ಸುಮ್ನೆ ಟೈಮ್ ಪಾಸ್ಗಾಗಿ ಒಂದು ಚಿತ್ರ ಮತ್ತು ವಿಮರ್ಶೆ
‘ರಾ-1’ ಚಿತ್ರದಲ್ಲಿ ನಾಯಕನ ಮಗನಿಗೆ ಒಂದು ಆಸೆಯಿರುತ್ತದೆ. ಅದೆಂದರೆ ಯಾರೂ ಸೋಲಿಸಲಾಗದ ಖಳನಾಯಕನೊಬ್ಬನನ್ನು ತನ್ನ ತಂದೆ ಸೃಷ್ಟಿಸಬೇಕು. ಅಂತಹ ಒಂದು ವೀಡಿಯೋ ಗೇಮ್‌ನನ್ನು ಸೃಷ್ಟಿಸಲು ಹೋಗಿ ‘ರಾ-1’ನ ಸೃಷ್ಟಿಯಾಗುತ್ತದೆ. ಆದರೆ ಅಲ್ಲಿ ಅವನನ್ನು ಸೋಲಿಸಲು ‘ಜಿ-1’ ಇದ್ದಾನೆ. ರಾ-1 ಕಟ್ಟಕಡೆಗೆ ಸಾಯುತ್ತಾನೆ ಕೂಡ. ಆದರೆ ತನ್ನ ಮಗನ ಆಸೆಯನ್ನು ನಿಜವಾಗಿಯೂ ಈಡೇರಿಸಲು ಶಾರುಕ್ ಖಾನ್ ‘ಡಾನ್’ ಚಿತ್ರದಲ್ಲಿ ಪ್ರಯತ್ನಿಸಿದ್ದಾರೆ. ಡಾನ್ ಎಂದರೆ ಸೋಲೇ ಇಲ್ಲದ ಖಳನಾಯಕ. ‘ಡಾನ್-2’ ಚಿತ್ರದಲ್ಲೂ ಆ ಖಳನಾಯಕನ ದ್ವಿಗ್ವಿಜಯ ಮುಂದುವರಿಯುತ್ತದೆ.
ಡಾನ್ ಚಿತ್ರಕ್ಕೂ ಡಾನ್-2 ಚಿತ್ರಕ್ಕೂ ಒಂದು ಮುಖ್ಯ ವ್ಯತ್ಯಾಸವಿದೆ. ಡಾನ್-2ವಿನಲ್ಲಿ ಚಿತ್ರಕ್ಕೆ ಒಂದು ದಾರಿಯಿದೆ. ಗುರಿಯಿದೆ. ಆ ದಾರಿಯಲ್ಲೇ ತನ್ನ ಗುರಿಯೆಡೆಗೆ ನೇರವಾಗಿ, ವೇಗವಾಗಿ ಚಲಿಸುತ್ತಾ ಹೋಗುತ್ತದೆ. ಇದು ಚಿತ್ರದ ಹೆಗ್ಗಳಿಕೆಯೂ ಹೌದು. ದೌರ್ಬಲ್ಯವೂ ಹೌದು. ಬರ್ಲಿನ್ ಖಜಾನೆಯಿಂದ ಯುರೋಗಳ ಕರೆನ್ಸಿ ಪ್ಲೇಟ್‌ಗಳನ್ನು ಅಪಹರಿಸುವುದು ಈ ಬಾರಿ ಡಾನ್‌ನ ಗುರಿ. ಒಂದೆಡೆ ಪೊಲೀಸ್ ಅಧಿಕಾರಿಣಿ, ಜಂಗ್ಲಿಬಿಲ್ಲಿ ರೋಮಾ(ಪ್ರಿಯಾಂಕಾ ಛೋಪ್ರಾ) ಡಾನ್‌ನ ಹಿಂದೆ ಬಿದ್ದಿರುತ್ತಾಳೆ. ಅದರ ನಡುವೆಯೇ ಇಂತಹದೊಂದು ಯೋಜನೆಯನ್ನು ಹಾಕುತ್ತಾನೆ. ಈ ಯೋಜನೆಯಲ್ಲಿ ಡಾನ್ ಗುರಿ ಮುಟ್ಟುತ್ತಾನೋ ಇಲ್ಲವೋ ಎನ್ನುವುದು ಕಥೆಯ ಪ್ರಧಾನ ಅಂಶ. ಇದರ ಜೊತೆ ಜೊತೆಗೆ ಡಾನ್ ಮತ್ತೊಂದು ಯೋಜನೆಯನ್ನೂ ಹಾಕಿಕೊಂಡಿದ್ದಾನೆ. ತನ್ನ ಮೇಲಿರುವ ಎಲ್ಲ ಮೊಕದ್ದಮೆಗಳನ್ನು ಪೊಲೀಸ್ ಇಲಾಖೆ ಕೈ ಬಿಡಬೇಕು. ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಆತನ ಯೋಜನೆ ಯಶಸ್ವಿಯಾಗುವುದೋ, ಇಲ್ಲವೋ ಎನ್ನುವುದನ್ನು ಡಾನ್-2 ಹೇಳ ಹೊರಡುತ್ತದೆ. ಚಿತ್ರದಲ್ಲಿ ಹಳೆಯ ಇನ್ನೊಂದು ಖಳ ಪಾತ್ರವೂ ಕತೆಯಲ್ಲಿ ಮುಖ್ಯವಾಗಿದೆ. ಅದು ಬೊಮನ್ ಇರಾನಿಯ ವರ್ದನ್ ಪಾತ್ರ.
