Saturday, September 3, 2011
ಕೊನೆಯ ಸಾಲು ಮತ್ತು ಇತರ ಕತೆಗಳು...
ಕೊನೆಯ ಸಾಲು
ಒಂದು ಪದ್ಯದ ಕೊನೆಯ ಸಾಲು ಮಾಸಿ ಹೋಗಿತ್ತು.
ಸಹೃದಯಿಗೆ ಈಗ ಗೊಂದಲವಾಯಿತು.
ಆ ಪೂರ್ತಿಯಾಗದ ಪದ್ಯವನ್ನು ಹೇಗೆಂದು ಅರ್ಥ ಮಾಡಿಕೊಳ್ಳುವುದು?
ಹೇಗೆ...
ಆತ ನೇರವಾಗಿ ಆ ಪದ್ಯವನ್ನು ಬರೆದ ಕವಿಯನ್ನು ಭೇಟಿ ಮಾಡಿದ.
ಹೇಳಿದ ‘‘ಕವಿಯೇ, ಕೊನೆಯ ಸಾಲನ್ನು ಹೇಳಿ ನನ್ನ ಪಾಲಿಗೆ ಈ ಕವಿತೆಯನ್ನು ಪೂರ್ತಿಗೊಳಿಸಿ’’
ಕವಿ ಉತ್ತರಿಸಿದ ‘‘ನಾನು ಕೊನೆಯ ಸಾಲನ್ನು ಹೇಳಿದರೆ ಈ ಕವಿತೆ ನಿನ್ನ ಪಾಲಿಗೆ ಪೂತಿಯಾಗುವುದಾದರೆ ನಾನದನ್ನು ಹೇಳಲಾರೆ. ಕವಿತೆ ಬರೆಯುವವನು ನಾನು, ಅದನ್ನು ಪೂರ್ಣಗೊಳಿಸುವವನು ನೀನು. ಆದುದರಿಂದ ಆ ಕಾಣದ ಕೊನೆಯ ಸಾಲನ್ನು ನಿನಗಾಗಿ ಉಳಿಸಿದ್ದೇನೆ....’’
ಮರ ಮತ್ತು ಆಶ್ರಮ
ಮಳೆಗಾಲದ ಸಮಯ.
ಸಂತನ ಆಶ್ರಮದ ಅಂಗಳದಲ್ಲೇ ಒಂದು ದೊಡ್ಡ ಮರ.
ಜೋರು ಗಾಳಿಗೆ ಈ ಮರ ಆಶ್ರಮದ ಮೇಲೆ ಉರುಳಿ ಬಿದ್ದರೆ?
ಆತಂಕದಿಂದ ಸಂತನ ಶಿಷ್ಯರೆಲ್ಲ ಈ ಮರವನ್ನು ಕಡಿಯುವುದಕ್ಕೆ ತೀರ್ಮಾನಿಸಿದರು.
ಸಂತನ ಅನುಮತಿಯನ್ನು ಕೇಳಿದರು.
‘‘ಈ ಗುರುಗಳೇ, ಈ ಮರ ಆಶ್ರಮದ ಮೇಲೆ ಬೀಳುವ ಅಪಾಯವಿದೆ. ಆದುದರಿಂದ ಮರವನ್ನು ಕಡಿಯಬೇಕಾಗಿದೆ’’
ಸಂತ ಉತ್ತರಿಸಿದ ‘‘ಬೀಳುವ ಅಪಾಯವಿರುವುದರಿಂದ ನಾವು ಮರವನ್ನೇಕೆ ಕಡಿಯಬೇಕು? ಆಶ್ರಮವನ್ನು ಇಲ್ಲಿಂದ ಸ್ಥಳಾಂತರಿಸಿದರಾಯಿತು’’
ತಾಯಿ
ಶಿಷ್ಯ ಕೇಳಿದ ‘‘ಗುರುಗಳೇ, ನೋವು ಎಂದರೇನು?’’
‘‘ಈ ಪ್ರಶ್ನೆಯನ್ನು ಆಗಷ್ಟೇ ಮಗುವನ್ನು ಹೆತ್ತು ಸುಸ್ತಾಗಿ ಬಿದ್ದಿರುವ ತಾಯಿಯಲ್ಲಿ ಕೇಳು’’ ಸಂತ ಹೇಳಿದ.
‘‘ಗುರುಗಳೇ ಸುಖ-ಸಂತೋಷ ಎಂದರೇನು?’’
‘‘ಈ ಪ್ರಶ್ನೆಯನ್ನೂ ಆಗಷ್ಟೇ ಮಗುವನ್ನು ಹೆತ್ತು ಸುಸ್ತಾಗಿ ಬಿದ್ದಿರುವ ತಾಯಿಯಲ್ಲೇ ಕೇಳು?’’ ಸಂತ ಉತ್ತರಿಸಿದ.
ಧ್ಯಾನ ಎಂದರೆ...
ಶಿಷ್ಯ ಧ್ಯಾನದಲ್ಲಿದ್ದ.
ಅವನ ಮುಂದೆ ಹಸಿದು ಕಂಗಾಲಾಗಿದ್ದ ಪುಟ್ಟ ನಾಯಿಮರಿಯೊಂದು ಚೀರಾಡುತ್ತಿತ್ತು.
ಧ್ಯಾನದಲ್ಲಿ ತಲ್ಲೀನನಾಗಿದ್ದ ಶಿಷ್ಯನಿಗೆ ಅದು ಕೇಳಿಸಲಿಲ್ಲ.
ಸಂತ ಆಶ್ರಮದೊಳಗಿಂದ ಓಡೋಡಿ ಬಂದ. ಹಸಿವಿನಿಂದ ಕಂಗೆಟ್ಟ ನಾಯಿಮರಿಗೆ ಆಹಾರ ಕೊಟ್ಟು ಸಂತೈಸಿದ. ಬಳಿಕ ಶಿಷ್ಯನ ಧ್ಯಾನಭಂಗ ಮಾಡಿ ಹೇಳಿದ ‘‘ಧ್ಯಾನ ಎಂದರೆ ಕಿವುಡನಾಗುವುದೂ ಅಲ್ಲ, ಕುರುಡನಾಗುವುದೂ ಅಲ್ಲ....’’
ದುರದೃಷ್ಟ
ಒಂದು ಜೋಡು ಹಳೆಯ ಚಪ್ಪಲಿಯನ್ನು ಭಿಕ್ಷುಕನೊಬ್ಬ ನೋಡಿದ.
ತನ್ನ ಬರಿಗಾಲಿಗೆ ಅದು ಸರಿ ಹೊಂದೀತು ಎಂದು ಭಾವಿಸಿ ಅವನು ಧಾವಿಸಿ ಅದನ್ನು ಧರಿಸಿಕೊಂಡ.
ನೋಡಿದರೆ ಅದವನಿಗೆ ತೀರಾ ಬಿಗಿಯಾಗುತ್ತಿತ್ತು.
ಆದರೂ ಕಾಲನ್ನು ತುರುಕಿಸಲು ಪ್ರಯತ್ನಿಸಿದ. ಊಹೂಂ...ಕಾಲು ಒಳ ಹೋಗಲೇ ಇಲ್ಲ.
‘‘ತಥ್, ಎಂತಹ ದರಿದ್ರ ಕಾಲು ನನ್ನದು. ನನ್ನ ಕಾಲು ಒಂದು ಒಂದಿಷ್ಟು ಸಣ್ಣಗಿದ್ದಿದ್ದರೆ ಈ ಚಪ್ಪಲಿ ನನ್ನದಾಗುತ್ತಿತ್ತು....ಎಂತಹ ದುರದೃಷ್ಟ ನನ್ನದು’’
ಇರುವ ಕಾಲಿಗೆ ಸಂತೋಷ ಪಡದೆ, ಹಳೆಯ ಚಪ್ಪಲಿಗಾಗಿ ದುಃಖಿಸುತ್ತಿದ್ದ ಅವನು ನಿಜಕ್ಕೂ ದುರದೃಷ್ಟವಂತನೇ ಆಗಿದ್ದ.
ಅಪಸ್ವರ
ಆಕೆ ಹಾಡುತ್ತಿದ್ದಳು.
ಎಲ್ಲರೂ ತನ್ಮಯರಾಗಿ ಕೇಳುತ್ತಿದ್ದರು.
ಅಷ್ಟರಲ್ಲಿ ಸಂಗೀತ ವಿದ್ವಾಂಸನೊಬ್ಬ ಜೋರಾಗಿ ಹೇಳಿದ ‘‘ರಾಗದಲ್ಲಿ ಅಪಸ್ವರವಿದೆ...ಏರಿಳಿತದಲ್ಲಿ ತೊಂದರೆಯಿದೆ...’’
ಸಂತ ಪ್ರತಿಕ್ರಿಯಿಸಿದ ‘‘ಅದೇನೇ ಇರಲಿ. ನಿನ್ನ ಪಾಂಡಿತ್ಯಕ್ಕಾಗಿ ಇಷ್ಟು ಜನರ ತನ್ಮಯತೆಯನ್ನು ಕೆಡಿಸಬೇಡ...ಸಂಗೀತದ ಮುಂದೆ ಪಾಂಡಿತ್ಯಕ್ಕಿಂತ ದೊಡ್ಡ ಅಪಸ್ವರ ಇನ್ನೊಂದಿಲ್ಲ’’
ಕಿವಿ
ಅವನು ಸಾವಿನ ಅಂಚಿನಲ್ಲಿದ್ದ.
