Sunday, February 12, 2012

ಬೀಜಗಳು ಮತ್ತು ಇತರ ಕತೆಗಳು

ಬೀಜಗಳು
ಮಂಗಳನಲ್ಲಿ ನೀರಿರುವುದು ಪತ್ತೆಯಾಯಿತು.
ಮಂಗಳ ಯಾತ್ರೆಗೆ ವಿಜ್ಞಾನಿಗಳು ಹೊರಟರು.
ಬೇಕಾದ ಎಲ್ಲ ವಸ್ತುಗಳನ್ನೂ ಏರಿಸಿದರು.
ಹಿರಿಯ ವಿಜ್ಞಾನಿ ತನ್ನ ಮನೆಯವರನ್ನೆಲ್ಲ ಬೀಳ್ಕೊಟ್ಟ.
ಅಷ್ಟರಲ್ಲಿ ಅವನ ಕಿರಿಯ ಪುಟ್ಟ ಮಗು ಓಡೋಡಿ ಬಂತು. ತಂದೆಯ ಬೊಗೆಸೆಗೆ ಅದೇನನ್ನೋ ಹಾಕಿತು.
ನೋಡಿದರೆ, ಅದು ಒಂದಿಷ್ಟು ಬೀಜಗಳು.
ಮಗು ಹೇಳಿತು ‘‘ನೀನು ಬರುವಾಗ, ಇದನ್ನು ಬಿತ್ತಿ ಬಾ...ನಾನು ದೊಡ್ಡವನಾಗಿ ಮಂಗಳಗ್ರಹಕ್ಕೆ ಹೋಗುವಾಗ ಅದು ಬೆಳೆದು ಫಲ ಬಿಟ್ಟರೂ ಬಿಡಬಹುದು’’

ಎಂಜಲು
ಸದನದಲ್ಲಿ ನೋಡಬಾರದ್ದನ್ನು ನೋಡಿದ ಸಚಿವರಿಗೆ
ಥೂ ಎಂದು ಉಗಿದೆ.
ಕನ್ನಡಿ ನೋಡಿದರೆ
ನನ್ನ ಮುಖ ತುಂಬ ಎಂಜಲು

ಭಾರ
ಹೆಣವನ್ನು ಹೊತ್ತು
ಸಾಗುತ್ತಿದ್ದರು.
ಹೊರುತ್ತಿರುವವರಲ್ಲಿ ಒಬ್ಬ ಹೇಳಿದ ‘‘ನಾನು ಹೊತ್ತ ಹೆಣಗಳಲ್ಲಿ ಇದು ತುಂಬಾ ಭಾರವಾದುದು’’
ಇನ್ನೊಬ್ಬ ಹೇಳಿದ ‘‘ನಾನು ಹೊತ್ತ ಹೆಣಗಳಲ್ಲಿ ಇದು ತುಂಬಾ ಹಗುರವಾದುದು’’
ಹೆಣದ ಹಿಂದುಗಡೆ ಇರುವವನಿಗೆ ಇವರ ಮಾತು ಅರ್ಥವಾಗಲಿಲ್ಲ.
ಪಕ್ಕದಲ್ಲಿದ್ದವ ಅರ್ಥ ಮಾಡಿಸಿದ. ‘‘ಮೊದಲನೆಯವನು ಮೃತನಿಗೆ ಸಾಲಕೊಟ್ಟವನು. ಎರಡನೆಯವನು ಮೃತನಿಂದ ಸಾಲ ಇಸ್ಕೊಂಡವನು’’

ಸಂಗ್ರಹ
ಸಚಿನ್ ದಾಖಲೆ ರನ್ ಸಂಗ್ರಹಿಸಿದ.
ಮಗ ಅಪ್ಪನಲ್ಲಿ ಖುಷಿಯಿಂದ ಹೇಳಿದ ‘‘ಅಪ್ಪ, ಸಚಿನ್ ದಾಖಲೆ ರನ್ ಸಂಗ್ರಹಿಸಿದ್ದಾನೆ’’
‘‘ಈ ಬಾರಿ ಭತ್ತ ಬೆಳೆ ಸರಿಯಾಗಿ ಬಂದಿಲ್ಲ ಮಗಾ....ಸಚಿನ್ ಬಳಿ ಹೋಗಿ ಉಣ್ಣಕ್ಕೆಂದು ಎರಡು ಗೋಣಿ ರನ್ ಸಾಲ ತಕಂಬಾ ಮಗಾ...ಮುಂದೆ ಬೆಳೆ ಸರಿಯಾಗಿ ಬಂದಾಗ ಕೋಡೋಣಂತೆ...’’ ಅಪ್ಪ ಹೇಳಿದ.

