Friday, October 30, 2009

ಮೊಬೈಲ್ ಹಾಡು....!


ಮೊಬೈಲ್ ಒಮ್ಮೆಲೆ ಅಳತೊಡಗುತ್ತದೆ. ಎತ್ತಿಕೊಳ್ಳಲು ಬಾಗಿದರೆ ಒಂದು ಅಪರಿಚಿತ ಸಂಖ್ಯೆ ಕಂಪಿಸುತ್ತಿದೆ. ಒಂದು ಅಪರಿಚಿತ ಧ್ವನಿ ಹಲೋ ಎನ್ನುತ್ತದೆ. ಎತ್ತಿ ಕಿವಿಗಿಡುವ ಆ ಕ್ಷಣ...ಯಾರಿರಬಹುದೆಂಬ ಆತಂಕ...ತಲ್ಲಣ...ಒಂದು ಕ್ಷಣದ ನಿಗೂಢತೆ ಕೆಲವೊಮ್ಮೆ ಒಂದು ವಿಶಿಷ್ಟ ಅನುಭವವಾಗಿ ನಮ್ಮನ್ನು ಸುತ್ತಿಕೊಳ್ಳುತ್ತದೆ.... ಆ ಅನುಭವವೇ ಇಲ್ಲಿ ಕವಿತೆಯಾಗಿದೆ.......

***

ಮತ್ತೆ ಮೊಬೈಲ್ ಕಂಪಿಸುತ್ತಿದೆ...
ಇನ್‌ಬಾಕ್ಸ್ ತೆರೆದು ನೋಡಿದರೆ
ಅವನೇ...ನಗುತ್ತಿದ್ದಾನೆ!

‘ಯಾರು?’ ಎಂಬ ನನ್ನ
ಎರಡಕ್ಷರದ ಮೆಸೇಜಿಗೆ
‘ಹುಡುಕು’ ಎಂಬ ಮೂರಕ್ಷರದ
ರಿಪ್ಲೆ ಕಳುಹಿಸುತ್ತಾನೆ...
‘ಸಾಯಿ’ ಎಂದು ಕಳುಹಿಸಿದರೆ
‘ಬದುಕು’ ಎಂದು ಮರಳಿಸಿದ
ಸಿಟ್ಟಿನಿಂದ ಮೆಸೇಜನ್ನೆಲ್ಲ ಅಳಿಸಿದರೆ
ಎದೆಯೊಳಗೇ ‘ಸೇವ್’ ಆಗಿ ನಗುತ್ತಿದ್ದ
ಅಳಿಸಿದರೆ...ತುಂಬಿಕೊಳ್ಳುತ್ತಿದ್ದ!

ನಂಬರ್‌ಗೆ ಕರೆ ಮಾಡಿದರೆ
ಉತ್ತರವಿಲ್ಲ
ಯಾಕೆ ಈ ಪ್ರಯಾಸ ಎಂದು
ನೇರ ಸೆಂಟರಿಗೆ ನಡೆದು
ಸಂಖ್ಯೆ ತೋರಿಸಿದರೆ
ಅಲ್ಲೊಂದು ನಕಲಿ ವಿಳಾಸ!

ನಗಿಸುತ್ತಿದ್ದ
ಅಳಿಸುತ್ತಿದ್ದ
ಕಾಡುತ್ತಿದ್ದ
ಹಾಡುತ್ತಿದ್ದ
ಆಕಾಶದಷ್ಟು ದೂರದಲ್ಲಿದ್ದರೂ
ಕೊರಳ ನೀಳ ನರದಷ್ಟು ಹತ್ತಿರದಲ್ಲಿ
ನನ್ನ ನೋಡುತ್ತಿದ್ದ

ಯಾರಿರಬಹುದು?
ತೋರು ಬೆರಳು ಹಿಡಿದು ನಡೆಸಿದ
ನನ್ನ ತಂದೆಯೆ?
ಚಹಾ ಹೀರುತ್ತಾ ನನ್ನ ಮುಂದೆಯೇ
ತುಂಟ ನಗು ಬೀರುತ್ತಿರುವ ಒಲವೆ?
ಅಥವಾ...ಮಾತು ಬಿಟ್ಟ ಗೆಳೆಯ?
ನನ್ನ ಜನ್ಮಾಂತರದ ಶತ್ರು?
ಅಥವಾ..ನೀನೊಬ್ಬನೇ ಇಲ್ಲಿ ಸಾಯಿ ಎಂದು
ಸತ್ತು ಹೋದ ಅಣ್ಣ?
ಇನ್ನೂ ಹೆರಿಗೆ ನೋವಿನ ತೆರಿಗೆ
ಕಟ್ಟುತ್ತಿರುವ ಅಮ್ಮ?
ಅಥವಾ...
ನನಗೆ ಹುಟ್ಟಲೇ ಇಲ್ಲದ ನನ್ನ ಮುದ್ದಿನ ತಮ್ಮ!?

ಒಂದು ಹಿತವಾದ ಗಾಯದಂತಿರುವ ಈತ
ಬರೇ ಸಂಖ್ಯೆಯೇ ಆಗಿದ್ದರೆ
ಕಳೆದುಳಿದ ಬದುಕಿನ ಒಟ್ಟು ಮೊತ್ತದಿಂದ
ಅದನ್ನೂ ಕಳೆದು ಬಿಡುತ್ತಿದ್ದೆ
ಅಕ್ಷರವೇ ಆಗಿದ್ದರೆ
ಒಂದೇ ಏಟಿಗೆ ಒರೆಸಿ ಹಾಕಿ ಬಿಡುತ್ತಿದ್ದೆ

ಭಯವಾಗುತ್ತಿದೆ ನನಗೆ...
ಅವನ ಉಸಿರಾಟ ಕೇಳಿಸುತ್ತಿದೆ
ಪರಿಮಳ ನನ್ನನ್ನು ಆವರಿಸಿದೆ
ಅವನ ರುಚಿ, ಸ್ಪರ್ಶವೂ ದಕ್ಕುತ್ತಿದೆ
ಆದರೂ ದೃಷ್ಟಿಗೆ ಸಿಗುತ್ತಿಲ್ಲ....
ಯಾರಿರಬಹುದು ಇವನು?

ಹುಡುಕುತ್ತಾ ಹುಡುಕುತ್ತಾ
ಮೊಬೈಲ್ ಕರೆನ್ಸಿ ಕರಗುತ್ತಿದೆ
ರೀಚಾರ್ಜ್ ಮಾಡಲು ಕೈ ಬರಿದಾಗಿದೆ
ಕರೆನ್ಸಿ ಮುಗಿಯುವ ಮುನ್ನ
ನನ್ನ ಹುಡುಕಾಟ ಮುಗಿಯಬೇಕಿದೆ
ಭಯವಾಗುತ್ತಿದೆ...

ಅಗೋ..ಮತ್ತೆ ಮೊಬೈಲ್ ಕಂಪಿಸುತ್ತಿದೆ...!

*

Thursday, October 15, 2009

ನೇತ್ರಾವತಿಯ ಒಳಸುಳಿ ಮತ್ತು ರಫಿಕ್ ಎಂಬ ಪ್ರತಿಭೆ


ಇವತ್ತು ರಫಿಕ್ ಕುರಿತಂತೆಯೇ ಯಾಕೆ ಬರೀಬೇಕು ಅನ್ನಿಸಿತೋ ಗೊತ್ತಿಲ್ಲ. ಹಳೆ ಫೈಲುಗಳನ್ನು ಝಾಡಿಸುತ್ತಿದ್ದಾಗ ಸುಮಾರು ಎರಡು ಅಥವಾ ಮೂರು ವರ್ಷಗಳ ಹಿಂದೆ ರಫಿಕ್ ಕುರಿತಂತೆ ‘ಅಗ್ನಿ’ ಪತ್ರಿಕೆಯಲ್ಲಿ ಬರೆದ ಲೇಖನ ಕೈಗೆ ಸಿಕ್ಕಿತು. ಓದುತ್ತಾ ಹೋದ ಹಾಗೆಯೇ...ಈ ಲೇಖನವನ್ನು ಗುಜರಿ ಅಂಗಡಿಗೆ ಹಾಕಿ ಬಿಡೋಣ ಅನ್ನಿಸಿತು. ರಫಿಕ್ ನಿಧನನಾದಾಗ ಅಗ್ನಿ ಸಂಪಾದಕರು ನನ್ನೊಂದಿಗೆ ಬರೆಸಿದ ಲೇಖನ ಇದು. ರಫಿಕ್‌ನನ್ನು ಓದುತ್ತಾ ಹೋದ ಹಾಗೆ ನನ್ನೊಳಗೆ ಉಪ್ಪಿನಂಗಡಿ ಎನ್ನುವ ಪುಟ್ಟ ಪೇಟೆ ಕದಲತೊಡಗುತ್ತದೆ. ನಾನು ತೊರೆದು ಬಂದ ಉಪ್ಪಿನಂಗಡಿಯನ್ನೊಮ್ಮೆ ರಫಿಕ್‌ನ ನೆಪದಲ್ಲಿ ಮುಟ್ಟುವ ಪ್ರಯತ್ನವಾಗಿ ಈ ಹಳೆಯ ಲೇಖನವನ್ನು ಗುಜರಿ ಅಂಗಡಿಯ ತಕ್ಕಡಿಯಲ್ಲಿಟ್ಟಿದ್ದೇನೆ.

***

“ನಾನಿನ್ನು ಮೈಸೂರನ್ನು ಶಾಶ್ವತ ಬಿಡು ಬಿಡಬೇಕೆಂದಿದ್ದೇನೆ. ನನ್ನ ತಮ್ಮ ಹೊಸ ಕಂಪ್ಯೂಟರ್ ಕಳುಹಿಸಿಕೊಟ್ಟಿದ್ದಾನೆ. ಇನ್ನು ಊರಲ್ಲೇ ಇದ್ದು ಕೆಲಸ ಮಾಡಬೇಕೆಂದಿದ್ದೇನೆ. ಸ್ವಲ್ಪ ಚೇತರಿಸಿಕೊಂಡಾಕ್ಷಣ ಅರ್ಧದಲ್ಲಿರುವ ನನ್ನ ಕೆಲಸಗಳನ್ನೆಲ್ಲ ಮುಗಿಸಿ ಬಿಡಬೇಕು. ಹೊಸ ಕಥಾ ಸಂಕಲನದ ಕೆಲಸ ಬಹುತೇಕ ಪೂರ್ತಿಯಾಗಿದೆ. ಪ್ರಿಂಟಾಗುವುದಷ್ಟೇ ಉಳಿದಿರುವುದು...”

ಮಲಗಿದಲ್ಲಿಂದಲೇ ರಫಿಕ್ ಮಾತನಾಡುತ್ತಿದ್ದಾಗ ನಾನು ಆತನ ತಲೆ ಪಕ್ಕ ಕುಳಿತಿದ್ದೆ. ಸಾವು ಆತನ ಪಾದದ ಬಳಿ ಕುಕ್ಕರಿಸಿತ್ತು.
ರಫಿಕ್ ನಿಜಕ್ಕೂ ಚೇತರಿಸಿಕೊಂಡಿದ್ದ. ಆತನ ಕಣ್ಣುಗಳಲ್ಲಿ ಬದುಕು ಉಕ್ಕುತ್ತಿತ್ತು. ತಿಂಗಳ ಹಿಂದೆ ಯುನಿಟಿ ಆಸ್ಪತ್ರೆಯಲ್ಲಿ ನೋಡಿದ ರಫಿಕ್‌ಗೂ, ಈಗ ನೋಡುತ್ತಿರುವ ರಫಿಕ್‌ಗೂ ಅಜಗಜಾಂತರವಿತ್ತು. ಹೇಳಿಕೊಳ್ಳಲಾಗದ ಸಂಕಟದೊಂದಿಗೆ ರಫಿಕ್‌ನ ಮನೆಯನ್ನು ಹೊಕ್ಕ ನನಗೆ, ಆತನ ಮಾತುಗಳು ಎಷ್ಟು ಸಾಂತ್ವನ ಹೇಳಿತ್ತೆಂದರೆ, ಮನದನೊಳಗೆ ಅಲ್ಲಲ್ಲಿ ಅಂಟಿ ಕುಳಿತ ಜೇಡರ ಬಲೆ, ಧೂಳುಗಳನ್ನು ಕೊಡವಿ ನಾನು ಒಮ್ಮೆಲೆ ಉಲ್ಲಸಿತನಾಗಿ ಬಿಟ್ಟಿದ್ದೆ.

“ಮೈಸೂರಿನ ಡಾಕ್ಟರೊಬ್ಬ ಮುಖಕ್ಕೆ ಹೊಡೆದಂತೆ ಹೆಚ್ಚು ದಿನ ಬದುಕುವುದಿಲ್ಲ ಎಂದು ಹೇಳಿ ಬಿಟ್ಟಿದ್ದ. ನಾನು ನಿಜಕ್ಕೂ ಆಗ ಕಂಗಾಲಾಗಿದ್ದೆ. ಈಗ ಪರವಾಗಿಲ್ಲ. ಜೊತೆಗೆ ಆಯುರ್ವೇದ ಮದ್ದು ತಗೋತಾ ಇದ್ದೇನೆ...” ರಫಿಕ್ ಮಾತನಾಡುತ್ತಲೇ ಇದ್ದ.
ರಫಿಕ್‌ನ ಪ್ರೀತಿಯ ಮಗಳು ಪುಟ್ಟ ದಿಯಾ ಸಲೀಮಾ ಅಲ್ಲೇ ಇದ್ದಳು. ನಾಲ್ಕು ವರ್ಷದ ಹಿಂದೆ ನಾನು ಮೈಸೂರಿಗೆ ಹೋದಾಗ ರಫಿಕ್, ದಿಯಾ, ನಾನು ‘ಝೂ, ಅರಮನೆ’ ಎಂದೆಲ್ಲ ದಿನವಿಡೀ ಸುತ್ತಾಡಿದ್ದೆವು. ಅಂದು ರಾತ್ರಿ ರಫಿಕ್‌ನ ಮನೆಯಲ್ಲೇ ಉಳಿದುಕೊಂಡಿದ್ದೆ. ಯಾವ ಹದ್ದಿನ ನೆರಳೂ ತಾಕದ ಪುಟ್ಟ ಹಕ್ಕಿಗೂಡಿನಂತಹ ಸಂಸಾರ. ರಫಿಕ್, ಆತನ ಪತ್ನಿ Uತಾ, ದಿಯಾ...ಅಲ್ಲಮಾ ರಾಝಿಕ್ ಆಗಿನ್ನೂ ಹುಟ್ಟಿರಲಿಲ್ಲ.

“ಬಶೀರ್ ಮಾಮಾನ ನೆನಪಿದೆಯಾ...” ರಫಿಕ್ ಮಲಗಿದ್ದಲ್ಲಿಂದಲೇ ಮಗಳಲ್ಲಿ ಕೇಳುತ್ತಿದ್ದ.
ದಿಯಾ ಸಲೀಮಾಳನ್ನು ರಫಿಕ್ ಮದುವೆಗೆ ಮುನ್ನವೇ ದತ್ತು ಸ್ವೀಕರಿಸಿದ್ದ. ಎಳೆ ಹಸುಳೆಯ ಕಾಲು ಆಗ ತುಸು ಊನವಾಗಿತ್ತು. ಝೂ ತುಂಬಾ ಓಡಾಡುವಾಗ ದಿಯಾ ತನ್ನ ಊನ ಗೊತ್ತಾಗಬಾರದೆಂದೋ ಏನೋ ಓಡುತ್ತಾ, ಜಿಗಿಯುತ್ತಾ ಅಡ್ಡಾಡುತ್ತಿದ್ದಳು. ಪುಟಾಣಿ ಜಿಂಕೆ ಮರಿಯಂತೆ. ಸಣ್ಣ ಆಪರೇಷನ್ನಿನಿಂದ ಆ ಊನ ಸರಿಯಾಯಿತು ಎಂದು ಬಳಿಕ ರಫಿಕ್ ತಿಳಿಸಿದ್ದ. ಮತ್ತೆ ಆ ಮಗುವನ್ನು ನೋಡಿದ್ದು ಈಗಲೇ. ಮಗು ಅಜ್ಜ, ಅಜ್ಜಿ(ರಫಿಕ್‌ನ ತಂದೆ, ತಾಯಿ)ಯರೊಂದಿಗೆ ಅದಾಗಲೇ ಒಂದಾಗಿ ಬಿಟ್ಟಿತ್ತು.

ರಫಿಕ್‌ನ ಮನೆಯಿಂದ ಹೊರ ಬಿದ್ದಾಗ ನಿಜಕ್ಕೂ ನನ್ನ ಮನಸ್ಸು ಉಲ್ಲಸಿತಗೊಂಡಿತ್ತು. ರಫಿಕ್ ಖಂಡಿತ ಉಳಿಯುತ್ತಾನೆ ಎನ್ನುವುದು ನನಗೆ ನಿಶ್ಚಯವಾಗಿತ್ತು. ಸಾಯುವುದಿದ್ದರೂ ಕಳೆದ ಎರಡು ವರ್ಷಗಳಿಂದ ಅವನನ್ನು ಕಾಡುತ್ತಿರುವ ಕ್ಯಾನ್ಸರ್‌ಗಂತೂ ರಫಿಕ್ ಖಂಡಿತಾ ತಲೆಬಾಗಿಸಲಾರ ಅನ್ನಿಸಿತ್ತು. ಅದಾಗಲೇ ಒಬ್ಬ ಗೆಳೆಯನಿಗೆ ‘ರಫಿಕ್ ಹೆಚ್ಚು ದಿನ ಬದುಕುವುದು ಕಷ್ಟ’ ಎಂದು ಬಿಟ್ಟಿದ್ದೆ. ಅವತ್ತೇ ಆ ಗೆಳೆಯನಿಗೆ ಫೋನ್ ಮಾಡಿ ‘ರಫಿಕ್ ಚೇತರಿಸಿದ್ದಾನೆ. ಆರೋಗ್ಯವಾಗಿದ್ದಾನೆ. ಆತ ಉಪ್ಪಿನಂಗಡಿಯಲ್ಲೇ ಉಳಿಯುವ ಯೋಜನೆಯಲ್ಲಿದ್ದಾನೆ. ಏನಿಲ್ಲವೆಂದರೂ ಇನ್ನೊಂದೆರಡು ತಿಂಗಳಲ್ಲಿ ಮೊದಲಿನಂತಾಗುತ್ತಾನೆ’ ಎಂದಿದ್ದೆ.
ಇದಾದ ಒಂದು ತಿಂಗಳಲ್ಲಿ, ಅಂದರೆ ಮೊನ್ನೆ ಜೂನ್ ೧೩ರಂದು ರಫಿಕ್ ತೀರಿ ಹೋದ. ಆದರೆ ಆತ ಮೃತಪಟ್ಟಿದ್ದು ಹೃದಯಾಘಾತದಿಂದ.

***

ಸೃಜನಶೀಲತೆ, ಸಂವೇದನಾಶೀಲತೆಯೆನ್ನುವುದು ಯಾಕೋ ನೇತ್ರಾವತಿ-ಕುಮಾರಧಾರ ನದಿಯ ಗರ್ಭದ ಒಳಸುಳಿಯಂತೆ ಉಪ್ಪಿನಂಗಡಿ ಎನ್ನುವ ಸಣ್ಣ ಊರಿನ ತರುಣರನ್ನು ಬಲಿ ಹಾಕುತ್ತಿದೆಯೇನೋ ಎನ್ನುವುದು ಹಲವು ಬಾರಿ ನನ್ನನ್ನು ಕಾಡಿದೆ. ಅಥವಾ...ಸೃಜನಶೀಲತೆಯ ಭಾಷೆ ತಟ್ಟದ, ಮುಟ್ಟದ ಜಡವಾದ ವ್ಯವಸ್ಥೆಯೊಂದನ್ನು ಅಲುಗಾಡಿಸಲೆಂದೇ ಇವರು ತಮ್ಮ ಸೃಜನಶೀಲತೆಯ ಭಾಷೆಯಾಗಿ ಸಾವನ್ನು ಬಳಸಿಕೊಳ್ಳುತ್ತಿದ್ದಾರೋ...? ಅಂತಿಮವಾಗಿ ಕವಿ, ಕತೆಗಾರರನ್ನೇ ಬಲಿ ಕೇಳುವ ಸೃಜನಶೀಲತೆಯೆಡೆಗೆ ಈ ತರುಣರೆಲ್ಲ ‘ಇಗೋ...’ ಎಂದು ಯಾಕೆ ದೀಪದೆಡೆಗೆ ನುಗ್ಗುವ ಪತಂಗಗಳಂತೆ ಮುನ್ನುಗ್ಗುತ್ತಿದ್ದಾರೆ...ಈ ಸಾವಿಗಾದರೂ ಜಡಗೊಂಡ ವ್ಯವಸ್ಥೆಯನ್ನು ಮುಟ್ಟುವ ಶಕ್ತಿಯಿದೆಯೆಂದು ಇವರು ಯಾಕಾದರೂ ತಿಳಿದುಕೊಳ್ಳಬೇಕು?

