Tuesday, December 13, 2011

ಕಳಚಿಟ್ಟು ಬಾ ಒಳಗೆ...

ಒಳ ಬರುವ ಮೊದಲು ಗೆಳೆಯ ಕೇಳಿದ
ಚಪ್ಪಲಿಯನ್ನು ಕಳಚಿಟ್ಟು ಬರಲೆ?
ಹೇಳಿದೆ:
ಗೆಳೆಯ ಕಾಲಿನಲ್ಲಿರುವ ಚಪ್ಪಲಿ
ಹಾಗೇ ಇರಲಿ
ನೀನು ಬಳಸಿ ಸವೆದು ಹೋಗಿರುವ
ನಿನ್ನ ಹೆಸರನ್ನು ಕಳಚಿ ಒಳಗೆ ಬಾ...

ಗೆಳೆಯಾ,
ತಪ್ಪು, ಹೆಸರನ್ನು ಹೊಲಿದ
ಚಮ್ಮಾರನದ್ದಲ್ಲ
ಅದನ್ನು ಧರಿಸಿ ನೀನು
ತುಳಿದ ದಾರಿಯದ್ದು

ನೀನು ಧರಿಸಿಕೊಂಡ
ಚಪ್ಪಲಿಯಲ್ಲಿ
ಅಂಟಿಕೊಂಡ ಧರ್ಮ, ಜಾತಿ
ವರ್ಗ, ಕುಲ, ಗೋತ್ರ...
ಇತ್ಯಾದಿ ಹೊಲಸುಗಳ ನೋಡು
ಒಳಗೆ ಬರುವುದಾದರೆ
ಕಳಚಿಟ್ಟು ಬಾ...
ಆ ನಿನ್ನ ಹೆಸರನ್ನ!

ಗೆಳೆಯಾ...
ಹೊಂಡ ತೋಡಿ ಮುಚ್ಚುವಾಗ
ನೀನೊಂದು ಬರೇ ಹೆಣ!
ನೀನು ಧರಿಸಿಕೊಂಡ
ಹೆಸರೆಂಬ ಚಪ್ಪಲಿಯನ್ನು
ಹರಿದು ಎಸೆದಿದ್ದಾರೆ ನೋಡು,
ಗುಜರಿ ಅಂಗಡಿಯ ತಕ್ಕಡಿಯಲ್ಲಿ
ತೂಗುತ್ತಿರುವ ನಿನ್ನ ಹೆಸರು
ಹತ್ತು ರೂಪಾಯಿಯಷ್ಟೂ
ಬೆಲೆ ಬಾಳುತ್ತಿಲ್ಲ!!

4 comments:

  1. ಇಲ್ಲಿರುವವರೆಗೂ , ಅಲ್ಲಿ ಬರುವುದು ಕಷ್ಟ... ಬಶೀರ್ ಸರ್ :-) ಪ್ರಯತ್ನವನ್ನಂತೂ ನಿರಂತರವಾಗಿ ಮಾಡುತ್ತೇನೆ... ಇಷ್ಟವಾಯ್ತು..

    ReplyDelete
  2. ನಿಮ್ಮ ಅಂಗಡಿಗೆ ಮೊದಲ ಬೇಟಿ
    ಸಂತೋಷವಾಯಿತು ....

    ReplyDelete
  3. ವಂದನೆಗಳು ವಂದನ ಅವರೇ. ಗುಜರಿ ಅಂಗಡಿಗೆ ಆಗಾಗ ಭೇಟಿ ನೀಡುತ್ತ ಇರಿ.

    ReplyDelete