Saturday, December 20, 2014

ಪೀಕೆ: ಲವಲವಿಕೆಯ ನಿರೂಪಣೆ, ದಟ್ಟ ಅನುಭವ

 ಮುನ್ನಾ ಭಾಯಿ ಎಂಬಿಬಿಎಸ್, ಲಗೇರಹೋ ಮುನ್ನಾ ಭಾಯಿ, ತ್ರೀ ಈಡಿಯಟ್ಸ್ ಬಾಲಿವುಡ್‌ನಲ್ಲಿ ವಿಭಿನ್ನವಾದ ಸಂದೇಶ ಮತ್ತು ಸಂತೋಷವನ್ನು ಹರಡಿದ ಮೂರು ಚಿತ್ರಗಳು. ಈ ಮೂರೂ ಚಿತ್ರಗಳ ನಿರ್ದೇಶಕರು ರಾಜ್‌ಕುಮಾರ್ ಹಿರಾನಿ. ಮುನ್ನಾಭಾಯಿ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣದ ವಿಪರ್ಯಾಸಗಳನ್ನು ತೆರೆದಿಟ್ಟರೆ, ಲಗೇರಹೋ ಮುನ್ನಾಭಾಯಿ ಗಾಂಧಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹೊಸತೊಂದು ಪರಿಭಾಷೆಯನ್ನು ಬಳಸಿಕೊಂಡ ಚಿತ್ರ. ತ್ರೀ ಇಡಿಯಟ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಕಟಗಳನ್ನು ತಮಾಷೆಯಾಗಿ ನಿರೂಪಿಸುತ್ತಲೇ, ಶಿಕ್ಷಣಕ್ಕೆ ಹೊಸತೊಂದು ವ್ಯಾಖ್ಯಾನಕೊಟ್ಟ ಚಿತ್ರ. ಅತ್ಯಂತ ಗಂಭೀರ ವಿಷಯಗಳನ್ನು ಹಾಸ್ಯ ನಿರೂಪಣೆಯ ಮೂಲಕ ಕಟ್ಟಿಕೊಟ್ಟ ಚಾಣಾಕ್ಷ ನಿರ್ದೇಶಕ ರಾಜ್‌ಕುಮಾರ್ ಹಿರಾನಿ. ಈ ಕಾರಣದಿಂದಲೇ ಅವರ ಪೀಕೆ ಚಿತ್ರದ ಕುರಿತಂತೆ ಪ್ರೇಕ್ಷಕರು ಭಾರೀ ನಿರೀಕ್ಷೆಗಳು ಇಟ್ಟು ಕಾಯುತ್ತಿದ್ದರು. ಮತ್ತು ಆ ನಿರೀಕ್ಷೆಗಳು ಹಿರಾನಿ ಹುಸಿ ಮಾಡಿಲ್ಲ. ‘ಪೀಕೆ’ ಅವರು ನಿರ್ದೇಶಿಸಿದ ಇತರ ಚಿತ್ರಗಳ ಸಾಲಿನಲ್ಲಿ ಯಾವ ಕೀಳರಿಮೆಯೂ ಇಲ್ಲದೆ ನಿಲ್ಲಬಲ್ಲ ಇನ್ನೊಂದು ಅಪರೂಪದ ಚಿತ್ರ.

ಪೀಕೆ ಚಿತ್ರದ ಕತೆ ಒಂದು ಸಾಲಿನಲ್ಲಿ ಹೇಳಿ ಮುಗಿಸಬಹುದಾದಷ್ಟು ತೆಳುವಾದದ್ದು. ಆದರೆ ಅದು ಹೊರಡಿಸುವ ಧ್ವನಿ ಮಾತ್ರ ನಮ್ಮಳಗೆ ಶಾಶ್ವತ ಅನುರಣಿಸುತ್ತಲೇ ಇರುವಂತಹದ್ದು. ತಮ್ಮ ಎಂದಿನ ಹಾಸ್ಯ ಮತ್ತು ನವಿರು ನಿರೂಪಣೆಯ ಮೂಲಕ ದೇವರು, ಧರ್ಮಗಳಂತಹ ಸೂಕ್ಷ್ಮ, ಗಂಭೀರ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಹಿರಾನಿ. ಈ ಜಗತ್ತಿನ ಧರ್ಮ ಪುರೋಹಿತರು, ಬಾಬಾಗಳು ದೇವರ ಜೊತೆ ಮಾತನಾಡುತ್ತಿದ್ದೇವೆ ಎಂದು ಭ್ರಮಿಸುತ್ತಾ ‘ರಾಂಗ್‌ನಂಬರ್’ ಜೊತೆಗೆ ಮಾತನಾಡುತ್ತಿದ್ದಾರೆ. ಆದುದರಿಂದಲೇ ಅದರ ಕೆಟ್ಟ ಫಲಿತಾಂಶವನ್ನು ಜನರು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಒಬ್ಬ ಮಗುಮನಸ್ಸಿನ ಮುಗ್ಧ ಕಥಾನಾಯಕನ ಮೂಲಕ ನಿರೂಪಿಸುತ್ತಾರೆ ನಿರ್ದೇಶಕರು.

 ಈ ಭೂಮಿಗೆ ಅನ್ಯಗ್ರಹದ ಜೀವಿಯೊಂದು ಕಾಲಿಡುತ್ತದೆ. ಒಂದು ಪುಟ್ಟ ಮಗು ಈಗಷ್ಟೇ ತಾಯ ಗರ್ಭದಿಂದ ಹೊರಬಂದು ಈ ಭೂಮಿಯನ್ನು ಅಚ್ಚರಿ, ಚೋದ್ಯದ ಕಣ್ಣುಗಳಿಂದ ನೋಡುವಂತೆ ಆ ಜೀವಿ ಈ ಭೂಮಿಯ ಜನಜೀವನವನ್ನು ನೋಡುತ್ತದೆ. ಮತ್ತು ಅವುಗಳನ್ನು ಅಷ್ಟೇ ಮುಗ್ಧವಾಗಿ ಪ್ರಶ್ನಿಸ ತೊಡಗುತ್ತದೆ. ಇಲ್ಲಿರುವ ವಿಪರ್ಯಾಸಗಳು, ವಿರೋಧಾಭಾಸಗಳು ಅದಕ್ಕೆ ತೀರಾ ತೀರಾ ಗೊಂದಲವನ್ನುಂಟು ಮಾಡುತ್ತದೆ. ಬೆತ್ತಲೆಯಾಗಿ ಕಾಲಿಟ್ಟ ಆ ಜೀವಿ ನಿಧಾನಕ್ಕೆ ಭೂಮಿಯೊಳಗಿರುವ ಮನುಷ್ಯನನ್ನು, ಮುಖ್ಯವಾಗಿ ಅವನು ನಂಬುವ ದೇವರು ಮತ್ತು ಧರ್ಮಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೇ ಚಿತ್ರದ ಮುಖ್ಯ ಕತೆ. ಅನ್ಯಗ್ರಹದ ಆ ಜೀವಿಯಾಗಿ ಆಮೀರ್ ಖಾನ್ ಅವರ ನಟನೆ  ನಮ್ಮನ್ನು ಆವರಿಸಿಕೊಳ್ಳುತ್ತದೆ.
  
  ಅನ್ಯಗ್ರಹದ ಜೀವಿ ಭೂಮಿಗೆ ಕಾಲಿಟ್ಟಾಕ್ಷಣ ಅವನಿಗೆ ಎದುರಾಗುವ ಮೊತ್ತ ಮೊದಲ ಮನುಷ್ಯ, ಆ ಬೆತ್ತಲೆ ಜೀವಿಯ ಕುತ್ತಿಗೆಯಲ್ಲಿದ್ದ ಏಕೈಕ ಹೊಳೆಯುವ ರಿಮೋಟ್ ಕಂಟ್ರೋಲನ್ನು ಕದ್ದು ಓಡುತ್ತಾನೆ. ಅಲ್ಲಿಂದ ಅನ್ಯ ಜೀವಿಯ ತಾಪತ್ರಯಗಳು ಆರಂಭವಾಗುತ್ತವೆ. ಆತನಿಗೆ ಮರಳಿ ತನ್ನ ಮನೆಗೆ ಹೋಗಬೇಕು. ಹೋಗಬೇಕಾದರೆ ತನ್ನ ಕುತ್ತಿಗೆಯಲ್ಲಿದ್ದ ರಿಮೋಟ್ ಕಂಟ್ರೋಲ್ ಯಂತ್ರ ಸಿಗಬೇಕು. ಅದರ ಹುಡುಕಾಟ ನಿಧಾನಕ್ಕೆ ದೇವರ ಹುಡುಕಾಟವಾಗಿ ಪರಿವರ್ತನೆಯಾಗುವದೇ ಚಿತ್ರಕತೆಯ ಹೆಗ್ಗಳಿಕೆ. ರಿಮೋಟ್ ಕಂಟ್ರೋಲ್ ಹುಡುಕಿ, ಮರಳಿ ತನ್ನೂರಿಗೆ ಹೋಗುವ ಅವನ ಅನ್ವೇಷಣೆ ಕಟ್ಟ ಕಡೆಗೆ, ಕಪಟ ಬಾಬಾನ ಬಳಿಗೆ ಅವನನ್ನು ತಲುಪಿಸುತ್ತದೆ. ದೇವರು ಧರ್ಮದ, ನೈಜ ಮುಖಾಮುಖಿಗೆ ಇದು ಕಾರಣವಾಗುತ್ತದೆ. ಅಷ್ಟೇ ಅಲ್ಲ, ಮನುಷ್ಯ ಮನುಷ್ಯನ ನಡುವಿನ ಸಂಬಂಧ, ಪಾಕಿಸ್ತಾನ-ಭಾರತದ ನಡುವಿನ ತಿಕ್ಕಾಟ ಇವೆಲ್ಲವೂ ಅತ್ಯಂತ ಸಹಜವಾಗಿ ಆತನ ಹುಡುಕಾಟದ ಭಾಗವಾಗಿ ಸೇರಿಕೊಳ್ಳುತ್ತದೆ.


ಈ ಅನ್ಯ ಜೀವಿಯನ್ನು ಗುರುತಿಸಿ ಅವನ ಹುಡುಕಾಟಕ್ಕೆ ಜೊತೆ ನೀಡುವ ಪಾತ್ರದಲ್ಲಿ ಜಗಜ್ಜನನಿ ಯಾನೆ ಜಗ್ಗು (ಅನುಷ್ಕಾ ಶರ್ಮಾ) ಅವರು ತುಂಬಾ ಲವಲವಿಕೆಯಿಂದ ನಟಿಸಿದ್ದಾರೆ.  ಆಕೆಯ ಪಾಕಿಸ್ತಾನಿ ಪ್ರಿಯಕರನಾಗಿ ಸರ್ಫುರಾಜ್ ಪಾತ್ರದಲ್ಲಿ ಸುಶಾಂತ್ ರಾಜಪೂತ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಣ್ಣ ಪಾತ್ರವಾದರೂ, ಚಿತ್ರಕ್ಕೆ ಮುಖ್ಯ ತಿರುವು ಕೊಡುವ ಪಾತ್ರವೂ ಇದಾಗಿರುವುದರಿಂದ ನಮ್ಮನ್ನು ತಟ್ಟುತ್ತದೆ. ಸಂಜಯ್ ದತ್, ಬೊಮನ್ ಇರಾನಿ ಇವರದು ಪೋಷಕ ಪಾತ್ರಗಳು. ಆಯಾ ಸನ್ನಿವೇಶಕ್ಕೆ ನ್ಯಾಯಕೊಡುವ ಪಾತ್ರಗಳು. ತಪಸ್ವಿ ಮಹಾರಾಜ್ ಪಾತ್ರದಲ್ಲಿ ಸೌರಭ್ ಶುಕ್ಲಾ ಅಭಿನಯ ಯಾವ ನಕಲಿ ಬಾಬಾಗಳ ನಟನೆಗಳಿಗಿಂತ ಕಮ್ಮಿಯಿಲ್ಲ. ಎಳೆದುಕಟ್ಟಿದ ವೀಣೆಯ ತಂತಿಯಂತೆ ಒಂದೇ ಸಾಲಿನ ಚಿತ್ರಕತೆ ಇದಾಗಿರುವುದರಿಂದ, ಆರಂಭದಿಂದ ಕೊನೆಯವರೆಗೆ ನಿಮ್ಮನ್ನು ಅಲುಗಾಡದಂತೆ ಹಿಡಿದು ನಿಲ್ಲಿಸುತ್ತದೆ. ಚಿತ್ರ ಮುಂದುವರಿದಂತೆಯೇ ಕೊಡುವ ದರ್ಶನದ ವ್ಯಾಪ್ತಿ ಹಿಗ್ಗುತ್ತಾ ಹೋಗುತ್ತದೆ. ಜೊತೆಗೆ ನಿಮ್ಮ ಸಂತೋಷವೂ ಕೂಡ. ಅಜಯ್ ಅತುಲ್, ಶಂತನು ಮೊಯಿತ್ರ, ಅಂಕಿತ್ ತಿವಾರಿ ಸಂಗೀತ ಚಿತ್ರದ ಲವಲವಿಕೆಗೆ ಇನ್ನಷ್ಟು ಜೀವತುಂಬುತ್ತದೆ. ಚಿತ್ರದ ಧ್ವನಿಯನ್ನು, ಆರ್ದ್ರತೆಯನ್ನು ಸಂಗೀತ ನಮಗೆ ಮೊಗೆದುಕೊಡುತ್ತದೆ. ಸಿ. ಕೆ. ಮುರಳೀಧರನ್ ಅವರ ಛಾಯಾಗ್ರಹಣ ನಿಮ್ಮ ಕಣ್ಣುಗಳನ್ನು ತಂಪಾಗಿಸುತ್ತದೆ.


ಚಿತ್ರ ಮುಗಿದಾಗ ನಿಮಗೆ ‘ಓ ಮೈ ಗಾಡ್’ ಸಿನಿಮಾ ನೆನಪಾಗಿದ್ದರೆ ಅದು ಆಕಸ್ಮಿಕ ಅಲ್ಲ. ಆದರೆ ‘ಓ ಮೈ ಗಾಡ್’ ಚಿತ್ರದಷ್ಟು ಆಳವಾಗಿ ಧರ್ಮ, ದೇವರುಗಳನ್ನು ‘ಪೀಕೆ’ ಚರ್ಚಿಸುವುದಿಲ್ಲ. ಇಲ್ಲಿ ದೇವರ ಕುರಿತಂತೆ ವೈಚಾರಿಕ ಪ್ರಶ್ನೆಗಳಿಲ್ಲ. ಬದಲಿಗೆ ಒಂದು ಮಗು ಕೇಳುವ ಮುಗ್ಧ ಮತ್ತು ಸತ್ಯಕ್ಕೆ ಹೆಚ್ಚು ಹತ್ತಿರವಾದ ಪ್ರಶ್ನೆಗಳಿವೆ. ತೀರಾ ಸರಳವಾದ, ಲವಲವಿಕೆಯ ನಿರೂಪಣೆಯ ಮೂಲಕ ದೇವರನ್ನು ಒಂದು ಅನುಭವವಾಗಿ ಪೀಕೆ ನಿಮ್ಮೊಳಗೆ ತಲುಪಿಸುತ್ತಾನೆ. ಚಿತ್ರಮಂದಿರದಿಂದ ಹೊರಬಂದಾಗ ಕತೆ ನಿಮ್ಮೊಳಗೆ ಉಳಿಯದೇ ಇರಬಹುದು. ಆದರೆ ಆ ಚಿತ್ರ ನಿಮಗೆ ನೀಡುವ ದರ್ಶನ ನಿಮ್ಮನ್ನು ನಿಮ್ಮ ಮನೆಯ ತನಕ ತಲುಪಿಸುವುದು ಖಂಡಿತ.

Monday, December 15, 2014

ಲಿಂಗಾ: ರಜನಿಯಿಂದ ರಜನಿಗಾಗಿ...

ರಜನಿಕಾಂತ್ ಚಿತ್ರವೆಂದರೆ ಅದರ ದೌರ್ಬಲ್ಯವೂ, ಶಕ್ತಿಯೂ ರಜನೀಕಾಂತ್ ಅವರೇ ಆಗಿರುವುದು. ಅನೇಕ ಸಂದರ್ಭದಲ್ಲಿ ಒಳ್ಳೆಯ ಕತೆಗಳು ರಜನಿಯನ್ನು ಎತ್ತಿ ನಿಲ್ಲಿಸಿವೆ. ಅರುಣಾಚಲಂ, ಪಡೆಯಪ್ಪ, ಎಂದಿರನ್ ಇವೆಲ್ಲ ಚಿತ್ರಗಳು ಕೇವಲ ರಜನಿಯಿಂದಾಗಿಯೇ ಗೆದ್ದಿರುವುದಲ್ಲ. ಉತ್ತಮ ಕತೆ, ನಿರ್ದೇಶನವೇ ಆ ಚಿತ್ರವನ್ನು ಗೆಲ್ಲಿಸಿದೆ. ತನ್ನನ್ನು ತಾನೇ ವೈಭವೀಕರಿಸಲು ಹೋದಾಗೆಲ್ಲ ರಜನಿಕಾಂತ್ ತಳತಪ್ಪಿ ಬಿದ್ದಿದ್ದಾರೆ. ಅವರ ಅತಿ ನಿರೀಕ್ಷೆಯ ಚಿತ್ರಗಳಾಗಿರುವ ಬಾಬಾ, ಕೋಚಾಡಯ್ಯನ್ ಮೊದಲಾದವುಗಳಿಗೆ ಒದಗಿದ ಗತಿಯೇ ಇದನ್ನು ಪುಷ್ಟೀಕರಿಸುತ್ತದೆ. ಕೋಚಾಡಯ್ಯನ್ ಸೋಲಿನ ಬಳಿಕ ರಜನೀಕಾಂತ್ ತುಸು ಮಂಕಾಗಿದ್ದರು. ಇಂತಹ ಸಂದರ್ಭದಲ್ಲಿ ಅವರ ವರ್ಚಸ್ಸನ್ನು ಮರಳಿ ಗಳಿಸಿಕೊಡುವ ತರಾತುರಿಯಲ್ಲಿ ‘ಲಿಂಗಾ’ ಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ.

 ಹಾಗೆ ನೋಡಿದರೆ ‘ಲಿಂಗ’ ಚಿತ್ರದ ಕತೆ ಹದಯಸ್ಪರ್ಶಿಯಾದುದು. ಹಿಂದಿಗೂ, ಇಂದಿಗೂ, ಮುಂದಿಗೂ ಸಲ್ಲುವಂತಹ ಒಂದು ವಸ್ತುವನ್ನು ಇಟ್ಟುಕೊಂಡು ಚಿತ್ರವನ್ನು ಮಾಡಲಾಗಿದೆ. ರಾಜವಂಶಸ್ಥನೂ ಆಗಿರುವ ಒಬ್ಬ ಜಿಲ್ಲಾಧಿಕಾರಿ ಜನರಿಗಾಗಿ ಅಣೆಕಟ್ಟು ಕಟ್ಟಲು ಹೊರಡುವ, ಅದಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಕತೆಯೇ ಲಿಂಗ. ಆದರೆ ಚಿತ್ರದುದ್ದಕ್ಕೂ ಎರಡೆರಡು ರಜನಿಕಾಂತ್‌ರನ್ನು ಪ್ರೇಕ್ಷಕರಿಗೆ ಬಲವಂತವಾಗಿ ಬಡಿಸುವ ಅನಿವಾರ್ಯತೆಗೆ ನಿರ್ದೇಶಕ ಸಿಕ್ಕಿಕೊಂಡಿರೋದರಿಂದ ಕತೆ ಬದಿಗೆ ತಳ್ಳಲ್ಪಡುತ್ತದೆ. ‘ಮುತ್ತು’ ಚಿತ್ರದಲ್ಲಿ ಎಲ್ಲವನ್ನೂ ತನ್ನ ಜನರಿಗಾಗಿ ತ್ಯಾಗ ಮಾಡುವ ಜಮೀನ್ದಾರನಂತೆಯೇ ಇಲ್ಲಿ ರಾಜವಂಶಸ್ಥ ಜಿಲ್ಲಾಧಿಕಾರಿಯನ್ನು ಚಿತ್ರೀಕರಿಸಲಾಗಿದೆ. ಜನಸಾಮಾನ್ಯರ ಬದುಕನ್ನು ಕೇಂದ್ರವಾಗಿಟ್ಟುಕೊಳ್ಳದೇ, ರಜನೀ ಎನ್ನುವ ಸೂಪರ್‌ಸ್ಟಾರ್‌ನ್ನು ಮುಂದಿಟ್ಟುಕೊಂಡು ಚಿತ್ರ ಕತೆಯನ್ನು ನಿರೂಪಿಸಿರುವುದರಿಂದ, ಅಣೆಕಟ್ಟಿನ ಕತೆ ಮೇಲಿಂದ ಮೇಲೆ ತೇಲಿ ಹೋದಂತೆ ಅನಿಸುತ್ತದೆ. ಆದರೆ ಇಡೀ ಚಿತ್ರದಲ್ಲಿ ರಜನೀಕಾಂತ್ ತನ್ನ ಯೌವನವನ್ನು ಇನ್ನೂ ಉಳಿಸಿಕೊಂಡು ಕುಣಿಯುವುದು, ಫೈಟ್ ಮಾಡುವುದು ಅವರ ಸೂಪರ್ ಸ್ಟಾರ್ ಗರಿಮೆಗೆ ಇನ್ನೊಂದು ಸ್ಟಾರ್‌ನ್ನು ಸೇರಿಸುತ್ತದೆ. ಇವೆಲ್ಲವುಗಳಿಗೆ ಪೂರಕವಾಗಿ ರಜನೀ ಹುಟ್ಟುಹಬ್ಬದ ದಿನವೇ ಚಿತ್ರ ಬಿಡುಗಡೆಯಾಗಿದೆ. ರಜನೀ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಯಥೇಚ್ಛ ಉಡುಗೊರೆಗಳಿವೆ. ಆದರೆ ಒಂದು ಚಿತ್ರವಾಗಿ ಲಿಂಗ ಕಾಡುವುದು ಕೇವಲ 45 ನಿಮಿಷಗಳು ಮಾತ್ರ.


 ಅಣೆಕಟ್ಟೊಂದರ ಪರಿಶೀಲನೆ ನಡೆಸುತ್ತಿರುವ ಸರಕಾರಿ ಅಧಿಕಾರಿಯೊಬ್ಬನ ಕೊಲೆಯೊಂದಿಗೆ ಲಿಂಗಾ ಚಿತ್ರದ ಕತೆ ಅನಾವರಣಗೊಳ್ಳುತ್ತದೆ. ಅಣೆಕಟ್ಟಿನ ಪಕ್ಕದಲ್ಲಿದ್ದ ದೇವಸ್ಥಾನವನ್ನು ತೆರೆಯಬೇಕೆನ್ನುವ ಅನಿವಾರ್ಯತೆ ಊರಿಗೆ ಒದಗಿ ಬರುತ್ತದೆ. ಅದನ್ನು ತೆರೆಯಬೇಕಾದರೆ, ಅದನ್ನು ಸ್ಥಾಪಿಸಿದ ಅಂದಿನ ರಾಜ ಲಿಂಗೇಶ್ವರ ವಂಶಸ್ಥರು ಬೇಕು. ಆದರೆ ಆತ ಎಲ್ಲಿದ್ದಾನೆ? ಆತ ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ಜೈಲಿನಲ್ಲಿ ಕನಸಿನ ಲೋಕದಲ್ಲಿ ಬದುಕುತ್ತಿದ್ದಾನೆ. ಕಳ್ಳನಾದ ಲಿಂಗಾ, ಕಳ್ಳತನದ ಪ್ರಕರಣವೊಂದಕ್ಕೆ ಸಂಬಂಧಿಸಿ ತನ್ನ ಹಿಂಬಾಲಕ (ಸಂತಾನಂ, ಕರುಣಾಕರನ್)ರೊಂದಿಗೆ ಜೈಲು ಸೇರಿರುತ್ತಾನೆ. ಇವರೆಲ್ಲರಿಗೂ ಟಿವಿ ವರದಿಗಾರ್ತಿ ಲಕ್ಷ್ಮಿ (ಅನುಷ್ಕಾ ಶೆಟ್ಟಿ) ಜಾಮೀನು ನೀಡಿ, ಜೈಲಿನಿಂದ ಹೊರತರುತ್ತಾಳೆ. ಲಿಂಗಾ, ಆತನ ಹುಟ್ಟೂರಾದ ಸೊಲೈಯೂರ್‌ಗೆ ಹಿಂತಿರುಗಿ, ಆತನ ತಾತಾ ರಾಜಾಲಿಂಗೇಶ್ವರನ್ (ರಜನಿಕಾಂತ್ ದ್ವಿಪಾತ್ರ) ನಿರ್ಮಿಸಿದ್ದ ಶಿವ ದೇವಾಲಯವನ್ನು ಮರಳಿ ತೆರೆಯಬೇಕೆಂಬುದೇ ಆಕೆಯ ಉದ್ದೇಶವಾಗಿರುತ್ತದೆ. ಆದರೆ ಲಿಂಗಾ ಅದಕ್ಕೆ ನಿರಾಕರಿಸುತ್ತಾನೆ. ಯಾಕೆಂದರೆ ಆತನಿಗೆ ತನ್ನ ತಾತನ ಬಗ್ಗೆ ತೀವ್ರ ದ್ವೇಷವಿರುತ್ತದೆ. ತನ್ನ ಸಂಪತ್ತೆಲ್ಲವನ್ನೂ ಜನರಿಗೆ ದಾನಮಾಡುವ ಮೂಲಕ ರಾಜಾಲಿಂಗೇಶ್ವರ, ಮೊಮ್ಮಗನಾದ ತನಗೆ ಚಿಕ್ಕಾಸು ಹಣವನ್ನು ಉಳಿಸಿಲ್ಲವೆಂಬುದೇ ಆತನ ಅಸಮಾಧಾನಕ್ಕೆ ಕಾರಣ. ಆದರೆ ಕೆಲವು ಸನ್ನಿವೇಶಗಳಿಂದಾಗಿ ಆತ ಸೊಲೈಯೂರಿಗೆ ತೆರಳಬೇಕಾಗುತ್ತದೆ. ಅಲ್ಲಿ ಆತನಿಗೆ ತನ್ನ ತಾತನ ಮಹಾತ್ಯಾಗದ ಅರಿವಾಗುತ್ತದೆ.   ಅಲ್ಲಿಂದ ತೆರೆಯ ಮೇಲೆ ಫ್ಲಾಶ್‌ಬ್ಯಾಕ್‌ನಲ್ಲಿ ರಾಜಾಲಿಂಗೇಶ್ವರನ್‌ನ ಕತೆ ಅನಾವರಣಗೊಳ್ಳುತ್ತದೆ.

ಕಥಾನಾಯಕ ‘ರಾಜಾ ಲಿಂಗೇಶ್ವರನ್’ ಇಡೀ ದಕ್ಷಿಣ ಭಾರತವನ್ನು ಆಳಿದ ಪ್ರತಿಷ್ಠಿತ ರಾಜವಂಶದ ಕುಡಿ. ರಾಜಮನೆತನಕ್ಕೆ ಸೇರಿದ್ದರೂ ರಾಜಾ ಲಿಂಗೇಶ್ವರನ್, ಅಪ್ಪನ ಇಚ್ಛೆಯಂತೆ ಸಿವಿಲ್ ಇಂಜಿನಿಯರ್ ಪದವಿ ಪಡೆದು ಮಧುರೈಗೆ ಕಲೆಕ್ಟರ್ ಆಗಿ ಎಂಟ್ರಿಕೊಡುತ್ತಾನೆ. ಆದರೆ ಸೊಲೈಯೂರ್‌ನ ಜನತೆಗೆ ಪ್ರಯೋಜನಕಾರಿಯಾದ ಅಣೆಕಟ್ಟನ್ನು ನಿರ್ಮಿಸಲು ಬ್ರಿಟಿಶರು ಬಿಡದೆ ಇದ್ದಾಗ ಆತ ಕಲೆಕ್ಟರ್ ಹುದ್ದೆಗೆ ರಾಜೀನಾಮೆ ನೀಡುತ್ತಾನೆ. ಆನಂತರ ಆತ ತನ್ನ ಪಿತ್ರಾರ್ಜಿತ ಹಣವನ್ನೇ ಬಳಸಿಕೊಂಡು ,ಜನರನ್ನು ಒಗ್ಗೂಡಿಸಿ ಅಣೆಕಟ್ಟು ನಿರ್ಮಿಸುತ್ತಾನೆ. ಆದರೆ ದುರಹಂಕಾರಿ ಬ್ರಿಟಿಶ್ ಕಲೆಕ್ಟರ್, ರಾಜಾಲಿಂಗೇಶ್ವರನಿಗೆ ಪ್ರತಿಯೊಂದು ಹಂತದಲ್ಲಿಯೂ ಅಡ್ಡಪಡಿಸಲು ಯತ್ನಿಸುತ್ತಾನೆ. ಇದಕ್ಕಾಗಿ ಆತ ಹಣ, ಜಾತಿ ಹಾಗೂ ಅಧಿಕಾರದ ಬಲವನ್ನು ದುರುಯೋಗಪಡಿಸಿಕೊಳ್ಳುತ್ತಾನೆ. ಲಿಂಗೇಶ್ವರನ್ ಅಣೆಕಟ್ಟನ್ನು ಪೂರ್ತಿಗೊಳಿಸಲು ತನ್ನ ಇಡೀ ಸಂಪತ್ತನ್ನು ಕಲೆಕ್ಟರ್‌ಗೆ ಧಾರೆಯೆರೆಯುತ್ತಾನೆ.

ಆನಂತರ ಕತೆ ಫ್ಲಾಶ್‌ಬ್ಯಾಕ್‌ನಿಂದ ಹೊರಬರುತ್ತದೆ.ಕಿತ್ತು ತಿನ್ನುವ ಬರಗಾಲ, ಸಹಸ್ರಾರು ಜನರ ಪರಿಶ್ರಮದಿಂದ ನಿರ್ಮಾಣವಾಗುವ ಅಣೆಕಟ್ಟು, ಅದನ್ನ ತಪ್ಪಿಸುವುದಕ್ಕೆ ರಾಜಕಾರಣಿಗಳ ಕುತಂತ್ರ, ಎಪ್ಪತ್ತೈದು ವರ್ಷಗಳಿಂದ ಮುಚ್ಚಲ್ಪಟ್ಟಿರುವ ಪುರಾತನ ಶಿವನ ದೇವಸ್ಥಾನ, ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುವುದಕ್ಕೆ ಪ್ರತ್ಯಕ್ಷವಾಗುತ್ತಾನೆ ಲಿಂಗಾ.
  ಚಿತ್ರದಲ್ಲಿ 64ನೇ ವಯಸ್ಸಲ್ಲೂ 24ರಂತೆ ಕಾಣಿಸುವ ರಜನಿ ತೆರೆಮೇಲೆ ಮ್ಯಾಜಿಕ್ ಮಾಡಿದ್ದಾರೆ. ಡಬ್ಬಲ್ ರೋಲ್‌ನಲ್ಲಿ ಅವರು ಕಮಾಲ್ ಮಾಡಿದ್ದಾರೆ. ‘ರಾಜಾ ಲಿಂಗೇಶ್ವರನ್ ಆಗಿ ರಾಜಗಾಂಭೀರ್ಯ ಮೆರೆಯುವ ರಜನಿ, ‘ಲಿಂಗಾ’ ಆಗಿ ಅಷ್ಟೇ ಸ್ಟೆೃಲಿಶ್ ಆಗಿ ಗಮನಸೆಳೆಯುತ್ತಾರೆ.
      
ರಿಪೋರ್ಟರ್ ಆಗಿ ಅನುಷ್ಕಾಶೆಟ್ಟಿ ನಟನೆ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೋನಾಕ್ಷಿ ತಮ್ಮ ಎಂದಿನ ಅಚ್ಚುಕಟ್ಟು ಅಭಿನಯ ನೀಡಿದ್ದಾರೆ. ಸಂತಾನಂ ಲವಲವಿಕೆಗೆ ಕಾರಣವಾಗುತ್ತಾರೆ. ಖಳನಾಯಕ ಹಾಗೂ ಕುತಂತ್ರಿ ರಾಜಕಾರಣಿಯಾಗಿ ಜಗಪತಿ ಬಾಬು ಮಿಂಚಿದ್ದಾರೆ.  ರತ್ನವೇಲು ಅವರ ಕ್ಯಾಮರಾ ಕೈಚಳಕ ಚಿತ್ರದ ಇನ್ನೊಂದು ಹೈಲೈಟ್. ಕರ್ನಾಟಕದ ಕೆಲವು ಸ್ಥಳಗಳನ್ನು ಅತ್ಯಂತ ರಮಣೀಯವಾಗಿ ಚಿತ್ರಿಸಿದ್ದಾರೆ. ರೆಹಮಾನ್ ಹಾಡು ಮತ್ತು ಸಂಗೀತ ಎರಡೂ ಇಂಪಾಗಿವೆ. ರಜನಿಯ ಇಮೇಜ್‌ಗೆ ಹೆಚ್ಚು ಮಹತ್ವ ನೀಡಿರುವ ನಿರ್ದೇಶಕ ರವಿಕುಮಾರ್ ನೈಜತೆಗೆ ಹೆಚ್ಚು ಒತ್ತು ನೀಡಿದಂತಿಲ್ಲ. ಹಲವು ದಶ್ಯಗಳಲ್ಲಿ ‘ಲಿಂಗಾ’, ರಜನಿಯ ಸೂಪರ್ ಹಿಟ್ ಚಿತ್ರಗಳಾದ ಪಡೈಯಪ್ಪ ಹಾಗೂ ಮುತ್ತುವನ್ನು ನೆನಪಿಸುತ್ತಾನೆ.


ಚಲಿಸುತ್ತಿರುವ ರೈಲೊಂದರಲ್ಲಿ ಫೈಟಿಂಗ್ ದಶ್ಯ ಪರವಾಗಿಲ್ಲ. ಆದರೆ ಲಿಂಗಾದ ಕ್ಲೆೃಮಾಕ್ಸ್‌ನಲ್ಲಿ ಸ್ಟಂಟ್ ದಶ್ಯಗಳು ಮಾತ್ರ ಪ್ರೇಕ್ಷಕರನ್ನು ನಿರಾಶೆಯ ಕೂಪಕ್ಕೆ ದೂಡುತ್ತದೆ.ಲಿಂಗಾ ಬೈಕ್‌ನಿಂದ ಗಾಳಿಬಲೂನ್ ಮೇಲೆೆ ಜಿಗಿಯುವುದು,ಬಲೂನ್‌ನಲ್ಲಿ ನೇತಾಡುತ್ತಲೇ ಬಾಂಬನ್ನು ತುಳಿಯುವುದು ಇವೆಲ್ಲವೂ ಅತ್ಯಂತ ಅಸಹಜವಾಗಿ ಹಾಗೂ ಹಾಸ್ಯಾಸ್ಪದವಾಗಿ ಮೂಡಿಬಂದಿದೆ. ಇಂತಹ ಕಾಮಿಡಿಗಳಿಗಾಗಿ ರಜನಿಕಾಂತ ಈಗಾಗಲೇ ಪ್ರಸಿದ್ಧರಾಗಿರೋದರಿಂದ ಅವರ ಚಿತ್ರಕ್ಕೆ ಇದು ತಕ್ಕಂತೆ ಇದೆ ಎಂದು ಸಹಿಸಿ ಕೊಳ್ಳಬೇಕಷ್ಟೇ. 

Tuesday, December 9, 2014

ಭೂತದ ಬಾಯಲ್ಲಿ ಭಗವದ್ಗೀತೆ.....

" ಭೂತದ ಬಾಯಲ್ಲಿ ಭಗವದ್ಗೀತೆ'' ಎಂಬ ಒಂದು ಗಾದೆಯಿದೆ. ಕರಾವಳಿ ಭಾಗದಲ್ಲಿ ತುಳು ದೈವಗಳಿಗೆ "ಭೂತಗಳು'' ಎಂದು ಕರೆಯುತ್ತಾರೆ. ಭೂತದ ಕೋಲಗಳಲ್ಲಿ ದೈವಗಳು ಮನುಷ್ಯರ ಮೇಲೆಯೇ ಆವಾಹನೆಯಾಗಿ, ಭಕ್ತರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತವೆ. ಭೂತಗಳ ಇತಿಹಾಸ, ಮಹಿಮೆಗಳನ್ನು ಹೇಳುವ ಹಾಡು ಗಳನ್ನು "ಪಾಡ್ದನ'' ಎಂದು ಕರೆಯುತ್ತಾರೆ. ಭೂತಗಳು ಪಾಡ್ದನಗಳೊಂದಿಗೆ ಚೈತನ್ಯವನ್ನು ಪಡೆದುಕೊಳ್ಳುತ್ತವೆ. ಭೂತದ ಕೋಲಗಳಲ್ಲಿ ಭಗವದ್ಗೀತೆಗೆ ಯಾವ ಸಂಬಂಧವೂ ಇಲ್ಲ. ಒಂದಕ್ಕೊಂದು ಕೂಡಿಕೊಳ್ಳದ ಸಂಸ್ಕೃತಿಗಳು ಅವು. ಭೂತಸ್ಥಾನಗಳಲ್ಲಿ ಜಾಗಟೆ, ಶಂಖ, ಭಜನೆಗಳಿಗೂ ಸ್ಥಾನವಿಲ್ಲ. ಆದುದರಿಂದಲೇ "ಭೂತದ ಬಾಯಲ್ಲಿ ಭಗವದ್ಗೀತೆ'' ಎಂಬ ಗಾದೆ ಹುಟ್ಟಿತು. ಭೂತಗಳು ಭಗವದ್ಗೀತೆಯನ್ನು ಆಡು ವುದು ಎಷ್ಟು ಅಭಾಸ ಎನ್ನುವುದನ್ನು ಈ ಗಾದೆ ಧ್ವನಿಸುತ್ತದೆ. ತುಳುವರ ಧಾರ್ಮಿಕ ಬದುಕಿನಲ್ಲಿ ಬ್ರಾಹ್ಮಣರ ಪ್ರವೇಶ ಕಾಣಿಸಿಕೊಳ್ಳುತ್ತಿರುವುದು ಈಚಿನ ಶತಮಾನಗಳಲ್ಲಿ. ತುಳುವರ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ವೈದಿಕ ಹಿನ್ನೆಲೆಯಿರಲಿಲ್ಲ. ಈ ಕಾರಣದಿಂದಲೇ ಭೂತಗಳಿಗೆ ಭಗವದ್ಗೀತೆ ಬಹು ದೂರ.

