Thursday, February 23, 2012

ಕೋಳಿ ಅಂಕಕ್ಕೆ ಒಂದು ಸುತ್ತು....

 
ಜನವರಿ-18- 2008ರಲ್ಲಿ ನಾನು ಬರೆದ ಒಂದು ಲೇಖನ ಇದು.

‘ಅಮಾನವೀಯ’ ‘ಬರ್ಬರ’ ‘ಅನಾಗರಿಕ’!
ಕಳೆದ ಒಂದು ವಾರದಿಂದ ಮಾಧ್ಯಮಗಳಲ್ಲಿ, ಟಿ.ವಿ. ಚಾನೆಲ್‌ಗಳಲ್ಲಿ ‘ಮಾನವೀಯತೆ’, ‘ನಾಗರಿಕತೆ’ಗಳ ಕುರಿತು ಪಾಠವೋ ಪಾಠ! ಯಾವುದೋ ದೌರ್ಜನ್ಯ, ಹತ್ಯಾಕಾಂಡಕ್ಕಾಗಿ ಈ ಮಾಧ್ಯಮಗಳು ಹಾಹಾಕಾರ ಮಾಡುತ್ತಿವೆ ಎಂದು ಕಿವಿ, ಕಣ್ಣು ತೆರೆದು ನೋಡಿದವರಿಗೆ ಅಲ್ಲಿ ನಿರಾಸೆ ಕಾದಿತ್ತು. ತಮಿಳುನಾಡಿನಲ್ಲಿ ಗ್ರಾಮೀಣ ಜನರ ಸಾಂಪ್ರದಾಯಿಕ ‘ಜಲ್ಲಿಕಟ್ಟು’ ಎಂಬ ಕ್ರೀಡೆಯ ಕುರಿತಂತೆ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆದಾಗಲೇ ನ್ಯಾಯಾಲಯ ಈ ಜಲ್ಲಿಕಟ್ಟು ಕ್ರೀಡೆಯನ್ನು ಅಮಾನವೀಯ ಎಂದು ನಿರ್ಧರಿಸಿ, ಅದಕ್ಕೆ ನಿಷೇಧ ಹೇರಿತ್ತು. ನ್ಯಾಯಾಲಯದ ತೀರ್ಪಿಗೆ ಮಾಧ್ಯಮಗಳು ತಮ್ಮ ಹಿಮ್ಮೇಳವನ್ನು ಬಾರಿಸುತ್ತಿದ್ದವು. ಆದರೆ ಗ್ರಾಮೀಣ ಜನರೆಲ್ಲ ಒಂದಾಗಿ ಈ ತೀರ್ಪಿನ ವಿರುದ್ಧ ತಿರುಗಿ ಬಿದ್ದುದರಿಂದ, ತಾತ್ಕಾಲಿಕವಾಗಿ ನಿಷೇಧವನ್ನು ನ್ಯಾಯಾಲಯ ಹಿಂದಕ್ಕೆ ತೆಗೆದುಕೊಂಡಿತ್ತು. ಜಲ್ಲಿಕಟ್ಟು ತಮಿಳುನಾಡಿನ ಗ್ರಾಮೀಣ ಜನರಿಗೆ ಒಂದು ಕ್ರೀಡೆ ಮಾತ್ರ ಆಗಿರಲಿಲ್ಲ. ಅವರ ಪಾಲಿಗೆ ಅದೊಂದು ಪರಂಪರೆಯೂ ಆಗಿತ್ತು. ಆ ಸಾಹಸದ ಆಟಕ್ಕಾಗಿ ಅವರು ವರ್ಷವಿಡೀ ತುದಿಗಾಲಲ್ಲಿ ಕಾದು ನಿಲ್ಲುತ್ತಾರೆ. ಆ ಆಟ ಊರಿಗೊಬ್ಬ ಸಾಹಸಿಗನನ್ನು, ‘ಹೀರೋ’ನನ್ನು ಸೃಷ್ಟಿ ಮಾಡುತ್ತಿತ್ತು. ‘ಹೀರೋ’ ಆಗುವುದಕ್ಕೆ ತರುಣರು ತಮ್ಮ ಪ್ರಾಣವನ್ನೇ ಪಣವಿಟ್ಟು