Thursday, January 19, 2012

‘ಅವ್ವ’ನ ಮಕ್ಕಳು....

ಈ ಲೇಖನವನ್ನು ನಾನು ಬರೆದದ್ದು ಕವಿತಾ ಲಂಕೇಶ್ ಅವರ ‘ಅವ್ವ’ ಚಿತ್ರ ಬಿಡುಗಡೆಯಾದಾಗ. ಬಹುಶಃ ಫೆಬ್ರವರಿ 15, 2008ರಲ್ಲಿ.

ಕವಿತಾ ಲಂಕೇಶ್‌ರ ‘ಅವ್ವ’ ಚಿತ್ರದಲ್ಲಿ ಶೃತಿ ತನ್ನ ಕೋಮಲ, ಮುಗ್ಧ ಮುಖದಲ್ಲಿ ‘ರಂಗವ್ವ’ನನ್ನು ಆವಾಹಿಸಲು ಪಡುತ್ತಿರುವ ಶ್ರಮವನ್ನು ನೋಡುತ್ತಿದ್ದಾಗ ನನ್ನಲ್ಲೊಂದು ತುಂಟ ಆಲೋಚನೆ ಹುಟ್ಟಿತು. ಲಂಕೇಶರೇನಾದರೂ ಬದುಕಿದಿದ್ದರೆ ಗಯ್ಯಿಳಿ, ಜಗಳಗಂಟಿ ‘ರಂಗವ್ವ’ನ ಪಾತ್ರಕ್ಕೆ ಯಾರನ್ನು ಆರಿಸುತ್ತಿದ್ದರು? ಸಂಶಯವಿಲ್ಲ. ಲಂಕೇಶರು ಆ ಪಾತ್ರಕ್ಕೆ ಗೌರಿ ಲಂಕೇಶರನ್ನೇ ಆಯ್ಕೆ ಮಾಡುತ್ತಿದ್ದರು. ಸದಾ ಪತ್ರಿಕೆ, ಹೋರಾಟ ಎಂದು ಸಂಘಪರಿವಾರದೊಂದಿಗೆ, ಭ್ರಷ್ಟ ವ್ಯವಸ್ಥೆಯೊಂದಿಗೆ ಜಗಳ ಕಾಯುತ್ತಾ, ಕೋಮುವಾದ, ಮೂಲಭೂತವಾದವನ್ನು ಕಟುವಾಗಿ ಖಂಡಿಸುತ್ತಾ, ಕೋರ್ಟು, ಕಚೇರಿ ಎಂದು ಅಲೆಯುತ್ತಿರುವ ಈ ಕನ್ನಡದ ‘ಹೆಣ್ಣು ಕರುಳು’ ಮುಸ್ಸಂಜೆಯ ಕಥಾ ಪ್ರಸಂಗದ ‘ರಂಗವ್ವ’ನನ್ನು ಎಲ್ಲೋ ಹೋಲುತ್ತದಲ್ಲ ಎಂದೆನಿಸಿತು ನನಗೆ. ನನ್ನ ಆ ತಕ್ಷಣದ ಭಾವುಕತೆಯೂ ಅದಕ್ಕೆ ಕಾರಣ ಇರಬಹುದು.

ಆದರೆ ಒಂದಂತೂ ಸತ್ಯ. ಕರ್ನಾಟಕದ ವರ್ತಮಾನ ತನ್ನೊಳಗಿನ ಹೆಣ್ಣು ಮನಸ್ಸನ್ನು ಕಳೆದುಕೊಳ್ಳುತ್ತಿದೆ. ಇನ್ನೊಬ್ಬರಿಗಾಗಿ ಕಣ್ಣೀರಿಡುವ, ಮಾಡಿದ ತಪ್ಪಿಗೆ ಲಜ್ಜೆ ಪಡುವ, ಅನ್ಯಾಯಕ್ಕೆ ಮರುಗುವ, ಅದನ್ನು ಪ್ರತಿಭಟಿಸುವ ಹೆಣ್ಣು ಗುಣವನ್ನು ಈ ನಾಡು ಕಳೆದುಕೊಳ್ಳುತ್ತಿರುವ ಪರಿಣಾಮವನ್ನು ನಾವು ಉಣ್ಣುತ್ತಿದ್ದೇವೆ. ರಾಜಕೀಯ, ಧರ್ಮ, ಪತ್ರಿಕೋದ್ಯಮ ಹೀಗೆ ಎಲ್ಲವೂ ನಿಧಾನಕ್ಕೆ ಕುಲಗೆಡುತ್ತಿವೆ. ಗಂಡಿನ ಸ್ವಾರ್ಥ, ದುರಭಿಮಾನ, ಕೌರ್ಯದ ಝಳದಿಂದ ನಮ್ಮ ವರ್ತಮಾನ ಬಿಳಿಚಿಕೊಂಡಿದೆ. ತಾಯ್ತನದ ಮನಸ್ಸುಳ್ಳ ಪತ್ರಕರ್ತರ, ರಾಜಕಾರಣಿಗಳ, ಸಾಹಿತಿಗಳ, ಚಿಂತಕರ, ಹೋರಾಟಗಾರರ ಕೊರತೆ ಕರ್ನಾಟಕವನ್ನು ದುರಂತದೆಡೆಗೆ ತಳ್ಳುತ್ತಿದೆ.

