Saturday, December 24, 2011

‘ಪರುಷಮಣಿ’ ಕೃತಿಯ ಕುರಿತಂತೆ ಬಂಜಗೆರೆ ಜಯಪ್ರಕಾಶ್
























ದಿ. ಬಿ. ಎಂ. ರಶೀದ್ ಅವರ ಕತೆ, ಕವಿತೆ, ಲೇಖನಗಳ ಸಮಗ್ರ ಸಂಗ್ರಹ ಪರುಷಮಣಿ ಕೃತಿಯ ಕುರಿತಂ
ತೆ ಬಂಜಗೆರೆ ಜಯಪ್ರಕಾಶ್ ಇಲ್ಲಿ ಬರೆದಿದ್ದಾರೆ. ೨೦೦೬ ರಲ್ಲಿ ಕೃತಿ ಬಿಡುಗಡೆಗೊಂದಾಗ ಸಮಾರಂಭದಲ್ಲಿ ಅದರ ಪರಿಚಯವನ್ನು ಮಾಡಿದವರು ಬಂಜಗೆರೆ ಜಯಪ್ರಕಾಶ್.

‘ಪರುಷಮಣಿ’ಎಂಬ ಕಲ್ಪನೆಯೇ ತುಂಬಾ ಕಾವ್ಯಾತ್ಮಾಕವಾದದ್ದು. ಮಾನವ ತನ್ನ ಭೌತಿಕ
ವಾಸ್ತವಗಳಾಚೆಗೆ ಪಡೆಯಬಯಸಿದ ರಮ್ಯಾದ್ಭುತ ಸೃಷ್ಟಿಶಕ್ತಿಯ ಸಂಕೇತವಾದ ಅದು ನಿರಂತರ ಆಶಾವಾದದ ಸಂಕೇತವೂ ಹೌದು, ಅದರಂತೆಯೇ ಮಾನವನ ಮಿತಿಗಳ ದ್ಯೋತಕವೂ ಹೌದು.
ಇಂತಹ ಮೋಹಕ ಹೆಸರಿನ ಬರಹ ಸಂಕಲನದ ಕೃತಿಕಾರ ಬಿ.ಎಂ.ರಶೀದ್ ನಮ್ಮ ನಡುವೆ ಈಗಿಲ್ಲ ಎನ್ನುವ ನೋವಿನ ನೆನಪಿನ ನಡುವೆಯೇ ಇಂತಹದೊಂದು ಅರ್ಥಪೂರ್ಣ ಕೃತಿಯನ್ನು ಪ್ರಕಟಿಸಿ ರಶೀದನ ನೆನಪನ್ನು ಚಿರಂತನವಾಗಿಸಲು ಏರ್ಪಟ್ಟಿರುವ ಈ ಕಾರ್ಯಕ್ರಮ ಸಾರ್ಥಕವಾದುದೆಂದು ನಾನು ಭಾವಿಸುತ್ತೇನೆ.

‘ಪರುಷಮಣಿ’ ಬಿ.ಎಂ.ರಶೀದ್ ಬೇರೆ ಬೇರೆ ಸಂದರ್ಭದಲ್ಲಿ ಬರೆದ ಆರು ಕತೆ, ಹತ್ತು
ಕವಿತೆ, ಹಾಗೂ ಕೆಲವು ಲೇಖನಗಳನ್ನು ಒಳಗೊಂಡಿವೆ. ಈ ಕೃತಿ ನಿದರ್ಶಿಸುವಂತೆ ರಶೀದ ನಮ್ಮ ನಡುವಿನ ಅತ್ಯಂತ ಪ್ರತಿಭಾವಂತ ಪ್ರಯೋಗಶೀಲ ಲೇಖಕನಾಗಿದ್ದ. ಕಥೆ ಹಾಗೂ ಕಾವ್ಯಗಳೆರಡರಲ್ಲೂ ಆತ ಪ್ರದರ್ಶಿಸಿರುವ ಸೃಜನಶೀಲ ಶಕ್ತಿ ಇದಕ್ಕೆ ನಿದರ್ಶನವೊದಗಿಸುತ್ತಿದೆ. ಹರೆಯಕ್ಕೆ ಸಹಜವಾದ ಪ್ರೀತಿ ಪ್ರೇಮಗಳ ಸುತ್ತ ಈ ಬರಹಗಳ ವಸ್ತು ಪ್ರಧಾನವಾಗಿ ಚಲಿಸುತ್ತದೆಯಾದರೂ ಅದರೊಳಗೆ ವ್ಯಕ್ತವಾಗುವ ಜೀವಪರ ನಿಲುವು ಹಾಗೂ ಒಂದು ಆಲೋಚನಾಪೂರ್ಣ ತಾತ್ವಿಕತೆ ಒಬ್ಬ ಬರಹಗಾರನಾಗಿ ರಶೀದ ಬೆಳೆಯಬಹುದಾಗಿದ್ದ ಎತ್ತರವನ್ನು ಸೂಚಿಸುವ ಕೈಮರದಂತಿವೆ.

