳ್ಳುತ್ತೇವೆ. ಅಲ್ಲಿ ನಮ್ಮ ಲೇಖಕರನ್ನು ಹುಡುಕುತ್ತೇವೆ. ಜ್ಞಾನಪೀಠ ಸಿಕ್ಕಿಲ್ಲವೆಂದು ಭೈರಪ್ಪ ಅಭಿಮಾನಿಗಳೇನು ನಮ್ಮ ನಡುವೆ ಕಮ್ಮಿಯಿದ್ದಾರೆಯೆ? ಜ್ಞಾನಪೀಠ ಪ್ರಶಸ್ತಿಗಿಂತ ದೊಡ್ಡದು ನನಗೆ ಕುಂವೀ ಅವರ ಬರಹ. ಅದು ನನ್ನ ಒಳಗಿನ ಚೇತನವನ್ನು ಬೆಚ್ಚಗಿಟ್ಟಿದೆ. ನನ್ನನ್ನು ಬೆಳೆಸಿದೆ. ಒಂದು ಪ್ರಶಸ್ತಿ ಸಿಕ್ಕಿತೆನ್ನುವ ಕಾರಣಕ್ಕಾಗಿ ಯಾರೂ ಒಬ್ಬ ಲೇಖಕನನ್ನು ಇಷ್ಟ ಪಡುವುದಿಲ್ಲ. ಪ್ರಶಸ್ತಿ ಲೇಖಕನ ಪ್ರತಿಷ್ಠೆಯನ್ನು ಹೆಚ್ಚಿಸಬಹುದು. ಪ್ರಶಸ್ತಿ ಸಿಕ್ಕಿದ ಕಾರಣಕ್ಕಾಗಿ ಓದುಗನಿಗೆ ಯಾವ ಲೇಖಕನೂ ಮಹತ್ವದವನಾಗುವುದಿಲ್ಲ. ತಾನು ಇಷ್ಟ ಪಟ್ಟ ಲೇಖಕನಿಗೆ ಪ್ರಶಸ್ತಿ ಸಿಕ್ಕಿದರೆ ಓದುಗನಿಗೆ ಸಂತೋಷವಾಗುತ್ತದೆ. ಕುಂವೀಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದರೆ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ, ಆದರೆ ನನಗಂತೂ ಖುಷಿಯಾಗುತ್ತೆ. ಯಾಕೆಂದರೆ ಅವರ ಕೆಲವು ಕೃತಿಗಳು ನನಗೆ ತುಂಬಾ ಇಷ್ಟ. ನನಗೆ ಇಷ್ಟವಾದವರಿಗೆ ಗೌರವ ಸಿಕ್ಕಿದರೆ ಅದು ಹೆಮ್ಮೆಯ ಸಂಗತಿ. ಆದರೆ ಇಲ್ಲಿ ಜ್ಞಾನಪೀಠದ ಬಗ್ಗೆ ಅಸಹನೆ ಪಡುತ್ತಲೇ ಕುಂವೀ ಒಳಗೊಳಗೆ ಅದು ತನಗೆ ಸಿಗಬೇಕಾಗಿತ್ತು, ಇನ್ನಾರೋ ಲಾಬಿ ಮಾಡಿ ಅದನ್ನು ಕಿತ್ತುಕೊಂಡಿದ್ದಾರೆ ಎಂಬ ರೀತಿಯಲ್ಲಿ ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಾರೆ. ಇದು ಒಬ್ಬ ಸಜನಶೀಲ ಲೇಖಕನಿಗೆ ಒಪ್ಪುವಂತಹದಲ್ಲ.
    ಅನಂತಮೂರ್ತಿಯ ವಿಚಾರಧಾರೆಗಳ ಕುರಿತಂತೆ ಟೀಕೆಗಳು ಹೊಸತೇನಲ್ಲ. ಲಂಕೇಶರಿಂದಲೂ ತೀವ್ರ ಟೀಕೆಗೊಳಗಾದವರು ಅನಂತಮೂರ್ತಿ. ಆದರೆ ಅದಕ್ಕೆ ಕಾರಣ ಜ್ಞಾನಪೀಠ ಅಲ್ಲ. ಕೆಲವು ಸಾಂಸ್ಕೃತಿಕ ಚರ್ಚೆಗಳ ಸಂದರ್ಭಗಳಲ್ಲಿ ಎದುರಾದ ಭಿನ್ನಮತ ಅವರ ನಡುವೆ ಬಿರುಕನ್ನು ತಂದಿತ್ತು. ಈಗಲೂ ಅನಂತಮೂರ್ತಿಯವರನ್ನು ಅತಿ ಹೆಚ್ಚು ಇಷ್ಟ ಪಡುವವರೂ, ಅವರೊಳಗಿನ ವಿಚಾರಗಳ ಕುರಿತಂತೆ ಭಿನ್ನಮತವನ್ನು ಹೊಂದಿಯೇ ಇದ್ದಾರೆ. ಇದು ಕನ್ನಡ ಸಾಹಿತ್ಯ ಲೋಕಕ್ಕೇ ಗೊತ್ತಿರುವುದು. ಅನಂತಮೂರ್ತಿಯನ್ನು ಸಂಪೂರ್ಣ ಒಪ್ಪಿಕೊಳ್ಳುವುದು ಕಷ್ಟ. ಹಾಗೆಯೇ ಅನಂತಮೂರ್ತಿಯವರನ್ನು ತಿರಸ್ಕರಿಸುವುದು ಅದಕ್ಕಿಂತ ಹೆಚ್ಚು ಕಷ್ಟ. ಸದ್ಯದ ಸಂದರ್ಭದಲ್ಲಿ ಅನಂತಮೂರ್ತಿ ತನ್ನ ಅನಿಸಿಕೆಗಳನ್ನು ಹೇಳಲು, ಒಬ್ಬಂಟಿಯಾಗಲು ಯಾವ ರೀತಿಯಲ್ಲೂ ಅಂಜಿಕೆ ವ್ಯಕ್ತಪಡಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ದರ್ಪಗಳನ್ನು ಅಷ್ಟೇ ತೀವ್ರವಾಗಿ ಪ್ರತಿರೋಧಿಸಿದವರು ಅನಂತಮೂರ್ತಿ. ಕುಂವೀ ಅವರು ಹೇಳಿದಂತೆಯೇ ಈ ಇಳಿವಯಸ್ಸಿನಲ್ಲೂ ಅನಂತಮೂರ್ತಿಯವರಲ್ಲಿ ಆನೆಯ ಶಕ್ತಿಯಿದೆ. ಬಹುಶಃ ಅದು ಹೊರಗಿನಿಂದ ಬಂದಿರುವುದಲ್ಲ, ಒಳಗಿನಿಂದ ಬಂದಿರುವುದು ಎಂದು ನನಗೆ ಅನ್ನಿಸುತ್ತದೆ. ಈ ಹೊತ್ತಿನಲ್ಲೂ ಅವರು ನಳನಳಿಸುವ ಆರೋಗ್ಯದಿಂದಿದ್ದರೆ ಅದಕ್ಕೂ ಅದೇ ಕಾರಣ. ತಾನು ನಂಬಿದ್ದನ್ನು ಅವರು ಹೇಳುತ್ತಾರೆ. ಹೀಗಿರುವಾಗ, ಅನಂತಮೂರ್ತಿಯವರ ಯಾವುದಾದರೂ ವಿಚಾರಗಳನ್ನು ಖಂಡಿಸಿ ಕುಂವೀ ಏರು ಧ್ವನಿಯಲ್ಲಿ ಮಾತನಾಡಿದ್ದರೆ ಅದು ಕುಂವೀ ವ್ಯಕ್ತಿತ್ವಕ್ಕೆ ಒಪ್ಪುವಂತಿರುತ್ತಿತ್ತು. ಅನಂತಮೂರ್ತಿಯವರೂ ಆ ಚರ್ಚೆಯಲ್ಲಿ, ಜಗಳದಲ್ಲಿ ಭಾಗಿಯಾಗುತ್ತಿದ್ದರೋ ಏನೋ. ಆದರೆ ನಾಡಿನ ಯಾವೊಂದು ಸಂಕಟದ ಸಂದರ್ಭದಲ್ಲೂ ಮಾತನಾಡದ ಕುಂವೀ ಇದೀಗ ಎಂದೋ ಸಿಕ್ಕಿದ ಜ್ಞಾನಪೀಠವನ್ನು ಹಿಡಿದುಕೊಂಡು ಒಬ್ಬ ಹಿರಿಯ ಸಾಹಿತಿಯ ಮೈಮೇಲೆ ಬೀಳುವುದು ಕ್ರೌರ್ಯವಾಗಿ ಬಿಡುತ್ತದೆ.