ಯಾವುದೇ ಹೋರಾಟ ಅರಳುವುದು ‘ತಾಯಿ’ ಮನಸ್ಸಿನಿಂದ. ಗಾಂಧೀಜಿಯ ಒಳಗೊಬ್ಬ ಹೆಣ್ಣಿದ್ದಳು. ಅವರ ಹೋರಾಟ ಆ ಕಾರಣಕ್ಕಾಗಿಯೇ ಭಗತ್‌ಸಿಂಗ್, ಸುಭಾಶ್‌ಚಂದ್ರ ಭೋಸರಂತೆ ಭಗ್ಗನೆ ಉರಿದು ಮುಗಿದು ಹೋಗಲಿಲ್ಲ. ಅದು ಗಂಗಾ ನದಿಯಂತೆ ಉದ್ದಗಲಕ್ಕೆ ಹರಿಯಿತು. ದೇಶವನ್ನಿಡೀ ವ್ಯಾಪಿಸಿ ಸಮೃದ್ಧವಾಯಿತು. ಪಿ. ಲಂಕೇಶರನ್ನೇ ನೆನೆಯೋಣ. ಅವರ ಬರಹ, ಅವರ ಪತ್ರಿಕೆ ಯಾಕೆ ಸಮೃದ್ಧವಾಗಿ ಮೂಡಿ ಬರುತ್ತಿತ್ತೆಂದರೆ ಅವರಲ್ಲೊಬ್ಬ ‘ಹೆಣ್ಣು’ ನದಿಯಂತೆ ಹರಿಯುತ್ತಿದ್ದಳು. ತನ್ನೊಳಗಿರುವ ಗಂಡಿನ ದಾರ್ಷ್ಟ, ದುರಹಂಕಾರಕ್ಕೆ ಸಿಕ್ಕಿ ಸೃಜನಶೀಲತೆ ಬರಡಾಗಿ ಬಿಡುವ ಭಯ ಅವರನ್ನು, ಜೀವನದ ಕೊನೆಯ ಹೊತ್ತಿನಲ್ಲಿ ಅತಿಯಾಗಿ ಕಾಡುತ್ತಿತ್ತು. ಆ ಕಾರಣದಿಂದ ‘ನಿಮ್ಮಿ’ ಎನ್ನುವ ಕಾಲ್ಪನಿಕ ಹೆಣ್ಣು ಮಗಳ ಹೆಸರಿನಲ್ಲಿ ಹೆಣ್ಣಿನ ಮನದಾಳದ ಕಾತರಗಳನ್ನು ಬರೆಯತೊಡಗಿದರು. ಲಂಕೇಶರನ್ನು ವೈದೇಹಿ ‘ಗೆಳತಿ’ ಎಂದು ಕರೆಯುತ್ತಾರೆ. ಅಂಕೇಶ್ ತೀರಿ ಹೋದ ಸಂದರ್ಭದಲ್ಲಿ ವೈದೇಹಿ ಲಂಕೇಶರೊಳಗಿನ ಹೆಣ್ಣಿನ ಕುರಿತಂತೆ ಹೃದ್ಯ ಲೇಖನವೊಂದನ್ನು ಬರೆದಿದ್ದರು.