ಈ ಸಂಕಲನದಲ್ಲಿ ನಾವು ಗಮನಿಸಬೇಕಾದ ಎರಡು ಮುಖ್ಯ ಕತೆಗಳಿವೆ. ಕಥಾವಸ್ತುವಿನ ನಿರ್ವಹಣೆಯ ದೃಷ್ಟಿಯಿಂದ ಈ ಎರಡೂ ಕಥೆಗಳು ರಶೀದನ ಸಾರ್ಥಕ ಕಥೆಗಳಾಗಿವೆ. ‘ಪರ್ಯಾಯ’ ಹಾಗೂ ‘ಕ್ಷಮಿಸಿ, ಬಯಕೆಗಳೇ ಇನ್ನೆಂದಾದರೊಮ್ಮೆ ಬರುವೆ...’ ಎಂಬ ಈ ಕಥೆಗಳು ಸಾಕಷ್ಟು ಪಳಗಿದ ಕಥೆಗಾರನೊಬ್ಬನ ಪ್ರತಿಭೆಯನ್ನು ಅತ್ಯಂತ ಹೃದ್ಯವಾಗಿ ನಮ್ಮ ಮುಂದಿಡುತ್ತಿವೆ.
ಪುಟ್ಟ ಕಥೆಯಾದ ‘ಗರ್ಭ’ ಮತ್ತು ‘ಇಲ್ಲೊಬ್ಬಳು ಅಮೃತಮತಿ’ ಕೂಡ ಕಥಾಶಿಲ್ಪದ ದೃಷ್ಟಿಯಿಂದ ಒಳ್ಳೆಯ ಕಥೆಗಳೇ ಆದರೂ ಅವುಗಳಲ್ಲಿ ಇರುವ ಅತೀ ಭಾವುಕತೆ ಅಥವಾ ಭಾವನೆಗಳ ಉತ್ಕಟತೆ
ಕೇವಲ ಒಂದು ತೀವ್ರ ಅನುಭವ ಕಟ್ಟಿಕೊಡುವಷ್ಟಕ್ಕೆ ಮಾತ್ರ ಯಶಸ್ವಿಯಾಗಿವೆ.

ಹಾಗಾಗಿ ನಾನು ಮೊದಲು ಪ್ರಸ್ತಾಪಿಸಿದ ಎರಡು ಕಥೆಗಳು ಒಂದುಮಟ್ಟಿಗೆ ಈ ಭಾವೋತ್ಕಟತೆಯ ಅಂಶವನ್ನು ಹೊಂದಿದಾಗಲೂ ಬದುಕಿನ ವಾಸ್ತವಗಳನ್ನು ಕಣ್ಣೆದುರಿಗೆ ತರುವಲ್ಲಿ ಹೆಚ್ಚು ಯಶಸ್ವಿಯಾಗಿವೆ. ಬಹುಪಾಲು ತರುಣ ಬರಹಗಾರರ ನಡುವೆ ಒಂದಲ್ಲ ಒಂದು ಸಲ ಬರಬಹುದಾದ ‘ನಕ್ಸಲೀಯ’ ವಸ್ತು ‘ಪರ್ಯಾಯ’ ಕಥೆಯೊಳಗೆ ಬಂದಿದೆ. ಆದರೆ ತರುಣ ಹುಮ್ಮಸ್ಸಿನ ಹೋರಾಟದ ವೈಭವೀಕರಣ ಈ ಕಥೆಯ ಕೇಂದ್ರವಾಗದೆ ಅದರ ಅಂಚುಗಳ ಸುತ್ತ ಹುಟ್ಟುವ ಮಾನವ ಸಂಬಂಧಗಳ ವೇದನೆ ಹಾಗೂ ಅಸಹಾಯಕ ಹಂಬಲಗಳು ಈ ಕಥೆಯ ಮುಖ್ಯ ಲಕ್ಷವಾಗಿದೆ.

