Tuesday, October 29, 2013

ಒಂದು ನಿಧಿಯ ಕತೆ

ಇತ್ತೀಚೆಗೆ ಸಾಧುವಿನ ಕನಸನ್ನು ನಂಬಿಕೊಂಡು ಉತ್ತರ ಪ್ರದೇಶದಲ್ಲಿ ನಮ್ಮ ಸರಕಾರ ನಿಧಿಗಾಗಿ ಅಗೆಯಿತು. ಇದೀಗ ಆ ಸ್ಥಳದಲ್ಲಿ ನಿಧಿ ಸಿಗದೇ, ಪ್ರಾಚ್ಯ ಇಲಾಖೆ ಬೇಸ್ತು ಬಿದ್ದಿದೆ. ಈ ಪ್ರಕರಣ ಬಾಲ್ಯದಲ್ಲಿ ನಾನು ಓದಿದ ಒಂದು ಪುಟ್ಟ ಕತೆಯನ್ನು ನೆನಪಿಸಿತು. ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
***
ಒಂದೂರಲ್ಲಿ ಒಬ್ಬ ವೃದ್ಧನಿದ್ದ. ಅವನಿಗೆ ಮೂವರು ಮಕ್ಕಳು. ಆದರೆ ಅವರು ಬರೇ ಸೋಮಾರಿಗಳು. ಆ ವೃದ್ಧನಿಗೆ ಮನೆಯ ಹಿತ್ತಲಲ್ಲೇ ಜಮೀನಿತ್ತು. ಆದರೆ ಸೋಮಾರಿ ಮಕ್ಕಳಿಂದಾಗಿ ಅದು ಪಾಳು ಬಿದ್ದು ಬೆಂಗಾಡಾಗಿತ್ತು. ವೃದ್ಧನಿಗೆ ತನ್ನ ಜಮೀನು ಮತ್ತು ಮಕ್ಕಳನ್ನು ನೆನೆದು ತೀರಾ ಖೇದವಾಯಿತು. ಹೀಗಿರುವಾಗ ಒಂದು ದಿನ ಅವನ ಮೃತ್ಯು ಸನಿಹವಾಯಿತು. ಮಕ್ಕಳ ಭವಿಷ್ಯ ಅವನ ಕಣ್ಣೆದುರು ಇತ್ತು. ಸಾಯುವ ಮೊದಲು ಅವರಿಗೆ ಯಾವ ರೀತಿಯಲ್ಲಾದರೂ ಸಹಾಯ ಮಾಡಬೇಕು ಎಂದು ವೃದ್ಧನಿಗೆ ಅನ್ನಿಸಿತು. ಮೂವರು ಮಕ್ಕಳನ್ನು ಅವನು ಕರೆದ. ಅವರು ತಂದೆಯ ತಲೆಪಕ್ಕ ಬಂದು ಕುಳಿತರು.
ವೃದ್ಧ ಮಕ್ಕಳನ್ನುದ್ದೇಶಿಸಿ ಹೇಳಿದ ‘‘ಮಕ್ಕಳೇ ನನ್ನ ಸಾವು ಸಮೀಪವಾಗಿದೆ. ನನ್ನ ಅನಂತರ ನೀವು ಹೇಗೆ ಜೀವನ ಮಾಡುತ್ತೀರಿ ಎಂದು ತಿಳಿಯದಾಗಿದೆ. ಆದುದರಿಂದ, ನಾನು ನಿಮಗೊಂದು ರಹಸ್ಯವನ್ನು ಹೇಳುತ್ತೇನೆ. ಮನೆಯ ಹಿತ್ತಲಿನ ಜಮೀನು ಇದೆಯಲ್ಲ. ಅದರಲ್ಲಿ ಭಾರೀ ನಿಧಿಯನ್ನು ನನ್ನ ತಂದೆ ಅಂದರೆ ನಿಮ್ಮ ತಾತಾ ಹೂತಿಟ್ಟಿದ್ದಾರೆ. ನಾನು ಸತ್ತ ಬಳಿಕ ನನ್ನ ಅಂತ್ಯಸಂಸ್ಕಾರಗಳೆಲ್ಲ ಸಂಪೂರ್ಣವಾದ ಮೇಲೆ ಆ ನಿಧಿಯನ್ನು ಹೊರತೆಗೆದು ಸುಖವಾಗಿ ಜೀವಿಸಿ’’ ಹೀಗೆಂದು ಮಾತು ಪೂರ್ತಿ ಮಾಡಿದವನೇ ವೃದ್ಧ ಸತ್ತು ಹೋದ.
ಮಕ್ಕಳು ಜೋರಾಗಿ ಅತ್ತರು. ಬೇಗ ಬೇಗ ತಂದೆಯ ಸಂಸ್ಕಾರ ಕ್ರಿಯೆಗಳನ್ನೆಲ್ಲ ನೆರವೇರಿಸಿದರು. ಬಳಿಕ ಮೂವರು ಹಾರೆ ಗುದ್ದಲಿಗಳೊಂದಿಗೆ ಮನೆಯ ಹಿತ್ತಲನ್ನು ಅಗೆಯ ತೊಡಗಿದರು. ಇಡೀ ದಿನ ಬೆವರು ಸುರಿಸಿ ಅಗೆದರು. ನಿಧಿಯ ವಿಷಯವಾದುದರಿಂದ ಈ ಕೆಲಸವನ್ನು ಬೇರೆಯವರ ಜೊತೆ ಮಾಡಿಸುವಂತಿಲ್ಲ. ಆದುದರಿಂದ ಮೂವರೇ ಬೆವರು ಸುರಿಸಿ ನೆಲವನ್ನು ಅಗೆದರು. ಆದರೆ ಎಲ್ಲೂ ನಿಧಿ ಸಿಗಲಿಲ್ಲ. ಅಗೆದು ಅಗೆದು ಸುಸ್ತಾದರು. ಮಕ್ಕಳು ಸಿಟ್ಟಿನಿಂದ ತಂದೆಗೆ ಬೈಯ್ಯತೊಡಗಿದರು. ನಮಗೆ ತಂದೆ ಮೋಸ ಮಾಡಿದರು ಎಂದು ಅಂದುಕೊಂಡರು. ಕೊನೆಗೆ ಅಗೆದ ಗುಂಡಿಯನ್ನು ಮುಚ್ಚಬೇಕಲ್ಲ, ಅದಕ್ಕಾಗಿ ಅನಿವಾರ್ಯವಾಗಿ ಒಂದಿಷ್ಟು ಬಾಳೆಗಿಡಗಳನ್ನು ತಂದು ಆ ಅಗೆದ ಗುಂಡಿಯಲ್ಲೆಲ್ಲ ನೆಟ್ಟು ಬಿಟ್ಟರು.
ಇದಾದ ಒಂದೆರಡು ದಿನ ಧಾರಾಕಾರ ಮಳೆ. ಮಣ್ಣನ್ನು ಚೆನ್ನಾಗಿ ಅಗೆದು ನೆಟ್ಟುದದರಿಂದಲೋ ಏನೋ ಹಿತ್ತಲ ಜಮೀನಿನ ತುಂಬಾ ಕೆಲವೇ ಸಮಯದಲ್ಲಿ ಬಾಳೆಗಿಡಗಳು ನಳ ನಳಿಸತೊಡಗಿದವು. ಎಲ್ಲಿ ನೋಡಿದರೂ ತೂಗುವ ಬಾಳೆಗೊನೆಗಳು. ತಾವೇ ಅಗೆದು ನೆಟ್ಟ ಬಾಳೆ ಗಿಡಗಳು. ಅದನ್ನು ಸುಮ್ಮನೆ ಬಿಟ್ಟಾರೆ? ಸಂಭ್ರಮದಿಂದ ಕೊಯ್ದು ರಾಶಿ ಹಾಕಿದರು. ಹಣ್ಣಾದ ಬಾಳೆ ಹಣ್ಣನ್ನು ತಿಂದರು. ಅದರ ಸ್ವಾದ ಅತ್ಯಂತ ರುಚಿಕರವಾಗಿತ್ತು. ಅಂತಹ ಬಾಳೆ ಹಣ್ಣನ್ನು ಅವರು ತಿಂದಿರಲೇ ಇಲ್ಲ. ನಿಜಕ್ಕೂ ಬಂಗಾರದ ಬಣ್ಣದ ಬಾಳೆ ಹಣ್ಣುಗಳು ಅವು. ಸರಿ, ಮನೆಗೆ ಒಂದಿಷ್ಟು ತೆಗೆದಿಟ್ಟು ಕೊಯ್ದ ಗೊನೆಗಳನ್ನೆಲ್ಲ ಸಂತೆಯಲ್ಲಿ ಮಾರಿದರು. ನೋಡಿದರೆ ಕೈ ತುಂಬಾ ಹಣ. ರಾಶಿ ರಾಶಿ ಹಣ. ಸಂತೋಷದಿಂದ ಹಿರಿ ಹಿರಿ ಹಿಗ್ಗಿದರು. ಆಗ ಅವರಿಗೆ ತಂದೆ ಹೇಳಿದ ನಿಧಿಯ ಮಾತು ನೆನಪಿಗೆ ಬಂತು. ತಂದೆ ಹೇಳಿದ ನಿಧಿ ಇದೀಗ ಅವರ ಕೈ ಸೇರಿತ್ತು. ನಿಜವಾದ ನಿಧಿ ಸಿಕ್ಕಿದ್ದರೂ ಅವರಿಗೆ ಈ ಪರಿಯ ಸಂತೋಷವಾಗುತ್ತಿರಲಿಲ್ಲ.
ಅಂದಿನಿಂದ ತಾವೇ ಹಿತ್ತಲನ್ನು ಅಗೆದು ಬಾಳೆಗಿಡಗಳ ತೋಟವನ್ನು ಬೆಳೆಯ ತೊಡಗಿದರು. ಪ್ರತಿ ವರ್ಷ ಹಿತ್ತಲ ಜಮೀನಿನಿಂದ ನಿಧಿಯನ್ನು ತಮ್ಮದಾಗಿಸಿಕೊಳ್ಳತೊಡಗಿದರು.
***
    ಇಡೀ ಭಾರತ ನಮ್ಮ ಹಿರಿಯರು ನಮಗೆಂದು ಬಿಟ್ಟು ಹೋದ ಜಮೀನು. ಆದರೆ ನಾವು ಸೋಮಾರಿಗಳಾಗಿ ಕಾಲ ಕಳೆಯುತ್ತಿದ್ದೇವೆ. ಸುಲಭದಲ್ಲಿ, ಐಶಾರಾಮದಲ್ಲಿ ಬದುಕುವ ಕನಸು ಕಾಣುತ್ತಿದ್ದೇವೆ. ಯಾವನೋ ಕಳ್ಳ ಸಾಧು ಹೇಳಿದ ಮಾತನ್ನು ನಂಬಿ ನಿಧಿ ಅಗೆದು ದೇಶವನ್ನು ಉದ್ಧರಿಸುವ ಕನಸು ಕಂಡಿದ್ದೇವೆ. ಬೇಸ್ತು ಬಿದ್ದಿದ್ದೇವೆ. ಆದರೆ ಈ ದೇಶದ ಫಲವತ್ತಾದ ನೆಲ, ನದಿಗಳು, ಮೂರು ದಿಕ್ಕಿನಲ್ಲಿ ಹರಡಿಕೊಂಡಿರುವ ಸಾಗರ ಇವೆಲ್ಲ ನಮಗೆ ದೊರಕಿದ ನಿಧಿ ಎನ್ನುವುದನ್ನು ಮರೆತು ಬಿಟ್ಟಿದ್ದೇವೆ. ಈ ದೇಶದ ಜನ ಸಂಪೂನ್ಮೂಲ ನಮಗೆ ಸಿಕ್ಕಿದ ನಿಧಿ ಎನ್ನುವುದನ್ನು ನಮ್ಮ ಸರಕಾರ ಮರೆತೇ ಬಿಟ್ಟಿದೆ. ಒಂದೊಂದು ಮಗು ಹುಟ್ಟಿದಾಗಲೂ, ಅದು ನಮ್ಮ ಬಟ್ಟಲ ತುತ್ತನ್ನು ಕಸಿದುಕೊಳ್ಳಲು ಬಂದ ದರೋಡೆಕೋರ ಎಂದು ಭಾವಿಸುವಷ್ಟು ಸ್ವಾರ್ಥಿಗಳಾಗಿ ಬಿಟ್ಟಿದ್ದೇವೆ. ಭಾರತ ಅಪಾರ ಭೂಪ್ರದೇಶವನ್ನು ಹೊಂದಿದ ದೇಶ. ಎಲ್ಲ ಮಕ್ಕಳಿಗೂ ಹೊಟ್ಟೆ ತುಂಬಾ ಊಟ ಹಾಕುವಷ್ಟು ಸಮರ್ಥಳು ಭಾರತ ಮಾತೆ. ಆದರೆ ಇಂದು ಈ ದೇಶದ ಮಕ್ಕಳು ಆಕೆಯನ್ನು ಬಿಕರಿಗಿಟ್ಟು ಐಶಾರಾಮ ಜೀವನ ಮಾಡುವಷ್ಟು ಸೋಮಾರಿಗಳಾಗಿದ್ದಾರೆ. ನಮ್ಮ ಕೃಷಿ ಭೂಮಿಯನ್ನು ನಾವು ವಿದೇಶಿ ಬಂಡವಾಳಗಾರರಿಗೆ ಒತ್ತೆಯಿಟ್ಟಿದ್ದೇವೆ. ಮತ್ತು ಅದನ್ನೇ ಅಭಿವೃದ್ಧಿ ಕರೆದು ಬೀಗುತ್ತಿದ್ದೇವೆ. ಇದರ ಪರಿಣಾಮವಾಗಿ ಮುಂದೊಂದು ದಿನ ತುತ್ತು ಅನ್ನಕ್ಕೂ ನಾವು ಪರಕೀಯರೆಗೆ ಬೊಗಸೆಯೊಡ್ಡಬೇಕಾದ ದಿನ ಬರುತ್ತದೆ. ಈ ನೆಲವನ್ನು ಅವರು ಹಿಂಡಿ ಹಿಪ್ಪೆ ಮಾಡಿ, ಇದರ ಸಾರಸರ್ವಸ್ವವನ್ನು ಹೀರಿ, ಇಲ್ಲಿಯ ಜಲ ನೆಲವನ್ನು ಕೆಡಿಸಿ, ಎಷ್ಟು ಗೋರಬೇಕೋ ಅಷ್ಟನ್ನು ಕೋರಿ ಅವರು ಹೊರಟು ಬಿಡುತ್ತಾರೆ. ಇಂದಿನ ನಮ್ಮ ಸ್ವಾರ್ಥ, ಭೋಗಲಾಲಸೆ, ಸೋಮಾರಿತನದ ಫಲವನ್ನು ನಾಳಿನ ನಮ್ಮ ಮಕ್ಕಳು ಉಣ್ಣ ಬೇಕಾಗುತ್ತದೆ. ಕಲುಷಿತ, ವಿಷಪೂರಿತ ಗಾಳಿಯನ್ನು ನಾವು ಅವರಿಗಾಗಿ ಸಿದ್ಧ ಮಾಡಿಡುತ್ತಿದ್ದೇವೆ. ನಮ್ಮ ಈ ಮನಸ್ಥಿತಿಯಿಂದಾಗಿಯೇ, ಸಾಧುವೊಬ್ಬ ನಿಧಿಯಿದೆ ಎಂದು ಹೇಳಿದಾಕ್ಷಣ ನಾವು ಅಲ್ಲಿ ಅಗೆದಿದ್ದೇವೆ. ‘ಇದರೂ ಇರಬಹುದು. ಕುಳಿತು ಉಣ್ಣುವ ಅವಕಾಶ ಸಿಕ್ಕಿದರೆ ಅದನ್ನು ತಪ್ಪಿಸುವುದು ಯಾಕೆ’’ ಎಂದು ಆ ಜಾಗವನ್ನು ಅಗೆದು ಬೇಸ್ತು ಬಿದ್ದಿದ್ದೇವೆ. ಸಾಧು ಈ ದೇಶಕ್ಕೆ ಸರಿಯಾದ ಪಾಠವನ್ನೇ ಕಲಿಸಿದ್ದಾನೆ. ಒಂದು ರೀತಿಯಲ್ಲಿ ಇಡೀ ದೇಶವನ್ನು ಅಣಕಿಸಿದ್ದಾನೆ.
 ಒಂದು ವೇಳೆ ಸಾಧು ಹೇಳಿದಂತೆ ಅಲ್ಲಿ ನಿಧಿ ಸಿಕ್ಕಿದ್ದರೆ ಈ ದೇಶದ ಸ್ಥಿತಿ ಏನಾಗಿ ಬಿಡುತ್ತಿತ್ತು ಎನ್ನುವುದನ್ನು ಒಂದು ಕ್ಷಣ ಯೋಚಿಸೋಣ. ಹಳ್ಳಿ ಹಳ್ಳಿಗಳಲ್ಲಿ ನಕಲಿ ಸಾಧುಗಳು ಹುಟ್ಟಿಕೊಳ್ಳುತ್ತಿದ್ದರು. ಎಲ್ಲರೂ ತಮ್ಮ ಕೆಲಸವನ್ನು ಬಿಟ್ಟು ತಮ್ಮ ತಮ್ಮ ತೋಟ, ಹೊಲ, ಗದ್ದೆಗಳನ್ನು ಅಗೆಯುವುದಕ್ಕೆ ಶುರು ಮಾಡುತ್ತಿದ್ದರು. ಮಾಟ, ಮಂತ್ರ, ವಾಮಾಚಾರ, ನಿಧಿ ಅನ್ವೇಷಣೆಯ ವೌಢ್ಯ ಒಮ್ಮೆಲೆ ಬೆಲೆ ಪಡೆದುಕೊಳ್ಳುತ್ತಿತ್ತು. ಒಬ್ಬರಿಗೊಬ್ಬರು ಇಲ್ಲದ ನಿಧಿಗಾಗಿ ಹೊಡೆದಾಡಿಕೊಳ್ಳುತ್ತಿದ್ದರು. ಈಗಾಗಲೇ ಕಂಧಾಚಾರ, ವೌಢ್ಯದಿಂದ ಗಬ್ಬೆದ್ದಿರುವ ದೇಶ ಇನ್ನಷ್ಟು ಸರ್ವನಾಶದೆಡೆಗೆ ಜಾರಿ ಬಿಡುತ್ತಿತ್ತು. ಈ ನಿಟ್ಟಿನಲ್ಲಿ ನಿಧಿ ಸಿಗದೇ ಇರುವುದು ಈ ದೇಶದ ಭಾಗ್ಯವೇ ಸರಿ. ಉತ್ತರ ಪ್ರದೇಶದ ಈ ಪ್ರಕರಣ ನಮ್ಮ ಹೆಗಲನ್ನು ನಾವು ಮುಟ್ಟಿ ನೋಡುವಂತೆ ಮಾಡಿದೆ. ನಮ್ಮ ನಿಜವಾದ ಹೊಣೆಗಾರಿಕೆ ಏನು ಎನ್ನುವುದನ್ನು ಎಚ್ಚರಿಸಿದೆ. ಇದರಿಂದ ನಾವು ಪಾಠ ಕಲಿತು, ನಿಜವಾದ ನಿಧಿ ಯಾವುದು ಎನ್ನುವುದನ್ನು ಇನ್ನಾದರೂ ಗುರುತಿಸುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾಗಿದೆ.

3 comments:

  1. ಹೌದು ನಿಜ!
    ಮಾಲತಿ ಎಸ್

    ReplyDelete
  2. super sir, what to tell about the govt, which is running behind that sanyasi statement

    ReplyDelete