Saturday, August 31, 2013

ಉಗ್ರಗಾಮಿ ಮತ್ತು ಇತರ ಕತೆಗಳು

 ಉಗ್ರಗಾಮಿ
ಹಲವು ದಶಕಗಳ ಕಾಲ ಹುಡುಕುತ್ತಿದ್ದ ಕುಖ್ಯಾತ ಉಗ್ರಗಾಮಿಯನ್ನು ಬಂಧಿಸಲಾಯಿತು.
‘‘ಇಲ್ಲಿಯವರೆಗೆ ಎಲ್ಲಿ ಬಚ್ಚಿಟ್ಟುಕೊಂಡಿದ್ದೆ?’’ ಪತ್ರಕರ್ತರು ಕೇಳಿದ್ದರು.
‘‘ಕಾನೂನಿನ ಪೊಳ್ಳುತನದಲ್ಲಿ’’ ಅವನು ಉತ್ತರಿಸಿದ

ಪಾಲು

ಆಸ್ತಿಯನ್ನು ಹಂಚಿಕೊಳ್ಳುವ ಸಂದರ್ಭ ಅದು.
ಐವರು ಅಣ್ಣ ತಮ್ಮಂದಿರುವ ಆಸ್ತಿಯನ್ನು ಕಚ್ಚಾಡಿಕೊಂಡು ಸಮಪಾಲು ಮಾಡಿಕೊಂಡರು.
ಇದೀಗ ತಾಯಿಯನ್ನು ಪಾಲು ಮಾಡುವ ಹೊತ್ತು.
ಎಲ್ಲರ ಹೃದಯವೂ ಒಮ್ಮೆಲೆ ವಿಶಾಲವಾಯಿತು.
‘‘ನಿನಗಿರಲಿ, ನಿನಗಿರಲಿ’’ ಎಂದು ಪರಸ್ಪರ ದಾನಶೂರರಾದರು.


ಬೀಜ
ಭಾರೀ ಮಳೆ.
ಬಿತ್ತಿದ ಬೀಜವೆಲ್ಲ ಕೊಚ್ಚಿ ಹೋಗಿತ್ತು.
ಮಳೆ ನಿಂತಾಗ ಮತ್ತೆ ರೈತ ಬಿತ್ತ ತೊಡಗಿದ.
ಯಾರೋ ಕೇಳಿದರು ‘‘ಮತ್ತೆ ಮಳೆ ಬಂದು ಬಿತ್ತಿದ ಬೀಜ ಕೊಚ್ಚಿ ಹೋದರೆ ಏನು ಮಾಡುತ್ತೀಯ?’’
ರೈತ ಹೇಳಿದ ‘‘ಬರ ಬಂದು ಬೀಜ ಸುಟ್ಟು ಹೋದರೆ ಏನು ಮಾಡುವುದು ಎನ್ನೋದು ನನ್ನ ಚಿಂತೆ’’

ಹೂವುಗಳು
ವಿವಿಧ ಗಿಡಗಳಲ್ಲಿ ಅರಳಿದ ಹೂಗಳನ್ನು ಕಿತ್ತು ಮಾಲೆ ಮಾಡಿ, ಹೂಮಾರುವವನು ಮಾರಾಟಕ್ಕೆ ಹೊರಟ. ಕೆಲವರು ಕೊಂಡು ಮುಡಿದುಕೊಂಡರು. ಕೆಲವರು ದೇವರಿಗೆಂದು ಎತ್ತಿಟ್ಟರು. ಇನ್ನು ಕೆಲವರು ತಮ್ಮ ನಾಯಕನಿಗಾಗಿ ಕೊಂಡುಕೊಂಡರು.
ಬಾಡಿದ ಹೂವುಗಳು ಸಂಜೆ ಕಸದ ತೊಟ್ಟಿಯಲ್ಲಿ ಮತ್ತೆ ಒಂದಾದವು.

ಮತ್ತೊಮ್ಮೆ
ಅತ್ಯಾಚಾರಕ್ಕೊಳಗಾದ ಹೆಣ್ಣಿನ ಜೊತೆ ಪತ್ರಕರ್ತ ಕೇಳಿದ ‘‘ನಿಮಗೆ ಈಗ ಏನನ್ನಿಸುತ್ತದೆ’’
ಪತ್ರಕರ್ತನನ್ನು, ಅವರ ಕ್ಯಾಮರಾವನ್ನು ನೋಡಿದ ಹೆಣ್ಣು ಹೇಳಿದಳು ‘‘ಮತ್ತೊಮ್ಮೆ ಅತ್ಯಾಚಾರಕ್ಕೊಳಗಾಗುತ್ತಿರುವ ಹಾಗೆ ಅನ್ನಿಸುತ್ತದೆ’’

ಹಣ್ಣು
ಒಬ್ಬ ವೃದ್ಧ ಗಿಡ ನೆಡುತ್ತಿದ್ದ.
 ‘‘ತಾತಾ ಈ ಮರ ಬೆಳೆದು ಹಣ್ಣು ಕೊಡುವಷ್ಟರಲ್ಲಿ ನೀನೆಲ್ಲಿರುತ್ತೀಯ ತಾತಾ?’’ ಮಗು ಕೇಳಿತು.
ತಾತಾ ನಡುಗು ಸ್ವರದಲ್ಲಿ ಹೇಳಿದ ‘‘ನಾನು ತಿನ್ನುವುದಕ್ಕಲ್ಲ ಮಗಾ, ನೀನು ತಿನ್ನುವುದಕ್ಕಾಗಿ ನೆಡುತ್ತಿರುವುದು...’’

ಮರ
ಒಂದು ಮರದಲ್ಲಿ ಹಕ್ಕಿ ಗೂಡು.
ಗೂಡಲ್ಲಿ ಹಕ್ಕಿಯ ಮೊಟ್ಟೆ. ಅದರ ಮೇಲೆ ಕಾವುಕೊಟ್ಟು ಕೂತ ತಾಯಿ ಹಕ್ಕಿ.
ಆ ಮರದ ಬುಡದಲ್ಲೊಂದು ಹುತ್ತ.
ಅಲ್ಲೊಂದು ಹಾವು. ಹುತ್ತದೊಳಗೆ ಮೊಟ್ಟೆ. ಕಾವು ಕೂತ ತಾಯಿ ಹಾವು.
ಅದೇ ಮರದ ಬುಡದಲ್ಲಿ ಹಾವಾಡಿಗನೊಬ್ಬ ದಣಿವಾರಿಸಿಕೊಳ್ಳುತ್ತಿದ್ದ.

ಮದುವೆ
ಅವನು ಅವಳ ಮೇಲೆ ಅತ್ಯಾಚಾರ ಮಾಡಿದ್ದ.
ಊರಲ್ಲಿ ಪಂಚಾಯತಿ ಸೇರಿ, ಅತ್ಯಾಚಾರಿಗೆ ಅವಳನ್ನು ಮದುವೆ ಮಾಡಿಕೊಡಲಾಯಿತು.
ಅವಳು ಅವನಿಂದ ಬದುಕಿನುದ್ದಕ್ಕೂ ಅತ್ಯಾಚಾರಕ್ಕೊಳಗಾಗಬೇಕಾಯಿತು.

Tuesday, August 27, 2013

ತರೀಕೆರೆಯೆಂಬ ಜಂಗಮ ನಡೆದಷ್ಟೂ ನಾಡು

 ವಿದ್ವಾಂಸ, ಲೇಖಕ ರಹಮತ್ ತರೀಕೆರೆ ಕನ್ನಡ ಬರಹ ಲೋಕದ ಸೂಫಿ, ಜಂಗಮ ಎಂದೇ ಖ್ಯಾತಿವೆತ್ತವರು. ಒಂದು ರೀತಿಯಲ್ಲಿ ತಾನಿರುವ ವಿಶ್ವವಿದ್ಯಾನಿಲಯಕ್ಕೇ ಚಕ್ರ ಕಟ್ಟಿದವರು. ತನ್ನ ವ್ಯಾಪ್ತಿಯಲ್ಲಿ ವಿಶ್ವವಿದ್ಯಾನಿಲಯವನ್ನು ಕರ್ನಾಟಕದಾದ್ಯಂತ ಓಡಿ ದಣಿಸಿದವರು. ಅವರು ಬರೆದ ಹೆಚ್ಚಿನ ಬರಹಗಳೇ ಇದಕ್ಕೆ ಸಾಕ್ಷಿ. ವಿದ್ವಾಂಸನೆಂದರೆ ಅಕಾಡೆಮಿ ಭಾಷೆಗಳಲ್ಲಿ ಬಂಧಿಸಲ್ಪಟ್ಟಿರಬೇಕೆಂಬ ನಿಯಮವನ್ನು ಮೀರಿ, ತನ್ನ ವಿದ್ವಾಂಸಗಿರಿಗೆ ಜಂಗಮ ರೂಪವನ್ನು ಕೊಟ್ಟವರು. ಅವರಿಂದ ಹೊರ ಬಂದಿರುವ ಅನೇಕ ಕೃತಿಗಳು ಇದಕ್ಕೆ ಪದೇ ಪದೇ ಸಾಕ್ಷಿಯಾಗಿವೆ. ಮರದೊಳಗಣ ಕಿಚ್ಚು, ಕರ್ನಾಟಕದ ಸೂಫಿಗಳು ಮೊದಲಾದ ಅಪರೂಪದ ಕೃತಿಗಳನ್ನು ನೀಡಿರುವ ರಹಮತ್ ತರೀಕೆರೆ ಕನ್ನಡದ ಅಮೂಲ್ಯ ಆಸ್ತಿ ಕೂಡ. ಅವರ ಬರೆದ ಇನ್ನೊಂದು ಮುಖ್ಯ ಕೃತಿ ‘ನಡೆದಷ್ಟೂ ನಾಡು’. ನವಕರ್ನಾಟಕ ಪ್ರಕಾಶ ಇದನ್ನು ಹೊರ ತಂದಿದೆ.

‘ನಡೆದಷ್ಟೂ ನಾಡು’ ದಿನಪತ್ರಿಕೆಯಲ್ಲಿ ಬಂದ ಅಂಕಣ ಬರಹ. ಜೊತೆಗೆ ಇದು ಪ್ರವಾಸಾನುಭವವೂ ಹೌದು. ಆದರೆ ಪ್ರವಾಸ ಕಥನದ ಸ್ವರೂಪ ಇಲ್ಲಿ ಭಿನ್ನವಾಗಿದೆ. ಸಾಧಾರಣವಾಗಿ ಪ್ರವಾಸಾನುಭವಗಳು ಆ ಊರಿನ ಸ್ಥಳ ಪರಿಚಯ, ವೈಶಿಷ್ಟ ಇತ್ಯಾದಿಗಳನ್ನು ಹೇಳುತ್ತಾ ಮೇಲಿಂದ ಮೇಲೆ ಸಾಗುತ್ತದೆ. ಪ್ರವಾಸಿಗನಿಗೆ ಆ ಊರಿನ ಬೇರನ್ನು ತಡವುವಷ್ಟು ಪುರುಸೊತ್ತು ಇರುವುದಿಲ್ಲ. ಅವನೇನಿದ್ದರೂ ಹೊರಗಿನವ. ಅಥವಾ ಮೂರನೆಯವ. ಆದರೆ ಇಲ್ಲಿ, ರಹಮತ್ ತರಿಕೆರೆ ತಾನು ಭೇಟಿ ನೀಡಿದ ಪ್ರತಿ ಊರಿನ ಬೇರುಗಳನ್ನು ತಡವಲು ಪ್ರಯತ್ನಿಸುತ್ತಾರೆ. ಅದರಲ್ಲಿ ತಾನೂ ಒಬ್ಬನಾಗಲು ತವಕಿಸುತ್ತಾರೆ. ಆದುದರಿಂದಲೇ ಪ್ರವಾಸಾನುಭವಕ್ಕಿಂತಲೂ ಮೇಲ್‌ಸ್ತರದ ಗುಣವನ್ನು ಈ ಕೃತಿ ಹೊಂದಿದೆ. ಕೆಲವು ಲೇಖನಗಳು ಅವರ ಹಿಂದಿನ ಆಳವಾದ ಸಂಶೋಧನೆಗಳ ಉಪ ಉತ್ಪಾದನೆಯೂ ಹೌದು. ಬಿಜಾಪುರದ ಭೇಟಿ ಸಂದರ್ಭದಲ್ಲಿ ತಾನು ಕಂಡ ತ್ರಿಪುರ ಸುಂದರಿ ಟಾಕೀಸಿನ ಬಗ್ಗೆ ಮಾತನಾಡುತ್ತಾ, ಅಲ್ಲಿನ ತಲೆಮಾರುಗಳ ಕತೆಗಳ ಧೂಳನ್ನು ತಟ್ಟುತ್ತಾರೆ. ಮಂಗಳೂರಿನ ಗ್ರೆಗರಿಯ ಮನೆ ಜೆಸಿಬಿಗೆ ಬಲಿಯಾದ ಕತೆ ಪ್ರವಾಸಾನುಭವದ ಕತೆಯಲ್ಲ. ಈ ನಾಡು ಯಾವ ದುರಂತದ ಕಡೆಗೆ ಮುನ್ನಡಿ ಇಡುತ್ತಿದೆ ಎನ್ನುವುದರೆಡೆಗೆ ಬೆಳಕು ಚೆಲ್ಲುತ್ತಾರೆ. ಹಂಪಿಯ ಸದಾಶಿವ ಯೋಗಿ, ರಾಮದುರ್ಗದ ದಂಗೆ, ರಂಗನಟಿ ಫ್ಲೋರಿನಾ, ಕುವೆಂಪು ಅವರ ಎಮ್ಮೆ....ಹೀಗೆ ಇದು ಕೇವಲ ಅಂಕಣ ಬರಹವೆಂದರೆ ಕೃತಿಗೆ ಮಾಡಿದ ಅನ್ಯಾಯವಾಗುತ್ತದೆ. ಪ್ರವಾಸಾನುಭವೆಂದರೂ ತೆಳುವಾಗಿ ಬಿಡುತ್ತದೆ. ತರೀಕೆರೆಯ ಕೃತಿ ಎಂದರೆ ಅಷ್ಟೇ ಸಾಕು ಅನ್ನಿಸುತ್ತದೆ. ಉಳಿದುದೆಲ್ಲ ನಿಮಗೆ ಅರ್ಥವಾಗಿ ಬಿಡುತ್ತದೆ. ಕೃತಿಯ ಮುಖಬೆಲೆ 160 ರೂ.

Saturday, August 24, 2013

ಮದ್ರಾಸ್ ಕೆಫೆ: ಒಂದು ರಾಜಕೀಯ ಹತ್ಯೆ ಮತ್ತು ಅದರ ಒಳಸುಳಿಗಳು....

ಸತ್ಯಘಟನೆಗಳನ್ನು ಸಂಗ್ರಹಿಸಿ, ಅದನ್ನು ಸಿನಿಮಾ ಮಾಡುವಾಗ ‘ಸಾಕ್ಷ ಚಿತ್ರ’ವೂ ಅಗದೆ, ಸಿನಿಮಾವೂ ಆಗದೆ ಇರುವ ಅಪಾಯವಿದೆ. ಕನ್ನಡದಲ್ಲಿ ರಾಜೀವ್‌ಗಾಂಧಿ ಹಂತಕರನ್ನು ಬಂಧಿಸುವ ಕತೆಯೊಂದು ‘ಸೈನೈಡ್’ ಹೆಸರಲ್ಲಿ ತೆರೆಗಿಳಿದಿತ್ತು. ನಿರ್ದೇಶಕನ ಪ್ರಯತ್ನ ಉತ್ತಮವಾಗಿಯೇ ಇತ್ತಾದರೂ, ಸೈನೈಡ್ ಪೂರ್ಣವಾಗಿ ಒಂದು ಚಿತ್ರವಾಗಿ ಮನಸ್ಸನ್ನು ಆವರಿಸುವಲ್ಲಿ ಸಫಲವಾಗಲಿಲ್ಲ. ಎಲುಬುಗಳನ್ನು ಜೋಡಿಸುವಲ್ಲಿ ನಿರ್ದೇಶಕ ಯಶಸ್ವಿಯಾದರೂ, ಅದಕ್ಕೆ ಮಾಂಸವನ್ನು ತುಂಬಿ, ಸಿನಿಮಾವೆಂಬ ಆತ್ಮವನ್ನು ಆವಾಹಿಸುವಲ್ಲಿ ವಿಫಲರಾಗುತ್ತಾರೆ. ಈ ಕಾರಣದಿಂದಲೇ ರಾಜೀವ್‌ಗಾಂಧಿಯ ಹತ್ಯೆಯ ದುರಂತವನ್ನು ಆಧರಿಸಿ ಪ್ರತಿಭಾವಂತ ನಿರ್ದೇಶಕ ಶೂಜಿತ್ ಸರಕಾರ್ ‘ಮದ್ರಾಸ್ ಕೆಫೆ’ ಮಾಡಲು ಹೊರಟಾಗ, ಇದು ಎಷ್ಟರ ಮಟ್ಟಿಗೆ ಸಿನಿಮಾ ಆಗಬಹುದು ಎನ್ನುವ ಅನುಮಾನ ಎಲ್ಲರನ್ನೂ ಕಾಡಿತ್ತು. ಆದರೆ ಎಲ್ಲ, ಅನುಮಾನ, ಆತಂಕಗಳನ್ನು ಒದ್ದು, ಒಂದು ಪರಿಪೂರ್ಣ ಸಿನಿಮಾವಾಗಿ ‘ಮದ್ರಾಸ್ ಕೆಫೆ’ ಮೂಡಿ ಬಂದಿದೆ. ಚಿತ್ರದ ಆರಂಭದಿಂದ ಕೊನೆಯವರೆಗೂ ಕುತೂಹಲವನ್ನು ಕಾಯ್ದುಕೊಂಡೇ, ರಾಜೀವ್‌ಗಾಂಧಿಯ ಹತ್ಯೆಯ ಹಿನ್ನೆಲೆಯಲ್ಲಿರುವ ರಾಜಕೀಯಗಳ ಸಿಕ್ಕುಗಳನ್ನು ಬಿಡಿಸಲು ಪ್ರಯತ್ನಿಸುತ್ತದೆ ಈ ಚಿತ್ರ. ಒಂದು ಅಪರೂಪದ ಥ್ರಿಲ್ಲರ್ ಚಿತ್ರವನ್ನು ನೋಡಿದ ಅನುಭವ ನಮ್ಮದಾಗುತ್ತದೆ.