‘ಮರೋ ಪ್ರಪಂಚಂ ಪಿಲಿಚಿಂದಿ’ ಎಂಬ ಸೂಚನೆಯೊಂದಿಗೆ ಬಂದೂಕು ಧರಿಸಿ ನಡೆದುಬಿಟ್ಟ ತನ್ನ ಮಗನ ನಿರೀಕ್ಷೆಯಲ್ಲಿರುವ ಪರಮೇಶ್ವರಯ್ಯ ಎಂಬ ಉಪನ್ಯಾಸಕ ಸಲೀಮ ಎಂಬ ಕವಿ ಹೃದಯದ ತರುಣನಲ್ಲಿ ತನ್ನ ಮಗನನ್ನು ಕಂಡುಕೊಳ್ಳುವ ಒಂದು ಹಂಬಲ ಕಥೆಯ ಉದ್ದಕ್ಕೂ ಸಶಕ್ತವಾಗಿ ನಿರ್ಮಿತವಾಗಿದೆ. ಕಿಡಿಕಾರುವ ತನ್ನ ಮಗನ ಮಾತುಗಳನ್ನು ನೆನೆಯುತ್ತಾ ಅದರ ಜೊತೆಜೊತೆಗೇ ನಿಹಲಿಸ್ಟನಂತೆ ವಾದಿಸುವ ಸಲೀಮನನ್ನು ಹಂಬಲಿಸುತ್ತಾ ಪರಮೇಶ್ವರಯ್ಯ ಭ್ರಮೆ ಮತ್ತು ವಾಸ್ತವಗಳ ನಡುವೆ ತೇಲಾಡುತ್ತಾ ತಮ್ಮ ಪ್ರೀತಿಯ ನಿರೀಕ್ಷೆ ಸಾಕಾರಗೊಳ್ಳುವ ಕನಸಿನಲ್ಲಿರುತ್ತಾರೆ. ಪರಮೇಶ್ವರಯ್ಯನಿಗೆ ಕಥೆಯ ಅಂತ್ಯದಲ್ಲಿ ಕೈಗೆ ಸಿಗುತ್ತಿದೆಯೆಂದು ಭಾಸವಾಗುವ ಸಲೀಮನ ಆಗಮನದ ಭರವಸೆ ಕೂಡ ಆತ ಕಾಣುತ್ತಿರುವ ಕನಸಿನ ಭಾಗವಿರಬಹುದೇ ಎಂಬಂತಹ ಸಂದಿಗ್ಧತೆಯನ್ನು ಉಂಟುಮಾಡುತ್ತಾ ಮುಕ್ತಾಯಗೊಳ್ಳುವ ಕಥೆ ತನ್ನ ಒಡಲೊಳಗೆ ಇಟ್ಟುಕೊಂಡಿರುವ ಗಂಭೀರ ತಾತ್ವಿಕ ಜಿಜ್ಞಾಸೆಯಿಂದಾಗಿ ಓದುಗನ ಮನಸ್ಸನ್ನು ಹಿಡಿದಿಡುತ್ತದೆ.

ರಶೀದ್ ಒಬ್ಬ ಕಥೆಗಾರನಾಗಿ ತನ್ನ ವಯಸ್ಸಿಗೆ ಮೀರಿರುವ ಪ್ರಬುದ್ಧತೆಯನ್ನು ಇಂತಹ ತಾತ್ವಿಕ ಜಿಜ್ಞಾಸೆಯ ನಿರ್ವಹಣೆಯಲ್ಲಿ ಪ್ರದರ್ಶಿಸಿದ್ದಾನೆ. ‘ಮಾಡಬೇಕಾದುದರ ಬಗ್ಗೆ ಬರೆಯೋನು, ಕೊರೆಯುವವನು ಅದನ್ನಾತ ಮಾಡುವುದೇ ಇಲ್ಲ. ಚಾ, ಆಲ್ಕೋಹಾಲ್, ಸಿಗರೇಟ್ ಇದ್ದ ಹಾಗೆ ಜನಗಳಿಗೆ ಬದುಕುವುದಕ್ಕೆ ಆವೇಶಮಯ ಭಾಷಣಾನೂ ಬೇಕು. ಮಾತಾಡೋನಿಗೆ ಮಾ
ತಾಡಿ ಮುಗಿವ ಮುನ್ನವೇ ಕೇಳುವವನಿಗೆ ಕೇಳಿ ಮುಗಿದಿರುತ್ತದೆ. ಅಲ್ಲಿಗೆ ಅವರವರ ಕರ್ತವ್ಯ ಮುಗಿದಿರುತ್ತದೆ’ ಎಂಬ ಸಲೀಮ, ‘ತಾತ್ವಿಕವಾಗಿ ಸಮರ್ಥನೀಯವಲ್ಲದ್ದು ಮಾತ್ರ ಹಿಂಸೆ ಅಪ್ಪಾಜಿ...’ ಎನ್ನುವ ರವಿ ಇವೆರಡೂ ಬಿಂದುಗಳ ನಡುವೆ ನಡೆಯುತ್ತಾ ಹೋಗುವ ಕಥೆ ಉದ್ದೇಶಿಸಿರುವುದು ಹೋರಾಟದ ಬಗ್ಗೆ ತೀರ್ಪು ಕೊಡಲಿಕ್ಕಲ್ಲ, ಬದಲಾಗಿ ತನ್ನ ಮಗನ ಹಂಬಲದಲ್ಲಿರುವ ಪರಮೇಶ್ವರಯ್ಯ ಒಬ್ಬ ಸಲೀಮನ ಪ್ರೀತಿಗೆ ಸಿಕ್ಕಿ ಆರ್ತವಾಗಿ ತೊಳಲಾಡುವ ಪರಿಸ್ಥಿತಿಯ ಅಸಹನೀಯತೆಯನ್ನು. ರವಿ ಹೇಳುವ ಮಾತಿನ ತೀವ್ರತೆ, ಸಲೀಮನ ಮಾತಿನ ನಿರಾಸಕ್ತಿ ಇವೆರಡೂ ಕಥೆಯನ್ನು ಬೆಳೆಸುತ್ತಾ, ಇಲ್ಲಿಗೆ ರವಿ ಮರಳಿ ಬರುತ್ತಾನೆ ಎಂಬ ಸಾಂತ್ವನದೊಂದಿಗೆ ಮುಕ್ತಾಯವಾಗುವುದು, ಕಡೆಗೂ ಅದೊಂದು ವಾಸ್ತವದ ಮುಕ್ತಾಯವಲ್ಲದಿರುವುದು ಕಥೆಯ ಪರಿಣಾಮವನ್ನು ಹೆಚ್ಚಿಸಿದೆ. ಕಥೆಯ ನಿರೂಪಣೆಯ ಆರಂಭದಲ್ಲಿ ಯಶವಂತ ಚಿತ್ತಾಲರ ಭಾಷಾ ಶೈಲಿಯ ನೆನಪು ಹುಟ್ಟುತ್ತದೆಯಾದರೂ ಅದೇನು ಕಥೆಗೆ ಎರವಲು ತಂದ ಭಾವನೆಯನ್ನು ಉಂಟುಮಾಡುವುದಿಲ್ಲ.

