Tuesday, February 26, 2013

ಅಮ್ಮ ಹಚ್ಚಿದ ಒಲೆ

ಅಮ್ಮನ ಕೈಯಲ್ಲಿ ನಾಕು
ಪುರುಳೆಗಳಿದ್ದರೆ ಸಾಕು
ಒಲೆಯಲ್ಲಿ ಬೆಂಕಿ ಧಗ್ಗೆನ್ನುತ್ತದೆ....
ಅದ ನೋಡಿ ನಾನು
ಒಲೆಗೆ ಬೆಂಕಿ ಹಚ್ಚೋದು
ಬಲು ಸುಲಭ ಎಂದು ಕೊಂಡಿದ್ದೆ....

ಒಂದಿಷ್ಟು ಒಣ ಕಡ್ಡಿಗಳ

ಸೇರಿಸಿ ಸೀಮೆ ಎಣ್ಣೆ ಸುರಿದರೆ
ಬೆಂಕಿ ಭುಗ್ಗ್ ಎಂದು
ಅಷ್ಟೇ ಬೇಗ ತಣ್ಣಗಾಗುತ್ತಿತ್ತು...
ಆಮೇಲೆ ಮೈ, ಕೈ ಮಸಿ...
ಕಣ್ಣಲ್ಲಿ ನೀರು...ಹೊಗೆ ಧಗೆ
ಒಲೆಗೆ ಬೆಂಕಿ ಹಚ್ಹ್ಚುದೆಂದರೆ

ಅಮ್ಮ ಬಂದು ನನ್ನ ಪಕ್ಕಕ್ಕೆ ಸರಿಸಿ
ಹೊಸದೇ ಬೂದಿ ಕೆದಕಿ..
ಹನಿ ಸೀಮೆ ಎಣ್ಣೆ ಸುರಿದು
ನಾಲ್ಕು ಕಡ್ಡಿಯ ಜೋಡಿಸಿ
ಊದುಗೊಳವೆಯ  ಕೊಳಲಿನಂತೆ
ನುಡಿಸಿ, ಹೊಗೆಯ ಹಾವಿನಂತೆ
ಆಡಿಸಿ ಬೆಂಕಿ ಅರಳಿಸುವ ಪರಿ
ಅಮ್ಮನಿಗಷ್ಟೇ ಸಿದ್ದಿಸಿದ ಸಿದ್ಧಿ

ಅಮ್ಮನಿಲ್ಲದ ಈ  ದಿನ...
ಇದ್ದ ಎಲ್ಲ ಟೊಮೇಟೊ...ತೆಂಗಿನ ತುರಿ..
ಉಪ್ಪು, ಹುಳಿ, ಖಾರ ಸುರಿದರೂ..
ಸಾರಿಗೆ ಅಮ್ಮನ ಪರಿಮಳವಿಲ್ಲ,
ರುಚಿಯಿಲ್ಲ....!

ಅಮ್ಮನಂತೆ ಒಲೆಯ ಬೂದಿಯನ್ನು ಬಗೆಯಲು
ಕಡ್ಡಿಗೆ ಕಡ್ಡಿ ಜೋಡಿಸಿ ಒಲೆಯನ್ನು ಬೆಳಗಲು
ನಮಗೆ ಗೊತ್ತಿರಲಿಲ್ಲ....

ಅಮ್ಮ ಹಚ್ಚಿದ ಒಲೆ
ನನ್ನ ಎದೆಯಲ್ಲಿ ಧಗಿಸುತ್ತಿ
ದೆ
ಕಣ್ಣ ಕೊಡದಲ್ಲಿ ನೀರು
ಕುದಿಯುತ್ತಿ
ದೆ


ಇಲ್ಲಿ ಬಳಸಿಕೊಂಡಿರುವ ಚಿತ್ರ ಅನಾಮಿಕ ಕಲಾವಿದನದ್ದು. ನನ್ನ ಬರಹದ ತೂಕ ಹೆಚ್ಚಿಸಿದ ಆ ಕಲಾವಿದರಿಗೆ ಹೃದಯ ತುಂಬಿದ ಕೃತಜ್ಞತೆಗಳು

1 comment: