Monday, September 24, 2012

ಒಂದು ಕತೆ: ಪ್ರೀತಿ...ಬರೇ ಪ್ರೀತಿ!

ಅಂದು ರಾತ್ರಿ ಅವರಿಬ್ಬರ ನಡುವೆ ವೌನ ಕವಿದಿತ್ತು.
ಆ ಮಂಚದಲ್ಲಿ ಇವಳು, ಈ ಮಂಚದಲ್ಲಿ ಅವನು ಪರಸ್ಪರ ನೋಡುತ್ತಿದ್ದರು.

ಶತಶತಮಾನಗಳಿಂದ ಆ ಕೋಣೆಯಲ್ಲಿ ಜೋಡಿಸಲ್ಪಟ್ಟಿದ್ದ ಮಂಚ ಅದು. ಬೆಸೆದ ಎರಡು ಹೃದಯಗಳಂತೆ.
ಅಥವಾ ತಾಯಿಯ ಹೊಟ್ಟೆಯಿಂದಲೇ ಹುಟ್ಟಿದ ಸಯಾಮಿಯಂತೆ.
ಒಂದೇ ಹಾಸಿಗೆಯಿಂದ ಅವುಗಳನ್ನು ಜೋಡಿಸಲಾಗಿತ್ತು. 

ಹೊದಿಸಿದ ಹಾಸಿಗೆ, ಪ್ರೀತಿಯಂತೆ ಎರಡು ಮಂಚವನ್ನು ಗಾಢವಾಗಿ ಬೆಸೆದಿತ್ತು.
ಆ ಎರಡು ಮಂಚಗಳು ಎಂದೋ ಪರಸ್ಪರ ಬೆಸೆದು ಒಂದರೊಳಗೊಂದು ಬೆಸೆದು ಹೋಗಿರಬಹುದು ಎಂದು ಅದರಲ್ಲಿ ಪ್ರತಿ ರಾತ್ರಿ ಜೊತೆಯಾಗಿ ಮಲಗುತ್ತಿದ್ದ ದಂಪತಿ ತಿಳಿದುಕೊಂಡಿದ್ದರು. 


ಅಂತಹ ಮಂಚವನ್ನು ಪತ್ನಿ ಮೊದಲ ಬಾರಿ ಬೇರ್ಪಡಿಸಿದ್ದಳು. ಅವನು ಅವಳನ್ನೇ ಅಚ್ಚರಿಯಿಂದ ನೋಡುತ್ತಿದ್ದ.
ಮಂಚದ ಮೇಲೆ ಅಂದು ಸಂಜೆ ಹೊರ ಬಿದ್ದ ಎಚ್‌ಐವಿ ರಿಪೋರ್ಟ್ ಪಟಪಟಿಸುತ್ತಿತ್ತು.
ಕಿಟಕಿಯಿಂದ ಹಾವಿನಂತೆ ಸುಸುಳಿ ಬಂದ ಗಾಳಿಗೆ ವಿಲವಿಲನೆ ಒದ್ದಾಡುತ್ತಿತ್ತು ಆ ಕಾಗದ ಹಾಳೆ.
ಅದರ ಮೇಲೆ ಒಂದು ಕಾಂಡೊಮ್ ಪೆಟ್ಟಿಗೆ. ಅವರ ಬದುಕಿನಲ್ಲಿ ಅವರು ಅದೇ ಮೊದಲ ಬಾರಿಗೆ ರಕ್ಷಣಾತ್ಮಕವಾಗಿ ಪ್ರೀತಿಸಬೇಕಾದ ಸನ್ನಿವೇಶ.
ಪತ್ನಿ ಅಚ್ಚರಿಯಿಂದ ಕೇಳಿದ್ದಳು ‘‘ಅದೇನದು...?’’
‘‘ಬೇರೆಯಾದ ಈ ಮಂಚವನ್ನು ಜೋಡಿಸುವುದಕ್ಕಾಗಿ...’’ ಅವನು ನುಡಿದ.
ಅವಳು ಪೇಲವವಾಗಿ ನಕ್ಕಳು. ‘‘ಅಥವಾ ನಮ್ಮನ್ನು ಶಾಶ್ವತವಾಗಿ ಬೇರ್ಪಡಿಸುವುದಕ್ಕಾಗಿ....’’ ಕೇಳಿದಳು.

ಅವನು ಯಾಕೋ ಆಘಾತಗೊಂಡವನಂತೆ ನೋಡಿದ. ‘‘ಈವರೆಗೆ ಶಾಶ್ವತವಾಗಿ ಬೆಸೆದೇ ಬಿಟ್ಟಿದೆಯೆಂಬ ಈ ಮಂಚ ಪುರಾತನ ಗಾಯದಂತೆ ಮತ್ತೆ ಅರಳಿ ಇಬ್ಭಾಗವಾದ ಮೇಲೆ, ಈ ಕಾಂಡೊಮ್ ನಮ್ಮನ್ನು ಮತ್ತೆ ಬೆಸೆಯಬಹುದೇ....?ಮರಣದ ಭಯ ಮತ್ತು ಪ್ರೀತಿ ಜೊತೆ ಜೊತೆಯಾಗಿರಲು ಸಾಧ್ಯವೆ?’’ ಆ ಮಾತನ್ನು ಕೇಳಿದ್ದು ಅವಳೋ ಅವನೋ ಇನ್ನೂ ಸ್ಪಷ್ಟವಿಲ್ಲ. ನೋಡು ನೋಡುತ್ತಿದ್ದಂತೆಯೇ ಆತ ಕಾಂಡೊಮನ್ನು ಕಿಟಕಿಯಿಂದ ಹೊರಗೆಸೆದ. ಮಂಚವನ್ನು ಜೋಡಿಸಿದ. ಸೀಳಿದ ಗಾಯಕ್ಕೆ ಹಾಸಿಗೆಯನ್ನು ಹತ್ತಿಯಂತೆ ಮೆದುವಾಗಿ ಹಾಸಿ, ಸುತ್ತಿದ. ಅವಳು ಬೆದರಿದ ಕಣ್ಣಿನಿಂದ ಅವನನ್ನು ನೋಡುತ್ತಿದ್ದಳು.
‘‘ಬೇಡ...ಈ ಪ್ರೀತಿ ಬದುಕಲ್ಲ...ಸಾವು...ಬೇಡ...’’ ಅವಳು ಗೊಣಗುತ್ತಿದ್ದಳು.
ಈ ಕ್ಷಣಕ್ಕಿದು ಬರೇ ಪ್ರೀತಿ. ಬದುಕೂ ಅಲ್ಲ, ಸಾವೂ ಅಲ್ಲ........
ಯಾವುದೋ ಸಂಚಿನಿಂದ ಒಳ ನುಸುಳಿದ್ದ ಆ ಕರಿನಾಗರದಂತಹ ಸುಳಿಗಾಳಿ ಬೆಚ್ಚಿ ಹೆಡೆಯೆತ್ತಿ ಅವರೆಡೆಗೆ ನೋಡಿತು.
ಪಟಪಟಿಸುತ್ತಿದ್ದ ವೈದ್ಯರ ರಿಪೋರ್ಟ್ ಹಾಳೆ ಒಮ್ಮೆಗೇ ಸ್ತಬ್ಧವಾಗಿ ಬಿಟ್ಟಿತು.

"ಇನ್ನೋಸೆನ್ಸ್ ಆಫ್ ಮುಸ್ಲಿಂ'' ನಿರ್ದೇಶಕನೊಬ್ಬನ ವಿಕಾರ ಮುಖ...

ಇತ್ತೀಚಿಗೆ ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರ ನೋಡಿದೆ. ಆ ಚಿತ್ರವನ್ನು ಮಾಡಿದ ಮನುಷ್ಯನ ವಿಕಾರ ಮುಖವನ್ನಷ್ಟೇ ನನಗೆ ಅದರಲ್ಲಿ ನೋಡಲು ಸಾಧ್ಯವಾಯಿತು.

ಮಹಮ್ಮದ್ ಪೈಗಂಬರ್ ನಾನು ಅತಿ ಇಷ್ಟಪಡುವ ಮನುಷ್ಯ.
೧೫೦೦ ವರ್ಷಗಳ ಹಿಂದೆ ವ್ಯಾಪಾರಿಗಳ ನಾಡಿನಲ್ಲಿ ""ಇಂದಿನಿಂದ ಬಡ್ಡಿ ನಿಷೇಧಿಸಲಾಗಿದೆ'' ಎಂದು ಘೋಷಿಸಿ, ಬಡವರನ್ನು ಸುತ್ತುವರಿದ ಬಡ್ಡಿಯ ಸಂಕಲೆಯನ್ನು ಕಳಚಿದ ಈತನಲ್ಲದೇ ನನ್ನ ಪ್ರವಾದಿ ಇನ್ನೊಬ್ಬನು ಇರಲು ಸಾಧ್ಯವೇ?. ಒಂದು ವೇಳೆ ತನ್ನ ಧರ್ಮವನ್ನು ಪ್ರಚಾರ  ಮಾಡೋದೇ ಪ್ರವಾದಿಯ ಉದ್ದೇಶವಾಗಿದ್ದರೆ ವ್ಯವಸ್ಥೆಯ ವಿರುದ್ಧ ಇಂತಹ ಒಂದು ನಿರ್ಣಯ ಮಾಡಲು ಸಾಧ್ಯವಿತ್ತೆ? ವ್ಯವಸ್ಥೆಯೊಂದಿಗೆ,  ಮುಖ್ಯವಾಗಿ ದೊಡ್ಡ ವ್ಯಾಪಾರಿಗಳೊಂದಿಗೆ, ಶ್ರಿಮಂತರೊಂದಿಗೆ ರಾಜಿ ಮಾಡಿಕೊಂಡಿದ್ದರೆ ಬಹುಶಹ  ಇದಕ್ಕಿಂತಲೂ ವಿಶಾಲವಾಗಿ ಧರ್ಮವನ್ನು ಬೆಳೆಸಬಹುದಿತ್ತೋ ಏನೋ..

ವ್ಯಭಿಚಾರವನ್ನು ಘನತೆ ಎಂದು ತಿಳಿದುಕೊಂಡ ಸಮಾಜದಲ್ಲಿ ವ್ಯಭಿಚಾರ ಮಾಡಬೇಡಿ. ಬೇಕಾದರೆ ಆಕೆಯನ್ನು ಮದುವೆಯಾಗಿ, ಆಕೆಗೆ "ಪತ್ನಿಗೆ ಸಲ್ಲಬೇಕಾದ ಹಕ್ಕು''ಗಳನ್ನು ನೀಡಿ ಎಂದು ಘೋಶಿಸಿದ್ದವರನ್ನು ಪ್ರೀತಿಸದೇ ;ಇರಲು ಸಾಧ್ಯವೇ.

೧೫೦೦ ವರ್ಷಗಳ ಹಿಂದೆಯೇ "ಪಾನ ನಿಷೇಧ'' ಜಾರಿಗೆ ತಂದ ಮನುಷ್ಯನ ಸಂದೇಶ ನನ್ನ ಪಾಲಿಗೆ ಅಪ್ಪಟ ದೇವರ ಸಂದೇಶವೇ ಹೌದು.
"ಇನ್ನು ಮುಂದೆ ಬಡ್ಡಿ ಮನ್ನಾ ಮಾಡಲಾಗಿದೆ. ನಿಮ್ಮ ಸಂಪತ್ತಿನ ಒಂದು ಭಾಗವನ್ನು ಬಡವರಿಗೆ ನೀಡೋದು  ಕಡ್ಡಾಯವಾಗಿದೆ'' ಈ  ಸಂದೇಶಕ್ಕು ಖಡ್ಗ ಕ್ಕೂ ಯಾವುದಾದರು ಸಂಬಂಧ ಇದೆಯೇ?

ಕಾಣದ ಆ ದೇವರ ಕಾಲಿಗಷ್ಟೇ ಬೀಳಬೇಕು. ಮನುಷ್ಯರ ಕಾಲಿಗೆ ಬೀಳುದನ್ನು  ನಿಷೇಧಿಸಲಾಗಿದೆ ಎಂಬ ಅಪ್ಪಟ ಸಮಾನತೆಯ ಕನಸನ್ನು ಕಾಣಲು ಈ ಜಗತ್ತಲ್ಲಿ ಪ್ರವಾದಿ ಮಹಮ್ಮದ್ಗಷ್ಟೇ ಸಾಧ್ಯವಾಯಿತು.

ಸಾಧಾರಣ ಎಲ್ಲ ಧಾರ್ಮಿಕ ಸುಧಾರಕರು ತಮ್ಮ  ಅನುಯಾಯಿಗಳನ್ನು ಶಿಷ್ಯರು ಎಂದು ಕರೆಯುತ್ತಾರೆ. ಆದರೆ ಪ್ರವಾದಿ ತನ್ನ ಅನುಯಾಯಿಗಳನ್ನು “ಸಂಗಾತಿ-(ಸಹಾಬಿ)'' ಎಂದು ಕರೆದರು. ಸಂಗಾತಿ ಅಥವಾ ಕಾಮ್ರೇಡ್ ಎಂಬ ಶಬ್ದವನ್ನು ಮೊದಲು ಬಳಸಿದ್ದು ಮಹಮ್ಮದ್.. ಯಾವತ್ತು ತನ್ನ ಕಾಲಿಗೆ ಬೀಳೋದು, ತನ್ನನ್ನು  ಕಂಡಾಗ ಎದ್ದು ನಿಲ್ಲೋದನ್ನು ಸಂಗಾತಿಗಳಿಗೆ ಮಹಮ್ಮದ್ ನಿಷೇಧಿಸಿದ್ದರು.

೧೫೦೦ ವರ್ಷಗಳ ಹಿಂದೆ ಹೆಣ್ಣಿಗೆ ಆಸ್ತಿಯ ಹಕ್ಕನ್ನು ಘೋಷಿಸಿದ್ದು ಮಹಮ್ಮದ್. ಹೆಣ್ಣನ್ನು ಹೂತುಹಾಕುವ ವ್ಯವಸ್ಥೆಯಲ್ಲಿ, ಹೆಣ್ಣನ್ನು ಮದುವೆಯಾಗುವಾಗ…ಆಕೆಗೆ ಮೆಹರನ್ನು (ವಧುದಕ್ಷಿಣೆ) ಕಡ್ಡಾಯ ಗೊಳಿಸಿದರು. ಅಂದಿನ ದಿನಗಳಲ್ಲಿ ಹೆಣ್ಣಿಗೆ ಇದೊಂದು ಭಾರೀ  ಕೊಡುಗೆಯೇ ಆಗಿತ್ತು.

ಇಸ್ಲಾಂ ಖಡ್ಗದಿಂದ ಆಗಿತ್ತೆ? ತನ್ನ ಚಿಂತನೆಯನ್ನು ಹರಡುವಾಗ ಮಹಮ್ಮದ್ ಒಬ್ಬಂಟಿಯಾಗಿದ್ದರು. ಒಬ್ಬಂಟಿಯಾಗಿ ಅವರು ತನ್ನ ಹೋರಾಟವನ್ನು ಮಾಡಿದರು. ಅವರಿಗೆ ಮೊದಲು ಜೊತೆಯಾದುದು  ಸಂಗಾತಿ ಅಬುಬಕರ್. ಅನಾಥ ಮಹಮ್ಮದ್ನನ್ನು ಸಾಕಿದ್ದು ದೊಡ್ಡಪ್ಪ ಅಬು ತಾಲಿಬ್. ವಿಶೇಷವೆಂದರೆ ಅಬು ತಾಲಿಬ್ ತನ್ನ ಜೀವನದ ಕೊನೆಯವರೆಗೂ ಇಸ್ಲಾಂ ಸ್ವೀಕರಿಸಲಿಲ್ಲ. ಆದರೆ ಅವರ ನಡುವೆ ಸಂಬಂಧಕ್ಕೆ ಅದರಿಂದ ಯಾವ  ಧಕ್ಕೆಯಾಗಲಿಲ್ಲ. ಇಸ್ಲಾಂ ಸ್ವೀಕರಿಸುವಂತೆ ಮಹಮ್ಮದ್ ಸದಾ ದೊಡ್ಡಪ್ಪನನ್ನು ಮನವೊಲಿಸುತ್ತಲೇ ಇದ್ದರು. ದೊಡ್ಡಪ್ಪ ಸಾಯುವ ಹಂತದಲ್ಲಿರುವಾಗ  ಇಸ್ಲಾಂ ಸ್ವೀಕರಿಸುವಂತೆ  ಮಾಡಲು ಕೊನೆಯ ಪ್ರಯತ್ನ ನಡೆಸಿದರು. "ಇಸ್ಲಾಮ್ಮ್ ಸ್ವೀಕರಿಸಿದರೆ ಸಮಾಜದಲ್ಲಿ ನನ್ನ ಘನತೆಗೆ ಕುಂದುಂಟಾಗುತ್ತದೆ'' ಎಂದು ಅಬುತಾಲಿಬ್ ಆ ಆಹ್ವಾನವನ್ನು ನಿರಾಕರಿಸಿದರು. ದೊಡ್ಡಪ್ಪ ಸಾವಿನ ಕೊನೆಯ ಕ್ಷಣದಲ್ಲಿದ್ದಾಗ ಮುಹಮ್ಮದ್ ಅವರ ದೇಹವನ್ನೆಲ್ಲ ತನ್ನ ಕೈಯಿಂದ ಸವರಿದರಂತೆ. "ನನ್ನ ಕೈ ಸ್ಪರ್ಶದಿಂದ ದೊಡ್ಡಪ್ಪ ಸ್ವರ್ಗ ಸೇರಲಿ'' ಎನ್ನುವ ಆಶೆಯಿಂದ. ವಿಶೇಷವೆಂದರೆ, ಅಬುತಾಲಿಬ್ ಇಸ್ಲಾಂ ಸ್ವೀಕರಿಸದೆ ಇದ್ದರೂ ಪ್ರವಾದಿಯನ್ನು  ಶತ್ರುಗಳಿಂದ ತಮ್ಮ ಜೀವ ಇರುವವರೆಗೂ ರಕ್ಷಿಸಿದರು. ಅಬುತಾಲಿಬ್ ಒಬ್ಬರಿಗೆ ಹೆದರಿ ಮಹಮ್ಮದರನ್ನು ಶತ್ರುಗಳು ಕೊಲ್ಲದೆ ಉಳಿಸಿದ್ದರು. ಪರಸ್ಪರರ ಚಿಂತನೆ ಬೇರೆಯಾಗಿದ್ದರು ಪರಸ್ಪರರನ್ನು ಪ್ರೀತಿಸುತ್ತಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಅತಿ ದೊಡ್ಡ ಉಧಾಹರಣೆ ಇಲ್ಲಿದೆ.