ನಾನು ಮೆಚ್ಚಿಕೊಂಡ ಎರಡನೆ ಕಥೆ ‘ಕ್ಷಮಿಸಿ ಬಯಕೆಗಳೇ...’ ಕೂಡ ಮತ್ತೊಂದು ಕಾಯುವಿಕೆಯ ವಸ್ತುವನ್ನೊಳಗೊಂಡ ಕಥೆಯಾಗಿದೆ. ಅಕಸ್ಮಾತಾಗಿ ಒಂದು ಪತ್ರ ಪರಿಚಯಕ್ಕೆ ಸಿಕ್ಕಿಕೊಂಡ ಪಾಪಣ್ಣ ಆ ಪತ್ರ ಸಂಬಂಧದ ವ್ಯಕ್ತಿಯನ್ನು ಕಾಣಬೇಕೆಂದು ನಿರೀಕ್ಷಿಸುತ್ತಾ, ಆ ನಿರೀಕ್ಷೆಯನ್ನೇ ಬದುಕಿನ ರುಚಿ ಹೆಚ್ಚಿಸುವ ಗುರಿ ಎಂಬಂತೆ ಕಾಪಾಡಿಕೊಳ್ಳುತ್ತಾ ಬಂದು, ಕಡೆಗೊಂದು ದಿನ ಆ ನಿರೀಕ್ಷೆ ನಿಜವೇ ಆಗಿಬಿಡುವ ಸಂದರ್ಭ ಎದುರಾಗಿದೆ ಎನಿಸಿದಾಗ ಆ ವಾಸ್ತವದಿಂದ ತಪ್ಪಿಸಿಕೊಂಡು ಓಡುತ್ತ್ತಾನೆ. ಈ ಬಗೆಯ ಕಥಾವಸ್ತುವುಳ್ಳ ಕಥೆಗಳು ಸ್ವಲ್ಪಮಟ್ಟಿಗೆ ಅಪರೂಪ ಎಂದು ಹೇಳಬಹುದು. ರಶೀದ ತನ್ನ ವಯಸ್ಸಿಗೆ ಸಹಜವಾಗಿ ಒದಗುವ ಮಾಮೂಲಿ ಅನುಭವಗಳನ್ನು ಒಂದು ಕಥಾಭಿತ್ತಿಯೊಳಗೆ ತಂದು ಅದಕ್ಕೊಂದು ಅರ್ಥ ಸಾಧ್ಯತೆಯನ್ನು ಸಾಹಿತ್ಯಿಕವಾಗಿ ನಿರ್ಮಿಸಬಲ್ಲ ಎಂಬುದಕ್ಕೆ ಈ ಕಥೆ ಒಂದು ಸುಂದರ ಸಾಕ್ಷಿಯಾಗಿದೆ.

ಕಾಯುವಿಕೆಯ ನೀರಸತೆಯನ್ನು ವಿವರಿಸುತ್ತಲೇ ಆ ಕಾಯುವಿಕೆ ಉಂಟುಮಾಡುವ ‘ಥ್ರಿಲ್’ ಅನ್ನು ಮನಗಾಣಿಸುವುದಕ್ಕೆಂದೇ ಕಥೆಯನ್ನು ರೂಪಿಸಿದಂತಿರುವ ರಶೀದ ಲಾಟರಿ ಕೊಂಡುಕೊಳ್ಳುವ ಪ್ರಸಂಗದಲ್ಲೂ ಆ ತಾತ್ವಿಕತೆಯನ್ನು ಪ್ರತಿಪಾದಿಸುತ್ತಾನೆ. ‘ನಿನ್ನ ಲಕ್ಷ ತಗಂಡು ಹೋಗಿ ಬಾವಿಗಾಕಯ್ಯ’ ಎಂದು ರೇಗಿದ ಪಾಪಣ್ಣ ಒಂದು ಮಿನಿ ಕೊಂಡು ಜೇಬಿಗಿಳಿಸಿದ. ಸುಮ್ಮನೆ ಫಲಿತಾಂಶಕ್ಕೆ ಕಾಯುವ ‘ಥ್ರಿಲ್’ಗಾಗಿಯಾದರೂ ಇರಲಿಯೆಂದು. ಬಹುಶ: ಕಾಯುವ ‘ಥ್ರಿಲ್’ ಬಂಪರ್ ಪ್ರೈಸ್ ಬಂದಾಗಲೂ ಸಿಗಲಾರದಲ್ಲವೇ ಅಂದುಕೊಂಡ. ಸ್ಫೂರ್ತಿ ಎಂಬ ಕನಸಿನ ಹುಡುಗಿಯ ಪತ್ರಗಳಿಗೆ ಕಾದ, ಹಾಗೆ ಪತ್ರಕ್ಕೆ ಕಾಯುವ ಸುಖ, ಬಿಚ್ಚಿ ಓದು ಓದುತ್ತಾ ಹೋದಂತೆ ತಣ್ಣಗಾಗಿಬಿಡುತ್ತದೆ. ಹಾತೊರೆದು ಕಾದದ್ದನ್ನು ಪಡೆದಾಗ ‘ಇಷ್ಟೇನಾ’ ಎಂದೆನಿಸಿಬಿಡುತ್ತದೆ. ‘ಮುಂದಕ್ಕೇನು’ ಎಂಬ ಶೂನ್ಯವೇ ಬಾಯಿ ತೆರೆದು ನುಂಗಲು ಬರುತ್ತದೆ.

‘ಪರುಷಮಣಿ’ಯಲ್ಲಿರುವ ಎಲ್ಲಾ ಕಥೆಗಳೂ ಗಮನ ಸೆಳೆಯುವ ಕಥೆಗಳೇ.ಆದರೆ ರಶೀದನ ಒಳಗೆ ರೂಪುಗೊಳ್ಳುತ್ತಿದ್ದ ಸಮರ್ಥ ಕಥೆಗಾರನ ಲಕ್ಷಣಗಳನ್ನು ಬಿಂಬಿಸುವುದಕ್ಕೆ ಇವೆರಡೂ ಕಥೆಗಳು ಒಳ್ಳೆಯ ಉದಾಹರಣೆಗಳಾಗಿ ನನ್ನ ಗಮನ ಸೆಳೆದವಾದ್ದರಿಂದ ನಿಮ್ಮ ಮುಂದೆ ಅವನ್ನು ಹಂಚಿಕೊಂಡೆ. ಭಾಷೆಯ ಬಳಕೆ, ಕಥಾಶಿಲ್ಪದ ನಿರ್ಮಾಣ, ಪಾತ್ರಗಳ ವಿನ್ಯಾಸ, ಹಾಗೂ ಸಂದರ್ಭ ನಿರ್ವಹಣೆ ಮುಂತಾದ ತಾಂತ್ರಿಕ ಅಂಶಗಳ ನೆಲೆಯಿಂದ ನೋಡಿದಾಗಲೂ ರಶೀದ ಬರೆಯಬಹುದಾಗಿದ್ದ ಮತ್ತೆಷ್ಟೋ ಕಥೆಗಳು ಕನ್ನಡಕ್ಕೆ ಮತ್ತೊಬ್ಬ ಶಕ್ತ ಕಥೆಗಾರನನ್ನು ಕೊಡಲಿದ್ದವು ಎಂಬುದನ್ನು ಹೇಳುವಂತಿವೆ.

