ಉಪ್ಪಿನಂಗಡಿಗೆ 6 ಕಿ. ಮೀ ದೂರದಲ್ಲಿರುವ, ರಾಷ್ಟ್ರೀಯ ಹೆದ್ದಾರಿಗೆ ಒತ್ತಿಕೊಂಡಿರುವ ಊರು ನನ್ನದು. ಈ ರಾಷ್ಟ್ರೀಯ ಹೆದ್ದಾರಿಯನ್ನು ಸವರಿಕೊಂಡೇ ನೇತ್ರಾವತಿ ನದಿ ಹರಿಯುತ್ತದೆ. ಈ ನದಿಯಾಚೆಗೆ ಮುಗೇರಡ್ಕ ಎನ್ನುವ ಪುಟ್ಟ ಊರಿದೆ. ಇದು ಸ್ಥಳೀಯ ಬೆಳ್ತಂಗಡಿ ತಾಲೂಕಿಗೆ ಸೇರಿದ್ದರೂ, ಅದನ್ನು ತಲುಪಲು ನಾವು ನದಿಯೊಂದನ್ನು ದಾಟಿದರೆ ಸಾಕು. ಈ ನದಿ ತುಂಬಿ ಹರಿವಾಗ, ಮುಗೇರಡ್ಕ ಮತ್ತು ನನ್ನೂರನ್ನು ಬೆಸೆಯಲು ಒಂದು ದೋಣಿ ಇರುತ್ತಿತ್ತು. ಆ ದೋಣಿಯನ್ನು ಸ್ಥಳೀಯ ಕಾಸಿಂ ಬ್ಯಾರಿ ಎಂಬವರು ನಡೆಸುತ್ತಿದ್ದರು.
ವರ್ಷಕ್ಕೊಮ್ಮೆ ಬರುವ ಮುಗೇರಡ್ಕ ಜಾತ್ರೆಗಾಗಿ ನದಿಯ ಈಚೆಗಿರುವ ನಾವೆಲ್ಲ ಕಾದು ಕುಳಿತಿರುತ್ತಿದ್ದೆವು. ಮುಗೇರಡ್ಕ ಜಾತ್ರೆಯ ವಿಶೇಷವೆಂದರೆ, ಅಲ್ಲಿ ನಡೆಯುವ ಮೂರು ದಿನಗಳ ಕೋಳಿ ಅಂಕ. ಆಸು ಪಾಸಿನ ಹುಂಜಗಳೆಲ್ಲ ಮುಗೇರಡ್ಕದಲ್ಲಿ ಬಂದು ನೆರೆಯುತ್ತಿದ್ದವು. ಆ ಹುಂಜಗಳ ಗರ್ವವೋ, ಬಿಂಕವೋ, ಗಾಂಭೀರ್ಯವೋ, ಒಯ್ಯಿರವೋ...ಸುತ್ತ ಮುತ್ತಲೆಲ್ಲ ಆ ಹುಂಜಗಳ ಝೇಂಕಾರವೇ. ಕಾಲಿಗೆ ಕತ್ತಿಕಟ್ಟಿಕೊಂಡ ಈ ವೀರರ ಮಾಡು ಮಡಿ ಹೋರಾಟ, ನಮ್ಮಲ್ಲೆಲ್ಲ ವಿಚಿತ್ರ ಉನ್ಮಾನದವನ್ನೂ, ಆವೇಶವನ್ನು ಹುಟ್ಟಿಸಿ ಹಾಕುತ್ತಿತ್ತು. ಕೆಲವು ಗೆಳೆಯರಂತೂ ಕಾದಾಟಕ್ಕಿಳಿಯುವ ಹುಂಜಗಳ ಮೇಲೆ ಪಂದ್ಯ ಕಟ್ಟುವುದೂ ಇತ್ತು. ನಾನಂತೂ ಮುಗೇರಡ್ಕ ಜಾತ್ರೆಯನ್ನು ಎರಡು ಕಾರಣಕ್ಕೆ ತುಂಬಾ ಇಷ್ಟ ಪಡುತ್ತಿದ್ದೆ. ಒಂದು, ಆವರೆಗೆ ಮೂಲೆ ಸೇರಿರುತ್ತಿದ್ದ ದೋಣಿ ಕಾಸೀಂ ಬ್ಯಾರಿಯ ದೋಣಿ ಜೀವ ಪಡೆದುಕೊಳ್ಳುತ್ತಿತ್ತು. ಆ ದೋಣಿಯಲ್ಲಿ ನದಿಯ ಅತ್ತಿಂದಿತ್ತ ಓಡಾಡುವುದು ನನಗೆ ತುಂಬಾ ಇಷ್ಟವಾಗಿತ್ತು. ಹಾಗೆಯೇ, ಜಾತ್ರೆಯಲ್ಲಿ ಕಲ್ಲಂಗಡಿ ಮತ್ತು ಖಾರದ ಚರುಮುರಿ ತಿನ್ನುವುದು. ಜೊತೆಗೆ ಸುಮ್ಮಗೆ ಅಂಗಡಿ, ಅಂಗಡಿ ಸುತ್ತುವುದು. ಆ ಗದ್ದಲ, ಆ ಧೂಳು, ಜನರೇಟರ್ ಸದ್ದು, ಗ್ಯಾಸ್ಲೈಟ್ ಪರಿಮಳ, ‘ಬಚ್ಚಂಗಾಯಿ...ಬಚ್ಚಂಗಾಯಿ’ ‘ಬಲೆ ಬಲೆ ಬಲೆ’ ಹೀಗೆ ಎಲ್ಲ ಕರೆಗಳು ಸಮ್ಮಿಶ್ರವಾಗಿ ವಿಚಿತ್ರವಾದ ಶಂಖನಾದದ ರೂಪ ತಾಳಿ ನನ್ನ ಎದೆಯಾಳಕ್ಕೆ ಇಳಿಯುತ್ತಿತ್ತು. ಇಂದಿಗೂ ಆ ಝೇಂಕಾರ ನನ್ನಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಇದೆ ಎಂದು ಅನ್ನಿಸುತ್ತದೆ.
ಮುಗೇರಡ್ಕ ಜಾತ್ರೆ ಆರಂಭವಾಗುತ್ತಿದ್ದ ಹಾಗೆಯೇ ನಮ್ಮೂರಿನ ಹಲವು ಬ್ಯಾರಿ ಮುಸ್ಲಿಮರು ವ್ಯಾಪಾರಕ್ಕೆ ಸಿದ್ಧರಾಗುತ್ತಿದ್ದರು. ಮುಖ್ಯವಾಗಿ ಹೊಟೇಲುಗಳನ್ನು ಇಡುತ್ತಿದ್ದರು. ಉಳಿದಂತೆ, ಗಲ್ಲಂಗಡಿ, ಆಮ್ಲೆಟ್ ಅಂಗಡಿ, ಬಲೂನು ವ್ಯಾಪಾರ...ಹೀಗೆ ಸುಮಾರು ಐದು ದಿನಗಳ ಕಾಲದ ರಾತ್ರಿಯ ವ್ಯಾಪಾರಕ್ಕಾಗಿ ವರ್ಷವಿಡೀ ನಿರೀಕ್ಷೆಯಲ್ಲಿರುವವರಿದ್ದಾರೆ. ಬೆಂಚು, ಟೇಬಲ್, ಹಂಡೆ, ಬಾಣಲೆಗಳು ದೋಣಿಯಲ್ಲಿ ಸಾಗಲ್ಪಡುತ್ತಿದ್ದವು. ತಟ್ಟಿ, ಮಡಲುಗಳ ಮೂಲಕ ತಾತ್ಕಾಲಿಕ ಹೊಟೇಲುಗಳನ್ನು ನಿರ್ಮಾಣ ಮಾಡುತ್ತಿದ್ದರು. ಬ್ಯಾರಿಗಳ ಚಿಕನ್ ಸುಕ್ಕ, ಬಂಗಡೆ ಫ್ರೈಗೆ ಜಾತ್ರೆಯಲ್ಲಿ ವಿಶೇಷ ಬೇಡಿಕೆ ಇತ್ತು. ಬ್ಯಾರಿಗಳು ಈ ಜಾತ್ರೆಯಲ್ಲಿ ಕೈತುಂಬಾ ಸಂಪಾದಿಸುತ್ತಿದ್ದರು. ಜಾತ್ರೆ ಆರಂಭವಾಗುತ್ತಿದ್ದ ಹಾಗೆಯೇ ಕೆಲವು ಹುಡುಗರೂ ವ್ಯಾಪಾರಕ್ಕಿಳಿಯುತ್ತಿದ್ದರು. ಬೀಡಿ ಸಿಗರೇಟುಗಳಿಂದ ಹಿಡಿದು, ಪಾಯಸ, ಟೀ, ಇತ್ಯಾದಿ ಇತ್ಯಾದಿ ಗೂಡಂಗಡಿಗಳನ್ನಿಟ್ಟು ತಮ್ಮ ಪಾಕೆಟ್ ಮನಿಗೆ ಬೇಕಾದಷ್ಟು ಸಂಗ್ರಹಿಸುತ್ತಿದ್ದರು. ಮುಗೇರಡ್ಕ ಜಾತ್ರೆಯೆನ್ನುವುದು ದೈವಗಳ ನೇಮ ಉತ್ಸವವಾಗಿದ್ದರೂ, ಕೋಳಿ ಕಟ್ಟ ಹಾಗೂ ಸಂತೆಯ ಮೂಲಕ ಎಲ್ಲ ಜಾತಿ, ವರ್ಗಗಳನ್ನು ಒಂದು ಮಾಡುತ್ತಾ ಬರುತ್ತಿತ್ತು.
ವಿಷಾದನೀಯ ಸಂಗತಿಯೆಂದರೆ, ಇಂದು ಎಲ್ಲ ಪತ್ರಿಕೆಗಳಲ್ಲಿ ಮುಗೇರಡ್ಕ ಜಾತ್ರೆಯ ಗದ್ದಲ ವರದಿಯಾಗಿದೆ. ಮುಗೇರಡ್ಕದಲ್ಲಿ ಸಂಘಪರಿವಾರದ ಜಿರಳೆಗಳು ತಮ್ಮ ಮೀಸೆಯನ್ನು ಒಳಗೆ ನುಗ್ಗಿಸಿವೆ ಮಾತ್ರವಲ್ಲ, ಈವರೆಗೆ ಸೌಹಾರ್ದದಿಂದ ನಡೆದುಕೊಂಡು ಬರುತ್ತಿದ್ದ ಜಾತ್ರೆಯ ಸೊಬಗಿಗೆೆ ಈ ದುಷ್ಕರ್ಮಿಗಳು ಕಳಂಕವನ್ನು ಎಸಗಿದ್ದಾರೆ. ಜಾತ್ರೆ ನೋಡಲು ಬಂದ ಇಬ್ಬರು ಮುಸ್ಲಿಮ್ ಹುಡುಗರನ್ನು ಚಿನ್ನ ಕದ್ದಿದ್ದಾರೆ ಎಂದು ಆರೋಪಿಸಿ ಅವರಿಗೆ ಥಳಿಸಿದ್ದೇ ಅಲ್ಲದೆ, ಮಧ್ಯ ಪ್ರವೇಶಿಸಿದ ಪೊಲೀಸರಿಗೂ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಇದೇ ಸಂದರ್ಭವನ್ನು ಬಳಸಿ ಬ್ಯಾರಿಗಳ ಅಂಗಡಿಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಬಚ್ಚಂಗಾಯಿಗಳು ಸೇರಿದಂತೆ ಅಂಗಡಿ ಸಾಮಾನುಗಳನ್ನು ದೋಚಿದ್ದಾರೆ. ನಾಶ, ನಷ್ಟಗಳನ್ನು ಕಂಡು ಬ್ಯಾರಿಗಳು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ.
ಬ್ಯಾರಿ ಮುಸಲ್ಮಾನರು ಮುಗೇರಡ್ಕ ಜಾತ್ರೆಯಲ್ಲಿ ಅಂಗಡಿ ಇಡುವುದರ ಕುರಿತಂತೆ ಸುಮಾರು ಆರು ವರ್ಷಗಳಿಂದ ಇಲ್ಲಿನ ಕೆಲವು ಸಂಘಪರಿವಾರದ ನಾಯಕರು ತಕರಾರು ಎತ್ತುತ್ತಲೇ ಬಂದಿದ್ದಾರೆ. ಆದರೆ ಮುಗೇರಡ್ಕ ದೈವಸ್ಥಾನದ ಆಡಳಿತ ಮಂಡಳಿ ಮಾತ್ರ ಈ ಸಂಘಪರಿವಾರವನ್ನು ನಿರ್ಲಕ್ಷಿಸುತ್ತಾ ಬಂದಿದೆ. ‘‘ತಲೆ ತಲಾಂತರಗಳಿಂದ ಬ್ಯಾರಿಗಳು ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಅದಕ್ಕೆ ಅಡ್ಡಿ ಪಡಿಸುವುದು ಸಾಧ್ಯವೇ ಇಲ್ಲ’’ ಎಂದು ದೈವಸ್ಥಾನದ ಆಡಳಿತ ಮಂಡಳಿ ಖಡಾ ಖಂಡಿತವಾಗಿ ನುಡಿದೆ. ಆದುದರಿಂದ ಇಲ್ಲಿನ ಪುಡಿ ಸಂಘಪರಿವಾರದ ಕಾರ್ಯಕರ್ತರು ಸಂದರ್ಭಕ್ಕಾಗಿ ಕಾಯುತ್ತ ಇದ್ದರು. ಆಗಾಗ ಸಣ್ಣ ಪುಟ್ಟ ಕಿಡಿ ಹೊತ್ತಿಸಲು ಪ್ರಯತ್ನಿಸಿದರೂ, ದೈವಸ್ಥಾನದ ಮುಖಂಡರಿಂದಾಗಿ ಅದು ಅಲ್ಲಿಗೇ ನಂದಿ ಹೋಗಿತ್ತು.
ಎರಡು ದಿನಗಳ ಹಿಂದೆ ಉಪ್ಪಿನಂಗಡಿಯಲ್ಲಿ ಸಂಘಪರಿವಾರದ ಮುಖಂಡ ಪ್ರಭಾಕರ ಭಟ್ ಹಚ್ಚಿ ಹೋದ ಬೆಂಕಿಯನ್ನು, ಮುಗೇರಡ್ಕ ಜಾತ್ರೆಯೊಳಗೆ ಹಬ್ಬಿಸುವಲ್ಲಿ ಕಿಡಿಗೇಡಿಗಳು ಯಶಸ್ವಿಯಾಗಿದ್ದಾರೆ. ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮ ಬೀಡು. ಸ್ಥಳೀಯ ಪುತ್ತೂರಿನಲ್ಲಿ ಕೋಮುಗಲಭೆ ಹೊತ್ತಿ ಉರಿದರೂ, ಅದು ಉಪ್ಪಿನಂಗಡಿಯನ್ನು ಯಾವತ್ತೂ ಸುಟ್ಟಿರಲಿಲ್ಲ. ಉಪ್ಪಿನಂಗಡಿ ಎಂಬ ಊರಿನ ಸಾಂಸ್ಕೃತಿಕ ಬದುಕೂ ಅದಕ್ಕೆ ಕಾರಣವಾಗಿರಬಹುದು. ಇದು ಸ್ಥಳೀಯ ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ನುಂಗಲಾರದ ತುತ್ತಾಗಿತ್ತು. ಕೆಲವು ತಿಂಗಳ ಹಿಂದೆ ಈ ಕಲ್ಲಡ್ಕ ಪ್ರಭಾಕರ ಭಟ್ಟರ ನೇತೃತ್ವದ ಶಾಲೆಯೊಂದು ಉಪ್ಪಿನಂಗಡಿಯಲ್ಲೂ ಸ್ಥಾಪನೆಯಾಯಿತು. ಅಂದ ಮೇಲೆ ಭಟ್ಟರು ಬಾರಿ ಬಾರಿ ಉಪ್ಪಿನಂಗಡಿಗೆ ಬರುವುದೂ ಅನಿವಾರ್ಯ. ಶಾಲೆ ಉದ್ಧಾರವಾಗಬೇಕಾದರೆ ಉಪ್ಪಿನಂಗಡಿಯ ಸೌಹಾರ್ದಕ್ಕೆ ಹುಳಿ ಹಿಂಡಲೇ ಬೇಕು. ಈ ಊರನ್ನು ಕಾಪಾಡಿಕೊಂಡು ಬಂದಿರುವ ಸಾಂಸ್ಕೃತಿಕ , ಸೌಹಾರ್ದ ಪರಂಪರೆಯನ್ನು ನಾಶ ಮಾಡಬೇಕು. ಅದರ ಮೊದಲ ಪ್ರಯತ್ನ ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಪ್ರಭಾಕರ ಭಟ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದೀಗ ಉಪ್ಪಿನಂಗಡಿಯ ಮೂಲಕವಾಗಿ ಕೋಮುವಿಷ ಮುಗೇರಡ್ಕ ಜಾತ್ರೆಗೂ ತಲುಪಿತು. ನಾಲ್ವರು ವಿದ್ಯಾರ್ಥಿಗಳು ಅದರಲ್ಲಿ ಮೂವರು ಮುಸ್ಲಿಮರು ಮುಗೇರಡ್ಕ ಜಾತ್ರೆಗೆ ಹೋಗಿದ್ದಾರೆ. ಸಂದರ್ಭವನ್ನು ಬಳಸಿಕೊಂಡು ಕೆಲ ದುಷ್ಕರ್ಮಿಗಳು ಇಬ್ಬರು ಮುಸ್ಲಿಮ್ ಹುಡುಗರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ ಮಾತ್ರವಲ್ಲ, ಅವರ ತಲೆಗೆ ಸರ ಕಳ್ಳತನದ ಆರೋಪ ಹೊರಿಸಿದ್ದಾರೆ. ಈ ಹುಡುಗರ ಜೊತೆಗಿದ್ದ ಮತ್ತೊಬ್ಬ ಮುಸ್ಲಿಮೇತರ ಹುಡುಗ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ಹುಡುಗರನ್ನು ಒಪ್ಪಿಸಲು ಹೇಳಿದರೂ ಅದಕ್ಕೆ ಸಂಘಪರಿವಾರ ತಕರಾರು ತೆಗೆದಿದ್ದಾರೆ. ಪೊಲೀಸರು ಬಲವಂತವಾಗಿ ಹುಡುಗರನ್ನು ವಶಕ್ಕೆ ತೆಗೆದುಕೊಂಡಾಗ ಸಂಘಪರಿವಾರ ಪೂರ್ವ ನಿರ್ಧಾರದಂತೆ ದಾಂಧಲೆಗೆ ತೊಡಗಿದೆ ಪೊಲೀಸ್ ಜೀವುಗಳ ಮೇಲೆ ಕಲ್ಲುತೂರಾಟ ನಡೆಸಿವೆ.. ಬ್ಯಾರಿ ಮುಸಲ್ಮಾರ ಅಂಗಡಿಯನ್ನೇ ಗುರಿಯಾಗಿಟ್ಟು ದಾಂಧಲೆ ನಡೆದಿದೆ.
ಜಾತಿ, ಧರ್ಮ, ವರ್ಗ ಎಲ್ಲವನ್ನೂ ಮೀರಿದ ಒಂದು ಪರಂಪರೆಯನ್ನು ಕಟ್ಟಿ ಬೆಳೆಸಿದ ಮುಗೇರಡ್ಕ ಜಾತ್ರೆಯಲ್ಲಿ ನಡೆದ ಗದ್ದಲ ವಿಷಾದನೀಯವಾದುದು. ಮುಂದಿನ ದಿನಗಳಲ್ಲಿ ಈ ಜಾತ್ರೆಗೆ ಬ್ಯಾರಿ ಮುಸ್ಲಿಂರಾಗಲಿ, ವ್ಯಾಪಾರಿಗಳಾಗಲಿ ಹೋಗುವುದು ತೀರಾ ಕಷ್ಟ. ಎಲ್ಲ ಜಾತಿ ವರ್ಗಗಳಿಲ್ಲದ ಮುಗೇರಡ್ಕ ಜಾತ್ರೆ ಮತ್ತೆ ಹಿಂದಿನ ವೈಭವನ್ನು ಪಡೆದುಕೊಳ್ಳುವುದು ಅಸಾಧ್ಯ.
No comments:
Post a Comment