Wednesday, February 8, 2012

ನನ್ನ ತಂದೆಯನ್ನು ಯಾಕೆ ಕೊಂದೆ?

ಉತ್ತರಪ್ರದೇಶದಲ್ಲಿ, ಚುನಾವಣ ಪ್ರಚಾರಕ್ಕಿಳಿದಿರುವ ಪ್ರಿಯಾಂಕ ಗಾಂಧಿಯ ಚೈತನ್ಯದಾಯಕ ಮುಖವನ್ನು ನೋಡಿದಾಗ ಈಕೆಯ ಕುರಿತಂತೆ ಏಪ್ರಿಲ್ 18  2008ರಲ್ಲಿ  ನಾನು ಬರೆದ ಲೇಖನವೊಂದು ನೆನಪಾಯಿತು. ನಿಮ್ಮೊಂದಿಗೆ ಅದನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ನಾನು ಹುಟ್ಟಿದ ನೆಲವನ್ನು ಕಾಪಾಡಲು ಮರಣವೇ ಮಾನದಂಡವಾದರೆ, ನಮಗದೇ ಬದುಕಿನ ಆರಂಭ. 
-ಮೂ. ಪುಷ್ಪರಾಜನ್ (ಶ್ರೀಲಂಕಾದ ತಮಿಳು ಕವಿ)

‘‘ನನ್ನ ತಂದೆ ಎಷ್ಟು ಒಳ್ಳೆಯವರಾಗಿದ್ದರು. ನೀನು ಅವರನ್ನು ಯಾಕೆ ಕೊಂದೆ?’’ ಜೈಲಿನೊಳಗಿರುವ ಹಂತಕಿಯನ್ನು ಆಕೆ ಕೇಳುತ್ತಾಳೆ.
ಯಾವುದೋ ವಿಷಾದ ನಾಟಕದ ಹೃದಯ ಕತ್ತರಿಸುವ ದೃಶ್ಯದಿಂದ ಆಯ್ದು ತೆಗೆದ ಸಾಲುಗಳಂತಿದೆ ಈ ಪ್ರಶ್ನೆ. ಆದರೆ ಈ ಪ್ರಶ್ನೆಯನ್ನು ಕೇಳಿದವಳು ಪ್ರಿಯಾಂಕ ಗಾಂಧಿ. ತನ್ನ ತಂದೆಯನ್ನು ಕೊಂದ ಹಂತಕಿ ನಳಿನಿ ಮುರುಗನ್ ಮುಂದೆ ನಿಂತು ಈ ಪ್ರಶ್ನೆಯನ್ನು ಕೇಳಿದಾಗ, ಆಕೆ ತಲೆ ತಗ್ಗಿಸಿದ್ದಳು. ವೆಲ್ಲೂರು ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ರಾಜೀವ್ ಗಾಂಧಿ ಹಂತಕಿ ನಳಿನಿಯನ್ನು ಕಳೆದ ಮಾರ್ಚ್ ತಿಂಗಳಲ್ಲಿ ಪ್ರಿಯಾಂಕ ಗಾಂಧಿ ಭೇಟಿ ಮಾಡಿದ ಸಂದರ್ಭ.
ಒಂದು ದೇಶದ ಭಾವೀ ನಾಯಕಿಯಾಗಿ ಪ್ರಿಯಾಂಕಗಾಂಧಿಯ ಈ ಭೇಟಿ ಅತ್ಯಂತ ಮುತ್ಸದ್ದಿತನದಿಂದ ಕೂಡಿದ್ದು, ಹಾಗೆಯೇ ನಳಿನಿಯೊಂದಿಗೆ ಪ್ರಿಯಾಂಕ ಕೇಳಿದ ಪ್ರಶ್ನೆ ಮಾತ್ರ ಅತ್ಯಂತ ಅಪಕ್ವತೆ ಮತ್ತು ಬಾಲಿಶತನದಿಂದ ಕೂಡಿದ್ದು, ಆದರೆ ಒಬ್ಬ ಮಗಳಾಗಿ ಆಕೆ ಕೇಳಿದ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದೆ. ಪ್ರಿಯಾಂಕ ಗಾಂಧಿಯೆಂದಲ್ಲ, ಈ ಜಗತ್ತಿನ ಕೋಟ್ಯಾಂತರ ಅನಾಥ ಮಕ್ಕಳ ಹೃದಯಾಳದ ಪ್ರಶ್ನೆ ಇದು ‘‘ನನ್ನ ತಂದೆಯನ್ನು ಯಾಕೆ ಕೊಂದೆ?’’ ಆದರೆ ಈ ಪ್ರಶ್ನೆಗೆ ಉತ್ತರಿಸಬೇಕಾದವರು ಯಾರು?

