Sunday, February 10, 2013

ಅಫ್ಝಲ್‌ಗೆ ಗಲ್ಲು: ಇನ್ನೂ ಉತ್ತರ ಸಿಗದ ಪ್ರಶ್ನೆಗಳು

 ಈ ಲೇಖನವನ್ನು ಬರೆದಿರುವುದು ಖ್ಯಾತ ಚಿಂತಕಿ ಅರುಂಧತಿ ರಾಯ್. ಅಫ್ಝಲ್ ಗುರುವಿಗೆ ಗಲ್ಲು ವಿಧಿಸಿದ ಕುರಿತಂತೆ ಆಕೆ ವ್ಯಕ್ತಪಡಿಸಿರುವ ಅನುಮಾನಗಳು, ಪೊಲೀಸರಿಗೆ ಹಾಕಿದ ಪ್ರಶ್ನೆಗಳು ಇಲ್ಲಿ. ‘ದಿ ಹಿಂದೂ’ ಪತ್ರಿಕೆಯಲ್ಲಿ ರವಿವಾರ(ಇಂದು) ಪ್ರಕಟವಾಗಿರುವ ಈ ಲೇಖನವನ್ನು ನನ್ನ ಗೆಳೆಯರೊಬ್ಬರು ಅನುವಾದಿಸಿದ್ದಾರೆ.
 
ಲೇಖಕಿ: ಅರುಂಧತಿ ರಾಯ್
ಕೃಪೆ- ದಿ ಹಿಂದು

ಹೌದಲ್ವೇ?. ಕಳೆದ ಶನಿವಾರ ದಿಲ್ಲಿಗೆ ವಸಂತ ಋತು ಕಾಲಿಟ್ಟಿತು. ಸೂರ್ಯ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ. ಹಾಗೆಯೇ ಕಾನೂನು ತನ್ನ ದಾರಿಯಲ್ಲಿ ಸಾಗಿತು. ನಾವು ಬೆಳಗ್ಗಿನ ಉಪಹಾರ ಸೇವಿಸುವ ಸ್ವಲ್ಪ ಮುನ್ನ, 2001ರ ಸಂಸತ್‌ಭವನ ದಾಳಿ ಪ್ರಕರಣದ ಆರೋಪಿ ಅಫ್ಝಲ್ ಗುರುವನ್ನು ರಹಸ್ಯವಾಗಿ ಗಲ್ಲಿಗೇರಿಸಲಾಯಿತು ಹಾಗೂ ಆತನ ಮೃತದೇಹವನ್ನು ತಿಹಾರ್ ಜೈಲಿನಲ್ಲಿ ದಫನ ಮಾಡಲಾಯಿತು. ಆತನನ್ನು ಮಕ್ಬೂಲ್ ಭಟ್‌ನ ಪಕ್ಕದಲ್ಲೇ ಹೂಳಲಾಯಿತೇ? (1984ರಲ್ಲಿ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲ್ಪಟ್ಟ ಇನ್ನೋರ್ವ ಕಾಶ್ಮೀರಿ). ಅಫ್ಝಲ್‌ನನ್ನು ಗಲ್ಲುಗಂಬಕ್ಕೇರಿಸಿದ ವಿಷಯವನ್ನು ಆತನ ಪತ್ನಿ ಹಾಗೂ ಪುತ್ರನಿಗೆ ತಿಳಿಸಿರಲಿಲ್ಲ. ಆದರೆ ಕೇಂದ್ರ ಗೃಹಕಾರ್ಯದರ್ಶಿ ಮಾತ್ರ ‘‘ಅಫ್ಝಲ್ ಕುಟುಂಬಕ್ಕೆ ಸ್ಪೀಡ್‌ಪೋಸ್ಟ್ ಹಾಗೂ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಮಾಹಿತಿ ನೀಡಲಾಗಿದೆ’’ ಎಂದು ಸುದ್ದಿಗಾರರಿಗೆ ವಿವರಿಸಿದ್ದರು.ಆದರೆ ಅದು ಕುಟುಂಬಿಕರಿಗೆ ತಲುಪಿದೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲಿಸುವಂತೆ ಜಮ್ಮುಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರನ್ನು ಕೇಳಿಕೊಳ್ಳಲಾಗಿದೆ ಎಂದು ಹೇಳಿ ಕೈತೊಳೆದಕೊಂಡಿದ್ದರು. ಅದೇನೂ ದೊಡ್ಡ ವಿಷಯವಲ್ಲ. ಯಾಕೆಂದರೆ ಪತ್ನಿ ಹಾಗೂ ಮಗ ಇಬ್ಬರೇ ಅಫ್ಝಲ್‌ನ ಕುಟುಂಬದ ಸದಸ್ಯರು.


