Sunday, September 8, 2013

‘ಸತ್ಯಾಗ್ರಹ’ವೊಂದರ ಸೋಲು-ಗೆಲುವು

 ರಾಜ್‌ನೀತಿ, ಆರಕ್ಷಣ್, ಚಕ್ರವ್ಯೆಹ್ ಮೊದಲಾದ ಚಿತ್ರಗಳನ್ನು ನೋಡಿದವರಿಗೆ ಪ್ರಕಾಶ್ ಝಾ ಅವರ ‘ಸತ್ಯಾಗ್ರಹ’ ಚಿತ್ರದ ಕುರಿತು ಊಹಿಸುವುದು ಕಷ್ಟವಾಗದು. ಮೀಸಲಾತಿ, ನಕ್ಸಲೀಯ ಸಮಸ್ಯೆ ಮೊದಲಾದವುಗಳನ್ನು ತನ್ನ ಕಮರ್ಶಿಯಲ್ ಪಾಕಕ್ಕೆ ಒಗ್ಗುವಂತೆ ಅತ್ಯಾಕರ್ಷಕವಾಗಿ ಕಟ್ಟಿಕೊಡುವ ಝಾ ಅವರ ಚಿತ್ರಗಳ ಮೂಲಕ ಸಾಮಾಜಿಕ ಚಳವಳಿಗಳ ಕುರಿತಂತೆ ಚರ್ಚೆಯನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಚಳವಳಿ, ಹೋರಾಟ ಇಂದು ಯುವಕರೊಳಗೆ ತಮ್ಮಾಳಗಿನಿಂದ ಹುಟ್ಟಿಕೊಳ್ಳದೆ ಫೇಸ್‌ಬುಕ್, ಟ್ವಿಟ್ಟರ್‌ಗಳ ಆಕರ್ಷಣೆಗಳಿಗೆ ಸೀಮಿತವಾಗುತ್ತಿದೆ. ‘ಚೆ’ ಮುಖವುಳ್ಳ ಟೀ ಶರ್ಟ್‌ನಂತೆ ಅದೊಂದು ಫ್ಯಾಶನ್‌ನ ಭಾಗವಾಗಿದೆ. ಕ್ಯಾಂಡಲ್‌ಗಳನ್ನು ಹಚ್ಚಿ ಮೆರವಣಿಗೆಯಲ್ಲಿ ಸಾಗುತ್ತಾ, ಮೊಂಬತ್ತಿ ಕರಗುವ ಮೊದಲೇ ಹೋರಾಟದ ಉತ್ಸಾಹವನ್ನು ಕಳೆದುಕೊಳ್ಳುವ ಯುವ ಪೀಳಿಗೆಯಿಂದ ಹುಟ್ಟಿದ ಸತ್ಯಾಗ್ರಹವನ್ನು, ಆಕರ್ಷಕವಾಗಿ ತಮ್ಮ ಚಿತ್ರದಲ್ಲಿ ಝಾ ಕಟ್ಟಿಕೊಟ್ಟಿದ್ದಾರೆ. ಝಾ ಚಿತ್ರವೆಂದರೆ ವಿರೋಧಾಭಾಸಗಳ ಸಂಗಮ. ಸತ್ಯಾಗ್ರಹ ಚಿತ್ರದಲ್ಲೂ ಅದರ ದರ್ಶನವಾಗುತ್ತದೆ. ಆದರೂ ಎಲ್ಲ ತರ್ಕಗಳನ್ನು ಬದಿಗಿಟ್ಟು ನೋಡಿದರೆ, ಒಂದು ಸಿನಿಮಾವಾಗಿ ಕೆಲವು ಕಾರಣಗಳಿಗೆ ‘ಸತ್ಯಾಗ್ರಹ’ ಇಷ್ಟವಾಗಬಹುದು. ಸದ್ಯದ ಸಂದರ್ಭದ ಜ್ವಲಂತ ಸಮಸ್ಯೆಯಾಗಿರುವ ಭ್ರಷ್ಟಾಚಾರವನ್ನು ವಸ್ತುವಾಗಿಟ್ಟುಕೊಂಡು ಚಿತ್ರ ಮಾಡಿದ ಕಾರಣಕ್ಕಾಗಿ ಅವರು ಅಭಿನಂದನಾರ್ಹರಾಗುತ್ತಾರೆ.ಸತ್ಯಾಗ್ರಹವನ್ನು ಕೇವಲ ಒಂದೇ ಕಣ್ಣಿನಿಂದ ನೋಡದೆ, ಅದರ ದುರಂತವನ್ನೂ ಕಟ್ಟಿ ಕೊಡಲು ಝಾ ಇಲ್ಲಿ ಪ್ರಯತ್ನಿಸಿದ್ದಾರೆ.

   ದ್ವಾರಕಾ ಆನಂದ್(ಅಮಿತಾಭ್ ಬಚ್ಚನ್) ಎನ್ನುವ ಗಾಂಧೀವಾದಿ ನಿವೃತ್ತ ಪ್ರಾಂಶುಪಾಲರು ಭ್ರಷ್ಟತೆಯನ್ನು ಪ್ರಶ್ನಿಸಿದ ಕಾರಣಕ್ಕೆ ಬಂಧನಕ್ಕೊಳಗಾಗುತ್ತಾರೆ. ಆ ಘಟನೆ ಒಂದು ಸತ್ಯಾಗ್ರಹಕ್ಕೆ ವೇದಿಕೆಯನ್ನು ನಿರ್ಮಿಸಿಕೊಡುತ್ತದೆ. ದ್ವಾರಕಾ ಆನಂದ್‌ರ ಪುತ್ರನ ಗೆಳೆಯ ಉದ್ಯಮಿ ಮಾನವ್(ಅಜಯ್ ದೇವಗನ್) ಪ್ರವೇಶದಿಂದ ಚಿತ್ರ ತಿರುವನ್ನು ಪಡೆದುಕೊಳ್ಳುತ್ತದೆ. ದ್ವಾರಕಾ ಆನಂದ್ ಅವರನ್ನು ಬಿಡಿಸಿಕೊಳ್ಳುವ ಮಾನವ್ ಪ್ರಯತ್ನ ನಿಧಾನಕ್ಕೆ ಭ್ರಷ್ಟಾಚಾರದ ವಿರುದ್ಧದ ಸತ್ಯಾಗ್ರಹವಾಗಿ ರೂಪಪಡೆಯುತ್ತದೆ. ಇದೇ ಸಂದರ್ಭದಲ್ಲಿ ಗೆಳೆಯನ ಸಾವಿನ ಜೊತೆಗೆ ರಾಜಕಾರಣ ಸುತ್ತಿಕೊಂಡಿರುವುದು ಅವನ ಗಮನಕ್ಕೆ ಬರುತ್ತದೆ. ಅಂತಿಮವಾಗಿ ಈ ಸತ್ಯಾಗ್ರಹಕ್ಕಾಗಿ ತನ್ನೆಲ್ಲ ಉದ್ಯಮಗಳಿಗೆ ರಾಜೀನಾಮೆ ನೀಡಿ ಅಪ್ಪಟ ಮಾನವನಾಗುತ್ತಾನೆ. ಮಾನವ್ ಜೊತೆಗೆ ದ್ವಾರಕಾ ಆನಂದ್‌ರ ಮಾಜಿ ಶಿಷ್ಯ, ಸ್ಥಳೀಯ ಗೂಂಡಾ ಅರ್ಜುನ್(ಅರ್ಜುನ್ ರಾಮ್‌ಪಾಲ್), ಟಿ.ವಿ. ಪತ್ರಕರ್ತೆ ಯಾಸ್ಮಿನ್ (ಕರೀನಾ ಕಪೂರ್) ಮೊದಲಾದವರು ಸೇರಿಕೊಳ್ಳುತ್ತಾರೆ. ಅಂತಿಮವಾಗಿ ಅಮಿತಾಭ್ ಬಚ್ಚನ್ ಬಿಡುಗಡೆಯಾಗುತ್ತಾರಾದರೂ, ಹೋರಾಟ ಇನ್ನಷ್ಟು ತೀವ್ರತೆಯನ್ನು ಪಡೆಯುತ್ತದೆ. ದ್ವಾರಕಾ ಆನಂದ್ ಅವರ ಆಮರಣ ಉಪವಾಸ ಸತ್ಯಾಗ್ರಹ ರಾಜಕಾರಣಿ ಬಲರಾಂ ಸಿಂಗ್(ಮನೋಜ್ ಭಾಜ್‌ಪೈ) ಜೊತೆಗಿನ ಸಂಘರ್ಷಕ್ಕೆ ಕಾರಣವಾಗುತ್ತದೆ.
   ಚಿತ್ರದ ಕತೆಯನ್ನು ಹೆಣೆಯುವ ಸಂದರ್ಭದಲ್ಲಿ ಝಾ ಅವರ ಪಕ್ವತೆ ಕೆಲಸ ಮಾಡಿದೆ. ಗುರಿಯನ್ನು ಸಾಧಿಸುವ ಆತುರದಲ್ಲಿ ತಪ್ಪು ಹೆಜ್ಜೆಗಳನ್ನು ಇಟ್ಟರೆ ಹೇಗೆ ಸತ್ಯಾಗ್ರಹ ದುರಂತಕ್ಕೆ ಕಾರಣವಾಗಬಹುದು ಎನ್ನುವುದನ್ನು ಚಿತ್ರದ ಕೊನೆಯಲ್ಲಿ ತೋರಿಸುತ್ತಾರೆ. ಸರಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಸತ್ಯಾಗ್ರಹದ ನಡೆಯಲ್ಲಿ ತಪ್ಪು ನಿರ್ಧಾರಗಳನ್ನು ಮಾನವ್ ತೆಗೆದುಕೊಳ್ಳುತ್ತಾನೆ. ಇದು ದಂಗೆ, ಪೊಲೀಸರ ಹತ್ಯೆಗೆ ಕಾರಣವಾಗುತ್ತದೆ. ಅಂತಿಮವಾಗಿ ಮಿಲಿಟರಿ ಪ್ರವೇಶಕ್ಕೆ ಅವಕಾಶ ನೀಡುತ್ತದೆ. ಅಹಿಂಸಾ ಸತ್ಯಾಗ್ರಹ ಹಿಂಸೆಗೆ ತಿರುಗುತ್ತದೆ. ಒಟ್ಟಿನಲ್ಲಿ ದ್ವಾರಕಾ ಅವರ ಕೊಲೆಯಲ್ಲಿ ಸತ್ಯಾಗ್ರಹ ಕೊನೆಯಾಗುತ್ತದೆ.


 ತನ್ನ ಚಿತ್ರದಲ್ಲಿ ಈ ವಾಸ್ತವದೆಡೆಗೆ ಝಾ ಕಣ್ಣು ಹರಿಸಿದ್ದು ಶ್ಲಾಘನೀಯ. ತಮ್ಮ ಚಿತ್ರದೊಳಗಿನ ಸತ್ಯಾಗ್ರಹದಲ್ಲಿ ಕೋಮುವಾದಿ ಪಕ್ಷವನ್ನು ಝಾ ದೂರ ಇಟ್ಟಿರುವುದು ಝಾ ಅವರ ಇನ್ನೊಂದು ಹೆಗ್ಗಳಿಕೆ. ಅವರ ಎಲ್ಲ ಚಿತ್ರಗಳಲ್ಲಿರುವ ಮೆಲೋಡ್ರಾಮಗಳೂ ಇಲ್ಲೂ ಕೆಲಸ ಮಾಡಿವೆ. ಐಟಂ ಸಾಂಗ್‌ಗಳ ಮೂಲಕ ತನ್ನ ಸತ್ಯಾಗ್ರಹವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ. ಅಜಯ್ ದೇವಗನ್-ಕರೀನಾ ಕಪೂರ್ ನಡುವೆ ಹಸಿ ಬಿಸಿ ಡ್ಯೂಯಟ್ ಕೂಡ ಇದೆ. ದ್ವಾರಕಾ ಆನಂದ್ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಭಿನಯ ಚಿತ್ರದ ಹೆಗ್ಗಳಿಕೆ. ಅಜಯ್ ದೇವಗನ್ ಕೂಡ ತನ್ನ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಕರೀನಾ ಕಪೂರ್ ಸಿಕ್ಕಿದ ಅವಕಾಶವನ್ನು ಬಳಸಿಕೊಂಡಿದ್ದಾರೆ. ಅರ್ಜುನ್ ರಾಮ್‌ಪಾಲ್ ನಿರ್ವಹಿಸಿದ ಪಾತ್ರಕ್ಕೆ ಪೋಷಣೆಯಿಲ್ಲ. ಅಮೃತಾ ರಾವ್ ಆರಂಭದಲ್ಲಿ ಲವಲವಿಕೆಯಿಂದ ನಟಿಸಿದ್ದಾರಾದರೂ, ವಿರಾಮದ ಬಳಿಕ ಆ ಪಾತ್ರವೇ ಸೊರಗಿ ಬಿಡುತ್ತದೆ. ಸಂಗೀತ ಚಿತ್ರದ ಓಘಕ್ಕೆ ಅರ್ಥಪೂರ್ಣವಾಗಿ ಮಿಡಿಯುತ್ತದೆ. ರಘುಪತಿ ರಾಘವ ರಾಜಾರಾಂ ಪದ್ಯ ಸತ್ಯಾಗ್ರಹದ ಹೆಜ್ಜೆಗಳಿಗೆ ಸಾಥ್ ನೀಡುತ್ತದೆ. ಸಚಿನ್ ಕೃಷ್ಣಾ ಅವರ ಛಾಯಾಗ್ರಹಣ ಪರವಾಗಿಲ್ಲ.

ನಿರ್ದೇಶನ, ನಿರೂಪಣೆ ಇನ್ನಷ್ಟು ಬಿಗಿಯಾಗಬೇಕಾಗಿತ್ತು. ಚಿತ್ರದ ಕ್ಲೈಮಾಕ್ಸ್ ಹೊತ್ತಿಗೆ ನಿರ್ದೇಶಕರಿಂದ ಚಿತ್ರ ಕೈ ಜಾರಿ ಬಿಡುತ್ತದೆ. ಅಂತ್ಯ ಮಾಡಲೇ ಬೇಕೆನ್ನುವ ಉದ್ದೇಶದಿಂದ, ಚಿತ್ರವನ್ನು ಸುಖಾಂತ್ಯಗೊಳಿಸಿದ್ದಾರೆ. ಕಮರ್ಶಿಯಲ್ ಚಿತ್ರಕ್ಕೆ ಅದು ಅಗತ್ಯವೂ ಕೂಡ. ಒಟ್ಟಿನಲ್ಲಿ ಚಿತ್ರವನ್ನು ಒಮ್ಮೆ ನೋಡುವುದಕ್ಕೆ ಅಡ್ಡಿಯಿಲ್ಲ.

No comments:

Post a Comment