ಕಥೆಯಂತೆಯೇ ಕಾವ್ಯದಲ್ಲೂ ಸಾಕಷ್ಟು ಭರವಸೆಯನ್ನು ಹುಟ್ಟಿಸಿದ್ದ ಕವಿ ರಶೀದ್. ಈ ಸಂಕಲನದಲ್ಲಿ ‘ನಾನು ಸುಮ್ಮನಿದ್ದರೆ! ಆದರೆ ...’, ‘ನಿನಗೆ ನಾನು ಹುಟ್ಟಿದ ನಿಮಿಷ’, ‘ಪರುಷಮಣಿ’ ಮುಂತಾದ ಕವಿತೆಗಳು ಆತನ ಸಶಕ್ತ ಅಭಿವ್ಯಕ್ತಿಗೆ ಸಾಕ್ಷಿಗಳಾಗಿವೆ. ಕಥೆಗಳಲ್ಲೇ ಕಾವ್ಯಮಯ ಭಾಷೆ ಬಳಸುವ ರಶೀದ ಕವಿತೆಗಳಲ್ಲೂ ಅರ್ಥಗರ್ಭಿತ ಪ್ರತೀಕಾತ್ಮಕ ಭಾಷೆಯ ಮುಖಾಂತರ ಒಂದು ಬೆಚ್ಚನೆಯ ಸಂವೇದನೆಯನ್ನು ಉಂಟುಮಾಡುತ್ತಾನೆ.

ಪರುಶಮಣಿಯಂತೂ ಒಂದು ಪ್ರಸಂಗಾತ್ಮಕ ಕವಿತೆಯಾಗಿದ್ದು, ಕವಿ ಬದುಕಿನ ಕಹಿ ಅನುಭವದ ಸಾರವನ್ನು ಹಿಂಡಿ ಕಾವ್ಯದ ಮದಿರೆಯಾಗಿ ಬಟ್ಟಲಿಗೆ ತುಂಬಿತ್ತಿದ್ದಾನೆ
‘ನಿನ್ನ ಸಕಲ ಸೌಭಾಗ್ಯಕ್ಕೂ ನೀನು ದೇವ ಸ್ತುತಿ
ಸಲ್ಲಿಸುವಾಗ ನಾನು ಮೊರೆಯಿಡುತ್ತೇನೆ;
‘ಇಲ್ಲವಾಗಲು ನನಗೆ ಒಂದೂ ಇಲ್ಲದಿರಲಿ ದೇವರೇ..’
ಆಗ ನನ್ನೆದೆಯ ಪರುಷಮಣಿ,
ಕ್ಯಾಲೆಂಡರಿನಂತೆ ನಿನ್ನ ಮುಖಕ್ಕೆ ತಗುಲಿ ಹಾಕಿದ್ದ
ಆ ಸೂಳೆ ನಗುವಿನ ವಿರುದ್ಧ ದಿಕ್ಕಿಗೆ
ತನ್ನ ದಿವ್ಯ ಬೆಳಕಿನ ತೋರು ಬೆರಳನ್ನು ಹಿರಿಯುತ್ತಾ
ನನಗೆ ನಿರ್ದೇಶಿಸುತ್ತದೆ;
‘ಮಗನೇ, ಈ ದಾರಿಯಲ್ಲಿ ನೀನು ನಡೆ
ಇದು ಮಾತ್ರ ನೀನು ನಡೆಯಬಹುದಾದ ದಾರಿ’

ಕವಿತೆಯ ಟಿಪ್ಪಣಿ ಸೂಚಿಸುವಂತೆ ಇದು ರಶೀದನ ಕಡೆಯ ಪ್ರಕಟಿತ ಕವನ. ಕಡೆಯ ಪ್ರಕಟಿತ ಕವನ ಎಂಬುದರಲ್ಲೇನೂ ಹೆಚ್ಚಿನ ವಿಶೇಷವಿರಲಾರದು.ಆದರೆ ರಶೀದ ತನ್ನ ಜೀವನಾನುಭವದಲ್ಲಿ ಸ್ಪರ್ಶಿಸಿದ ಕಠೋರ ವಾಸ್ತವಗಳನ್ನೂ, ಅದಕ್ಕೆ ಇದಿರಾಗಿ ಬದುಕಿಗೆ ಸೂಚಿಸ ಬಯಸಿದ್ದ ದಿವ್ಯ ದೈವಿಕ ಹಾದಿಯನ್ನೂ ಇದು ಧ್ವನಿಸುತ್ತದೆಯೆಂಬ ಕಾರಣಕ್ಕೆ ಮನಕಲಕುತ್ತದೆ.