ಅಫ್ಝಲ್‌ನನ್ನು ಗಲ್ಲಿಗೇರಿಸಿದ ಬಳಿಕ ಅತ್ಯಂತ ಅಪರೂಪವೆಂಬವಂತೆ ದೇಶವು ಒಗ್ಗಟ್ಟನ್ನು ಪ್ರದರ್ಶಿಸಿತು. ಕನಿಷ್ಠ ಪಕ್ಷದೇಶದ ಪ್ರಮುಖ ರಾಜಕೀಯ ಪಕ್ಷಗಳು ಏಕತೆಯನ್ನು ಪ್ರದರ್ಶಿಸಿದವು (ಅಫ್ಝಲ್‌ನನ್ನು ಗಲ್ಲಿಗೇರಿಸಿದ್ದು ತೀರಾ ವಿಳಂಬವಾಯಿತೆಂಬ ಬಗ್ಗೆ ಕೆಲವೊಂದು ಆಕ್ಷೇಪಗಳನ್ನು ಹೊರತುಪಡಿಸಿ).ಕಾಂಗ್ರೆಸ್, ಬಿಜೆಪಿ ಹಾಗೂ ಸಿಪಿಎಂ ಪಕ್ಷಗಳು ಪರಸ್ಪರ ಕೈಜೋಡಿಸಿ ಕಾನೂನಿನ ಆಳ್ವಿಕೆಗೆ ಸಂದ ಜಯವೆಂದು ಬಣ್ಣಿಸಿದವು.
   ಈಗಿನ ದಿನಗಳಲ್ಲಿ ಟಿವಿ ಚಾನೆಲ್‌ಗಳಿಂದ ನೇರ ಪ್ರಸಾರವಾಗುವ ದೇಶದ ಆತ್ಮಸಾಕ್ಷಿಯು ನಮ್ಮ ಮೇಲೆ ತನ್ನ ಬೌದ್ಧಿಕತೆಯನ್ನು ಹೇರತೊಡಗಿತು. ಹೇಡಿಗಳು ಗುಂಪುಗುಂಪಾಗಿ ಬೇಟೆಯಾಡುವಂತೆ ಆ ವ್ಯಕ್ತಿಯು ಮೃತಪಟ್ಟ ಬಳಿಕವೂ ಮಾಧ್ಯಮಗಳೆಲ್ಲವೂ ಭಾವೋದ್ರೇಕಗಳನ್ನು ಹಾಗೂ ಅತಿರಂಜಿತ ವಾಸ್ತವಾಂಶಗಳನ್ನು ಕಲಸುಮೇಲೋಗರಗೊಳಿಸಿ ವೀಕ್ಷಕರಿಗೆ ಉಣಬಡಿಸಿದವು. ತಮ್ಮ ಧೈರ್ಯವನ್ನು ಉಳಿಸಿಕೊಳ್ಳಲು ಅವರಿಗೆ ಒಬ್ಬರಿಗೊಬ್ಬರ ಅಗತ್ಯವಿತ್ತು. ಯಾಕೆಂದರೆ ತಾವು ಯಾವುದೋ ಘೋರವಾದ ತಪ್ಪು ಮಾಡುತ್ತಿದ್ದೇವೆಂಬ ಭಾವನೆ ಅವರ ಮನದಾಳವನ್ನು ಚುಚ್ಚುತ್ತಿತ್ತು.
ಹಾಗಾದರೆ ಸತ್ಯಾಂಶಗಳೇನು?