ಅದೇನೋ ಹೇಳುವುದಕ್ಕೆ ತವಕಿಸುತ್ತಿದ್ದ.
ಮಗ ಅವನೆಡೆಗೆ ಬಾಗಿ ಕಿವಿ ಕೊಟ್ಟ.
ತಂದೆ ಅದೇನೋ ತೊದಲುತ್ತಿದ್ದ
‘‘ಏನಂತೆ?’’ ಎಲ್ಲರೂ ಕೇಳಿದರು.
‘‘ಈ ಆಸ್ತಿಯನ್ನು ನಾನು ಜವಾಬ್ದಾರಿಯಿಂದ ನಿಭಾಯಿಸಬೇಕಂತೆ...’’ ಮಗ ಹೇಳಿದ.
ಮಗಳಿಗೆ ಇದು ಸಮಾಧಾನವಾಗಲಿಲ್ಲ. ಅವಳು ಬಾಗಿ ಕಿವಿಗೊಟ್ಟಳು.
‘‘ಏನಂತೆ?’’
‘‘ಅಮ್ಮನ ಬಂಗಾರವನ್ನೆಲ್ಲ ನಾನು ಜೋಪಾನ ಮಾಡಬೇಕಂತೆ...’’ ಮಗಳು ಹೇಳಿದಳು.
ಅಳಿಯ ಕಿವಿಯಾನಿಸಿ ಹೇಳಿದ ‘‘ಮಗ ಇನ್ನೂ ಎಳಸು, ನಾನು ಆಸ್ತಿಯನ್ನು ನೋಡಿಕೊಳ್ಳಬೇಕಂತೆ...’’
ಊರ ಸ್ವಾಮೀಜಿ ಕಿವಿಯಾನಿಸಿ ಹೇಳಿದರು ‘‘50 ಎಕರೆ ಭೂಮಿಯನ್ನು ಮಠಕ್ಕೆ ದಾನವಾಗಿ ಕೊಡುತ್ತಾರಂತೆ...’’
ಅಷ್ಟರಲ್ಲೇ ಅಲ್ಲೇ ಇದ್ದ ಕೆಲಸದಾಳು ಕಿವಿಯಾನಿಸಿದ. ಮತ್ತು ಹೇಳಿದ ‘‘ಧನಿಯೋರಿಗೆ ಕುಡಿಯೋದಕ್ಕೆ ನೀರು ಬೇಕಂತೆ....’’
ಕೃತಿ
ಕಳೆದ ಒಂದು ವರ್ಷದಿಂದ ಆ ಕವಿ, ಕತೆಗಾರ ಏನೂ ಬರೆಯುತ್ತಿರಲಿಲ್ಲ. ಅಥವಾ ಏನೂ ಬರೆಯಲಾಗುತ್ತಿರಲಿಲ್ಲ.
ಕಳೆದ ಒಂದು ವರ್ಷದಿಂದ ಕವಿ ಏನೂ ಬರೆಯದೇ ಇದ್ದುದರಿಂದ ಅವರೇನೋ ಭಾರೀ ದೊಡ್ಡ ಪುಸ್ತಕ ಬರೆಯುವುದರಲ್ಲಿ ಮಗ್ನರಾಗಿದ್ದಾರೆ ಎಂಬ ಸುದ್ದಿ ಹಬ್ಬಿತು.
ಕವಿಯೋ ಅದನ್ನು ನಿರಾಕರಿಸಲಿಲ್ಲ. ಜನರು ‘‘ಸಾರ್ ಏನೋ ಭಾರೀ ದೊಡ್ಡದನ್ನು ಬರೆಯುತ್ತಿರುವ ಹಾಗಿದೆ. ಎಲ್ಲಿಯವರೆಗೆ ಬಂತು?’’
ಕವಿ ಬರೇ ನಗುತ್ತಿದ್ದ. ಅಥವಾ ಏನನ್ನೂ ಹೇಳದೆ ತಲೆಯಾಡಿಸುತ್ತಿದ್ದ.
ಸಾಹಿತ್ಯ ಜಗತ್ತು ಅವನಿಗಾಗಿ ಕಾಯುತ್ತಿತ್ತು. ‘‘ಸಾರ್ ಎಲ್ಲಿಯವರೆಗೆ ಬಂತು?’’
‘‘ಇನ್ನು ಕೆಲವೇ ದಿನಗಳಲ್ಲಿ ಮುಗಿಯುತ್ತದೆ...’’ ಕತೆಗಾರ ಭರವಸೆ ನೀಡುತ್ತಿದ್ದ.
‘‘ಕಾದಂಬರಿಯೋ, ಮಹಾ ಕಾವ್ಯವೋ ಎನ್ನುವುದನ್ನಾದರೂ ಹೇಳಿ ಸಾರ್...’’
‘‘ಅದು ಸಸ್ಪೆನ್ಸ್...’’ ಎನ್ನುತ್ತಾ ಕವಿ ಮನೆಯ ಕೋಣೆ ಸೇರುತ್ತಿದ್ದ.
ಅದು ಅವನ ಸರ್ವಶ್ರೇಷ್ಠ ಕೃತಿ ಎಂದು ಕೆಲವು ವಿಮರ್ಶಕರು ಬೊಗಳೆ ಬಿಡುತ್ತಿದ್ದರು.
‘‘ನಾನು ಕೆಲವು ಅಧ್ಯಾಯ ಓದಿದ್ದೇನೆ...’’ ಎಂದು ಕೆಲ ವಿಮರ್ಶಕರು ಬಾರಿನಲ್ಲಿ ಕೂತು ಕೊಚ್ಚಿಕೊಳ್ಳುತ್ತಿದ್ದರು.
ಒಂದು ದಿನ ಕವಿ ಸತ್ತ. ಸಾಯದೆ ಅವನಿಗೆ ವಿಧಿಯೇ ಇರಲಿಲ್ಲ.
ಅವನು ಬರೆದ ಸರ್ವಶ್ರೇಷ್ಠವಾದ ಕೃತಿ ಎಂದು ಹೆಸರು ಪಡೆದ ಆ ಪುಸ್ತಕಕ್ಕಾಗಿ ಜನರು ಇನ್ನೂ ಹುಡುಕುತ್ತಲೇ ಇದ್ದಾರೆ.
ಇಲ್ಲಿರುವ ನನ್ನೆಲ್ಲ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.
Subscribe to:
Post Comments (Atom)
ಈ ರಾಶಿ ಪದಗಳ ಜ್ಞಾನ ಭಂಡಾರವನ್ನು ಓದುವಾಗ ಬೇರೊಂದು ಲೋಕದ ಪರಿಚವಾದಂತೆ ಮುಗ್ದ ಮಗು ಪಾಠ ಕೇಳುತ್ತಿರುವ ಅನುಭವವನ್ನು ಪಡೆದುಕೊಂಡೆ ಬಷೀರ್.ಈ ಗದ್ದಲದ ಸಂತೆಯ ಜಗತ್ತಿನಲ್ಲಿ ನಿಮ್ಮದೊಂದು ಜಗತ್ತು ಸಾಂತ್ವನದ ಬೆನ್ನು ತಟ್ಟುವಿಕೆಯಂತೆ ಭಾಸವಾಯಿತು. ಎಷ್ಟೊಂದು ಮಾತುಗಳು ಮೌನವಾಗಿ ನಿಮ್ಮ ಸಾಹಿತ್ಯ ಪದಗಳಲ್ಲಿ ಹೇಳಲುದ್ಯಕ್ತವಾಗುತ್ತಿದೆ ಅಂತ ಅಶ್ಚರ್ಯವಾಯಿತು. ನಿಮ್ಮ ಮೌನದ ಧನಿಯನ್ನು ನಮ್ಮಂತ ಅದೃಷ್ಟವಂತರು ಕೇಳುವುದಕ್ಕೆ ಬದುಕನ್ನು ವಿಶಾಲವಾಗಿ ತೆರೆದಿಡುತ್ತಿದ್ದೇವೆ.ನಿಮ್ಮ ಮಾತಿಗೆ ಯಾವ ಪ್ರಶಸ್ತಿಯೂ ಸರಿ ಸಾಟಿಯಲ್ಲ.
ReplyDeleteತುಂಬಾ ಒಳ್ಳೆಯ ಶೈಲಿ. ಆಪ್ತ ಮತ್ತು ಅರ್ಥಗರ್ಭಿತ.
ReplyDeleteಮುಂದುವರೆಸಿ ನಿಮ್ಮ ಕಾಯಕ.:)
ಧನ್ಯವಾದಗಳು ಗೆಳೆಯರೇ.. ನನ್ನ ಸರಕುಗಳಿಗೆ ನೀವು ಎಲ್ಲಿಯವರೆಗೆ ಒಳ್ಳೆಯ ಬೆಲೆ ಕಟ್ಟುತ್ತೀರೋ ಅಲ್ಲಿಯವರೆಗೆ ನನ್ನ ವ್ಯಾಪಾರ ಮುಂದುವರಿಸ್ತಾನೆ ಇರ್ತೇನೆ.
ReplyDelete