ಮೂಟೆ
ಮಗ ಹೇಳಿದ, ‘‘ಅಪ್ಪಾ, ನೀನು ಮಾರ್ಕೆಟ್‌ನಲ್ಲಿ ಮೂಟೆ ಹೊರುವುದರಿಂದ ನನಗೆ ನಾಚಿಕೆಯಾಗುತ್ತೆ. ನನ್ನ ಕಾನ್ವೆಂಟ್ ಗೆಳೆಯರೆಲ್ಲ ತಮಾಷೆ ಮಾಡುತ್ತಾರೆ...ನೀನು ಮೂಟೆ ಹೊರುವುದನ್ನು ಬಿಟ್ಟು ಬಿಡಪ್ಪ’’
ಅಪ್ಪ ವಿಷಾದದಿಂದ ಉತ್ತರಿಸಿದ ‘‘ನಾನು ಮೂಟೆ ಹೊರುವುದನ್ನು ಬಿಟ್ಟರೆ, ಮುಂದೆ ನೀನು ಮೂಟೆ ಹೊರಬೇಕಾಗುತ್ತದೆ. ಅದು ಇದಕ್ಕಿಂತ ಅವಮಾನಕಾರಿ. ಆದುದರಿಂದ ಈ ಸಣ್ಣ ಅವಮಾನವನ್ನು ನೀನು ಸಹಿಸಲೇಬೇಕು ಮಗಾ...’’

ಸಂದರ್ಶನ
ಅವನು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದ. 
ಅತ್ಯಗತ್ಯವಾಗಿ ಅವನಿಗೊಂದು ಕೆಲಸ ಬೇಕಾಗಿತ್ತು
ಅದೊಂದು ಕಚೇರಿಗೆ ಸಂದರ್ಶನಕ್ಕೆ ಹೋದಾಗ ಗೊತ್ತಾಯಿತು, ಸಂದರ್ಶನ ಮಾಡುತ್ತಿರುವ, ಕಂಪೆನಿಯ ಮುಖ್ಯಸ್ಥ ತನ್ನ ಬಾಲ್ಯದ ಪ್ರಾಣ ಸ್ನೇಹಿತ ಎನ್ನುವುದು. ಕೈಯಲ್ಲಿ ಪ್ರಮಾಣ ಪತ್ರಗಳ ಫೈಲ್ ಇತ್ತು.
ನೇರವಾಗಿ ಸಂದರ್ಶನದ ಕೋಣೆಯೊಳಗೆ ಹೊಕ್ಕ.
ನೆಲ ಸಣ್ಣಗೆ ಕಂಪಿಸುತ್ತಿತ್ತು.
ತಲೆ ಮೇಲೆ ಫ್ಯಾನ್ ತಿರುಗುತ್ತಿದ್ದರೂ ಬೆವರುತ್ತಿದ್ದ.
ಸಂದರ್ಶನ ಎದುರಿಸುತ್ತಿರುವ ಅವನಿಗೆ ಗೊತ್ತು. 
ಎದುರಿನ ಕುರ್ಚಿಯಲ್ಲಿರುವ ಗೆಳೆಯ ನನ್ನ ಕೈಯಲ್ಲಿದ್ದ ಫೈಲ್ ಬಿಡಿಸಿದರೆ ನನಗೆ ಕೆಲಸ ಸಿಗುತ್ತದೆ.
ಆದರೆ ಗೆಳೆಯನನ್ನು ಕಳೆದುಕೊಳ್ಳಬೇಕಾಗುತ್ತದೆ.
ಒಂದು ವೇಳೆ ಫೈಲ್ ಮುಟ್ಟದೆ, ಆತ ನನ್ನ ಅಂಗೈಯನ್ನು ಸ್ಪರ್ಶಿಸಿದರೆ ನನಗೆ ಗೆಳೆಯ ಸಿಗುತ್ತಾನೆ.
ಆದರೆ ಕೆಲಸ ಸಿಗುವುದಿಲ್ಲ.
ನೋಡುತ್ತಿದ್ದ ಹಾಗೆಯೇ....
ಸಂದರ್ಶಕನ ಒಂದು ಬೆರಳು ಅವನ ಕಿರು ಬೆರಳನ್ನು ಸ್ಪರ್ಶಿಸಿಯೇ ಬಿಟ್ಟಿತು.
ಅವನು ಕೆಲಸ ಕಳೆದುಕೊಂಡ.

No comments:

Post a Comment