ಈಗಲೂ ಅಷ್ಟೇ ಲಂಕೇಶರ ‘ಪ್ರೀತಿಯ ರಾಮು’ ಖೋಡೆ, ಉಪೇಂದ್ರ, ಖೇಣಿ, ಬಾಲಿವುಡ್ ಎಂದು ‘ಅಪಾ ಪೋಲಿ’ ಬಿದ್ದಿರುವಾಗ ಗೌರಿ ಲಂಕೇಶ್ ಮತ್ತು ಕವಿತಾ ಲಂಕೇಶ್ ‘ರಂಗವ್ವ’ನಂತೆ ಹಲ್ಲು ಕಚ್ಚಿ ಲಂಕೇಶರ ನೆನಪುಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿದ್ದಾರೆ. ರಂಗವ್ವ ತನ್ನ ಮಗಳು ‘ಸಾವಂತ್ರಿ’ಯನ್ನು ಕಣ್ಣಿಟ್ಟು ಕಾಯುವಂತೆ ಇವರು ಲಂಕೇಶ್ ನೆನಪುಗಳನ್ನು ಕಾಯುತ್ತಿದ್ದಾರೆ.

ಇಡೀ ಕರ್ನಾಟಕ ‘ಮುಸ್ಸಂಜೆ ಕಥಾ ಪ್ರಸಂಗ’ದ ಹಳ್ಳಿಯಂತೆ ವ್ಯಭಿಚಾರ, ರಾಜಕಾರಣ, ಜಾತಿ ಇತ್ಯಾದಿಗಳಿಂದ ಕುಲಗೆಟ್ಟು ಹೋಗುತ್ತಿರುವ ದಿನಗಳಲ್ಲಿ ಕವಿತಾ ಲಂಕೇಶ್ ‘ಮುಸ್ಸಂಜೆ ಕಥಾಪ್ರಸಂಗ’ ಕಾದಂಬರಿಯನ್ನು ಸಿನಿಮಾ ಮಾಡಲು ಹೊರಟದ್ದು ಅರ್ಥ ಪೂರ್ಣವಾಗಿಯೇ ಇದೆ. ಆದರೆ ಅದಕ್ಕೆ ಬೇಕಾದ ಸಿದ್ಧತೆ ಎಲ್ಲಕ್ಕಿಂತ ಮುಖ್ಯವಾಗಿ ಒಂದು ದೊಡ್ಡ ಕತೆಯ ಕಣಜದಿಂದ ತನಗೆ ಬೇಕಾದ ಕಾಳುಗಳನ್ನು ಆರಿಸಿ ಅದನ್ನು ಒಂದು ದಾರದಲ್ಲಿ ಸರಾಗವಾಗಿ ಪೋಣಿಸುವ ಚಾಕಚಕ್ಯತೆಯ ಕೊರತೆ ಒಟ್ಟು ಚಿತ್ರವನ್ನು ತುಸು ಮಂಕಾಗಿಸಿದೆ.
 ***
‘ಮುಸ್ಸಂಜೆಯ ಕಥಾ ಪ್ರಸಂಗ’ ಕಾದಂಬರಿಯನ್ನು ಕವಿತಾ ಲಂಕೇಶ್ ಎತ್ತಿಕೊಂಡಾಗಲೇ, ನಿರ್ದೇಶಕಿಯಾಗಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದರು. ಚಿತ್ರದಲ್ಲಿ ಮಂಜ ಮತ್ತು ಸಾವಂತ್ರಿಯ ಪ್ರೀತಿಯನ್ನು ಮುಖ್ಯವಸ್ತುವನ್ನಾಗಿ ಮಾಡಿಕೊಂಡಿದ್ದೇನೆಂದು ಈಗಾಗಲೇ ಮಾಧ್ಯಮಗಳಲ್ಲಿ ಹೇಳಿದ್ದರೂ, ಚಿತ್ರದಲ್ಲಿ ಮಾತ್ರ ಇಡೀ ಕಾದಂಬರಿಯನ್ನೇ ಎರಡೂವರೆ ಗಂಟೆಗಳ ‘ರೀಲಿ’ನೊಳಗೆ ತುಂಬಲು ಪ್ರಯತ್ನಿಸಿದ್ದಾರೆ. ಕಾದಂಬರಿ ಬೇರೆ. ಸಿನಿಮಾ ಬೇರೆ. ಇಲ್ಲಿ ಲಂಕೇಶ್ ಮುಂದೆ ಕವಿತಾ ಲಂಕೇಶ್‌ರ ಮಿತಿ ಕೆಲಸ ಮಾಡಿದಂತೆಯೇ, ಕಾದಂಬರಿಯ ಅನಂತ ಸಾಧ್ಯತೆಯ ಮುಂದೆ ದೃಶ್ಯ ಮಾಧ್ಯಮದ ಮಿತಿಯೂ ಕೆಲಸ ಮಾಡಿದೆ. ಕಾದಂಬರಿಯ ಪಾತ್ರಗಳಿಗೆ ಓದುಗನ ಕಲ್ಪನೆಯ ವಿಶಾಲ ಪರದೆಯಲ್ಲಿ ಬೇಕಾದಂತೆ ಆಕಾರ ಪಡೆದುಕೊಳ್ಳುವ ಅವಕಾಶವಿದೆ. ಸಿನಿಮಾದ ಪರದೆಗಳಿಗೆ ನಿರ್ದಿಷ್ಟ ಅಳತೆಗಳಿವೆ. ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಸಿನಿಮಾ ಆದಾಗ ಇದೇ ನಿರಾಸೆ ಕಾದಂಬರಿಯ ಅಭಿಮಾನಿಗಳನ್ನು ಕಾಡಿತ್ತು. ಅದು ನಿರ್ದೇಶಕನ ತಪ್ಪಲ್ಲ. ಒಂದು ಕಾದಂಬರಿಯ ಅನುಭವವನ್ನು ಒಂದು ಸಿನಿಮಾ ಒಂದೇ ಕ್ಷಣದಲ್ಲಿ ಧ್ವಂಸ ಮಾಡಬಲ್ಲುದು.

ಆದರೆ ಅಂತಹ ಅಪಾಯ ‘ಅವ್ವ’ ಚಿತ್ರದಲ್ಲಿಲ್ಲ. ಆ ಮಟ್ಟಿಗೆ ಸಿನಿಮಾ ಗೆದ್ದಿದೆ. ಆದರೆ ಕವಿತಾ ಲಂಕೇಶರ ಅಭಿಮಾನಿಗಳಿಗೆ ಚಿತ್ರ ನಿರಾಸೆ ತರುತ್ತದೆ. ಕವಿತಾ ಲಂಕೇಶ್ ‘ಅವ್ವ’ ಚಿತ್ರದಲ್ಲಿ ‘ಮಂಜ-ಸಾವಂತ್ರಿ’ ಕತೆಯನ್ನು ಸಲೀಸಾಗಿ ನಿರೂಪಿಸುತ್ತಾ ಹೋಗುವಲ್ಲಿ ಸೋಲುತ್ತಾರೆ. ಬಿಡಿ ಬಿಡಿಯಾದ ಚಿತ್ರಗಳು ಒಂದು ನಿರ್ದಿಷ್ಟ ದಾರಿಯಲ್ಲಿ ಚಲಿಸುವುದಿಲ್ಲ. ಕಾದಂಬರಿಯ ಹ್ಯಾಂಗೋವರ್‌ನಿಂದ ಹೊರಬಂದು, ಮಂಜ ಮತ್ತು ಸಾವಂತ್ರಿಯ ಪ್ರೀತಿಯ ಲೋಕವನ್ನು ಅತ್ಯದ್ಭುತವಾಗಿ ಕಟ್ಟುವ ಸಾಧ್ಯತೆ ನಿರ್ದೇಶಕಿ ಕವಿತಾ ಮುಂದಿತ್ತು. ವಿಜಯ್‌ನಂತಹ ನಟನನ್ನು ಕೈಯಲ್ಲಿಟ್ಟುಕೊಂಡು ಅದನ್ನು ಸಾಧಿಸಲಾಗಲಿಲ್ಲವೆಂದರೆ, ಅದಕ್ಕೆ ಕಾರಣ ಚಿತ್ರದುದ್ದಕ್ಕೂ ನಿರ್ದೇಶಕಿಯನ್ನು ಕಾಡಿದ ಲಂಕೇಶ್ ನೆರಳು. ಅದರಿಂದಾಗಿ ಅತ್ತ ಕವಿತಾರ ಚಿತ್ರವೂ ಆಗದೆ, ಇತ್ತ ಲಂಕೇಶರ ಕಾದಂಬರಿಯೂ ಆಗದೆ ಪ್ರೇಕ್ಷಕರನ್ನು ನಡುಗಡಲಲ್ಲಿ ಕೈ ಬಿಟ್ಟುಬಿಡುತ್ತದೆ. ಸೆನ್ಸಾರ್ ಬೋರ್ಡ್‌ನ ‘ಎ’ ಸರ್ಟಿಫೀಕೇಟ್ ಮತ್ತು ನಟ ವಿಜಯ್‌ನನ್ನು ತಲೆಯಲ್ಲಿ ತುಂಬಿಕೊಂಡು ಒಂದು