ಇತ್ತೀಚೆಗೆ ಸರಕಾರ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿಸುವ ಹುನ್ನಾರಕ್ಕಿಳಿದಿದೆ. ಇಲ್ಲಿ ಪ್ರಶ್ನೆ ಕೇವಲ ಭಗವದ್ಗೀತೆ ಎನ್ನುವ ಒಂದು ಗ್ರಂಥಕ್ಕೆ ಸಂಬಂಧಿಸಿದುದು ಮಾತ್ರವಲ್ಲ. ಅದು ಪ್ರತಿಪಾದಿಸುವ ಮೌಲ್ಯಗಳಿಗೆ ಸಂಬಂಧಿಸಿದ್ದೂ ಆಗಿರುವುದರಿಂದ, ಇದನ್ನು ನಾವು ಗಂಭೀರವಾಗಿ ಸ್ವೀಕರಿಸಬೇಕಾಗಿದೆ. ಈ ದೇಶದ ಎರಡು ಮಹಾಕಾವ್ಯಗಳು ರಾಮಾಯಣ ಮತ್ತು ಮಹಾಭಾರತ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವುಗಳು ತಮ್ಮ ಕಾವ್ಯ ಶಕ್ತಿಯ ಮೂಲಕವೇ ವಿಶ್ವ ವ್ಯಾಪಿಯಾಗಿ ಹರಡಿಕೊಂಡಿವೆ. ಮೋದಿ ಅದಕ್ಕೆ ಮಾನ್ಯತೆ ನೀಡಲಿ, ನೀಡದಿರಲಿ ಅವರೆಡೂ ಕಾವ್ಯಗಳು ವಿಶ್ವಕ್ಕೆ ನೀಡಿದ ಕೊಡುಗೆ ಪ್ರಶ್ನಾತೀತ.  ಆದರೆ ಇದೇ ಸಂದರ್ಭದಲ್ಲಿ ಭಗವದ್ಗೀತೆಯನ್ನು ಈ ನೆಲದ ಜನ ಆ ದೃಷ್ಟಿಯಿಂದ ನೋಡಿಕೊಂಡು ಬಂದಿಲ್ಲ. ಭಗವದ್ಗೀತೆ ತನ್ನ ಆಳದಲ್ಲಿ ಕಾವ್ಯೇತರವಾದ ಕೆಲವು ಅಜೆಂಡಾಗಳನ್ನು ಹೊಂದಿದೆ. ಮತ್ತು ಆ ಅಜೆಂಡಾಗಳು  ಈ ದೇಶವನ್ನು ತಲೆತಲಾಂತರಗಳಿಂದ ಗುಲಾಮಗಿರಿಗೆ ಈಡು ಮಾಡುತ್ತಾ ಬಂದಿದೆ. ಅದು ಪ್ರತಿಪಾದಿಸುವ ಹಲವು ನೀತಿ ಸಂಹಿತೆಗಳು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿವೆ. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಎಂದು ಕರೆಯುವುದೆಂದರೆ, ಗೀತೆ ಪ್ರತಿಪಾದಿಸುವ ವರ್ಣಾಶ್ರಮ ವೌಲ್ಯಗಳನ್ನು ರಾಷ್ಟ್ರದ ಮೇಲೆ ಹೇರುವುದು ಎಂದೇ ಅರ್ಥ. ಅದರ ಲಾಭ ಯಾರಿಗೆ, ನಷ್ಟ ಯಾರಿಗೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಸದ್ಯಕ್ಕೆ ಆರೆಸ್ಸೆಸ್ ಬಳಗ ಭಾರತದ ಶಿಕ್ಷಣವನ್ನು ಬುಡಮೇಲು ಮಾಡುತ್ತಿರುವ ಸಂದರ್ಭದಲ್ಲೇ, ಅದಕ್ಕೆ ಪೂರಕವಾಗಿ ಭಗವದ್ಗೀತೆಯನ್ನು ನೆಲೆಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಕೇವಲ ಸರಕಾರದ ಒಂದು ರಾಜಕೀಯ ತಂತ್ರವಾಗಿರದೆ, ಆರೆಸ್ಸೆಸ್ ಅಜೆಂಡಾದ ಒಂದು ಭಾಗ ಆಗಿದೆ.


 ಭಗವದ್ಗೀತೆ ಮಹಾಭಾರತದ ಒಂದು ಭಾಗ ಎಂದು ಬ್ರಾಹ್ಮಣರು ದೇಶವನ್ನು ನಂಬಿಸಿಕೊಂಡು ಬಂದಿದ್ದಾರಾದರೂ ಇಂದಿಗೂ ಈ ಕುರಿತಂತೆ ಹಲವು ಶ್ರೇಷ್ಠ ವಿದ್ವಾಂಸರು ತಮ್ಮ ಆಕ್ಷೇಪಗಳನ್ನು ಎತ್ತಿದ್ದಾರೆ. "ಮಹಾಭಾರತ ಕಾವ್ಯ''ದೊಳಗೆ ಕಾಲಾಂತರದಲ್ಲಿ "ಭಗವದ್ಗೀತೆ''ಯನ್ನು ತುರುಕಿಸಲಾಯಿತು ಎನ್ನುವುದನ್ನು ಹಲವು ವಿದ್ವಾಂಸರು ಈಗಾಗಲೇ ಬರೆದಿದ್ದಾರೆ. ಈ ಕುರಿತಂತೆ ಚರ್ಚಿಸಿದ್ದಾರೆ. ಇರಾವತಿ ಕರ್ವೆಯವರ ಕೃತಿಯಲ್ಲೂ ಭಗವದ್ಗೀತೆ ಮಹಾಭಾರತದ ಭಾಗ ಹೌದೋ, ಅಲ್ಲವೋ ಎಂಬ ಕುರಿತಂತೆ ಚರ್ಚೆ ಬರುತ್ತದೆ. ಮಹಾಭಾರತಕ್ಕೆ ಕಾವ್ಯವೇ ಮುಖ್ಯ. ಅಲ್ಲಿ ಕಲೆಯೇ ಅಜೆಂಡಾ. ಆದರೆ ಭಗವದ್ಗೀತೆ ಕಾವ್ಯದ ಉದ್ದೇಶವನ್ನು ಮೀರಿ, ಒಂದು ನಿರ್ದಿಷ್ಟ ಸಂಹಿತೆಯನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ರಚಿತವಾಗಿರುವುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಕರ್ಮ ಸಿದ್ಧಾಂತ ಮತ್ತು ವರ್ಣಾಶ್ರಮ ಸಿದ್ಧಾಂತಗಳ ತಳಹದಿಯ ಮೇಲೆಯೇ ಇಂದು ಜಾತಿ ವ್ಯವಸ್ಥೆ ನಮ್ಮನ್ನು ವಿಷ ವಕ್ಷದಂತೆ ಸುತ್ತಿಕೊಂಡಿದೆ ಎನ್ನುವುದನ್ನು ಅರ್ಥ ಮಾಡಿಕೊಂಡಾಗಲೇ, ಭಗವದ್ಗೀತೆ ಹೇಗೆ ಮಹಾಭಾರತದೊಳಗೆ ನುಸುಳಿಕೊಂಡಿತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಭಗವದ್ಗೀತೆ ಇಡೀ ಮನುಷ್ಯ ಕುಲವನ್ನು ಚರ್ಚಿಸುತ್ತದೆ ಎಂದೋ ಅಥವಾ ಅದು ಮನುಷ್ಯ ವಿರೋಧಿಯಾಗಿದೆ ಎಂದೋ ಒಂದೇ ಏಟಿಗೆ ನಿರ್ಧರಿಸುವುದು ತಪ್ಪು. ಆದರೆ, ಅದು ಬ್ರಾಹ್ಮಣರ ಹಕ್ಕುಗಳನ್ನು, ಹಿತಾಸಕ್ತಿಗಳನ್ನು ಕಾಪಾಡುತ್ತದೆಯಾದುದರಿಂದ, ಅದು ಬ್ರಾಹ್ಮಣ ಧರ್ಮದ ಗ್ರಂಥವಾಗುತ್ತದೆ ಮತ್ತು ಅದರ ಅನುಷ್ಠಾನದ ಸರ್ವ ಲಾಭಗಳನ್ನು ತಮ್ಮದಾಗಿಸಿಕೊಂಡು ಬಂದಿರುವುದು ಈ ದೇಶದ ಬ್ರಾಹ್ಮಣರೇ ಹೊರತು, ಶೂದ್ರ, ಚಂಡಾಲ, ಮ್ಲೇಚ್ಛ ಸಮುದಾಯಗಳಲ್ಲ. ಅದು ಇಡೀ ಹಿಂದೂ ಸಮುದಾಯದ ಹಿತಾಸಕ್ತಿ ಯನ್ನು ತನ್ನದಾಗಿಸಿ ಕೊಂಡು ರಚಿಸಲ್ಪಟ್ಟಿಲ್ಲ. ಆದುದರಿಂದಲೇ ಇಂದು ಭಗವದ್ಗೀತೆಯನ್ನು ರಾಷ್ಟ್ರೀಯ ಕೃತಿಯಾಗಿ ಒಪ್ಪಲು ವ್ಯಾಪಕ ಪ್ರತಿಭಟನೆ ವ್ಯಕ್ತವಾ ಗುತ್ತಿದೆ.

  ಇಷ್ಟಕ್ಕೂ ಭಗವದ್ಗೀತೆ ರಚನೆಯಾಗಿ ಐದು ಸಾವಿರ ವರ್ಷಗಳು ಕಳೆದಿವೆ ಎಂದೂ ನಾವೆಲ್ಲ ನಂಬಿದ್ದೇವೆ ಮತ್ತು ಅದನ್ನು ಆಚರಿಸುತ್ತಿದ್ದೇವೆ. ಆದರೆ "ಹಿಂದೂ''ಎನ್ನುವ ಶಬ್ದಕ್ಕೆ ಒಂದು ಸಾವಿರಕ್ಕಿಂತ ಅಧಿಕ ವರ್ಷಗಳ ಇತಿಹಾಸವಿಲ್ಲ. ಹೊರಗಿನಿಂದ ಬಂದವರು, ಈ ನೆಲವನ್ನು ಸಮಗ್ರವಾಗಿ ಗುರುತಿಸಲು ಹಿಂದೂ ಎನ್ನುವ ಶಬ್ದವನ್ನು ಬಳಸಿದರು. ಹೀಗಿರುವಾಗ ಹಿಂದೂ ಧರ್ಮದ ಏಕೈಕ ಪವಿತ್ರ ಗ್ರಂಥವಾಗಿ ನಾವು ಭಗವದ್ಗೀತೆಯನ್ನು ಗುರುತಿಸುವುದು ಒಂದು ಅಭಾಸ. ಇಂದು ನಾವು ಗ್ರಹಿಸುವ ಹಿಂದೂ ಧರ್ಮಕ್ಕೆ ಒಂದು ನಿರ್ದಿಷ್ಟ ಧರ್ಮ ಗ್ರಂಥವೆನ್ನುವುದು ಇಲ್ಲವೇ ಇಲ್ಲ. ಅದು ನೂರಾರು ವೈವಿಧ್ಯಗಳಲ್ಲಿ ಅರಳಿ ನಿಂತ ಧರ್ಮ. ವೇದಗಳು, ಉಪನಿಷತ್‌ಗಳು, ರಾಮಾಯಣ, ಮಹಾಭಾರತಗಳು ಹೀಗೆ...ಬೇರೆ ಬೇರೆ ಗ್ರಂಥಗಳು, ತತ್ವಗಳು ಈ ಧರ್ಮವನ್ನು ರೂಪಿಸಿವೆ. ಅವೆಲ್ಲವನ್ನು ಬದಿಗೆ ತಳ್ಳಿ, ಭಗವದ್ಗೀತೆಯನ್ನು ಮುಂದಕ್ಕೆ ತಂದಿರುವುದು ಬ್ರಾಹ್ಮಣ್ಯ ಮನಸ್ಸುಗಳು. ಬ್ರಾಹ್ಮಣ್ಯದ ಹಿರಿಮೆಯನ್ನು ಎತ್ತಿ ಹಿಡಿಯುವ ಏಕೈಕ ಉದ್ದೇಶದಿಂದ ಅದನ್ನು ಮುನ್ನೆಲೆಗೆ ತರಲಾಯಿತು. ಇದೀಗ ಅದೇ ಮನಸ್ಸುಗಳು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸುವ ಮೂಲಕ, ಅದು ಪ್ರತಿಪಾದಿಸುವ ವರ್ಣಾಶ್ರಮ ವ್ಯವಸ್ಥೆಯನ್ನು ಮರು ಸ್ಥಾಪಿಸಲು ಯತ್ನಿಸುತ್ತಿವೆ.


  ದಲಿತರಿಗೆ ಮಂಟೇಸ್ವಾಮಿ ಕಾವ್ಯ ಪರಮ ವೌಲ್ಯಗಳಿಂದ ಕೂಡಿದೆ. ತುಳುವರಿಗೆ ಪಾಡ್ದನಗಳಲ್ಲಿ ಸತ್ಯಗಳಿವೆ. ಲಿಂಗಾಯತರಿಗೆ, ವೀರಶೈವ ಸಮಾಜದ ಜನರಿಗೆ ವಚನ ಸಾಹಿತ್ಯದಲ್ಲೇ ಬದುಕಿನ ಪರಮ ವೌಲ್ಯಗಳಿವೆ. ಈ ದೇಶದ ಬುಡಕ್ಕಟ್ಟು ಜನರು, ಆದಿವಾಸಿಗಳಿಗೆ ಅವರದೇ ಆದರ್ಶಗಳುಳ್ಳ ಜಾನಪದೀಯವಾಗಿರುವ ದರ್ಶನಗಳಿವೆ. ಅಂತೆಯೇ ಸಿಖ್ಖರ ಧರ್ಮಗ್ರಂಥ "ಗ್ರಂಥ ಸಾಹೇಬ'' ಅತ್ಯಂತ ವಿಶಿಷ್ಟ ವೌಲ್ಯಗಳನ್ನು ತನ್ನದಾಗಿಸಿಕೊಂಡಿದೆ. ಸೂಫಿ ಸಂತರ ಶಬದ್‌ಗಳು, ದೋಹೆಗಳ ಸಾರವೂ ಅಲ್ಲಿವೆ. ಶೇಖ್ ಫರೀದ್, ಸಂತ ಕಬೀರರಂತಹ ಮಹಾನ್ ಸಂತರ ಸಾಲುಗಳನ್ನು ತನ್ನದಾಗಿಸಿಕೊಂಡಿರುವ ಗ್ರಂಥ ಅದು. ಭಗವದ್ಗೀತೆಯೊಂದೇ ಈ ದೇಶದ ಜನರಿಗೆ ಬದುಕುವ ಮಾರ್ಗವನ್ನು ಕೊಟ್ಟುದೇ ಆಗಿದ್ದರೆ, ಈ ದೇಶಕ್ಕೆ ಪರಕೀಯರು ಆಗಮಿಸುತ್ತಲೇ ಇರಲಿಲ್ಲ. ಅಸ್ಪೃಶ್ಯತೆ ತಾಂಡವವಾಡುತ್ತಾ, ಬಹುಸಂಖ್ಯಾತ ಕೆಳ ಜಾತಿಯ ಜನರು ಬೆರಳೆಣಿಕೆ ಜನರ ಕೈಯಲ್ಲಿ ಗುಲಾಮರಾಗಿ ಕೀಳಾದ ಬದುಕನ್ನು ಬದುಕುವ ಸ್ಥಿತಿ ಬರುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ಸಂವಿಧಾನವೊಂದನ್ನು ರಚಿಸುವ ಅಗತ್ಯವೂ ಇರಲಿಲ್ಲ. ಈ ಕಾರಣದಿಂದಲೇ, ಈ ದೇಶದ ಜನರನ್ನು ಎಲ್ಲ ಧರ್ಮ ಗ್ರಂಥಗಳಿಂದ ಸ್ವತಂತ್ರಗೊಳಿಸಿದ ಸಂವಿಧಾನವೇ ರಾಷ್ಟ್ರೀಯ ಗ್ರಂಥ. ಇದಕ್ಕೆ ಪರ್ಯಾಯವಾಗಿ ಇನ್ನೊಂದು ಗ್ರಂಥವನ್ನು ತಂದಿಡುವ ಯಾವುದೇ ಹುನ್ನಾರ ಪ್ರಜಾಸತ್ತಾತ್ಮಕ ವ್ಯವಸ್ಥೆಯ ವಿರುದ್ಧ ನಡೆಸುವ ದಾಳಿಯಾಗಿದೆ.

Sunday, December 7, 2014

ಕುರ್‌ಆನ್‌ನ ಆ ಏಳು ಸಾಲುಗಳು....

ನನ್ನ ಬಾಲ್ಯವನ್ನು ರಮ್ಯಗೊಳಿಸಿದ್ದು ಮಹಾಭಾರತ, ರಾಮಾಯಣದ ಕತೆಗಳು. ನಾನು ಕುರ್‌ಆನ್ ಓದುವ ಮೊದಲೇ ರಾಮಾಯಣ, ಮಹಾಭಾರತಗಳನ್ನು ಓದಿ ಮುಗಿಸಿದ್ದೆ ಮಾತ್ರವಲ್ಲ, ಆ ರಮ್ಯ ಲೋಕದಲ್ಲಿ ನಾನೂ ಒಂದು ಪಾತ್ರವಾಗಿ ಬದುಕುತ್ತಿದ್ದೆ. ಹಾಗೆಯೇ ನನ್ನ ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಚರ್ಚ್ ಶಾಲೆಗಳಲ್ಲಿ ಮುಗಿಸಿರುವುದರಿಂದ ಕೆಲವು ಬೈಬಲ್‌ಗಳ ಕತೆಗಳನ್ನೂ ನನ್ನದಾಗಿಸಿಕೊಂಡಿದ್ದೆ. ಆದರೆ ಕುರ್‌ಆನ್ ಮಾತ್ರ ನನಗೆ ಹತ್ತಿರವಿದ್ದೂ ತುಂಬಾ ದೂರವಿತ್ತು. ಅದಕ್ಕೆ ಅದರದೇ ಕಾರಣಗಳಿದ್ದವು. ನನ್ನಿಂದ ಕುರ್‌ಆನ್ ದೂರವಿರುವುದಕ್ಕೆ ಅಂದಿನ ವೌಲ್ವಿಗಳೇ ಪ್ರಧಾನ ಕಾರಣವಾಗಿದ್ದರು ಎನ್ನುವುದೇ ಕುತೂಹಲಕರ ಅಂಶವಾಗಿತ್ತು.

 ನಾನು ಶಾಲೆಗೆ ಹೆಜ್ಜೆಯಿಡುವ ಹೊತ್ತಿನಲ್ಲೇ ಮದರಸಕ್ಕೂ ಪಾದವೂರಿದ್ದೆ. ಬೆಳ್ಳಂಬೆಳಗ್ಗೆ 6 ಗಂಟೆಗೆ ಮದರಸಕ್ಕೆ ಹೋಗಿ ಅಲ್ಲಿ ಎರಡುಗಂಟೆ ಧಾರ್ಮಿಕ ಶಿಕ್ಷಣ ಕಲಿತು ಅಲ್ಲಿಂದ ಮನೆಗೆ ತೆರಳಿ ತಿಂಡಿ ತಿಂದು ಮತ್ತೆ ಶಾಲೆಗೆ ಹೊರಡಬೇಕಾಗಿತ್ತು. ಹೀಗೆ ಆಗಿನ ಐದನೇ ತರಗತಿಯವರೆಗೆ ನಾನು ಮದರಸದಲ್ಲಿ ಕಲಿತೆನಾದರೂ ಕುರ್‌ಆನ್ ಎಂದರೆ ಏನು ಎನ್ನುವುದು ನನಗೆ ಸ್ಪಷ್ಟವಾಗದೇ ಹೋದುದಕ್ಕೆ ನನ್ನ ವೈಯಕ್ತಿಕ ಪಾಲು ಏನೂ ಇರಲಿಲ್ಲ. ಮದರಸದಲ್ಲಿ ನಮಗೆ ಕುರ್‌ಆನ್ ಕಲಿಸುತ್ತಿದ್ದ ವೌಲ್ವಿಗಳು ಕೇರಳದಿಂದ ಬಂದವರು. ಅವರು ಅರಬೀ ಅಕ್ಷರಗಳನ್ನು ಓದಲು ಮಾತ್ರ ನಮಗೆ ಕಲಿಸುತ್ತಿದ್ದರು. ಅರಬೀ ಅರ್ಥಗಳನ್ನು ಹೇಳಿಕೊಡುತ್ತಿರಲಿಲ್ಲ. ಕುರ್‌ಆನನ್ನು ರಾಗವಾಗಿ ಓದುತ್ತಿದ್ದೆನಾದರೂ ನನಗೆ ಅದರೊಳಗೆ ಏನಿದೆ ಎನ್ನುವುದು ತಿಳಿದದ್ದು ಮದರಸ ತೊರೆದ ಬಳಿಕ. ಮದರಸದಲ್ಲಿ ವೌಲ್ವಿಗಳು ಕುರ್‌ಆನನ್ನು ಓದಲು, ಕಂಠಪಾಠ ಮಾಡಲು, ಗೌರವಿಸಲು ಅಷ್ಟೇ ಕಲಿಸಿದರು. ಎಲ್ಲಾದರೂ ಅರಬೀ ಅಕ್ಷರಗಳಿದ್ದ ಕಾಗದದ ಚೂರುಗಳನ್ನು ಕಂಡರೂ ನಾವು ಅದನ್ನು ಕಣ್ಣಿಗೊತ್ತಿ ಬಾವಿಗೆ ಹಾಕಿ ಬಿಡುತ್ತಿದ್ದೆವು. ಕುರ್‌ಆನ್ ಕಾಗದದ ಚೂರುಗಳು ನೆಲ್ಲದಲ್ಲಿ, ಧೂಳಿನಲ್ಲಿ , ಹೊಲಸಿನಲ್ಲಿ ಬೆರೆತು ಹೋಗಬಾರದು ಎನ್ನುವ ಕಾರಣಕ್ಕೆ. ಅರಬೀ ಅಕ್ಷರಗಳಿರುವ ಎಲ್ಲ ಕಾಗದಗಳೂ ಕುರ್‌ಆನ್ ಎಂದೇ ಭಾವಿಸಿದ್ದೆವು. ಅರಬೀ ಅಕ್ಷರಗಳಲ್ಲಿ ಸಿನಿಮಾ ಹಾಡುಗಳನ್ನು ಬರೆಯಬಹುದು ಎನ್ನುವುದೆಲ್ಲ ನಮಗೆ ಆಗ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಕುರ್‌ಆನ್‌ನ ಗಮಕ ಹೊರತು ಪಡಿಸಿ, ಅದರೊಳಗಿರುವ ಒಂದು ಶಬ್ದದ ಅರ್ಥವೂ ನನಗೆ ಗೊತ್ತಿರಲಿಲ್ಲ. ನಾವು ಮದರಸದಲ್ಲಿ ಎಲ್ಲೂ ಸಲ್ಲದ ಒಂದು ವಿಶಿಷ್ಟ ಮಾಧ್ಯಮದಲ್ಲಿ ಕಲಿತೆವು. ನಮ್ಮ ಮನೆ ಭಾಷೆ ಬ್ಯಾರಿ. ಇದು ಮಲಯಾಳಕ್ಕಿಂತ ಭಿನ್ನ. ಆಗಿನ ಕಾಲದಲ್ಲಿ ನಮ್ಮ ಮದರಸಗಳಿಗೆ ಕೇರಳದಿಂದ ವೌಲ್ವಿಗಳನ್ನು ನೇಮಕ ಮಾಡಲಾಗುತ್ತಿತ್ತು. ನಮ್ಮೂರಿನಲ್ಲಿ ವೌಲ್ವಿ ಕಲಿತ ವಿದ್ವಾಂಸರು ಇಲ್ಲದೆ ಇರುವುದು ಅದಕ್ಕೆ ಕಾರಣವಿರಬೇಕು. ಅವರಿಗೆ ಮಲಯಾಳಂ ಬಿಟ್ಟರೆ ಬೇರೆ ಭಾಷೆಯೇ ಗೊತ್ತಿಲ್ಲ. ಆದುದರಿಂದ ನಮಗೆ ಮಲಯಾಳಂ ಮಾಧ್ಯಮದಲ್ಲೇ ಕಲಿಸುತ್ತಿದ್ದರು. ಅಕ್ಷರಗಳು ಅರೆಬಿಕ್‌ನಲ್ಲಿ ಬರೆಯಲಾಗುತ್ತಿತ್ತು. ಇದೊಂದು ರೀತಿ ಅರೇಬಿಕ್ ಮಲಯಾಳಂ ಮಾಧ್ಯಮ. ಐದನೆಯ ತರಗತಿಯವರೆಗೂ ಮದರಸದಲ್ಲಿ ಕಲಿತ ನನ್ನ ಸ್ಥಿತಿ ಇದಾಗಿತ್ತು. 


ಅದೊಂದು ದಿನ ನನ್ನ ತಂದೆಗೆ ಯಾರೋ ವೌಲವಿಯೊಬ್ಬರು ಸಿಕ್ಕಿದವರು ‘ಕುರ್‌ಆನ್‌ನ ‘ಸೂರಾ ವಾಕಿಯಾ’ ಅಧ್ಯಾಯವನ್ನು ಪ್ರತಿ ದಿನ ರಾತ್ರಿ ಪಠಿಸಿದರೆ ಆ ಮನೆಯಲ್ಲಿ ಶ್ರೀಮಂತಿಕೆ ತುಂಬಿ ತುಳುಕುತ್ತದೆ’’ ಎಂದು ಹೇಳಿದ್ದರು. ಅಂದು ರಾತ್ರಿ ಮನೆಗೆ ಬಂದವರೇ ‘‘ಇನ್ನು ಮುಂದೆ ಪ್ರತಿ ರಾತ್ರಿ ನೀನು ಸೂರಾ ವಾಕಿಯಾವನ್ನು ಓದಬೇಕು’’ ಎಂದು ಆಜ್ಞೆ ಮಾಡಿದರು. ಅಷ್ಟೇ ಅಲ್ಲ, ಪ್ರತಿ ರಾತ್ರಿ ತಮ್ಮ ಅಂಗಡಿಯಿಂದ ಬಂದವರು ತಾಯಿಯಲ್ಲಿ ‘‘ಮಗ ವಾಕಿಯಾ ಓದಿದನೋ?’’ ಎಂದು ವಿಚಾರಿಸುತ್ತಿದ್ದರು. ನನಗೋ ಹಿಂಸೆ. ಕೆಲವೊಮ್ಮೆ ಓದದೇ ಹಾಗೇ ಮಲಗಿ ಬಿಟ್ಟರೆ, ತಂದೆ ಬಂದು ನನ್ನನ್ನು ಎಬ್ಬಿಸಿ, ಗದರಿಸಿ ಓದಿಸುತ್ತಿದ್ದರು. ಸುಮಾರು ಎರಡು ಮೂರು ವರ್ಷ ನಾನು ಈ ಅಧ್ಯಾಯವನ್ನು ಪ್ರತಿ ರಾತ್ರಿ ಓದುತ್ತಿದ್ದೆ. ಈ ಅಧ್ಯಾಯ ಅದೆಷ್ಟು ಚೆನ್ನಾಗಿ ನನಗೆ ಕಂಠಪಾಠವಾಗಿತ್ತು ಎಂದರೆ, ಕುರ್‌ಆನ್ ಬಿಡಿಸದಯೇ ಈ ಅಧ್ಯಾಯವನ್ನು ಪಟಪಟ ಓದುತ್ತಿದ್ದೆ. ಒಮ್ಮೆ ಮುಗಿಸಿ ಬಿಟ್ಟರೆ ಸಾಕು ಎನ್ನುವ ಹಾಗೆ. ಆದರೆ ಈ ಅಧ್ಯಾಯ ಓದಿದ ಬಳಿಕ ತಂದೆ ಶ್ರೀಮಂತನಾದದ್ದು ನನ್ನ ಗಮನಕ್ಕೇನೂ ಬಂದಿರಲಿಲ್ಲ. ಇತ್ತೀಚೆಗೆ ಇದನ್ನು ನನ್ನ ಗೆಳೆಯರೊಬ್ಬರಲ್ಲಿ ಹೇಳಿ ನಕ್ಕಾಗ ಅವರು ಹೀಗೆ ವಿವರಿಸಿದರು ‘‘ಓದಿದ್ದು ನೀನು. ಅದರಿಂದ ನಿನಗೆ ಒಳ್ಳೆಯದಾಗಿದೆ. ನಿನ್ನ ತಂದೆ ಓದಿದ್ದರೆ ಅವರಿಗೆ ಒಳ್ಳೆಯದಾಗಿತ್ತು. ಯಾರು ಓದಿದ್ದಾರೆಯೋ ಅವರಿಗೆ ತಾನೆ ಅದರ ಫಲ’’.
 

 ವಾಕಿಯಾ ಆಧ್ಯಾಯವನ್ನು ಪಟಪಟ ಓದುತ್ತಿದ್ದೆನಾದರೂ ನನಗೆ ಅದರ ಅರ್ಥ ಏನು ಎನ್ನುವುದು ಗೊತ್ತೇ ಇರಲಿಲ್ಲ. ಅದರ ಒಳಗೆ ಏನಿರಬಹುದು? ಅದು ಏನು ಹೇಳುತ್ತಿರಬಹುದು? ಇದನ್ನು ಓದಿದರೆ ಶ್ರೀಮಂತನಾಗುವುದು ಹೇಗೆ? ಬರ್ಕತ್ತು ಬರುವುದು ಹೇಗೆ? ಎಂದೆಲ್ಲ ಆಗ ಯೋಚಿಸುತ್ತಿದ್ದೆ. ಆದರೆ ಅದರ ಅರ್ಥವನ್ನು ವಿವರಿಸುವ, ಹೇಳಿಕೊಡುವ ಯಾರೂ ನನ್ನ ಸುತ್ತಮುತ್ತಲಿರಲಿಲ್ಲ. ನನ್ನ ತಂದೆಗೂ ಅದರ ಅರ್ಥಗೊತ್ತಿರಲಿಲ್ಲ. ದಿನಾ ರಾತ್ರಿ ‘ಯಾಸೀನ್’ ಅಧ್ಯಾಯ ಓದಿ ಮಲಗುವ ಅಮ್ಮನಿಗೂ ಅದರ ಅರ್ಥಗೊತ್ತಿರಲಿಲ್ಲ. ಅರ್ಥಗೊತ್ತಿರಬೇಕಾಗಿಲ್ಲ ಎಂದು ನಾವು ಬಲವಾಗಿ ನಂಬಿದ್ದೆವು. ಎಲ್ಲಕ್ಕಿಂತ ಮುಖ್ಯವಾಗಿ ನಾವು ಅದರ ಅರ್ಥವನ್ನು ಕಲಿಯುವುದರ ಕುರಿತಂತೆಯೇ ಆ ಕಾಲದಲ್ಲಿ ಒಂದು ಋಣಾತ್ಮಕ ಭಾವನೆಯಿತ್ತು. ಅದು ವೌಲ್ವಿಗಳ ಸಂಗತಿಗಳು ಎಂದು ನಂಬಿಕೊಂಡಿದ್ದೆವು. ಅರ್ಥ ಗೊತ್ತಿಲ್ಲದ ಕಾರಣಕ್ಕಾಗಿಯೇ, ನಾವು ಅದನ್ನೊಂದು ಅತೀತ ಸಂಗತಿಯೆಂದು ತಿಳಿದು ಹೆದರಿ, ಬೆದರಿ ನಡೆಯುತ್ತಿದ್ದೆವೇನೋ.

 ನಾನು ಒಂಬತನ್ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿಗೆ ಕಾಲಿಡುವ ಹೊತ್ತಿಗೆ ಮದರಸವನ್ನು ತೊರೆದಿದ್ದೆ. ಶಾಲೆಯ ಕಡೆಗೆ ಗಮನಹರಿಸತೊಡಗಿದ್ದೆ. ನಾನು ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಕಾಲ. ಉಪ್ಪಿನಂಗಡಿಯ ಪಂಚಾಯತ್‌ನ ಹಳೆ ಕಟ್ಟಡದಲ್ಲಿರುವ ಲೈಬ್ರರಿ ಆಗ ನನ್ನ ಪ್ರೀತಿಯ ತಾಣವಾಗಿತ್ತು. ನನ್ನ ಬಹುತೇಕ ಓದಿಗೆ ಪ್ರೇರಣೆ ನೀಡಿದ ಸ್ಥಳ ಅದು. ಯಾವುದೇ ಮದರಸ, ಶಾಲೆ, ಕಾಲೇಜುಗಳು ನೀಡಿದ್ದಕ್ಕಿಂತ ದೊಡ್ಡದನ್ನು ನನಗೆ ನೀಡಿದ ಸ್ಥಳ ಅದು. ಒಂದು ದಿನ ಉಪ್ಪಿನಂಗಡಿ ಗ್ರಂಥಾಲಯದಲ್ಲಿ ಒಂದು ಬಹತ್ ಗ್ರಂಥವನ್ನು ನೋಡಿದೆ. ಕುರ್‌ಆನ್‌ನ ರೂಪವನ್ನು ಹೊಂದಿದ್ದರೂ ಅದು ಕನ್ನಡದಲ್ಲಿತ್ತು. ‘ಕನ್ನಡದಲ್ಲಿ ಕುರ್‌ಆನ್’ ಎಂದೂ ಬರೆದಿತ್ತು. ನನಗೋ ಕುತೂಹಲ. ನಾನು ಈವರೆಗೆ ಓದಿದ್ದ ಅಪೂರ್ವ ಮಂತ್ರಶಕ್ತಿಗಳುಳ್ಳ ಕುರ್‌ಆನ್ ನನಗೆ ಅರ್ಥವಾಗುವ ಕನ್ನಡದೊಳಗಿದೆ ಎನ್ನುವುದನ್ನು ನೆನೆದೇ ನಾನು ಕಂಪಿಸಿದ್ದೆ. ಅಷ್ಟೊತ್ತಿಗೆ, ನಮ್ಮೂರಿಗೂ ಈ ಜಮಾತೆ ಇಸ್ಲಾಮ್ ಎನ್ನುವ ಸಂಘಟನೆ ಕಾಲಿಟ್ಟಿತ್ತು. ಅಂದಿನ ಮುಸ್ಲಿಮ್ ಸಮಾಜ ಇವರನ್ನು ತೀವ್ರವಾಗಿ ಪ್ರತಿರೋಧಿಸುತ್ತಿತ್ತು. ಅದಕ್ಕೆ ಒಂದು ಮುಖ್ಯ ಕಾರಣ, ಇವರು ಕುರ್‌ಆನ್‌ನ್ನು ಕನ್ನಡದಲ್ಲಿ ಓದುತ್ತಾರೆ ಎನ್ನುವುದು ಕೂಡ. ಹೇಗೆ ಕರಾವಳಿಯ ಹೊರಗೆ ಉರ್ದು ಭಾಷೆಯನ್ನು ಮುಸ್ಲಿಮರ ಭಾಷೆ ಎಂದು ತಿಳಿದುಕೊಂಡಿದ್ದಾರೆಯೋ, ಹಾಗೆಯೇ ಕರಾವಳಿಯಲ್ಲಿ ಮಲಯಾಳಂ ಮಾತ್ರ ಮುಸ್ಲಿಮರ ಭಾಷೆ ಎಂದು ನಾವು ತಿಳಿದುಕೊಂಡಿದ್ದೆವು. ಕನ್ನಡ, ತುಳು ಇತ್ಯಾದಿಗಳು ಕಾಫಿರ್ ಭಾಷೆಯಾಗಿರುವುದರಿಂದ ಧಾರ್ಮಿಕವಾಗಿ ಬಳಕೆ ಮಾಡಲು ಅದು ಅನರ್ಹ ಎಂದು ಆ ಕಾಲಘಟ್ಟದಲ್ಲಿ ಮುಸ್ಲಿಮರ ನಡುವೆ ಒಂದು ಬಹುಸಂಖ್ಯಾತ ಗುಂಪು ನಂಬಿತ್ತು. ನಾವು ಈ ಜಮಾತೆ ಇಸ್ಲಾಮಿಗಳನ್ನು, ಮುಕ್ಕಾಲುಗಂಟೆ, ಭೂಗಿ ಎಂದೆಲ್ಲ ತಮಾಷೆ ಮಾಡುತ್ತಿದ್ದೆವು. ಆಗ ಉಪ್ಪಿನಂಗಡಿ ಆಸುಪಾಸಿನಲ್ಲಿ ಒಂದೆರಡು ಬೆರಳೆಣಿಕೆಯ ಕುಟುಂಬ ಜಮಾತೆ ಇಸ್ಲಾಮ್ ಸೇರಿತ್ತು. ಅವರ ಮನೆಯ ಹುಡುಗರು ನಮ್ಮ ಸಹಪಾಠಿಗಳಾಗಿದ್ದರು. ಅವರನ್ನು ಸದಾ ನಾವು ಮುಕ್ಕಾಲು ಗಂಟೆ ಎಂದು ಗೇಲಿ ಮಾಡುತ್ತಿದ್ದೆವು. ಅವರು ಅದನ್ನು ವೌನವಾಗಿ ಸಹಿಸುತ್ತಿದ್ದರು. ಜಮಾತೆ ಇಸ್ಲಾಮಿನ ಜನರನ್ನು ಮುಕ್ಕಾಲು ಗಂಟೆ ಎಂದು ಕರೆಯುವುದಕ್ಕೆ ಒಂದು ಕತೆಯಿದೆ. ಅದನ್ನು ಇಲ್ಲಿ ಬರೆದರೆ ಲೇಖನ ಇನ್ನಷ್ಟು ಉದ್ದವಾದೀತು. 

ಲೈಬ್ರರಿಯಲ್ಲಿ ಸಿಕ್ಕಿದ ಆ ಕುರ್‌ಆನನ್ನು ಅದು ಹೇಗೋ ಧೈರ್ಯ ಮಾಡಿ ಮನೆಗೆ ಕೊಂಡೊಯ್ಯುವ ನಿರ್ಧಾರ ಮಾಡಿದೆ. ಲೈಬ್ರೇರಿಯನ್ ನನಗೆ ಪರಿಚಿತರಾಗಿದ್ದುದರಿಂದ, ಆ ದೊಡ್ಡ ಗ್ರಂಥವನ್ನು ಮನೆಗೆ ಕೊಂಡೊಯ್ಯಲು ಅನುಮತಿ ಕೊಟ್ಟರು. ಬಸ್ಸಿನಲ್ಲೂ ನನಗೆ ನನ್ನ ಕೈಯಲ್ಲಿರುವ ಕುರ್‌ಆನ್‌ನ ಕುರಿತಂತೆ ಒಂದು ರೋಮಾಂಚನ. ನನ್ನ ಗೆಳೆಯರು ನನ್ನ ಕೈಯಲ್ಲಿರುವ ಕನ್ನಡದ ಕುರ್‌ಆನ್ ನೋಡಿದ್ದೇ ಆಘಾತಗೊಂಡರು. ‘‘ಎಂತದಾ? ಇದು ಎಲ್ಲಿ ಸಿಕ್ಕಿತು? ಜಮಾತೆ ಇಸ್ಲಾಮ್ ಸೇರಿದ್ದೀಯ?’ ಹೀಗೆ ವಿಚಾರಣೆಗಳು ಆರಂಭವಾದವು. ಕನ್ನಡದಲ್ಲಿ ಕುರ್‌ಆನ್ ಓದುವ ಆ ಮೊದಲ ಪಾಪ ನನ್ನನ್ನು ನಿಜಕ್ಕೂ ಕಂಪಿಸುವಂತೆ ಮಾಡಿತ್ತು. ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಅದನ್ನು ಬಿಡಿಸಿ ಓದ ತೊಡಗಿದೆ. ಯಾಕೋ ರಾಮಾಯಣ, ಮಹಾಭಾರತದಂತೆ ನೇರವಾಗಿ ಓದಿಸಿಕೊಂಡು ಹೋಗಲಿಲ್ಲ. ಓದುತ್ತಿರುವಂತೆಯೇ ಅದೇನೋ ಒಂದು ಜಾದು ತೆರೆದುಕೊಳ್ಳಬಹುದು ಎಂದುಕೊಂಡವನಿಗೆ ನಿರಾಸೆ. ಮೊತ್ತಮೊದಲು ನಾನು ಪುಟ ಬಿಡಿಸಿದ್ದು, ವಾಕಿಯಾ ಅಧ್ಯಾಯವನ್ನಾಗಿತ್ತು. ತಂದೆ ಪ್ರತಿ ದಿನ ಕೋವಿ ಹಿಡಿದು ಓದಿಸುವಂತಹದ್ದು ಅದರಲ್ಲೇನಿದೆ ಎಂಬ ಕುತೂಹಲ ನನಗೆ. ಅಲ್ಲಿ ಮುಖ್ಯವಾಗಿ ಪರಲೋಕದ ಕುರಿತಂತೆ ವಿವರಗಳಿದ್ದವು. ಸ್ವರ್ಗ, ನರಕಗಳನ್ನು ಅಲ್ಲಿ ವರ್ಣಿಸಲಾಗಿತ್ತು. ನಾನು ಅದಾಗಲೇ ಕಂಠ ಪಾಠ ಮಾಡಿದ್ದ ಯಾಸೀನ್ ಎನ್ನುವ ಅಧ್ಯಾಯವನ್ನೂ ಓದಿದೆ. ಅಲ್ಲಿಯೂ ಭೂಮಿಯಲ್ಲಿ ಅತಿರೇಕ ಎಸಗಿದವರಿಗೆ ಪರಲೋಕದಲ್ಲಿ ಎದುರಾಗುವ ಸ್ಥಿತಿಯನ್ನು ಬಣ್ಣಿಸಲಾಗಿತ್ತು. ತನ್ನನ್ನು ತಾನು ಸ್ವತಂತ್ರನು ಎಂದು ಭ್ರಮಿಸಿಕೊಳ್ಳುವ ಮನುಷ್ಯ ಮಿತಿಯನ್ನು ಎತ್ತಿ ತೋರಿಸಲಾಗಿತ್ತು. ನೀರಿನ ಒಂದು ಹನಿಯಿಂದ ಸಷ್ಟಿಸಲಾಗಿರುವ ಮನುಷ್ಯನ ಕೃತಘ್ನತೆಯ ಬಗ್ಗೆ, ಪರಲೋಕದಲ್ಲಿ ಆತನ ಅಸಹಾಯಕತೆಯ ಕುರಿತಂತೆ ಬರೆಯಲಾಗಿತ್ತು. ಯಾವ ಸಾಲುಗಳೂ ನನ್ನನ್ನು ವಿಶೇಷವಾಗಿ ಸೆಳೆದಿರಲಿಲ್ಲ. ಒಂದೆರಡು ದಿನ ಕುರ್‌ಆನನ್ನು ಬಿಡಿಸಿ, ಇದು ನನಗಲ್ಲ ಎಂದು ಹಾಗೆಯೇ ಲೈಬ್ರೇರಿಯನ್‌ಗೆ ಒಪ್ಪಿಸಿದ್ದೆ.
 