ಆತನ ಬಹುತೇಕ ಕವಿತೆಗಳು ಪ್ರೀತಿಯ ಹುಡುಕಾಟದಲ್ಲಿ, ಅದನ್ನು ಕಳೆದುಕೊಂಡ ನೋವಿನಲ್ಲಿ ರೂಪಾಕಾತ್ಮಕವಾಗಿ ನರಳುತ್ತವೆ. ಅಥವಾ ಆ ನೋವನ್ನೇ ಹಾಡುತ್ತವೆ.
‘ಆದರೆ ಇದೊಂದನ್ನು ಮಾತ್ರ ನೀನು ಒಪ್ಪಬೇಕು;
ಸಾವು ಮಾತ್ರ ಬದುಕಿಗೆ ರುಜುವಾಗುತ್ತದೆಯೆನ್ನುವುದನ್ನು...
ನಿನ್ನ ಬೆಡಗಿನಿಂದ ಚಿರಸ್ಮರಣೀಯವಾದುದನ್ನು
ಕಟ್ಟುವೆನೆಂದ ಹೆಣ್ಣೇ...
ಇದೀಗ ಕರುಣಾಳು ಸಾವು ಮಾತ್ರ
ನಿನ್ನ ಬದುಕನ್ನು ಸ್ಮರಿಸುತ್ತದೆನ್ನುವುದನ್ನು...’
ಎಂದು ಅತ್ಯಂತ ವಿಷಾದಪೂರ್ಣ ದನಿಗಳನ್ನು ಹೊಮ್ಮಿಸುವ ಈ ಕವಿತೆಗಳು ಅಂತ:ಕರಣಪೂರಕವಾದ ಅಭಿವ್ಯಕ್ತಿಗಳಾಗಿವೆ ಎಂಬುದು ಕವಿತೆಗಳ ಲಕ್ಷಣಗಳಲ್ಲೊಂದು. ಆರ್ದ್ರತೆಯಿಂದ ಓದಿಗೆ ಹೊಸತೆನಿಸುವ ರೂಪಕಗಳಿಂದ ಯಾವುದೋ ದಿವ್ಯ ಯಾಚನೆಯ ಹಂಬಲದಿಂದೆಂಬಂತೆ ನಿರೂಪಿತವಾಗಿರುವ ಈ ಕವಿತೆಗಳು ರಶೀದ ಕೇವಲ ಕಥೆಗಾರ ಮಾತ್ರವಲ್ಲ ಬದಲಾಗಿ ಉತ್ತಮ ಕವಿ ಕೂಡ ಎಂಬುದನ್ನು ಯಾವುದೇ ರಿಯಾಯಿತಿಯ ಹಂಗಿಲ್ಲದೆ ನಿದರ್ಶಿಸುತ್ತಿವೆ.

ಕಥೆ, ಕವನಗಳಲ್ಲಿ ವ್ಯಕ್ತವಾಗುವ ಅಸೀಮ ಜೀವಪರತೆ ಹಾಗೂ ಬೆಚ್ಚನೆಯ ಮಾನವೀಯ ಸಂವೇದನೆಯನ್ನು ತನ್ನ ಲೇಖನ ಹಾಗೂ ವರದಿಗಳಲ್ಲೂ ರಶೀದ ವ್ಯಕ್ತಪಡಿಸಿದ್ದಾನೆ. ಕಾವ್ಯದಂತಹುದೇ ಭಾವೋತ್ಕಟತೆಯಿಂದ ನಿರೂಪಿತವಾಗಿರುವ ‘ನೀನೊಬ್ಬನೇ ಮುಖೇಶ’, ‘ಹಾಡುವ ನಟರು’ ಎಂಬ ಲೇಖನಗಳು, ಸ್ಟಾರ್ ಉಪೇಂದ್ರನ ವಿಕೃತಿಯನ್ನು ಸಾಮಾಜಿಕ ಜವಾಬ್ದಾರಿಯಿಂದ ಪ್ರಶ್ನಿಸುವ ಪತ್ರ, ‘ಈ ದೈವ ಸಾಮ್ರಾಜ್ಯವನ್ನು ನೀವು ಕಂಡಿದ್ದೀರಾ’ ಎಂಬ ಪರಿಚಯ ಲೇಖನ ಮುಂತಾದವು ಆತನ ಜೀವನ ಪ್ರೀತಿಗೆ ಹಾಗೂ ಬರಹಗಾರನಾಗಿ ಪಡೆದಿದ್ದ ಶಕ್ತಿಗೆ ನಿದರ್ಶನವಾಗಿವೆ.