ಅಂಕಣಕ್ಕೆ ಇಳಿಯುತ್ತಿದ್ದರು. ಕೊಬ್ಬಿದ ಗೂಳಿಯನ್ನು ಸಿಟ್ಟಿಗೆಬ್ಬಿಸಿ ಅದನ್ನು ಮಣಿಸುವುದು ‘ಜಲ್ಲಿಕಟ್ಟು’ ಕ್ರೀಡೆಯ ಪ್ರಧಾನ ಅಂಶ. ಆದರೆ ಇದು ಅಷ್ಟೇ ಅಪಾಯಕಾರಿಯಾದ ಆಟ ಕೂಡಾ ಆಗಿದೆ. ಹಲವರ ಪ್ರಾಣಗಳಿಗೆ ಈ ಆಟ ಕುತ್ತು ತಂದಿತ್ತು. ಪ್ರಾಣಿ ಹಿಂಸೆಯೂ ಈ ಸಂದರ್ಭದಲ್ಲಿ ನಡೆಯುತ್ತಿತ್ತು. ಮನುಷ್ಯರ ದೃಷ್ಟಿಯಿಂದಲೂ, ಪ್ರಾಣಿಯ ದೃಷ್ಟಿಯಿಂದಲೂ ಈ ಆಟ ನಿಷೇಧಕ್ಕೆ ಎಲ್ಲ ಅರ್ಹತೆಯನ್ನು ಹೊಂದಿದೆ. ಆದರೆ ಈ ಸಂದರ್ಭದಲ್ಲಿ ಒಂದು ಮುಖ್ಯ ಪ್ರಶ್ನೆ ಎದುರಾಗುತ್ತದೆ. ಈ ದೇಶದಲ್ಲಿ ಪ್ರಾಣಕ್ಕೆ ಅಪಾಯವಿರುವ ಅದೆಷ್ಟೋ ಆಟಗಳನ್ನು ಸರಕಾರವೇ ಪ್ರಾಯೋಜಿಸುತ್ತಿರುವಾಗ, ನ್ಯಾಯದ ಕಣ್ಣು ಈ ಆಟದ ಮೇಲೆ ಮಾತ್ರ ಯಾಕೆ ಬಿತ್ತು?

ಕರಾವಳಿಯನ್ನೇ ತೆಗೆದುಕೊಳ್ಳೋಣ. ಇಲ್ಲಿ ‘ಕೋಳಿ ಅಂಕ’ ಎಂಬ ಕ್ರೀಡೆಯಿದೆ. ಗ್ರಾಮೀಣ ಪ್ರದೇಶದಲ್ಲಿ ತುಳುವರು ಈ ಆಟಕ್ಕಾಗಿ ಮನೆ, ಮಾರು ಕಳೆದುಕೊಂಡವರಿದ್ದಾರೆ. ಕೋಳಿಕಟ್ಟ ಎನ್ನುವುದು ತುಳುನಾಡಿನಲ್ಲಿ ಅದೆಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದರೆ, ಇಲ್ಲಿ ಹುಂಜವನ್ನು ಸಾಕುವುದು ಮಾಂಸಕ್ಕಾಗಿ ಮಾತ್ರವಲ್ಲ. ಕೋಳಿಕಟ್ಟಕ್ಕಾಗಿಯೇ ಹುಂಜವನ್ನು ಸಾಕುವವರಿದ್ದಾರೆ. ಇವರ ಪಾಲಿಗೆ ಹುಂಜ ಎಂದರೆ ಬರೇ ಹುಂಜ ಮಾತ್ರವಲ್ಲ. ಅದರಲ್ಲೂ ವಿವಿಧ ಬಗೆಯನ್ನು ಅವರು ಗುರುತಿಸುತ್ತಾರೆ. ತಮ್ಮ ಪತ್ನಿಗಿಂತಲೂ ಹೆಚ್ಚಾಗಿ ತಾವು ಕೋಳಿಕಟ್ಟಕ್ಕಾಗಿ ಸಾಕಿದ ಹುಂಜವನ್ನು ಪ್ರೀತಿಸುವವರಿದ್ದಾರೆ. ಹುಂಜಗಳ ಗಾಂಭೀರ್ಯ, ಬಣ್ಣ , ನೆಗೆತ ಇತ್ಯಾದಿಗಳಿಗೆ ಪೂರಕವಾಗಿ ಅವರು ಅದಕ್ಕೆ ನಾಮಕರಣವನ್ನು ಮಾಡುತ್ತಾರೆ. ಕೆಲವು ಕೋಳಿಕಟ್ಟಗಳು ಆಸುಪಾಸಿನಲ್ಲೇ ಅತ್ಯಂತ ಪ್ರಸಿದ್ಧ. ಎಷ್ಟೋ ಮೈಲು ದೂರದಿಂದ ತಮ್ಮ ಕೋಳಿಗಳನ್ನು ಹಿಡಿದುಕೊಂಡು ಬರುತ್ತಾರೆ. ಅದರ ಹಿಂದೆಯೇ ಆ ಕೋಳಿಯ ಅಭಿಮಾನಿಗಳು ಆಗಮಿಸುತ್ತಾರೆ. ಬೆಳ್ತಂಗಡಿ ಸಮೀಪದ ಮುಗೇರಡ್ಕ ಎಂಬಲ್ಲಿ ಪ್ರತಿ ವರ್ಷ ಜಾತ್ರೆಯೊಂದು ನಡೆಯುತ್ತದೆ. ಇಲ್ಲಿ ಭೂತಸ್ನಾನಗಳಿದ್ದು, ಪ್ರತಿ ವರ್ಷ ನೇಮ ನಡೆಯುವ ಸಂದರ್ಭದಲ್ಲಿ ಈ ಜಾತ್ರೆ ಜರಗುತ್ತದೆ. ನೇಮಕ್ಕೆ ಮುಂಚೆ ಇಲ್ಲಿ ಮೂರು ದಿನಗಳ ಕಾಲ ಕೋಳಿ ಅಂಕ ನಡೆಯುತ್ತದೆ. ಮುಗೇರಡ್ಕ ಜಾತ್ರೆಯನ್ನು ಕೋಳಿಗಳ ಜಾತ್ರೆ ಎಂದೇ ಕರೆಯಬಹುದು. ಕೋಳಿ ಅಂಕದ ಆ ಮೂರು ದಿನಗಳಿಗಾಗಿ ಆಸುಪಾಸಿನ ಜನಗಳು ಇಡೀ ವರ್ಷ ಚಾತಕ ಪಕ್ಷಿಯಂತೆ ಕಾಯುತ್ತಾರೆ. ಅದಕ್ಕಾಗಿ ಸಿದ್ಧತೆ ನಡೆಸುತ್ತಿರುತ್ತಾರೆ. ಈ ಕೋಳಿ ಅಂಕ ಪ್ರವೀಣರಿಗೆ ಯಾರ ಬಳಿ ಎಂತಹ ಕೋಳಿಗಳಿವೆ. ಯಾವ ಕೋಳಿ ಎಷ್ಟು ಗರ್ವವನ್ನು ಹೊಂದಿದೆ. ಯಾವ ಕೋಳಿ ಹೆಚ್ಚು ನೆಗೆಯುತ್ತದೆ ಇತ್ಯಾದಿಗಳ ಮಾಹಿತಿಗಳಿರುತ್ತವೆ. ಒಬ್ಬನ ಗರ್ವವನ್ನು ಮುರಿಯುವುದಕ್ಕಾಗಿಯೇ ಇನ್ನೊಬ್ಬ ಕೋಳಿಯನ್ನು ಸಾಕುವುದಿದೆ. ತಮ್ಮ ತಮ್ಮ ಸೇಡುಗಳನ್ನು ಕೋಳಿಯನ್ನು ಛೂ ಬಿಡುವ ಮೂಲಕ ತೀರಿಸುವುದಿದೆ. ತನ್ನ ಪ್ರೀತಿಯ ಕೋಳಿಗೆ ಇನ್ನೊಂದು ಕೋಳಿ ಎದೆಗೆ ಇರಿದದ್ದನ್ನು ನೋಡಲಾಗದೆ ಕಣ್ಣೀರಿಟ್ಟವರಿದ್ದಾರೆ. ಹರಿದ ಕೋಳಿಯ ಹೊಟ್ಟೆಯನ್ನು ಸ್ಥಳದಲ್ಲೇ ಹೊಲಿದು ಮತ್ತೆ ಅಂಕಕ್ಕೆ ಇಳಿಸಿ ಗೆದ್ದವರಿದ್ದಾರೆ. ಎದುರಾಳಿ ಕೋಳಿಯ ಕಾಲಿಗೆ ಕಟ್ಟಿದ ಕತ್ತಿ ಇರಿಯುವುದು ಇನ್ನೊಂದು