ವಿದ್ಯಾರ್ಥಿ ಕಾಲದಲ್ಲಿ ಖಡ್ಗದ ಅಲಗಿನಂತಹ ವ್ಯಕ್ತಿತ್ವವನ್ನು ಹೊಂದಿದ್ದ, ಕಮ್ಯುನಿಷ್ಟ್, ನಕ್ಸಲೈಟ್ ಎಂಬಿತ್ಯಾದಿ ಬಿರುದಾಂಕಿತಗಳೊಂದಿಗೆ ವಿಚಿತ್ರ ಆಕರ್ಷಣೆಯಾಗಿ ನನ್ನೊಳಗೆ ಇಳಿದಿದ್ದ ನನ್ನ ಹತ್ತಿರದ ಸಂಬಂಧಿಯೂ ಆಗಿದ್ದ ‘ಲಂಕೇಶ್ ನಝೀರ್’ನ ದುರಂತದ ಮೂಲದಿಂದ ಆರಂಭಗೊಂಡು, ಕತೆಗಾರ, ಪತ್ರಕರ್ತ ಬಿ. ಎಂ. ರಶೀದ್‌ನನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಂಡು, ರಫಿಕ್‌ನ ಅಕಾಲ ಮರಣದ ಜೊತೆ ನೇತ್ರಾವತಿಯನ್ನು ಸೇರುವ ಈ ಸೃಜನಶೀಲತೆಯ ಹರಿವು...ನಿಜಕ್ಕೂ ತಲ್ಲಣಗೊಳಿಸುವಂತಹದ್ದು! ಉಪ್ಪಿನಂಗಡಿಯ ತರುಣರ ನಡುವೆ ಪಾದರಸದಂತೆ ಓಡಾಡುತ್ತಿದ್ದ ಪುತ್ತೋಳಿ ಯಾನೆ ಹರಿಶ್ಚಂದ್ರ ಏಕಾ‌ಏಕಿ ಕೊಲೆಯಾಗುವ ಮೂಲಕ, ಅತ್ಯಂತ ಸುಂದರವಾಗಿ ಬ್ಯಾನರ್ ಬರೆಯುತ್ತಿದ್ದ, ಕಲಾವಿದ ಎಲ್ಲರ ಪ್ರೀತಿಯ ಆಂಟೋನಿ ಇದ್ದಕ್ಕಿದ್ದಂತೆಯೇ ಬ್ರಶ್‌ನ್ನು ಕೆಳಗಿಟ್ಟು ಸಾವಿಗೆ ಶರಣಾಗುವ ಮೂಲಕ...ಉಪ್ಪಿನಂಗಡಿ ಎನ್ನುವ ಸಣ್ಣ ಊರಲ್ಲಿ ತರುಣರು ಸಾವನ್ನೂ ಸೃಜನಶೀಲತೆಯ ಒಂದು ರುದ್ರ ಭಾಷೆಯಾಗಿ ಪರವರ್ತಿಸಿ ಬಿಟ್ಟಿದ್ದಾರೆ. ಲೇಖಕನನ್ನೇ ಬಲಿ ಬೇಡುವ ಸೃಜನಶೀಲತೆಯ ರುದ್ರ ರೂಪಕವೊಂದನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ನೇತ್ರಾವತಿ ಉಪ್ಪಿನಂಗಡಿಯನ್ನು ಒತ್ತಿ ಹರಿಯುತ್ತಿದೆ.

ರಫಿಕ್ ಉಪ್ಪಿನಂಗಡಿಯ ಹುಡುಗನಾದರೂ, ಆತನ ಸೃಜನಶೀಲ ಬದುಕು ಅರಳಿದ್ದು ಮೈಸೂರಿನಲ್ಲಿ. ಕಾವಾದಲ್ಲಿ ಪದಧರನಾಗಲು ಉಪ್ಪಿನಂಗಡಿಯಿಂದ ಮೈಸೂರಿಗೆ ತೆರಳಿದ್ದ ರಫಿಕ್, ಅಲ್ಲೇ ತನ್ನ ಬದುಕನ್ನು ಹುಡುಕಿಕೊಂಡ. ಫೋಟೋಗ್ರಫಿ ಮತ್ತು ಕುಂಚವನ್ನೇ ವೃತ್ತಿಯಾಗಿ ಸ್ವೀಕರಿಸುವಷ್ಟು ದಟ್ಟ ಪ್ರತಿಭೆ ಆತನಲ್ಲಿದ್ದರೂ, ಅದನ್ನು ಚೆಲ್ಲಿಕೊಂಡು ಪತ್ರಕರ್ತನಾಗಲು ಹಂಬಲಿಸಿದ. ಕೆಲವು ಕಾಲ ಸಿನಿಮಾಗಳಲ್ಲ್ಲಿ ತಂತ್ರಜ್ಞನಾಗಿ ಓಡಾಡಿದ. ಬಳಿಕ ಪತ್ರಿಕಾ ಜಗತ್ತಿಗೆ ಸಂದು ಹೋದ. ಜನವಾಹಿನಿ, ಮೈಸೂರಿನ ಪತ್ರಿಕೆಗಳಾದ ಆಂದೋಲನ, ಪ್ರಜಾನುಡಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ದುಡಿದ. ಹೊಸದಾಗಿ ಆರಂಭಗೊಂಡ ಸೂರ್ಯೋದಯದಲ್ಲಿ ಕೆಲಸ ಮಾಡಬೇಕೆಂದು ಹೊರಟಾಗ ಆತನನನ್ನು ಕ್ಯಾನ್ಸರ್ ಬೆನ್ನು ಹಿಡಿಯಿತು.

ರಫಿಕ್ ಏನೇ ಬರೆಯಲಿ, ತನ್ನ ಹೆಸರಿನ ಜೊತೆಗೆ ಉಪ್ಪಿನಂಗಡಿಯನ್ನು ಸೇರಿಸುತ್ತಿದ್ದ. ಅದಕ್ಕೆ ಉಪ್ಪಿನಂಗಡಿಯ ಮೇಲಿರುವ ಆತನ ಸಿಟ್ಟು ಕಾರಣವೋ, ಪ್ರೀತಿ ಕಾರಣವೋ ಎನ್ನುವುದು ನನಗೆ ಇನ್ನೂ ಸ್ಪಷ್ಟವಾಗಿಲ್ಲ. ಮೈಸೂರಲ್ಲಿ ಕೂತು ಆತ ಬರೆದದ್ದು ಉಪ್ಪಿನಂಗಡಿಯನ್ನೇ. ಆದರ್ಶಗಳನ್ನು ಮೈತುಂಬಾ ಹೊದ್ದುಕೊಂಡಿದ್ದ ರಫಿಕ್‌ಗೆ ಬದುಕು ಅದಕ್ಕೆ ಪೂರಕವಾಗಿಯೇ ತೆರೆಯುತ್ತಾ ಹೋಯಿತು. ಇಂತಹ ಹೊತ್ತಿನಲ್ಲೇ ಆತ ‘ಅಜ್ಜಿಮಾದ’ ಕಾದಂಬರಿಯನ್ನು ಬರೆದದ್ದು. ಗೋರೂರು ಪ್ರತಿಷ್ಠಾನ ನೀಡುವ ಪ್ರಶಸ್ತಿ ಈ ಕೃತಿಗೆ ದೊರಕಿದೆ.

ಅಜ್ಜಿಮಾದ ಕೃತಿಯ ಪಾತ್ರಗಳು, ಘಟನೆಗಳು ಹಸಿಹಸಿಯಾಗಿದ್ದವು. ಉಪ್ಪಿನಂಗಡಿಯ ಆಸುಪಾಸಿನ ಪಾತ್ರಗಳನ್ನು ಇದ್ದ ಹಾಗೆಯೇ ಯಥಾವತ್ತಾಗಿ ತನ್ನ ಕಾದಂಬರಿಯಲ್ಲಿ ತಂದಿದ್ದ. ಕೃತಿಯನ್ನು ಓದಿ ನಾನು ನೇರವಾಗಿ ನನ್ನ ಅಭಿಪ್ರಾಯವನ್ನು ತಿಳಿಸಿದ್ದೆ. “ಇಡೀ ಕಾದಂಬರಿ ಹಸಿಹಸಿಯಾಗಿದೆ. ಸಮಾಜದ, ಪರಿಸರದ ಕುರಿತಂತೆ ನಿನಗಿರುವ ಸಿಟ್ಟನ್ನೇ ಕಾದಂಬರಿಯಾಗಿ ಇಳಿಸಿದ್ದೀಯ. ನಿನ್ನೊಳಗಿನ ಸಿಟ್ಟು, ಒತ್ತಡಗಳು ಕಲೆಯಾಗುವವರೆಗೆ ನೀನು ಕಾಯಬಹುದಿತ್ತು. ಕಾಯಬೇಕಿತ್ತು. ಕಲೆಯನ್ನು ಸೇಡು ತೀರಿಸುವ ಮಾಧ್ಯಮವಾಗಿ ಬಳಕೆ ಮಾಡುವುದು ತಪ್ಪು. ಅಜ್ಜಿಮಾದ ಕಾದಂಬರಿಯ ಮೂಲಕ ನೀನು ನಿನ್ನೊಳಗಿರುವ ಸಿಟ್ಟನ್ನು, ಸೇಡನ್ನು ತೀರಿಸಿಕೊಳ್ಳುವ ಪ್ರಯತ್ನ ಮಾಡಿದ್ದಿ” ರಫಿಕ್ ಈ ಮಾತನ್ನು ಒಪ್ಪಿರಲಿಲ್ಲ. ನನ್ನ ಮಾತೇ ಸರಿ ಎನ್ನುವ ಹಟ ನನಗೂ ಇದ್ದಿರಲಿಲ್ಲ.
ಅಜ್ಜಿಮಾದದಲ್ಲಿರುವ ಕಪ್ಪು-ಬಿಳುಪು ಪಾತ್ರಗಳ ಕುರಿತಂತೆಯೂ ನಾನು ನನ್ನ ಆಕ್ಷೇಪವನ್ನು ವ್ಯಕ್ತಪಡಿಸಿದ್ದೆ. ಮನುಷ್ಯರನ್ನು ಕೆಟ್ಟವರಾಗಿಯೂ, ಒಳ್ಳೆಯವರಾಗಿಯೂ ಅಷ್ಟು ಸ್ಪಷ್ಟವಾಗಿ ವಿಂಗಡಿಸುವುದು ಹೇಗೆ ಸಾಧ್ಯ ಎಂದು ವಾದಿಸಿದ್ದೆ. ಆದರೂ ರಫಿಕ್ ಆ ಕಾದಂಬರಿಯಲ್ಲಿ, ತಳಮಟ್ಟದ ಮುಸ್ಲಿಂ ಬದುಕನ್ನು ಪರಿಣಾಮಕಾರಿಯಾಗಿ ಇಳಿಸಿದ್ದ. ಅಜ್ಜಿಮಾದ ಕಾದಂಬರಿಯ ದೆಸೆಯಿಂದ ಉಪ್ಪಿನಂಗಡಿಯಲ್ಲಿ ಹಲವರ ನಿಷ್ಠುರವನ್ನು ಕಟ್ಟಿಕೊಂಡಿದ್ದ.

ರಫಿಕ್ ಬಿಡಿಬಿಡಿಯಾಗಿ ಕವಿತೆಗಳನ್ನೂ ಬರೆಯುತ್ತಿದ್ದ. ಕವಿತೆಗಳಲ್ಲಿ ಯಾಕೋ ಮೃದುವಾಗುತ್ತಿದ್ದ. ಐದು ತಿಂಗಳ ಹಿಂದೆ ನನ್ನನ್ನು ಭೇಟಿಯಾಗಿದ್ದ ರಫಿಕ್, ತನ್ನ ಹೊಸ ಕಥಾಸಂಕಲನದ ಪ್ರೂಫನ್ನು ಕೊಟ್ಟಿದ್ದ. ಹೆಜ್ಜೆಗಳು ಮತ್ತು ಇತರ ಕತೆಗಳು ಎಂದು ಅದಕ್ಕೆ ಹೆಸರು ನೀಡಿದ್ದ. ಅದರಲ್ಲಿರುವ ಹೆಚ್ಚಿನ ಕತೆಗಳೂ ತನ್ನ ಬೇರುಗಳನ್ನು ಉಪ್ಪಿನಂಗಡಿಯಲ್ಲೇ ಇಳಿಸಿದ್ದವು. ಸಂಕಲನದ ಆರಂಭದಲ್ಲಿ “ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು, ಪುರಾಣ ಪೂರೈಸಲರಿಯದೆ ಕೆಟ್ಟವು, ಹಿರಿಯರು ತಮ್ಮ ತಾವರಿಯದೆ ಕೆಟ್ಟರು, ತಮ್ಮ ಬುದ್ಧಿ ತಮ್ಮನೆ ತಿಂದಿತ್ತು; ನಿಮ್ಮನೆತ್ತ ಬಲ್ಲರು ಗುಹೇಶ್ವರಾ?” ಎನ್ನುವ ಅಲ್ಲಮ ಪ್ರಭುವಿನ ವಚನವನ್ನು ಉಲ್ಲೇಖಿಸಿದ್ದಾನೆ.

