Monday, January 23, 2012

ಚಿತ್ತಾಲರ ಜೊತೆ ಸಂಜೆ....

ಯಾವುದೋ ಪತ್ತೇದಾರಿ ಕಾದಂಬರಿ ಇರಬೇಕು ಎಂದು ಅಣ್ಣನ ಕಪಾಟಿನಿಂದ ಎಗರಿಸಿ ಆ ಪುಸ್ತಕವನ್ನು ಕದ್ದು ಮುಚ್ಚಿ ಓದತೊಡಗಿದೆ. ಯಶವಂತ ಚಿತ್ತಾಲರು ಬರೆದ ‘ಶಿಕಾರಿ’ ಕಾದಂಬರಿಯದು. ಪುಟ ತೆರೆದ ಕೂಡಲೇ ‘‘ಕಳೆದು ಹೋಗಿರುವ ನನ್ನ ತಂಗಿಯ ಹುಡುಕಾಟವೇ ಮುಂದಿನ ಗುರಿ-ನಾಗಪ್ಪ’’ ಎಂಬ ಸಾಲು ನನ್ನನ್ನು ತಪ್ಪು ದಾರಿಗೆಳೆಯಿತು. ಅಣ್ಣನಿಗೆ ಕದ್ದು ಮುಚ್ಚಿ ಪುಟಪುಟಗಳನ್ನು ಓದುತ್ತಿದ್ದರೂ ಒಂದು ಸಾಲೂ ತಲೆಗೆ ಹೋಗುತ್ತಿಲ್ಲ. ಅಲ್ಲಲ್ಲಿ ಏನೋ ಇದೆ ಅಂತನ್ನಿಸಿದರೂ ಅದೇನು ಎನ್ನುವುದು ಗೊತ್ತಾಗುತ್ತಿರಲಿಲ್ಲ. ಹಾಗೂ ಹೀಗೂ ಪುಸ್ತಕವನ್ನು ಓದಿ ಮುಗಿಸಿದೆನಾದರೂ ‘ಅದೆಂಥದು’ ಎನ್ನುವುದು ನನಗೆ ಗೊತ್ತಾಗಿರಲಿಲ್ಲ
 ಹೀಗಿರುವಾಗ ಶಾಲೆಯ ಲೈಬ್ರರಿಯಲ್ಲಿ ಯಾವುದೋ ಪತ್ತೇದಾರಿ ಪುಸ್ತಕ ಹುಡುಕುವಾಗ ಇದೇ ಶಿಕಾರಿ ಕೈಗೆ ಸಿಕ್ಕಿತು. ನಾಲಗೆ ಸುಟ್ಟ ಬೆಕ್ಕಿನಂತೆ ಆ ಪುಸ್ತಕವನ್ನು ಕೈಗೆತ್ತಿ ಆತಂಕದಿಂದ ನೋಡುತ್ತಿರುವಾಗ, ನನ್ನ ಹಿಂದಿನಿಂದ ಕನ್ನಡ ಪಂಡಿತರಾದ ವಿ. ಆರ್. ಹೆಗ್ಡೆ ಬಂದಿದ್ದರು. ‘‘ಗುಡ್ ಓದು ಓದು...ಕೇಂದ್ರ ಸಾಹಿತ್ಯ ಅಕಾಡೆಮಿ ಸಿಕ್ಕಿದ ಪುಸ್ತಕ ಅದು. ತುಂಬಾ ಒಳ್ಳೆಯ ಕಾದಂಬರಿ’’ ಎಂದು ಬೆನ್ನು ತಟ್ಟಿದರು. ಬರೇ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡದ್ದಕ್ಕೇ ಮೇಷ್ಟ್ರು ನನ್ನ ಬೆನ್ನು ತಟ್ಟಿದ್ದರು. ಅಂತೂ ಮೇಷ್ಟ್ರ ಮುಂದೆ ಒಳ್ಳೆಯವನಾಗಲೂ ಮತ್ತೊಮ್ಮೆ ಆ ಪುಸ್ತಕವನ್ನು ಮನೆಗೆ ಕೊಂಡೊಯ್ದೆ. ಎರಡು ದಿನ ಇಟ್ಟು ಹಾಗೇ ಮರಳಿಸಿದೆ.
ಇದಾಗಿ ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ನಾನಾಗಿಯೇ ಈ ಪುಸ್ತಕವನ್ನು ಹುಡುಕಿಕೊಂಡು ಹೋದೆ. ಆಗ ನಾನು ದ್ವಿತೀಯ ಬಿ. ಎ. ಇರಬೇಕು. ಆಕಸ್ಮಿಕವಾಗಿ ನನಗೆ ಸಿಕ್ಕಿದ ಯಶವಂತ ಚಿತ್ತಾಲರ ‘ಕತೆಯಾದಳು ಹುಡುಗಿ’ ಕತೆ ಓದಿದ ಬಳಿಕ ಶಿಕಾರಿ ಮೆಲ್ಲಗೆ ನನ್ನಾಳದಲ್ಲಿ ಕದಲ ತೊಡಗಿತು. ಮನೆಗೆ ಕೊಂಡೊಯ್ದು ಓದ ತೊಡಗಿದೆ. ಈ ಕೃತಿಯನ್ನು ಬಿಡಿಸಿ ಓದತೊಡಗಿದಂತೆ, ನನ್ನದೇ ಆತ್ಮದ ಪುಟಗಳನ್ನು ಬಿಡಿಸುವಂತೆ ಕಂಪಿಸುತ್ತಾ ಓದುತ್ತಿದ್ದೆ. ಇದಾದ ಬಳಿಕ ಅವರ ಪುಟ್ಟ ಕಾದಂಬರಿ ಛೇದ ನನ್ನ ಕೈಗೆ ಸಿಕ್ಕಿತು. ಅದೇನೋ ಗೊತ್ತಿಲ್ಲ, ಇಂದಿಗೂ ನನಗೆ ಚಿತ್ತಾಲರ ಕೃತಿಗಳಲ್ಲಿ ಅತ್ಯಂತ ಇಷ್ಟವಾದ ಕಾದಂಬರಿ ಛೇದ. ಸಂಬಂಧಗಳನ್ನು ಕೆಲವೊಮ್ಮೆ ನಾವು ಅನಗತ್ಯ, ಭಯೋ, ಸಂಶಯಗಳಿಂದ ಹೇಗೆ ಕೊಂದು ಹಾಕುತ್ತೇವೆ ಎನ್ನುವುದು ಛೇದ ಹೃದಯ ಛೇದಿಸುವಂತೆ ಮುಂದಿಡುತ್ತದೆ. ತಾನು ಭಯಪಡುವ, ದ್ವೇಷಿಸುವ, ಕಿಡಿಕಾರುವ ವ್ಯಕ್ತಿ ಈ ಜಗತ್ತಿನಲ್ಲಿ ಅಸ್ತಿತ್ವದಲ್ಲೇ ಇಲ್ಲ ಎನ್ನುವುದು ವೃದ್ಧ ಪೊಚಖಾನವಾಲನಿಗೆ ತಿಳಿಯುವ ಹೊತ್ತಿನಲ್ಲಿ ಎಲ್ಲವೂ ಮುಗಿದಿರುತ್ತದೆ. ಎಂದೂ ಸರಿಪಡಿಸಲಾಗದ ಒಡೆದ ಮನಸ್ಸಷ್ಟೇ ಅಲ್ಲಿ ಉಳಿದಿರುತ್ತದೆ. ಛೇದ ನನ್ನನ್ನೂ ಇಂದಿಗೂ ಕಾಡುತ್ತಿರುವ ಕಾದಂಬರಿ.
 ದೂರದ ಮುಂಬೈಗೆ ಎಂ.ಎ ಮಾಡುವ ನೆಪದಲ್ಲಿ ಹೊರಟಾಗಲೂ ಆಳದಲ್ಲಿ ಚಿತ್ತಾಲರ ಪಾತ್ರಗಳು ನನಗೆ ಧೈರ್ಯ ತುಂಬಿದ್ದವು. ಅಲ್ಲಿ ನನಗಾಗಿಯೇ ಕೆಲವು ಮನುಷ್ಯರು ಕಾಯುತ್ತಿದ್ದಾರೆ ಎಂಬ ನಂಬಿಕೆಯನ್ನು ನನಗೆ ಕೊಟ್ಟದ್ದೇ ಚಿತ್ತಾಲರ ಪಾತ್ರಗಳು. ನಾನು ಬಸ್ಸು ಹತ್ತಿದ್ದೆ. ನನ್ನ ನಂಬಿಕೆ ಸುಳ್ಳಾಗಲಿಲ್ಲ. ಮುಂದೊಂದು ದಿನ, ಆ ಗೆಳೆಯರ ಜೊತೆಗೆ ಚಿತ್ತಾಲರ ಮನೆಗೆ ಹೋದೆ. ಅವರ ಕಾದಂಬರಿಯಲ್ಲಿ ಬರುವ ಸೋಫಾದಲ್ಲಿ ಕುಳಿದೆ. ಬಾಲ್ಕನಿಯಲ್ಲಿ ನಿಂತು ಕಡಲನ್ನು ನೋಡಿದೆ. ನಾಗಪ್ಪನನ್ನು ಅವರ ಧ್ವನಿಯ ಮೂಲಕವೇ ಆಲಿಸಿದೆ. ಅವರ ಮನೆಯಿಂದ ನನ್ನ ಕೋಣೆ ಸೇರಿದ್ದೆ, ಆ ಅನುಭವವನ್ನು ಪುಟ್ಟ ಕವಿತೆಯನ್ನಾಗಿಸಿದೆ. ಮುಂಬಯಿ ಬಿಡುವ ಹೊತ್ತಿನಲ್ಲಿ ಚಿತ್ತಾಲರೇ ನನ್ನ ಮೊತ್ತ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು ಬಿಡುಗಡೆ’ ಮಾಡಿದರು. ಚಿತ್ತಾಲರ ಮುಂದೆಯೇ ನಾನು, ಚಿತ್ತಾಲರ ಕುರಿತ ನನ್ನ ಅನಿಸಿಕೆಗಳನ್ನು ಹಂಚಿಕೊಂಡೆ. ಚಿತ್ತಾಲರ ಕುರಿತ ಕವಿತೆಯನ್ನು ಆ ಸಂಕಲನದಲ್ಲಿ ಸೇರಿಸಲು ಧೈರ್ಯ ಸಾಲಲಿಲ್ಲ. ಆ ಕವಿತೆ ಇಲ್ಲಿ ನಿಮ್ಮ ಮುಂದಿದೆ.

ಚಿತ್ತಾಲರ ಜೊತೆ ಸಂಜೆ...


....ಕೇಳಿದರು
ಎಲ್ಲಿಂದ ಬಂದೆ?
ನಿಮ್ಮೆದೆಯಿಂದ
ಎಂದೆ

ದಿನವಿಡೀ ದುಡಿದು
ಬಳಲಿದ ಶಹರದಂತೆ ಒರಗಿದರು
ಆ ಸೋಫಾದಲ್ಲಿ
ಕೇಳಿದೆ ಇಲ್ಲಿ
ಯಾವ ಒಳದಾರಿಯಲ್ಲಿ ನಡೆದರೆ
ಹನೇಹಳ್ಳಿ?

ಅಲ್ಲಲ್ಲಿ ಬಿತ್ತಿ
ಬೆಳೆಸಿದ ವೌನ-
ದ ಗಿಡದಲ್ಲಿ ಮಾತು
ಚಿಗುರುವ ಹೊತ್ತು
ಅಸಂಖ್ಯ ಬೋಗಿಗಳನ್ನು ಹೊತ್ತ
ಗಾಡಿಯೊಂದು
ದೀಪದ ಸನ್ನೆಗಾಗಿ ಕಾಯುತ್ತಿತ್ತು!

ತೆರೆದ ಬಾಲ್ಕನಿಯಾಚನೆ
ಶಹರವನ್ನು ಆಳುವ ಕಡಲು
ಬೀಸುವ ಗಾಳಿಗೆ
ಪಟಪಟನೆ ಬಡಿದುಕೊಳ್ಳುವ ಅದರ
ರಕ್ತವರ್ಣದ ಸೆರಗು
ತೆಕ್ಕೆಯಲ್ಲಿ ಅಧರಕ್ಕೆ ಅಧರ
ಒತ್ತೆ ಇಟ್ಟವರು!

ಇಬ್ಬರೆಂದರೆ ಬರೇ ಇಬ್ಬರು
ನಾನು ಮತ್ತು ಅವರು
ಹಾಯಿ ದೋಣಿಯಂತೆ ತೇಲುತ್ತಿರುವ
ಕತೆಯ ಸಾಲೊಂದನ್ನು
ಏರಿ ಕುಳಿತಿದ್ದೇವೆ...

ಮೊರೆವ ಎದೆಯೊಳಗೆ
ಭೋರ್ಗರೆವ ಅಕ್ಷರದ ಕಡಲು
ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ
ಹುಟ್ಟು ಹಾಕುತ್ತಿರುವಾಗ
ನನಗೇಕೆ ಮುಳುಗುವ ಚಿಂತೆ...?

3 comments:

  1. chittalara ella kaadambari kahegalu... avara pratiyondu kathegalannu odiddene. avaru naanu mechchuva kathegaararalli garimeyavaru..
    avara bagge chendada kathe

    ReplyDelete
  2. wow hats off!! tumba chennagide!!
    malathi S

    ReplyDelete
  3. ತುಂಬಾ ಚೆನ್ನಾಗಿದೆ ಚಿತ್ತಾಲರೊಂದಿಗಿನ ಒಡನಾಟ.

    ReplyDelete