2001ರ ಡಿಸೆಂಬರ್ 13ರಂದು ಐವರು ಸಶಸ್ತ್ರಧಾರಿಗಳು ಬಿಳಿ ಅಂಬಾಸಿಡರ್ ವಾಹನವೊಂದರಲ್ಲಿ ಸಂಸತ್ ಭವನದ ಗೇಟುಗಳನ್ನು ದಾಟಿ ಮುನ್ನುಗ್ಗಿದರು. ಆ ಕಾರಿನಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ಅಳವಡಿಸಲಾಗಿತ್ತು. ಅವರನ್ನು ಭದ್ರತಾ ಸಿಬ್ಬಂದಿಗಳು ತಡೆಯಲೆತ್ನಿಸಿದಾಗ ಅವರು ಕಾರಿನಿಂದ ಜಿಗಿದು, ಗುಂಡೆಸೆಯತೊಡಗಿದರು. ಅವರು ಎಂಟು ಭದ್ರತಾಸಿಬ್ಬಂದಿಯನ್ನು ಹಾಗೂ ಓರ್ವ ಉದ್ಯಾನವನದ ಮಾಲಿಯನ್ನು ಹತ್ಯೆಗೈದರು. ಆನಂತರ ನಡೆದ ಗುಂಡಿನ ಕಾಳಗದಲ್ಲಿ ಎಲ್ಲಾ ಐವರು ದಾಳಿಕೋರರನ್ನು ಕೊಲ್ಲಲಾಯಿತು. ಪೊಲೀಸ್ ಕಸ್ಟಡಿಯಲ್ಲಿ ಅಫ್ಝಲ್ ನೀಡಿದ ಹಲವಾರು ತಪ್ಪೊಪ್ಪಿಗೆ ಹೇಳಿಕೆಗಳ ಪೈಕಿ ಒಂದರಲ್ಲಿ ಆತ, ಸಂಸತ್ ಭವನದ ದಾಳಿಯಲ್ಲಿ ಪಾಲ್ಗೊಂಡವರನ್ನು ಮುಹಮ್ಮದ್, ರಾಣಾ,ರಾಜಾ, ಹಂಝಾ ಹಾಗೂ ಹೈದರ್ ಎಂದು ಗುರುತಿಸಿದ್ದ. ಇಂದಿನವರೆಗೂ ಅವರ ಬಗ್ಗೆ ನಮಗೆ ಗೊತ್ತಿರುವುದು ಇಷ್ಟು ಮಾತ್ರ. ಆಗ ಗೃಹಸಚಿವರಾಗಿದ್ದ ಎಲ್.ಕೆ. ಅಡ್ವಾಣಿ , ದಾಳಿಕೋರರು ಪಾಕಿಸ್ತಾನಿಗಳ ಹಾಗೆ ಕಾಣುತ್ತಿದ್ದರು ಎಂದು ಹೇಳಿದ್ದರು.(ಸ್ವತಃ ಸಿಂಧಿಯಾಗಿರುವ ಅವರಿಗೆ ಪಾಕಿಸ್ತಾನಿಗಳು ಹೇಗೆ ಕಾಣುತ್ತಾರೆಂದು ಗೊತ್ತಿರಬೇಕಲ್ಲವೇ).

  ಕೇವಲ ಅಫ್ಝಲ್‌ನ ತಪ್ಪೊಪ್ಪಿಗೆ ಹೇಳಿಕೆ (ಸುಪ್ರೀಂಕೋರ್ಟ್ ಆತನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ನ್ಯೂನತೆಗಳಿವೆ ಹಾಗೂ ವಿಚಾರಣಾ ಪ್ರಕ್ರಿಯೆಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಕ್ಷೇಪ ವ್ಯಕ್ತಪಡಿಸಿತ್ತು)ಯನ್ನು ಆಧರಿಸಿ ಭಾರತ ಸರಕಾರವು ಪಾಕಿಸ್ತಾನದಲ್ಲಿನ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು ಹಾಗೂ ಪಾಕಿಸ್ತಾನದ ಗಡಿಯಲ್ಲಿ 5 ಲಕ್ಷಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಿತ್ತು.ಅಣ್ವಸ್ತ್ರ ಸಮರವನ್ನು ಸಾರುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದ್ದವು. ವಿದೇಶಿ ರಾಯಭಾರಿ ಕಚೇರಿಗಳು ತಮ್ಮ ದೇಶದ ಪ್ರಜೆಗಳಿಗೆ ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಎಚ್ಚರವಹಿಸುವಂತೆ ಸಲಹೆ ನೀಡಿದವು ಹಾಗೂ ದಿಲ್ಲಿಯಲ್ಲಿರುವ ತಮ್ಮ ಸಿಬ್ಬಂದಿಯನ್ನು ತೆರವುಗೊಳಿಸಿದವು. ಎರಡೂದೇಶಗಳ ನಡುವೆ ಬಿಗುವಿನ ವಾತಾವರಣ ಹಲವು ತಿಂಗಳುಗಳವರೆಗೆ ಮುಂದುವರಿಯಿತು ಹಾಗೂ ಭಾರತದ ಬೊಕ್ಕಸಕ್ಕೆ ಸಹಸ್ರಾರು ಕೋಟಿ ರೂ.ಗಳ ವೆಚ್ಚ ತಗಲಿತು.