ಬಳಿಕ ತಾನೇ ಬರೆದ ಮುನ್ನುಡಿಯಲ್ಲಿ “ಅಜ್ಜಿಮಾದ ಕಾದಂಬರಿಯನ್ನು ಅರ್ಥೈಸಲಾರದೆ ಹಲವರು ನನಗೆ ತೊಂದರೆಯನ್ನು ಕೊಟ್ಟಿದ್ದರು. ನಾನು ಮುಸ್ಲಿಂ ವಿರೋಧಿ ಎಂದೂ ಹಲವರು ಆರೋಪಿಸಿದರು. ಆದರೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ನಾನು ಇಸ್ಲಾಂ ಧರ್ಮವನ್ನು ಪ್ರೀತಿಸುತ್ತೇನೆ. ಆ ಧರ್ಮ ಕಲಿಸಿದಂತೆ ಪರಧರ್ಮಗಳ ಬಗ್ಗೆಯೂ ಅಪಾರವಾದ ಪ್ರೀತಿಯನ್ನಿಟ್ಟುಕೊಂಡಿದ್ದೇನೆ. ಇಸ್ಲಾಂ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಮುಸಲ್ಮಾನರನ್ನು ಅಷ್ಟೇ ವಿರೋಧಿಸುತ್ತೇನೆ...” ಎಂದು ಬರೆಯುತ್ತಾ ಹೋಗುತ್ತಾನೆ. ಕತೆಗಳಲ್ಲಿ ಹಲವು ಪಾತ್ರಗಳ ಮೂಲಕ ಇದನ್ನು ಬೇರೆ ಬೇರೆ ರೂಪದಲ್ಲಿ ಹೇಳುವುದಕ್ಕೆ ಪ್ರಯತ್ನಿಸುತ್ತಾನೆ. ರಫಿಕ್ ಸಾಯುವುದಕ್ಕೆ ಎರಡು ತಿಂಗಳ ಹಿಂದೆಯೇ ಈ ಕಥಾಸಂಕಲನದ ಕಾರ್ಯವನ್ನು ಪೂರ್ತಿಗೊಳಿಸಿದ್ದಾನೆ. ಆ ಸಂದರ್ಭದಲ್ಲಿ ಯಾವ ಬದಲಾವಣೆ ಮಾಡಿದ್ದಾನೆನ್ನುವುದು ನನಗೆ ತಿಳಿದಿಲ್ಲ. ತುಸು ಚೇತರಿಸಿಕೊಂಡರೆ ಈ ಕತಾಸಂಕಲನವನ್ನು ಬಿಡುಗಡೆಗೊಳಿಸುವುದು ರಫಿಕ್‌ನ ಕನಸಾಗಿತ್ತು.

ತಲೆ ತುಂಬಾ ಧಗಿಸುವ ಆದರ್ಶಗಳನ್ನು, ಕನಸುಗಳನ್ನು ತುಂಬಿಕೊಂಡಿದ್ದ ರಫಿಕ್, ಉಪ್ಪಿನಂಗಡಿಯ ನೆಲದ ಅಪ್ಪಟ ಪ್ರತಿಭೆ ಎನ್ನುವುದರಲ್ಲಿ ಸಂಶಯವಿಲ್ಲ. ೩೮ ವರ್ಷ ಪ್ರಾಯದ ರಫಿಕ್ ಬರೆದದ್ದು ತೀರಾ ಕಡಿಮೆ. ಆದರೆ ಬರೆಯಲಿರುವುದು ಅಪಾರವಿತ್ತು. ಸಾವು ಅವನ ಸೃಜನಶೀಲತೆಯ ಮೇಲೆ ಎರಗುವುದಕ್ಕೆ ಹವಣಿಸಿತು. ಆದರೆ ತನ್ನ ಸೃಜನಶೀಲತೆಯ ಮೂಲಕವೇ ಆತ ಸಾವನ್ನು ಎದುರಿಸಿದ. ಬದುಕಿನ ಕುರಿತಂತೆ ಅವನಿಗಿದ್ದ ಅಪಾರ ಭರವಸೆಯನ್ನು ಕಂಡು ಸಾವು ಅವಮಾನದಿಂದ ಮುಖಮುಚ್ಚಿಕೊಂಡಿರಬೇಕು. ಸಾವು ಯಾವಾಗ ಬರುವುದೋ ಎಂದು ಅದನ್ನು ನಿರೀಕ್ಷಿಸುತ್ತಾ ಆತ ಕೂಡಲಿಲ್ಲ. ಒಂದಿಷ್ಟು ಚೇತರಿಸಿಕೊಂಡರೆ ಮಾಡುವುದಕ್ಕೆ ಕೆಲಸ ತುಂಬಾ ಇದೆ ಎಂದು ಆತ ಹೇಳುತ್ತಿದ್ದ. ಕ್ಯಾನ್ಸರ್ ಆತನ ದೇಹವನ್ನು ನಿಧಾನಕ್ಕೆ ಆಕ್ರಮಿಸುತ್ತಿದ್ದರೂ, ಆತನ ದೇಹ ಒಂದಿಷ್ಟೂ ಜಗ್ಗಿರಲಿಲ್ಲ. ತಮ್ಮ ಪ್ರೀತಿ ವಿಶ್ವಾಸ, ವಾತ್ಸಲ್ಯಗಳ ಮೂಲಕ ಬದುಕಿನ ಕೊನೆಯ ದಿನಗಳನ್ನು ಆತನಿಗೆ ಸಹನೀಯವಾಗಿಸಿದ ಆತನ ತಂದೆ ತಾಯಿ, ತಮ್ಮಂದಿರು, ಪತ್ನಿ ಗೀತಾ, ಮಕ್ಕಳಾದ ದಿಯಾ, ರಾಝಿಕ್‌ರನ್ನು ಈ ಸಂದರ್ಭದಲ್ಲಿ ನೆನೆದುಕೊಳ್ಳುತ್ತಾ, ಈ ಶ್ರದ್ಧಾಂಜಲಿ ಬರಹವನ್ನು ಮುಗಿಸುತ್ತಿದ್ದೇನೆ.

Thursday, September 10, 2009

ಹರಿದ ಚಪ್ಪಲಿ, ಮುರಿದ ಬಕೀಟುಗಳ ನಡುವೆ...