ಕೋಳಿಯ ಹೊಟ್ಟೆಯನ್ನೇ ಆದರೂ, ಅದರ ನೋವು ಮಾಲಕನಿಗೆ ಎನ್ನುವುದು ಕೋಳಿಗಳಿಗೂ ಗೊತ್ತಿದೆ. ತಮ್ಮ ಗೌರವವನ್ನು, ಅಭಿಮಾನವನ್ನು ಕೋಳಿಯ ಮೇಲೆ ಅವಾಹಿಸಿ, ಕಣಕ್ಕಿಳಿಸುತ್ತಾರೆ. ಇದು ಕೋಳಿ ಅಂಕ ತುಳುವ ಜನರ ಬದುಕಿನಲ್ಲಿ ಬೆರೆತಿರುವ ರೀತಿ.

ಕೋಳಿ ಅಂಕ ಹಿಂಸೆ ನಿಜ. ಅದೊಂದು ಜೂಜಾಟವೆನ್ನೂದು ನಿಜ. ಹಲವರು ಈ ಜೂಜಾಟದಲ್ಲಿ ಹಣವನ್ನು ಕಳೆದುಕೊಂಡವರಿದ್ದಾರೆ. ಹಾಗೆಯೇ ಇದು ಎರಡು ಗುಂಪುಗಳ ನಡುವೆ ಕಿಚ್ಚನ್ನೂ ಹಚ್ಚಿದೆ. ಹೊಡೆದಾಟಗಳಾಗಿ, ಪ್ರಕರಣಗಳು ಪೊಲೀಸ್ ಠಾಣೆಯನ್ನು ತುಳಿದಿವೆ. ಆದರೆ, ಅಷ್ಟಕ್ಕೆ ಇದನ್ನು ಏಕಾಏಕಿ ನಿಷೇಧಿಸುವುದು ಎಷ್ಟರ ಮಟ್ಟಿಗೆ ಸರಿ? ಈ ರಾಜ್ಯದಲ್ಲಿ ಜೂಜನ್ನು ಹೋಲುವ ಯಾವ ಕ್ರೀಡೆಯೂ ನಡೆಯದೇ ಇದ್ದಲ್ಲಿ ಇದನ್ನು ನಿಷೇಧಿಸುವುದರಲ್ಲಿ ಅರ್ಥವಿತ್ತು. ಆದರೆ, ಜನ ಸಾಮಾನ್ಯರ ಬದುಕಿನೊಂದಿಗೆ ತಳಕು ಹಾಕಿರುವ ಕೋಳಿ ಅಂಕವನ್ನು ನಿಷೇಧಿಸುವಾಗ, ಕಾನೂನಿಗೆ ಮುಖ್ಯವಾಗುವುದು ಅಂದೊಂದು ‘ಅನಾಗರಿಕರ ಕ್ರೀಡೆ’ ಎನ್ನುವುದು. ಇಲ್ಲಿ ಕೋಳಿ ಮೇಲೆ ಹಣ ಹೂಡಿ ಕಳೆದುಕೊಳ್ಳುವುದನ್ನೇ ಜೂಜು ಎಂದು ಕರೆಯುವುದಾದರೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಕುದುರೆಯ ಮೇಲೆ ಹಣ ಹೂಡೆ ಕಳೆದುಕೊಳ್ಳುವುದನುನ ಸರಕಾರ ಯಾಕೆ ನಿಷೇಧಿಸುವುದಿಲ್ಲ? ನಿಜ, ಕೋಳಿ ಅಂಕ ನಿಷೇಧಿಸತಕ್ಕಂತಹ ಕ್ರೀಡೆಯೇ ಆಗಿದೆ. ಹಾಗೆಯೇ ಕುದುರೆ ರೇಸ್ ಕೂಡಾ ನಿಷೇಧಿಸತಕ್ಕಂತಹ ಜೂಜೆ ಆಗಿದೆ. ಒಂದೆಡೆ ಶ್ರೀಮಂತರ ಖಯಾಳಿಗಳನ್ನು ಪೋಷಿಸುತ್ತಾ, ಬಡವರ ಖಯಾಲಿಗಳನ್ನು ನಿಷೇಧಿಸುವ ಕ್ರಮ ಎಷ್ಟು ಸರಿ?