ಇಷ್ಟಕ್ಕೂ ಅನಂತಮೂರ್ತಿ, ಕಾರ್ನಾಡ್ ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ಅನಂತಮೂರ್ತಿ ಸಂಸ್ಕಾರ, ಭಾರತೀಪುರಗಳಂತಹ ಕಾದಂಬರಿಗಳ ಜೊತೆ ಜೊತೆಗೇ ವೈಚಾರಿಕ ಚಿಂತನೆಗಳಿಗೆ ರಾಷ್ಟ್ರಮಟ್ಟದಲ್ಲಿ ಹೊಸ ದಿಕ್ಕನ್ನು ಕೊಟ್ಟವರು. ಚರ್ಚೆಗಳನ್ನು ಹುಟ್ಟಿಸಿ ಹಾಕಿದವರು. ಇದನ್ನೆಲ್ಲ ನಾವು ಮರೆಯುವುದಕ್ಕಾಗುವುದಿಲ್ಲ. ಕೆಲವೊಮ್ಮೆ ಅವರ ವಿಚಾರಗಳು ನಮ್ಮನ್ನು ಏಕಾಏಕಿ ಗೊಂದಲಗೊಳಿಸುತ್ತವೆ ಎನ್ನುವುದೂ ಅಷ್ಟೇ ಸತ್ಯ. ಆ ಕಾರಣಕ್ಕಾಗಿಯೇ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ ಮತ್ತು ಎದುರಿಸುತ್ತಲೇ ಇದ್ದಾರೆ. ಗಿರೀಶ್ ಕಾರ್ನಾಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಟಕ ಮಾತ್ರವಲ್ಲ, ಸಿನಿಮಾ, ವಿಚಾರಗಳಿಗಾಗಿ ಗುರುತಿಸಿದ ‘ಪ್ರತಿಷ್ಠಿತ’ ಜಾಣ, ಬುದ್ಧಿವಂತ ಲೇಖಕ. ಪ್ರತಿಷ್ಠಿತ ಎನ್ನುವುದನ್ನು ನಾನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ. ಯಾಕೆಂದರೆ, ಕರ್ನಾಟಕ ವೈವಿಧ್ಯಮಯ ಲೇಖಕರನ್ನು ಹೊಂದಿದೆ. ಲಂಕೇಶ್ ಅವರಿಗೆ ಲಂಕೇಶ್ ಸಾಟಿ. ಅಂತೆಯೇ ಅನಂತಮೂರ್ತಿ ಲಂಕೇಶರಿಗೆ ಸಮಾಂತರವಾಗಿರುವ ನದಿಯ ಇನ್ನೊಂದು ಪಾತ್ರ. ಹಾಗೆಯೇ ಕಾರ್ನಾಡ್ ಕೂಡ. ಈ ವೈವಿಧ್ಯತೆ ನಮ್ಮ ನಾಡಿಗೆ, ನಮ್ಮ ಸಾಹಿತ್ಯಕ್ಕೆ ಬೇಕು. ಕಾರ್ನಾಡ್ ಆ ವೈವಿಧ್ಯತೆಯ ಭಾಗ. ಸಿನಿಮಾ ನಿರ್ದೇಶಕರಾಗಿ, ನಟರಾಗಿ ಅವರು ಸಾಧಿಸಿದ ಸಾಧನೆ ವಿಶಿಷ್ಟ್ನವಾದುದು. ಅಂತಾರಾಷ್ಟ್ರೀಯ ವರ್ಚಸ್ಸಿರುವ ಲೇಖಕ ಅವರು. ಜ್ಞಾನಪೀಠಕ್ಕೆ ಮುನ್ನವೇ ಅವರು ತಮ್ಮ ಕ್ಷೇತ್ರದಲ್ಲಿ ಮಿಂಚಿದವರು. ಆನಂತರ ಅವರಿಗೆ ಜ್ಞಾನಪೀಠ ಸಿಕ್ಕಿತು. ಲಾಬಿಯಿಂದಲೇ ಸಿಕ್ಕಿತು ಎಂದೇ ಇಟ್ಟುಕೊಳ್ಳೋಣ. ಅರೆ! ರಾಷ್ಟ್ರಮಟ್ಟದಲ್ಲಿ ಅದೆಷ್ಟೋ ಹಿರಿಯ, ವರ್ಚಸ್ಸುಳ್ಳ ಸಾಹಿತಿಗಳ ನಡುವೆ ನಮ್ಮ ಸಾಹಿತಿಗಳು ಲಾಬಿ ಮಾಡಬಲ್ಲರು ಎನ್ನುವುದು ಸಣ್ಣ ವಿಷಯವೇನೂ ಅಲ್ಲ. ಇಂದು ಕನ್ನಡ ಶಾಸ್ತ್ರೀಯ ಭಾಷೆಯಾಗಬೇಕು ಎನ್ನುವಾಗ ಮೇಲಿನ ಎಲ್ಲಾ ಜ್ಞಾನಪೀಠರ ಪಟ್ಟಿಯನ್ನೂ ಕೇಂದ್ರದ ಮುಂದೆ ಪ್ರದರ್ಶಿಸಿತು. ಹಲವು ಅಂಶಗಳನ್ನು ಮುಂದಿಟ್ಟುಕೊಂಡು ಸರಕಾರ ಲಾಬಿ ಮಾಡಿತು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಾಹಿತ್ಯ, ಕಲೆ, ಭಾಷೆಗಳಿಗಾಗಿ ಲಾಬಿ ಮಾಡುವವರಿದ್ದರೆ ಅದೂ ನಮ್ಮ ಹೆಗ್ಗಳಿಕೆಯೇ ಸರಿ.