ಇಸ್ಲಾಮಿನಲ್ಲಿ  ಮೊತ್ತ ಮೊದಲ ಪ್ರಾರ್ಥನೆಯ  ಕರೆ ಅಥವಾ ಅಜಾನ್ ನೀಡಿರುವುದು ಒಬ್ಬ ನಿಗ್ರೋ. ಅವರ ಹೆಸರು ಬಿಲಾಲ್. ಗುಲಾಮಿ ವ್ಯವಸ್ಥೆಯನ್ನು  ಪ್ರಶ್ನಿಸಿದ ಮಹಾ ಮನುಷ್ಯನೋಬ್ಬನನ್ನು ಯಾರಿಗಾದರು ದ್ವೇಷಿಸಲು ಸಾಧ್ಯ ಎಂದರೆ, ಆತನ ಹೃದಯ ಕೊಳೆತಿದೆ ಎಂದೇ ಅರ್ಥ.
"ನಾನು ದೇವರಲ್ಲ, ನಿಮ್ಮಂತೆಯೇ ಮನುಷ್ಯ.'' ಎಂದು ಪದೇ ಪದೇ ಘೋಷಿಸಿ…ಎಲ್ಲೂ ತನ್ನ ಭಾವಚಿತ್ರವು ಇರದಂತೆ ಜಾಗೃತೆ ವಹಿಸಿದ ಅಪ್ಪಟ ಮನುಷ್ಯ ಮಹಮ್ಮದ್. ಅವರ  ಚಿತ್ರ ಒಂದಿದ್ದರೆ ಇಂದು ಅದನ್ನೇ  ದೇವರಾಗಿ ಪೂಜಿಸುತ್ತಿದ್ದರು. ಗಲ್ಲಿ ಗಲ್ಲಿಗಳಲ್ಲಿ  ಅವರ ಪ್ರತಿಮೆಗಳು ನಿಂತಿರುತ್ತಿತ್ತು. ಇಂದಿಗೂ  ಪ್ರವಾದಿ ಮಹಮ್ಮದ್ ದೇವರು ಅಲ್ಲ ಎಂದು ದೃಡವಾಗಿ ನಂಬಿರೋದರ ಹಿಂದೆ ಅವರ ದೂರದೃಷ್ಟಿ ಕೆಲಸ ಮಾಡಿದೆ. ಹೆಚ್ಚಿನ ಧರ್ಮ ಪ್ರಚಾರಕರು ಬೋಧನೆ ಮಾಡುತ್ತಾ ಮಾಡುತ್ತಾ ತಾವೇ ದೇವರಾದರು. ಆದರೆ ಮಹಮ್ಮದ್ ಅದನ್ನು ನಖಶಿಖಾಂತ ತಡೆದರು.

ನಾನು ಹೊಸದಾಗಿ ಧರ್ಮವನ್ನು ಸೃಷ್ಟಿಸುತ್ತಿಲ್ಲ. ಹಿಂದೆ ಆಗಿ ಹೋಗಿರುವ  ಜೀಸಸ್, ಮೋಶೆ, ಅಬ್ರಾಹಾಂ,  ದಾವುದ್ ಎಲ್ಲರು ಇಸ್ಲಾಮ್ನ ಪ್ರವಾದಿಗಳೇ. ಅವರು ಹೇಳಿದ್ದನ್ನೇ ನಾನು ಹೇಳುತ್ತಿದ್ದೇನೆ. ಹೊಸತಾಗಿ ಏನು ಹೇಳುತ್ತಿಲ್ಲ..ಎಂದು ಹೇಳಿದ್ದು ಮಾತ್ರವಲ್ಲ, ಕ್ರಿಶ್ಚಿಯನ್, ಯಹೂದಿಗಳು ನಂಬುವ ಪ್ರವಾದಿಗಳ ಹೆಸರನ್ನು ಹೇಳುವಾಗಲು ಕಡ್ಡಾಯವಾಗಿ ಅವರಿಗೆ ದೇವರು  ಶಾಂತಿ ನೀಡಲಿ  ಎಂದು ಹೇಳಿ ಗೌರವ ಸೂಚಿಸಲು  ಕಳಿಸಿದ್ದು ಮಹಮ್ಮದ್. ಈ ಮನುಷ್ಯ ನನಗೆ ಇಷ್ಟವಾಗದೆ ಇರೋದಕ್ಕೆ ಕಾರಣಗಳು ಇವೆಯೇ?

ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರವನ್ನು ಪ್ರತಿಭಟಿಸುವ, ಅದನ್ನು ನಿಷೇಧಿಸಬೇಕು ಎಂದು ಒತ್ತಾಯಿಸುವ ಒಂದು ಸಮೂಹವನ್ನು ಮತ್ತೆ “ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ” ಅಪರಾಧಿಗಳನ್ನಾಗಿ ಕಟಕಟೆಯಲ್ಲಿ ನಿಲ್ಲಿಸುತ್ತಿರೋದು. ಆ ಸಿನಿಮಾಕ್ಕೆ ಬಂದ ಪ್ರತಿಭಟನೆಯು  ಅದೂ ಅಭಿವ್ಯಕ್ತಿಯೇ ಅಲ್ಲವೇ? “ಇನ್ನೋಸೆನ್ಸ್ ಆಫ್ ಮುಸ್ಲಿಂ…” ನಿರ್ದೇಶಕ ಸಿನಿಮಾದಂತಹ ಅದ್ಭುತ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಯಾವುದೇ ವೈಚಾರಿಕ ಚರ್ಚೆಗಳಿಲ್ಲದ  ಈ ಚಿತ್ರ , ಕೋಟ್ಯಂತರ ಜನ ಪ್ರೀತಿಸುವ ಮನುಷ್ಯನೊಬ್ಬನ ಮೇಲೆ ದಾಳಿ ನಡೆಸುವ ಉದ್ದೇಶಕ್ಕಾಗಿಯೇ ಮಾಡಿರೋದಾಗಿದೆ.. ಒಂದು ಗಂಬೀರ ಚರ್ಚೆಗೆ ಸಾಧ್ಯ ಮಾಡಿಕೊಡುವ ಸಿನಿಮ ಮಾಧ್ಯಮ ಇಂಥವರ ಕೈಯಲ್ಲಿ ದುರ್ಬಳಕೆಯಾದಾಗ, ನಾಳೆ ಅದರ ಪರಿಣಾಮವನ್ನು ಸೃಜನ ಶೀಲ ನಿರ್ದೇಶಕರು ಎದುರಿಸಬೇಕಾಗುತ್ತದೆ. ಕ್ಯಾಮರದಲ್ಲಿ ಸಿನಿಮ ತೆಗೆದರೆ ಅಭಿವ್ಯಕ್ತಿ. ಅದೇ ಕ್ಯಾಮರದಲ್ಲಿ ಒಬ್ಬನ ತಲೆಗೆ ಹೊಡೆದರೆ ಅದನ್ನು ಸಿನಿಮ ಎಂದು ಕರೆಯಲಾಗೋದಿಲ್ಲ. ಅದು ಹಿಂಸೆ, ಕ್ರೌರ್ಯ…ಅದನ್ನೇ ಆ ನಿರ್ದೇಶಕ ಮಾಡಿದ್ದಾನೆ.

ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರವನ್ನು ಮಾಡಿದ ನಿರ್ದೇಶಕ ಖಂಡಿತವಾಗಿಯೂ ಒಂದು ಭಯಾನಕ ರೋಗದಿಂದ ನರಳುತ್ತಿದ್ದಾನೆ. ಆ ರೋಗ ಬೇಗ ವಾಸಿಯಾಗಿ ಆತ ಗುಣಮುಖನಾಗಲಿ ಎಂದು ಹಾರೈಸುವ. ಅವನ ಉದ್ದೇಶವೇ ಕ್ರೌರ್ಯವನ್ನು ಉದ್ಧೀಪಿಸೋದು.. ಸಹನೆ ಮತ್ತು ತಾತ್ಸಾರದಿನ್ದಷ್ಟೇ ಆ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ. ಅದಕ್ಕೆ ಅವನಂತೆಯೇ  ಪ್ರತಿಕ್ರಯಿಸಲು ಹೋದಲ್ಲಿ...ಅವನು ತನ್ನ ಉದ್ದೇಶವನ್ನು ಸಾಧಿಸ ತೊಡಗುತ್ತಾನೆ. ಹಿಂಸಾ ರೀತಿಯ ಪ್ರತಿಭಟನೆಯನ್ನೇ ಮುಂದಿಟ್ಟುಕೊಂಡು ತನ್ನ ಚಿತ್ರವನ್ನು ಸಮರ್ಥಿಸ ತೊಡಗುತ್ತಾನೆ.

Saturday, September 22, 2012

ಹೀರೋಯಿನ್: ಚಿತ್ರದ ದೌರ್ಬಲ್ಯವೇ ಮಧುರ್ ಭಂಡಾರ್ಕರ್

ಒಂದು ಚಿತ್ರ ವಿಮರ್ಶೆ

ಚಾಂದಿನಿ ಬಾರ್, ಪೇಜ್ ತ್ರೀ, ಟ್ರಾಫಿಕ್ ಸಿಗ್ನಲ್ ಚಿತ್ರಗಳ ಮೂಲಕ ಕೆಲವು ಶಾಕ್‌ಗಳನ್ನು ನೀಡಿದ್ದ ಮಧುರ್ ಭಂಡಾರ್ಕರ್ ಸದ್ಯದ ದಿನಗಳಲ್ಲಿ ಪ್ರೆಡಿಕ್ಟೆಬಲ್ ನಿರ್ದೇಶಕರಾಗಿ ಮಾರ್ಪಾಡಾಗಿರುವುದು ಅವರ ಸೃಜನಶೀಲತೆಗೆ ಅತಿ ದೊಡ್ಡ ಸವಾಲಾಗಿದೆ. ಫ್ಯಾಶನ್ ಚಿತ್ರ ನೋಡಿದ ಪ್ರೇಕ್ಷಕರು ‘ಹಿರೋಯಿನ್’ ಚಿತ್ರದ ಕುರಿತಂತೆ ಮೊದಲೇ ಒಂದು ಊಹೆಯನ್ನು ಹೊಂದಿರುತ್ತಾರೆ. ಮಧುರ್ ಭಂಡಾರ್ಕರ್ ಚಿತ್ರ ಹೀಗೆಯೇ ಇರುತ್ತದೆ ಎನ್ನುವ ಊಹೆ. ಆ ಊಹೆಯನ್ನು ‘ಹಿರೋಯಿನ್’ ಸುಳ್ಳು ಮಾಡುವುದಿಲ್ಲ. ನೀವು ಮಧುರ್ ಭಂಡಾರ್ಕರ್ ಚಿತ್ರ ಹೇಗಿರಬಹುದು, ಹೇಗೆ ಮುಂದೆ ಸಾಗಬಹುದು ಎಂದು ಕಲ್ಪಿಸಿ ಕೊಳ್ಳುತ್ತೀರೋ, ಹೀರೋಯಿನ್ ಕತೆಯೂ ಹಾಗೆಯೇ ಸಾಗುತ್ತದೆ. ಬಹುಶಃ ಕರೀನಾ ಕಪೂರ್ ನಾಯಕಿಯಾಗಿ ನಟಿಸಿರುವ ‘ಹೀರೋಯಿನ್’ ಚಿತ್ರದ ಅತಿ ದೊಡ್ಡ ದೌರ್ಬಲ್ಯವೇ ಮಧುರ್ ಭಂಡಾರ್ಕರ್.


‘ಫ್ಯಾಶನ್’ ಚಿತ್ರದ ಸ್ಕ್ರಿಪ್ಟನ್ನು ಒಂದಿಷ್ಟು ಅದಲು ಬದಲು ಮಾಡಿ ‘ಹೀರೋಯಿನ್’ ಚಿತ್ರವನ್ನು ಸಿದ್ಧಗೊಳಿಸಿದಂತಿದೆ. ಎಲ್ಲಕ್ಕೂ ಮುಖ್ಯವಾಗಿ ಫ್ಯಾಶನ್ ಚಿತ್ರದ ಭಾವತೀವ್ರತೆ ಈ ಚಿತ್ರದಲ್ಲಿಲ್ಲ. ಕರೀನಾ ಕಪೂರ್ ತನ್ನ ಪಾತ್ರಕ್ಕೆ ನ್ಯಾಯ ನೀಡಲು ಸಾಕಷ್ಟು ಯತ್ನಿಸಿದ್ದಾರೆ. ಆದರೆ ಚಿತ್ರ ಮಧುರ್ ಭಂಡಾರ್ಕರ್ ಅವರ ಹಿಂದಿನ ಚಿತ್ರಗಳ ರಿಮೇಕ್‌ನಂತಿದೆ. ಕರೀನಾ ಪಾತ್ರ ಬೇಡಬೇಡವೆಂದರೂ ಪ್ರಿಯಾಂಕಾ ಜೊತೆಗೆ ಸ್ಪರ್ಧೆಗಿಳಿಯುತ್ತದೆ. ಮಧುರ್ ಭಂಡಾರ್ಕರ್ ಅತ್ಯುತ್ತಮ, ಸಂವೇದನಾ ಶೀಲ ನಿರ್ದೇಶಕ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅವರು ಸಿದ್ಧ ಮನಸ್ಥಿತಿಯಿಂದ ಹೊರ ಬಂದು, ತನ್ನನ್ನು ತಾನು ಇನ್ನಷ್ಟು ಪ್ರಯೋಗಕ್ಕೆ ಒಳಪಡಿಸುವ ಅಗತ್ಯ, ಅನಿವಾರ್ಯತೆ ಇದೆ.

