Saturday, December 17, 2011
ಮರ್ಯಾದಸ್ಥರು ಮತ್ತು ಇತರ ಕತೆಗಳು
ಮಸ್ತಕಾಭಿಷೇಕ
ಆಳೆತ್ತರದ ಬಾಹುಬಲಿಯ ವಿಗ್ರಹಕ್ಕೆ ತುಪ್ಪ, ಹಾಲು, ಜೇನನ್ನು ಅಭಿಷೇಕ ಮಾಡಲಾಯಿತು.
‘ಇದೇನು?’ ಎಂದು ಕೇಳಿದರೆ ‘ಧರ್ಮ’ ಎನ್ನಲಾಯಿತು.
ಆತನ ಪಾದತಲದಲ್ಲಿ ಪುಟಾಣಿ ಮಗುವೊಂದು ಹಾಲಿಲ್ಲದೆ ಹಸಿವಿನಿಂದ ಕಣ್ಣೀರಿನ ಅಭಿಷೇಕ ಮಾಡುತ್ತಿತ್ತು.
‘‘ಇದೇನು?’’ ಎಂದು ಕೇಳಿದರೆ ‘‘ಕರ್ಮ’’ ಎನ್ನಲಾಯಿತು.
ಮಸ್ತಕಾಭಿಷೇಕದ ಮರುದಿನ ಬಾಹುಬಲಿ ‘ಮೈಯೆಲ್ಲ ಉರಿ’ ಎಂದು ಕಣ್ಣೀರಿಡುತ್ತಿರುವುದನ್ನು ನಾನು ಕಂಡೆ.
ರೋಬೊಟ್
ಆತನೊಬ್ಬ ವಿಜ್ಞಾನಿ. ಒಂದು ರೋಬೊಟನ್ನು ಮಾಡಲು ಹೊರಟ. ಹೆಂಡತಿ ಮಕ್ಕಳನ್ನು ಮರೆತು, ಸುಮಾರು ಇಪ್ಪತ್ತು ವರ್ಷಗಳ ಕಾಲದ ಪರಿಶ್ರಮದ ಬಳಿಕ ಒಂದು ರೋಬೊಟನ್ನು ಮಾಡಿದ. ತನ್ನ ಹೆಂಡತಿಯಲ್ಲಿ ಕೂಗಿ ಹೇಳಿದದ ‘‘ನೋಡು, ನಾನೊಂದು ಅಪರೂಪದ ರೋಬೊಟನ್ನು ನಿರ್ಮಿಸಿದ್ದೇನೆ’’
ಅದಕ್ಕೆ ಹೆಂಡತಿ ನಿಟ್ಟುಸಿರಿಟ್ಟು ಉತ್ತರಿಸಿದಳು ‘‘ಅದರಲ್ಲೇನಿದೆ ವಿಶೇಷ. ಇಪ್ಪತ್ತು ವರ್ಷಗಳ ಹಿಂದೆ ನಾನು ಅಂತಹದೇ ರೋಬೊಟೊಂದನ್ನು ಮದುವೆಯಾಗಿದ್ದೇನೆ’’
ಹಾಲು ಮಾರುವವಳು
ಸಂತೆಯಲ್ಲಿ ಹಾಲು ಮಾರುವವಳು ಮತ್ತು ಮೊಸರು ಮಾರುವವಳು ಎದುರು ಬದುರಾದರು.
ಮೊಸರು ಮಾರುವವಳು ಕಾಲು ಕೆದರಿ ಜಗಳಿಕ್ಕಿಳಿದಳು. ಹಾಲು ಮಾರುವವಳನ್ನು ಯದ್ವಾತದ್ವಾ ನಿಂದಿಸ ತೊಡಗಿದಳು. ಆದರೆ ಹಾಲು ಮಾರುವವಳು ವೌನವಾಗಿದ್ದಳು.
ತುಸು ಹೊತ್ತಿನ ಬಳಿಕ ಯಾರೋ ಕೇಳಿದರು ‘‘ಅವಳು ಅಷ್ಟು ಬೈದರೂ ನೀನೇಕೆ ಸುಮ್ಮಗಿದ್ದೆ?’’
ಹಾಲು ಮಾರುವವಳು ಉತ್ತರಿಸಿದಳು ‘‘ಹಾಲು ಮೊಸರಿನ ಮೇಲೆ ಬಿದ್ದರೂ, ಮೊಸರು ಹಾಲಿನ ಮೇಲೆ ಬಿದ್ದರೂ ಪರಿಣಾಮ ಮೊಸರೇ ಆಗುವುದು...ಏನಾದರೂ ಅದರ ಲಾಭ ಅವಳಿಗೇ. ಅದಕ್ಕೆ ವೌನವಾಗಿದ್ದೆ’’
ಬೆಲೆ
ಒಂದು ಖಾಲಿ ಕಾಗದ ಮತ್ತು ಸಾವಿರ ರೂಪಾಯಿಯ ನೋಟು ಮುಖಾಮುಖಿಯಾಯಿತು.
‘‘ನನಗೆ ಸಮಾಜದಲ್ಲಿ ಬೆಲೆಯಿದೆ. ನೀನೋ ಖಾಲಿ ಕಾಗದ’’ ನೋಟು ಬಿಂಕದಿಂದ ಬೀಗಿತು.
‘‘ನಿನ್ನ ಬೆಲೆ ಸಾವಿರಕ್ಕಿಂತ ಹೆಚ್ಚು ಬಾಳದು. ಆದರೆ ನಾನು ಖಾಲಿಯಾಗಿದ್ದೇನೆ. ಕೆಲವೊಮ್ಮೆ ನನ್ನಲ್ಲಿ ಬರೆಯಲ್ಪಡುವುದಕ್ಕೆ ಬೆಲೆಯನ್ನು ಕಟ್ಟುದಕ್ಕೂ ಕಷ್ಟವಾಗಬಹುದು’’ ಖಾಲಿ ಕಾಗದ ವಿನಯದಿಂದ ಹೇಳಿತು.
ಖಡ್ಗ
ಒಬ್ಬ ಕಮ್ಮಾನರ ರಾಜನಿಗೆ ಒಂದು ಖಡ್ಗವನ್ನು ಮಾಡಿಕೊಟ್ಟ.
‘‘ಎಂಥವನ ತಲೆಯನ್ನೂ ಈ ಖಡ್ಗ ಕ್ಷಣಾರ್ಧದಲ್ಲಿ ಕತ್ತರಿಸಿ ಹಾಕುತ್ತದೆ’’ ಕಮ್ಮಾರ ರಾಜನಲ್ಲಿ ನುಡಿದ.
‘‘ಹೌದೆ?’’ ರಾಜ ಖಡ್ಗವನ್ನು ಬೀಸಿದ.
ಕಮ್ಮಾರನ ತಲೆ ಕೆಳಗುರುಳಿತು.
‘‘ಹೌದು, ನಿಜಕ್ಕೂ ಅಪರೂಪದ ಖಡ್ಗ ಇದು’’ ರಾಜ ತೃಪ್ತಿಯಿಂದ ಖಡ್ಗವನ್ನು ಒರೆಗೆ ಹಾಕಿಕೊಂಡ.
ಪೆಟ್ಟಿಗೆ
‘‘ಅಲ್ಲೊಂದು ಪೆಟ್ಟಿಗೆ ಅನಾಥವಾಗಿ ಬಿದ್ದಿದೆ. ಅದರೊಳಗೆ ಏನೋ ಇದ್ದ ಹಾಗಿದೆ’’ ಒಬ್ಬ ಹೇಳಿದ.
‘‘ಅದು ನನ್ನದು ಕಣ್ರೀ...ತುಂಬಾ ದಿನದಿಂದ ಅದನ್ನು ಹುಡುಕುತ್ತಾ ಇದ್ದೆ’’ ಜಿಪುಣನೊಬ್ಬ ಕೂಗಿ ಅತ್ತ ಧಾವಿಸಿದ.
ನೋಡಿದರೆ ಅಲ್ಲೊಂದು ಶವಪೆಟ್ಟಿಗೆ ಅನಾಥವಾಗಿ ಬಿದ್ದಿತ್ತು.
ಮರ್ಯಾದಸ್ಥರು!
‘‘ಪ್ರಾಯ 35 ದಾಟಿರಬೇಕಲ್ಲ...ಬಹುಶಃ ನೀನು ಈ ವೃತ್ತಿಗೆ ಹೊಸಬಳು...ಅಲ್ಲವೆ’’ ವೃದ್ಧ ಗಡ್ಡ ನೀಯುತ್ತಾ ಕೇಳಿದ.
ಮಹಿಳೆ ಮುಚ್ಚಿದ ಬುರ್ಖಾದೊಳಗಿಂದಲೇ ಹೇಳಿದಳು
‘‘ಹೌದು. ಈ ಊರಿನ ದೊಡ್ಡ ಮರದ ಮಿಲ್ಲಿನ ಸಾಹುಕಾರರ ಮಗ ನನ್ನ ಮಗಳನ್ನು ಮದುವೆಯಾಗಲು ಒಪ್ಪಿದ್ದಾರೆ. 50 ಪವನ್ ಬಂಗಾರ ಹಾಕಬೇಕು. ಎಲ್ಲೂ ಹಣ ಹುಟ್ಟಲಿಲ್ಲ. ನಾವು ಬಡವರು. ಬೇರೆ ವಿಧಿಯಿಲ್ಲ...ಅದಕ್ಕಾಗಿ ಬಂದಿದ್ದೇನೆ....’’
ವೃದ್ಧ ಬೆವರಿ, ಧಿಗ್ಗನೆ ಎದ್ದು ನಿಂತ. ಬಳಿಕ ಅವಸರವಸರವಾಗಿ ಮೊಬೈಲ್ ತೆಗೆದು ಫೋನಲ್ಲಿ ಮಾತನಾಡತೊಡಗಿದ ‘‘ಮಗನೇ...ಆ ಸಂಬಂಧ ನಮಗೆ ಬೇಡ. ಅವರು ಮರ್ಯಾದಸ್ಥರಲ್ಲ...’’