   2001ರ ಡಿಸೆಂಬರ್ 14ರಂದು ದಿಲ್ಲಿ ಪೊಲೀಸರು ತಾವು ಸಂಸತ್ ದಾಳಿ ಪ್ರಕರಣವನ್ನು ಭೇದಿಸಿರುವುದಾಗಿ ಘೋಷಿಸಿದರು. ಡಿಸೆಂಬರ್ 15ರಂದು ಅವರು ಪ್ರಕರಣದ ‘ಸೂತ್ರಧಾರಿ’ ಪ್ರೊಫೆಸರ್ ಎಸ್.ಆರ್. ಗೀಲಾನಿಯನ್ನು ದಿಲ್ಲಿಯಲ್ಲಿ ಹಾಗೂ ಶೌಕತ್‌ಗುರು ಹಾಗೂ ಅಫ್ಝಲ್‌ಗುರುನನ್ನು ಶ್ರೀನಗರದ ಹಣ್ಣುಹಂಪಲಿನ ಮಾರುಕಟ್ಟೆಯೊಂದರಲ್ಲಿ ಬಂಧಿಸಿತು. ತರುವಾಯ, ಅವರ ಶೌಕತ್‌ನ ಪತ್ನಿ ಅಫ್ಸನಾ ಗುರುಳನ್ನು ಬಂಧಿಸಿತು.ಮಾಧ್ಯಮಗಳು ಪ್ರಕರಣದ ಬಗ್ಗೆ ವಿಶೇಷ ತನಿಖಾದಳದ ವರದಿಯನ್ನು ಮಾಧ್ಯಮಗಳು ಉತ್ಸಾಹದಿಂದ ಪ್ರಕಟಿಸಿದವು. ಪ್ರಕರಣಕ್ಕೆ ಸಂಬಂಧಿಸಿ ಆ ಸಮಯದಲ್ಲಿ ದೇಶದ ಕೆಲವು ಪ್ರಮುಖ ಪತ್ರಿಕೆಗಳು ಪ್ರಕಟಿಸಿದ ಕೆಲವು ಆಂಗ್ಲ ತಲೆಬರಹಗಳು ಭಾವಾರ್ಥಗಳು ಹೀಗಿದ್ದವು. ‘ ಭಯೋತ್ಪಾದನೆ ಸಂಚಿನ ಕೇಂದ್ರದಲ್ಲಿ ದಿಲ್ಲಿ ವಿವಿಯ ಉಪನ್ಯಾಸಕ’, ‘ವಿಶ್ವವಿದ್ಯಾನಿಲಯದ ಡಾನ್‌ನಿಂದ ಫಿದಾಯೆನ್‌ಗಳಿಗೆ ಮಾರ್ಗದರ್ಶನ’, ‘ಬಿಡುವಿನ ಸಮಯದಲ್ಲಿ ಡಾನ್‌ನಿಂದ ಭಯೋತ್ಪಾದನೆಯ ಉಪನ್ಯಾಸ’ ಇತ್ಯಾದಿ.
      
  ಝೀ ಸುದ್ದಿವಾಹಿನಿ ಒಂದು ಹೆಜ್ಜೆ ಮಂದೆ ಹೋಗಿ ಸಂಸತ್‌ದಾಳಿ ಪ್ರಕರಣದ ಬಗ್ಗೆ ‘ಡಿಸೆಂಬರ್ 13’ ಎಂಬ ಡಾಕ್ಯುಮೆಂಟರಿ ನಾಟಕವೊಂದನ್ನು ಪ್ರಸಾರ ಮಾಡಿತು. ಪೊಲೀಸರ ದೋಷಾರೋಪಪಟ್ಟಿಯನ್ನು ಆಧರಿಸಿದ ಸತ್ಯಘಟನೆಗಳ ಮರು ಅವತರಣಿಕೆ ಎಂಬ ಹಣೆಪಟ್ಟಿಯೊಂದಿಗೆ ಪ್ರಸಾರವಾದ ಈ ಟಿವಿ ಫಿಲ್ಮ್ ಅನ್ನು ಪ್ರಧಾನಿ ಎ.ಬಿ.ವಾಜಪೇಯಿ ಹಾಗೂ ಆಗಿನ ಗೃಹ ಸಚಿವ ಎಲ್.ಕೆ. ಆಡ್ವಾಣಿ ಮುಕ್ತಕಂಠದಿಂದ ಪ್ರಶಂಸಿಸಿದರು. ಈ ಚಿತ್ರದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಮಾಧ್ಯಮಗಳ ಕಾರ್ಯಕ್ರಮಗಳು ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲಾರವೆಂದು ಪ್ರತಿಪಾದಿಸಿದ ಸುಪ್ರೀಂಕೋರ್ಟ್ ಆ ಡಾಕ್ಯುಮೆಂಟರಿ ಡಾಕ್ಯುಮೆಂಟರಿ ನಾಟಕದ ಪ್ರಸಾರವನ್ನು ತಡೆಹಿಡಿಯಲು ನಿರಾಕರಿಸಿತು. ತ್ವರಿತ ವಿಚಾರಣಾ ನ್ಯಾಯಾಲಯವು ಅಫ್ಝಲ್‌ಗುರು, ಶೌಕತ್ ಹಾಗೂ ಗೀಲಾನಿಗೆ ಗಲ್ಲು ಶಿಕ್ಷೆಯನ್ನು ವಿಧಿಸುವ ತೀರ್ಪನ್ನು ಘೋಷಿಸಿದ ಕೆಲವೇ ದಿನಗಳ ಮೊದಲು ಆ ಟಿವಿ ಚಿತ್ರ ಪ್ರಸಾರವಾಗಿತ್ತು. ತರುವಾಯ ಹೈಕೋರ್ಟ್ ಪ್ರಕರಣದ ಸೂತ್ರಧಾರಿಯೆಂಬ ಆರೋಪ ಹೊತ್ತಿದ್ದ ಪ್ರೊ.ಎಸ್.ಎ.ಆರ್.ಗೀಲಾನಿ ಹಾಗೂ ಅಫ್ಸಾನಗುರುಳನ್ನು ದೋಷಮುಕ್ತಗೊಳಿಸಿತು. ಇವರಿಬ್ಬರನ್ನು ದೋಷಮುಕ್ತಗೊಳಿಸಿದ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಆದರೆ 2005ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪೊಂದರಲ್ಲಿ ಮುಹಮ್ಮದ್‌ಅಫ್ಝಲ್‌ಗುರುಗೆ ಮೂರು ಬಾರಿ ಜೀವಾವಧಿ ಶಿಕ್ಷೆ ಹಾಗೂ ಅವಳಿ ಮರಣದಂಡನೆಯನ್ನು ಘೋಷಿಸಿತು.


   ಕೆಲವು ಹಿರಿಯ ಪತ್ರಕರ್ತರು ಕಟ್ಟಿದ ಸುಳ್ಳಿನ ಕಂತೆಗಳಿಗೆ ವ್ಯತಿರಿಕ್ತವೆಂಬಂತೆ ಅಫ್ಝಲ್‌ಗುರು 2001ರ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ದಾಳಿ ನಡೆಸಿದ ಉಗ್ರರಲ್ಲೊಬ್ಬನಾಗಿರಲಿಲ್ಲ. ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿ, ಅವರನ್ನು ಕೊಂದವನೂ ಆತನಲ್ಲ (ಬಿಜೆಪಿಯ ರಾಜ್ಯಸಭಾ ಎಂ.ಪಿ.ಚಂದನ್ ಮಿತ್ರಾ ಕೂಡಾ 2006ರ ಅಕ್ಟೋಬರ್ 7ರಂದು ಪಯೋನಿರ್ ಪತ್ರಿಕೆಯಲ್ಲಿ ಈ ಅನಿಸಿಕೆ ವ್ಯಕ್ತಪಡಿಸಿದ್ದರು). ಪೊಲೀಸ್ ಚಾರ್ಜ್‌ಶೀಟ್‌ನಲ್ಲೂ ಆ ರೀತಿ ಆರೋಪಿಸಲಾಗಿಲ್ಲ. ಆದರೆ ಪುರಾವೆಯು ಸಾಂದರ್ಭಿಕವಾದುದೆಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಆದು ಮುಂದುವರಿದು ‘‘ಭಾರೀ ಸಾವುನೋವಿಗೆ ಕಾರಣವಾದ ಈ ಘಟನೆಯು ಇಡೀ ದೇಶವನ್ನು ನಡುಗಿಸಿದೆ. ಅಪರಾಧಿಗೆ ಮರಣದಂಡನೆಯನ್ನು ವಿಧಿಸಿದಲ್ಲಿ ದೇಶದ ಆತ್ಮಸಾಕ್ಷಿಗೆ ತೃಪ್ತಿಯಾಗಲಿದೆ’’ಎಂದು ಹೇಳಿತ್ತು.
ಸಂಸತ್‌ಭವನ ದಾಳಿ ಪ್ರಕರಣದ ಕುರಿತಾದ ಸಮಗ್ರ ಆತ್ಮಸಾಕ್ಷಿಯನ್ನು ಯಾರು ರೂಪಿಸಿದರು. ಆ ಘಟನೆಯ ಸತ್ಯಾಂಶಗಳನ್ನು ಪತ್ರಿಕೆಗಳಿಂದ ಅಥವಾ ಟಿವಿಯಲ್ಲಿ ನಾವು ಕಂಡ ಸಿನೆಮಾಗಳಿಂದ ಅರಿತುಕೊಂಡೆವಾ?.