ಪ್ರಿಯಾಂಕ ಗಾಂಧಿಯ ಪ್ರಶ್ನೆಗೆ ನಳಿನಿ ಉತ್ತರಿಸಲಾಗದೆ ತಲೆ ತಗ್ಗಿಸಿ ನಿಂತಿದ್ದಳಂತೆ. ಆದರೆ ಕಣ್ಣಿಗೆ ಕಣ್ಣು ಕೊಟ್ಟು ನೋಡುವ ಧೈರ್ಯವಿದ್ದಿದರೆ ನಳಿನಿಯ ಕಣ್ಣಿನಲ್ಲಿ ಪ್ರಿಯಾಂಕಗಾಂಧಿಗೂ ಕೆಲವು ಪ್ರಶ್ನೆಗಳಿದ್ದವು. ಆ ಕಣ್ಣ ತಳದಲ್ಲಿ ಪ್ರಿಯಾಂಕಳ ಪ್ರಶ್ನೆ ಪ್ರತಿಫಲಿಸುತ್ತಿರುವುದನ್ನು ಕಾಣಬಹುದಿತ್ತು. ಪ್ರಿಯಾಂಕಗಾಂಧಿ ಕೇಳಿದ ಪ್ರಶ್ನೆ ಮಾಧ್ಯಮಗಳಲೆಲ್ಲಾ ಸುದ್ದಿಯಾದವು. ಆದರೆ ನಳಿನಿಯೂ ‘‘ನನ್ನ ತಂದೆಯನ್ನು ನೀವೆಲ್ಲ ಸೇರಿ ಯಾಕೆ ಕೊಂದಿರಿ?’’ ಎಂದು ಮರು ಪ್ರಶ್ನಿಸಿದ್ದರೆ? ಪ್ರಿಯಾಂಕ ಬಳಿ ಅದಕ್ಕೆ ಉತ್ತರವಿತ್ತೆ? ನಳಿನಿ ಮಾತ್ರವಲ್ಲ, ಶ್ರೀಲಂಕಾದ ಲಕ್ಷಾಂತರ ತಮಿಳು ಮಕ್ಕಳು ಒಟ್ಟಾಗಿ ‘‘ನನ್ನ ತಂದೆಯನ್ನು ಯಾಕೆ ಕೊಂದಿರಿ?’’ ಎಂದು ಕೇಳಿದ್ದರೆ, ಪ್ರಿಯಾಂಕ ಗಾಂಧಿ ಏನನ್ನು ಉತ್ತರಿಸುತ್ತಿದ್ದರು? 1987 ಜುಲೈ 29 ದಿನಾಂಕವನ್ನು ತಂದೆಯನ್ನು ಕಳೆದುಕೊಂಡ ಶ್ರೀಲಂಕದ ತಮಿಳು ಮಕ್ಕಳ ಹೃದಯದಲ್ಲಿ ಚೂರಿಯಿಂದ ಕೆತ್ತಲಾಗಿದೆ. ಆ ದಿನಾಂಕವನ್ನು ಸಂಭ್ರಮದಿಂದ ಭಿತ್ತರಿಸಿದ ದೂರದರ್ಶನ, ಪತ್ರಿಕೆಗಳು ಇದೀಗ ಮರೆತೇ ಬಿಟ್ಟಿದೆ. ಆದರೆ ಅದನ್ನು ಈ ಮಕ್ಕಳು ಹೇಗೆ ಮರೆತಾವು? 1987 ಜುಲೈ 29 ಇಂಡಿಯಾ- ಶ್ರೀಲಂಕಾ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ದಿನ. ಶ್ರೀಲಂಕದ ನಾಯಕ ಜಯವರ್ಧನೆ ಮತ್ತು ಭಾರತದ ನಾಯಕ ರಾಜೀವ್ ಗಾಂಧಿ ಬೆಂಗಳೂರಿನಲ್ಲಿ ಬೇಟಿ ಮಾಡಿದ ಆ ಅವಿಸ್ಮರಣೀಯ ದಿನದ ಕುರಿತಂತೆ ಶ್ರೀಲಂಕದ ತಮಿಳು ಕವಿ ಚೇರನ್ ತನ್ನ ಕವಿತೆಯಲ್ಲಿ ಹೀಗೆ ವರ್ಣಿಸುತ್ತಾರೆ ‘‘ಕಪ್ಪುಗಳಲ್ಲಿ ಚಹ ದಿಢೀರನೆ ರಕ್ತವಾಗಿದ್ದನ್ನು ತಿಳಿಯದೆ/ ಇಬ್ಬರು ನಾಯಕರು ಕುರುಡು ರಾಜಕೀಯದಲ್ಲಿ ಕಾಲ ಕಳೆದರು/ ಮನುಷ್ಯ ಮೂಳೆಗಳು ಸುಂದರ ಚಮಚಗಳಾಗಿ/ ತಲೆಬುರುಡೆಗಳು ತಟ್ಟೆಗಳಾಗಿ ರೂಪಾಂತರಗೊಂಡವು/ ಊಟದ ಮೇಜಿನ ಮೇಲೆ/ ದೂರದರ್ಶನ ಕಣ್ಣುಗಳೆಲ್ಲ ಕುರುಡಾದವು/ ನಾವಿಲ್ಲದೆ ನಡೆದ ಒಪ್ಪಂದ ಸಾವಿರಾರು ಜೀವಗಳ ನುಂಗಿ ನೆತ್ತರಲ್ಲಿ ಬರೆದ ಚರಿತ್ರೆ...’’