  ಕುಂವೀ ಅವರ ಮೂರನೆಯ ಅಸಮಾಧಾನ, ಶಾಲಾ ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ಬರೇ ಈ ಎಂಟು ಲೇಖಕರ ಫೋಟೋಗಳನ್ನು ತೂಗು ಹಾಕುವುದರ ಬಗ್ಗೆ. ಈ ಕಚೇರಿಗಳಲ್ಲಿ, ಶಾಲೆಗಳಲ್ಲಿ, ಬಸ್‌ಗಳಲ್ಲಿ ಫೋಟೋಗಳನ್ನು ತೂಗು ಹಾಕುವುದೇ ನನ್ನ ದಷ್ಟಿಯಲ್ಲಿ ಮಹಾಪರಾಧ. ಈ ಫೋಟೋಗಳು ನಿಧಾನಕ್ಕೆ ಒಂದು ಅಭಿಪ್ರಾಯವನ್ನ್ನು ರೂಪುಗೊಳಿಸುತ್ತವೆ. ಕುಂವೀ ಹೇಳಿದ ಮಾತಿನಲ್ಲಿ ಸತ್ಯವಿದೆ. ಆದರೆ ಈಗ ಇರುವ ಎಂಟು ಫೋಟೋಗಳು ಕನ್ನಡ ಸಾಹಿತ್ಯದ ಹರಿವನ್ನು ಪ್ರಾತಿನಿಧಿಕವಾಗಿ ತೋರಿಸುತ್ತವೆ ಎನ್ನುವುದನ್ನು ಮರೆಯಬಾರದು. ನವೋದಯವನ್ನು ಪ್ರತಿನಿಧಿಸಿ ಕುವೆಂಪು ಇದ್ದಾರೆ. ಆ ಬಳಿಕದ ದಿನಗಳನ್ನು ಸ್ಮರಿಸಲು ಮಾಸ್ತಿ, ಬೇಂದ್ರೆ, ಗೋಕಾಕ್‌ನಂಥವರೂ ಇದ್ದಾರೆ. ಹಾಗೆಯೇ ಆಧುನಿಕ ಕಾಲಘಟ್ಟವನ್ನು ಸ್ಮರಿಸಲು ಅನಂತಮೂರ್ತಿ, ಕಾರ್ನಾಡ್ ಇದ್ದಾರೆ. ಆದರೂ ಮಕ್ಕಳ ಮನಸ್ಸಿನಲ್ಲಿ ಈ ಸಾಹಿತಿಗಳ ಕುರಿತಂತೆ ಪೂರ್ವಾಗ್ರಹವನ್ನು ಈ ಫೋಟೋಗಳು ಬಿತ್ತಬಹುದು. ಈ ಲೇಖಕರಷ್ಟೇ ಕನ್ನಡದ ಅಧಿಪತಿಗಳು ಎಂದು ಅವರನ್ನು ತಪ್ಪು ದಾರಿಯೆಡೆಗೆ ಕೊಂಡೊಯ್ಯಬಹುದು ಎಂದು ಕುಂವೀ ಭಾವಿಸುತ್ತಾರೆ. ಆ ಕಾರಣಕ್ಕೆ ಈ ಎಲ್ಲ ಫೋಟೋಗಳನ್ನು ತೆಗೆಯಬೇಕು ಎಂದು ಕುಂವೀ ಹೇಳಿದರೆ ಅದನ್ನು ನಾನು ಬೆಂಬಲಿಸುತ್ತೇನೆ. ಆದರೆ ಕುಂವೀ ಅವರಿಗೆ ಗೊತ್ತೇ ಇರುವ ಒಂದು ಸಂಗತಿ ಇಂದು ಶಾಲೆಯ ಒಳಗೆ ಮತ್ತು ಶಾಲೆಯ ಅಂಗಳಗಳಲ್ಲಿ ನಡೆಯುತ್ತಿದೆ. ಅದೇನೆಂದರೆ ಕೆಲವು ರಾಜಕೀಯ ಅಜೆಂಡಾಗಳು ತಮ್ಮ ತಮ್ಮ ವಿಚಾರಧಾರೆಗಳನ್ನು ತುರುಕಲು ಯತ್ನಿಸುತ್ತಿರುವುದು. ಈ ಎಂಟು ಫೋಟೋಗಳನ್ನು ಕಿತ್ತೊಗೆಯೋದು ಸುಲಭ. ಆದರೆ ನಾಳೆ ಈ ಎಂಟು ಫೋಟೋಗಳಿರುವ ಜಾಗದಲ್ಲಿ ಯಾವ ಫೋಟೋಗಳು ಬಂದು ಕುಳಿತುಕೊಳ್ಳುತ್ತವೆ ಎನ್ನುವುದರ ಕುರಿತಂತೆ ಕುಂವೀ ಅವರಿಗೆ ಅರಿವಿದೆಯೆ? ಅಥವಾ ಈ ಎಂಟು ಫೋಟೋಗಳ ಮಧ್ಯೆ ಇನ್ನಷ್ಟು ಫೋಟೋಗಳು ಬಂದು ಕೂರಬೇಕು ಎಂದೇ ಇಟ್ಟುಕೊಳ್ಳೋಣ. ಆಗ ನನ್ನ ಅಥವಾ ಕುಂವೀ ಮನದಲ್ಲಿರುವ ಫೋಟೋಗಳೇ ಬೇರೆಯಾಗಿರುತ್ತವೆ. ಉದಾಹರಣೆಗೆ ಅಲ್ಲಿ ಇನ್ನಷ್ಟು ಪೋಟೋಗಳು ಎಂದಾಗ ನನಗೆ ದೇವನೂರು, ಕುಂವೀ, ನಿಸಾರ್ ಅಹಮದ್, ಕಣವಿ, ಜಿಎಸ್‌ಎಸ್, ಬೊಳುವಾರು, ಸಾರಾ ಅಬೂಬಕರ್ ಮೊದಲಾದವರ ಚಿತ್ರಗಳು ಕಣ್ಣಲ್ಲಿ ಮೂಡುತ್ತವೆ. ಆದರೆ ಇಂದು ಶಾಲೆಗಳಲ್ಲಿರುವ ಶಿಕ್ಷಕರು ಎಂತೆಂತಹ ಕೊಳೆದ ರಾಜಕೀಯ ಅಜೆಂಡಾಗಳನ್ನು ಹೊತ್ತವರಿದ್ದಾರೆ ಎನ್ನುವುದನ್ನು ನಾನಿಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಇನ್ನಷ್ಟು ಫೋಟೋಗಳು ಇಡಬೇಕೆಂದಾಗ, ಆ ಸಾಲಿನಲ್ಲಿ ಮೊತ್ತ ಮೊದಲಾಗಿ ಬಂದು ವಕ್ಕರಿಸುವುದು ಆವರಣ, ಕವಲುವಿನಂತಹ ಮನುಷ್ಯ ವಿರೋಧಿ ಬರಹಗಳನ್ನು ಬರೆದ ಭೈರಪ್ಪರ ಫೋಟೋ. ಬಳಿಕ, ಹೊ.ವೆ. ಶೇಷಾದ್ರಿ, ಗೊಳ್ವಾಳ್ಕರ್, ವೀರಸಾವರ್ಕರ್ ಬಂದು ಕೂತರೂ ಅದರಲ್ಲಿ ಅಚ್ಚರಿಯಿಲ್ಲ.