    ಚಾಂದ್‌ನಿ ಬಾರ್ ಬಳಿಕ ಬಂದ ಪೇಜ್ ತ್ರೀ ಚಿತ್ರ ಎಲ್ಲರಿಗೂ ಒಂದು ರೀತಿಯಲ್ಲಿ  ಶಾಕ್ ನೀಡಿತ್ತು. ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರ ನಗರದಲ್ಲಿ ಬದುಕುವ ಶ್ರೀಮಂತ ವರ್ಗದ ಟೊಳ್ಳುತನಗಳನ್ನು ತೆರೆದಿಡುವಲ್ಲಿ ಯಶಸ್ವಿಯಾಯಿತು. ‘ಪೇಜ್ ತ್ರೀ’ ಪುಟಕ್ಕೆ ವರದಿ ಮಾಡುವ ವರದಿಗಾರ್ತಿಯ ಕಣ್ಣಿನಲ್ಲಿ ಇಡೀ ಚಿತ್ರವನ್ನು ನಿರೂಪಿಸುತ್ತಾ ಹೋಗುತ್ತಾರೆ. ಶ್ರೀಮಂತ ಮಹಿಳೆಯರ ಪಾರ್ಟಿಗಳು, ಶೋಕಿಗಳು, ಚಿತ್ರೋದ್ಯಮದ ಅಸಲಿ ಮುಖಗಳು, ಮಾಡೆಲ್‌ಗಳ ಕುರೂಪ ಮುಖಗಳು, ಗೇಗಳು ಇವರೆಲ್ಲರನ್ನು ಇಟ್ಟುಕೊಂಡು ಪೇಜ್ ತ್ರೀ ಚಿತ್ರವನ್ನು ಮಾಡಿದರು. ಎಲ್ಲ ರೀತಿಯಲ್ಲಿ ಮಧುರ್ ಅವರ ಪ್ರತಿಭೆಯನ್ನು ಸಮ್ಮತಿಸಲೇ ಬೇಕಾದ ಚಿತ್ರ ಇದು. ಆವರೆಗೆ ಕಲಾತ್ಮಕತೆಗೆ ಗ್ರಾಮೀಣ ಮತ್ತು ಬಡವರ ಬದುಕನ್ನೇ ವಸ್ತುವಾಗಿರಿಸಿಕೊಂಡು ಬಂದ ನಿರ್ದೇಶಕರ ನಡುವೆ, ಮಧುರ್ ಭಂಡಾರ್ಕರ್ ನಗರ ಜೀವನವನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟರು. ಅಲ್ಲಿನ ಸೋಗಲಾಡಿತನವನ್ನು ಬಟಾ ಬಯಲುಗೊಳಿಸಿದರು. ಇದಾದ ಬಳಿಕ ಬಂದ ಟ್ರಾಫಿಕ್ ಸಿಗ್ನಲ್ ಕೂಡ ಒಂದು ಅತ್ಯುತ್ತಮ ಚಿತ್ರ. ‘ಟ್ರಾಫಿಕ್ ಸಿಗ್ನಲ್’ಗಳನ್ನೇ ನೆಚ್ಚಿಕೊಂಡ ನಗರದ ಬೀದಿಬದಿಯ ಜನರ ಬದುಕೊಂದನ್ನು ಅವರು ಅದರಲ್ಲಿ ತೆರೆದಿಟ್ಟರು. ಹಾಗೆಯೇ ಅದಕ್ಕೆ ಹೊಂದಿಕೊಂಡಿರುವ ಶ್ರೀಮಂತರ ತೆವಲುಗಳನ್ನು ಕೂಡ. ಬಹುಶಃ ಈ ಎರಡು ಚಿತ್ರಗಳಲ್ಲಿ ಹೇಳಬೇಕಾದುದನ್ನೆಲ್ಲ ಹೇಳಿರುವ ಮಧುರ್ ಇದಾದ ಬಳಿಕ ಫ್ಯಾಶನ್ ಮತ್ತು ಹೀರೋಯಿನ್ ಮಾಡುವ ಅಗತ್ಯವೇ ಇರಲಿಲ್ಲ. ಹೀರೋಯಿನ್‌ನಂತೂ ಅವರ ಹಿಂದಿನ ಚಿತ್ರಗಳ ಕನವರಿಕೆಗಳಷ್ಟೇ. ಈ ನಡುವೆ ಜೈಲ್ ಚಿತ್ರವನ್ನು ಮಾಡಿದರಾದರೂ, ಇದು ಜೈಲಿನ ಕಪ್ಪುಮುಖವನ್ನು ಪರಿಣಾಮಕಾರಿಯಾಗಿ ತೆರೆದಿಡುವಲ್ಲಿ ವಿಫಲವಾಯಿತು. ಚಾಂದ್ ನೀ ಬಾರ್, ಪೇಜ್ ತ್ರೀ, ಟ್ರಾಫಿಕ್ ಸಿಗ್ನಲ್ ಚಿತ್ರಗಳಲ್ಲಿ ಮಧುರ್ ಭಂಡಾರ್ಕರ್ ಸ್ಟಾಕ್‌ಗಳೆಲ್ಲ ಮುಗಿದು ಹೋಗಿವೆ. ಈಗ ಬರೇ ಅವುಗಳ ಹ್ಯಾಂಗೋವರ್‌ನಲ್ಲಿದ್ದಾರೆ ಮಧುರ್.

 ಮಾಹಿ ಅರೋರಾ ಎನ್ನುವ ಚಿತ್ರ ನಟಿಯ ಬದುಕಿನ ಸುತ್ತ ತಿರುಗುವ ‘ಹೀರೋಯಿನ್’ ಕರೀನಾ ಪಾಲಿಗೆ ಬೇರೆಯದೇ ಆಗಿರುವ ಡರ್ಟಿ ಪಿಕ್ಚರ್. ಇಲ್ಲಿ ಬಟ್ಟೆ ಬಿಚ್ಚುವಲ್ಲಿ, ಬಿಸಿ ಬಿಸಿ ದೃಶ್ಯಗಳಲ್ಲಿ ಕಾಣಿಸುವಾಗ ವಿದ್ಯಾಬಾಲನ್ ಜೊತೆಗೆ ಸ್ಪರ್ಧಿಸಲು ಕರೀನಾ ಮುಂದಾಗಿದ್ದಾರೆ. ಇದುವೇ ಚಿತ್ರದ ಹೆಗ್ಗಳಿಕೆ. ಉಳಿದಂತೆ ಆಕೆ ತನ್ನೊಳಗಿನ ಭಾವುಕತೆ ಮತ್ತು ಚಿತ್ರೋದ್ಯಮದ ಕಠೋರ ವಾಸ್ತವ ಇವುಗಳ ನಡುವೆ ನಡೆಸುವ ಸಂಘರ್ಷವನ್ನು ಚಿತ್ರ ತೆರೆದಿಡುತ್ತದೆ. ಪ್ರೀತಿಯ ಬೆನ್ನು ಬಿದ್ದು ಸೋಲುವ ನಟಿಯೊಬ್ಬಳು ಅತ್ತ ಚಿತ್ರೋದ್ಯಮದಲ್ಲೂ ಗೆಲ್ಲದೆ, ಇತ್ತ ವೈಯಕ್ತಿಕ ಜೀವನದಲ್ಲೂ ಗೆಲ್ಲದೆ ಒದ್ದಾಡುವ ಕತೆಯೇ ಹೀರೋಯಿನ್. ಇವುಗಳ ಮಧ್ಯೆ, ಒಂದು ಖಾಸಗಿ ಬದುಕನ್ನು ಮಾಹಿ ಹೇಗೆ ಕಂಡುಕೊಳ್ಳುತ್ತಾಳೆ ಎನ್ನುವುದು ಚಿತ್ರದ ಕ್ಲೈಮಾಕ್ಸ್. ಮಾಹಿಯ ಕತೆಯನ್ನು ಹೇಳುವ ಜೊತೆಗೇ ಹೇಗೆ ಚಿತ್ರೋದ್ಯಮ ತನ್ನ ಲಾಭಕ್ಕಾಗಿ ಮನುಷ್ಯನ ಸಂವೇದನೆಗಳನ್ನು, ಭಾವನೆಯನ್ನು ಕ್ರೂರವಾಗಿ ಹೊಸಕಿ ಹಾಕುತ್ತದೆ ಎನ್ನುವುದನ್ನು ಹೇಳುವ ಪ್ರಯತ್ನ ಮಾಡುತ್ತಾರೆ ನಿರ್ದೇಶಕ ಮಧುರ್ ಭಂಡಾರ್ಕರ್.
ಕ್ರಿಕೆಟ್ ತಾರೆಯ ಪಾತ್ರದಲ್ಲಿ ರಣ್‌ದೀಪ್ ಹೂಡ ಹೃದ್ಯವಾಗಿ ನಟಿಸಿದ್ದಾರೆ. ಅರ್ಜುನ್ ರಾಮ್‌ಪಾಲ್ ಕೂಡ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಛಾಯಾಗ್ರಹಣ, ಸಂಗೀತ ಪರವಾಗಿಲ್ಲ. ಚಿತ್ರವನ್ನು ಒಮ್ಮೆ ನೋಡುವುದಕ್ಕೆ ಅಡ್ಡಿಯಿಲ್ಲ.

Sunday, September 16, 2012


ವಾರ್ತಾಭಾರತಿ 10 ನೆ ವರ್ಷದ ಅಪೂರ್ವ ಸಮಾರಂಭದಲ್ಲಿ ನನ್ನ ಪ್ರೀತಿಯ ಮೇಷ್ಟ್ರ ಜೊತೆ....ಓಹ್....!!!

Thursday, September 6, 2012

ಸಮಯ ಮತ್ತು ಇತರ ಕತೆಗಳು

ಬೆಲೆ
‘‘ಒಂದು ಕಡಿಮೆ ಬೆಲೆಯ ಗಡಿಯಾರ ನೋಡಿ ಕೊಡಿ...’’ ಅವನು ಕೇಳಿದ.
‘‘ಸಾರ್...ಸಮಯ ತುಂಬಾ ಬೆಳೆಬಾಳುವದು. ಹೀಗಿರುವಾಗ ಸ್ವಲ್ಪ ಒಳ್ಳೆಯ ಗಡಿಯಾರ ನೋಡಿ ತಗೊಂಡು ಹೋಗಿ...’’ ಗ್ರಾಹಕ ಹೇಳಿದ.
‘‘ಹೌದೌದು. ಸಮಯ ತುಂಬಾ ಬೆಲೆಬಾಳುವದು. ನಿನ್ನೊಂದಿಗೆ ಅದನ್ನು ವ್ಯಯಿಸುವುದಕ್ಕೆ ಸಾಧ್ಯವಿಲ್ಲ’’ ಎಂದವನೇ ಆತ ಹೊರಟು ಹೋದ.

ಸಮಯ
‘‘ಇದೊಂದು ಅತ್ಯಂತಬಾಳುವ ಗಡಿಯಾರ. ಇದರ ಮುಳ್ಳುಗಳನ್ನು ವಜ್ರಗಳಿಂದ ಮಾಡಲಾಗಿದೆ. ಚಿನ್ನದಿಂದ ಗಡಿಯಾರದ ಹೊರಗವಚ ಮಾಡಲಾಗಿದೆ. ಕೋಟ್ಯಂತರ ರೂ. ಬೆಳೆ ಬಾಳುತ್ತದೆ’’ ಅವನು ವಿವರಿಸುತ್ತಿದ್ದ.
‘‘ಅಂದರೆ ಈ ಗಡಿಯಾರ ಸಮಯಕ್ಕಿಂತ ಜಾಸ್ತಿ ಬೆಲೆ ಬಾಳುವುದೆ?’’

ಉತ್ತರ
‘‘ಬರ ಅಂತ ಹೇಳಿಕ್ಕೊಂಡು ಯಾರಾದ್ರು ಊಟ ತಿಂಡಿ ಬಿಡ್ತಾರ?’’
ವಿದೇಶ ಪ್ರವಾಸವನ್ನು ಸಮರ್ಥಿಸಿಕೊಳ್ಳುತ್ತಾ ರಾಜಕಾರಣಿ ಕೇಳಿದ.
‘‘ಬರದ ಊರಲ್ಲಿ ಹೋಗಿ ಈ ಪ್ರಶ್ನೆಯನ್ನು ಕೇಳಿ. ನಿಮಗೆ ಉತ್ತರ ಸಿಗುತ್ತೆ’’ ಪತ್ರಕರ್ತನೊಬ್ಬ ಹೇಳಿದ.

ಮಾಹಿತಿ
ಅಲ್ಲಿ ಕಾನೂನಿನ ಕುರಿತಂತೆ ಮಾಹಿತಿ ನೀಡಲಾಗುತ್ತಿತ್ತು.
ಎಲ್ಲರೂ ಸೇರಿದ್ದರು.
ಮಾಹಿತಿದಾರ ಮಾಹಿತಿ ನೀಡುತ್ತಿದ್ದ.
ಒಬ್ಬ ಸಾಮಾನ್ಯ ಕೇಳಿದ ‘‘ಸ್ವಾಮಿ, ಕನ್ನಡದಲ್ಲಿ ಅದನ್ನು ತಿಳಿಸುತ್ತೀರಾ?’’
ತಕ್ಷಣ ಪೊಲೀಸರು ಆತನನ್ನು ಬಂಧಿಸಿದರು.
ಸಾರ್ವಜನಿಕ ಸ್ಥಳದಲ್ಲಿ ಪ್ರಚೋದನೆ ಎಂಬ ಕಾರಣಕ್ಕೆ ನ್ಯಾಯಲಯ ಅವನಿಗೆ ಜೈಲು ಶಿಕ್ಷೆ ವಿಧಿಸಿತು.
ಪತ್ರಿಕೆಯಲ್ಲಿ ‘ಶಂಕಿತ ನಕ್ಸಲೀಯನ ಬಂಧನ’ ಎಂದು ವರದಿಯಾಯಿತು.

ಪುರಾವೆ
‘‘ನಾನು ತಪ್ಪು ಮಾಡಿದ್ದೇನೆನ್ನುವುದಕ್ಕೆ ನಿನ್ನಲ್ಲಿ ಪುರಾವೆ ಏನಿದೆ...’’
‘‘ನನ್ನ ಕಣ್ಣನ್ನು ಎದುರಿಸಲಾಗದೆ ಒದ್ದಾಡುತ್ತಿರುವ ನಿನ್ನ ಕಣ್ಣುಗಳು’’

ಏಕೆ?
ಕವಿಯೊಬ್ಬನಲ್ಲಿ ಅವರು ಕೇಳಿದರು ‘‘ನೀನೇಕೆ ಮೊದಲಿನಂತೆ ಆರ್ದ್ರವಾಗಿ ಬರೆಯುತ್ತಿಲ್ಲ?’’
ಕವಿ ಒಂದು ಕ್ಷಣ ವೌನವಾದ. ಬಳಿಕ ಕೇಳಿದ ‘‘ನೀವೇಕೆ ಮೊದಲಿನಂತೆ ಬದುಕುತ್ತಿಲ್ಲ. ಈ ಬದುಕೇಕೆ ಮೊದಲಿನಂತೆ ಆರ್ದ್ರವಾಗಿಲ್ಲ...?’’

ಹಾಡು
ವಧು ಪರೀಕ್ಷೆ ನಡೆಯುತ್ತಿತ್ತು.
ವರ ಕೇಳಿದ ‘‘ಒಂದು ಹಾಡು ಹೇಳಿ’’
ವಧು ಒಂದು ವಿಷಾದ ಗೀತೆ ಹಾಡಿದಳು.
‘‘ಅದೇಕೆ ಶುಭಘಳಿಗೆಯಲ್ಲಿ ವಿಷಾದ ಗೀತೆ ಹಾಡುತ್ತಿದ್ದೀರಿ?’’ ವರ ಪ್ರಶ್ನಿಸಿದ.
‘‘ಅಪ್ಪ ತೆರಬೇಕಾದ ವರದಕ್ಷಿಣೆಯ ಮೊತ್ತ ಕೇಳಿದ ಮೇಲೆ ವಿಷಾದವನ್ನಲ್ಲದೆ, ಇನ್ನೇನನ್ನು ಹಾಡಲಿ’’ ವಧು ಕೇಳಿದಳು.

Saturday, August 25, 2012

ಕಾರ್ನಾಡ್ ಅವರ ಇನ್ನೊಂದು ಮುಖ

 ಇದು ಹಲವು ವರ್ಷಗಳ ಹಿಂದಿನ ಘಟನೆ. ನಾನು ಆಗ ಕೊಡಗಿನಲ್ಲಿ ‘ಜನವಾಹಿನಿ’ಯ ಮುಖ್ಯ ವರದಿಗಾರನಾಗಿದ್ದೆ. ನನ್ನ ಕಚೇರಿಯ ಮೇಲೊಂದು ಹೊಟೇಲ್ ಇತ್ತು. ಆ ಹೊಟೇಲ್‌ನ ಸಪ್ಲೇಯರ್ ಒಬ್ಬ ನನಗೆ ಆತ್ಮೀಯ ಮಿತ್ರನಾಗಿದ್ದ. ಆಗಾಗ ಕಚೇರಿಗೆ ಬಂದು ಅದು ಇದು ಅಂತ ಮಾತನಾಡುತ್ತಾ ಇರುತ್ತಿದ್ದ. ಅದೇ ಸಂದರ್ಭದಲ್ಲಿ ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತು. ಎಲ್ಲ ಪತ್ರಿಕೆಗಳಲ್ಲೂ ಗಿರೀಶ್ ಕಾರ್ನಾಡ್‌ಗೆ ಪ್ರಶಸ್ತಿ ಸಿಕ್ಕಿರುವುದು ಮುಖ್ಯ ಸುದ್ದಿಯಾಗಿ ಪ್ರಕಟವಾದುದು. ಆಗ ಈ ಹೊಟೇಲ್‌ನ ನನ್ನ ಗೆಳೆಯ ನನ್ನಲ್ಲಿ ಕೇಳಿದ ‘‘ಕಾರ್ನಾಡ್ ಅಂದ್ರೆ ಯಾರು?’’