ಪ್ರಿಯಾಂಕಗಾಂಧಿ ಹೇಳಿದು ಸತ್ಯ. ರಾಜೀವ್ ಗಾಂಧಿ ನಿಜಕ್ಕೂ ಒಳ್ಳೆಯ ಮನುಷ್ಯ. ಕನಸುಗಾರ. ಕೊಳೆತು ಹೋದ ಆಲೋಚನೆಗಳನ್ನು ಹೊತ್ತು ತಿರುಗುತ್ತಿದ್ದ ವೃದ್ಧ ನಾಯಕರ ನಡುವೆ, ತಾರುಣ್ಯದಿಂದ ನಳನಳಿಸುವ ಭಾರತವೊಂದನ್ನು ತಲೆಯಲ್ಲಿ ಮುಡಿದುಕೊಂಡು ಓಡಾಡಿದ ನಾಯಕ. ಆದರೆ ಯಾವಾಗ ರಾಜೀವ್‌ಗಾಂಧಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರೋ, ಪರೋಕ್ಷವಾಗಿ ಅದು ಮೃತ್ಯುವಿಗೆ ಹಾಕಿದ ರುಜುವಾಗಿತ್ತು. ಶಾಂತಿ ಒಪ್ಪಂದದ ಪರಿಣಾಮವನ್ನು ನಿಜವಾಗಿಯೂ ಅರಿತಿದ್ದರೆ, ತಮಿಳರ ಮಾರಣ ಹೋಮಕ್ಕಾಗಿ ಭಾರತದ ಸೈನಿಕರನ್ನು ರಾಜೀವ್‌ಗಾಂಧಿ ಕಳುಹಿಸುತ್ತಿರಲಿಲ್ಲವೇನೋ? ಆದರೆ ‘ಶಾಂತಿ ಒಪ್ಪಂದ’ ಎಂಬ ಎರಡು ಶಬ್ದಗಳಿಗೆ ಸ್ವತಃ ರಾಜೀವ್‌ಗಾಂಧಿ ಮೋಸ ಹೋಗಿದ್ದರು. ರಾಜೀವ್ ಜೊತೆಗಿದ್ದವರು ಅವರನ್ನು ದಾರಿ ತಪ್ಪಿಸಿದ್ದರು. ಶ್ರೀಲಂಕಾದಲ್ಲಿ ಭಾರತದ ಸೈನಿಕರು ತಮಿಳರ ಮಾರಣಹೋಮವನ್ನು ನಡೆಸಿದರು. ಸಹಸ್ರಾರು ಮಕ್ಕಳು ಅನಾಥರಾದರು. ‘‘ನನ್ನ ತಂದೆಯನ್ನು ಯಾಕೆ ಕೊಂದೆ?’’ ಈ ಪ್ರಶ್ನೆಯಿಲ್ಲದ ತಮಿಳರ ಮನೆಯಿಂದ ಒಂದು ಹಿಡಿ ಸಾಸಿವೆ ತಂದರೆ ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದ ನಳಿನಿ ಹೇಳಿದಿದ್ದರೆ, ಆ ಒಂದು ಹಿಡಿ ಸಾಸಿವೆಯನ್ನು ತಂದು ಕೊಡಲು ಪ್ರಿಯಾಂಕಗೆ ಸಾಧ್ಯವಿತ್ತೆ?