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.
Subscribe to:
Post Comments (Atom)
ಮರ್ಯಾದಸ್ಥರು!
ReplyDelete‘‘ಪ್ರಾಯ 35 ದಾಟಿರಬೇಕಲ್ಲ...ಬಹುಶಃ ನೀನು ಈ ವೃತ್ತಿಗೆ ಹೊಸಬಳು...ಅಲ್ಲವೆ’’ ವೃದ್ಧ ಗಡ್ಡ ನೀಯುತ್ತಾ ಕೇಳಿದ.
ಮಹಿಳೆ ಮುಚ್ಚಿದ ಬುರ್ಖಾದೊಳಗಿಂದಲೇ ಹೇಳಿದಳು
‘‘ಹೌದು. ಈ ಊರಿನ ದೊಡ್ಡ ಮರದ ಮಿಲ್ಲಿನ ಸಾಹುಕಾರರ ಮಗ ನನ್ನ ಮಗಳನ್ನು ಮದುವೆಯಾಗಲು ಒಪ್ಪಿದ್ದಾರೆ. 50 ಪವನ್ ಬಂಗಾರ ಹಾಕಬೇಕು. ಎಲ್ಲೂ ಹಣ ಹುಟ್ಟಲಿಲ್ಲ. ನಾವು ಬಡವರು. ಬೇರೆ ವಿಧಿಯಿಲ್ಲ...ಅದಕ್ಕಾಗಿ ಬಂದಿದ್ದೇನೆ....’’
ವೃದ್ಧ ಬೆವರಿ, ಧಿಗ್ಗನೆ ಎದ್ದು ನಿಂತ. ಬಳಿಕ ಅವಸರವಸರವಾಗಿ ಮೊಬೈಲ್ ತೆಗೆದು ಫೋನಲ್ಲಿ ಮಾತನಾಡತೊಡಗಿದ ‘‘ಮಗನೇ...ಆ ಸಂಬಂಧ ನಮಗೆ ಬೇಡ. ಅವರು ಮರ್ಯಾದಸ್ಥರಲ್ಲ...’’ಸೂಪರ್ ಬಷೀರ್ ಸರ್ ....
its a fact................
Deleteತುಂಬಾ ಇಷ್ಟವಾದವು ಕಥೆಗಳು.. ಪುಟ್ಟ ಕಥೆಗಳೊಳಗೆ ಹರವಿದ ವಿಶಾಲ ನೂರು ಅರ್ಥಗಳು ತುಂಬಾ ಚೆನ್ನಾಗಿ ಮನದೊಳಗೆ ಅಚ್ಚೊತ್ತಿದವು.
ReplyDeleteಹಾಲು-ಮೊಸರು ಕತೆಯನ್ನು ಓದುತ್ತಿದ್ದಂತೇ ಒಂದು ಪುಟ್ಟ ಯೋಚನೆ ಹೊಳೆಯಿತು... ಹಾಲೇ ಇಲ್ಲದ ಮೇಲೆ ಮೊಸರೆಲ್ಲಿಂದ? ಮೊಸರಿನ ಅಸ್ತಿತ್ವ ಇರುವುದೇ ಹಾಲಿನ ಮೇಲೆ ಅಲ್ಲವೇ?! :)
ತುಂಬಾ ಇಷ್ಟವಾದವು ಕಥೆಗಳು.. ಪುಟ್ಟ ಕಥೆಗಳೊಳಗೆ ಹರವಿದ ವಿಶಾಲ ನೂರು ಅರ್ಥಗಳು ತುಂಬಾ ಚೆನ್ನಾಗಿ ಮನದೊಳಗೆ ಅಚ್ಚೊತ್ತಿದವು.
ReplyDeleteಮರ್ಯಾದಸ್ಥರು ಕಥೆ ಯಾಕೋ ಮನಸಿಗೆ ನೋವನ್ನು ತನ್ದಿತು. ಉಳಿದೆಲ್ಲಾ ಕಥೆಗಳು ಇಷ್ಟಾ ಆದವು
ReplyDeleteತುಂಬಾ ಇಷ್ಟವಾದವು ನಿಮ್ಮ ವಿಚಾರಗಳು....
ReplyDeleteಪದ ಸಾಲುಗಳಲ್ಲಿ ಕಥೆ ಚುಟುಕು,
ReplyDeleteಅರ್ಥ ನಿರೂಪಣೆಯಲ್ಲಿ ಕುಟುಕು,
ಮನಕೆ ಮುದ ನೀಡುವ ಗುಟುಕು,
ವ್ಯಥೆ ಸರಿಸಿ ಕಥೆ ನೂರು ಬರಬೇಕು
ಕಥೆಗಾರಗೆ ಉಘೆ ಎನ್ನುತ್ತಿರಬೇಕು
- ಕಥೆಗೊಳ್ ಬಾಳಾ ಚೆಂದ ಅದಾವರ್ರೀ ಬಶೀರ್ ರೆ