Saturday, September 22, 2012

ಹೀರೋಯಿನ್: ಚಿತ್ರದ ದೌರ್ಬಲ್ಯವೇ ಮಧುರ್ ಭಂಡಾರ್ಕರ್

ಒಂದು ಚಿತ್ರ ವಿಮರ್ಶೆ

ಚಾಂದಿನಿ ಬಾರ್, ಪೇಜ್ ತ್ರೀ, ಟ್ರಾಫಿಕ್ ಸಿಗ್ನಲ್ ಚಿತ್ರಗಳ ಮೂಲಕ ಕೆಲವು ಶಾಕ್‌ಗಳನ್ನು ನೀಡಿದ್ದ ಮಧುರ್ ಭಂಡಾರ್ಕರ್ ಸದ್ಯದ ದಿನಗಳಲ್ಲಿ ಪ್ರೆಡಿಕ್ಟೆಬಲ್ ನಿರ್ದೇಶಕರಾಗಿ ಮಾರ್ಪಾಡಾಗಿರುವುದು ಅವರ ಸೃಜನಶೀಲತೆಗೆ ಅತಿ ದೊಡ್ಡ ಸವಾಲಾಗಿದೆ. ಫ್ಯಾಶನ್ ಚಿತ್ರ ನೋಡಿದ ಪ್ರೇಕ್ಷಕರು ‘ಹಿರೋಯಿನ್’ ಚಿತ್ರದ ಕುರಿತಂತೆ ಮೊದಲೇ ಒಂದು ಊಹೆಯನ್ನು ಹೊಂದಿರುತ್ತಾರೆ. ಮಧುರ್ ಭಂಡಾರ್ಕರ್ ಚಿತ್ರ ಹೀಗೆಯೇ ಇರುತ್ತದೆ ಎನ್ನುವ ಊಹೆ. ಆ ಊಹೆಯನ್ನು ‘ಹಿರೋಯಿನ್’ ಸುಳ್ಳು ಮಾಡುವುದಿಲ್ಲ. ನೀವು ಮಧುರ್ ಭಂಡಾರ್ಕರ್ ಚಿತ್ರ ಹೇಗಿರಬಹುದು, ಹೇಗೆ ಮುಂದೆ ಸಾಗಬಹುದು ಎಂದು ಕಲ್ಪಿಸಿ ಕೊಳ್ಳುತ್ತೀರೋ, ಹೀರೋಯಿನ್ ಕತೆಯೂ ಹಾಗೆಯೇ ಸಾಗುತ್ತದೆ. ಬಹುಶಃ ಕರೀನಾ ಕಪೂರ್ ನಾಯಕಿಯಾಗಿ ನಟಿಸಿರುವ ‘ಹೀರೋಯಿನ್’ ಚಿತ್ರದ ಅತಿ ದೊಡ್ಡ ದೌರ್ಬಲ್ಯವೇ ಮಧುರ್ ಭಂಡಾರ್ಕರ್.


‘ಫ್ಯಾಶನ್’ ಚಿತ್ರದ ಸ್ಕ್ರಿಪ್ಟನ್ನು ಒಂದಿಷ್ಟು ಅದಲು ಬದಲು ಮಾಡಿ ‘ಹೀರೋಯಿನ್’ ಚಿತ್ರವನ್ನು ಸಿದ್ಧಗೊಳಿಸಿದಂತಿದೆ. ಎಲ್ಲಕ್ಕೂ ಮುಖ್ಯವಾಗಿ ಫ್ಯಾಶನ್ ಚಿತ್ರದ ಭಾವತೀವ್ರತೆ ಈ ಚಿತ್ರದಲ್ಲಿಲ್ಲ. ಕರೀನಾ ಕಪೂರ್ ತನ್ನ ಪಾತ್ರಕ್ಕೆ ನ್ಯಾಯ ನೀಡಲು ಸಾಕಷ್ಟು ಯತ್ನಿಸಿದ್ದಾರೆ. ಆದರೆ ಚಿತ್ರ ಮಧುರ್ ಭಂಡಾರ್ಕರ್ ಅವರ ಹಿಂದಿನ ಚಿತ್ರಗಳ ರಿಮೇಕ್‌ನಂತಿದೆ. ಕರೀನಾ ಪಾತ್ರ ಬೇಡಬೇಡವೆಂದರೂ ಪ್ರಿಯಾಂಕಾ ಜೊತೆಗೆ ಸ್ಪರ್ಧೆಗಿಳಿಯುತ್ತದೆ. ಮಧುರ್ ಭಂಡಾರ್ಕರ್ ಅತ್ಯುತ್ತಮ, ಸಂವೇದನಾ ಶೀಲ ನಿರ್ದೇಶಕ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅವರು ಸಿದ್ಧ ಮನಸ್ಥಿತಿಯಿಂದ ಹೊರ ಬಂದು, ತನ್ನನ್ನು ತಾನು ಇನ್ನಷ್ಟು ಪ್ರಯೋಗಕ್ಕೆ ಒಳಪಡಿಸುವ ಅಗತ್ಯ, ಅನಿವಾರ್ಯತೆ ಇದೆ.