ವಿವೇಕಾನಂದರನ್ನು ಕಲಿಸುವ ನೆಪದಲ್ಲಿ ಮನುಶಾಸ್ತ್ರದ ಪಾಠಗಳನ್ನು ಇಂದು ಶಾಲೆಗಳಲ್ಲಿ ಕಲಿಸುವ ಪ್ರಯತ್ನ ನಡೆಯುತ್ತಿದೆ. ನಾವಿಂದು ದೊಡ್ಡ ಧ್ವನಿಯಲ್ಲಿ ಒಟ್ಟಾಗಿ ಮಾತನಾಡಬೇಕಾದುದು ಇದರ ಕುರಿತಂತೆ. ಹಾಗೆಯೇ ಈ ಎಂಟು ಫೋಟೋಗಳನ್ನು ತೆಗೆಯುವುದೇನೋ ಸರಿ.. ಹಾಗೆಯೇ ಆ ಜಾಗದಲ್ಲಿ ಇನ್ನಾವ ಫೋಟೋಗಳೂ ಬಂದು ಕೂರದ ಹಾಗೆಯೂ ನಾವು ಜಾಗರೂಕತೆ ವಹಿಸಬೇಕಾಗುತ್ತದೆ. ಯಾಕೆಂದರೆ ಎಲ್ಲಿ ಜಾಗ ಖಾಲಿ ಇದೆಯೋ ಅಲ್ಲಿ ಮನು ವಾದಿಗಳು ತಮ್ಮದನ್ನು ತುರುಕಲು ತುದಿಗಾಲಿನಲ್ಲಿ ನಿಂತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಮತ್ತೆ ಅವರ ಕೈವಶವಾಗಬಾರದು. ಆದುದರಿಂದ ಆ ಫೋಟೋಗಳನ್ನು ಕಿತ್ತು ಹಾಕುವುದರ ಜೊತೆ ಜೊತೆಗೇ ಆ ಜಾಗದಲ್ಲಿ ಬರೇ ಗಾಂಧಿ ಮತ್ತು ಅಂಬೇಡ್ಕರ್ ಅವರ ಫೋಟೋವನ್ನಷ್ಟೇ ಪ್ರತಿಷ್ಠಾಪಿಸಬೇಕು. ಹೀಗೆ ಒತ್ತಾಯಿಸುವ ದಿಟ್ಟತನ ಕುಂವೀ ಅವರಲ್ಲಿ ಇರಬೇಕಾಗಿತ್ತು ಎನ್ನೋದು ನನ್ನಂಥಹ ಕೆಲವರ ಆಶಯ.
   ಇದು ಇಲ್ಲಿಗೆ ಮುಗಿಯಬೇಕಾಗಿಲ್ಲ. ಕನ್ನಡ ರಾಜ್ಯೋತ್ಸವದಂತಹ ನಾಡಹಬ್ಬಗಳಲ್ಲಿ ಹೇಗೆ ವೈದಿಕ ಸಂಕೇತಗಳು ತುರುಕಲ್ಪಟ್ಟಿವೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ನಾಡಿನ ರೂಪಕವಾಗಿ ಸರಕಾರಿ ಶಾಲೆಗಳಲ್ಲಿ ದುರ್ಗೆಯ, ಚಾಮುಂಡೇಶ್ವರಿಯ ಪೋಟೋಗಳನ್ನಿಟ್ಟು, ಅದರ ಮುಂದೆ ಬ್ರಾಹ್ಮಣರ ಕೈಯಿಂದ ತೆಂಗಿನಕಾಯಿ ಒಡೆಸುವ, ಮಂಗಳಾರತಿ ಎತ್ತುವ ಕಾರ್ಯಕ್ರಮಗಳೂ ಜರಗುತ್ತಿವೆ. ರಾಷ್ಟ್ರೀಯ ಸಂಕೇತಗಳ ಬದಲಾಗಿ, ಅಲ್ಲಿ ವೈದಿಕ ಸಂಕೇತಗಳನ್ನು ತುರುಕುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿವೆ. ಶಾಲೆಯೆನ್ನುವುದು ಎಲ್ಲ ಜಾತಿ ಧರ್ಮಗಳು ಒಟ್ಟು ಸೇರುವ ಬಯಲು. ಅಲ್ಲಿ ಇಂತಹ ಸಂಕೇತಗಳನ್ನು, ಫೋಟೋಗಳನ್ನು ತಂದಿಟ್ಟು ಕೆಲವರನ್ನು ಅನ್ಯರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಶಾಲೆಗಳಲ್ಲಿ ನಡೆಯುತ್ತಿರುವ ಇಂತಹ ಗಂಭೀರ ಪ್ರಮಾದಗಳನ್ನು ಬದಿಗಿಟ್ಟು ಬರೇ ಎಂಟು ಫೋಟೋಗಳು ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಬಹುದು ಎಂಬ ರೀತಿಯಲ್ಲಿ ಕುಂವೀ ಆತಂಕ ವ್ಯಕ್ತಪಡಿಸುವುದು ನಿಜಕ್ಕೂ ಅಚ್ಚರಿಯೇ ಸರಿ.
ಅಷ್ಟೇ ಅಲ್ಲ, ಬೆಂಗಳೂರಿನ ಹೆಚ್ಚಿನ ಸರಕಾರಿ ಕಚೇರಿಗಳನ್ನೊಮ್ಮೆ ಕುಂವೀ ಅವರು ಕಣ್ಣು ಬಿಟ್ಟು ನೋಡಲಿ. ಅಲ್ಲಿ ಪ್ರತಿಷ್ಠಾಪನೆಗೊಂಡಿರುವ ವೈದಿಕ ದೇವರ ಫೋಟೋಗಳು ಏನನ್ನು ಪ್ರತಿಪಾದಿಸುತ್ತವೆ? ಸಂವಿಧಾನವೇ ದೇವರು ಎಂದು ತಿಳಿದುಕೊಂಡ ಕಚೇರಿಗಳಲ್ಲಿ ಪ್ರತಿವಾರ ಪೂಜೆಗಳು, ಹೋಮ ಹವನಗಳು ನಡೆಯುತ್ತವೆ. ತಮ್ಮ ಕೆಲಸದ ಅವಧಿಯಲ್ಲಿ ಗಂಟೆ ಬಾರಿಸಿ, ಪ್ರಸಾದ ಹಂಚುತ್ತಿರುತ್ತಾರೆ. ಇಂದು ನಾವು ಆದ್ಯತೆಯಿಂದ ಮಾತನಾಡಬೇಕಾದುದು ಇವುಗಳ ಕುರಿತಂತೆ. ಆ ಫೋಟೋಗಳನ್ನು ಕಿತ್ತೆಸೆದು ಅಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಫೋಟೋಗಳನ್ನು ಪ್ರತಿಷ್ಠಾಪಿಸುವ ಕಡೆಗೆ ನಾವು ಹೊರಳಬೇಕು. ಇದು ಸಾಧ್ಯವಾಗಬಹುದೆ?