  ಎಸ್.ಎ.ಆರ್ ಗೀಲಾನಿಯನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯಗಳು, ಅಫ್ದಲ್ ಗುರುವನ್ನು ಅಪರಾಧಿಯೆಂದು ಘೋಷಿಸಿವೆ. ಹಾಗಾದರೆ ಈ ವಿಚಾರಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿತ್ತೆಂಬುದು ಹೇಳುವುದು ಎಷ್ಟು ಸರಿ ಎಂದು ವಾದಿಸುವವರೂ ಇದ್ದಾರೆ.
  ಸಂಸತ್ ಭವನದ ಮೇಲೆ ದಾಳಿ ಪ್ರಕರಣದ ವಿಚಾರಣೆಯು 2002ರ ಮೇನಲ್ಲಿ ಆರಂಭಗೊಂಡಿತು. ಆ ವೇಳೆ 9/11 ಭಯೋತ್ಪಾದಕ ದಾಳಿ ಘಟನೆಯ ಬಳಿಕ ಉಂಟಾದ ಭಯದಿಂದ ಮುಕ್ತವಾಗಲು ಜಗತ್ತು ಇನ್ನೂ ಒದ್ದಾಡುತ್ತಿತ್ತು. ಅಮೆರಿಕವು ಆಗ ತಾನೇ ಅಫ್ಘಾನಿಸ್ತಾನದಲ್ಲಿ ತನಗೆ ದೊರೆತ ಮಿಲಿಟರಿ ವಿಜಯದಿಂದ ಬೀಗುತ್ತಿತ್ತು. ಆಗ ಗುಜರಾತ್ ಭೀಕರ ನರಮೇಧಕ್ಕೆ ಸಾಕ್ಷಿಯಾಗಿತ್ತು ಮತ್ತು ಸಂಸತ್ ಭವನದ ಮೇಲಿನ ದಾಳಿ ಪ್ರಕರಣದಲ್ಲಿ ಕಾನೂನು ನಿಜಕ್ಕೂ ತನ್ನದೇ ದಾರಿಯಲ್ಲಿ ಸಾಗುತ್ತಿತ್ತು.
ಸಾಕ್ಷಗಳು ನ್ಯಾಯಾಲಯದಲ್ಲಿ ಸಲ್ಲಿಕೆಯಾಗುವುದು ಯಾವುದೇ ಕ್ರಿಮಿನಲ್ ಪ್ರಕರಣದ ವಿಚಾರಣೆಯ ನಿರ್ಣಾಯಕ ಹಂತವಾಗಿದೆ. ಸಾಕ್ಷಿಗಳನ್ನು ಪಾಟಿಸವಾಲಿಗೊಳಪಡಿಸುವಾಗ, ವಾದಪ್ರತಿವಾದಗಳನ್ನು ಮಂಡಿಸುವಾಗ ನಾವು ಕಾನೂನಿನ ಅಂಶಗಳ ಆಧಾರದಲ್ಲಿ ಮಾತ್ರ ವಾದಿಸಬಹುದಾಗಿದೆಯೇ ಹೊರತು ನಿಮಗೆ ಹೊಸ ರೀತಿಯ ಪುರಾವೆಗಳನ್ನು ಮಂಡಿಸಲು ಸಾಧ್ಯವಿಲ್ಲ. ಅತ್ಯಂತ ಬಿಗಿಭದ್ರತೆಯ ಕಾರಾಗೃಹದಲ್ಲಿ ಏಕಾಂತವಾಗಿ ಇರಿಸಲ್ಪಟ್ಟ ಅಫ್ಝಲ್ ಗುರು ಪರವಾಗಿ ವಾದಿಸಲು ಅಗ ವಕೀಲರೇ ಇರಲಿಲ್ಲ. ನ್ಯಾಯಾಲಯ ನೇಮಿಸಿದ ಕಿರಿಯ ನ್ಯಾಯವಾದಿಯು, ಒಮ್ಮೆಯೂ ಆತನನ್ನು ಜೈಲಿನಲ್ಲಿ ಭೇಟಿಯಾಗಿರಲಿಲ್ಲ. ಅಫ್ಝಲ್ ಪರವಾಗಿ ವಾದಿಸಲು ಯಾವುದೇ ಸಾಕ್ಷಿಯನ್ನು ಆತ ಕರೆಸಿಕೊಳ್ಳಲಿಲ್ಲ ಹಾಗೂ ಪ್ರಾಸಿಕ್ಯೂಶನ್ ಸಾಕ್ಷಿಯನ್ನು ಪಾಟಿಸವಾಲಿಗೊಳಪಡಿಸಲಿಲ್ಲ. ನ್ಯಾಯಾಧೀಶರು ಕೂಡಾ ಆ ಪರಿಸ್ಥಿತಿಯಲ್ಲಿ ತಾನೇನೂ ಮಾಡಲು ಸಾಧ್ಯವಿಲ್ಲವೆಂದು ಅಸಹಾಯಕತೆಯನ್ನು ತೋಡಿಕೊಂಡಿದ್ದರು.