ತುಂಟ, ತುಡುಗು ಪ್ರೀತಿ ಪ್ರೇಮದ ಅನುಭವವನ್ನು ತಮ್ಮದನ್ನಾಗಿಸಿಕೊಳ್ಳಲು ಬಂದವರಿಗೆ ಚಿತ್ರ ತೀರಾ ನಿರಾಸೆಯನ್ನು ಕೊಡುವ ಸಾಧ್ಯತೆಯಿದೆ. ಆದರೂ ಚಿತ್ರ ಮಂದರದಿಂದ ಹೊರಬೀಳುವಾಗ ಸಾವಂತ್ರಿಯ ಪಾತ್ರವನ್ನು ಮಾಡಿದ ನಟಿಯ ಕೆನ್ನೆಯ ಗುಳಿ ಒಂದು ಹಿತವಾದ ಅನುಭವವಾಗಿ ಪ್ರೇಕ್ಷಕನ ಮನದಾಳದಲ್ಲಿ ಸುಳಿಸುಳಿಯಾಗಿ ಸುತ್ತುತ್ತದೆ. ಹಾಗೆಯೇ ‘ಅವ್ವ’ ರಂಗವ್ವ ಸೇರಿದಂತೆ ಚಿತ್ರದ ವಿವಿಧ ಪಾತ್ರಗಳ ಬಾಯಿಂದ ಹೊರ ಬೀಳುವ ಬೈಗಳು ಪದಗಳು ಒಂದು ಸಂಗೀತದಂತೆ ಎದೆಯೊಳಗೆ ಮಾರ್ದನಿಯನ್ನು ಪಡೆಯುತ್ತದೆ. ***
  ಲಂಕೇಶರ ‘ಅವ್ವ’ ಒಂದು ಸಮೃದ್ಧ ಪಾತ್ರ. ಲಂಕೇಶರು ತನ್ನ ತಾಯಿಯನ್ನು ‘ಬನದ ಕರಡಿ’ಗೆ ಹೋಲಿಸುತ್ತಾರೆ. ಆದರೆ ಕವಿತಾ ಲಂಕೇಶ್ ಒಳ್ಳೇ ದೇಸೀ ಹಸುವಿಗೆ ಮೇಕಪ್ ಮಾಡಿ ಚಿತ್ರದಲ್ಲಿ ಅದನ್ನು ‘ಕರಡಿ’ಯಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ‘ರಂಗವ್ವ’ನ ಪಾತ್ರಕ್ಕೆ ಶೃತಿಯನ್ನು ಆಯ್ಕೆ ಮಾಡಿರುವುದೇ ಮೊದಲ ತಪ್ಪು. ಶೃತಿಯ ಸಾತ್ವಿಕ ಮುಖದಲ್ಲಿ ರಂಗವ್ವನ ಸಿಟ್ಟು, ಆಕ್ರೋಶ, ಅಸಹಾಯಕತೆ, ಪ್ರತಿಭಟನೆ ತಾಳೆ ಪಡೆಯುವುದೇ ಇಲ್ಲ. ಮುಖದಲ್ಲಿ ಒಂದು ಸಕ್ಕೂ ಇಲ್ಲದ ‘ಶೃತಿ’ ಯಾಕೋ ‘ಅವ್ವ’ ಆಗಿ ಇಳಿಯುವುದಿಲ್ಲ. ಶೃತಿ ಒಪ್ಪಿಸುವ ಬೈಗಳೇನೋ ಪಸಂದಾಗಿಯೇ ಇದೆ. ಆದರೆ ಅದು ‘ಅವ್ವ’ನ ಒಡಲ ಬೆಂಕಿಯ ಕಿಡಿಗಳಂತೆ ಹೊರ ನೆಗೆದಿದ್ದರೆ ಚಿತ್ರಕ್ಕೆ ಇನ್ನಷ್ಟು ಪ್ರಯೋಜನವಾಗುತ್ತಿತ್ತು. ಈ ಕಾರಣದಿಂದಲೇ ‘ಅವ್ವ’ನನ್ನು ಮೀರಿ ರಂಗಾಯಣ ರಘು ಚಿತ್ರದಲ್ಲಿ ಬೆಳೆಯುತ್ತಾರೆ. ಚಿತ್ರದಲ್ಲೇನೋ ಭರ್ಮಣ್ಣನ ವಿರುದ್ಧ ರಂಗವ್ವ ಗೆಲ್ಲುತ್ತಾಳೆ. ಆದರೆ ಪ್ರೇಕ್ಷಕರ ಮನದಲ್ಲಿ ಭರ್ಮಣ್ಣ ಗೆಲ್ಲುತ್ತಾನೆ. ರಂಗವ್ವ ಸೋಲುತ್ತಾಳೆ.