  ಕುಂವೀ ಮಾತುಗಳು ಸಂಘಪರಿವಾರಕ್ಕೆ ಯಾಕೆ ಇಷ್ಟವಾಗುತ್ತದೆ ಎಂದರೆ, ಕುಂವೀ ಅವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಸಂಘಪರಿವಾರಕ್ಕೆ ಲಾಭವಾಗುವ ಕೆಲವು ಮಾರ್ಗಗಳನ್ನು ತೆರೆದಿಟ್ಟಿದ್ದಾರೆ. ಮುಖ್ಯವಾಗಿ ಜ್ಞಾನಪೀಠಿಗಳ ಸಾಲಿನಲ್ಲಿ ಆವರಣ, ಕವಲು ಎಂಬಂತಹ ಆರೆಸ್ಸೆಸ್‌ನ ಅಜೆಂಡಾಗಳನ್ನೇ ಕಾದಂಬರಿ ರೂಪದಲ್ಲಿ ಬರೆದ ಭೈರಪ್ಪನ್ನು ಪ್ರತಿಷ್ಠಾಪಿಸುವುದಕ್ಕೆ ಸಾಧ್ಯವಾಗುತ್ತದೆ. ಈಗಾಗಲೇ ಕೆಲವು ಪತ್ರಿಕೆಗಳು ಜ್ಞಾನಪೀಠಕ್ಕೆ ಪರ್ಯಾಯವಾಗಿ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಮುಂದೆ ತರಲು ಕಾರ್ಯಯೋಜನೆಯನ್ನು ಹಾಕಿಕೊಂಡಿವೆ. ಸಾಹಿತ್ಯದಲ್ಲಿ ಬಲಪಂಥೀಯ, ಎಡಪಂಥೀಯ ಎನ್ನುವುದು ಇರಬಾರದು ನಿಜ. ಆದರೆ ಮನುಷ್ಯ ಪರ, ಮನುಷ್ಯ ವಿರೋಧಿ ಎನ್ನುವುದು ಸದ್ಯಕ್ಕೆ ಇಲ್ಲ ಎನ್ನಲು ಸಾಧ್ಯವೆ? ಆವರಣ ಒಂದು ಸಮುದಾಯದ ಕುರಿತಂತೆ ವ್ಯಕ್ತಪಡಿಸುವ ಹಸಿ ಹಸಿ ದ್ವೇಷ, ಹಾಗೆಯೇ ಕವಲು ಕಾದಂಬರಿ ಹೆಣ್ಣಿನ ಕುರಿತಂತೆ ತಳೆದ ತಾತ್ಸಾರವನ್ನು ಇಲ್ಲ ಎಂದು ಅಲ್ಲಗಳೆಯಲು ಸಾಧ್ಯವೆ? ಇಂದು ಜ್ಞಾನಪೀಠವನ್ನು ನಾನು ಇಷ್ಟಪಡುವುದಕ್ಕೆ ಒಂದು ಬಲವಾದ ಕಾರಣ, ಅದು ಭೈರಪ್ಪರಿಗೆ ಸಿಕ್ಕಿಲ್ಲ ಎನ್ನುವುದು. ಪರ್ವ, ಗಹಭಂಗ ಬರೆದ ಭೈರಪ್ಪರನ್ನು ಇಷ್ಟಪಡುತ್ತಲೇ ಅವರಿಗೆ ಜ್ಞಾನಪೀಠ ದೊರಕಬಾರದು ಎಂದು ಬಯಸುತ್ತೇನೆ. ಯಾಕೆಂದರೆ ಹಾಗೆ ದೊರಕಿದ್ದೇ ಆದಲ್ಲಿ, ಅವರ ಆವರಣ, ಕವಲು ಮೊದಲಾದ ಕತಿಗಳೂ ಸಮರ್ಥಿಸಲ್ಪಡುತ್ತವೆ. ಅದು ಮುಂದಿನ ಸಾಹಿತ್ಯದ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಸಾಧ್ಯತೆಯಿದೆ. ಈ ಎಲ್ಲ ಹಿನ್ನೆಲೆಗಳಿಂದಲೇ, ಇಂತಹ ಒಳ ರಾಜಕಾರಣಕ್ಕೆ ಕುಂವೀ ಮಾತುಗಳು ಬಲಿಯಾಗಬಾರದು ಎಂದು ನಾನು ಅವರ ಹೇಳಿಕೆಗಳನ್ನು ಬಲವಾಗಿ ಖಂಡಿಸಿದ್ದೇನೆ. ಈಗಲೂ ಖಂಡಿಸುತ್ತೇನೆ.

Friday, February 14, 2014

ದೃಶ್ಯಂ: ಒಂದು ಫ್ಯಾಮಿಲಿ ಥ್ರಿಲ್ಲರ್ ಚಿತ್ರ

ಕಾನೂನು ಮತ್ತು ನ್ಯಾಯ ಬೇರೆ ಬೇರೆಯಾದುದು. ಮಧ್ಯಮ ವರ್ಗದ ಒಂದು ಕುಟುಂಬ ಎದುರಾದ ವಿಪತ್ತನ್ನು ಪ್ರತಿರೋಧಿಸುವ ಸಂದರ್ಭದಲ್ಲಿ ಒಂದು ಕೊಲೆ ನಡೆದು ಹೋಗುತ್ತದೆ. ಕೊಲೆಗೀಡಾದ ವ್ಯಕ್ತಿ ಹಿರಿಯ ಪೊಲೀಸ್ ಅಧಿಕಾರಿ ದಂಪತಿ ಪುತ್ರ. ಇಡೀ ಪೊಲೀಸ್ ವ್ಯವಸ್ಥೆ ಒಂದಾಗಿ ಅವರ ಮೇಲೆ ಮುಗಿ ಬಿದ್ದಾಗ, ಆ ಕುಟುಂಬ ತಮ್ಮೆಲ್ಲ ಶಕ್ತಿಯನ್ನು ಒಟ್ಟು ಸೇರಿಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕತೆಯೇ ‘ದಶ್ಯಂ’. ನಿಜಕ್ಕೂ ಇದೊಂದು ಫ್ಯಾಮಿಲಿ ಥ್ರಿಲ್ಲರ್ ಚಿತ್ರ. ಅಭಿನಯ, ಚಿತ್ರಕತೆ ಮತ್ತು ಅದಕ್ಕೆ ಪೂರಕವಾದ ಬಿಗಿ ನಿರ್ದೇಶನ ಒಟ್ಟು ಸೇರಿದರೆ ಅದಕ್ಕೆ ಹೆಸರು ‘ದೃಶ್ಯಂ’.