 ಹೀಗಿದ್ದೂ ಉತ್ತರಿಸಲಾಗದ ಕೆಲವು ಪ್ರಶ್ನೆಗಳು ಈ ಪ್ರಕರಣವನ್ನು ಕಾಡುತ್ತಿವೆ. ಅಂತಹ ಕೆಲವು ಉದಾಹರಣೆಗಳು ಇಲ್ಲಿವೆ.
 1.ಅಫ್ಝಲ್‌ನನ್ನು ಪೊಲೀಸರು ಹೇಗೆ ಬಂಧಿಸಿದರು?. ಎಸ್.ಎ.ಆರ್.ಗೀಲಾನಿಯ ಮೂಲಕ ಸಂಸತ್ ಭವನ ದಾಳಿ ಪ್ರಕರಣದಲ್ಲಿ ಅಫ್ಝಲ್‌ನ ಪಾತ್ರವನ್ನು ತಿಳಿದುಕೊಂಡೆವೆಂದು ಪೊಲೀಸರು ಹೇಳುತ್ತಾರೆ. ಆದರೆ ಪೊಲೀಸ್ ದಾಖಲೆಗಳ ಪ್ರಕಾರ, ಗೀಲಾನಿಯನ್ನು ಬಂಧಿಸುವ ಮೊದಲೇ ಪೊಲೀಸರು ಅಫ್ಧಲ್‌ನ ಬಂಧನಕ್ಕಾಗಿ ಜಾಲ ಬೀಸಿದ್ದರು. ಹೈಕೋರ್ಟ್ ಇದನ್ನು ‘ವಿಷಯದ ವ್ಯತಿರಿಕ್ತತೆ’ ಎಂದು ಕರೆದಿದೆ.


     2.ಸಂಸತ್ ಭವನ ದಾಳಿ ಪ್ರಕರಣದಲ್ಲಿ ಅಫ್ಝಲ್ ವಿರುದ್ಧ ಲಭಿಸಿರುವ ಪ್ರಮುಖ ಸಾಕ್ಷಗಳೆಂದರೆ ಆತನಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳೆಂದು ಪೊಲೀಸರು ಹೇಳಿಕೊಂಡಿದ್ದಾರೆ. ಬಂಧನಾದೇಶದ ನೋಟಿಸ್‌ಗಳಿಗೆ ಗೀಲಾನಿಯ ಸಹೋದರ ಬಿಸ್ಮಿಲ್ಲಾ ಸಹಿಹಾಕಿದ್ದನು. ಈ ನೋಟಿಸ್‌ಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆಯ ಇಬ್ಬರು ವ್ಯಕ್ತಿಗಳ ಸಹಿ ಇತ್ತು. ಅವರಲ್ಲಿ ಒಬ್ಬಾತ ಶರಣಾಗತಿಗೊಂಡ ಉಗ್ರನಾಗಿದ್ದು, ಈ ಹಿಂದೆ ಆತ ಅಫ್ಝಲ್‌ಗೆ ಕಿರುಕುಳ ನೀಡಿದವನಾಗಿದ್ದ. ಅಫ್ಝಲ್‌ನಿಂದ ವಶಪಡಿಸಿಕೊಳ್ಳಲಾದ ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್‌ಗಳಿಗೆ ಮೊಹರು ಮಾಡಲಾಗಿರಲಿಲ್ಲ. ಯಾವುದೇ ಅಪರಾಧದ ಪುರಾವೆಯಾಗಿ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಪೊಲೀಸರು ಸೀಲ್ ಮಾಡುವುದು ಅತ್ಯಗತ್ಯವಾಗಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಈ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಲ್ಯಾಪ್‌ಟಾಪ್‌ನ ಹಾರ್ಡ್ ಡಿಸ್ಕ್‌ನಲ್ಲಿ ಕೇವಲ ಗೃಹ ಸಚಿವಾಲಯದ ನಕಲಿ ಪಾಸ್‌ಗಳು ಹಾಗೂ ಸಂಸತ್ ಭವನದ ಆವರಣವನ್ನು ಪ್ರವೇಶಿಸಲು ಉಗ್ರರು ಬಳಸಿದ ನಕಲಿ ಗುರುತುಚೀಟಿಗಳ ವಿವರಗಳು ಹಾಗೂ ಸಂಸತ್‌ಭವನಕ್ಕೆ ಸಂಬಂಧಿದ ಝೀಟಿವಿ ವಿಡಿಯೋ ಕ್ಲಿಪ್ಪಿಂಗ್‌ನ್ನು ಮಾತ್ರ ಒಳಗೊಂಡಿದ್ದವು. ಆದರೆ ಪೊಲೀಸರು ಹೇಳುವ ಪ್ರಕಾರ ಅಫ್ಝಲ್ ಕೆಲವು ಅತ್ಯಂತ ಮುಖ್ಯಾಂಶಗಳನ್ನು ಹೊರತುಪಡಿಸಿ ಲ್ಯಾಪ್‌ಟಾಪ್‌ನಲ್ಲಿನ ಉಳಿದೆಲ್ಲ ಮಾಹಿತಿಗಳನ್ನು ಅಳಿಸಿಹಾಕಿದ್ದ ಹಾಗೂ ಆತ ಅದನ್ನು, ಭಯೋತ್ಪಾದನಾ ಕಾರ್ಯಾಚರಣೆಯ ಮುಖ್ಯಸ್ಥನೆನ್ನಲಾದ ಘಾಝಿ ಬಾಬಾನಿಗೆ ಹಸ್ತಾಂತರಿಸಲು ಧಾವಿಸುತ್ತಿದ್ದ.


3.ಪ್ರಾಸಿಕ್ಯೂಶನ್ ಪರ ಸಾಕ್ಷಿದಾರ ಕಮಲ್ ಕಿಶೋರ್ ಎಂಬಾತ, ಪ್ರಕರಣದ ಎಲ್ಲ ಆರೋಪಿಗಳಿಗೆ ತಾನು ಸಿಮ್‌ಕಾರ್ಡ್‌ಗಳನ್ನು 2001ರ ಡಿಸೆಂಬರ್ 4ರಂದು ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದ್ದ. ಆದರೆ ಪ್ರಾಸಿಕ್ಯೂಶನ್‌ನ ಸ್ವಂತ ದಾಖಲೆಗಳಲ್ಲಿ, ವಾಸ್ತವವಾಗಿ ಆ ಸಿಮ್ 2001ರ ನವೆಂಬರ್ 6ರಂದು ಸಕ್ರಿಯವಾಗಿತ್ತು.


ಹೀಗೆ ಪ್ರಕರಣದ ವಿಚಾರಣೆಯನ್ನು ಕೆದಕುತ್ತಾ ಹೋದರೆ ಸುಳ್ಳುಗಳು ಹಾಗೂ ಕಪೋಲಕಲ್ಪಿತ ಸಾಕ್ಷಗಳ ಕಂತೆಗಳು ಒಂದೊಂದಾಗಿ ಅನಾವರಣಗೊಳ್ಳತೊಡಗುತ್ತವೆ. ನ್ಯಾಯಾಲಯಗಳ ಗಮನಕ್ಕೆ ಈ ವಿಷಯಗಳು ಗಮನಕ್ಕೆ ಬಂದರೂ ಸಹ, ಅವು ಪೊಲೀಸರಿಗೆ ಮೃದುವಾಗಿ ಬುದ್ದಿ ಹೇಳಿ ಸುಮ್ಮನಾಗುತ್ತವೆಯೇ ಹೊರತು ಹೆಚ್ಚಿನದೇನೂ ಆಗುವುದಿಲ್ಲ.


    ಶರಣಾಗತರಾದ ಹೆಚ್ಚಿನ ಉಗ್ರಗಾಮಿಗಳಂತೆ ಅಫ್ಧಲ್ ಗುರು ಚಿತ್ರಹಿಂಸೆ,ಬ್ಲಾಕ್‌ಮೇಲ್, ಸುಲಿಗೆಗಳಿಂದ ಪೀಡಿತವಾದ ಕಾಶ್ಮೀರದಲ್ಲಿ ಪೊಲೀಸರಿಗೆ ಸುಲಭವಾಗಿ ದಕ್ಕಿದ ಬೇಟೆಯಾಗಿದ್ದಾನೆ. ನಿಜವಾಗಿಯೂ ಸಂಸತ್ ಭವನ ದಾಳಿ ಪ್ರಕರಣದ ರಹಸ್ಯವನ್ನು ಭೇದಿಸಲು ಯಾರಿಗಾದರೂ ಆಸಕ್ತಿಯಿದ್ದಲ್ಲಿ, ಆತ ರಾಶಿರಾಶಿಯಾಗಿರುವ ಪುರಾವೆಗಳ ಕುರಿತಾಗಿ ನಡೆದಿರುವ ತನಿಖೆಗಳನ್ನು ಜಾಲಾಡಬೇಕಾಗಿದೆ. ಆದರೆ ಯಾರೂ ಕೂಡಾ ಹಾಗೆ ಮಾಡಿಲ್ಲ. ಆ ಮೂಲಕ ಈ ಸಂಚಿನ ನಿಜವಾದ ಸೂತ್ರಧಾರರು ಇನ್ನೂ ಗುರುತಿಸಲ್ಪಡದೆ ಹಾಗೂ ತನಿಖೆಗೊಳಪಡದೆ ತೆರೆಯಮರೆಯಲ್ಲೇ ಉಳಿದಿದ್ದಾರೆ.
 ಆದರೆ ಈಗ ಅಫ್ಝಲ್ ಗುರುನನ್ನು ಗಲ್ಲಿಗೇರಿಸಲಾಗಿದೆ. ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ತೃಪ್ತಿಯಾಗಿದೆಯೆಂದು ಆಶಿಸುತ್ತೇನೆ ಅಥವಾ ರಕ್ತದಿಂದ ಕೂಡಿದ ನಮ್ಮ ಕಪ್ ಇನ್ನೂ ಅರ್ಧ ಮಾತ್ರ ತುಂಬಿದೆಯೇ ಎಂಬುದನ್ನು ತಿಳಿಯಲಿಚ್ಛಿಸುವೆ?

No comments:

Post a Comment