ಚಿತ್ರದ ಓಟ ಆರಂಭವಾಗುವುದು ಡಾನ್ ಪೊಲೀಸರಿಗೆ ಶರಣಾಗುವ ಮೂಲಕ. ತನ್ನ ಯೋಜನೆಯ ಒಂದು ಭಾಗವಾಗಿಯೇ ಆತ ಪೊಲೀಸರಿಗೆ ಶರಣಾಗುತ್ತಾನೆ. ವರ್ಧನ್ ಜೊತೆಗೆ ಮತ್ತೆ ಅಲ್ಲಿಂದ ಪರಾರಿಯಾಗುತ್ತಾನೆ. ಅವರಿಬ್ಬರು ಜೊತೆಗೆ ಕರೆನ್ಸಿ ಪ್ಲೇಟ್ ಅಪಹರಣದ ಯೋಜನೆಯನ್ನು ರೂಪಿಸುತ್ತಾರೆ. ಅದಕ್ಕಾಗಿ ಅವರು ಬಳಸಿಕೊಳ್ಳುವ ಇನ್ನೊಬ್ಬ ಖಳ ಜಬ್ಬಾರ್. ಸ್ನೇಹಿತರಾಗಿದ್ದುಕೊಂಡು ಪರಸ್ಪರರ ವಿರುದ್ಧ ಸಂಚು ಹೆಣೆಯುತ್ತಾ, ಈ ತಂಡ ಮುಂದುವರಿಯುತ್ತದೆ. ಹಾಗೆಯೇ ಇವರಿಗೆ ಕಂಪ್ಯೂಟರ್ ವ್ಯೆಹಗಳನ್ನು ನಾಶ ಮಾಡಲು ಸಮೀರ್ (ಕುನಾಲ್) ಸಹಾಯ ಮಾಡುತ್ತಾನೆ. ಈ ಯೋಜನೆಯ ಸಣ್ಣ ಸುಳಿಯು ರೋಮಾ(ಪ್ರಿಯಾಂಕಾ ಛೋಪ್ರಾ)ಳಿಗೆ ಸಿಕ್ಕಿ ಅವಳೂ ಬರ್ಲಿನ್‌ಗೆ ಆಗಮಿಸುತ್ತಾಳೆ.
ರೋಮಾ ಮತ್ತು ಡಾನ್ ನಡುವಿನ ಕಣ್ಣಾಮುಚ್ಚಾಳೆ ಆಟ, ಛೇಸಿಂಗ್ ಹಿತವಾಗಿದೆ. ಡಾನ್ ಯೋಜನೆಯ ನಡುವೆಯೇ ತನ್ನ ಶತ್ರುಗಳನ್ನು ಒಬ್ಬೊಬ್ಬರನ್ನಾಗಿ ಮುಗಿಸುತ್ತಾ ಬರುತ್ತಾನೆ. ಫರ್ಹಾನ್ ಅಖ್ತರ್ ಚಿತ್ರದಲ್ಲಿ ಛೇಸಿಂಗ್, ಫೈಟಿಂಗ್, ಸಾಹಸ ದೃಶ್ಯಗಳಿಗೇ ಹೆಚ್ಚು ಒತ್ತು ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಅದಷ್ಟೇ ಜೀವಾಳ ಎಂದು ಅವರು ಭಾವಿಸಿದ್ದಾರೆ. ಚಿತ್ರದಲ್ಲಿ ಶಾರುಕ್ ಡಾನ್ ಆಗಿ ಮೈತೋರುವ ಗುಣಗಳು ಚಿತ್ರದ ಅತ್ಯುತ್ಕಟ ಕ್ಷಣವಾಗಿರುತ್ತದೆ. ಆದರೆ ಒಂದು ಚಿತ್ರಕ್ಕೆ ಬೇಕಾಗಿರುವುದು ಇದಿಷ್ಟು ಮಾತ್ರವೆ?
ಯಾವ ರೀತಿಯಲ್ಲೂ ಅಮಿತಾಭ್ ಬಚ್ಚನ್ ನಟಿಸಿದ ಡಾನ್ ಚಿತ್ರಕ್ಕೆ ಡಾನ್-2 ಚಿತ್ರ ಸರಿಗಟ್ಟಲಾರದು. ಯಾಕೆಂದರೆ ಡಾನ್-2 ಚಿತ್ರದ ಕತೆ ತೆಳುವಾದುದು. ಅಥವಾ ಒಂದು ಯೋಜನೆಯನ್ನು ಬಿಟ್ಟರೆ ಅಲ್ಲಿ ಕತೆಯೇ ಇಲ್ಲ. ಮುಖ್ಯವಾಗಿ ಯಾವ ಪಾತ್ರಗಳಿಗೂ ಪೋಷಣೆಯೇ ಇಲ್ಲ. ಆದರೆ ಮೂಲ ಡಾನ್ ಹಾಗಲ್ಲ. ಅಲ್ಲಿ ಪ್ರತಿ ಪಾತ್ರಗಳೂ ಒಂದೊಂದು ಕತೆಗಳು. ದ್ವೇಷ, ಸಿಟ್ಟು, ಅಸಹಾಯಕತೆ, ಪ್ರೀತಿ, ಮೋಸ, ಸೇಡು ಇವೆಲ್ಲವುಗಳಿಂದ ಕೆನೆಗಟ್ಟಿದ ಪಾತ್ರಗಳು ಅಲ್ಲಿವೆ. ಆದರೆ ಡಾನ್-2ವಿನಲ್ಲಿ ಯಾವ ಪಾತ್ರಗಳೂ ನಮ್ಮನ್ನು ಆಳವಾಗಿ ತಟ್ಟುವುದಿಲ್ಲ, ಕಾಡುವುದಿಲ್ಲ. ಎಲ್ಲ ಪಾತ್ರಗಳನ್ನು ಡಾನ್ ಕೀ ಕೊಟ್ಟು ಬಿಟ್ಟಂತಿದೆ. ಎಲ್ಲವೂ ಅವರನ ಸುತ್ತಲೇ ಓಡಾಡುತ್ತದೆ. ರೋಮಾ ಪಾತ್ರವೂ ಇದಕ್ಕೆ ಹೊರತಾಗಿಲ್ಲ. ರೋಮಾ ಪಾತ್ರವನ್ನು ಇನ್ನಷ್ಟು ಗಟ್ಟಿಯಾಗಿ ಬೆಳೆಸುವ ಸಾಧ್ಯತೆಯಿದ್ದರೂ, ಡಾನ್ ಅದಕ್ಕೆ ಆಸ್ಪದ ನೀಡುವುದಿಲ್ಲ. ಆದುದರಿಂದ ಆ ಪಾತ್ರ ಈ ಚಿತ್ರದಲ್ಲಿ ತೀರಾ ತೆಳುವಾಗಿದೆ. ಬಹುಶಃ ನಿರ್ದೇಶಕರು ಮಿಶನ್ ಇಂಪಾಸಿಬಲ್ ಚಿತ್ರದ ಪ್ರಭಾವದಿಂದ ಡಾನ್-2ನ್ನು ಮಾಡಿರಬೇಕು.
ಮೂಲ ಡಾನ್ ಚಿತ್ರದಲ್ಲಿ ಪಾತ್ರಗಳು ಬದಲಾದಂತೆ ತಿರುವುಗಳು ಕಾಣಿಸಿಕೊಳ್ಳುತ್ತವೆ. ಡಾನ್-1ರಲ್ಲಿ ಶಾರುಕ್-ಅಮಿತಾಬ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಪಾತ್ರಗಳ ಸಂಘರ್ಷಗಳಿವೆ ಅಲ್ಲಿ. ಅಂತಹ ಒಳಗಿನ ಸಂಘರ್ಷಗಳನ್ನು ಇಲ್ಲಿ ಕಾಣುವುವುದಿಲ್ಲ. ರೋಮಾ ಮತ್ತು ಡಾನ್ ನಡುವೆ ಸಣ್ಣದೊಂದು ಪ್ರೀತಿಯ ಎಳೆಯನ್ನು ಜೋಡಿಸಲು ನಿರ್ದೇಶಕರು ಯತ್ನಿಸಿದ್ದಾರಾದರೂ, ಅದರಲ್ಲಿ ಯಶಸ್ವಿಯಾಗಿಲ್ಲ. ಡಾನ್‌ಗಾಗಿಯೇ ಬರೆದ ಹರಿತ ಸಂಭಾಷಣೆಯಿದೆ. ಸಂಗೀತಾ ಪರವಾಗಿಲ್ಲ. ವಿದೇಶಗಳ ಸುಂದರ ದೃಶ್ಯಗಳನ್ನು ಸೆರೆಹಿಡಿದ ಕ್ಯಾಮರ ಕೆಲಸ ಅದ್ಭುತವಾಗಿದೆ. ಸಾಹಸ ಹಾಲಿವುಡ್‌ಗೆ ಸರಿಗಟ್ಟುವ ಪ್ರಯತ್ನವನ್ನು ಮಾಡಿದೆ. ಒಟ್ಟಿನಲ್ಲಿ ಡಾನ್ ಭಾಗ-1ಕ್ಕೆ ಸರಿಗಟ್ಟುವುದಿಲ್ಲ. ಅದ್ದೂರಿತನಕ್ಕಾಗಿ ಡಾನ್-2ನ್ನು ಒಮ್ಮೆ ನೋಡಬಹುದು. ಒಟ್ಟಿನಲ್ಲಿ ಡಾನ್-3ಗಾಗಿ ಶಾರುಕ್ ಈಗಲೇ ಸಿದ್ಧತೆ ನಡೆಸುತ್ತಿರಬಹುದು.
No comments:
Post a Comment