ಮಧ್ಯಮವರ್ಗಕ್ಕೆ ಸೇರಿದ ಜಾರ್ಜ್ ಕುಟ್ಟಿ(ಮೋಹನ್ ಲಾಲ್) ಒಬ್ಬ ಕೇಬಲ್ ಟಿವಿ ನೆಟ್‌ವರ್ಕ್ ಕಚೇರಿ ನಡೆಸುತ್ತಿದ್ದಾನೆ. ಮೂಲತಃ ಅನಾಥನಾಗಿ ಹುಟ್ಟಿದ ಜಾರ್ಜ್ 5ನೇ ತರಗತಿಯಷ್ಟೇ ಓದಿದಾತ. ಟಿವಿಗಳಲ್ಲಿ ಸತತ ಸಿನಿಮಾಗಳನ್ನು ನೋಡುವುದು ಇವನ ಅಭ್ಯಾಸ. ಆ ಸಿನಿಮಾಗಳ ಮೂಲಕವೇ ಸಾಮಾನ್ಯ ಜ್ಞಾನಗಳನ್ನು ತನ್ನದಾಗಿಸಿಕೊಂಡವ. ಇವನದೊಂದು ಪುಟ್ಟ ಸಂಸಾರ. ಅಪಾರವಾಗಿ ಪ್ರೀತಿಸುವ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು. ಒಬ್ಬಾಕೆ ಹೈಸ್ಕೂಲ್ ಓದುತ್ತಿದ್ದರೆ, ಇನ್ನೊಬ್ಬಳು ಪುಟ್ಟ ಹುಡುಗಿ. ಚಿತ್ರದ ಅರ್ಧಭಾಗ ಇವರ ಸುಂದರ ಸಂಸಾರದ ಕಡೆಗೆ ನಮ್ಮ ಮನಸ್ಸನ್ನು ಚಲಿಸುವಂತೆ ಮಾಡುತ್ತದೆ. ಇದೊಂದು ಸಾಂಸಾರಿಕ ಚಿತ್ರವೇನೋ ಅನ್ನಿಸುವಷ್ಟರಲ್ಲಿ, ಆ ಪುಟ್ಟ ಗುಬ್ಬಚ್ಚಿ ಗೂಡಿನ ಮೇಲೆ ಹದ್ದಿನ ಮರಿಯೊಂದು ಎರಗುತ್ತದೆ. ತಮ್ಮನ್ನು ರಕ್ಷಿಸಿಕೊಳ್ಳುವ ಧಾವಂತದಲ್ಲಿ ಕೊಲೆಯೊಂದು ನಡೆದು ಹೋಗುತ್ತದೆ. ಕೊಲೆಯಾಗಿರುವುದು ಹಿರಿಯ ಪೊಲೀಸ್ ಅಧಿಕಾರಿ ದಂಪತಿಯ ಮಗನದು. ಇಡೀ ಪೊಲೀಸ್ ಇಲಾಖೆ ಒಂದಾಗಿ ಮಗನಿಗಾಗಿ ಹುಡುಕಾಡುತ್ತದೆ. ಜಾಲಾಡುತ್ತಾ ಅದು ಜಾರ್ಜ್ ಕುಟ್ಟಿಯ ಮನೆಯವರೆಗೆ ಬರುತ್ತದೆ. ಇತ್ತ ಇಡೀ ಘಟನೆಯನ್ನು ಸುಳ್ಳಾಗಿಸಲು ಜಾರ್ಜ್‌ಕುಟ್ಟಿ ಒಂದೊಂದೇ ತಂತ್ರಗಳನ್ನು ಹಾಕುತ್ತಾ ಹೋಗುತ್ತಾನೆ. ಕುಟುಂಬ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಂದಾಗಿ ನಿಲ್ಲುತ್ತದೆ. ತಾನು ನೋಡಿದ ಸಿನಿಮಾಗಳ ದೃಶ್ಯಂಗಳ ಎಳೆ ಹಿಡಿದುಕೊಂಡು, ಕೊಲೆಯ ದಿನ ತಾವು ಊರಲ್ಲೇ ಇರಲಿಲ್ಲ ಎನ್ನುವುದನ್ನು ಸಷ್ಟಿಸುತ್ತಾನೆ ಜಾರ್ಜ್‌ಕುಟ್ಟಿ. ಸತ್ಯ ಮತ್ತು ಸುಳ್ಳಿನ ನಡುವೆ ತಿಕ್ಕಾಟ ಆರಂಭವಾಗುವುದೇ ಈಗ. 


ಒಂದೆಡೆ ಜಾರ್ಜ್‌ಕುಟ್ಟಿ ಕುಟುಂಬ. ಮಗದೊಂದೆಡೆ ಪೊಲೀಸ್ ಅಧಿಕಾರಿ ಮತ್ತು ಆತನ ಪೊಲೀಸ್ ಅಧಿಕಾರಿಯೇ ಆಗಿರುವ ಪತ್ನಿ. ಪೊಲೀಸ್ ಅಧಿಕಾರಿಗಳಾದರೂ, ಆಳದಲ್ಲಿ ಅವರು ಒಬ್ಬ ಮಗನನ್ನು ಕಳೆದುಕೊಂಡ ತಂದೆ ಮತ್ತು ತಾಯಿಯೂ ಆಗಿರುತ್ತಾರೆ. ಆದುದರಿಂದ ಸರ್ವಶಕ್ತಿಯನ್ನು ಪ್ರಯೋಗಿಸಿ ಆ ಕುಟುಂಬದಿಂದ ಸತ್ಯವೇನು ಎನ್ನುವದನ್ನು ಬಯಲಿಗೆಳೆಯಲು ಐಜಿಯ ಪತ್ನಿ ಪ್ರಯತ್ನಿಸಿದರೆ, ಇತ್ತ ಜಾರ್ಜ್‌ಕುಟ್ಟಿ ತನ್ನ ಕುಟುಂಬವನ್ನು ರಕ್ಷಿಸಲು ಅಷ್ಟೇ ಪ್ರತಿರೋಧವನ್ನು ತೋರಿಸುತ್ತಾನೆ.
ಕಟ್ಟ ಕಡೆಯಲ್ಲಿ ಪೊಲೀಸ್ ಇಲಾಖೆ ಈ ಕುಟುಂಬದ ವಿರುದ್ಧ ಸೋಲೊಪ್ಪಬೇಕಾಗುತ್ತದೆ. ಐಜಿ ರಾಜೀನಾಮೆ ನೀಡಬೇಕಾಗುತ್ತದೆ. ಕ್ಲೆೃಮಾಕ್ಸ್‌ನಲ್ಲಿ ಐಜಿ ದಂಪತಿ ಮತ್ತು ಜಾರ್ಜ್‌ಕುಟ್ಟಿಯ ಭೇಟಿ ಹದಯಸ್ಪರ್ಶಿಯಾಗಿದೆ. ಪೊಲೀಸ್ ಧಿರಿಸುಗಳನ್ನು ಧರಿಸದೇ ಜಾರ್ಜ್ ಕುಟ್ಟಿಯನ್ನು ಭೇಟಿಯಾಗುವ ಐಜಿ ದಂಪತಿಗಳು ಜಾರ್ಜ್ ಕುಟ್ಟಿಯಲ್ಲಿ ಕೇಳಿಕೊಳ್ಳುತ್ತಾರೆ ‘‘ಮನೆಯ ಬಾಗಿಲ ಬಳಿ ಸದ್ದು ಕೇಳಿದರೆ, ಯಾರಾದರೂ ಕರೆಗಂಟೆ ಬಾರಿಸಿದರೆ ನಮ್ಮ ಮಗನೇ ಬಂದನೇನೋ ಎಂದೆನಿಸುತ್ತದೆ. ಹೇಳು. ನಾವಿನ್ನು ಅವನಿಗಾಗಿ ಕಾಯಬೇಕೋ ಬೇಡವೋ?’’ ಆ ಪ್ರಶ್ನೆಗೆ ಮೋಹನ್ ಲಾಲ್ ನೀಡುವ ಉತ್ತರ ಇಡೀ ಚಿತ್ರದ ಸಾರವೂ ಆಗಿದೆ. ಕಟ್ಟಕಡೆಗೆ ಪೊಲೀಸ್ ಅಧಿಕಾರಿ ದಂಪತಿಗಳ ಜೊತೆಗೆ ಜಾರ್ಜ್‌ಕುಟ್ಟಿಯ ಕ್ಷಮಾಯಾಚನೆ ಚಿತ್ರದ ಧೋರಣೆಯನ್ನು ಹೇಳುತ್ತದೆ.


  ಚಿತ್ರದಲ್ಲಿ ಜಾರ್ಜ್‌ಕುಟ್ಟಿಯ ಪಾತ್ರದಲ್ಲಿ ಮೀನಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಣಿಯಾಗಿ ಆಶಾ ಶರತ್ ಅಭಿನಯ ಹದಯ ಮುಟ್ಟುವಂತಹದು. ಮುಗ್ಧ ಗಹಿಣಿಯಾಗಿ ಮೀನಾ ಯಶಸ್ವಿಯಾಗಿದ್ದರೆ, ಒರಟು ಪೊಲೀಸ್ ಅಧಿಕಾರಿ ಮತ್ತು ಮಗನನ್ನು ಕಳೆದುಕೊಂಡ ತಾಯಿಯಾಗಿ ಆಶಾಶರತ್ ಅಭಿನಯವೂ ಅಷ್ಟೇ ಪರಿಣಾಮಕಾರಿ.ಒಬ್ಬ ತಂದೆಯಾಗಿ ಮೋಹನ್ ಲಾಲ್ ಅಭಿನಯದ ಕುರಿತಂತೆ ಮಾತೆ ಇಲ್ಲ. ಚಿತ್ರದ ಸಂಗೀತ ಮತ್ತು ಛಾಯಾಗ್ರಹಣ ಒಟ್ಟು ಚಿತ್ರ ಸಜಿಸುವ ಮಾನವೀಯ ಭಾವಗಳಿಗೆ ಪೂರಕವಾಗಿವೆ. ದೃಶ್ಯಂನಂತಹ ಚಿತ್ರಗಳು ಮಲಯಾಳಂ, ತಮಿಳು ಯಾವ ಭಾಷೆಯಲ್ಲೇ ಬರಲಿ ಅದಕ್ಕೆ ಭಾಷೆಯ ಗಡಿಯಿರುವುದಿಲ್ಲ. ಹೀಗೆ ಭಾಷೆಯ ಗಡಿ ಮೀರಿದ ಚಿತ್ರಗಳು ಕನ್ನಡದಲ್ಲೂ ಬರಬೇಕು. ಅದನ್ನು ಮಲಯಾಳಿಗಳು, ತಮಿಳರು, ತೆಲುಗರು ಮುಗಿ ಬಿದ್ದು ನೋಡುವಂತಾಗಬೇಕು. ಆಗ ಕನ್ನಡ ಸಿನಿಮಾ ಉದ್ಯಮ ತನ್ನಷ್ಟಕ್ಕೆ ಗಟ್ಟಿಯಾಗುತ್ತದೆ. ಬೆಳೆಯುತ್ತದೆ.


Monday, February 10, 2014

ಕನ್ನಡ ತೋಟದಲ್ಲಿ ಮತ್ತೆ ಅರಳಿದ ‘‘ಪಾಪದ ಹೂವುಗಳು’’!

ಫ್ರಾನ್ಸಿನಿಂದ ಬೋದಿಲೇರ್‌ನನ್ನು ಕನ್ನಡಕ್ಕೆ ತಂದು, ಯುವಕರ ಎದೆಕುಂಡಗಳಿಗೆ ಬೆಂಕಿ ಹಚ್ಚಿದ್ದು ಲಂಕೇಶ್. ‘ಪಾಪದ ಹೂವುಗಳು’ ಒಂದು ಕಾಲದಲ್ಲಿ ಕಾವ್ಯದ ಅಲಗನ್ನು ಇನ್ನಷ್ಟು ಹರಿತವಾಗಿಸಿತು. ಮಾದಕವಾಗಿಸಿತು. ನವ್ಯರನ್ನು ಇನ್ನಷ್ಟು ದಿವ್ಯರನ್ನಾಗಿಸಿತು. ಅವರ ಕಾವ್ಯದ ಅಮಲು ಇನ್ನಷ್ಟು ಏರುವಂತೆ ಮಾಡಿತು. ಇಂದಿಗೂ ಬೋದಿಲೇರ್ ಎನ್ನುವಾಗ, ಕನ್ನಡದ ಸಹದಯರು ಲಂಕೇಶ್ ಅವರ ‘ಪಾಪದ ಹೂವುಗಳೆಡೆಗೆ’ ಕಣ್ಣು ತಿರುಗಿಸುತ್ತಾರೆ. ಇದೀಗ ‘ಪಾಪದ ಹೂವುಗಳಿಗೆ’ ಪೂರಕವಾಗಿ, ಇನ್ನಷ್ಟು ಗದ್ಯಕವಿತೆಗಳನ್ನು ಬೊಗಸೆಯಲ್ಲಿ ತುಂಬಿದ್ದಾರೆ, ಹಿರಿಯ ಲೇಖಕ ಎಸ್. ಎಫ್. ಯೋಗಪ್ಪನವರ್.
ಲಂಕೇಶ್ ಜೀವಿತಾವಧಿಯಲ್ಲಿ ಲಂಕೇಶ್‌ಗೆ ನಿಯಮಿತವಾಗಿ ಬರೆಯುತ್ತಿದ್ದ ಯೋಗಪ್ಪನವರ್ ಅವರ ಕನ್ನಡ ಅತ್ಯಂತ ಹದ್ಯವಾದುದು. ಲಂಕೇಶರ ಮೂಲಕ ಗಮಿಸಿದ ಕನ್ನಡವದು. ಲಂಕೇಶರು ಮುಡಿದ ಪಾಪದ ಹೂವುಗಳ ತೋಟಕ್ಕೆ, ಯೋಗಪ್ಪನವರ್ ಪ್ರವೇಶಿಸಿದ್ದಾರೆ. ಸುಮಾರು ಐವತ್ತು ಗದ್ಯ ಕವಿತೆಗಳನ್ನು ಕೊಯ್ದು ಮಾಲೆಯಾಗಿಸಿ ಅದಕ್ಕೆ ‘ಮಾಯಾ ಕನ್ನಡಿ’ ಎಂದು ಹೆಸರಿಸಿದ್ದಾರೆ. 1821ರಿಂದ 1867ರವರೆಗೆ ಬದುಕಿ ಬಾಳಿದ್ದ ಈ ಫ್ರೆಂಚ್ ಸಾಹಿತ್ಯದ ಕಪ್ಪು ಸೂರ್ಯ, ಸಾರ್ತ್‌ನಿಂದ ‘ಬಾಯಿ ತೆರೆದ ಹುಣ್ಣು’ ಕರೆಯಲ್ಪಟ್ಟಿದ್ದ. ಬೋದಿಲೇರ್‌ನನ್ನು ಕನ್ನಡಕ್ಕಿಳಿಸುವುದಕ್ಕೆ ಅಸಾಧ್ಯ ಧೈರ್ಯ ಬೇಕು. ಒಂದು ರೀತಿಯಲ್ಲಿ ಕನ್ನಡಿ ಕೈ ಜಾರದಂತೆ ನೋಡಿಕೊಳ್ಳುವ ಧೈರ್ಯ. ಅದರಲ್ಲಿ ಯೋಗಪ್ಪನವರ್ ಯಶಸ್ವಿಯಾಗಿದ್ದಾರೆ.
‘‘ಕಾರಾಗಹದಲ್ಲಿ ಕಾವ್ಯ ದಂಗೆ ಏಳುತ್ತದೆ, ಆಸ್ಪತ್ರೆಯ ಕಿಟಕಿಗಳಲ್ಲಿ ಆರೋಗ್ಯದ ಉತ್ಸಾಹ ಪೂರ್ಣ ಆಶೆಯಾಗಿ ಕಾಣುತ್ತದೆ...’’ ಎಂದು ಬರೆಯುವ ಬೋದಿಲೇರ್ ಇಲ್ಲಿ ಹನಿ ಹನಿಯಾಗಿ ತೊಟ್ಟಿಕ್ಕಿದ್ದಾನೆ. ‘ಒಬ್ಬ ಸ್ನೇಹಿತ ಹಾಸಿಗೆ ಹಿಡಿದರೆ, ಅವನ ಉಳಿದೆಲ್ಲ ಸ್ನೇಹಿತರು ಅವನು ಸಾಯಲೆಂದು ಗುಪ್ತವಾಗಿ ಆಶೆ ಪಡುತ್ತಾರೆ....’’
ಬೋದಿಲೇರ್ ತನ್ನ ಕವಿತೆಗಳ ಮೂಲಕ ಹಸಿ ವಾಸ್ತವಗಳಿಗೆ ಮುಖಾಮುಖಿಯಾದ. ತನ್ನ ಸ್ವಾರ್ಥ, ದುರಾಸೆ, ಮೋಹ, ಪ್ರೀತಿ ಎಲ್ಲವುಗಳನ್ನು ಒಪ್ಪಿಕೊಂಡು, ಅದನ್ನು ಇಷ್ಟು ಪಟ್ಟು ಬರೆದ ಕಾರಣದಿಂದಲೇ ಅವರ ಗದ್ಯ ಕವಿತೆಗಳು ಅಷ್ಟರ ಮಟ್ಟಿಗೆ ತೀವ್ರವಾಗಿದೆ. ಹಾಗೆಯೇ ಸಭ್ಯ ಸಾಹಿತ್ಯ ಜಗತ್ತಿಗೆ ಅಸ್ಪೃಶ್ಯವಾಗಿವೆ. ಯೋಗಪ್ಪನವರ್ (99005 44199)ಸೊಗಸಾದ ಭಾಷೆಯಲ್ಲಿ, ಅದು ಭಟ್ಟಿಯಿಂದ ಇಳಿದ ಬನಿಯಂತೆ ನಮಗೆ ಅಮಲೇರಿಸುತ್ತದೆ. ಪಲ್ಲವ ಪ್ರಕಾಶನ(94803 53507)ಈ ಕೃತಿಯನ್ನು ಅಷ್ಟೇ ಕಾಳಜಿಯಿಂದ ಮುದ್ರಿಸಿದೆ. ಕನ್ನಡದ ಸಾಹಿತ್ಯ ತೋಟದಲ್ಲಿ ಮತ್ತೆ ಪಾಪದ ಹೂವುಗಳು ಅರಳಿವೆ. ಇದರ ಮುಖಬೆಲೆ 200 ರೂ.

Sunday, February 2, 2014

ನಿನ್ನ ಎದೆ

ನಿನ್ನ ಎದೆ
ಒಂದು ಪುಟ್ಟ ಕುಂಡ ಕಣೋ
ಹೆಚ್ಚೆಂದರೆ
ಒಂದು ಪುಟ್ಟ ಗಿಡ ಬೆಳೆಸಿ
ಒಂದೆರಡು ಹೂ ಅರಳಿಸಿ
ಅದನ್ನು ಸಾರ್ಥಕ ಪಡಿಸಿಕೊ

ನಿನ್ನ ಎದೆ ಪುಟ್ಟ ಬುಟ್ಟಿ
ಕಣೋ, ನಾಲ್ಕು ಗಿಡಗಳ ಹೂಗಳಿಂದ
ತುಂಬಿ ಹೋಗುವಷ್ಟು ಸಣ್ಣದು
ತುಂಬಿಕೊ ತುಂಬಿ ಕೊಂಡಷ್ಟು

ಇಲ್ಲದ್ದೆಲ್ಲ ಭಾವಿಸಿಕೊಂಡು
ಎದೆಯ ಅಗ್ನಿಕುಂಡ ಮಾಡಬೇಡವೋ,
ಇಲ್ಲದ್ದೆಲ್ಲ ತುಂಬಿಸಿಕೊಂಡು
ಕಸದ ಬುಟ್ಟಿಗಿಳಿಸ ಬೇಡವೋ