ಪತ್ರಿಕೆಗಳಲ್ಲಿ ಒಮ್ಮಿಮ್ಮೆ ಸುದ್ದಿ ಓದುವಾಗ ನಗು ಬರುತ್ತದೆ. ‘ಕೋಳಿ ಅಂಕಕ್ಕೆ ದಾಳಿ: ಎರಡು ಕೋಳಿಗಳ ವಶ’ ಎಂಬ ಸುದ್ದಿ ಪ್ರಕಟವಾಗುತ್ತದೆ. ಕಾರ್ಯಾಚರಣೆಯಲ್ಲ್ಲಿ ಭಾಗವಹಿಸಿದ ಮಹಾನ್ ಸಾಹಸಿ ಪೊಲೀಸರ ಹೆಸರುಗಳೂ ಕೆಳಗಡೆ ಪ್ರಕಟವಾಗುತ್ತದೆ. ಆದರೆ, ವಶಪಡಿಸಿದ ಕೋಳಿಗಳು ಎಲ್ಲಿ ಹೋಗುತ್ತವೆ ಎನ್ನುವ ಕುರಿತಂತೆ ಯಾವ ಮಾಹಿತಿಯೂ ಇರುವುದಿಲ್ಲ. ಯಾಕೆಂದರೆ ಕಾರ್ಯಾಚರಣೆ ನಡೆಸಿದ ಪೊಲೀಸರ ಹೊಟ್ಟೆಯೊಳಗೆ ಆ ಕೋಳಿಗಳು ಜೀರ್ಣವಾಗಿರುತ್ತದೆ. ಕೋಳಿ ಅಂಕಕ್ಕೆ ದಾಳಿ ನಡೆಸಿ, ಬಡವರಿಂದ ಹತ್ತು, ಇಪ್ಪತ್ತು ದೋಚುವುದು ಪೊಲೀಸರಿಗೆ ಅತ್ಯಂತ ಸುಲಭ ಕಾರ್ಯಾಚರಣೆಯಾಗಿದೆ.

ಕ್ರೀಡೆಯಲ್ಲಿ ಹಿಂಸೆ ಕೂಡದು ಎನ್ನುವುದಾದರೆ, ಬಾಕ್ಸಿಂಗ್ ಕ್ರೀಡೆಗೆ ನ್ಯಾಯಾಲಯ ತಕ್ಷಣ ನಿಷೇಧ ಹೇರಬೇಕು. ಮನುಷ್ಯನನ್ನು ಮನುಷ್ಯನ ವಿರುದ್ಧ ಛೂ ಬಿಟ್ಟು, ಅದನ್ನು ಮನರಂಜನೆ ಎಂದು ಕರೆಯುವ ವಿಕೃತ ಹಿಂಸೆಯನ್ನು ನಿಷೇಧ ಮಾಡುವ ಅಗತ್ಯವಿದೆ. ಬಾಕ್ಸಿಂಗ್‌ನಿಂದಾಗಿ ಪ್ರಾಣ ಕಳೆದುಕೊಂಂಡ ಅದೆಷ್ಟೋ ಕ್ರೀಡಾಳುಗಳಿದ್ದಾರೆ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಅಮಾನವೀಯವಾಗಿ ಥಳಿಸುವುದು ಯಾವ ರೀತಿಯ ಕ್ರೀಡೆ ? ‘ರೆಸ್ಲಿಂಗ್’ ಹೆಸರಿನಲ್ಲಿ ಯದ್ವಾ ತದ್ವಾ ಥಳಿಸುವುದನ್ನು ನಾವು ಟಿ.ವಿ. ವಾಹಿನಿಯಲ್ಲಿ ನೋಡುತ್ತಿದ್ದೇವೆ. ಅದು ಯಾವ ವರ್ಗದ ಜನರ ಮನರಂಜನೆ? ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಥಳಿಸುವುದು ನಮ್ಮನ್ನು ರಂಜಿಸುತ್ತದೆ ಎಂದಾದರೆ ಗುಜರಾತ್ ಹತ್ಯಾಕಾಂಡವೂ ನಮ್ಮನ್ನು ರಂಜಿಸಬಲ್ಲದು. ನಮ್ಮ ಹೃದಯಾಳದಲ್ಲಿ ಕೆನೆಗಟ್ಟಿರುವ ಕ್ರೌರ್ಯದ ದೆಸೆಯಿಂದ ಬಾಕ್ಸಿಂಗ್ ನಮ್ಮನ್ನು ರಂಜಿಸುತ್ತದೆ. ಆ ಕ್ರೌರ್ಯವೇ, ಗುಜರಾತ್ ಹತ್ಯಾಕಾಂಡದ ಕುರಿತಂತೆ ನಮ್ಮನ್ನು ವೌನ ವಹಿಸುವಂತೆ ಮಾಡುತ್ತದೆ.

‘ಕಾಬೂಲ್ ಎಕ್ಸ್‌ಪ್ರೆಸ್’ ಎಂಬ ಸಿನಿಮಾದಲ್ಲಿ ಒಂದು ದೃಶ್ಯ ಬರುತ್ತದೆ. ತಾಲಿಬಾನ್‌ಗಳು ಅಘ್ಘಾನಿಸ್ತಾನವನ್ನು ಅದಾಗಲೇ ಬಿಟ್ಟು ಹೋಗಿದ್ದಾರೆ. ಅಲ್ಲೊಂದು ಗ್ರಾಮೀಣ ಕ್ರೀಡೆಯಿತ್ತು. ಒಂದು ಆಡಿನ ದೇಹವನ್ನು ಮೈದಾನದಲ್ಲಿ ಎಸೆಯಲಾಗುತ್ತದೆ. ಆ ಬಳಿಕ ನೂರಾರು ಒಂಟೆ ಸವಾರರು ಆ ಆಡಿನ ದೇಹಕ್ಕಾಗಿ ಪೈಪೋಟಿ ನಡೆಸುವುದು. ಈ ಕ್ರೀಡೆ ನಡೆಯುತ್ತಿರುವ ಸ್ಥಳದಲ್ಲಿ ಸ್ಥಳೀಯ ಅಫ್ಘಾನಿಯೊಬ್ಬ ಪ್ರವಾಸಿಗರಲ್ಲಿ ಹೇಳುತ್ತಾನೆ ‘‘ತಾಲಿಬಾನ್ ಆಡಳಿತ ಕಾಲದಲ್ಲಿ ಈ ಆಟವನ್ನು ನಿಷೇಧಿಸಲಾಗಿತ್ತು’’ ಪ್ರವಾಸಿಗರು ಕೇಳುತ್ತಾರೆ ‘‘ಯಾಕೆ’’?
ಅಘ್ಘಾನಿ ನಗುತ್ತಾ ಹೇಳುತ್ತಾನೆ ‘‘ರಕ್ತಪಾತ ಆಗುತ್ತದೆ ಎಂಬ ಕಾರಣಕ್ಕೆ ತಾಲಿಬಾನರು ಈ ಆಟವನ್ನು ನಿಷೇಧಿಸಿದ್ದರು’’
ಈ ಸಣ್ಣ ದೃಶ್ಯ ಹಿಂಸೆಯ ಕುರಿತ ಅದೆಂತಹ ಪರಿಣಾಮಕಾರಿ ವಿಡಂಬನೆ ಅಲ್ಲವೆ?
(ಜನವರಿ-18- 2008, ಶುಕ್ರವಾರ)

No comments:

Post a Comment