ನನಗೆ ತಕ್ಷಣ ಹೇಗೆ ವಿವರಿಸಬೇಕು ಎಂದು ಹೊಳೆಯಲಿಲ್ಲ. ಆದರೂ ಬುದ್ಧಿ ಪ್ರಯೋಗಿಸಿದೆ. ‘‘ಪ್ರಭುದೇವ್ ನಟಿಸಿರುವ ‘ಕಾದಲನ್’ ತಮಿಳು ಚಿತ್ರದ ಖಳನಾಯಕ ಪಾತ್ರವನ್ನು ವಹಿಸಿದ ನಟ ಇಲ್ಲವೆ, ಅವರೇ ಗಿರೀಶ್ ಕಾರ್ನಾಡ್’’. ಒಮ್ಮೆಲೆ ಅವನಿಗೆ ಅರ್ಥವಾಗಿ ಹೋಯಿತು. ‘‘ಓ...ಅವರಾ, ಅವರು ಒಳ್ಳೆಯ ಆ್ಯಕ್ಟರ್ ಮಾರಾಯ. ಜ್ಞಾನಪೀಠ ಎಂದರೆ ಒಳ್ಳೆಯ ಆ್ಯಕ್ಟರ್‌ಗೆ ಕೊಡುವ ಪ್ರಶಸ್ತಿಯಾ?’’ ಎಂದು ಅವನು ಮರು ಪ್ರಶ್ನಿಸಿದ. ಅವನ ಮುಗ್ಧ ಪ್ರಶ್ನೆಗೆ ಕಾರಣಗಳೂ ಇವೆ. ಗಿರೀಶ್ ಕಾರ್ನಾಡ್‌ಗೆ ಕನ್ನಡದ ‘ಮೇಲ್‌ಸ್ತರ’ ಓದುಗರಲ್ಲ, ಅಕಾಡೆಮಿಕ್ ಆಗಿರದ ಒಂದು ಅಭಿಮಾನಿ ವರ್ಗವಿದೆ. ಹಾಗೆಂದು ಹೇಳುವುದಕ್ಕಿಂತ, ತನ್ನೆಲ್ಲ ಅಕಾಡೆಮಿಕ್ ಕೆಲಸಗಳಾಚೆಗೆ, ಒಂದು ಜನಪ್ರಿಯ ಮುಖ ಗಿರೀಶ್ ಕಾರ್ನಾಡ್‌ಗಿದೆ. ನಮಗೆ ಚಿರಪರಿಚಿತವಾಗಿರುವ ಕಾರ್ನಾಡ್ ಬೇರೆ. ಅಲ್ಲಿ ನಮಗೆ ಜ್ಞಾನಪೀಠ ಮುಖ್ಯವಾಗುತ್ತೆ. ಅವರ ಅಂತಾರಾಷ್ಟ್ರೀಯ ಹಿನ್ನೆಲೆ, ಖ್ಯಾತಿ ಮುಖ್ಯವಾಗತ್ತೆ. ಅಲ್ಲಿ ನಾಟಕಗಳು ಪ್ರಧಾನ ಪಾತ್ರವನ್ನು ಪಡೆಯತ್ತೆ. ಅವರ ಚಿಂತನೆಗಳು ನಮ್ಮನ್ನು ಸೆಳೆಯತ್ತದೆ. ಇನ್ನೊಂದು ಜನಪ್ರಿಯ ಕಾರ್ನಾಡ್ ಬೇರೆಯೇ ಇದ್ದಾರೆ. ಅದು ಕಮರ್ಶಿಯಲ್ ಚಿತ್ರಗಳಲ್ಲಿ ಖಳನಟ, ಪೋಷಕನಟನಾಗಿ ಗುರುತಿಸಲ್ಪಡುವ ಕಾರ್ನಾಡ್. ಹಿಂದಿ, ತಮಿಳು, ಕನ್ನಡ ಭಾಷೆಗಳ ಹಲವು ಕಮರ್ಷಿಯಲ್ ಚಿತ್ರಗಳಲ್ಲಿ ಕಾರ್ನಾಡ್ ತಮ್ಮದೇ ಆದ ಜನಪ್ರಿಯ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಆ ಮೂಲಕ ತಮ್ಮದೇ ಆದ ಬೇರೆಯೇ ಒಂದು ಅಭಿಮಾನಿವರ್ಗವನ್ನು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ನಾನು ನೋಡಿದ ‘ಏಕ್ ಥಾ ಟೈಗರ್’ನಲ್ಲಿ ಇದೇ ಗಿರೀಶ್ ಕಾರ್ನಾಡ್ ‘ರಾ’ ಮುಖ್ಯಸ್ಥನ ಪಾತ್ರದಲ್ಲಿ ಗಮನಾರ್ಹವಾಗಿ ನಟಿಸಿ, ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ಅವರು ಸಲ್ಮಾನ್ ಖಾನ್ ಅವರ ಚೀಫ್ ಆಗಿ ನಟಿಸಿದ್ದಾರೆ. ಕೆಲವೇ ದಶ್ಯಗಳಲ್ಲಿ ಕಾಣಿಸಿಕೊಳ್ಳುವ ಈ ಪಾತ್ರ ಸಣ್ಣದಾದರೂ, ಭಿನ್ನ ಮತ್ತು ಭಾವುಕತೆಯನ್ನು ಮೈಗೂಡಿಸಿಕೊಂಡ ಪಾತ್ರ. ಕಾರ್ನಾಡ್ ಆ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ‘ಏಕ್ ಥಾ ಟೈಗರ್’ನಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರೀನಾ ಬಳಿಗ ನಮಗೆ ಇಷ್ಟವಾಗುವುದು ಕಾರ್ನಾಡ್ ಅವರ ಪಾತ್ರ. ಇಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರೀನಾ ಬಿಟ್ಟರೆ ಯಾವ ಪಾತ್ರಗಳೂ ಪುಷ್ಟಿಯಾಗಿಲ್ಲದೆ ಇರುವ ಕಾರಣ, ಕಾರ್ನಾಡ್ ತನಗೆ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಇನ್ನಷ್ಟು ಅವಕಾಶಗಳನ್ನು ಪಡೆಯುವ ಸಾಧ್ಯತೆಯನ್ನು ಈ ಚಿತ್ರದಲ್ಲಿ ಕಾಣಿಸಿದ್ದಾರೆ.


ಏಕ್‌ಥಾ ಟೈಗರ್ ಚಿತ್ರದ ಅತಿ ದೊಡ್ಡ ಕೊರತೆಯೆಂದರೆ ಕತೆ. ಮುಖ್ಯವಾಗಿ ಚಿತ್ರಕತೆ. ಕತೆಗೆ ಇಲ್ಲಿ ಯಾವ ವಿಶೇಷ ಮಹತ್ವವೂ ಇಲ್ಲ. ಚಿತ್ರದಲ್ಲಿ ಸಲ್ಮಾನ್ ಖಾನ್ ರಾ ಏಜೆಂಟ್ ಆಗಿದ್ದರೂ, ಆತನ ಗೂಢಚರ ಕೆಲಸ ಚಿತ್ರದಲ್ಲಿ ಬರೆ ನೆಪವಾಗಿ ಮಾತ್ರ ಬರುತ್ತದೆ. ಅದಕ್ಕೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಒಬ್ಬ ಅಣು ವಿಜ್ಞಾನಿ ಪ್ರೊಫೆಸರ್‌ನ ಮೇಲೆ ಕಣ್ಣಿಡುವುದಕ್ಕಾಗಿ ಸಲ್ಮಾನ್‌ನನ್ನು ವಿದೇಶಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅವನಿಗೆ ಐಎಸ್‌ಐ ಏಜೆಂಟ್ ರೆಯ ಮುಖಾಮುಖಿಯಾಗುತ್ತಾಳೆ. ಇದಾದ ಮೇಲೆ ಅವರ ನಡುವೆ ಪ್ರೇಮ ಹುಟ್ಟುತ್ತದೆ. ಅಲ್ಲಿಗೆ ಪ್ರೊಫೆಸರ್‌ನ ಕತೆ ಮುಗಿದೇ ಹೋಗಿ ಬಿಡುತ್ತದೆ. ಟೈಗರ್ ಮತ್ತು ರೆಯಾರನ್ನು ಪರಸ್ಪರ ಭೇಟಿ ಮಾಡಿಸುವುದಕ್ಕಾಗಿಯೇ ಈ ಪ್ರೊಪೆಸರ್ ಸನ್ನಿವೇಶವನ್ನು ಹೆಣೆಯಲಾಗಿದೆ ಎನ್ನುವುದು ಗೊತ್ತಾಗಿ ಬಿಡುತ್ತದೆ. ಚಿತ್ರ ವೇಗವಾಗಿ ಓಡುವುದು ಇಂಟರ್‌ವೆಲ್ ನಂತರ. ರೆಯ ಮತ್ತು ಟೈಗರ್ ಪ್ರೀತಿಯನ್ನು ಪಾಕಿಸ್ತಾನದ ಐಎಸ್‌ಐ ಮತ್ತು ಭಾರತ ರಾ ಜಂಟಿಯಾಗಿ ಬೆಂಬತ್ತುವುದು ಮತ್ತು ಅವರಿಂದ ಈ ಪ್ರೇಮಿಗಳು ಪಾರಾಗುವ ಆ್ಯಕ್ಷನ್ ಸನ್ನಿವೇಶಗಳು ಚಿತ್ರಕ್ಕೆ ಒಂದಿಷ್ಟು ಕಾವು ನೀಡುತ್ತದೆ.