ಚಿತ್ರದ ನಾಯಕ ಜಾನ್‌ಅಬ್ರಾಹಾಂ ಆಗಿರುವುದರಿಂದ ಚಿತ್ರದ ಕುರಿತಂತೆ ಕೆಲವು ಪೂರ್ವಾಗ್ರಹಗಳನ್ನು ಇಟ್ಟುಕೊಂಡೇ ನಾವು ಚಿತ್ರಮಂದಿರ ಪ್ರವೇಶಿಸಿರುತ್ತೇವೆ. ಅವನು ರಾ ಏಜೆಂಟ್ ಅಂದ ಮೇಲೆ, ಒಂಟಿ ನಾಯಕನ ಸಾಹಸಗಳನ್ನು ಅವನ ಅಭಿಮಾನಿಗಳು ನಿರೀಕ್ಷಿಸಿದರೆ ಅವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಇಲ್ಲಿ ಜಾನ್ ಅಬ್ರಹಾಂ ಮೇಜರ್ ವಿಕ್ರಮ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ. ಶಾಂತಿಸೇನೆಯ ವೈಫಲ್ಯದ ಹಿನ್ನೆಲೆಯಲ್ಲಿ ಸಿಂಗ್‌ನ ಪ್ರವೇಶವಾಗುತ್ತದೆ. ಈ ಚಿತ್ರದಲ್ಲಿ ಭಾರತ ಸರಕಾರ ತಮಿಳರ ಹೋರಾಟ ಮತ್ತು ಎಲ್‌ಟಿಎಫ್(ಚಿತ್ರದಲ್ಲಿ ಎಲ್ಲ ಹೆಸರುಗಳನ್ನು ಅಲ್ಪಸ್ವಲ್ಪ ಬದಲಿಸಲಾಗಿದೆ)ನ ನಾಯಕ ಅಣ್ಣಾ ಭಾಸ್ಕರನ್(ಪ್ರಭಾಕರನ್ ಪಾತ್ರ)ನನ್ನು ಬೇರೆ ಬೇರೆಯಾಗಿ ಇಟ್ಟು ತನ್ನ ಯುದ್ಧ ತಂತ್ರವನ್ನು ಹೆಣೆಯುತ್ತದೆ. ಆದುದರಿಂದ ಅಣ್ಣಾನ ಬದಲಿಗೆ ತಮಿಳು ಹೋರಾಟಕ್ಕೆ ಪರ್ಯಾಯ ನಾಯಕನನ್ನು ಒದಗಿಸುವುದು ಶಾಂತಿಯ ಪಡೆಯ ಚಟುವಟಿಕೆ ಯಶಸ್ವಿಯಾಗಲು ಅನಿವಾರ್ಯ ಎಂದು ಅಭಿಪ್ರಾಯ ಪಡುತ್ತದೆ.. ಅಣ್ಣಾ ಭಾಸ್ಕರನ್ ಎಲ್ಲಿಯವರೆಗೆ ಇರುತ್ತಾನೆಯೋ ಅಲ್ಲಿಯವರೆಗೆ ಶ್ರೀಲಂಕಾದಲ್ಲಿ ತಮಿಳರು ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ಯಾಕೆಂದರೆ, ಅಣ್ಣಾನಿಗೆ ಇಡೀ ಜಾಫ್ನಾದ ಸೂತ್ರ ತನ್ನ ಕೈಯಲ್ಲಿರಬೇಕಾಗಿದೆ. ಆದುದರಿಂದ ಅಣ್ಣಾನನ್ನು ಬಂಧಿಸುವ ಪ್ರಕ್ರಿಯೆಗಾಗಿ ಮೇಜರ್ ವಿಕ್ರಮ್ ಸಿಂಗ್‌ನನ್ನು ರಾ ಏಜೆಂಟ್ ಆಗಿ ಜಾಫ್ನಾಕ್ಕೆ ಕಳುಹಿಸಲಾಗುತ್ತದೆ.

 ರಾ ಏಜೆಂಟ್ ಸಾಹಸಗಳ ಕುರಿತಂತೆ ಬಾಲಿವುಡ್‌ನಲ್ಲಿ ಹಲವು ಚಿತ್ರಗಳು ಬಂದಿವೆ. ಏಕ್ ಥಾ ಟೈಗರ್‌ನಲ್ಲಿ ಸಲ್ಮಾನ್‌ನ ಹೊಡಿ ಬಡಿ ನೋಡಿದವರಿಗೆ ಜಾನ್ ಅಬ್ರಹಾಂ ಪಾತ್ರ ನಿರಾಸೆ ತರುವ ಸಾಧ್ಯತೆಯಿದೆ. ನಿರ್ದೇಶಕರು ಇಡೀ ಚಿತ್ರವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆಂದರೆ, ಅತ್ಯಂತ ವಾಸ್ತವಿಕವಾಗಿ ಪ್ರತಿ ಫ್ರೇಮ್‌ನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಇಲ್ಲಿ ರಾ ಏಜೆಂಟ್‌ನ ಕೆಲಸ ತಂತ್ರಗಾರಿಕೆ ಮಾತ್ರ. ಅಣ್ಣಾನಿಗೆ ವಿರೋಧಿಗಳಾಗಿರುವ ಗುಂಪಿನೊಂದಿಗೆ ಮಾತುಕತೆ ನಡೆಸಿ, ಅಣ್ಣಾನ ವಿರುದ್ಧ ನಿಲ್ಲಿಸುವುದು. ಅಣ್ಣಾನನ್ನು ಬಂಧಿಸುವ ಅಥವಾ ಕೊಲ್ಲುವ ಶಾಂತಿ ಪಡೆಯ ದಾರಿಯನ್ನು ಸುಗಮ ಮಾಡಿಕೊಡುವುದು. ಆದರೆ ವಿಕ್ರಮ್ ಸಿಂಗ್ ಆರಂಭದಲ್ಲೇ ಇದರಲ್ಲಿ ಸೋಲನುಭವಿಸಬೇಕಾಗುತ್ತದೆ. ಶಾಂತಿ ಪಡೆಯ ಸೋಲಿನ ಹಿಂದಿರುವ ತನ್ನವರ ದ್ರೋಹ, ಅದಕ್ಕೆ ಬಲಿಯಾಗುವ ಅಮಾಯಕ ಸೈನಿಕರು, ಹೊಸದಿಲ್ಲಿಯ ರಾಜಕೀಯ ಇವೆಲ್ಲವನ್ನು ಸಿನಿಮಾದೊಳಗೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ವಿಕ್ರಮ್ ಸಿಂಗ್ ಈ ಒಳಸುಳಿಗಳ ನಡುವೆಯೇ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾ, ಅಣ್ಣಾನ ಕೇಂದ್ರ ಸ್ಥಳವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ. ಶಾಂತಿ ಸೇನೆ ದಾಳಿ ನಡೆಸುತ್ತದೆ. ಆದರೆ ಅಣ್ಣಾ ಕೂದಲೆಳೆಯ ಅಂತರದಿಂದ ಜೀವವನ್ನು ಉಳಿಸಿಕೊಳ್ಳುತ್ತಾನೆ. ಇದೇ ಸಂದರ್ಭದಲ್ಲಿ ಭಾರತ ಸರಕಾರ ಶಾಂತಿಪಡೆಯನ್ನು ಹಿಂದೆಗೆದುಕೊಳ್ಳುವ ನಿರ್ಧಾರ ಮಾಡುತ್ತ.ದೆ. ಸರಕಾರ ವಿಸರ್ಜನೆಯಾಗಿ ಹೊಸ ಚುನಾವಣೆ ಘೋಷಣೆಯಾಗುತ್ತದೆ. ಲಂಕಾದಲ್ಲಿ ತಮಿಳರ ಕ್ಷೇಮ ತನ್ನ ಗುರಿ ಎಂದು ಮಾಜಿ ಪ್ರಧಾನಿ ಘೋಷಿಸುತ್ತಾರೆ. ಮುಂದೆ ಚುನಾವಣೆಯಲ್ಲಿ ಈ ಪ್ರಧಾನಿ ಗೆದ್ದು ಬಂದರೆ ತನ್ನ ನಾಶ ಸ್ಪಷ್ಟ ಎಂದು ಅರಿತುಕೊಂಡ ಅಣ್ಣಾ ರಾಜೀವ್‌ಗಾಂಧಿ ಕೊಲೆಯ ಸಂಚನ್ನು ಹೂಡುತ್ತಾನೆ. ಉತ್ತರಾರ್ಧದಲ್ಲಿ ರಾ ಈ ಸಂಚನ್ನು ಭೇದಿಸಿ, ರಾಜೀವ್‌ಗಾಂಧಿಯನ್ನು ರಕ್ಷಿಸಲು ಯತ್ನಿಸುವುದು. ಆದರೆ ರಾಜಕೀಯ ಒಳಸುಳಿಗಳಿಂದಾಗಿ ಅದರಲ್ಲಿ ವಿಫಲವಾಗುವುದು ಒಟ್ಟುಕತೆ.

ಜಾನ್ ಅಬ್ರಹಾಂ ಇಡೀ ಚಿತ್ರದಲ್ಲಿ ತನ್ನ ಪಾತ್ರದ ಗಾಂಭೀರ್ಯವನ್ನು ಕಾಪಾಡಿಕೊಂಡಿದ್ದಾರೆ. ಅವರ ವೌನವೇ ಅವರ ಮಾತಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಬಿಗಿಯಾದ ಚಿತ್ರಕತೆ ಚಿತ್ರದ ಹೆಗ್ಗಳಿಕೆ. ಸಂಗೀತ ಚಿತ್ರದ ನಡೆಗೆ ಪೂರಕವಾಗಿದೆ. ರಾ ಅಧಿಕಾರಿ ಪಾತ್ರಕ್ಕೆ ಸಿದ್ಧಾರ್ಥ ಬಸು ನ್ಯಾಯ ನೀಡಿದ್ದಾರೆ. ಪತ್ರಕರ್ತೆಯ ಪಾತ್ರದಲ್ಲಿ ನರ್ಗೀಸ್ ಫಖ್ರಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರದಲ್ಲಿ ಯಾರೂ ನಾಯಕರಲ್ಲ. ಎಲ್ಲರೂ ನಾಯಕರೇ. ಅಣ್ಣಾ ಪಾತ್ರದಲ್ಲಿ ಸಣ್ಣದಾಗಿ ಕಾಣಿಸಿಕೊಂಡಿರುವ ಅಜಯ್ ರತ್ನಂ ಕೂಡ ಯಾವುದೇ ಮೆಲೋಡ್ರಾಮಗಳಿಲ್ಲದೆ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ನಿರೂಪಣೆ, ನಟನೆ, ಸಂಭಾಷಣೆ ವಾಸ್ತವಕ್ಕೆ ಹತ್ತಿರವಾಗಿದೆ. ರಾಜೀವ್‌ಗಾಂಧಿಯ ಪಾತ್ರವನ್ನು ಎಲ್ಲೂ ರಾಜಕೀಯ ವೈಭವೀಕರಣಕ್ಕೆ ಅಥವಾ ಪೂರ್ವಾಗ್ರಹಕ್ಕೆ ಈಡಾಗದೆ ಕಟ್ಟಿಕೊಟ್ಟಿರುವುದು ನಿರ್ದೇಶಕನ ಪಕ್ವತೆಯನ್ನು ತೋರಿಸುತ್ತದೆ. ಆದುದರಿಂದಲೇ ಇಡೀ ಚಿತ್ರ ಇಷ್ಟವಾಗುತ್ತದೆ. ಕೆಲವೊಮ್ಮೆ ಚಿತ್ರದ ನಿಲುವು ನಮಗೆ ಒಪ್ಪಿಗೆಯಾಗದೇ ಇರಬಹುದು. ಆದರೆ ಒಂದು ಥ್ರಿಲ್ಲರ್ ರಾಜಕೀಯ ಚಿತ್ರವನ್ನು ನೋಡಲು ಹೋದ ನಿಮಗೆ ಸಿನಿಮಾವಾಗಿ ‘ಮದ್ರಾಸ್‌ಕೆಫೆ’ ಮೋಸ ಮಾಡುವುದಿಲ್ಲ.

ದಿನಕ್ಕೊಂದು ಪುಸ್ತಕ-ಮೌನದ ಕೌದಿಯಲ್ಲಿ ಸುತ್ತಿಟ್ಟ ಸಾಲುಗಳು: ದೀಪದ ಗಿಡ


ಬಸವರಾಜ ಸೂಳಿಭಾವಿ ಕನ್ನಡ ಲೋಕಕ್ಕೆ ಹಲವು ಕಾರಣಗಳಿಗಾಗಿ ಚಿರಪರಿಚಿತರು. ಹೋರಾಟಚಳವಳಿಯಲ್ಲಿ ಒಮ್ಮೆ ಸಕ್ರಿಯರಾಗಿದ್ದ ಬಸು ಅವರು ಇದೀಗ ಪುಸ್ತಕಕಗಳ ಹಣತೆಗಳ ಮೂಲಕ ಕನ್ನಡದ ಕತ್ತಲನ್ನು ಗುಡಿಸುತ್ತಿರುವವರು. ಇವರ ಇನ್ನೊಂದು ಶಕ್ತಿ ಕಾವ್ಯ. ಅಥವಾ ಇವರ ನಿಜವಾದ ಶಕ್ತಿಯೇ ಕಾವ್ಯವೇನೋ? ‘ದೀಪದ ಗಿಡ’ ಓದುತ್ತಾ ಹೋದ ಹಾಗೆ, ಅದು ನಮ್ಮಾಳಗೆ ಬೆಳಕಾಗಿ ಹರಡಿಕೊಳ್ಳುವ ಪರಿಗೆ, ನಮ್ಮ ಕಣ್ಣ ಹಣತೆಯ ಕುಡಿ ತುಳುಕದೇ ಇರುವುದಿಲ್ಲ. ಅಲ್ಲಮನ ಅನುಭಾವ, ಬುದ್ಧನ ಕೆನ್ನೆಯ ಬಿಸುಪು, ಬಾಗಿದ ತೆನೆಯ ಕಂಪು, ಕುದಿವ ಅನ್ನದ ಪರಿಮಳ ಈ ಕಾವ್ಯದ ಮುಖ್ಯ ಗುಣಗಳು. ಒಂದು ಕಾಲದಲ್ಲಿ ಜನಸಂಘಟನೆಯಲ್ಲಿ ಸಕ್ರಿಯರಾಗಿದ್ದ ಬಸು ಅವರು ತನ್ನ ವೌನದ ಕೌದಿಯಲ್ಲಿ ಸುತ್ತಿಟ್ಟ ಸಾಲುಗಳು ಇವು. ಘಜಲ್‌ನ ಗುಣವುಳ್ಳ ಇಲ್ಲಿರುವ ಸಾಲುಗಳು ಉರಿದು ಮುಗಿದು ಹೋಗುವಂತಹದಲ್ಲ. ನಮ್ಮಿಳಗೆ ಬೆಳಕಿನ ಗಿಡವಾಗಿ ಸಹಸ್ರ ದೀಪಗಳನ್ನು ಹಚ್ಚುತ್ತವೆ. ವೌನ, ವಿಷಾದ, ಸಾವು, ನೆನಪು, ಬದುಕು ಇವೇ ಇಲ್ಲಿರುವ ಕವಿತೆಗಳ ಪ್ರಧಾನ ವಸ್ತುಗಳು.
‘‘ಎಷ್ಟು ಸಲ ತೊಳೆದರೂ ಕನ್ನಡಿಯನ್ನ
ಮುಖದ ಮೇಲಿನ ಕಲೆ ಹಾಗೇ ಉಳಿಯಿತು’’ ಇಂತಹ ಆತ್ಮವಿಮರ್ಶೆಯ ಸಾಲು ಅಲ್ಲಲ್ಲಿ ನಮ್ಮನ್ನು ಥಕ್ಕೆಂದು ಆವರಿಸಿಕೊಳ್ಳುತ್ತದೆ.
‘‘ಹೆಣಗಳಿಗೆ ಮಾತಿಲ್ಲ ಅಂದವರ್ಯಾರು?
ದಾರಿಯಲ್ಲಿ ಎದುರಾದ ಹೆಣಗಳೆಲ್ಲ ಬದುಕ ಎಚ್ಚರಿಸುತ್ತಾ ನಡೆದಿದ್ದವು’’ ಅಧ್ಯಾತದ್ಮ ಹೊಳಹುಗಳು ಹೊಳೆಯಿಸುವ ಇಂತಹ ಸಾಲುಗಳೂ ಇಲ್ಲಿ ಸಾಕಷ್ಟಿವೆ. ಬದುಕನ್ನು ತೀವ್ರವಾಗಿ ಪ್ರೀತಿಸುವ, ಹಚ್ಚಿಕೊಂಡಿರುವ ಕವಿಯಿಂದಷ್ಟೇ ಇಂತಹದೊಂದು ದೀಪದ ಗಿಡವನ್ನು ನೆಡಲು ಸಾಧ್ಯ. ಕನ್ನಡದ ಕಾವ್ಯಪ್ರಕಾರಕ್ಕೆ ಹೊಸ ಚೈತನ್ಯವನ್ನು, ಹೊಸ ಹೊಳಪನ್ನು ಈ ಸಾಲುಗಳು ನೀಡಿವೆ. ಕವಿತೆಗಳನ್ನು ಜನರ ಎದೆಯ ಬಳಿಗೆ ಕೊಂಡೊಯ್ಯುವ ಕವಿಯ ಪ್ರಯತ್ನ, ಮುಂದೆ ಹೊಸ ಪರಂಪರೆಯಾಗಿ ಮುಂದುವರಿಯುವ ಸಾಧ್ಯತೆಯಿದೆ.
 ಕವಿ ಪ್ರಕಾಶನ ಹೊನ್ನಾವರ(ದೂರವಾಣಿ: 9480211320) ಇವರು ಕೃತಿಯನ್ನು ಹೊರ ತಂದಿದ್ದಾರೆ. ಕೃತಿಯ ಮುಖಬೆಲೆ 150 ರೂ.