‘ಕೊಂಗಾಣದ ಅಮಾನುಷ ಕೊಲೆಗಳು’ ಎಂಬ ವರದಿ ಕೇವಲ ಅಪರಾಧ ಕೃತ್ಯದ ವರದಿ ಎಂಬಂತಿರದೆ ಅಂತಹ ಕೃತ್ಯಗಳ ಹಿಂದಿನ ಮಾನವೀಯ ಕಾರಣಗಳು, ಅಮಾನವೀಯ ಸಾಮಾಜಿಕ ಪರಿಸರಗಳು ಮುಂತಾದವುಗಳೆಲ್ಲವನ್ನೂ ಅಧ್ಯಯನ ಸ್ವರೂಪದಲ್ಲಿ ಮಂಡಿಸುತ್ತಾ ವರದಿಗಾರನೊಬ್ಬನಿಗೆ ಇರಬೇಕಾದ ಹಲವು ಆಯಾಮಗಳ ಒಳನೋಟಗಳನ್ನು ಬಿಂಬಿಸುತ್ತವೆ.

ಸುಂದರವಾಗಿ ಮನಸೆಳೆಯುವಂತೆ ಪ್ರಕಟಗೊಂಡಿರುವ ಈ ಕೃತಿ ಹಲವರ ಪರಿಶ್ರಮದಿಂದಾಗಿರಬಹುದು. ಅದರಲ್ಲಿ ಮುಖ್ಯವಾಗಿ ಅಣ್ಣನಂತೆಯೇ ಶಕ್ತ ಬರಹಗಾರನಾಗಲು ಹೊರಟಿರುವ ಸೂಕ್ಷ್ಮ ಮನಸ್ಸಿನ ತರುಣ ಬಿ.ಎಂ.ಬಶೀರ್ ಪರಿಶ್ರಮ ಈ ಸಂದರ್ಭದಲ್ಲಿ ಖಂಡಿತವಾಗಿಯೂ ಶ್ಲಾಘನೀಯವಾಗಿದೆ. ಇದು ಉಪಚಾರದ ಮಾತಲ್ಲ. ಕಳೆದು ಹೋದ ತನ್ನ ಪ್ರೀತಿಯ ಅಣ್ಣನ ಪ್ರೀತಿಗಳಲ್ಲೊಂದಾಗಿದ್ದ ಸಾಹಿತ್ಯವನ್ನು ಸದಭಿರುಚಿಯಿಂದ ಸಂಕಲನಗೊಳಿಸಿ, ಅದನ್ನೊಂದು ಅರ್ಥಪೂರ್ಣ ಸ್ಮಾರಕವನ್ನಾಗಿಸಿ ರಶೀದನನ್ನು ನೆನೆಯುತ್ತಿರುವ ಈ ಕ್ರಮ ಸಂಬಂಧ ಹಾಗೂ ಸ್ನೇಹಗಳ ವ್ಯಾಖ್ಯಾನದಂತಿವೆ.
ತನ್ನ ಬರವಣಿಗೆ ಸೂಚಿಸುತ್ತಿರುವ ಆಯಾಮಗಳು, ಒಬ್ಬ ಬರಹಗಾರನಾಗಿ ತಾನು ತಲುಪಿದ್ದ ನೆಲೆಗಳು, ತನ್ನ ಸಾಹಿತ್ಯಾಭಿರುಚಿಗೆ ಇದ್ದ ಸಾಧ್ಯತೆಗಳು ಹಾಗೂ ಈಗ ಬರೆದಿರುವುದರಲ್ಲಿ ಇರುವ ಸತ್ವ ಇವುಗಳ ಬಗ್ಗೆ ನಾವೆಲ್ಲಾ ಇಲ್ಲಿ ಚರ್ಚಿಸುತ್ತಿರುವಾಗ ಇಲ್ಲಿ ಈಗ ರಶೀದನಿಲ್ಲ. ನಿರಂತರ ನಿರೀಕ್ಷೆಯ ಮಾಯಾ ಜಿಂಕೆಯ ಬೆನ್ನು ಹತ್ತಿ ಹೋದ ಮಾನವೀಯ ಕನಸುಗಳ ಅನ್ವೇಷಕ ಈಗ ವಿಶ್ರಮಿಸುತ್ತಿರಬಹುದು. ಈತನ ನೆನಪಿಗೆ, ಸಾಹಿತ್ಯ ಪ್ರೀತಿಗೆ ಹಾಗೂ ಸ್ನೇಹ ಪೂರ್ವಕ ವ್ಯಕ್ತಿತ್ವಕ್ಕೆ ಈ ಮಾತುಗಳು ಅಪೂರ್ಣ ಶ್ರದ್ಧಾಂಜಲಿ ಎಂದು ನಾನು ಸಮರ್ಪಿಸುತ್ತಿದೇನೆ.

ಡಾ.ಬಂಜಗೆರೆ ಜಯಪ್ರಕಾಶ
ದಿನಾಂಕ 21.1.2006

No comments:

Post a Comment