ಚಿತ್ರ ತನ್ನ ಕ್ಲೆೃಮಾಕ್ಸ್‌ನಲ್ಲಿ ಉಳಿಸುವ ಸಂದೇಶ ಮಾತ್ರ ಇಷ್ಟವಾಗುತ್ತದೆ. ಮನಸ್ಸಿಗೆ ಮುಟ್ಟುತ್ತದೆ. ‘‘ಎರಡೂ ದೇಶಗಳ ವೈರ ಕಟ್ಟಿಕೊಂಡು ಎಲ್ಲಿಯವರೆಗೆ ತಪ್ಪಿಸಿಕೊಳ್ಳುತ್ತೀಯ ಟೈಗರ್?’’ ಎಂದು ಮೊಬೈಲ್‌ನಲ್ಲಿ ಚೀಫ್ ಪ್ರಶ್ನಿಸುತ್ತಾರೆ.
ಆಗ ಟೈಗರ್ ಒಂದು ಅರ್ಥಪೂರ್ಣ ಡೈಲಾಗ್ ಹೊಡೆಯುತ್ತಾನೆ. ‘‘ಯಾವಾಗ ಪಾಕಿಸ್ತಾನ ಮತ್ತು ಭಾರತಕ್ಕೆ ಐಎಸ್‌ಐ ಮತ್ತು ರಾ ಸಂಸ್ಥೆಗಳ ಅಗತ್ಯಬೀಳುವುದಿಲ್ಲವೋ, ಆಗ ನಾವಿಬ್ಬರು ಮರಳಿ ನಮ್ಮ ದೇಶಕ್ಕೆ ಬರುತ್ತೇವೆ’’
‘‘ಗುಡ್‌ಲಕ್’’ ಎಂದು ಚೀಫ್ ತನ್ನ ಫೋನ್ ಕಟ್ ಮಾಡುತ್ತಾನೆ. ಏನೇ ಇರಲಿ, ಸಲ್ಮಾನ್, ಕತ್ರೀನಾ ಬಳಿಕ ಏಕ್‌ಥಾ ಟೈಗರ್ ಚಿತ್ರದಲ್ಲಿ ಗುರುತಿಸಲ್ಪಡುವ ಪಾತ್ರ ಕಾರ್ನಾಡ್ ಅವರದು ಎನ್ನುವದರಲ್ಲಿ ಸಂಶಯವಿಲ್ಲ. ಸಲ್ಮಾನ್ ಒಳಗೆ ಒಂದು ಆರ್ದ್ರತೆಯನ್ನು ಬಿತ್ತುವುದು ಕಾರ್ನಾಡ್ ನಿರ್ವಹಿಸಿದ ಚೀಫ್ ಪಾತ್ರ. ಹಾಗೆಯೇ ಕರ್ತವ್ಯದ ಕಾರಣಕ್ಕಾಗಿ, ಅದೇ ಸಲ್ಮಾನ್‌ನನ್ನು ಬೇಟೆಯಾಡುವ ಸನ್ನಿವೇಶವನ್ನು ನಿರ್ವಹಿಸುವಲ್ಲೂ ಕಾರ್ನಾಡ್ ಯಶಸ್ವಿಯಾಗುತ್ತಾರೆ. ಪ್ರಕಾಶ್ ರೈ ಜೊತೆ ಜೊತೆಗೇ ಕಾರ್ನಾಡ್ ಕೂಡ ಹಿಂದಿ ಚಿತ್ರರಂಗದಲ್ಲಿ ತನ್ನ ಬೇರನ್ನು ಗಟ್ಟಿಗೊಳಿಸಲಿ ಎನ್ನುವುದು ಎಲ್ಲ ಕನ್ನಡಿಗರ ಹಾರೈಕೆ.

Thursday, August 23, 2012

ಆತ್ಮಕತೆ ಎಂದರೆ...

 ಆತ್ಮಕತೆ ಎಂದರೆ
ಸ್ವಯಂ ಇರಿದುಕೊಳ್ಳುವುದು...
ಮುಖವನ್ನು ಚರ್ಮದಂತೆ
ಅಂಟಿಕೊಂಡ ಹೆಸರನ್ನು
ಹರಿದುಕೊಳ್ಳುವುದು!

ಇನ್ನೂ ದೇಹದ ದಾಹವೇ
ಮುಗಿಯದೇ ಇರುವಾಗ
ಈ ಹಿತವಾದ ಸುಳ್ಳು ಜಗತ್ತನ್ನು
ಬಲಿಕೊಟ್ಟು
ನನ್ನ ಆತ್ಮದ ದಾಹವನ್ನು ಹೇಗೆ ತಣಿಸಲಿ?

ನಾನು ಬರೆಯಬೇಕಾಗಿರುವುದು
ಮೊದಲ ಒಂದು ಸಾಲು...
ನನಗೆ ಗೊತ್ತು, ಅದನ್ನು ಬರೆದು ಬಿಟ್ಟರೆ
ಉಳಿದೆಲ್ಲವನ್ನೂ ನೀವೆ ಬರೆದು
ನಿಮಿಷಾರ್ಧದಲ್ಲಿ ಮುಗಿಸಿ ಬಿಡುತ್ತೀರಿ...

ಬರೆಯಬೇಕಾಗಿರುವ ಮೊದಲ 

ಒಂದೇ ಒಂದು ಸಾಲು ನಾನು
ಬರೆಯುವುದಕ್ಕೆ ಸಮರ್ಥನಾದರೆ
ಉಳಿದುದೆಲ್ಲ ನಿಮಿಷಾರ್ಧದಲ್ಲಿ
ಮುಗಿದು ಹೋಗುತ್ತದೆ....

ಆದರೆ ನಿಮಗೇನು ಗೊತ್ತು?
ಆ ಒಂದು ಸಾಲನ್ನು ಅಲ್ಲಾಡಿಸಿದರೆ
ನಾನೀವರೆಗೆ ಕಟ್ಟಿ ನಿಲ್ಲಿಸಿರುವ
ಈ ಬದುಕೆಂಬ ಸುಳ್ಳು ಕಟ್ಟಡ
ದಢಾರನೆ ಉರುಳಿ ಬೀಳುವುದು?
ಅದರ ಧೂಳಿನೊಳಗೆ
ನನ್ನ ಜೊತೆ ಜೊತೆಗೇ
ನೀವು ಧಫನವಾಗುವ ಭಯ ನನಗೆ

ನನ್ನ ಜೊತೆ ಸರ್ವನಾಶವಾಗುವುದಕ್ಕೆ
ಸಿದ್ಧರಿದ್ದರೆ ಹೇಳಿ ಬಿಡಿ
ನನ್ನ ಆತ್ಮಕತೆಯ ಮೊದಲ ಸಾಲನ್ನು
ನಿಮ್ಮೆದೆಯ ಮೇಲೆ ನಾನು
ಚೂರಿಯಿಂದ ಕೆತ್ತಿಯೇ ಬಿಡುವೆ!


ಚಿತ್ರ ಕೃಪೆ: www.myclassiclyrics.com