ನಾನು ಬರೆದ ಒಂದಿಷ್ಟು ಚಿಲ್ಲರೆ ಕತೆ, ಕವಿತೆಗಳನ್ನೆಲ್ಲ ಕಾಲ ತನ್ನ ತಕ್ಕಡಿಯಲ್ಲಿಟ್ಟು ತೂಗಿ ‘ತಕೋ...ಇದರ ಬೆಲೆ ಇಷ್ಟು’ ಎಂದು ಎತ್ತಿ ಮೂಲೆಗೆಸೆದಿವೆ. ಹರಿದ ಚಪ್ಪಲಿ, ಮುರಿದ ಬಕೀಟು, ನಜ್ಜುಗುಜ್ಜಾದ ಡಬ್ಬಗಳಿಂದಾವೃತವಾದ ಗುಜರಿ ಅಂಗಡಿಯ ರಾಶಿಗಳಲ್ಲಿ ಬೆಲೆಬಾಳುವಂತದ್ದೇನಾದರೂ ಇರಬಹುದೋ ಎಂದು ತಡಕಾಡುವ ಗುಜರಿ ಆಯುವ ಹುಡುಗನ ಆಸೆ ಮಾತ್ರ ಇನ್ನೂ ಹಾಗೇ ಇದೆ(ನಂಬಿಕೆ). ಗುಜರಿ ಅಂಗಡಿಯ ಮಧ್ಯದಲ್ಲಿ ರಾಜಮಾನವಾಗಿರುವ ತಕ್ಕಡಿಯ ಮುಳ್ಳುಗಳು ನನ್ನಾಳದಲ್ಲಿ ಎಲ್ಲೋ ಆಗಾಗ ಕದಲುತ್ತವೆ. ಏನೋ ಬರೆಯಬೇಕು ಅನ್ನಿಸುತ್ತದೆ. ಬರೆಯಬೇಕು ಬರೆಯಬೇಕು...ಹೀಗೆ ಭಾವಿಸುತ್ತಲೇ ಬದುಕುತ್ತಾ ಬಂದಿದ್ದೇನೆ...
ಶಬ್ದಗಳನ್ನು ರಕ್ತದಂತೆ ಕಕ್ಕಬೇಕು. ಎದೆಯ ಭಾರವನ್ನು ಹಗುರ ಮಾಡಬೇಕು. ಆದರೆ, ಪ್ರತಿ ಕವಿತೆಗಳನ್ನು ಬರೆದು ಮುಗಿಸಿದಾಗಲೂ, ನಾನು ಬರೆಯಲು ಹೊರಟದ್ದು ಇದಾಗಿರಲಿಲ್ಲ ಎಂಬ ಗಾಢ ನಿರಾಶೆ. ಗರ್ಭಪಾತವಾದ ಹೆಣ್ಣಿನ ಹತಾಶೆ...ಖಿನ್ನತೆ! ಬರಹ ಸುಖ ಕೊಡುತ್ತದೆ ಎಂದು ಹೇಳಿದ ಆ ಪುಣ್ಯಾತ್ಮ ಯಾರೋ!? ಎಲ್ಲವನ್ನೂ ಬಿಟ್ಟು ಹೀಗೇ...ಪತ್ರಿಕೆ, ರಾಜಕೀಯ ಸಮಾಜ, ದೇಶ ಎಂಬಿತ್ಯಾದಿ ಹೊರಗಿನ ಗದ್ದಲಗಳಲ್ಲಿ ಕಳೆದುಹೋಗುವುದೇ ಕೆಲವೊಮ್ಮೆ ಹೆಚ್ಚು ನೆಮ್ಮದಿ ಖುಷಿ ಕೊಡುತ್ತದೆ. ನನ್ನೊಳಗಿನ ಧ್ವನಿಯೇ ಕೇಳದಷ್ಟು ದೂರ ನಡೆದೇ ಬಿಡಬೇಕು ಎನ್ನುವ ಬಯಕೆ. ಆದರೂ ಎಲ್ಲೋ ಆಳದಲ್ಲಿ ಬಾಯಾರಿದ ಮಗುವೊಂದು ಅತ್ತೂ ಅತ್ತೂ ಸುಸ್ತಾಗಿ ಏದುಸಿರು ಬಿಡುತ್ತಿರುವಂತೆ ಅನ್ನಿಸುತ್ತದೆ...ಒಮ್ಮೊಮ್ಮೆ ತಟ್ಟನೆ ತಲ್ಲಣಿಸಿ ನಿಂತು ಬಿಡುತ್ತೇನೆ.

ಈ ಬ್ಲಾಗ್ ಎನ್ನುವುದು, ಶಬ್ದಗಳ ಸಂತೆಯಿಂದ ಒಂದಿಷ್ಟು ದೂರದಲ್ಲಿ ನಾನು ತೆರೆದ ಗುಜರಿ ಅಂಗಡಿ. ಸಂತೆಗಳೆಲ್ಲ ಮುಗಿದ ಬಳಿಕ ದೊಡ್ಡದೊಂದು ಗೋಣಿ ಚೀಲದೊಂದಿಗೆ ಸಂತೆಯ ಮೈದಾನದಲ್ಲಿ ಅಳಿದುಳಿದ ಏನೇನನ್ನೋ ಹುಡುಕುವ, ಆಯ್ದು ಚೀಲದೊಳಗೆ ತುಂಬಿಸುವ ಹುಡುಗನಂತೆ ನನ್ನ ಮಾತುಗಳನ್ನು ತುಂಬಿಸಿ ಈ ಗುಜರಿ ಅಂಗಡಿಯಲ್ಲಿ ವ್ಯಾಪಾರಕ್ಕಿಡಲು ಹೊರಟಿದ್ದೇನೆ. ನನ್ನ ಕತೆ, ಕವಿತೆ ಮತ್ತು ತೀರಾ ಒಳಗಿನ ಮಾತುಗಳನ್ನು ಈ ಬ್ಲಾಗ್ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ.

ಒಂದು ರೀತಿಯಲ್ಲಿ ಹೇಳದೆ ಕೇಳದೆ ಮನೆ ಬಿಟ್ಟು ಹೋದ ಬೇಜವಾಬ್ದಾರಿ ಮಗ ನಾನು. ಮತ್ತೆ ಕವಿತೆಯ ಬಾಗಿಲು ತಟ್ಟುತ್ತಿದ್ದೇನೆ.
ತುಂಬಾ ದಿನಗಳ ಹಿಂದೆ ನನ್ನ ಗೆಳೆಯನೊಬ್ಬ ಕೇಳಿದ್ದ “ನೀನು ಪಕ್ಕಾ ಬ್ಯಾರಿ ಅಂದರೆ ಬ್ಯಾರಿ ಮಾರಾಯ. ಒಂದೇ ಒಂದು ಬಾಳೇ ಗೊನೆಯನ್ನು ಹಿಡಿದುಕೊಂಡು ಅದೆಷ್ಟು ಸಂತೆಗಳಲ್ಲಿ ವ್ಯಾಪಾರ ಮಾಡಿದ್ದೀಯ?”