 ಆದರೆ ಇದಾದ ಬಳಿಕ ನಾನು ಲೈಬ್ರರಿಯಲ್ಲೇ ಆಗಾಗ ಆ ಕೃತಿಯ ಪುಟಗಳನ್ನು ಬಿಡಿಸುತ್ತಲೇ ಇದ್ದೆ. ಯಾಕೆಂದರೆ, ಅದನ್ನು ನಾನು ಬದುಕಿನ ಪ್ರತಿ ಘಟ್ಟದಲ್ಲೂ ಮುಖಾಮುಖಿಯಾಗಬೇಕಾಗಿತ್ತು. ಆದುದರಿಂದ ಇಡೀ ಕುರ್‌ಆನನ್ನು ಯಾವ ವಿದ್ವಾಂಸರ ಸಹಾಯವಿಲ್ಲದೇ, ಕೇವಲ ನನ್ನ ಕನ್ನಡದ ಊರುಗೋಲಿನ ಆಸರೆಯಿಂದ ಕುರುಡನಂತೆ ತಡವುತ್ತಾ ಹೋದೆ. ಮುಂದೆ ಬಿಎ ತರಗತಿಯಲ್ಲಿದ್ದಾಗ, ಇಡೀ ಗ್ರಂಥವನ್ನು ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಕೆಲವು ವ್ಯಾಖ್ಯಾನಗಳನ್ನು ತನ್ನದಾಗಿಸಿಕೊಂಡೆ. ಏಕದೇವ ವಿಶ್ವಾಸ, ಪರಲೋಕದ ಮೇಲಿನ ನಂಬಿಕೆ ಒಬ್ಬ ಶರಣನ ಪ್ರಧಾನ ಲಕ್ಷಣವೆಂದು ಕುರ್‌ಆನ್ ಹೇಳುತ್ತದೆ. ಆ ನಂಬಿಕೆಯನ್ನು ಗಟ್ಟಿಯಾಗಿಸಿಕೊಳ್ಳಲು ನಮಾಝ್‌ನ್ನು ನಿರ್ವಹಿಸಬೇಕು ಎಂದು ಆಜ್ಞಾಪಿಸುತ್ತದೆ. ಇದು ಮೇಲ್ನೋಟಕ್ಕೆ ನಾನು ಕುರ್‌ಆನನ್ನು ಗ್ರಹಿಸಿದ ರೀತಿ. ಮತ್ತೆ ಹಲವು ಬಾರಿ ಕುರ್‌ಆನ್‌ನ ಕನ್ನಡ ಅನುವಾದವನ್ನು ಓದುವ ಸಂದರ್ಭ ಒದಗಿತು. ಕುರ್‌ಆನ್‌ನಲ್ಲಿ ಅತಿ ದೊಡ್ಡ ಅಧ್ಯಾಯದ ಹೆಸರು ‘ಅಲ್ ಬಕರಾ’ ಅಂದರೆ ‘ದನ ಅಥವಾ ಹೋರಿ’ ಎಂದು ಅರ್ಥ. ಹಾಗೆಂದು ಇದು ದನದ ಮಹತ್ವವನ್ನು ಹೇಳುವ ಅಧ್ಯಾಯವೇನೂ ಅಲ್ಲ. ಈ ಅಧ್ಯಾಯ ಬದುಕನ್ನೇ ಕೇಂದ್ರವಾಗಿರಿಸಿಕೊಂಡಿದೆ. ಬದುಕುವ ನೀತಿ ಸಂಹಿತೆಗಳ ತಳಹದಿಯ ಮೇಲೆ ಇಲ್ಲಿನ ಪರಲೋಕದ ಕಲ್ಪನೆಯೂ ನಿಂತಿದೆ. ಅನಾಥರಿಗೆ ವಂಚಿಸಬಾರದು, ಅವರ ಆಸ್ತಿಯನ್ನು ಯಾರು, ಹೇಗೆ ನಿರ್ವಹಿಸಬೇಕು, ಪತ್ನಿಯೊಂದಿಗೆ ಪತಿ ಹೇಗೆ ನಡೆದುಕೊಳ್ಳಬೇಕು, ತಲಾಕ್‌ನ ನಿಯಮಗಳು, ಮೋಸ ರಹಿತ ವ್ಯಾಪಾರ, ಬಡವರ ಮೇಲಿನ ಬಡ್ಡಿಯ ನಿಷೇಧ, ಕಡ್ಡಾಯ ಝಕಾತ್ ಇವೆಲ್ಲ ನೀತಿ ಸಂಹಿತೆಗಳನ್ನು ಒಳಗೊಂಡ ದೊಡ್ಡ ಅಧ್ಯಾಯ ಇದು. ಇವೆಲ್ಲವುಗಳನ್ನೂ ಕುರ್‌ಆನ್ ಸ್ಪಷ್ಟವಾಗಿ ಹೇಳುತ್ತದೆ. ಕುರ್‌ಆನ್ ಎಂದರೆ ಯಾವುದೇ ತತ್ವ ಶಾಸ್ತ್ರಗಳಂತೆ ಜಟಿಲವಾಗಿಲ್ಲ. ‘ತಾನು ಸರಳವಾಗಿದ್ದೇನೆ’ ಎಂದು ಸ್ವಯಂ ಘೋಷಿಸಿಕೊಂಡ ಗ್ರಂಥ ಇದು. ಪರಲೋಕ, ಸ್ವರ್ಗ, ನರಕಗಳೆಲ್ಲವೂ ನಾವು ಬದುಕಿದ ರೀತಿಯ ಆಧಾರದ ಮೇಲೆ ನಿಂತುಕೊಂಡಿದೆ ಎನ್ನುವುದನ್ನು ಸ್ಪಷ್ಟವಾಗಿ ಕುರ್‌ಆನ್ ಪದೇ ಪದೇ ಹೇಳುತ್ತದೆ. ಕುರ್‌ಆನ್ ಬಡವರಿಗೆ ಶ್ರೀಮಂತರು ನೀಡಬೇಕಾದ ಸಂಪತ್ತಿನ ಪಾಲನ್ನು ಸ್ಪಷ್ಟವಾಗಿ ಹೇಳುತ್ತದೆ. ಆದರೆ ಅದು ಒಬ್ಬ ಶರಣ, ನಿರ್ವಹಿಸಬೇಕಾದ ನಮಾಝಿನ ಲೆಕ್ಕವನ್ನು ಎಲ್ಲೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎನ್ನೂವುದನ್ನೂ ನಾವು ಗಮನಿಸಬೇಕು. ಈ ಕಾರಣದಿಂದಲೇ ನಮಾಝ್ ಎಷ್ಟು ಬಾರಿ ನಿರ್ವಹಿಸಬೇಕು ಎನ್ನುವ ಕುರಿತಂತೆ ಮುಸ್ಲಿಮರಲ್ಲೇ ಭಿನ್ನಾಭಿಪ್ರಾಯಗಳಿವೆ. ಬದುಕುವ ಕ್ರಮಕ್ಕೆ ನಮಾಝ್ ಪೂರಕವಾಗಿದೆಯೇ ಹೊರತು, ನಮಾಝ್‌ಗೆ ಪೂರಕವಾಗಿ ಬದುಕು ಎಂದು ಕುರ್‌ಆನ್‌ನಲ್ಲಿ ಎಲ್ಲೂ ಪ್ರಸ್ತಾಪವಾಗಿಲ್ಲ. ನಮಾಝ್ ನಿರ್ವಹಿಸುವ ದಿಕ್ಕನ್ನು ಹೇಳುವ ಗ್ರಂಥವೇ ಮತ್ತೆ ಸ್ಪಷ್ಟಪಡಿಸುತ್ತದೆ, ನೀವು ಯಾವ ದಿಕ್ಕಿಗೆ ಮುಖಮಾಡಿ ನಮಾಝ್ ನಿರ್ವಹಿಸಿದರೂ ಅದು ನನ್ನನ್ನೇ ತಲುಪುತ್ತದೆ ಎಂದು. ಕುರ್‌ಆನ್ ಮೋಕ್ಷವನ್ನು ಪಡೆಯುವ ವಿಧಾನವನ್ನು ಚರ್ಚಿಸುವುದಿಲ್ಲ. ಆ ನೆಪದಲ್ಲಿ ಬದುಕುವ ವಿಧಾನವನ್ನು ಚರ್ಚಿಸುತ್ತದೆ. ಬಡ್ಡಿ ನಿಷೇಧ, ಮದ್ಯಪಾನ ನಿಷೇಧ, ಶ್ರೀಮಂತರ ಮೇಲೆ ವಿಧಿಸಿದ ಝಕಾತ್ ತೆರಿಗೆ, ಬಡವರ ಝಕಾತಿನ ಹಕ್ಕು(ಶ್ರೀಮಂತರ ಸಂಪತ್ತಿನಲ್ಲಿ ಪಾಲು), ಹೆಣ್ಣಿಗೆ ಪ್ರಪ್ರಥಮವಾಗಿ ಆಸ್ತಿಯ ಮೇಲೆ ಹಕ್ಕಿನ ಘೋಷಣೆ, ಹೆಣ್ಣಿಗೆ ಮೆಹರ್‌ನ ಹಕ್ಕು, ವಿಧವಾ ವಿವಾಹದ ಹಕ್ಕು, ಶಿಕ್ಷಣದ ಹಕ್ಕು, ಗುಲಾಮರ ಕುರಿತಂತೆ ಅದು ತಳೆದ ಧೋರಣೆ, ಸಹೋದರತೆ, ವಿಗ್ರಹಾರಾಧನೆಯ ನಿರಾಕರಣೆ ಅತ್ಯಾಧುನಿಕವಾದುದು. ಕ್ರಾಂತಿಕಾರಿಯಾದುದು. ಮತ್ತು ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆ ಇಂದಿಗೂ ಅವುಗಳ ಅನುಷ್ಠಾನಕ್ಕೆ ತಿಣುಕಾಡುತ್ತಿದೆ ಎನ್ನುವುದು ಮುಖ್ಯವಾದ ಅಂಶ. 