Thursday, August 22, 2013

ದಿನಕ್ಕೊಂದು ಪುಸ್ತಕ: ತಾಜೂಮಾರ ತಾಜಾ ಕವಿತೆಗಳು

ರಂಗಕರ್ಮಿಯಾಗಿರುವ ತಾಜೂಮಾ ಎಂಬ ಮುಸ್ಲಿಮ್ ತರುಣಿ ಕಾವ್ಯಲೋಕಕ್ಕೆ ಕಾಲಿಟ್ಟಿದ್ದಾರೆ. ‘ತಾಜೂಮಾ’ ಎಂಬ ತಲೆಬರಹದೊಂದಿಗೇ ಹೊರ ಬಂದಿರುವ ಈ ಸಂಕಲನವನ್ನು ಲಂಕೇಶ್ ಪ್ರಕಾಶನ ಮುದ್ರಿಸಿದೆ. ‘ಶಬ್ದ ನನ್ನೊಳಗೆ ಹೂವ ಹಾಳೆ...ತೆರೆದಷ್ಟೇ ಕೋಣೆ ಬೆಳಕು’ ಎಂಬಂತಹ ಥಕ್ಕೆನಿಸುವ ಸಾಲುಗಳಿಂದ ಭರವಸೆ ಹುಟ್ಟಿಸುವ ತಾಜೂಮಾ, ಕಾವ್ಯ ಲೋಕಕ್ಕೆ ತಾಜಾತನವನ್ನು ಕೊಟ್ಟಿದ್ದಾರೆ.

ಹಲವು ಕವಿತೆಗಳು ಬಹಿರಂಗ ರಾಜಕೀಯವನ್ನು ತೆರೆದಿಟ್ಟರೆ, ಕೆಲವು ಕವಿತೆಗಳು ಕವಿಯ ಒಳಗಿನ ಸೆಲೆಯಾಗಿ ಹುಟ್ಟಿದಂತವುಗಳು. ‘ಕಬ್ಬಿಣದ ತೊಟ್ಟಿಲು ಕಂದನ ತೊರೆದು ಆಕಾಶಕ್ಕೆ ಹಾರುತ್ತಿದೆ...’ ಎನ್ನುವ ಭಾವಗಳು ಅಲ್ಲಲ್ಲಿ ಅವರ ನಿಜ ಕವಯತ್ರಿಯನ್ನು ತೆರೆದಿಡುತ್ತದೆ. ರಂಗಭೂಮಿಯ ಮಾತುಗಳೇ ಕೆಲವೆಡೆ ಕವಿತೆಗಳಾಗಿ, ವಾಚ್ಯಗಳೆನಿಸಿ ಕಿರಿಕಿರಿಯಾಗುವುದೂ ಇದೆ. ಆದರೆ, ಅಂತಹ ಉದಾಹರಣೆಗಳು ಬೆರಳೆಣಿಕೆಯಷ್ಟು ಮಾತ್ರ. ಹಾಗೆ ನೋಡಿದರೆ, ತಾಜೂಮಾ ಅವರ ಮೊದಲ ಪ್ರಯತ್ನಗಳು ಇವೆಲ್ಲ. ಕವಿತೆಗಳು ಹುಟ್ಟುವ ಏಕಾಂತಗಳನ್ನು ತನ್ನದಾಗಿಸುವ ತಾಜೂಮಾ ತಪಸ್ಸು ಮುಂದುವರಿಯಬೇಕಾಗಿದೆ. ಇನ್ನಷ್ಟು ಉತ್ತಮ ಕವಿತೆಗಳನ್ನು ಈ ಕವಯತ್ರಿಯಿಂದ ನಿರೀಕ್ಷಿಸಬಹುದಾಗಿದೆ.


ಅಂದಹಾಗೆ ಇಡೀ ಸಂಕಲನವನ್ನು ಅತ್ಯಾಕರ್ಷಕವಾಗಿ ರೂಪಿಸಲಾಗಿದೆ. ಪತ್ನಿಯ ಕವಿತೆಗಳಿಗೆ ರಂಗಕರ್ಮಿ, ಕಲಾವಿದ ಇಕ್ಬಾಲ್ ರೇಖಾಚಿತ್ರಗಳ ಮೂಲಕ ಜುಗಲ್‌ಬಂದಿ ನಡೆಸಿದ್ದಾರೆ. ಕೃತಿಯ ಮುಖಬೆಲೆ 75 ರೂ.

ಶಿಪ್ ಆಫ್ ಥೀಸಿಯಸ್: ಬಿಡಿ ಭಾಗಗಳನ್ನು ಕಳಚಿಟ್ಟ ಮನುಷ್ಯ ಮತ್ತು ಬದುಕು...!

 ಭಾರತೀಯ ಚಿತ್ರ ಪರಂಪರೆಯಲ್ಲಿ ಕಲಾತ್ಮಕ ಚಳವಳಿಯ ಬೇರುಗಳನ್ನು ತಡಕಾಡಿದರೆ ಅಲ್ಲಿ ಕೈಗೆ ತೊಡರುವುದು ಕನ್ನಡ ಮತ್ತು ಬಂಗಾಳಿ ಮೊದಲಾದ ಪ್ರಾದೇಶಿಕ ಭಾಷೆಗಳು. ಬಾಲಿವುಡ್ ಮಂದಿ ಸಿನಿಮಾವನ್ನು ಒಂದು ಉದ್ಯಮವಾಗಿ ಭಾವಿಸಿ ಚಿತ್ರಗಳನ್ನು ಮಾಡುತ್ತಿದ್ದಾಗ, ಕನ್ನಡ, ಬಂಗಾಳಿ, ಮಲಯಾಳಂನಂತಹ ಪ್ರಾದೇಶಿಕ ಭಾಷೆಗಳು ಸಿನಿಮಾವನ್ನು ಕಲೆಯಾಗಿ ಸ್ವೀಕರಿಸಿ, ಹಲವು ಪ್ರಯೋಗಗಳನ್ನು ಮಾಡಿದವು. ಕಲಾತ್ಮಕ ಮತ್ತು ವಾಣಿಜ್ಯ ಎಂದು ಗೆರೆ ಎಳೆದಂತೆ ಸಿನಿಮಾ ಸೀಳಾದಾಗ, ಅದರ ನಡುವೆ ಒಂದು ಸೇತುವೆಯನ್ನು ನಿರ್ಮಿಸಿ ಚಿತ್ರವನ್ನು ಮಾಡುವ ನಿರ್ದೇಶಕರ ತಂಡ ಹುಟ್ಟಿಕೊಂಡಿತು. ಬಾಲಿವುಡ್‌ನಲ್ಲಿ ಅರ್ಧ ಸತ್ಯ, ಅಂಕುರ್, ಉತ್ಸವ್, ಮಂಡಿ ಹೀಗೆ ಕಲಾತ್ಮಕತೆಯ ಜೊತೆಗೇ ಸಿನಿಮಾವನ್ನು ಜನರೆಡೆಗೆ ಕೊಂಡೊಯ್ಯುವ ಪ್ರಯತ್ನ ನಡೆಯಿತು. ಮಲಯಾಳಂ ಚಿತ್ರಗಳೂ ಇದರಲ್ಲಿ ಯಶಸ್ವಿಯಾದವು. ಆದರೆ ಕರ್ನಾಟಕದಲ್ಲಿ ದುರದೃಷ್ಟವಶಾತ್, ಇನ್ನೂ ಆ ಪ್ರಯತ್ನ ನಡೆದಿಲ್ಲ. ಈ ಕಾರಣದಿಂದಲೇ, ಕನ್ನಡದ ಚಿತ್ರೋದ್ಯಮ ನಿಂತ ನೀರಾಗಿ ಕೊಳೆಯುತ್ತಿದೆ.
ಇದೇ ಸಂದರ್ಭದಲ್ಲಿ ಬಾಲಿವುಡ್‌ನ ಕೆಲವು ಪ್ರತಿಭಾವಂತ ತರುಣರು ಇಂದು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಮತ್ತು ಅವುಗಳಿಗಾಗಿಯೇ ಚಿತ್ರಗಳನ್ನು ಮಾಡುವಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಮಲ್ಟಿಪ್ಲೆಕ್ಸ್‌ನ ಬುದ್ದಿಜೀವಿ ಜನರನ್ನು ಗುರಿಯಾಗಿರಿಸಿಕೊಂಡು ಗಂಭೀರ ಚಿತ್ರಗಳು ಒಂದರನಂತರ ಒಂದರಂತೆ ಬರತೊಡಗಿವೆ. ಅವುಗಳಲ್ಲಿ ಮುಖ್ಯವಾದದ್ದು ಮತ್ತು ಇತ್ತೀಚೆಗೆ ಭಾರೀ ಸುದ್ದಿಯಲ್ಲಿರುವುದು ಆನಂದ್ ಗಾಂಧಿ ಎನ್ನುವ 30ರ ತರುಣ ನಿರ್ದೇಶಕನ ‘ಶಿಪ್ ಆಫ್ ಥೀಸಿಯಸ್. ‘ಭಾರತದ ಚಿತ್ರಗಳೂ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳ ಚಿತ್ರಗಳ ಮಟ್ಟಿಗೆ ಬೆಳೆದಿದೆ ಎನ್ನುವುದನ್ನು ಶಿಪ್ ಆಫ್ ಥೀಸಿಯಸ್’ ತೋರಿಸಿಕೊಂಡಿದೆ ಎಂದು ವಿದೇಶಿ ಚಿತ್ರ ವಿಮರ್ಶಕರು ಈ ಚಿತ್ರವನ್ನು ವೀಕ್ಷಿಸಿ ತಮ್ಮ ಷರಾವನ್ನು ಬರೆದಿದ್ದಾರೆ. ಜೊತೆಗೆ ಬಾಲಿವುಡ್‌ನ ಹಿರಿಯ, ಖ್ಯಾತ ನಿದೇರ್ಶಕರೂ ಆನಂದ್ ಗಾಂಧಿಯ ಪ್ರಯತ್ನವನ್ನು ಅಭಿನಂದಿಸಿದ್ದಾರೆ. ಭಾರತೀಯ ಚಿತ್ರಪಂಡಿತರ ಹೊಗಳಿಕೆಯ ಸುರಿಮಳೆಯೇ ಈ ಚಿತ್ರದ ಮೇಲೆ ಸುರಿದಿದೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಈ ಚಿತ್ರ ತನ್ನದಾಗಿಸಿಕೊಂಡಿದೆ.


  ‘ಶಿಪ್ ಆಫ್ ಥೀಸಿಯಸ್’ ಮೂಲಭೂತವಾಗಿ ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಶಬ್ದ. ಒಂದು ವಸ್ತುವಿನ ಎಲ್ಲ ಭಾಗಗಳನ್ನು ಬಿಡಿಬಿಡಿಯಾಗಿ ಸ್ಥಳಾಂತರಿಸಿ, ಪುನರ್ನಿಮಿಸಿದರೆ ಅದು ಮೂಲ ವಸ್ತುವಾಗಿ ಉಳಿಯುತ್ತದೆಯೆ? ಎಂಬ ವಿರೋಧಾಭಾಸದ ಕುರಿತು ಉತ್ತರವನ್ನು ಹುಡುಕುವ ಪ್ರಯತ್ನವೇ ‘ಶಿಪ್ ಅಫ್ ಥೀಸಿಯಸ್’. ಹೆರಾಕ್ಲಿಟಸ್, ಸಾಕ್ರಟೀಸ್, ಪ್ಲೇಟೋರಂತಹ ಚಿಂತಕರನ್ನು ತಲೆಕೆಡಿಸಿದ ಪ್ರಶ್ನೆಯಿದು. ಥೀಸಿಯಸ್ ಎಂಬ ಹಡಗಿನ ಬಿಡಿ ಭಾಗಗಳನ್ನು ತೆಗೆದು ಹೊಸ ಹಡಗನ್ನು ನಿರ್ಮಿಸಲಾಯಿತು. ಈಗ ಹಡಗು ಮೂಲ ಹಡಗಾಗಿ ಉಳಿದಿದೆಯೆ? ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪ್ಲುಟಾರ್ಕ್, ಥಾಮಸ್ ಹೋಬ್ಸ್ ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡುತ್ತಾರೆ. ಆನಂದ್ ಗಾಂಧಿ ಆ ಸಿದ್ಧಾಂತವನ್ನು ಕೇಂದ್ರವಾಗಿಸಿಕೊಂಡು, ಮನುಷ್ಯನ ಕುರಿತಂತೆ ಈ ಚಿತ್ರದಲ್ಲಿ ಚರ್ಚಿಸುತ್ತಾರೆ.

ಕಿರುಚಿತ್ರಗಳ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಆನಂದ್ ಗಾಂಧಿಯ ಈ ಚಿತ್ರವೂ, ಮೂರು ಕಿರುಚಿತ್ರಗಳ ಸಂಗಮ. ಆದರೆ ಕ್ಲೈಮಾಕ್ಸ್‌ನಲ್ಲಿ ಈ ಮೂರು ಚಿತ್ರಗಳ ಮುಖ್ಯಪಾತ್ರಗಳನ್ನು ಜೊತೆ ಸೇರಿಸುವ ಪ್ರಯತ್ನವನ್ನು ಮಾಡುತ್ತಾರೆ. ಚಿತ್ರದಲ್ಲಿ ಮೂರು ವಿಭಿನ್ನ ಪಾತ್ರಗಳಿವೆ. ಒಬ್ಬ ಕುರುಡಿ ಛಾಯಾಚಿತ್ರಗ್ರಾಹಕಿ, ಇನ್ನೊಬ್ಬ ಜೈನ ಸನ್ಯಾಸಿ ಮತ್ತು ಮಗದೊಬ್ಬ ಷೇರು ಉದ್ಯಮಿ. ಈ ಮೂರು ಪಾತ್ರಗಳಿಗೆ ತಮ್ಮ ತಮ್ಮ ಐಡೆಂಟಿಟಿಗಳು ಸವಾಲಾಗುವುದು ಮತ್ತು ಆ ಸವಾಲನ್ನು ಮುಖಾಮುಖಿಯಾಗುವುದು ಒಟ್ಟು ಚಿತ್ರದ ಕತೆ. ಛಾಯಾಗ್ರಾಹಕಿಯ ಕತೆ ಅಲೌಕಿಕ ಪ್ರಜ್ಞೆಗೆ ಸಂಬಂಧಿಸಿದ್ದು. ಕುರುಡಿಯಾಗಿದ್ದರೂ ಸದ್ದುಗಳನ್ನು ಆಲಿಸುತ್ತದೇ ಮುಂದಿರುವ ದೃಶ್ಯಗಳನ್ನು ತನ್ನ ಕ್ಯಾಮರಾದಲ್ಲಿ ಹಿಡಿಯುವ ಚಾಕಚಕ್ಯತೆ ಆಲಿಯಾ ಕಮಾಲ್ ಅವಳದು. ಈ ಮೂಲಕವೇ ಅವರು ವಿಶ್ವವಿಖ್ಯಾತಳಾಗುತ್ತಾಳೆ. ಅವಳ ಫೋಟೋಗಳು ಬಹು ಚರ್ಚೆಗೊಳಗಾಗುತ್ತವೆ. ಇದೇ ಸಂದರ್ಭದಲ್ಲಿ ವೈದ್ಯರ ಶಸ್ತ್ರ ಚಿಕಿತ್ಸೆಯ ಬಳಿಕ ಅವಳಿಗೆ ಕಣ್ಣು ಮರಳಿ ಬರುತ್ತದೆ. ವಿಪರ್ಯಾಸವೆಂದರೆ, ಅವಳಿಗೆ ಈಗ ಮೊದಲಿನಂತೆ ಸದ್ದುಗಳನ್ನು ಹಿಂಬಾಲಿಸಿ ದೃಶ್ಯವನ್ನು ಸೆರೆಹಿಡಿಯುವುದಕ್ಕಾಗುವುದಿಲ್ಲ. ಮೊದಲಿನಂತೆ ಅದ್ಭುತ ಫೋಟೋಗಳನ್ನು ಹಿಡಿಯುವಲ್ಲಿ ಅವಳು ವಿಫಲಳಾಗುತ್ತಾಳೆ. ತನಗೆ ದೊರಕಿದ ಕಣ್ಣು ಮತ್ತು ಸದ್ದು ಇವುಗಳ ನಡುವಿನ ತಿಕ್ಕಾಟದಲ್ಲಿ ಆಲಿಯಾ ತತ್ತರಿಸುತ್ತಾಳೆ. ಆದರೆ ಒಂದು ಸಂದರ್ಭದಲ್ಲಿ ಅವಳು ಮುಖಾಮುಖಿಯಾಗುವ ಹಿಮಾಲಯದ ತಪ್ಪಲು, ಹರಿಯುವ ನೀರು, ನೀಲಿ ಆಕಾಶ, ಸುತ್ತಲಿನ ನೀರವತೆ ಅವಳ ಆಲೋಚನೆಯ ದೃಷ್ಟಿಯನ್ನು ಬದಲಿಸುತ್ತದೆ. ಕ್ಯಾಮರಾ ಕೈ ಜಾರುತ್ತದೆ. ಪ್ರಕೃತಿಯನ್ನು ವಿನೀತಳಾಗಿ, ಮೂಕವಿಸ್ಮಿತಳಾಗಿ ಆಸ್ವಾದಿಸತೊಡಗುತ್ತಾಳೆ.


