Saturday, February 23, 2013

ಕೈ ಪೋ ಚೆ: ಮಾನವೀಯ ಆಕಾಶದಲ್ಲಿ ಹಾರಿ ಬಿಟ್ಟ ಗಾಳಿಪಟ

ಸ್ನೇಹವೆನ್ನುವ ಅಮೃತ ಪದವನ್ನು ಯಾವ ಭೂಕಂಪಕ್ಕೂ ಅಲುಗಾಡಿಸಲಾಗದು. ಯಾವ ರಾಜಕೀಯದಿಂದಲೂ ಅದು ಮಲಿನವಾಗದು. ಎಂತಹ ದುರಂತವನ್ನು ಕೂಡ ಸುಖಾಂತ್ಯಗೊಳಿಸುವ ಶಕ್ತಿ ಅದಕ್ಕಿದೆ. ‘ಕೈ ಪೋ ಚೆ’ ಮೂರು ಯುವಕರ ಬೆಸೆದ ಮನಸ್ಸುಗಳ ಕತೆ. ಭೂಕಂಪಕ್ಕೂ ಜಗ್ಗದ ಮೂರು ಯುವಕರ ಕನಸುಗಳ ಕತೆ. ದಟ್ಟವಾದ ವಿಷಾದ, ಹಾಗೆಯೇ ಅಧಮ್ಯವಾದ ಆಶಾವಾದದೊಂದಿಗೆ ಮುಗಿಯುವ ಈ ಚಿತ್ರ, ಗೋದ್ಱೋತ್ತರ ಗಲಭೆಯ ಬಳಿಕದ ಗುಜರಾತ್‌ನ ಕುರಿತಂತೆ ಹೊಸ ಭರವಸೆಯನ್ನು ಬಿತ್ತುವ ಪ್ರಯತ್ನವನ್ನು ಮಾಡುತ್ತದೆ. 