‘‘ಏನಿದ್ದರೂ ಅದನ್ನು ಮಾತುಕತೆಯ ಮೂಲಕ ಬಗೆಹರಿಸಬಹುದಿತ್ತಲ್ಲ?’’ ಪ್ರಿಯಾಂಕ ನಳಿನಿಯೊಂದಿಗೆ ಕೇಳಿದ ಇನ್ನೊಂದು ಪ್ರಶ್ನೆ. ಶ್ರೀಲಂಕಾ- ಭಾರತದ ನಡುವೆ ನಡೆದ ಶಾಂತಿ ಒಪ್ಪಂದದಲ್ಲಿ ನಳಿನಿ ಪ್ರತಿನಿಧಿಸುವ ವರ್ಗವನ್ನೂ ಸೇರಿಸಿಕೊಂಡಿದಿದ್ದರೆ ಬಹುಶಃ ರಾಜೀವ್‌ಗಾಂಧಿ ಹತ್ಯೆಯಂತಹ ದುರಂತ ಸಂಭವಿಸುತ್ತಿರಲಿಲ್ಲ. ಆದರೆ ಜಯವರ್ಧನೆ- ರಾಜೀವ್ ನಡುವೆ ಮಾತುಕತೆಯ ಸಂದರ್ಭದಲ್ಲಿ ನಳಿನಿ ಅಥವಾ ಆಕೆ ಪ್ರತಿನಿಧಿಸುವ ಗುಂಪು ಅದರ ಸಮೀಪವಾದರೂ ಸುಳಿಯುವ ಅವಕಾಶವಿತ್ತೆ? ನಳಿನಿ ಪ್ರತಿನಿಧಿಸುವ ವರ್ಗದ ಜೊತೆಗೆ ಪ್ರಾಮಾಣಿಕವಾಗಿ ಮಾತನಾಡುವ ಪ್ರಯತ್ನವನ್ನು ಜಗತ್ತು ಯಾವತ್ತಾದರೂ ಮಾಡಿತ್ತೆ? ಇಂದು ಜೈಲಿನೊಳಗೆ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ನಳಿನಿಯ ಬಳಿ ‘ಮಾತುಕತೆ ನಡೆಸಬಹುದಿತ್ತಲ್ಲ...’ ಎಂಬ ಪ್ರಶ್ನೆ ಕ್ರೂರವಾದದ್ದು ಎನ್ನುವುದರ ಅರಿವಾದರೂ ಪ್ರಿಯಾಂಕರಿಗಿದೆಯೇ?