 ಎರಡನೆಯ ಕಥೆ ಮಧ್ಯ ವಯಸ್ಸಿನ ಜೈನ ಸನ್ಯಾಸಿಯದು. ಇಲ್ಲಿಯ ತಾಕಲಾಟ ಹಿಂಸೆ ಮತ್ತು ಅಹಿಂಸೆಯದು. ಔಷಧಿ ತಯಾರಿಕೆಗಾಗಿ ಮೂಕ ಪ್ರಾಣಿಗಳ ಹಿಂಸೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಹೋರಾಟ ನಡೆಸುವ ಮೈತ್ರೇಯಿಗೆ ಪರಿಚಯವಾಗುವುದು ಚಾರ್ವಾಕ ಎಂಬ ಯುವ ವಕೀಲ. ಈ ಹೋರಾಟದ ಹಂತದಲ್ಲೇ ಸನ್ಯಾಸಿಯ ಅತ್ಯಂತ ಕಠಿಣ ಬದುಕನ್ನೂ ತೋರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಸನ್ಯಾಸಿ ಯಕೃತ್ತಿನ ಕ್ಯಾನ್ಸರಿಗೆ ಒಳಗಾಗುತ್ತಾನೆ. ಈಗ ಅವನ ಆಯ್ಕೆ ಒಂದೋ ಕೃತಕ ಅಂಗವನ್ನು ಪಡೆದು, ಔಷಧಿಯನ್ನು ಸೇವಿಸುವುದು. ಅಥವಾ ದೇಹ ತ್ಯಾಗ ಮಾಡುವುದು. ಈ ಹಂತದಲ್ಲಿ ಸನ್ಯಾಸಿ ದೇಹ ತ್ಯಾಗಕ್ಕಿಳಿಯುತ್ತಾನೆ. ಇದೇ ಸಂದರ್ಭದಲ್ಲಿ ಚಾರ್ವಾಕ ಕೇಳುವ ಪ್ರಶ್ನೆ ‘ತನ್ನ ದೇಹವನ್ನು ತಾನೇ ದಂಡಿಸಿಕೊಳ್ಳುವ ಹಕ್ಕು ನಮಗಿದೆಯೇ? ಅದು ಹಿಂಸೆಯಲ್ಲವೇ?’ ಸಾವಿನ ಕೊನೆಯ ಹಂತದಲ್ಲಿರುವಾಗ ಆತ ಈ ಪ್ರಶ್ನೆಯನ್ನು ಒಪ್ಪಿಕೊಂಡು ಔಷಧಿಯನ್ನು ಸ್ವೀಕರಿಸಿ, ಬದುಕಿಗೆ ಮುಖ ಮಾಡುತ್ತಾನೆ.

 ಮೂರನೆಯ ಕತೆ ಶೇರು ಉದ್ಯಮವನ್ನು ಅವಲಂಬಿಸಿದ ಯುವಕ ನವೀನ್ ಪರ್ನಾಮಿಗೆ ಸಂಬಂಧಿಸಿದ್ದು. ಕಿಡ್ನಿ ಶಸ್ತಕ್ರಿಯೆ ಮುಗಿಸಿ, ಚೇತರಿಸಿ ಮನೆ ಸೇರುವ ಈತನನ್ನು ಈತನ ಅಜ್ಜಿ ‘ಬದುಕನ್ನು ಗಂಭೀರವಾಗಿ ಸ್ವೀಕರಿಸು’ ಎಂದು ಸದಾ ತರಾಟೆಗೆ ತೆಗೆದುಕೊಳ್ಳುತ್ತಿರುತ್ತಾರೆ. ಆಕೆ ಬದುಕಿನ ವೌಲ್ಯಗಳನ್ನು ನಂಬಿದಾಕೆ. ಒಂದು ದಿನ ಅವಳೇ ಬಿದ್ದು ಆಸ್ಪತ್ರೆ ಸೇರಬೇಕಾಗುತ್ತದೆ. ಅಜ್ಜಿಯನ್ನು ನೋಡಿಕೊಳ್ಳುವ ಹೊಣೆ ನವೀನ್ ಮೇಲೆ ಬೀಳುತ್ತದೆ. ತನ್ನ ಕಂಪ್ಯೂಟರ್ ಜೊತೆ ಕೆಲಸ ಮಾಡುತ್ತಲೇ ಅಜ್ಜಿಯ ಉಪದೇಶವನ್ನೂ ಕೇಳಬೇಕಾಗುತ್ತದೆ ಆತನಿಗೆ. ಇದೇ ಹೊತ್ತಿನಲ್ಲಿ ಆಸ್ಪತ್ರೆಯಲ್ಲಿ ಯಾರೋ ಚೀರಿದ ಧ್ವನಿ. ನವೀನ್ ಧ್ವನಿ ಬಂದತ್ತ ದಾವಿಸುತ್ತಾನೆ. ನೋಡಿದರೆ ಜನರಲ್ ವಾರ್ಡ್‌ನಲ್ಲಿ ಒಬ್ಬಾಕೆ ಚೀರಾಡುತ್ತಿರುತ್ತಾಳೆ. ಆಕೆಯ ಗಂಡನ ಕಿಡ್ನಿಯನ್ನು ಆಸ್ಪತ್ರೆಯ ವೈದ್ಯರು ಕದ್ದಿರುತ್ತಾರೆ. ನವೀನ್ ಈ ಕುರಿತು ವಿಚಾರಿಸುತ್ತಾ ಹೋದಂತೆ ತನಗೆ ಅಳವಡಿಸಿದ ಕಿಡ್ನಿ ಅವಳ ಗಂಡನಿಂದ ಕದ್ದಿರುವುದೇ ಎಂಬ  ಅನುಮಾನ ತಲೆಯೆತ್ತುತ್ತದೆ.  ಅದರ ಮೂಲವನ್ನು ಹುಡುಕಿ, ಕಿಡ್ನಿಯನ್ನು ಅವನಿಗೆ ಮರಳಿಸುವ ಪ್ರಯತ್ನವನ್ನು ಮಾಡುತ್ತಾನೆ. ಆರೋಪಿಗಳಿಗೆ ಶಿಕ್ಷೆಯಾಗಿಸಲು ಪ್ರಯತ್ನಿಸುತ್ತಾನೆ. ಆದರೆ ಕಿಡ್ನಿ ಕಳೆದುಕೊಂಡಾತ ಹೋರಾಟದ ಬದಲಿಗೆ, ಸಂಸ್ಥೆ ನೀಡುವ ಪರಿಹಾರಕ್ಕೇ ಸಂತೃಪ್ತನಾಗುತ್ತಾನೆ. ಆದರೆ, ಈ ಘಟನೆ ಆತನಿಗೆ ಬದುಕಿನ ಕಡೆಗೆ ಮುಖ ಮಾಡುವಂತೆ ಮಾಡುತ್ತದೆ. ಚಿತ್ರದ ಕೊನೆಯಲ್ಲಿ ಈ ಮೂರು ಕಥಾ ಪಾತ್ರಗಳು, ಹಾಗೆಯೇ ಇವರಂತಹ ಇನ್ನೂ ಹಲವು ಪಾತ್ರಗಳು ಒಂದು ಆಸ್ಪತ್ರೆಯಲ್ಲಿ ಜೊತೆಯಾಗುತ್ತಾರೆ. 


ಕುರುಡಿ ಮತ್ತು ಶೇರು ಉದ್ಯಮಿಯ ಕತೆ ಎದೆಯನ್ನು ಕಲಕುವಂತಿದೆ. ನಿರ್ದೇಶಕನ ಉದ್ದೇಶವನ್ನು ಮೀರಿ ಕತೆ ನಮ್ಮಾಳಗೆ ಬೆಳೆಯುತ್ತದೆ. ಆದರೆ ಜೈನ ಸನ್ಯಾಸಿಯ ಕತೆ ಎಲ್ಲೋ ಒಂದಿಷ್ಟು ವಾಚ್ಯವಾದಂತೆನಿಸುತ್ತದೆ. ಅಲ್ಲಿ, ಮಾತು, ಚರ್ಚೆಗಳು ಕತಾವಸ್ತುವಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಕತೆಯನ್ನು ಒಟ್ಟಾಗಿ ‘ಶಿಪ್ ಆಫ್ ಥೀಸಿಯಸ್’ ಹಿನ್ನೆಲೆಯಲ್ಲಿ ಗ್ರಹಿಸುವಾಗ ಕೆಲವು ಸಮಸ್ಯೆಗಳು ಕಾಡುತ್ತವೆ. ಚಿತ್ರಕ್ಕೆ ಆ ಹೆಸರು ಮಿತಿಯನ್ನು ಹೇರುತ್ತದೆ. ನಿರ್ದೇಶಕ ಆ ಹೆಸರಿಗೆ ಬದ್ಧನಾಗದೆ ಉಳಿದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ. ಚಿತ್ರದ ಕತೆ ತಣ್ಣಗೆ ಒಂದು ಕಿರು ನದಿಯಂತೆ ಸದ್ದಿಲ್ಲದೆ ನಮ್ಮಿಳಗೇ ಒಂದಾಗಿ ನಮ್ಮ ನರ ನಾಡಿಗಳಲ್ಲಿ ಹರಿಯತೊಡಗುತ್ತದೆ. ಸಂಗೀತದ ಅಬ್ಬರವಿಲ್ಲ. ನಿರೂಪಣೆಯ ವೈಭವವಿಲ್ಲ. ಮೂರು ಮುಖ್ಯ ಪಾತ್ರಗಳಲ್ಲಿ ಆಬಿದಾ ಅಲ್‌ಕಶಫ್, ನೀರಜ್ ಕಬಿ ಮತ್ತು ಸೋಹಮ್ ಶಾ ನಟನೆ ಚಿತ್ರವನ್ನು ಇನ್ನಷ್ಟು ಹತ್ತಿರವಾಗಿಸುತ್ತದೆ ಒಂದು ಸಿನಿಮಾವನ್ನು ಯಾಕಾಗಿ ಮಾಡಬೇಕು, ಹೇಗೆ ಮಾಡಬೇಕು ಎನ್ನುವುದಕ್ಕೆ ಇಲ್ಲಿ ಉತ್ತರವಿದೆ. ಛಾಯಾಗ್ರಹಣವಂತೂ ಅತ್ಯದ್ಭುತವಾಗಿದೆ. ಹೃದಯದ ಕಣ್ಣುಗಳಿಂದ ಛಾಯಾಗ್ರಾಹಕ ದೃಶ್ಯಗಳನ್ನು ನಿರೂಪಿಸಿದ್ದಾನೆ. 

ಇವೆಲ್ಲವುಗಳ ನಡುವೆ ಒಂದು ಮಾತು. ಇದು ಮಲ್ಟಿಪ್ಲೆಕ್ಸ್‌ನ ಬುದ್ದಿಜೀವಿಗಳನ್ನು ಗುರಿಯಾಗಿರಿಸಿಕೊಂಡು, ಅಂತಾರಾಷ್ಟ್ರೀಯ ಚಿತ್ರವಿಮರ್ಶಕರನ್ನು ಉದ್ದೇಶವಾಗಿಟ್ಟುಕೊಂಡು ಮಾಡಿದ ಚಿತ್ರವಾದುದರಿಂದ ಅಥವಾ ನಿರ್ದೇಶಕರಲ್ಲಿ ಮತ್ತು ನಿರ್ಮಾಪಕರಲ್ಲಿ ಆ ‘ಮೇಲರಿಮೆ’ ಗಟ್ಟಿಯಾಗಿರುವುದರಿಂದ ಜನಸಾಮಾನ್ಯರನ್ನು ತಲುಪುವುದು ಕಷ್ಟ.

Wednesday, August 21, 2013

ದಿನಕ್ಕೊಂದು ಪುಸ್ತಕ: ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ಮುಸ್ಲಿಮ್ ಮಹಿಳೆಯರ ಕೊಡುಗೆ

ನಿನ್ನ ಹಣೆಯ ಮೇಲಿನ ಸೆರಗು ಬಹಳ ಸುಂದರ
ಅದನ್ನೇ ನೀನು ಬಾವುಟವನ್ನಾಗಿಸಿದರೆ ಇನ್ನೂ ಸುಂದರ
        -ಕವಿ ದಿ. ಮಜಾಜ್(1937)


ಸ್ವಾತಂತ್ರ ಹೋರಾಟಕ್ಕೆ ಮುಸ್ಲಿಮರ ಕೊಡುಗೆಯೆಷ್ಟು, ಬ್ರಾಹ್ಮಣರ ಕೊಡುಗೆಯೆಷ್ಟು, ದಲಿತರ ಕೊಡುಗೆಯೆಷ್ಟು ಎಂದು ಪಾಲು ಪಡೆದುಕೊಳ್ಳುವ ಪ್ರಕ್ರಿಯೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಪರೋಕ್ಷವಾಗಿ, ಈ ದೇಶದಲ್ಲಿ ತಮ್ಮ ತಮ್ಮ ಹಕ್ಕು ಸಾಧಿಸುವ ಭಾಗವಾಗಿ ಈ ವಾದಗಳು ಜೀವ ಪಡೆದಿವೆ. ಮುಸ್ಲಿಮರ ದೇಶಪ್ರೇಮ ಪ್ರಶ್ನಾರ್ಹವಾಗುತ್ತಿರುವ ದಿನಗಳಲ್ಲಿ, ಈ ದೇಶಕ್ಕಾಗಿ ನಮ್ಮ ರಕ್ತವೂ ಬಿದ್ದಿದೆ ಎಂದು ಘೋಷಿಸುವುದು ಅವರಿಗೆ ಅನಿವಾರ್ಯವಾಗಿದೆ. ಆರೆಸ್ಸೆಸ್‌ನಂತಹ ವಿಚ್ಛಿದ್ರಕಾರಿ ಶಕ್ತಿಗಳು ದೇಶಪ್ರೇಮದ ಮಾತನಾಡುವಾಗ, ನೀವು ಈ ದೇಶದ ಸ್ವಾತಂತ್ರಕ್ಕಾಗಿ ಸುರಿಸಿದ ರಕ್ತವೆಷ್ಟು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಒಟ್ಟಿನಲ್ಲಿ ಸ್ವಾತಂತ್ರ ಹೋರಾಟಕ್ಕೆ ಕಾರಣವಾದುದು ‘ಭಾರತೀಯತೆ’. ಎಲ್ಲ ಧರ್ಮ, ಜಾತಿಗಳು, ವರ್ಗಗಳು ಭಾರತೀಯತೆಯ ಹೆಸರಿನಲ್ಲಿ ಒಂದಾದ ಪರಿಣಾಮವಾಗಿ ಸ್ವಾತಂತ್ರ ಚಳವಳಿ ಹುಟ್ಟಿಕೊಂಡಿತು. ನಾವಿಂದು ಭಾರತೀಯತೆಯನ್ನು ಕಳೆದುಕೊಳ್ಳುತ್ತಿರುವ ಭಾಗವಾಗಿ, ನಮ್ಮ ನಮ್ಮ ಹಕ್ಕುಗಳನ್ನು ಮಂಡಿಸುತ್ತಿದ್ದೇವೆ.

ಇದೇ ಸಂದರ್ಭದಲ್ಲಿ ಮಹಿಳೆಯರೂ ತಮ್ಮ ಹಕ್ಕುಗಳನ್ನು ಮಂಡಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಮುಸ್ಲಿಮ್ ಮಹಿಳೆಯರು. ಅದಕ್ಕೆ ಪೂರಕವಾಗಿ ‘ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಮುಸ್ಲಿಮ್ ಮಹಿಳೆಯರ ಕೊಡುಗೆ’ ಕೃತಿ ಹೊರ ಬಂದಿದೆ. ನಾವು ಮರೆತ ಅದೆಷ್ಟೋ ಸಂಗತಿಗಳು ಸ್ವಾತಂತ್ರ ಇತಿಹಾಸದ ಧೂಳಿನಲ್ಲಿ ಸೇರಿ ಹೋಗಿವೆ. ಅದರಲ್ಲಿ ಮುಖ್ಯವಾದುದು, ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ತೆತ್ತ ಮುಸ್ಲಿಮ್ ಮಹಿಳೆಯರ ಕೊಡುಗೆ. ಮುಸ್ಲಿಮ್ ಮಹಿಳೆಯ ಹಕ್ಕು, ಸ್ವಾತಂತ್ರಗಳ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ. ಒಂದು ಕಾಲದಲ್ಲಿ ಈ ಮಹಿಳೆಯರು ಹೇಗೆ ರಾಜಕೀಯ ಚಳವಳಿಯಲ್ಲಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸಿದರು ಎನ್ನುವುದನ್ನು ತೆರೆದಿಟ್ಟರೂ ಸಾಕು, ಅದು ಮುಸ್ಲಿಮ್ ಮಾತ್ರವಲ್ಲ ಎಲ್ಲ ಸಮಾಜದ ಹೆಣ್ಣು ಮಕ್ಕಳಿಗೂ ಮಾದರಿಯಾಗಬಹುದು.

 ‘ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಮುಸ್ಲಿಮ್ ಮಹಿಳೆಯರ ಕೊಡುಗೆ’ ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಡಾ. ಆಬಿದಾ ಸಮೀಉದ್ದೀನ್ ಹಿಂದಿಯಲ್ಲಿ ಬರೆದ ಈ ಕೃತಿಯನ್ನು ಕನ್ನಡಕ್ಕಿಳಿಸಿದವರು ಡಾ. ಷಾಕಿರಾ ಖಾನಂ. ಇಂದು ಮುಸ್ಲಿಮ್ ಹೆಣ್ಣು ಮಕ್ಕಳು ಶಾಲೆಗೆ ಹೋಗುವ ವಿಷಯ ವಿವಾದವಾಗುತ್ತಿದೆ. ಆದರೆ ಒಂದಾನೊಂದು ಕಾಲದಲ್ಲಿ ಬ್ರಿಟಿಷರ ವಿರುದ್ಧ ಧ್ವನಿಯೆತ್ತಿ ಜೀವಂತ ಸುಟ್ಟು ಹೋದ, ನೇಣು ಗಂಬವೇರಿದ ನೂರಾರು ಮುಸ್ಲಿಮ್ ಹೆಣ್ಣು ಮಕ್ಕಳು ಆಗಿ ಹೋಗಿದ್ದರು ಎಂದಾಗ, ಇಂದಿನ ವಿವಾದ ಆಧುನಿಕ ಸಮಾಜಕ್ಕೆ ಅವಮಾನವೇ ಸರಿ. ಇತಿಹಾಸದ ಪದರುಗಳಲ್ಲಿ ಮುಚ್ಚಿ ಹೋದ ಹತ್ತು ಹಲವು ಮುಸ್ಲಿಮ್ ಕಣ್ಮಣಿಗಳ ಕಥೆ ನಮ್ಮನ್ನು ಬೆಚ್ಚಿ ಬೇಳಿಸುತ್ತದೆ. ಅವರ ಶೌರ್ಯ, ತ್ಯಾಗ ಹೊಸ ದೇಶ ಕಟ್ಟುವುದಕ್ಕೆ ಸ್ಫೂರ್ತಿಯಾಗುತ್ತದೆ. ಆನೆಗಳ ಮೇಲೇರಿ ಬ್ರಿಟಿಷರ ವಿರುದ್ಧ ಕಾದಿದ್ದ ಹಝರತ್ ಮಹಲ್, ಝಾನ್ಸಿ ರಾಣಿಯ ಜೊತೆ ಜೊತೆಗೇ ಹುತಾತ್ಮಳಾದ ಅನಾಮಧೇಯ ಮುಸ್ಲಿಮ್ ಮಹಿಳೆ, 1857ರಲ್ಲಿ ಬ್ರಿಟಿಷರ ಜೊತೆಗೆ ಯುದ್ಧ ಹೂಡಿದ ತಪ್ಪಿಗೆ ಜೀವಂತ ಸುಡಲ್ಪಟ್ಟ ಅಸ್ಗರಿ ಬೇಗಂ, ಗಲ್ಲಿಗೇರಲ್ಪಟ್ಟ ಗುಜರ್ ಮುಸ್ಲಿಮ್ ಸಮುದಾಯದ ಹಬೀಬಾ....ಮುಸ್ಲಿಮ್ ಮಹಿಳೆಯರ ಶೌರ್ಯದ ಕತೆ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಸುಮಾರು 35ಕ್ಕೂ ಅಧಿಕ ಮುಸ್ಲಿಮ್ ಮಹಿಳಾ ಸ್ವಾತಂತ್ರ ಹೋರಾಟಗಾರರ ವಿವರಗಳು ಈ ಕೃತಿಯಲ್ಲಿದೆ. ಅಂದ ಹಾಗೆ ಈ ಕೃತಿ ಇತಿಹಾಸವನ್ನು ದಾಖಲೆಗಳ ಮೂಲಕ ಮಂಡಿಸುತ್ತದೆ. ಲೇಖಕಿ, ತನ್ನ ಬರಹಗಳಿಗೆ ಪತ್ರಗಳನ್ನು, ಬರಹಗಳನ್ನು ಆಧಾರವಾಗಿ ನೀಡುತ್ತಾರೆ. ಆದುದರಿಂದಲೇ ಈ ಕೃತಿ ನಮಗೆ ಮಹತ್ವದ್ದಾಗಿದೆ.
ಇಂದಿನ ಸಂದರ್ಭದಲ್ಲಿ ಇದೊಂದು ಅತ್ಯಪೂರ್ವ ಕೃತಿಯೇ ಸರಿ. ಇದರ ಮುಖಬೆಲೆ 140 ರೂ.

Tuesday, August 20, 2013

‘ಎ ಬ್ರೀಫ್ ಹಿಸ್ಟ್ರಿ ಆಫ್ ಟೈಮ್‌ಗೆ’ ಒಂದು ಕೈಪಿಡಿ

ನಾನು ಓದಿದ, ನನಗೆ ಖುಷಿಕೊಟ್ಟ ಪುಸ್ತಕವೊಂದನ್ನು ಪ್ರತಿದಿನ ಕೆಲವೇ ವಾಕ್ಯಗಳಲ್ಲಿ ನಿಮ್ಮ ಮುಂದೆ ಪರಿಚಯಿಸಬೇಕು ಎನ್ನೋದು ನನ್ನ ಆಸೆ. ದಿನಕ್ಕೊಂದು ಪುಸ್ತಕವನ್ನು ಗುಜರಿ ಅಂಗಡಿಯಲ್ಲಿ ನಿಮ್ಮ ಮುಂದಿಡುವೆ.


ಸ್ಟೀಫನ್ ಹಾಕಿಂಗ್ ‘ಎ ಬ್ರೀಫ್ ಹಿಸ್ಟ್ರಿ ಆಫ್ ಟೈಮ್’ ಒಂದು ನಿಗೂಢ ಕೃತಿ. ಒಂದು ರೀತಿಯಲ್ಲಿ ಹಾಕಿಂಗ್ ಅವರಂತೆ. ಒಬ್ಬ ಸಾಮಾನ್ಯ ಮನುಷ್ಯನಾಗಿದ್ದರೆ ಹಾಕಿಂಗ್ ಇಂದು ‘ದಯಾ ಮರಣವನ್ನು ಅಪೇಕ್ಷಿಸಿ’ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರೋ ಏನೋ? ಯಾಕೆಂದರೆ ಅವರು ನಿಲ್ಲಲಾರರು. ಬರೆಯಲಾರರು. ಸ್ವತಃ ತಿನ್ನಲಾರರು. ನಡೆಯಲಾರರು. ಅಷ್ಟೇ ಏಕೆ, ಅವರು ಮಾತನ್ನೂ ಆಡಲಾರರು. ಅವರಲ್ಲಿ ಜೀವಂತವಾಗಿರುವುದು, ಅತ್ಯಂತ ಚಟುವಟಿಕೆಯಲ್ಲಿರುವುದು ಅವರ ಮೆದುಳು ಮಾತ್ರ. ಇಂತಹ ವ್ಯಕ್ತಿ ಇಂದು ಜಗತ್ತಿನ ಅಪರೂಪದ ವಿಜ್ಞಾನಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಕಾಲದ ಬೆನ್ನು ಹತ್ತಿ ಬರೆದ ಇವರ ‘ಎ ಬ್ರೀಫ್ ಹಿಸ್ಟ್ರಿ ಆಫ್ ಟೈಮ್’ ಕೋಟ್ಯಂತರ ಓದುಗರನ್ನು ಸೆಳೆಯಿತು. ಲಕ್ಷಾಂತರ ಪ್ರತಿಗಳು ಮಾರಾಟವಾಯಿತು. ಇದೊಂದು ವಿಜ್ಞಾನ ಕೃತಿಯಾಗಿ ಮಾತ್ರವಲ್ಲ ಸೆಳೆಯಲಿಲ್ಲ. ತತ್ವಶಾಸ್ತ್ರಜ್ಞರನ್ನು, ಸಾಹಿತಿಗಳನ್ನು, ಕಲಾಕಾರರನ್ನು, ಚಿಂತಕರನ್ನು ಇದರೆಡೆಗೆ ಹೊರಳಿ ನೋಡುವಂತೆ ಮಾಡಿತು. ಈ ವಿಶ್ವ ಹುಟ್ಟಿದ್ದು ಹೇಗೆ, ವಿಶ್ವವು ಹೇಗೆ ಮತ್ತು ಏಕೆ ಅಸ್ತಿತ್ವಕ್ಕೆ ಬಂತು? ವಿಶ್ವವು ಕೊನೆಯಾಗುವುದೇ? ಆಗುವುದಾದರೆ ಹೇಗೆ ಎನ್ನುವ ಪ್ರಶ್ನೆಗಳನ್ನು ಬೆನ್ನು ಹತ್ತುವ ಈ ಕೃತಿ ನೀಡುವ ಒಳನೋಟ ಅದ್ಭುತವಾದುದು. ಈ ಕೃತಿಯ ನಿಲುವುಗಳನ್ನು ಒಪ್ಪದವರಿರಬಹುದು. ಆದರೆ ಈ ಕೃತಿಯ ಬದ್ಧತೆ, ಆಕರ್ಷಣೆಗೆ ತಲೆಬಾಗದವರಿಲ್ಲ. ಎಲ್ಲ ಕ್ಷೇತ್ರವನ್ನು ತನ್ನೆಡೆಗೆ ಸೆಳೆದ ಬ್ಲಾಕ್‌ಹೋಲ್ ಹಾಕಿಂಗ್ ಅವರ ಈ ಕೃತಿ.

ಹಿರಿಯ ಚಿಂತಕರು, ಲೇಖಕರೂ ಆದ ಡಾ. ಮಾಧವ ಪೆರಾಜೆ ಈ ಕೃತಿಯನ್ನು ಕನ್ನಡಕ್ಕಿಳಿಸಿದ್ದಾರೆ. ಇದು ಎ ಬ್ರೀಫ್ ಹಿಸ್ಟ್ರಿ ಆಫ್ ಟೈಮ್‌ಗೆ ಪ್ರವೇಶಿಸಲು ನಮಗಿರುವ ಕೈಪಿಡಿಯಾಗಿದೆ. ಹಾಕಿಂಗ್‌ನ ಕೃತಿಯನ್ನು ಸರಳ ಕನ್ನಡಕ್ಕಿಳಿಸುವುದೆಂದರೆ ಸುಲಭದ ಮಾತಲ್ಲ. ಪೆರಾಜೆ ಅದರಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡಕ್ಕೆ ವಿಜ್ಞಾನದ ಒಂದು ಅಪರೂಪದ ಕೃತಿಯನ್ನು ಈ ಮೂಲಕ ಪರಿಚಯಿಸಿದ್ದಾರೆ. ಸರಳ ಕನ್ನಡದಲ್ಲಿ ವಿಜ್ಞಾನವನ್ನು ಹೇಗೆ ಕಟ್ಟಿಕೊಡಬಹುದು ಎನ್ನುವುದಕ್ಕೆ ಈ ಕೃತಿ ಸಾಕ್ಷಿ. ಕೃತಿಗೆ ಹಿರಿಯ ಲೇಖಕರಾದ ಪುರುಷೋತ್ತಮ ಬಿಳಿಮಲೆಯವರು ಅರ್ಥಪೂರ್ಣವಾದ ಮುನ್ನುಡಿಯನ್ನೂ ಬರೆದಿದ್ದಾರೆ. ವಿದ್ಯಾರ್ಥಿಗಳೂ, ಹಿರಿಯರೂ ಓದಲೇ ಬೇಕಾದ ಕೃತಿಯಿದು. ಬೇರೊಂದು ಅಜ್ಞಾತ ವಲಯಕ್ಕೆ ಎತ್ತೊಯ್ಯುವ ಶಕ್ತಿ ಈ ಕೃತಿಗಿದೆ. ಪಲ್ಲವ ಪ್ರಕಾಶನ ಚೆನ್ನಪಟ್ಟಣ ಹೊರತಂದಿರುವ ಈ ಕೃತಿಯ ಮುಖಬೆಲೆ 200 ರೂ.

Monday, August 19, 2013

ರುಚಿ ಮತ್ತು ಇತರ ಕತೆಗಳು



ನರಕ-ಸ್ವರ್ಗ
ಒಬ್ಬ ಸಜ್ಜನ ಮೃತನಾದ. ಅವನು ಸ್ವರ್ಗವಾಸಿಯಾದ.
ಅವನಿಗೊಮ್ಮೆ ನರಕವನ್ನು ನೋಡುವ ಬಯಕೆಯಾಯಿತು. ನರಕದ ಕಾವಲುಗಾರನಲ್ಲಿ ತೋಡಿಕೊಂಡ.
ಆತ ಅನುಮತಿ ನೀಡಿದ. ಅಂತೆಯೇ ಸಜ್ಜನ ನರಕ ಪ್ರವೇಶಿಸಿದ.
ಏನಾಶ್ಚರ್ಯ. ನರಕ ಸ್ವರ್ಗಕ್ಕಿಂತ ಭಿನ್ನವಾಗಿರಲಿಲ್ಲ.
ಸಜ್ಜನ ಅಚ್ಚರಿಯಿಂದ ಕೇಳಿದ ‘‘ಇದೇನಿದು, ನರಕ ಇಷ್ಟು ಸುಂದರವಾಗಿದೆ...’’
ಕಾವಲುಗಾರ ನಕ್ಕು ನುಡಿದ ‘‘ಯಾಕೆಂದರೆ ನೀನು ಸಜ್ಜನ.
ನೀನು ಪ್ರವೇಶಿಸಿದ ಪರಿಣಾಮವಾಗಿ ನರಕ ಸ್ವರ್ಗವಾಗಿ ಪರಿವರ್ತನೆಗೊಂಡಿತು. ನಮ್ಮಲ್ಲಿ ನರಕ, ಸ್ವರ್ಗಗಳಿಲ್ಲ. ಮನುಷ್ಯನೇ ಅದನ್ನು ತನಗೆ ಸಿದ್ಧಪಡಿಸಿಕೊಳ್ಳುತ್ತಾನೆ...’’

ಯೋಜನೆ
ಬಾಲಕಾರ್ಮಿಕ ವಿರೋಧಿ ಚಳವಳಿಯನ್ನು ಜಿಲ್ಲಾಡಳಿತ ಬಿರುಸಿನಿಂದ ಹಮ್ಮಿಕೊಂಡಿತು. ಅದಕ್ಕಾಗಿ ಬೃಹತ್ ಪೋಸ್ಟರ್‌ಗಳನ್ನು ಹಾಕುವ ಯೋಜನೆಯನ್ನು ಸಿದ್ಧಪಡಿಸಿತು. ಬೀದಿ ಬದಿಯಲ್ಲಿ ವಾಸಿಸುತ್ತಿದ್ದ ಮಕ್ಕಳಿಗೆ ಈಗ ಕೈ ತುಂಬಾ ಕೆಲಸ.

ಬಂಗಲೆ
ಬಾಲ್ಯದಲ್ಲಿ ತೀರಾ ಬಡವನಾಗಿ ಬದುಕಿದ್ದ ಆತ ಬೆಳೆದಂತೆ ಭಾರೀ ಬಂಗಲೆಗೆ ಒಡೆಯನಾದ.
ಒಂದು ದಿನ ಗೆಳೆಯನನ್ನು ತನ್ನ ಮನೆಗೆ ಆಹ್ವಾನಿಸಿದ.
ಬಂಗಲೆಯನ್ನು ವೀಕ್ಷಿಸಿ ಗೆಳೆಯ ಕೇಳಿದ ‘‘ನಿನ್ನ ತಂದೆ, ತಾಯಿ ಎಲ್ಲಿದ್ದಾರೆ?’’
ಆತ ನುಡಿದ ‘‘ಅವರು ಹಳೆಯ ಗುಡಿಸಲಲ್ಲೇ ಇದ್ದಾರೆ. ಅವರಿಗೆ ಈ ಬಂಗಲೆಯಲ್ಲಿ ನಿದ್ದೆ ಬರುವುದಿಲ್ಲವಂತೆ’’

ರುಚಿ
‘‘ನಿನಗೆ ನನ್ನ ಅಮ್ಮನ ಹಾಗೆ ಅಡುಗೆ ಮಾಡೋದಕ್ಕೆ ಗೊತ್ತಿಲ್ಲ. ಯಾವುದಕ್ಕೂ ರುಚಿಯಿಲ್ಲ...’’
ಆಗಷ್ಟೇ ಮದುವೆಯಾಗಿದ್ದ ಗಂಡ ಕೂಗಿ ಹೇಳಿದ.
ಕೋಣೆಯೊಳಗಿದ್ದ ಅಮ್ಮ ಖುಷಿಯಿಂದ ನಡುಗಿದಳು.
ಗಂಡ, ಪತ್ನಿಯನ್ನು ನೋಡಿ ಕಣ್ಣು ಮಿಟುಕಿಸಿದ. ಅವಳು ಮುಗುಳು ನಕ್ಕಳು.

ರಾಜ ರಸ್ತೆ

 ಆ ರಾಜ ರಸ್ತೆ ಜಂಬದಿಂದ ಬೀಗುತ್ತಿತ್ತು.
ದೊಡ್ಡ ದೊಡ್ಡ ಕಾರುಗಳು, ಬಸ್ಸುಗಳು ಓಡಾಡುವ ರಸ್ತೆ ನಾನು ಎಂದು ಅಕ್ಕಪಕ್ಕದ ಮರಗಿಡಗಳೊಂದಿಗೆ ಹೇಳಿಕೊಳ್ಳುತ್ತಿತ್ತು.
ಒಂದು ದಿನ ಏನಾಯಿತೆಂದರೆ, ಆ ರಸ್ತೆ ಸೇರುವ ನಗರದ ಅರ್ಥವ್ಯವಸ್ಥೆ ಕುಸಿದು ನಗರ ಪಾಳು ಬಿತ್ತು.
ಕೆಲವೇ ದಿನಗಳಲ್ಲಿ ಆ ರಾಜರಸ್ತೆಯಲ್ಲಿ ಹುಲ್ಲುಗರಿಗಳು ಮೊಳೆಕೆ ಹೊಡೆಯತೊಡಗಿದವು.
ಅಪರೂಪಕ್ಕೆ ಓಡಾಡುವ ಆ ಊರಿನ ಜನರು, ತಾವೇ ನಡೆದು ರೂಪಿಸಿದ ತಮ್ಮದೇ ಕಾಲುದಾರಿಯಲ್ಲಿ ಎಂದಿನಂತೆ ನಡೆದಾಡುತ್ತಿದ್ದರು.

ಧ್ಯಾನ
ಕುಖ್ಯಾತ ಕಳ್ಳನೊಬ್ಬ ಪೊಲೀಸರಿಗೆ ಅಂಜಿ ಸಂತನ ಆಶ್ರಮ ಪ್ರವೇಶಿಸಿದ ‘‘ಸ್ವಾಮಿ, ನಾನೂ ಧ್ಯಾನವನ್ನು ಕಲಿಯಬೇಕು’’
ಸಂತ ಅವಕಾಶ ನೀಡಿದ. ಕಳ್ಳ ಆಶ್ರಮದಲ್ಲಿ ತನಗೆ ಬೇಕಾದಂತೆ ಕಾಲ ಕಳೆಯತೊಡಗಿದ.
ಒಂದು ದಿನ ಸಂತ ಆತನನ್ನು ಕರೆದು ಹೇಳಿದ ‘‘ನಾವು ಏನು ಮಾಡುತ್ತೇವೋ ಅದನ್ನು ಶ್ರದ್ಧೆಯಿಟ್ಟು ಮಾಡುವುದೇ ಧ್ಯಾನ. ಕಳ್ಳತನದಲ್ಲಿರುವ ಶ್ರದ್ಧೆ ಆಶ್ರಮದಲ್ಲಿ ಕಾಣುತ್ತಿಲ್ಲ. ಹೋಗು ಕಳ್ಳತನ ಮಾಡು. ನಿನ್ನ ಪಾಲಿಗೆ ಅದುವೇ ಧ್ಯಾನ’’

ಗಾಳ
ಗಾಳದ ಜೊತೆಗೆ ಆತ ನದಿಗೆ ಮೀನು ಹಿಡಿಯಲು ಹೊರಟ.
ಗಾಳ ಹಾಕಿ ಕೂತ. ನೀರಿನಲ್ಲಿ ಎಳೆದಂತಾಯಿತು.
‘‘ಓಹ್ ಮೀನು ಸಿಕ್ಕಿತು’ ಎಂದು ಸಂಭ್ರಮದಿಂದ ಎದ್ದು ನಿಲ್ಲುವಷ್ಟರಲ್ಲಿ ಆಯ ತಪ್ಪಿ ನದಿಗೆ ಬಿದ್ದ.
ಸಂಜೆಯ ಹೊತ್ತಿಗೆ ಆತನ ಹೆಣವನ್ನು ಎತ್ತಿದರು.
ಪಕ್ಕದಲ್ಲೇ ಇದ್ದ ಗಾಳವನ್ನು ಯಾರೋ ಎತ್ತಿದರೆ ಅದರಲ್ಲೊಂದು ಮೀನು ವಿಲವಿಲ ಒದ್ದಾಡುತ್ತಿತ್ತು.

Sunday, August 18, 2013

ಸಂಭಾಷಣೆಗಳ ಇಟ್ಟಿಗೆಯಲ್ಲಿ ನಿಲ್ಲಿಸಿದ ಮುಂಬೈ-ಡಾನ್ ಮತ್ತು ಪ್ರೀತಿ

 ‘ವನ್ಸ್ ಅಪಾನ್ ಎ ಟೈಮ್ ಮುಂಬೈ ದೋಬಾರ’ ಅದ್ದೂರಿ ಸಂಭಾಷಣೆಗಳ ವೈಭವ ಗಳಲ್ಲಿ ಕಟ್ಟಿದ ಚಿತ್ರ. ಸ್ಟಂಟ್, ಕಥೆ, ಛಾಯಾಗ್ರಹಣ ಇವೆಲ್ಲವೂ ಅನಂತರದ ಸ್ಥಾನವನ್ನು ಪಡೆಯುತ್ತದೆ. ಇಲ್ಲಿ ಪ್ರೀತಿಯಿರಲಿ, ದ್ವೇಷವಿರಲಿ ಎಲ್ಲವನ್ನೂ ಸಂಭಾಷಣೆಗಳ ಮೂಲಕವೇ. ಆದುದರಿಂದ ಎಲ್ಲವೂ ಇದ್ದು, ಏನೂ ಇಲ್ಲ ದಂತಹ ಪರಿಸ್ಥಿತಿ ಈ ಚಿತ್ರದ್ದು. ಪ್ರೀತಿಯಿರಲಿ, ದ್ವೇಷವಿರಲಿ ಯಾವುದೂ ಮನವನ್ನು ಕಲಕುವಂತಿಲ್ಲ. ಎಲ್ಲವೂ ಮೇಲಿಂದ ಮೇಲೆ ಸಂಭಾಷಣೆಗಳ ರೂಪದಲ್ಲಿ ಹಾರಿ ಹೋಗುತ್ತದೆ.ಚಿತ್ರ ‘ವನ್ಸ್ ಅಪಾನ್ ಎ ಟೈಮ್’ನ ಭಾಗ ಎರಡು ಎಂದು ಊಹಿಸಿ ಹೋದವರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಹಾಗೆ ನೋಡಿದರೆ ಇದು ಮುಂಬೈಯ ಭೂಗತ ಇತಿಹಾಸವನ್ನು ಕಟ್ಟಿ ಕೊಡುವ ಚಿತ್ರ ಅಲ್ಲವೇ ಅಲ್ಲ.

ದಾವೂದ್ ಇಬ್ರಾಹೀಂನನ್ನು ಹೋಲುವ ಒಂದು ಪಾತ್ರ (ಅಕ್ಷಯ್ ಕುಮಾರ್) ಪ್ರೀತಿಯಲ್ಲಿ ಸಿಲುಕಿಕೊಳ್ಳುವ ಕತೆಯೇ ಈ ‘ದೋಬಾರ’. ಆದುದರಿಂದ ಇಲ್ಲಿ, ಭೂಗತ ಪಾತ್ರಗಳೆಲ್ಲವೂ ಒಂದು ನೆಪ ಮಾತ್ರವಾಗಿದೆ. ಭೂಗತ ದೊರೆ ಶುಐಬ್‌ನ ವ್ಯಕ್ತಿತ್ವವನ್ನು ಕಟ್ಟಿ ಕೊಡುವುದಕ್ಕೋಸ್ಕರ ಅವು ಕಾಣಿಸಿಕೊಳ್ಳುತ್ತವೆ. ಚಿತ್ರದ ಇನ್ನೊಂದು ಪಾತ್ರ ಅಸ್ಲಂ(ಇಮ್ರಾನ್ ಖಾನ್). ಜೋಪಡಾ ಪಟ್ಟಿಯಿಂದ ಈತನನ್ನು ಮೇಲೆತ್ತಿ, ಬದುಕು ನೀಡಿದವ ಶುಐಬ್.ಆದುದರಿಂದ ಶುಐಬ್‌ಗೆ ಅಸ್ಲಂ ಪ್ರಾಣ ನೀಡುವುದಕ್ಕೂ ಸಿದ್ಧನಾಗಿರುವ ನಿಷ್ಟ. ಶುಐಬ್‌ನನ್ನು ಕೊಲ್ಲಲು ಸಂಚು ರೂಪಿಸಿದ ಶತ್ರುಗಳನ್ನು ಹುಡುಕಿಕೊಂಡು ಮತ್ತೆ ಮುಂಬೈಗೆ ಆಗಮಿಸುವ ಶುಐಬ್‌ನನ್ನು ಅಸ್ಲಂ ಕೂಡಿಕೊಳ್ಳುವುದರಿಂದ ಕಥೆ ತೆರೆದುಕೊಳ್ಳುತ್ತದೆ. 


ಆದರೆ ನಿಜವಾದ ಕತೆ, ಭೂಗತ ಜಗತ್ತಿನದ್ದಲ್ಲ. ಭೂಗತ ದೊರೆ ಪ್ರೀತಿಯಲ್ಲಿ ಸಿಲುಕಿಕೊಳ್ಳುವುದು, ತನ್ನ ಹಣ, ದೌಲತ್ತು, ಪಿಸ್ತೂಲ್‌ಗಳ ಮೂಲಕ ಆ ಪ್ರೀತಿಯನ್ನು ತನ್ನದಾಗಿಸಿಕೊಳ್ಳಲು ಹವಣಿಸುವುದು ಮುಖ್ಯ ಕತೆ.ಈತನ ಪ್ರೀತಿಗೆ ಪ್ರತಿಸ್ಪರ್ಧಿ ಇನ್ನಾರೂ ಅಲ್ಲ, ಅವನ ಆಪ್ತ ಅಸ್ಲಂ. ಜಾಸ್ಮಿನ್(ಸೋನಾಕ್ಷಿ ಸಿನ್ಹಾ)ನನ್ನು ಮೊದಲ ನೋಟದಲ್ಲೇ ಶೊಯೆಬ್ ಪ್ರೀತಿಸುತ್ತಾನೆ. ಇತ್ತ ಜಾಸ್ಮಿನ್ ತನ್ನ ಮೊದಲ ನೋಟದಲ್ಲೇ ಅಸ್ಲಂನನ್ನು ಇಷ್ಟ ಪಡುತ್ತಾಳೆ. ಈ ಕಣ್ಣಾಮುಚ್ಚಾಲೆಯ ಕ್ಲೈಮಾಕ್ಸ್ ಚಿತ್ರದ ಮುಖ್ಯ ವಸ್ತು. ಆದರೆ ಪೂರ್ವಾರ್ಧದಲ್ಲಿ ಶುಐಬ್‌ನ ಭೂಗತ ಸ್ಟಂಟ್‌ಗಳು ಮಿಂಚುತ್ತವೆ. ಮಧ್ಯಾಂತರದ ಬಳಿಕ, ಶುಐಬ್‌ನೊಳಗೆ ಮಜ್ನೂ ಜಾಗರೂಕತನಾಗುತ್ತಾನೆ.ಅಕ್ಷಯ್‌ನ ಮಾತುಗಾರಿಕೆ, ಸ್ಟಂಟ್‌ಗಳ ಮುಂದೆ ಇಮ್ರಾನ್ ತುಸು ಮಂಕಾದವನಂತೆ ಕಾಣುತ್ತಾನೆ.

ಜಾಸ್ಮಿನ್ ಆಗಿ ಸೋನಾಕ್ಷಿ ಚಿತ್ರದುದ್ದಕ್ಕೂ ತನ್ನ ಪರಿಮಳ ಬೀರುತ್ತಾಳೆ.  ರಜತ್ ಅರೋರಾ ಅವರ ಸಂಭಾಷಣೆ ಚಿತ್ರದ ಹೆಗ್ಗಳಿಕೆ ಮತ್ತು ಅಸ್ತಿವಾರ. ಚಿತ್ರವನ್ನು ಅದ್ದೂರಿಯಾಗಿ ಮಾಡಲಾಗಿದೆ. ಛಾಯಾಗ್ರಹಣವೂ ಚೆನ್ನಾಗಿದೆ. ಸಂಗೀತವೂ ಚಿತ್ರಕ್ಕೆ ಪೂರಕವಾಗಿದೆ. ಆದರೆ ಚಿತ್ರ ಹಿಂದಿನ ವನ್ಸ್ ಅಪಾನ್ ಎ ಟೈಮ್‌ನ ನಿರೀಕ್ಷೆಯಿಟ್ಟು ಬಂದವರಿಗೆ ನಿರಾಸೆ ತರುತ್ತದೆ. ಮುಂಬೈ, ಆಳ, ಅಗಲಗಳನ್ನು ಕಲಕುವ ಆ ಚಿತ್ರದ ತೀವ್ರತೆ, ಇದರಲ್ಲಿಲ್ಲ.

ಇಲ್ಲಿನ ಕೇಂದ್ರ ಜಾಸ್ಮಿನ್. ಅವಳಿಗಾಗಿ ತೊಯ್ದಾಡುವ ಶುಐಬ್ ಮತ್ತು ಅಸ್ಲಂ ಎನ್ನುವ ಎರಡು ಪಾತ್ರಗಳನ್ನು ಮುಂದಿಟ್ಟು ಚಿತ್ರವನ್ನು ಸಿದ್ಧಪಡಿಸಿದ್ದಾರೆ ಲೂಥ್ರಿಯ. ಹಿಂದಿನ ಚಿತ್ರಕ್ಕೆ ಹೋಲಿಸಿದರೆ, ಇಲ್ಲಿ ಕತೆಗಾರನಿಗೂ, ನಿರ್ದೇಶಕನಿಗೂ ಹೆಚ್ಚು ಶ್ರಮವಿಲ್ಲ. ಸಂಭಾಷಣೆಯನ್ನು ಬರೆದವನು ಸಾಕಷ್ಟು ಬೆವರು ಸುರಿಸಿದಂತಿದೆ.ಪ್ರೀತಿಯೂ ಇಲ್ಲಿ ಜೀವಂತವಾಗಿದೆ ಅನ್ನಿಸುವುದಿಲ್ಲ.

ಡೈಲಾಗ್‌ಗಳು ಪ್ರೀತಿಯ ಮೇಲೆ ಸವಾರಿ ಮಾಡುತ್ತದೆ. ಸೋನಾಕ್ಷಿಯ ಚೆಲುವಿಗೆ ಪ್ರೀತಿಯನ್ನು ಬಸಿದು ನೀಡಲು ಸಾಧ್ಯವಾಗಿಲ್ಲ. ಇಮ್ರಾನ್-ಅಕ್ಷಯ್ ಪ್ರೀತಿಯಲ್ಲೂ ತೀವ್ರತೆಯನ್ನು ತುಂಬಲು ನಿರ್ದೇಶಕನಿಗೆ ಸಾಧ್ಯವಾಗಿಲ್ಲ. ಆದುದರಿಂದ ಚಿತ್ರ, ಅತ್ತ ಭೂಗತ ಜನರ ಕತೆಯೂ ಆಗದೆ, ಪ್ರೇಮ ಚಿತ್ರವೂ ಆಗದೆ ಕ್ಷಕರನ್ನು ನಿರಾಸೆಗೊಳಿಸುತ್ತದೆ. ಒಟ್ಟಿನಲ್ಲಿ ನೋಡಲೇ ಬೇಕಾದ ಚಿತ್ರ ಇದಲ್ಲ. ಟೈಂಪಾಸ್‌ಗಾಗಿ ಚಿತ್ರ ನೋಡುವವರು ಒಮ್ಮೆ ಚಿತ್ರ ಮಂದಿರ ಇಣುಕಿ ಬರಬಹುದು.

Saturday, August 17, 2013

ತಮಿಳು ಭಾವನೆಗಳ ಮೇಲೆ ಓಡುವ ಚೆನ್ನೈ ಎಕ್ಸ್‌ಪ್ರೆಸ್

 ಒಂದು ಚಿತ್ರ ವಿಮರ್ಶೆ

 ‘ಚೆನ್ನೈ ಎಕ್ಸ್‌ಪ್ರೆಸ್’ ಗಾಡಿಗಾಗಿ ಕನ್ನಡಿಗರು ಕಾಯುವುದಕ್ಕೆ ಎರಡು ಮುಖ್ಯ ಕಾರಣಗಳಿದ್ದವು. ಒಂದು, ಚಿತ್ರವನ್ನು ನಿರ್ದೇಶಿಸಿದಾತ ಕನ್ನಡಿಗ. ಇನ್ನೊಂದು, ಗಾಡಿಯನ್ನೇರಿ ಬರುವ ನಾಯಕನೂ ಕನ್ನಡಿಗ! ಮುಖ್ಯವಾಗಿ ಇಬ್ಬರೂ ಮಂಗಳೂರಿಗರು. ರೋಹಿತ್ ಶೆಟ್ಟಿ ತನ್ನ ಗೋಲ್‌ಮಾಲ್ ಚಿತ್ರಗಳಿಗಾಗಿಯೇ ಬಾಲಿವುಡ್‌ನಲ್ಲಿ ಸುದ್ದಿಯಾದವರು. ಹಾಸ್ಯ ಮತ್ತು ಸ್ಟಂಟ್ ಎರಡನ್ನೂ ಸೇರಿಸಿ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ. ಇವರ ಜೊತೆಗೆ ‘ಮಂಗಳೂರು ಮೂಲದ ಶಾರುಕ್’ ಸೇರಿದರೆ ಇನ್ನೇನಾಗಬಹುದು? ತನ್ನ ಚಿತ್ರ ‘ಚೆನ್ನೈ ಎಕ್ಸ್‌ಪ್ರೆಸ್’ ಬಿಡುಗಡೆಗೆ ಒಂದು ವಾರ ಮೊದಲು, ತಾನು ಮಂಗಳೂರಿನಲ್ಲಿ ಹುಟ್ಟಿರುವುದನ್ನು ಶಾರುಕ್ ಮಾಧ್ಯಮಗಳಲ್ಲಿ ಜಾಹೀರು ಮಾಡಿದ್ದರು. ತನ್ನ ಹುಟ್ಟಿನ ಮೂಲವನ್ನು ಚೆನ್ನೈ ಎಕ್ಸ್‌ಪ್ರೆಸ್‌ನ ಪ್ರಚಾರಕ್ಕೆ ಪರೋಕ್ಷವಾಗಿ ಬಳಸಿಕೊಂಡರು. ಹಿಂದೆ, ಬಜ್ಪೆ ವಿಮಾನ ನಿಲ್ದಾಣ ದುರಂತದ ಸಂದರ್ಭದಲ್ಲಿ ಟ್ವಿಟ್ಟರ್‌ನಲ್ಲಿ ಶಾರುಕ್ ಇದನ್ನು ಸಣ್ಣದಾಗಿ ಪ್ರಸ್ತಾಪಿಸಿದ್ದರೂ, ಅಧಿಕೃತವಾಗಿ ‘ತಾನು ಹುಟ್ಟಿದ್ದು ಮಂಗಳೂರಿನಲ್ಲಿ. ಆದುದರಿಂದ ತಾನು ದಕ್ಷಿಣ ಭಾರತೀಯನೂ ಹೌದು’ ಎನ್ನುವುದನ್ನು ಆಂಗ್ಲಪತ್ರಿಕೆಯೊಂದರಲ್ಲಿ ಹೇಳಿಕೊಂಡರು. ಈ ಹೇಳಿಕೆಯೇ ಚೆನ್ನೈ ಎಕ್ಕೃ್‌ಸಪ್ರೆಸ್ ಚಿತ್ರಕ್ಕೆ ನಿರೀಕ್ಷಣಾ ಜಾಮೀನಿನಂತಿದೆ. ಚಿತ್ರದುದ್ದಕ್ಕೂ ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ‘ಹಾಸ್ಯ’ಕ್ಕೆ ಬಳಸಿಕೊಂಡಿರುವ ಶಾರುಕ್, ಎಲ್ಲಿ ಇದು ತಮಿಳರ ಸಿಟ್ಟಿಗೆ ಕಾರಣವಾಗಬಹುದೋ ಎನ್ನುವ ಅಂಚಿಕೆ ಅವರ ಆಳದಲ್ಲಿ ಇದ್ದಂತಿದೆ.

ಚೆನ್ನೈ ಎಕ್ಸ್‌ಪ್ರೆಸ್ ಅಪ್ಪಟ ರೋಹಿತ್ ಶೆಟ್ಟಿ ಚಿತ್ರ. ರುಚಿಗೆ ತಕ್ಕ ಹಾಗೆ ಶಾರುಕ್ ತನ್ನ ‘ದಿಲ್‌ವಾಲ್ಹೇ ದುಲ್ಹನೀಯ ಲೇ ಜಾಯೆಂಗೆ’ ಚಿತ್ರದ ಕ್ರೀಮನ್ನು ಅದಕ್ಕೆ ಲೇಪಿಸಿದ್ದಾರೆ. ಒಂದು ತೆಳು ಕತೆಯ ಎಳೆಯನ್ನು ತಮಾಷೆಯ ದಾರಗಳಿಂದ ಉದ್ದಕ್ಕೆ ಎಳೆದಿರುವ ರೋಹಿತ್ ಶೆಟ್ಟಿ, ತನ್ನ ಚಿತ್ರದಲ್ಲಿ ಉತ್ತರ ಮತ್ತು ದಕ್ಷಿಣವನ್ನು ಜೋಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮಿಠಾಯಿ ವಾಲಾ ರಾಹುಲ್(ಶಾರುಕ್ ಖಾನ್) ತನ್ನ ಅಜ್ಜನ ಅನಿರೀಕ್ಷಿತ ಸಾವಿನಿಂದಾಗಿ ಒಮ್ಮೆಲೆ ಸರ್ವಸ್ವತಂತ್ರನಾಗಿ ಬಿಡುತ್ತಾನೆ. ಗೆಳೆಯರು ಅವನ ಜೊತೆ ಸೇರಿ, ಗೋವಾದಲ್ಲಿ ಮಜಾ ಮಾಡುವ ಯೋಜನೆಯನ್ನೂ ರೂಪಿಸುತ್ತಾರೆ. ಆದರೆ, ದುರದೃಷ್ಟಕ್ಕೆ ಅಜ್ಜನ ಬೂದಿಯನ್ನು ರಾಮೇಶ್ವರದ ಕಡಲಿಗೆ ವಿಸರ್ಜಿಸುವ ಹೊಣೆ ಅವನ ಹೆಗಲಿಗೆ ಬೀಳುತ್ತದೆ. ಅಜ್ಜಿಯ ಒತ್ತಡದಿಂದಾಗಿ ಗೋವಾದ ಕಾರ್ಯಕ್ರಮ ರದ್ದು ಪಡಿಸಬೇಕಾದ ಸನ್ನಿವೇಶ ಎದುರಾಗುತ್ತದೆ. ಆದರೆ, ರಾಮೇಶ್ವರಕ್ಕೆ ಹೋದಂತೆ ಮಾಡಿ, ಗೋವಾದ ಕಡಲಲ್ಲಿ ಅಜ್ಜನ ಬೂದಿಯನ್ನು ವಿಸರ್ಜಿಸುವುದು. ಹೇಗೂ ಕಡಲ ನೀರಿನ ಮೂಲಕ ಆ ಬೂದಿ ರಾಮೇಶ್ವರ ಸೇರಬಹುದು ಎನ್ನುವುದು ಗೆಳೆಯರ ಸೂಚನೆ. ಅಂತೆಯೇ ಅಜ್ಜಿಯನ್ನು ನಂಬಿಸುವುದಕ್ಕಾಗಿ ಚೆನ್ನೈ ಎಕ್ಸ್‌ಪ್ರೆಸ್ ಏರುತ್ತಾನೆ. ಆದರೆ ಆ ಟ್ರೈನ್‌ನಲ್ಲಿ ಅವನು ಸಂದಿಸುವ ಮೀನಾಲೋಚಣಿ ಯಾನೆ ಮೀನಮ್ಮ(ದೀಪಿಕಾ ಪಡುಕೋಣೆ) ಅವನ ಎಲ್ಲ ಯೋಜನೆ ಹಳಿ ತಪ್ಪುವುದಕ್ಕೆ ಕಾರಣವಾಗುತ್ತಾಳೆ. ಗೋವಾ ಸೇರಬೇಕಾದವನು, ಆಕೆಯ ತಂದೆಯ ಆಳ್ವಿಕೆಯ ತಮಿಳು ನಾಡಿನ ಕೊಂಬನ್ ಸೇರಬೇಕಾಗುತ್ತದೆ. ಇಲ್ಲಿಂದ ನಾಯಕನ ಕಷ್ಟಗಳು, ತಮಾಷೆಗಳು ಆರಂಭವಾಗುತ್ತವೆ.

ಒಂದಿಷ್ಟು ಹಾಸ್ಯ, ತಮಾಷೆ ಮತ್ತು ಫೈಟಿಂಗ್. ರೋಹಿತ್ ಶೆಟ್ಟಿಯಿಂದ ಇದರಾಚನೆಗೆ ನಿರೀಕ್ಷಿಸುವುದು ದುಬಾರಿಯಾಗುತ್ತದೆ. ಈ ನಿರೀಕ್ಷೆಯನ್ನು ರೋಹಿತ್ ಶೆಟ್ಟಿ ಹುಸಿಗೊಳಿಸುವುದಿಲ್ಲ ಕೂಡ. ಇಡೀ ಚಿತ್ರದ ಶಕ್ತಿ ಶಾರುಕ್. ದಿಲ್‌ವಾಲ್ಹೇ ದುಲ್ಹನಿಯ ಲೇ ಜಾಯೆಂಗೆಯ ಲವಲವಿಕೆ ಇಲ್ಲಿ ತುಸು ಮಂಗಚೇಷ್ಠೆಯ ರೂಪವನ್ನು ಪಡೆದಿರುವುದನ್ನು ಪ್ರೇಕ್ಷಕ ಕ್ಷಮಿಸಬೇಕಾಗುತ್ತದೆ. ತನ್ನ ಪ್ರತಿಭೆ, ಮೈಕಟ್ಟು ಮತ್ತು ವರ್ಚಸ್ಸನ್ನು ಸಂಪೂರ್ಣ ಧಾರೆಯೆರೆದು ಶಾರುಕ್ ಈ ಚಿತ್ರದಲ್ಲಿ ತೊಡಗಿದ್ದಾರೆ. ಗ್ರಾಮೀಣ ತಮಿಳು ಹುಡುಗಿಯಾಗಿ ದೀಪಿಕಾ ಅಭಿನಯ ಅವರ ಸಾಮರ್ಥ್ಯಕ್ಕೆ ತಕ್ಕ ಹಾಗೆಯೇ ಇದೆ. ಅವರ ತಮಿಳು ಪ್ರಭಾವಿತ ಹಿಂದಿ ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ಖುಷಿ ಪಡಿಸುತ್ತದೆ. ತಮಿಳಿನ ಮಾಜಿ ಸ್ಟಾರ್ ಸತ್ಯರಾಜ್ ಮೀನಮ್ಮಳ ತಂದೆ ಹಾಗೂ ಸ್ಥಳೀಯ ತಲೈವರ್ ಆಗಿ ಪಾತ್ರದ ಗಾಂಭೀರ್ಯಕ್ಕೆ ಪೂರಕವಾಗಿ ನಟಿಸಿದ್ದಾರೆ. ಸಂಗೀತ ಮತ್ತು ಛಾಯಾಗ್ರಹಣ ಚಿತ್ರದ ಹೆಗ್ಗಳಿಕೆ. ಮುಂಬಯಿ-ಚೆನ್ನೈ-ರಾಮೇಶ್ವರದ ರಮ್ಯ ಪ್ರಕೃತಿ ಪ್ರತಿ ಫ್ರೇಮ್‌ನಲ್ಲೂ ಅದ್ಭುತವಾಗಿ ಮೂಡಿ ಬಂದಿದೆ.

ಚಿತ್ರ ಮುಗಿದಾಗ, ನಾವು ಯಾತಕ್ಕೆ ಚಿತ್ರಮಂದಿರದೊಳಗೆ ನಕ್ಕೆವು ಎನ್ನುವುದನ್ನು ಒಂದಿಷ್ಟು ಗಂಭೀರವಾಗಿ ಯೋಚಿಸ ತೊಡಗಿದರೆ, ನಮ್ಮೆಳಗೆ ವಿಷಾದವೊಂದು ಸುಳಿಯಬೇಕು. ಇಡೀ ಚಿತ್ರದ ಹಿಂದೆ ಬಾಲಿವುಡ್‌ನ ‘ಸುಪೀರಿಯಾರಿಟಿ’ ಕೆಲಸ ಮಾಡಿರುವುದು ಹೊಳೆಯುತ್ತಾ ಹೋಗುತ್ತದೆ. ತಮಿಳು ನಟರನ್ನು ಶಾರುಕ್‌ಗೇಲಿ ಮಾಡುವುದು ಇದೇ ಹೊಸತೇನಲ್ಲ. ಇಂದು ಬಾಲಿವುಡ್ ತಮಿಳು-ತೆಲುಗನ್ನೇ ಭಾಗಶಃ ಅವಲಂಬಿಸಿದ್ದರೂ ಆ ಭಾಷೆ ಮತ್ತು ಸಂಸ್ಕೃತಿಯ ಕುರಿತಂತೆ ಅವರಿಗಿರುವ ಉಡಾಫೆ ಕಮ್ಮಿಯಾಗಿಲ್ಲ. ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ ಅದು ಮತ್ತೊಮ್ಮೆ ವ್ಯಕ್ತವಾಗಿದೆ. ಹಾಸ್ಯ, ತಮಾಷೆಗಳಿಗಾಗಿ ತಮಿಳು ಭಾಷೆ ಮತ್ತು ಅವರ ಜನಜೀವನವನ್ನು ಬಳಸಿಕೊಂಡಿರುವುದು ಪ್ರಜ್ಞಾಪೂರ್ವಕವಲ್ಲದೇ ಇರಬಹುದು. ಆದರೆ, ಬಾಲಿವುಡಠ್‌ನ ಜನರಿಗಿರುವ ಮೇಲರಿಮೆ ಮತ್ತು ದಕ್ಷಿಣ ಭಾರತೀಯರ ಕುರಿತಂತೆ ಅವರಿಗಿರುವ ಕೀಳರಿಮೆ ಕಥೆಯ ಹೆಣಿಗೆಯಲ್ಲಿ ಬೇಡ ಬೇಡವೆಂದರೂ ಇಣುಕ್ತದೆ. ಮತ್ತು ತಮ್ಮ ಈ ಚೇಷ್ಟೆಗೆ ದಕ್ಷಿಣ ಭಾರತೀಯ ಅದರಲ್ಲೂ ಕನ್ನಡಿಗ ನಿರ್ದೇಶಕನನ್ನೇ ಬಳಸಿಕೊಂಡಿರುವುದು ಇನ್ನೊಂದು ವಿಪರ್ಯಾಸವಾಗಿದೆ.


ತಾನೂ ದಕ್ಷಿಣ ಭಾರತೀಯ ಎಂಬ ಶಾರುಕ್ ಖಾನ್ ಕೊಡುಗೆ ಪರೋಕ್ಷವಾಗಿ ದಕ್ಷಿಣ ಭಾರತೀಯರ ಕುರಿತಂತೆ ಮತ್ತೊಂದು ಅಣಕವೋ ಎಂಬ ಅನುಮಾನ ಕಾಡುವುದು ಇದೇ ಕಾರಣಕ್ಕೆ. ‘‘ದಕ್ಷಿಣ ಭಾರತೀಯರೆಂದು ನೀವು ಸಂಕೋಚ ಪಡಬೇಕಾಗಿಲ್ಲ...ನಾನು ಕೂಡ ಇಲ್ಲೇ ಹುಟ್ಟಿರುವುದು’ ಎಂಬ ಧ್ವನಿಯೊಂದು ಆ ಉದಾರತನದ ತಳದಲ್ಲಿ ಕೆಸರುಗಟ್ಟಿದೆಯೇ ಎನ್ನುವುದನ್ನು ನಮಗೆ ನಾವೇ ಕೇಳಿಕೊಳ್ಳುವಂತೆ ಮಾಡುತ್ತದೆ ‘ಚೆನ್ನೈ ಎಕ್ಸ್‌ಪ್ರೆಸ್’.

Sunday, August 11, 2013

ನಿನ್ನ ಬಳಿ ಏನನ್ನು ಬೇಡಲಿ?

 ರಮಝಾನ್‌ನಲ್ಲಿ ಪಕ್ಕಾ ಧಾರ್ಮಿಕ ಎನಿಸಿಕೊಂಡ ಗೆಳೆಯನೊಬ್ಬ ಮೊತ್ತ ಮೊದಲ ಬಾರಿಗೆ ನನ್ನಲ್ಲ್ಡೊಂದು ಆಧ್ಯಾತ್ಮಿಕ ಸಮಸ್ಯೆಯನ್ನು ಹಂಚಿಕೊಂಡ ‘‘ಇತ್ತೀಚೆಗೆ ದೇವರಲ್ಲಿ ಏನನ್ನು ಕೇಳಬೇಕು ಎನ್ನುವುದು ತಿಳಿಯದೇ ಗೊಂದಲದಲ್ಲಿದ್ದೇನೆ’’
 ‘‘ಇದು ನೀನು ದೇವರಿಗೆ ಹತ್ತಿರವಾಗಿರುವ ಸಂಕೇತ’’ ಎಂದು ಅವನನ್ನು ಸಂತೈಸಿದೆ. ಅವನ ಗೊಂದಲ ನನ್ನನ್ನು ತುಂಬಾ ತಟ್ಟಿತ್ತು. ಅದಕ್ಕೊಂದು ಕಾರಣ ಇದೆ. ದೇವರೊಂದಿಗೆ ಏನನ್ನು ಬೇಡಬೇಕು ಎನ್ನುವುದು ನನ್ನನ್ನೂ ಇತ್ತೀಚಿನ ದಿನಗಳಲ್ಲಿ ತುಂಬಾ ಕಾಡತೊಡಗಿದೆ. ದೇವರು ಹೀಗೆ, ಇಷ್ಟೇ ಎಂದು ಗೊತ್ತಿದ್ದರೆ ಅವನ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕ ಹಾಗೆ ನಮಗೆ ಬೇಡುವ ಅನುಕೂಲವಿತ್ತು. ಆದರೆ ಇಲ್ಲಿ ಹಾಗಲ್ಲ. ನಾವು ಬೆಳೆದಂತೆ ಅವನೂ ಬೆಳೆಯತೊಡಗುತ್ತಾನೆ. ನಮ್ಮ ಬೊಗಸೆ ಹಿಗ್ಗಿದಂತೆ ಅವನ ಆಕಾರವೂ ಹಿಗ್ಗತೊಡಗುತ್ತದೆ. ಕೆಲವೊಮ್ಮೆ ನಮ್ಮ ಲೌಕಿಕ ಬೇಡಿಕೆಗಳಿಂದ ಅವನನ್ನು ವೀಸಾ ಬ್ರೋಕರ್, ವೈದ್ಯ, ಫೈನಾನ್ಶಿಯರ್, ಪೊಲೀಸ್ ಅಧಿಕಾರಿಯ ಮಟ್ಟಕ್ಕೆ ಇಳಿಸಿ ಬಿಟ್ಟು ನಮ್ಮ ನಂಬಿಕೆಯನ್ನೇ ಹಾಸ್ಯಾಸ್ಪದಗೊಳಿಸಿ ಬಿಡುತ್ತೇವೆ.