ಆ ಮಾತಿನಲ್ಲಿ ಸತ್ಯ ಇದೆ ಅನ್ನಿಸುತ್ತದೆ. ‘ಬಾಳೆ ಗಿಡ ಗೊನೆ ಹಾಕಿತು” ನನ್ನ ಒಂದೇ ಒಂದು ಕತಾ ಸಂಕಲನ.(ಲೋಹಿಯಾ ಪ್ರಕಾಶನ ಇದನ್ನು ಹೊರತಂದಿದೆ. ಮೈಸೂರಿನ ಚದುರಂಗ ಪ್ರತಿಷ್ಠಾನದವರು ಇದಕ್ಕೊಂದು ಪ್ರಶಸ್ತಿಯನ್ನು ನೀಡಿದ್ದಾರೆ. ಜೊತೆಗೆ ಹತ್ತು ಸಾವಿರ ರೂಪಾಯಿಯನ್ನೂ ಕೂಡ) ಆದರೂ ನನ್ನ ಕೆಲವು ಗೆಳೆಯರು ಆಗಾಗ ‘ಹೊಸ ತಲೆಮಾರಿನ ಕತೆಗಾರ’ ಎಂದೆಲ್ಲ ಕೊಂಡಾಟ ಮಾಡುವುದಿದೆ. ಬಹುಶಃ ಅದು ಈ ಗೆಳೆಯನ ಹೊಟ್ಟೆಕಿಚ್ಚಿಗೆ ಕಾರಣವಿರಬೇಕು. ನಾನು ಕೆಲ ಸಮಯ ಮುಂಬಯಿಯಲ್ಲಿದ್ದೆ. ಸುಮಾರು ಐದು ವರ್ಷ. ಮುಂಬೈಯ ಧಾರಾವಿಯಲ್ಲಿ. ಆಗ ಒಂದಿಪ್ಪತ್ತೈದು ಕವಿತೆಗಳನ್ನು ಒಟ್ಟು ಸೇರಿಸಿ ಪುಸ್ತಕ ಮಾಡಿದ್ದೆ. “ಪ್ರವಾದಿಯ ಕನಸು” ಎಂದು ಹೆಸರು ಕೊಟ್ಟಿದ್ದೆ. ಆಗ ಅದಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ಸಿಕ್ಕಿದಾಗ ನನಗಾದ ಖುಷಿ, ಸಂಭ್ರಮಗಳ ಬಗ್ಗೆಯೇ ಯೋಚಿಸುತ್ತೇನೆ. ಈಗ ಯಾಕೆ ಅದೇ ತರಹ ಖುಷಿ ಸಂಭ್ರಮಗಳಿಲ್ಲ. ಒಂದು ಕವಿತೆ ಪತ್ರಿಕೆಯಲ್ಲಿ ಪ್ರಕಟವಾದರೆ ಆಗೆಲ್ಲ ಅದೆಷ್ಟು ರೋಮಾಂಚನ...ಸಡಗರ..ಈಗ ಮಾತ್ರ...ಊಹೂಂ...

ಇದೀಗ...ಕೈಯಲ್ಲಿ ಒಂದಿಷ್ಟು ಚಿಲ್ಲರೆ ಕತೆಗಳು, ಕವಿತೆಗಳನ್ನು ಇಟ್ಟುಕೊಂಡು ಗುಜರಿ ಅಂಗಡಿಯ ಮುಂದೆ ನಿಂತಿದ್ದೇನೆ. ತಕ್ಕಡಿಯೋ ಅದನ್ನು ನಿಕೃಷ್ಟ ಕಣ್ಣಲ್ಲಿ ನೋಡಿ ತಲೆಯಾಡಿಸುತ್ತಿದೆ....ನನ್ನ ಬ್ಲಾಗಿನ ಕುರಿತಂತೆ ಇಷ್ಟು ಸಾಕು ಅನ್ನಿಸುತ್ತದೆ.
ದಿನ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಪತ್ರಿಕೆಯಲ್ಲಿ ಸಂಪಾದಕೀಯ, ಸಿನಿಮಾ, ವ್ಯಂಗ್ಯ, ಲೇಖನ, ವಿಮರ್ಶೆ, ವರದಿ, ಸುದ್ದಿ ಎಂದು ಪ್ರತಿ ವಾರ ಬರೆಯುತ್ತಲೇ ಇರುತ್ತೇನೆ. ಅದಾವುದರ ಭಾರವನ್ನೂ ಇಲ್ಲಿ ನಿಮ್ಮ ಬೆನ್ನ ಮೇಲೆ ಹೊರಿಸಲಾರೆ ಎಂಬ ಭರವಸೆಯನ್ನು ನೀಡುತ್ತೇನೆ.

Monday, September 7, 2009


ಗುಜರಿ ಆಯುವ ಹುಡುಗ!

ಕಾಯಿ ವ್ಯಾಪಾರಕ್ಕೆ ಸಂತೆಗೆ ಬಂದ
ಬ್ಯಾರಿಯಂತೆ ಅಪ್ಪ
ಹುಟ್ಟಿದ

ಗಿಡದಲ್ಲಿ ತೂಗುವ ಮಾವು
ಗೇರು, ಆಗಷ್ಟೇ ಕಣ್ಣು ಬಿಟ್ಟ ಗೊನೆ
ಹೂವು ಎಲ್ಲವನ್ನು
ಸರಕಿನಂತೆ ನೋಡಿದ

ವ್ಯಾಪಾರವೆನ್ನುವುದು ಅವನಿಗೆ
ಜೂಜಿನಂತೆ ಅಂಟಿತು
ಬದುಕನ್ನೇ ಒತ್ತೆ ಇಟ್ಟು
ಆಡಿದ

ಹಸಿವನ್ನು ಹೂಡಿ
ದಿನಸಿ ಅಂಗಡಿ ತೆರೆದ
ಗೆದ್ದ
ಗೆಲುವನ್ನು ಜವಳಿ ಅಂಗಡಿಗೆ
ಮಾರಿ ಸೋತ...
ಸಾಲಕ್ಕೆ ಹಳೆಯ
ಹೆಂಚನ್ನೇ ಮಾರಿದ
ಸೂರುವ ಸೂರನ್ನು
ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ಗಂಜಿಗೆ ನೆಂಜಿಕೊಳ್ಳುವುದಕ್ಕೆಂದು
ತಂದ ಸಿಗಡಿಯ ರುಚಿ ಹಿಡಿದು
ಕಡಲ ತಡಿಗೆ ಹೋದ
ಮೀನಿನ ವ್ಯಾಪಾರಕ್ಕಿಳಿದ

ದುಂದುಗಾರ ಅಪ್ಪ
ಸವಕಲು ಮಾತುಗಳನ್ನೇ
ನಾಣ್ಯಗಳಂತೆ ಚಲಾವಣೆಗೆ ಬಿಟ್ಟ
ಅಮ್ಮನ ಮೌನದ ತಿಜೋರಿಯನ್ನೇ
ದೋಚಿದ

ಜೂಜಿನ ನಿಯಮವ ಮರೆತು
ನಂಬಬಾರದವರನ್ನೆಲ್ಲ ನಂಬಿದ
ಸೋಲಿನ ರುಚಿಯನ್ನು ಹಿಡಿದ
ಸೋಲಿಗಾಗಿಯೇ ಆಡ ತೊಡಗಿದ...

ಕೊನೆಗೆ ಎಲ್ಲ ಬಿಟ್ಟು
ಗುಜರಿ ಅಂಗಡಿ ಇಟ್ಟ
ಹರಿದ ಚಪ್ಪಲಿ, ತುಕ್ಕು ಹಿಡಿದ ಡಬ್ಬ
ಮುರಿದ ಬಕೀಟುಗಳ ರಾಶಿಯ
ನಡುವೆ ಆ
ರಾಮ ಕುರ್ಚಿಗೆ ಒರಗಿದ
ಅವನ ಮೌನದ ತಿಜೋರಿ ತುಂಬಾ
ಸಾಲ ಪತ್ರಗಳು
ಅಂಗಡಿಯ ಬಾಗಿಲಲ್ಲಿ
ಕಾಲ
ವಸೂಲಿಗೆಂದು ಕುಕ್ಕರಗಾಲಿನಲ್ಲಿ ಕೂತಿದ್ದಾನೆ

ನಾನು ಅವನ ಮಗ
ಅವನ ಮೌನದ ಮನೆಯ
ಹಿತ್ತಲಲ್ಲಿ ನಿಂತ
ಗುಜರಿ ಆಯುವ ಹುಡುಗ

*