 ‘ನನ್ನ ತಂದೆಯನ್ನು ಯಾಕೆ ಕೊಂದೆ?’ ಈ ಪ್ರಶ್ನೆ ಬರೇ ಪ್ರಿಯಾಂಕಳದ್ದು ಮಾತ್ರವಲ್ಲ. ನಳಿನಿಯದ್ದು ಕೂಡಾ. ಇರಾಕ್‌ನ ಲಕ್ಷಾಂತರ ಮಕ್ಕಳು ಇಂದು ಬುಶ್‌ನ ಜೊತೆಗೆ ಕೇಳುತ್ತಿರುವ ಪ್ರಶ್ನೆಯೂ ಇದೇ ಆಗಿದೆ. ‘ಇರಾಕ್‌ನಲ್ಲಿ ಅಮೆರಿಕ ಸ್ಥಾಪಿಸುತ್ತಿರುವ ಶಾಂತಿ’ಗೆ ಈ ಜಗತ್ತು ಕೊಡಬೇಕಾದ ಬೆಲೆ ಏನು ಎನ್ನುವುದನ್ನು ಭಾರತಕ್ಕೆ ಪ್ರತ್ಯೇಕವಾಗಿ ತಿಳಿಸಿಕೊಡಬೇಕಾದ ಅಗತ್ಯವಿಲ್ಲ. ಸೆಪ್ಟಂಬರ್ 11ರಂದು ನಡೆದ ದುರಂತದ ಸಂದರ್ಭದಲ್ಲಿ ಅಮೆರಿಕದ ಅಮಾಯಕರು ಕೇಳಿದ ಪ್ರಶ್ನೆಯನ್ನು ವಿಯೆಟ್ನಾಂ, ಅಘ್ಘಾನಿಸ್ತಾನ, ಇರಾಕ್, ಫೆಲೆಸ್ತೀನ್ ಕ್ಯೂಬಾ ಮೊದಲಾದ ರಾಷ್ಟ್ರಗಳು ಶತಮಾನಗಳಿಂದ ಅಮೆರಿಕದ ಜೊತೆ ಕೇಳುತ್ತಾ ಬಂದಿದೆ. ಆದರೆ ಇಂದು ಜಗತ್ತಿನಲ್ಲಿ ಧ್ವನಿ ಪಡೆದಿರುವುದು ಸೆಪ್ಟಂಬರ್ 11ರ ಅಮೆರಿಕದ ಪ್ರಶ್ನೆ ಮಾತ್ರ. ಮಾಧ್ಯಮಗಳು ಪ್ರಿಯಾಂಕಾಳ ಪ್ರಶ್ನೆಯನ್ನು ವೈಭವೀಕರಿಸಿದಂತೆ ಫೆಲೆಸ್ತೀನ್‌ನಲ್ಲಿ ಲಕ್ಷಾಂತರ ಯುವಕ, ಯುವತಿಯರು ಕೇಳುತ್ತಿರುವ ಅದೇ ಪ್ರಶ್ನೆಗೆ ಈವರೆಗೆ ಉತ್ತರಿಸಲು ಸಾಧ್ಯವಾಗದ ಜಗತ್ತು, ‘ಅಮೆರಿಕದ ಪ್ರಶ್ನೆ’ಗೆ ಕಣ್ಣೀರು ಮಿಡಿಯುತ್ತಿರುವುದು ವಿಪರ್ಯಾಸವಲ್ಲವೆ?

ಹಾಗೆಂದು ನಳಿನಿ ಮತ್ತು ಪ್ರಿಯಾಂಕ ಭೇಟಿಯ ಮಹತ್ವವನ್ನು ನಿರ್ಲಕ್ಷಿಸುವಂತಿಲ್ಲ. ಬೆಂಗಳೂರಿನಲ್ಲಿ ಜಯವರ್ಧನೆ ಮತ್ತು ರಾಜೀವ್‌ಗಾಂಧಿ 1987, ಜುಲೈ 29ರಂದು ಮಾಡಿದ ಭೇಟಿಯಷ್ಟೇ ಮಹತ್ವಪೂರ್ಣ ಭೇಟಿ ಇದು. ಒಂದು ರೀತಿಯಲ್ಲಿ ಅದಕ್ಕಿಂತಲೂ ಉನ್ನತವಾದ, ಮಾನವೀಯ ಭೇಟಿ ಇದು. ಒಂದು ರಾಜಕೀಯ ಕುರುಡು ನಿರ್ಣಯದ ಪರಿಣಾಮವನ್ನು ಉಂಡ ಇಬ್ಬರು ಮಹಿಳೆಯರ ಪರಸ್ಪರ ಭೇಟಿ, ಈ ಜಗತ್ತಿನ ಅಳಿದುಳಿದ ಭರವಸೆಯಾಗಿದೆ.
(ಎಪ್ರಿಲ್ 18, 2008)

1 comment:

  1. nimma lekana chennagide. ondu gtaneyannu hege artha madikollabeku ebbudnnu thilisi kottiddiri. thuba thadavaagi odiddene ksmisi..
    keshava
    kannadaprbaha

    ReplyDelete