                ***
ಕವಿತಾ ಲಂಕೇಶ್ ಕನ್ನಡದ ಪ್ರತಿಭಾವಂತ ನಿರ್ದೇಶಕಿ. ಚಿತ್ರಲೋಕದ ಕಮರ್ಶಿಯಲ್ ನರ ನಾಡಿಯನ್ನು ಅರ್ಥ ಮಾಡಿಕೊಂಡು ಚಿತ್ರ ಮಾಡಬಲ್ಲರು ಕವಿತಾ. ಅವರು ನಿರ್ದೇಶಿಸಿದ ‘ಪ್ರೀತಿ, ಪ್ರೇಮ, ಪ್ರಣಯ’ ಒಂದು ಉತ್ತಮ, ಸದಭಿರುಚಿಯ ಚಿತ್ರ, ದೇವೀರಿ ಕವಿತಾ ಲಂಕೇಶರ ಮೊತ್ತ ಮೊದಲ ಚಿತ್ರ ಎನ್ನುವ ಕಾರಣಕ್ಕಾಗಿ ಅದರ ಮೈನಸ್‌ಗಳು ಹಿಂದೆ ಪ್ಲಸ್‌ಗಳು ಎತ್ತಿ ಹಿಡಿಯಲ್ಪಟ್ಟವು. ದೇವಿರಿ ಚಿತ್ರ ಕವಿತಾ ಅವರ ಕುರಿತು ಅಪಾರ ನಿರೀಕ್ಷೆಗಳನ್ನು ಹುಟ್ಟಿಸಿ ಹಾಕಿತು. ಅದರ ಬೆನ್ನಿಗೇ ಬಂದ ‘ಪ್ರೀತಿ, ಪ್ರೇಮ, ಪ್ರಣಯ’ಯದ ಮೂಲಕ ಕವಿತಾ ನಿರೀಕ್ಷೆಗಳಿಗೆ ಅರ್ಹವಾಗಿಯೇ ಸ್ಪಂದಿಸಿದರು. ಭಾರತಿ ಮತ್ತು ಅನಂತ್‌ನಾಗ್ ಅವರನ್ನು ನಾಯಕಿ, ನಾಯಕರನ್ನಾಗಿಸಿ ಒಂದು ವಿಭಿನ್ನ ಕತೆಯನ್ನು ಅಷ್ಟೇ ಲವಲವಿಕೆಯಿಂದ ನಿರೂಪಿಸಿ ಗೆದ್ದರು. ಆದರೆ ‘ತನನಂ ತನನಂ’ನಲ್ಲಿ ಮತ್ತೆ ಎಡವಿದರು. ಕತೆಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ತೋರಿಸಿದ ಆತುರವೇ ಅವರನ್ನು ದಾರಿ ತಪ್ಪಿಸಿತು. ಮೂರು ಚಿತ್ರಗಳಿಗಾಗುವಂತಹ ಕತೆಯನ್ನು ತನ್ನ ಒಂದೇ ಚಿತ್ರದಲ್ಲಿ ತುಂಬಿಸಿ ‘ತನನಂ ತನನಂ’ ಹಾಡಲು ಹೋದರೆ ಇನ್ನೇನಾಗುತ್ತದೆ? ‘ಮಲಯ ಮಾರುತ’ ‘ರಂಗನಾಯಕಿ’ ಚಿತ್ರಗಳಿಗೆ ‘ಪ್ರೇಮ-ಪ್ರೀತಿ’ಯನ್ನು ಮಿಕ್ಸ್ ಮಾಡಿ ‘ಹೊಸರುಚಿ’ಯೆಂದು ಬಡಿಸಲಾಗಿತ್ತು. ನಾಯಕ (ಶ್ಯಾಮ್) ಮತ್ತು ಸಂಗೀತ ವಿದ್ವಾಂಸರ (ಗಿರೀಶ್ ಕಾರ್ನಾಡ್) ನಡುವಿನ ಆರಂಭದ ಮುಖಾಮುಖಿಯನ್ನೇ ಒಂದು ಅತ್ಯುತ್ತಮ ಚಿತ್ರವಾಗಿ ಮಾಡುವ ಅವಕಾಶ ಕವಿತಾ ಅವರಿಗಿತ್ತು. ಆದರೆ ಅದನ್ನವರು ಬಳಸಿಕೊಳ್ಳಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ‘ತನನಂ ತನನಂ’ ಕುರಿತಂತೆ ‘ಲಂಕೇಶ್’ನಲ್ಲಿ ವಾರಗಟ್ಟಲೇ ಸ್ವತಃ ಕವಿತಾ ಅವರೇ ಬರೆದದ್ದೂ ಚಿತ್ರದ ಕುರಿತಂತೆ ಅತಿ ನಿರೀಕ್ಷೆಯನ್ನು ಹುಟ್ಟಿಸಿ ಹಾಕಿತು. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಎನ್ನುವ ಗಾದೆ ಚಿತ್ರ ನೋಡಿದ ಬಳಿಕ ನೆನಪಾಯಿತು.

ಸರಳ ಕತೆ, ವಿಭಿನ್ನ ನಿರೂಪಣೆ ಇಷ್ಟರಲ್ಲೇ ಎಂತಹ ಸದಭಿರುಚಿಯ ಮನಸು ಮುಟ್ಟುವ ಚಿತ್ರ ತೆಗೆಯಬಹುದು ಎನ್ನುವುದಕ್ಕೆ ಕವಿತಾ ಅವರಿಗೆ ನೆರೆಯ ಮಲಯಾಳಂ ಚಿತ್ರಗಳು ಸ್ಫೂರ್ತಿಯಾಗಲಿ. ದೇವೀರಿ, ಅವ್ವನಂತಹ ಚಿತ್ರಗಳನ್ನು ನಿರ್ದೇಶಿಸಿದ ಸಾಹಸಿ ನಿರ್ದೇಶಕಿಯ ಅಗತ್ಯ ಗಾಂಧೀನಗರಕ್ಕಿದೆ. ಮಲಯಾಳಂನಲ್ಲಿ ಹೇಗೆ ಕಮರ್ಶಿಯಲ್ ಮತ್ತು ಕಲಾತ್ಮಕ ಚಿತ್ರಗಳ ನಡುವೆ ಒಂದು ಸಮನ್ವಯ ದಾರಿ ಸಿದ್ಧಗೊಂಡಿತೋ, ಅಂತಹದ್ದು ಕನ್ನಡದಲ್ಲೂ ಸಿದ್ಧಗೊಳ್ಳಬೇಕಾಗಿದೆ. ಪುಟ್ಟಣ್ಣ ಕಣಗಲ್ ಬಳಿಕ ಕನ್ನಡ ಚಿತ್ರರಂಗದಲ್ಲಿ ಹೆಂಗರುಳು ಕೆಲಸ ಮಾಡಿದ್ದು ತೀರ ಕಡಿಮೆ. ಕವಿತಾ ಈ ಕಾರಣಕ್ಕೆ ಕನ್ನಡ ಚಿತ್ರರಂಗಕ್ಕೆ ಮುಖ್ಯವಾಗುತ್ತಾರೆ. ಲಂಕೇಶರ ಈ ಸಾವಂತ್ರಿ ಕನ್ನಡ ಚಿತ್ರೋದ್ಯಮಕ್ಕೆ ಹೊಸ ಹುರುಪನ್ನು, ಲವಲವಿಕೆಯನ್ನು ತರಲಿ.
(ಫೆಬ್ರವರಿ 15, 2008, ಶುಕ್ರವಾರ)

No comments:

Post a Comment