 ಇದನ್ನು ಇನ್ನಷ್ಟು ಸರಳವಾಗಿ ಒಂದು ಉದಾಹರಣೆಯೊಂದಿಗೇ ವಿವರಿಸಬಹುದೇನೋ. ಸುಮಾರು 15 ವರ್ಷಗಳ ಹಿಂದಿನ ಘಟನೆಯಿದು. ಬಂಟ್ವಾಳ ಮೂಲದ ರಾಷ್ಟ್ರ ಮಟ್ಟದ ಖ್ಯಾತ ಉದ್ಯಮಿಯೊಬ್ಬರು ನಾಲ್ಕು ದಶಕಗಳ ಬಳಿಕ ತನ್ನ ಹುಟ್ಟೂರಿಗೆ ಆಗಮಿಸಿದ್ದರು. ಅವರು ಬೆಳ್ಳಂಬೆಳಗ್ಗೆ ಇಷ್ಟು ಹೊತ್ತಿಗೆ ಊರಿನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂಬ ಮಾಹಿತಿಯಿದ್ದ ಕಾರಣ, ಅವರ ಭೇಟಿಗೆ ದೇವಸ್ಥಾನದ ಅರ್ಚಕರು, ಮುಖಂಡರು ಕಾದು ನಿಂತಿದ್ದರು. ಕೊನೆಗೂ ಆ ಖ್ಯಾತ ಉದ್ಯಮಿ ಬೆಳಗ್ಗೆ ಸುಪ್ರಭಾತದ ಹೊತ್ತಿಗೆ ಊರಿಗೆ ಕಾಲಿಟ್ಟರು. ದೇವಸ್ಥಾನದಲ್ಲಿ ಪೂಜೆಯೂ ನಡೆಯಿತು. ಉದ್ಯಮಿಯೇನೋ ತುಂಬಾ ಉಲ್ಲಸಿತವಾಗಿದ್ದರು. ಹೇಳಿಯೇ ಬಿಟ್ಟರು ‘‘ಸುಮಾರು 30 ವರ್ಷಗಳ ಬಳಿಕ ಊರಿಗೆ ಕಾಲಿಟ್ಟಿದ್ದೇನೆ. ನಿಮ್ಮ ಅಗತ್ಯ ಏನಾದರೂ ಇದ್ದರೆ ಹೇಳಿ...ಮಾಡಿ ಕೊಡುವ’’
 ದೇವಸ್ಥಾನದ ಸದಸ್ಯನೊಬ್ಬ ತಕ್ಷಣ ಬಾಯಿತೆರೆದು ಕೇಳಿಯೇ ಬಿಟ್ಟ ‘‘ನಮ್ಮ ದೇವಸ್ಥಾನದ ಜನರೇಟರ್ ಒಂದು ಕೆಟ್ಟು ಹೋಗಿದೆ. ಆಗಾಗ ಕೆಡ್ತಾನೆ ಇದೆ. ಒಂದು ಹೊಸ ಜನರೇಟರ್ ತೆಗೆದುಕೊಟ್ಟಿದ್ದರೆ ದೇವಸ್ಥಾನಕ್ಕೆ ಅನುಕೂಲವಾಗುತ್ತಿತ್ತು’’. ಉದ್ಯಮಿ ತಕ್ಷಣ ಸರಿ ಅಂದು ಬಿಟ್ಟರು. ಎಂತಹ ವಿಪರ್ಯಾಸವೆಂದರೆ, ಕೇಳಬಾರದ ಮನುಷ್ಯ ಆ ಸಂದರ್ಭದಲ್ಲಿ ಕೇಳಿ ಬಿಟ್ಟ. ಒಂದು ವೇಳೆ, ಇಡೀ ಬಂಟ್ವಾಳಕ್ಕೆ ನೀರಿನ ಸಮಸ್ಯೆ ಇದೆ. ಅದನ್ನೊಂದು ಪರಿಹರಿಸಬೇಕು ಎಂದಿದ್ದರೆ ಇಡೀ ಬಂಟ್ವಾಳಕ್ಕೆ ನೀರಿನ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಅಥವಾ ಊರಿನ ಶಾಲೆಗೆ ಹೊಸ ಕಟ್ಟಡ ಬೇಕು ಎಂದರೆ ಅದಕ್ಕೂ ತಕ್ಷಣ ಒಪ್ಪಿ ಬಿಡುತ್ತಿದ್ದರು. ಯಾಕೆಂದರೆ ಕೇಳಿ ಎಂದಾಗ ಅವರು ಅದಕ್ಕಾಗಿ ಏನಿಲ್ಲವೆಂದರೂ ಒಂದೈದು ಕೋಟಿಯನ್ನು ತೆಗೆದಿಟ್ಟಿದ್ದರು. ಆದರೆ ಕೇಳಬೇಕಾದ ಮನುಷ್ಯ ಬರೇ ಐವತ್ತು ಸಾವಿರ ರೂಪಾಯಿಯ ಜನರೇಟರ್‌ನ್ನು ಕೇಳಿ ಅಲ್ಪನೆನಿಸಿಕೊಂಡ. ದೇವರೊಂದಿಗೆ ಏನು ಬೇಡಬೇಕು ಎನ್ನುವುದನ್ನು ಕಂಡುಕೊಳ್ಳುವುದೇ ದೇವರನ್ನು ತಲುಪುವ ನಿಜವಾದ ಮಾರ್ಗವಾಗಿರಬಹುದೇನೋ ಅನ್ನಿಸುವುದು ಇದೇ ಕಾರಣಕ್ಕೆ. ನಾವು ದೇವರಲ್ಲಿ ಏನನ್ನು ಕೇಳಿಕೊಳ್ಳುತ್ತೇವೆ ಎನ್ನುವುದರಲ್ಲೇ ನಮ್ಮ ನಮ್ಮ ದೇವರುಗಳ ಮಿತಿ ಮತ್ತು ವ್ಯಾಪ್ತಿಗಳಿರುತ್ತವೆ.

ಅದೇಕೋ ಗೊತ್ತಿಲ್ಲ. ಬಾಲ್ಯದಿಂದಲೂ ನಾನು ಗೆಳೆಯರ ಕೈಯಲ್ಲಿ ನಾಸ್ತಿಕ, ಕಮ್ಯುನಿಷ್ಟ್ ಎಂದು ಉಗಿಸಿಕೊಂಡಿದ್ದೇನೆ. ಅವರೊಂದಿಗೆ ಮಸೀದಿಗೆ ಹೋದರೂ ‘ಕಮ್ಯುನಿಸ್ಟ್ ಬಂದ’ ಎಂದು ವ್ಯಂಗ್ಯ ಮಾಡುವವರೂ ಇದ್ದರು. ಅವರ ಪಾಲಿಗೆ, ಕಮ್ಯುನಿಸಂ ಅಂದರೆ ತುಂಬಾ ಸುಲಭ. ದೇವರ ಬಗ್ಗೆ ಪ್ರಶ್ನೆ ಮಾಡಿದರೆ ಸಾಕು. ಆದರೆ ಬಾಲ್ಯದಲ್ಲೇ ನಾನು ನನ್ನೆದೆಯ ಖಾಸಗಿಕೋಣೆಯೊಂದರಲ್ಲಿ ದೇವರೊಂದಿಗೆ ಪಿಸುಗುಡುತ್ತಾ ಬಂದೆ. ನರಕದ ಭಯ, ಸ್ವರ್ಗದ ಆಸೆ ಇವೆರಡನ್ನೂ ಮೀರಿದ ಕಾರಣವೊಂದು ದೇವರ ಇರವನ್ನು ತನ್ನದಾಗಿಸಿಕೊಳ್ಳುವುದಕ್ಕೆ ಇದೆ ಎನ್ನುವುದನ್ನು ನಾನು ನನ್ನ ಪುಣ್ಯಕ್ಕೆ ಕಾಲೇಜು ದಿನಗಳಲ್ಲೇ ಅರ್ಧ ಮಾಡಿಕೊಳ್ಳುತ್ತಾ ಹೋದೆ. ಅದಕ್ಕೆ ಕಾರಣ, ಪುಸ್ತಕಗಳನ್ನು ಓದುವುದೂ ಆಗಿರಬಹುದು. ಅಥವಾ ಹೊರಗಿನ ಲೋಕಕ್ಕೆ ಪರಿಚಯವಿಲ್ಲದ ನನ್ನ ಅಂತರ್ಮುಖೀ ಜಗತ್ತೂ ಆಗಿರಬಹುದು. ನಾನು ತುಂಬಾ ಇಷ್ಟ ಪಡುತ್ತಿದ್ದ ಆಕಾಶ, ಕಡಲು ಮತ್ತು ನದಿ ಇವುಗಳೂ ಆಗಿರಬಹುದು. 


ಕಾಲೇಜಿನ ದಿನಗಳಲ್ಲೊಮ್ಮೆ ಒಂದು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ‘‘ದೇವರಿದ್ದಾನೆಯೇ ಇಲ್ಲವೇ’’ ಎಂಬ ವಿಷಯವನ್ನು ನೀಡಲಾಗಿತ್ತು. ನನ್ನ ಆತ್ಮೀಯ ಗೆಳೆಯನಾಗಿದ್ದ ವಿನ್ಸನ್ ಜಾನ್ ದೇವರಿಲ್ಲ ಎಂದು ವಾದಿಸಿದ್ದರೆ, ನಾನು ದೇವರಿದ್ದಾನೆ ಎಂದು ವಾದಿಸಿದ್ದೆ. ಇಬ್ಬರೂ ಪ್ರಥಮ ಬಹುಮಾನವನ್ನು ಹಂಚಿಕೊಂಡಿದ್ದೆವು. ಈಗಲೂ ನೆನಪಿದೆ. ನಮಗೆ ಸಿಕ್ಕಿದ ಬಹುಮಾನ ಎ.ಎನ್. ಮೂರ್ತಿರಾಯರ ಜನಪ್ರಿಯ ಕೃತಿ ‘ದೇವರು’. ‘ದೇವರಿಲ್ಲ ಎಂದು ಹೇಳುವುದಕ್ಕೆ ನನ್ನಲ್ಲಿ ಯಾವ ಆಧಾರವೂ ಇಲ್ಲ. ಆದುದರಿಂದ ನಾನು ದೇವರಿದ್ದಾನೆ ಎಂದು ವಾದಿಸುತ್ತಿದ್ದೇನೆ’ ಎಂಬ ವಿಚಿತ್ರ ವಾದವನ್ನು ನಾನು ಮಂಡಿಸಿದ್ದೆ. ಅಷ್ಟೇ ಅಲ್ಲ, ಮಸೀದಿ, ದೇವಸ್ಥಾನ ಇವೆಲ್ಲವುಗಳನ್ನು ಬದಿಗಿಟ್ಟು ನನ್ನದೇ ಆದ ದೇವರ ಕಲ್ಪನೆಯನ್ನು ಮಂಡಿಸಲು ಪ್ರಯತ್ನಿಸಿದ್ದೆ. ಚೆಸ್ ಆಟದಲ್ಲಿ ಪ್ರತಿಭಾವಂತನಾಗಿದ್ದ, ಒಳ್ಳೆಯ ಮಾತುಗಾರನೂ, ಫೈನ್ ಆರ್ಟ್‌ನ ನಾಯಕನೂ ಆಗಿದ್ದ ವಿನ್ಸನ್ ಜಾನ್ ನನ್ನ ಮಾತನ್ನೇ ಬಳಸಿಕೊಂಡು ‘ದೇವರಿಲ್ಲ’ ಎಂದು ವಾದಿಸಿದ್ದ. ಕಾಲದ ವಿಪರ್ಯಾಸವೆಂದರೆ, ಈಗ ನೋಡಿದರೆ ವಿನ್ಸನ್ ಜಾನ್ ಬೆಳಗಾವಿಯ ಸಮೀಪ ಪಾದ್ರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಅವನ ಈ ಆಯ್ಕೆಗೆ ಅವನದೇ ಆದ ಕಾರಣವಿರಬಹುದು. ದೇವರನ್ನು ಒಪ್ಪುತ್ತಲೇ ನಾನು ವಿನ್ಸನ್ ಜಾನ್ ಆಯ್ಕೆಯನ್ನು ಈಗಲೂ ನಿರಾಕರಿಸುತ್ತೇನೆ. ಅಂದು ನಾನು ದೇವರಿದ್ದಾನೆ ಎಂದು ವಾದಿಸಿ ಗೆದ್ದಾಗ, ಇಬ್ರಾಹಿಂ ಎಂಬ ಪಕ್ಕಾ ಧಾರ್ಮಿಕ ಗೆಳೆಯ ನನ್ನನ್ನು ವಿಚಿತ್ರವಾಗಿ ನೋಡಿ ‘‘ಬಶೀರ್ ಬಾಯಿ, ನೀವೇನೆಂದೇ ನನಗೆ ಅರ್ಥವಾಗುತ್ತಿಲ್ಲ’’ ಎಂದಿದ್ದ. ಆ ಮಾತು ಈಗಲೂ ಹೊಚ್ಚ ಹೊಸದಾಗಿ ಎಂಬಂತೆ ನನ್ನನ್ನು ಕಾಡುತ್ತಲೇ ಇದೆ. ಈವರೆಗೂ ನಾನು ಏನು ಎನ್ನುವುದು ನನಗೇ ಅರ್ಥವಾಗಿಲ್ಲ. ನಾನು ಮತ್ತು ದೇವರು ಈ ನಿಟ್ಟಿನಲ್ಲಿ ಒಂದೇ. ಅದು ನಡೆದಂತೆ ಅರ್ಥವಾಗುತ್ತಾ ಹೋಗುತ್ತದೆ. ಮುಂದೆ ಮುಂದೆ ಹೋದಂತೆ ಅದು ತನ್ನ ಅರ್ಥವನ್ನು ಬದಲಿಸಿಕೊಳ್ಳುತ್ತಾ ಹೋಗುತ್ತದೆ. ಒಂದಂತೂ ನಿಜ. ‘ದೇವರನ್ನು ನಂಬುವುದು’ ಎನ್ನುವ ಶಬ್ದದಿಂದ ನಾನು ಎಂದೋ ದೂರ ಬಂದಿದ್ದೇನೆ. ಯಾವುದರ ಉಸಿರಾಟವನ್ನು ನಾನು ಆಲಿಸುತ್ತಿದ್ದೇನೆಯೋ, ಯಾವುದು ನನ್ನ ಸ್ಪರ್ಶಕ್ಕೆ ದಕ್ಕುತ್ತಿದೆಯೋ, ಯಾವುದರ ಪರಿಮಳವನ್ನು ನಾನು ಆಘ್ರಾಣಿಸುತ್ತಿದ್ದೇನೆಯೋ ಅದನ್ನು ನಾನು ‘ನಂಬುತ್ತಿದ್ದೇನೆ’ ಎಂದು ಹೇಳುವುದು ಹೇಗೆ? ನನ್ನದೆರು ನನ್ನ ಗೆಳೆಯ ನಿಂತಿದ್ದಾನೆ. ಹೀಗಿರುವಾಗ ‘‘ನನ್ನೆದುರು ನನ್ನ ಗೆಳೆಯ ನಿಂತಿದ್ದಾನೆ ಎನ್ನುವುದನ್ನು ನಾನು ನಂಬುತ್ತೇನೆ’’ ಎನ್ನುವುದು ತೀರಾ ಕೃತಕವೆನಿಸುವುದಿಲ್ಲವೆ? ನಂಬುತ್ತೇನೆ ಎನ್ನುವುದೇ ಕೆಲವೊಮ್ಮೆ ನಂಬದೇ ಇರುವುದರ ಸೂಚಕವಾಗುವುದಿಲ್ಲವೆ? ಆದುದರಿಂದಲೇ ದೇವರಿದ್ದಾನೆ ಎನ್ನುವುದನ್ನು ನಂಬುತ್ತೇನೆ ಎನ್ನುವ ಶಬ್ದವೇ ನನ್ನ ಪಾಲಿಗೆ ಹೊರತದಾದುದು. ನಾನು ಅವನನ್ನು ಅನುಭವಿಸುತ್ತಿದ್ದೇನೆ ಎನ್ನುವುದು ತುಸು ಸರಿಯಾಗಬಹುದೇನೋ.

 ‘ಯಾವುದೇ ಧರ್ಮವನ್ನು ಅವಲಂಬಿಸದೆಯೇ ನಾವು ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದು ಸಾಧ್ಯವಿದೆಯೇ?’ ಎಂದು ಒಬ್ಬ ಗೆಳೆಯ ಫೇಸ್‌ಬುಕ್‌ನಲ್ಲಿ ನನ್ನನ್ನು ಕೇಳಿದ್ದ. ಯಾವುದೇ ಧರ್ಮವನ್ನು ಅವಲಂಬಿಸಿಯೂ ನಾವು ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದು ಸಾಧ್ಯವಿಲ್ಲದೇ ಇರುವಾಗ, ಅವಲಂಬಿಸಿದೇ ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದೂ ಸಾಧ್ಯವಿದೆ ಎಂದಿದ್ದೆ. ಇನ್ನೂ ತರುಣ ಅವ. ‘‘ಧರ್ಮ ಹುಟ್ಟುವ ಮೊದಲೂ ದೇವರಿದ್ದ ಎನ್ನುವುದು ನೀನು ಒಪ್ಪುತ್ತಿಯೆಂದಾದರೆ, ಧರ್ಮವನ್ನು ಅವಲಂಬಿಸದೆಯೂ ದೇವರಿಗೆ ಇಷ್ಟವಾಗುವ ಹಾಗೆ ಬದುಕುವುದು ಸಾಧ್ಯವಿದೆ’’ ಎಂದು ಸಮಾಧಾನಿಸಿದೆ. ‘ಪೂಜೆ, ಪುನಸ್ಕಾರ ಇವುಗಳೆಲ್ಲ ನನಗೆ ಬಾಲಿಶ ಅನ್ನಿಸುತ್ತದೆ’ ಎಂದ. ‘ಹಾಗನ್ನಿಸುತ್ತದೆ ಎಂದಾದರೆ ನೀನು ದೇವರಿಗೆ ಸಮೀಪದಲ್ಲಿದ್ದೀಯ’ ಎಂದೆ. ಸರಿ, ದೇವರಿಗೆ ಇಷ್ಟವಾಗುವ ಹಾಗೆ ನಾನೇನು ಮಾಡಬೇಕು? ಅವನಿಗಿಷ್ಟವಾಗುವ ಧರ್ಮ ಯಾವುದು? ಸ್ವಾಮೀಜಿಗಳಿಗೆ ಎಸೆದಂತೆ ನನಗೆ ಪ್ರಶ್ನೆಗಳನ್ನು ಎಸೆದಿದ್ದ.


  ಸದ್ಯಕ್ಕೆ ನನಗನ್ನಿಸಿದ್ದು ಇಷ್ಟೇ. ‘‘ಇನ್ನೊಬ್ಬರಿಗೆ ಅನ್ಯಾಯವಾಗದ ಹಾಗೆ ಬದುಕುವುದು. ಹಾಗೆಯೇ ನಮ್ಮ ಮಿತಿಯಲ್ಲಿ ಇನ್ನೊಬ್ಬರಿಗೆ ನೆರವು ನೀಡುವುದು. ಇನ್ನೊಬ್ಬರೊಂದಿಗೆ ಪ್ರ್ಝೀತಿ, ಸ್ನೇಹಗಳನ್ನು ಹಂಚಿಕೊಳ್ಳುವುದು. ಇದೇ ಧರ್ಮ. ಬಹುಶಃ ದೇವರು, ಅವನ ಈ ಬ್ರಹ್ಮಾಂಡ, ಈ ಪ್ರಕೃತಿ ಮನುಷ್ಯನಿಂದ ಇದಕ್ಕಿಂತ ಹೆಚ್ಚಿನದ್ದನ್ನು ಅಪೇಕ್ಷಿಸುತ್ತಿಲ್ಲ’’
ಇಷ್ಟನ್ನು ಮಾಡಲು ದೇವರು ಶಕ್ತಿ ಕೊಟ್ಟರೆ ಅದು ಧಾರಾಳವಾಯಿತು. ಸದ್ಯಕ್ಕೆ ನಾನು ದೇವರಲ್ಲಿ ಬೇಡುವುದು ಇದನ್ನೇ. ಕಳೆದ ರಮಝಾನ್ ತಿಂಗಳ ಪೂರ್ತಿ ನಾನು ದೇವರಲ್ಲಿ ಬೇಡಿದ್ದು ಇದನ್ನೇ.