ಚಿತ್ರ ಗೋವಿಂದ್, ಇಶಾನ್ ಮತ್ತು ಒಮಿ ಎನ್ನುವ ಸಂಪ್ರದಾಯಸ್ಥ ಗುಜರಾಥಿ ಕುಟುಂಬದ ಮೂವರು ಸ್ನೇಹಿತರ ಕತೆ ಅಥವಾ ಮೂವರು ಸೋದರರ ಕತೆ ಎಂದರೂ ನಡೆಯುತ್ತದೆ. ಇವರಲ್ಲಿ ಗೋವಿಂದ್ ಒಂದಿಷ್ಟು ಜವಾಬ್ದಾರಿಯನ್ನು ಹೊಂದಿದ್ದು, ಏನನ್ನಾದರೂ ಮಾಡಬೇಕು ಎನ್ನುವ ತುಡಿತ, ಛಲ ಇರುವ ತರುಣ. ಇಶಾನ್ ತನ್ನ ಬದುಕನ್ನು ಕ್ರಿಕೆಟ್‌ಗೆ ಒಪ್ಪಿಸಿ, ಅದರಲ್ಲೇ ದಿನ ನಿತ್ಯದ ಬದುಕನ್ನು ಕಾಣುವಾತ. ಒಮಿಗೆ ನಿರ್ದಿಷ್ಟ ಇಷ್ಟ ಗುರಿಗಳೇನೂ ಇಲ್ಲ. ಇಬ್ಬರು ಸ್ನೇಹಿತರೇ ಆತನ ಗುರಿ. ಜೊತೆಗೆ ರಾಜಕೀಯಕ್ಕಿಳಿಯಲು ಆತನ ಮಾವ ಒತ್ತಾಯಿಸುತ್ತಿದ್ದರೆ, ಈ ಗೆಳೆಯರ ಮೂಲಕ ಅದರಿಂದ ಪಾರಾಗುವ ದಾರಿಯನ್ನು ಹುಡುಕುವಾತ. ಆದರೆ ಕೊನೆಯಲ್ಲಿ ಈ ಗೆಳೆಯರ ಕನಸುಗಳಿಗಾಗಿ ಆತ ತನ್ನನ್ನು ತಾನು ರಾಜಕೀಯಕ್ಕೆ ಬಲಿ ಒಪ್ಪಿಸಬೇಕಾಗುತ್ತದೆ. ಗೋವಿಂದ್ ಸ್ಪೋರ್ಟ್ಸ್‌ಗೆ ಸಂಬಂಧಪಟ್ಟ ಅಂಗಡಿಯನ್ನು ಇಡಲು ಮುಂದಾಗುತ್ತಾನೆ. ಇಶಾನ್ ಆ ಕನಸುಗಳಿಗೆ ರೆಕ್ಕೆಯಾಗುತ್ತಾನೆ. ಹಣ ಹೊಂದಿಸುವ ಕೆಲಸವನ್ನು ಒಮಿ ಮಾಡುತ್ತಾನೆ. ಮುಂದೆ ಈ ಹಣದ ಋಣಕ್ಕಾಗಿಯೇ ಆತ ಮಾವನ ಜೊತೆಗೆ ರಾಜಕೀಯ ಕೆಲಸಕ್ಕೆ ಇಳಿಯಬೇಕಾಗುತ್ತದೆ. ಹೀಗೆ ಇವರ ಸ್ಪೋರ್ಟ್ಸ್ ಉದ್ಯಮಕ್ಕೆ ರೆಕ್ಕೆ ಪುಕ್ಕ ಬೆಳೆಯುತ್ತಿರುವ ಸಂದರ್ಭದಲ್ಲೇ ಅವರ ಬದುಕಲ್ಲಿ ಒಬ್ಬ ಮುಸ್ಲಿಮ್ ಬಾಲಕ ಪ್ರವೇಶ ಮಾಡುತ್ತಾನೆ. ಈತನ ಪ್ರವೇಶವೇ ಇಡೀ ಚಿತ್ರದ ಗತಿಯನ್ನು ಬದಲಿಸುತ್ತದೆ. ಈ ಬಾಲಕನ ಹೆಸರು ಅಲಿ. ಉಂಡಾಡಿ ಹುಡುಗ. ಈತ ಹುಟ್ಟು ಕ್ರಿಕೆಟ್ ಆಟಗಾರ. ಅದು ಅವನ ರಕ್ತದಲ್ಲೇ ಬಂದಿರುವುದು. ಒಂದು ಸಂದರ್ಭದಲ್ಲಿ ಇಶಾನ್‌ನ ಕಣ್ಣಿಗೆ ಈತ ಬೀಳುತ್ತಾನೆ. ಇಶಾನ್‌ನ ಎಲ್ಲ ಬೌಲಿಗೂ ಈತ ಸಿಕ್ಸರ್ ಬಾರಿಸುತ್ತಾನೆ. ಇಶಾನ್ ಈ ಹುಡುಗನ ಕುರಿತಂತೆ ಕುತೂಹಲ ತಾಳುತ್ತಾನೆ. ಅಲಿಯನ್ನು ಇನ್ನಷ್ಟು ತರಬೇತಿಗೊಳಿಸುವ ಜವಾಬ್ದಾರಿಯನ್ನು ಇಶಾನ್ ವಹಿಸಿಕೊಳ್ಳುತ್ತಾನೆ. ಆತನಿಗೆ ಕ್ರಿಕೆಟ್ ಕಲಿಸುವ ಇಶಾನ್‌ನ ಉತ್ಸಾಹ, ಮುಂದೆ ಹಲವು ಸಂಘರ್ಷಗಳಿಗೆ ಕಾರಣವಾಗುತ್ತದೆ. ಸಮಾಜದೊಳಗಿನ ರಾಜಕೀಯ, ಧರ್ಮ, ಭೇದ ಭಾವಗಳು ಒಮ್ಮಿಂದೊಮ್ಮೆಗೆ ಅವನಿಗೆ ಮುಖಾಮುಖಿಯಾ ಲಾರಂಭಿಸುತ್ತವೆ. ಭೂಕಂಪದಲ್ಲಿ ಅಲುಗಾಡದ ಮೂವರ ಸ್ನೇಹ ಗೋದ್ರ ಗಲಭೆಯಲ್ಲಿ ತತ್ತರಿಸುತ್ತದೆ. ಒಮಿಯ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹಿಂದು ಮುಸ್ಲಿಮ್ ದಂಗೆಯಾಗುವಾಗ ಅಲಿಯ ರಕ್ಷಣೆಗೆ ಇಶಾನ್ ಮುಂದಾಗುತ್ತಾನೆ. ಅದುವೇ ಕಟ್ಟಕಡೆಗೆ ಸಿನೆಮಾದ ಕ್ಲೈಮಾಕ್ಸ್‌ಗೆ ತಿರುವನ್ನು ನೀಡುತ್ತದೆ.

ಅಭಿಷೇಕ್ ಕಪೂರ್ ಎನ್ನುವ ಹೃದಯವಂತಿಕೆಯ ನಿರ್ದೇಶಕನಿಂದ ಮಾತ್ರ ಇಂತಹದೊಂದು ಚಿತ್ರ ಸಾಧ್ಯವೇನೋ ಎಂಬಷ್ಟು ಹೃದಯಕ್ಕೆ ಮುಟ್ಟುತ್ತದೆ ‘ಕೈ ಪೋ ಚೆ’. ಚೇತನ್ ಭಗತ್ ಅವರ ‘3 ಮಿಸ್ಟೇಕ್ಸ್ ಆಫ್ ಮೈ ಲೈಫ್’ ಕಾದಂಬರಿಯನ್ನು ಆಧರಿಸಿ ತೆಗೆದ ಚಿತ್ರವಾದರೂ, ಕಾದಂಬರಿಗಿಂತಲೂ ಭಿನ್ನವಾಗಿ, ಸಿನೆಮಾವಾಗಿಯೇ ನಮ್ಮನ್ನು ತಲುಪುತ್ತದೆ. ಚಿತ್ರದ ನಿರೂಪಣೆ ಮತ್ತು ಕ್ಲೈಮಾಕ್ಸ್ ಮನ ಮುಟ್ಟುವಂತಿದೆ. ಗೋವಿಂದ್ ಮತ್ತು ವಿದ್ಯಾ ನಡುವಿನ ಪ್ರೇಮಪ್ರಕರಣವನ್ನು ನವಿರಾಗಿ, ಎಲ್ಲೂ ಅತಿಯಾಗದಂತೆ ಕಟ್ಟಿಕೊಡುತ್ತಾರೆ ನಿರ್ದೇಶಕರು. ವಿದ್ಯಾ ಪಾತ್ರದಲ್ಲಿ ಅಮೃತಾ ಚುರುಕಾಗಿ ಕಾಣಿಸಿಕೊಳುತ್ತಾರೆ. ಸಣ್ಣ ಪಾತ್ರವಾದರೂ ತಂಗಿಯಾಗಿ, ಪ್ರೇಮಿಯಾಗಿ ಎರಡರಲ್ಲೂ ಅಮೃತಾ ಪುರಿ ಸೈ ಅನ್ನಿಸಿಕೊಳ್ಳುತ್ತಾರೆ.

 ಮೂವರು ಸ್ನೇಹಿತರ ಪಾತ್ರಕ್ಕೆ ರಾಜ್‌ಕುಮಾರ್, ಸುಶಾಂತ್ ಸಿಂಗ್ ರಾಥೋಡ್ ಮತ್ತು ಅಮಿತ್ ಸೇದ್ ಜೀವ ತುಂಬಿದ್ದಾರೆ. ಯಾವುದೇ ಹೀರೋಗಳಿಲ್ಲದ ಈ ಚಿತ್ರದಲ್ಲಿ ಪಾತ್ರಗಳಿಗೆ ಈ ಮೂವರು ತಮ್ಮನ್ನು ಒಪ್ಪಿಸಿಕೊಂಡ ಪರಿಯೇ ಚಿತ್ರದ ಯಶಸ್ವಿಗೆ ಬಹುದೊಡ್ಡ ಕೊಡುಗೆ. ರಾಥೋಡ್ ಟಿವಿ ನಟನಾದರೂ ಅನುಭವಿ ನಟನಾಗಿ ಮನಗೆಲ್ಲುತ್ತಾರೆ. ಅಮಿತ್ ತ್ರಿವೇದಿಯವರ ಸಂಗೀತ ನಮ್ಮ ಆತ್ಮವನ್ನು ಮುಟ್ಟುತ್ತದೆ. ಚಿತ್ರದ ಹರಿಯುವಿಕೆಯಲ್ಲಿ ಸಂಗೀತದ ಪಾತ್ರ ದೊಡ್ಡದು. ಮನುಷ್ಯ ಸಂಬಂಧ, ಕಣ್ಣೀರು, ನಗು ಎಲ್ಲವನ್ನು ಜೊತೆ ಜೊತೆಯಾಗಿ ಕಟ್ಟಿಕೊಡುವ ಕೈ ಪೋ ಚೆ ಅಭಿಷೇಕ್ ಕಪೂರ್ ಮಾನವೀಯ ಆಕಾಶದಲ್ಲಿ ಹಾರಿ ಬಿಟ್ಟ ಗಾಳಿ ಪಟ. ಹೃದಯವಂತರ ಕನಸುಗಳನ್ನು, ಖುಷಿ, ಸಂತೋಷಗಳನ್ನು ತನ್ನ ಬಣ್ಣಗಳಲ್ಲಿ, ರೆಕ್ಕೆಗಳಲ್ಲಿ ಕಟ್ಟಿಕೊಂಡ ಈ ಗಾಳಿಪಟವನ್ನು ಹಾರಿಸಿರುವ ಕಪೂರ್ ಉಳಿದ ನಿರ್ದೇಶಕರೆಡೆಗೆ ಯಶಸ್ಸಿನ ನಗು ನಕ್ಕು ‘ಕೈ ಪೋ ಚೆ’ ಎಂದು ಸಂತೋಷದಿಂದ ಚೀರುವುದಕ್ಕೆ ಅಡ್ಡಿಯಿಲ್ಲ.

1 comment: