‘ನಾದೋಪಾಸನ’ ಕೃತಿ ವಿದುಷಿ ಶ್ಯಾಮಲಾ
ಪ್ರಕಾಶ್ ಸಂಗೀತ ಸಾಧಕರ ಕುರಿತಂತೆ ಬರೆದ ಕೃತಿ. ಸಾಧಾರಣವಾಗಿ ನಮಗೆ ಕಲಾವಿದರ ನಾದದ ಸ್ವಾದ ಗೊತ್ತೇ
ಹೊರತು, ಅವರ ಬದುಕು, ಸಾಧನೆಯ ಹಿನ್ನೆಲೆ ತೀರಾ ಅಪರಿಚಿತ. ಒಬ್ಬ ಶಾಸ್ತ್ರೀಯ ಸಂಗೀತಗಾರನ ನಾದ ಹೊರಹೊಮ್ಮುವುದು
ಸಾಧನಗಳಿಂದಲ್ಲ. ಅವನ ಸಾಧನೆಯಿಂದ. ಅವನು ಅನುಭವಿಸಿದ ಬದುಕಿನಿಂದ. ಆದುದರಿಂದ ಕಲಾವಿದನನ್ನು ಇನ್ನಷ್ಟು
ನಮ್ಮವರನ್ನಾಗಿಸಿಕೊಳ್ಳಬೇಕಾದರೆ, ಆ ಕಲಾವಿದ ಬದುಕನ್ನು ನಮ್ಮದಾಗಿಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ
ವಿದುಷಿ ಶ್ಯಾಮಲಾ ಪ್ರಕಾಶ್ ಅವರ ಪ್ರಯತ್ನ ಅಭಿನಂದನೀಯ.
ಹಿರಿಯ ವಿದ್ವಾಂಸರಾದ ಸಿರಿಕಂಠದ ಶ್ರೀ ಕಂಠನ್ ಅವರಿಂದ ಹಿಡಿದು, ಗಂಗೂಬಾಯಿ ಹಾನಗಲ್,
ಡಾ. ತಾರಾನಾಥನ್, ತ್ಯಾಗರಾಜನ್, ವಸಂತ ಮಾಧವಿ, ಅಬ್ದುಲ್ ಹಲೀಂ ಜಾಫರ್‌ಖಾನ್, ಆನೂರು ಅನಂತ ಕೃಷ್ಣ
ಶರ್ಮ ಹೀಗೆ ವಿವಿಧ ನಾದ ಸಾಧನಗಳ ತಂತಿಗಳನ್ನು ಶ್ಯಾಮಲಾ ಅವರು ಮಿಡಿಯುತ್ತಾ ಹೋಗುತ್ತಾರೆ. ಹಾಗೆಂದು
ಇದು ಕೇವಲ ವ್ಯಕ್ತಿ ಪರಿಚಯ ಎಂದೂ ತಿಳಿದುಕೊಳ್ಳಬೇಕಾಗಿಲ್ಲ. ನಾದಲೋಕದೊಳಗಿನ ವೃತ್ತಿ ಮಾತ್ಸರ್ಯ,
ಅದರಿಂದ ಹಿಂದೆ ತಳ್ಳಲ್ಪಟ ವಿದ್ವಾಂಸರ ಕುರಿತಂತೆ ಸಣ್ಣದೊಂದು ಖೇದವನ್ನೂ ಈ ಕೃತಿ ಅಲ್ಲಲ್ಲಿ ವ್ಯಕ್ತಪಡಿಸುತ್ತದೆ.
ಹಾಗೆಯೇ ಉಸ್ತಾದ್ ಹಲೀಂ ಜಾಫರ್ ಖಾನ್ ಅವರನ್ನು ಹಿಂದಿಯಲ್ಲಿ ಸಂದರ್ಶಿಸಿ ಅದನ್ನು ಕನ್ನಡಕ್ಕೆ ಇಳಿಸಿದ್ದಾರೆ
ಲೇಖಕಿ. ಇಲ್ಲಿರುವ ಎಲ್ಲಾ ಸಾಧಕರೂ ಒಂದೊಂದು ರತ್ನ. ಇವುಗಳ ಕುರಿತಂತೆ ತಿಳಿದುಕೊಳ್ಳುವುದು, ನಮ್ಮ
ನಾದ ಪರಂಪರೆಯನ್ನು ಅರಿತುಕೊಳ್ಳುವ ಒಂದು ಭಾಗವೇ ಆಗಿದೆ ಎನ್ನುವುದು ಶ್ಯಾಮಲಾ ಅವರ ಪಯತ್ನದಿಂದ ನಮಗೆ
ಅರಿವಾಗಿ ಬಿಡುತ್ತದೆ.
ಕರ್ನಾಟಕ
ಸಂಘ, ಮುಂಬಯಿ ಹೊರತಂದಿರುವ ಈ ಕೃತಿಯ ಮುಖಬೆಲೆ 150 ರೂಪಾಯಿ.
No comments:
Post a Comment