ಕುರ್‌ಆನ್ ಏಕಕಾಲದಲ್ಲಿ ದಾಖಲಿಸಲ್ಪಟ್ಟ ಗ್ರಂಥ ಅಲ್ಲ ಎನ್ನುವ ಅಂಶವನ್ನು ನಾವು ನೆನಪಿಲ್ಲಿಡಬೇಕು. ಪ್ರವಾದಿಯವರ ಇಸ್ಲಾಂ ಚಳವಳಿಯ 23 ವರ್ಷಗಳ ಅವಧಿಯಲ್ಲಿ, ಬೇರೆ ಬೇರೆ ಸಂಧರ್ಭಗಳಲ್ಲಿ ದಾಖಲಿಸಲ್ಪಟ್ಟ ಸಣ್ಣ, ದೊಡ್ಜ ಅಧ್ಯಾಯಗಳಿರುವ ಗ್ರಂಥ ಇದುು. ಪ್ರವಾದಿಯವರು ಅನಕ್ಷರಸ್ಥರಾಗಿದ್ದುದರಿಂದ ಅವರ ಮೂಲಕ ಬೇರೆ ಬೇರೆ ಸಂಗಾತಿಗಳು ಅದನ್ನು ದಾಖಲಿಸಿದ್ದರು. ಅವುಗಳನ್ನು ಒಟ್ಟುಗೂಡಿಸುವ ಕೆಲಸ ನಡೆದದ್ದು ಪ್ರವಾದಿಯವರನಂತರ ಖಲೀಫ ಅಬೂಬಕರ್ ಸಿದ್ದೀಕ್ ಅವರ ಕಾಲಘಟ್ಟದಲ್ಲಿ. ಝೈದ್‌ಬಿನ್ ಸಾಬಿತ್ ಸಂಗ್ರಹಿಸುವ  ಉಸ್ತುವಾರಿ ವಹಿಸಿಕೊಂಡರು. ಕುರ್‌ಆನ್‌ನ ಒಂದು ಸಮಗ್ರ ಮೂಲಪ್ರತಿ ನಿರ್ಮಾಣವಾದುದು ಇದೇ ಸಂದರ್ಭದಲ್ಲಿ. ಮುಂದೆ ಖಲೀಫಾ ಉಸ್ಮಾನ್ ಅವರ ಕಾಲಘಟ್ಟದಲ್ಲಿ ಅದೇ ಝೈದ್ ಬಿನ್ ಸಾಬಿದ್ ನೇತೃತ್ವದಲ್ಲಿ ಒಂದು ಸಮಿತಿ ರಚನೆಯಾಗಿ, ಮೂಲಪ್ರತಿಯ ನಕಲುಗಳನ್ನು ತಯಾರಿಸಿ, ವಿವಿಧೆಡೆ ಕಳುಹಿಸಿಕೊಡಲಾಯಿತು. ಪ್ರವಾದಿಯವರ ಬದುಕಿನ ಬೇರೆ ಬೇರೆ ಘಟ್ಟಗಳ ಜೊತೆಗೆ ನೇರ ಸಂಬಂಧವನ್ನು ಕುರ್‌ಆನ್ ಅಧ್ಯಾಯ ಹೊಂದಿದೆ. ಅವರ ಬದುಕಿನ ಸಂಕಟಗಳಲ್ಲಿ, ಸವಾಲುಗಳ ಮುಖಾಮುಖಿಯಲ್ಲಿ ಕುರ್‌ಆನ್‌ನ ಬಹುತೇಕ ಅಧ್ಯಾಯಗಳು ಉದ್ಭವವಾಗಿವೆ. ಪ್ರವಾದಿಯವರ ಬದುಕಿನ ತೀರಾ ಖಾಸಗಿ ಸಮಸ್ಯೆಗಳನ್ನು ಪರಿಹರಿಸುವ ಸಂದರ್ಭದಲ್ಲೂ ಕುರ್‌ಆನ್ ನೆರವಾಗಿದೆ. ಅದಕ್ಕೊಂದು ಅತ್ಯುತ್ತಮ ಉದಾಹರಣೆ, ಪ್ರವಾದಿ ಮಹಮ್ಮದ್ ಅವರ ಪತ್ನಿ ಆಯಿಶಾ ಅವರ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ಅಧ್ಯಾಯ. ಹೇಗೆ ರಾಮಾಯಣದಲ್ಲಿ ಸೀತೆಯ ಮೇಲೆ ಅಪವಾದ ಬಂತೋ ಅಂತೆಯೇ ಪ್ರವಾದಿಯ ಪತ್ನಿ ಆಯಿಶಾರ ಮೇಲೂ ಅಂತಹದೇ ವ್ಯಭಿಚಾರದ ಆಪಾದನೆ ಬಂತು. ರಾಮನೇನೋ ಸೀತೆಯನ್ನು ಕಾಡಿಗೆ ಕಳುಹಿಸಿದ. ಆದರೆ ಪ್ರವಾದಿಗೆ ಮಾತ್ರ ಅದು ಸಾಧ್ಯವಿರಲಿಲ್ಲ. ಆದರೆ ಪತ್ನಿಯ ಮೇಲಿನ ಈ ಆಪಾದನೆ ಪ್ರವಾದಿ ಮಹಮ್ಮದರನ್ನು ನಿಜಕ್ಕೂ ಕಂಗೆಡಿಸಿತ್ತು. ಅವರ ಇಡೀ ಬಳಗಕ್ಕೆ  ಈ ಘಟನೆ ಮಂಕು ಕವಿಸಿತ್ತು. ಕೆಲವು ದಿನ ಪ್ರವಾದಿಯವರು ಪತ್ನಿಯ ಜೊತೆ ಮಾತೇ ಆಡಲಿಲ್ಲವಂತೆ. ಇಂತಹ ಹೊತ್ತಿನಲ್ಲೇ, ಒಂದು ಹೆಣ್ಣಿನ ಮೇಲೆ ವ್ಯಭಿಚಾರ ಆಪಾದನೆ ಬಂದಾಗ ಏನು ಮಾಡಬೇಕು ಎನ್ನುವ ಅಧ್ಯಾಯ ‘ಅನ್ನೂರ್’ ಹುಟ್ಟಿಕೊಂಡಿತು. ಒಂದು ಹೆಣ್ಣಿನ ಮೇಲೆ ಸುಳ್ಳಾರೋಪ ಮಾಡುವಾತ, ಅದಕ್ಕೆ ಸಂಬಂಧ ಪಟ್ಟಂತೆ ನಾಲ್ಕು ನಿಜವಾದ ಸಾಕ್ಷಿಯನ್ನು ತರದೇ ಇದ್ದರೆ, ಎಂಭತ್ತು ಛಡಿಯೇಟುಗಳನ್ನು ಹೊಡೆಯಲು ಈ ಅಧ್ಯಾಯ ಆದೇಶಿಸುತ್ತದೆ. ಮಹಿಳೆಯ ಮೇಲೆ ಸುಳ್ಳಾರೋಪಗಳನ್ನು ಹೊರಿಸುವುದನ್ನು ತಡೆಯದವರನ್ನೂ ಈ ಅಧ್ಯಾಯ ಪ್ರಶ್ನಿಸುತ್ತದೆ. ಖಂಡಿಸುತ್ತದೆ. ಈ ಅಧ್ಯಾಯ ಆಯಿಶಾರವರನ್ನು ನಿರಪರಾಧಿಯೆಂದು ಘೋಷಿಸುತ್ತದೆ.

  ಕುರ್‌ಆನ್ ಪ್ರವಾದಿಯವರು ಬದುಕಿದ ಕಾಲದ ಸಂದರ್ಭವನ್ನು ಕೇಂದ್ರೀಕರಿಸಿ ಮಾತನಾಡುವುದರಿಂದ, ಕುರ್‌ಆನ್ ಕಾಲ ಕಾಲಕ್ಕೆ ತನ್ನ ವ್ಯಾಖ್ಯಾನಗಳನ್ನು ಹಿರಿದಾಗಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಒಂದೂವರೆ ಸಾವಿರ ವರ್ಷಗಳ ಹಿಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಅಜಗಜಾಂತರವಿರುವುದರಿಂದ, ಕುರ್‌ಆನ್‌ನ ಮಾತುಗಳನ್ನು ಇನ್ನಷ್ಟು ಸಾರ್ವಕಾಲಿಕಗೊಳಿಸಬೇಕು. ನಮ್ಮ ಬದುಕು ವಿಸ್ತಾರಗೊಂಡ ಹಾಗೆಯೇ ಕುರ್‌ಆನ್‌ನ ಅರ್ಥಗಳೂ ವಿಸ್ತಾರಗೊಳ್ಳುತ್ತದೆ. ವಿಸ್ತಾರಗೊಳ್ಳಬೇಕು. ವರ್ತಮಾನಕ್ಕೆ ಇನ್ನಷ್ಟು ಪೂರಕವಾಗಿ, ಅರ್ಥಪೂರ್ಣವಾಗಿ ಆ ವ್ಯಾಖ್ಯಾನವನ್ನು ಅಳವಡಿಸಿಕೊಳ್ಳಬೇಕು. ಮತ್ತು ಅದಕ್ಕೆ ಯಥೇಚ್ಛವಾದ ಅವಕಾಶ ಕುರ್‌ಆನ್‌ನಲ್ಲಿದೆ. ಇಲ್ಲವಾದರೆ, ಅದರ ಎಷ್ಟೋ ಸಾಲುಗಳು ನಮಗೆ ಅಪ್ರಸ್ತುತ ಎನ್ನಿಸುವ ಸಾಧ್ಯತೆಗಳಿವೆ. ಅಥವಾ ಅಂತಹ ಟೀಕೆಗಳನ್ನು ಎದುರಿಸಬೇಕಾದ ಸಂದರ್ಭಗಳಿಗೆ ಮುಸ್ಲಿಮರು ಮುಖಕೊಡಬೇಕಾಗುತ್ತದೆ. 


ಕುರ್‌ಆನ್‌ನ ಓದು ನನ್ನನ್ನು ಅಂತಿಮವಾಗಿ ತಲುಪಿಸಿದ್ದು ‘ಅಲ್ ಮಾಊನ್’ ಅಧ್ಯಾಯದ ಕಡೆಗೆ. ಅಲ್ ಮಾಊನ್ ಎಂದರೆ ಅರ್ಥ ‘ಕನಿಷ್ಟ ನೆರವು’ ಅಥವಾ ಅತ್ಯಗತ್ಯವಾದ ‘ಸಣ್ಣ ನೆರವು’. ಇದೊಂದು ಏಳು ಸಾಲುಗಳ ಒಂದು ಪುಟ್ಟ ಅಧ್ಯಾಯ. ಆದರೆ ಇಡೀ ಕುರ್‌ಆನ್‌ನ ಸಾರ ಸರ್ವಸ್ವವನ್ನೂ ತನ್ನೊಳಗೆ ಇಟ್ಟುಕೊಂಡ ಅಧ್ಯಾಯ. ಪರಲೋಕ ಮತ್ತು ನಮಾಝ್ ಅಂದರೆ ಏನು ಎನ್ನುವುದನ್ನು ಈ ಅಧ್ಯಾಯ ಅತ್ಯಂತ ಸ್ಪಷ್ಟವಾಗಿ ಹೇಳುತ್ತದೆ. ಈ ಅಧ್ಯಾಯದ ವಿಶೇಷವೆಂದರೆ, ನಮಾಝ್ ಮಾಡುವವರನ್ನು ಈ ಅಧ್ಯಾಯ ಶಪಿಸುತ್ತದೆ. ಇನ್ನೊಬ್ಬರಿಗೆ ತೀರಾ ಸಣ್ಣ ನೆರವನ್ನು ನೀಡಲೂ ಹಿಂಜರಿಯುವ ವ್ಯಕ್ತಿ ಮಾಡುವ ನಮಾಝನ್ನು ತೋರಿಕೆಯ ನಮಾಝ್ ಎಂದು ಈ ಅಧ್ಯಾಯ ಹೇಳುತ್ತದೆ. ಅಂತಹ ನಮಾಝನ್ನು ಡಂಭಾಚಾರ ಎಂದು ಕರೆಯುತ್ತಾ, ಆ ನಮಾಝ್ ನಿರ್ವಹಿಸುವವರಿಗೆ ಶಾಪವಿದೆ ಎಂದು ಘೋಷಿಸುತ್ತದೆ. ಹಾಗೆಯೇ ಪರಲೋಕದಲ್ಲಿ ನಂಬಿಕೆ ಎಂದರೆ ಏನು ಎನ್ನುವುದನ್ನೂ ಈ ಪುಟ್ಟ ಅಧ್ಯಾಯ ವಿಷದ ಪಡಿಸುತ್ತದೆ. ಅನಾಥರನ್ನು ದೂರ ದಬ್ಬುವವನು ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ನೀಡದವನೇ ಪರಲೋಕವನ್ನು ತಿರಸ್ಕರಿಸುವವನು ಎಂದು ಅಲ್‌ಮಾವೂನ್ ಎನ್ನುವ ಪುಟ್ಟ ಅಧ್ಯಾಯದ ಸಾಲುಗಳು ತೀಕ್ಷ್ಣ ವ್ಯಂಗ್ಯದಿಂದ ಸ್ಪಷ್ಟಪಡಿಸುತ್ತವೆ. ಪರಲೋಕವನ್ನು ನಂಬುವುದೆಂದರೆ ಇನ್ನೇನೂ ಅಲ್ಲ, ಅನಾಥರನ್ನು ಹತ್ತಿರವಾಗಿಸಿಕೊಳ್ಳುವುದು. ಹಾಗೆಯೇ ಬಡವರಿಗೆ, ಹಸಿದವರಿಗೆ ಉಣಿಸುವುದು. ನಮಾಝ್ ಎಂದರೆ ಇನ್ನೊಬ್ಬರಿಗೆ ನೆರವಾಗುವುದು. ಈ ಎರಡೂ ಕೆಲಸವನ್ನು ಮಾಡದವನ ನಮಾಝ್ ಡಂಭಾಚಾರವಾದುದು. ಆತನ ಪರಲೋಕದ ನಂಬಿಕೆಯೂ ಹುಸಿಯಾದುದು. ಅಲ್‌ಮಾಊನ್ ಅಧ್ಯಾಯದ ಈ ಏಳು ಸಾಲುಗಳನ್ನು ಅರ್ಥ ಮಾಡಿಕೊಂಡರೆ ಇಡೀ ಕುರ್‌ಆನ್‌ನ್ನೇ ಅರ್ಥ ಮಾಡಿಕೊಂಡಂತೆ ಎನ್ನುವುದು ನನ್ನ ಈಗಿನ ನಂಬಿಕೆ.