    ಚಾಂದ್‌ನಿ ಬಾರ್ ಬಳಿಕ ಬಂದ ಪೇಜ್ ತ್ರೀ ಚಿತ್ರ ಎಲ್ಲರಿಗೂ ಒಂದು ರೀತಿಯಲ್ಲಿ  ಶಾಕ್ ನೀಡಿತ್ತು. ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರ ನಗರದಲ್ಲಿ ಬದುಕುವ ಶ್ರೀಮಂತ ವರ್ಗದ ಟೊಳ್ಳುತನಗಳನ್ನು ತೆರೆದಿಡುವಲ್ಲಿ ಯಶಸ್ವಿಯಾಯಿತು. ‘ಪೇಜ್ ತ್ರೀ’ ಪುಟಕ್ಕೆ ವರದಿ ಮಾಡುವ ವರದಿಗಾರ್ತಿಯ ಕಣ್ಣಿನಲ್ಲಿ ಇಡೀ ಚಿತ್ರವನ್ನು ನಿರೂಪಿಸುತ್ತಾ ಹೋಗುತ್ತಾರೆ. ಶ್ರೀಮಂತ ಮಹಿಳೆಯರ ಪಾರ್ಟಿಗಳು, ಶೋಕಿಗಳು, ಚಿತ್ರೋದ್ಯಮದ ಅಸಲಿ ಮುಖಗಳು, ಮಾಡೆಲ್‌ಗಳ ಕುರೂಪ ಮುಖಗಳು, ಗೇಗಳು ಇವರೆಲ್ಲರನ್ನು ಇಟ್ಟುಕೊಂಡು ಪೇಜ್ ತ್ರೀ ಚಿತ್ರವನ್ನು ಮಾಡಿದರು. ಎಲ್ಲ ರೀತಿಯಲ್ಲಿ ಮಧುರ್ ಅವರ ಪ್ರತಿಭೆಯನ್ನು ಸಮ್ಮತಿಸಲೇ ಬೇಕಾದ ಚಿತ್ರ ಇದು. ಆವರೆಗೆ ಕಲಾತ್ಮಕತೆಗೆ ಗ್ರಾಮೀಣ ಮತ್ತು ಬಡವರ ಬದುಕನ್ನೇ ವಸ್ತುವಾಗಿರಿಸಿಕೊಂಡು ಬಂದ ನಿರ್ದೇಶಕರ ನಡುವೆ, ಮಧುರ್ ಭಂಡಾರ್ಕರ್ ನಗರ ಜೀವನವನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟರು. ಅಲ್ಲಿನ ಸೋಗಲಾಡಿತನವನ್ನು ಬಟಾ ಬಯಲುಗೊಳಿಸಿದರು. ಇದಾದ ಬಳಿಕ ಬಂದ ಟ್ರಾಫಿಕ್ ಸಿಗ್ನಲ್ ಕೂಡ ಒಂದು ಅತ್ಯುತ್ತಮ ಚಿತ್ರ. ‘ಟ್ರಾಫಿಕ್ ಸಿಗ್ನಲ್’ಗಳನ್ನೇ ನೆಚ್ಚಿಕೊಂಡ ನಗರದ ಬೀದಿಬದಿಯ ಜನರ ಬದುಕೊಂದನ್ನು ಅವರು ಅದರಲ್ಲಿ ತೆರೆದಿಟ್ಟರು. ಹಾಗೆಯೇ ಅದಕ್ಕೆ ಹೊಂದಿಕೊಂಡಿರುವ ಶ್ರೀಮಂತರ ತೆವಲುಗಳನ್ನು ಕೂಡ. ಬಹುಶಃ ಈ ಎರಡು ಚಿತ್ರಗಳಲ್ಲಿ ಹೇಳಬೇಕಾದುದನ್ನೆಲ್ಲ ಹೇಳಿರುವ ಮಧುರ್ ಇದಾದ ಬಳಿಕ ಫ್ಯಾಶನ್ ಮತ್ತು ಹೀರೋಯಿನ್ ಮಾಡುವ ಅಗತ್ಯವೇ ಇರಲಿಲ್ಲ. ಹೀರೋಯಿನ್‌ನಂತೂ ಅವರ ಹಿಂದಿನ ಚಿತ್ರಗಳ ಕನವರಿಕೆಗಳಷ್ಟೇ. ಈ ನಡುವೆ ಜೈಲ್ ಚಿತ್ರವನ್ನು ಮಾಡಿದರಾದರೂ, ಇದು ಜೈಲಿನ ಕಪ್ಪುಮುಖವನ್ನು ಪರಿಣಾಮಕಾರಿಯಾಗಿ ತೆರೆದಿಡುವಲ್ಲಿ ವಿಫಲವಾಯಿತು. ಚಾಂದ್ ನೀ ಬಾರ್, ಪೇಜ್ ತ್ರೀ, ಟ್ರಾಫಿಕ್ ಸಿಗ್ನಲ್ ಚಿತ್ರಗಳಲ್ಲಿ ಮಧುರ್ ಭಂಡಾರ್ಕರ್ ಸ್ಟಾಕ್‌ಗಳೆಲ್ಲ ಮುಗಿದು ಹೋಗಿವೆ. ಈಗ ಬರೇ ಅವುಗಳ ಹ್ಯಾಂಗೋವರ್‌ನಲ್ಲಿದ್ದಾರೆ ಮಧುರ್.

 ಮಾಹಿ ಅರೋರಾ ಎನ್ನುವ ಚಿತ್ರ ನಟಿಯ ಬದುಕಿನ ಸುತ್ತ ತಿರುಗುವ ‘ಹೀರೋಯಿನ್’ ಕರೀನಾ ಪಾಲಿಗೆ ಬೇರೆಯದೇ ಆಗಿರುವ ಡರ್ಟಿ ಪಿಕ್ಚರ್. ಇಲ್ಲಿ ಬಟ್ಟೆ ಬಿಚ್ಚುವಲ್ಲಿ, ಬಿಸಿ ಬಿಸಿ ದೃಶ್ಯಗಳಲ್ಲಿ ಕಾಣಿಸುವಾಗ ವಿದ್ಯಾಬಾಲನ್ ಜೊತೆಗೆ ಸ್ಪರ್ಧಿಸಲು ಕರೀನಾ ಮುಂದಾಗಿದ್ದಾರೆ. ಇದುವೇ ಚಿತ್ರದ ಹೆಗ್ಗಳಿಕೆ. ಉಳಿದಂತೆ ಆಕೆ ತನ್ನೊಳಗಿನ ಭಾವುಕತೆ ಮತ್ತು ಚಿತ್ರೋದ್ಯಮದ ಕಠೋರ ವಾಸ್ತವ ಇವುಗಳ ನಡುವೆ ನಡೆಸುವ ಸಂಘರ್ಷವನ್ನು ಚಿತ್ರ ತೆರೆದಿಡುತ್ತದೆ. ಪ್ರೀತಿಯ ಬೆನ್ನು ಬಿದ್ದು ಸೋಲುವ ನಟಿಯೊಬ್ಬಳು ಅತ್ತ ಚಿತ್ರೋದ್ಯಮದಲ್ಲೂ ಗೆಲ್ಲದೆ, ಇತ್ತ ವೈಯಕ್ತಿಕ ಜೀವನದಲ್ಲೂ ಗೆಲ್ಲದೆ ಒದ್ದಾಡುವ ಕತೆಯೇ ಹೀರೋಯಿನ್. ಇವುಗಳ ಮಧ್ಯೆ, ಒಂದು ಖಾಸಗಿ ಬದುಕನ್ನು ಮಾಹಿ ಹೇಗೆ ಕಂಡುಕೊಳ್ಳುತ್ತಾಳೆ ಎನ್ನುವುದು ಚಿತ್ರದ ಕ್ಲೈಮಾಕ್ಸ್. ಮಾಹಿಯ ಕತೆಯನ್ನು ಹೇಳುವ ಜೊತೆಗೇ ಹೇಗೆ ಚಿತ್ರೋದ್ಯಮ ತನ್ನ ಲಾಭಕ್ಕಾಗಿ ಮನುಷ್ಯನ ಸಂವೇದನೆಗಳನ್ನು, ಭಾವನೆಯನ್ನು ಕ್ರೂರವಾಗಿ ಹೊಸಕಿ ಹಾಕುತ್ತದೆ ಎನ್ನುವುದನ್ನು ಹೇಳುವ ಪ್ರಯತ್ನ ಮಾಡುತ್ತಾರೆ ನಿರ್ದೇಶಕ ಮಧುರ್ ಭಂಡಾರ್ಕರ್.
ಕ್ರಿಕೆಟ್ ತಾರೆಯ ಪಾತ್ರದಲ್ಲಿ ರಣ್‌ದೀಪ್ ಹೂಡ ಹೃದ್ಯವಾಗಿ ನಟಿಸಿದ್ದಾರೆ. ಅರ್ಜುನ್ ರಾಮ್‌ಪಾಲ್ ಕೂಡ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಛಾಯಾಗ್ರಹಣ, ಸಂಗೀತ ಪರವಾಗಿಲ್ಲ. ಚಿತ್ರವನ್ನು ಒಮ್ಮೆ ನೋಡುವುದಕ್ಕೆ ಅಡ್ಡಿಯಿಲ್ಲ.

1 comment: