Sunday, August 14, 2011
‘ಸ್ವಾತಂತ್ರದ ಓಟ’ ಎನ್ನುವ ಮಹಾಕಾದಂಬರಿಯ ಬಗ್ಗೆ....
ಸುಮಾರು ಒಂದೂವರೆ ದಶಕದ ಹಿಂದೆ ಬೊಳುವಾರು ಮುಹಮ್ಮದ್ ಕುಂಞ ಅವರು ಬರೆದ ನೀಳ್ಗತೆ ‘ಸ್ವಾತಂತ್ರದ ಓಟ’ ಇದೀಗ ಮಹಾಕಾದಂಬರಿಯಾಗುತ್ತಿದೆ. ಮುಂದಿನ ಜನವರಿ ತಿಂಗಳ ಹುತಾತ್ಮರ ದಿನದಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಬೊಳುವಾರರು ಬರೆಯುತ್ತಿರುವ ಆ ಕಾದಂಬರಿಯ ಕೆಲವು ಪುಟಗಳನ್ನು ಓದಿ ನನಗಾದ ಅನುಭವ ಹಾಗೂ ಕಾದಂಬರಿಕಾರ ಬೊಳುವಾರು ಮುಹಮ್ಮದ್ ಕುಂಞ ಅವರ ಒಂದು ಪತ್ರ ಇಲ್ಲಿದೆ.
ಅದೆಲ್ಲ ಆರಂಭವಾಗುವುದು ಚಾಂದಜ್ಜ ತಮ್ಮ ಎದೆಗೂಡಿನ ತಿಜೋರಿಯಲ್ಲಿ ಗುಟ್ಟಾಗಿ ಬಚ್ಚಿಟ್ಟ ರಹಸ್ಯ ನೆಲಮಾಳಿಗೆ ಯೊಂದು ಅವರ ಸಾವಿನೊಂದಿಗೆ ತೆರೆದು ಕೊಳ್ಳುವ ಮೂಲಕ. ತನ್ನ ಅಸ್ಮಿತೆಯ ಹಕ್ಕಿ ಯೊಂದಿಗೆ ರೆಕ್ಕೆ ಬಿಚ್ಚಿ ಹಾರುವ ಸದ್‌ಮನಸ್ಸುಳ್ಳ ಜೀವವೊಂದರ ಸ್ವಾತಂತ್ರದ ಓಟವೂ ಇದರೊಂದಿಗೆ ಆರಂಭವಾಗುತ್ತದೆ. ಸುಮಾರು ಒಂದೂವರೆ ದಶಕಗಳ ಹಿಂದೆ ಬೊಳುವಾರು ಮುಹಮ್ಮದ್ ಕುಂಞಿ ಅವರ ‘ಸ್ವಾತಂತ್ರದ ಓಟ’ ಎಂಬ ನೀಳ್ಗತೆಯನ್ನು ಓದಿದಾಗ ನನ್ನ ಮನಸ್ಸಲ್ಲಿ ಅಚ್ಚೊತ್ತಿದ ಪ್ರಶ್ನೆ ಒಂದೆರಡಲ್ಲ.
ಚಾಂದ್ ಅಲಿಯಂತಹ ಕೋಟಿ ಕೋಟಿ ಅಲಿಗಳ ಓಟಕ್ಕೆ ವಿರಾಮವಾದರೂ ಎಂದು? ಇದು ಬರೇ ಚಾಂದ್ ಅಲಿಯ ಓಟ ಮಾತ್ರವೆ? ಪಾಕಿಸ್ತಾನದಲ್ಲೆಲ್ಲೋ ಸಿಕ್ಕಿ ಹಾಕಿಕೊಂಡಿರುವ ಲಾಲ್ ಚಂದ್ ಎನ್ನುವ ಅಜ್ಜನ ಓಟದ ಕತೆಯೂ ಆಗಬಹುದಾದ ‘ಸ್ವಾತಂತ್ರದ ಓಟ’ದ ಕಾಲ ಗುರುತುಗಳು ನನ್ನ ಎದೆಯ ಓಣಿಗಳಲ್ಲಿ ಆಳವಾಗಿ ಊರಿ ಬಿಟ್ಟಿತ್ತು. ಬೊಳುವಾರು ಮುಹಮ್ಮದ್ ಕುಂಞಿಯವರ ‘ಸ್ವಾತಂತ್ರದ ಓಟ’ ಎಂಬ ಕತೆ ಪಾಕಿಸ್ತಾನದೊಳಗೆ ತನ್ನ ಹೆಸರನ್ನು ಶಿಲುಬೆಯಂತೆ ಹೊತ್ತುಕೊಂಡು ಬದುಕುವ ಹಿಂದೂವೊಬ್ಬನ ಕತೆಯೂ ಆಗಿರಬಹುದು. ಅಥವಾ ಭಾರತದಲ್ಲಿ ಬದುಕುತ್ತಿರುವ ಒಬ್ಬ ಮುಸ್ಲಿಮನ ಕತೆಯೂ ಆಗಬಹುದು. ಅಂದು ನಾನು ಓದಿದ ಆ ನೀಳ್ಗತೆ ನನ್ನನ್ನು ಗಾಢವಾಗಿ ಕಲಕಿತ್ತು.
ಭಾರತದ ಎರಡು ಭುಜಗಳು ಹರಿದು, ಇಬ್ಭಾಗವಾದ ಸಂದರ್ಭದಲಿ,್ಲ ಇಬ್ಬರು ಹಿಂದು ಹೆಣ್ಣು ಮಕ್ಕಳನ್ನು ಪಾಕಿಸ್ತಾನದಿಂದ ರಕ್ಷಿಸಿ, ಭಾರತದ ನಿರಾಶ್ರಿತ ಶಿಬಿರಕ್ಕೆ ಸೇರಿಸಲು ‘ಚಾಂದ್ ಅಲಿ’ ಎನ್ನುವ ತರುಣ ಮಾಡುವ ಪ್ರಯತ್ನ ಅವನನ್ನು ಆಪತ್ತಿನಲ್ಲಿ ಕೆಡಹುತ್ತದೆ. ಮರಳಿ ತಾಯ್ನಿಡಿಗೆ ಮರಳಲಾಗದೆ ‘ಶತ್ರುಗಳ’ ಶಿಬಿರದಲ್ಲಿ ತನ್ನ ಅಸ್ಮಿತೆಯನ್ನು ಮುಚ್ಚಿಟ್ಟು, ಕ್ಷಣ ಗಳನ್ನು, ದಿನಗಳನ್ನು ಎಣಿಸುವ ಸಂದರ್ಭ ಎದು ರಾಗುತ್ತದೆ. ಚಾಂದ್ ಅಲಿಯ ಓಟ ಅಲ್ಲಿಂದಲೇ ಪ್ರಾರಂಭವಾಗುತ್ತದೆ. ಕೊನೆಗೂ ಈ ಎರಡು ಹೆಣ್ಣು ಜೀವಗಳ ರಕ್ಷಣೆಯ ಹೊಣೆ ಹೊತ್ತು ಶಿಬಿರದಿಂದ ಅವರೊಂದಿಗೆ ದಿಲ್ಲಿ ರೈಲ್ವೆ ಸ್ಟೇಶನ್‌ಗೆ ಆಗಮಿಸಿ, ಟಿಕೆಟ್‌ಗೆಂದು ಕೌಂಟರ್‌ಗೆ ತೆರಳಿದವನು ಮರಳಿ ಬಂದಾಗ ಕಂಡದ್ದೇ ಬೇರೆ. ಇಬ್ಬರು ತರುಣಿಯರ ಕುಟುಂಬವೋ ಅಥವಾ ಪರಿಚಿತರೋ ಆಕಸ್ಮಿಕ ವಾಗಿ ಅವರನ್ನು ಸಂಧಿಸಿ, ಅವರನ್ನು ಸುತ್ತುವರಿ ದಿತ್ತು. ಅಂದರೆ ಆ ಹೆಣ್ಣು ಮಕ್ಕಳು ‘ತಮ್ಮವರನ್ನು’ ಸೇರಿಕೊಂಡಿದ್ದರು. ಚಾಂದ್ ಅಲಿಗೆ ಅಲ್ಲಿಂದ ಓಡುವುದಲ್ಲದೆ ಬೇರೆ ದಾರಿಯಾದರೂ ಎಲ್ಲಿದೆ? ತನ್ನ ಪ್ರಾಣ ಉಳಿಸಿಕೊಳ್ಳಲು, ತನ್ನ ಮಾನ ಉಳಿಸಿ ಕೊಳ್ಳಲು, ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಚಾಂದ್ ಅಲಿಯ ಓಟ ಪ್ರಾರಂಭವಾಗುತ್ತದೆ. ಅದು ಮುತ್ತುಪ್ಪಾಡಿ ಎನ್ನುವ ಊರನ್ನು ತಲುಪಿ ದಾಗಲಾದರೂ ನಿಲ್ಲುತ್ತದೆಯೇ ಎಂದರೆ ಅಲ್ಲಿ ಇನ್ನೊಂದು ರೂಪದಲ್ಲಿ ತೆರೆದುಕೊಳ್ಳುತ್ತದೆ.
ಚಾಂದಜ್ಜನ ಎದೆಗೂಡಿನ ನೆಲಮಾಳಿಗೆಯ ಮೆಟ್ಟಿಲನ್ನು ನೀವು ಒಂದೊಂದಾಗಿ ಇಳಿಯುತ್ತಾ ಹೋದಿರೆಂದಾದರೆ ಮತ್ತೆ ನೀವು ದಾರಿಯ ಆಯ್ಕೆ ಯನ್ನೇ ಮರೆತು ಬಿಡುತ್ತೀರಿ. ಆ ನೆಲ ಮಾಳಿಗೆ ಯೊಳಗಿನ ಒಳದಾರಿಗಳಲ್ಲಿ ನೀವು ಕಳೆದು ಬಿಡುತ್ತೀರೋ ಅಥವಾ ಒಂದಾಗಿ ಬಿಡು ತ್ತೀರೋ... ಎನ್ನುವುದನ್ನು ನಾನು ಸ್ಪಷ್ಟವಾಗಿ ಹೇಳಲಾರೆ. ಆದರೆ ಎರಡು ದಶಕಗಳ ಹಿಂದೆ ಈ ಕತೆಯನ್ನು ಓದಿದಾಗ ಅಲ್ಲಿ ಚಾಂದಜ್ಜನ ಓಟದ ಆರಂಭದೊಂದಿಗೆ ಕತೆ ಕೊನೆಯಾಗಿತ್ತು. ಕತೆ ಅಲ್ಲಿಗೇ ಕೊನೆಯಾಗಿದ್ದರೂ, ಅದರ ಓಟ ನನ್ನೆದೆ ಯಲ್ಲಿ ಇತ್ತೀಚಿನವರೆಗೆ ಸದ್ದುಗಳನ್ನು ಮಾಡುತ್ತಲೇ ಇತ್ತು. ಅಂದರೆ ಚಾಂದ್ ಅಲಿ ನನ್ನೊಳಗೆ ಇನ್ನೂ ಓಡುತ್ತಲೇ ಇದ್ದ. ಒಂದು ಕತೆಯನ್ನು ನಾನು ಓದಿದ ಎಷ್ಟೋ ವರ್ಷಗಳ ಬಳಿಕ ಒಮ್ಮೆಲೆ ನನ್ನ ಕಣ್ಣೆದುರು ಕತೆಗಾರ ಇಳಿದು ಬಂದು ‘‘ಏಯ್ ಕತೆ ನಿಂತಿಲ್ಲ...ಅದೀಗ ಬೃಹತ್ ಕಾದಂಬರಿ ಯಾಗುತ್ತಿದೆ...’’ ಎಂದರೆ! ಹಾಗೇ ಆಯಿತು. ಕಳೆದ ವರ್ಷ ಇದ್ದಕ್ಕಿದ್ದಂತೆಯೇ ನನ್ನ ಪ್ರೀತಿಯ ಕತೆಗಾರ ಬೊಳುವಾರು ಮುಹಮ್ಮದ್ ಕುಂಞಿ ತನ್ನ ‘ಸ್ವಾತಂತ್ರದ ಓಟ’ ನೀಳ್ಗತೆಯನ್ನು ಕಾದಂಬರಿ ಯಾಗಿ ಘೋಷಿಸಿ ಬಿಟ್ಟರು. ಈ ಘೋಷಣೆಯ ಮರುದಿನದಿಂದ ನಾನು ಅವರ ಜೊತೆ ಜೊತೆಗೆ ಅಲ್ಪಸ್ವಲ್ಪವಾದರೂ ಓಡಿ ಏದುಸಿರು ಬಿಟ್ಟಿದ್ದೇನೆ. ‘ಏನಾಯಿತು’ ‘ಹೇಗಾಯಿತು’, ‘ಎಲ್ಲಿ ಮುಟ್ಟಿತು’ ಎಂಬ ಪ್ರಶ್ನೆಗಳನ್ನು ಕೇಳುತ್ತಾ, ಕೆಲವೊಮ್ಮೆ ಅವರ ವೇಗದೊಂದಿಗೆ ಸ್ಪರ್ಧಿಸಲು ಸಾಲದೆ ಅವರ ಸಿಟ್ಟಿಗೆ ಪಾತ್ರನಾಗುತ್ತಾ ಆ ಕಾದಂಬರಿಯ ಜೊತೆಗೆ ನನ್ನ ಹೆಜ್ಜೆ ಗುರುತುಗಳನ್ನು ಅಲ್ಲಲ್ಲಾದರೂ ಬಿತ್ತಿ ಬಿಟ್ಟಿದ್ದೇನೆ.
ಅವರು ಕೊಟ್ಟ ಕೆಲವು ಪುಟಗಳನ್ನು ನಾನು ಓದುತ್ತಾ ಹೋದಂತೆ ದಿಗ್ಭ್ರಾಂತನಾಗಿದ್ದೇನೆ. ನನ್ನೊಳಗೆ ಕತೆಯೋ, ಕತೆಯೊಳಗೆ ನಾನೋ ಎನ್ನುವುದು ತಿಳಿಯಲಾಗದೆ, ಚಾಂದಜ್ಜನ ಎದೆ ಗೂಡಿನ ನೆಲಮಾಳಿಗೆಯಲ್ಲಿ ದಾರಿ ತಪ್ಪಿ, ಹೊರ ಬರಲಾಗದೆ ದಂಗಾಗಿದ್ದೇನೆ. ಯಾವುದೋ ತ್ರೀಡಿ ಪಿಕ್ಚರ್ ನೋಡಿದ ಅನುಭವ. ಚಾಂದಜ್ಜನ ಬದುಕಿನ ಯಾತ್ರೆಯಲ್ಲಿ ನಾನೂ ಸೇರಿಕೊಂಡಂತೆ, ನನ್ನ ಕನಸಿನ ಮುತ್ತುಪ್ಪಾಡಿಯೆನ್ನುವ ಪುಟ್ಟ ಭಾರತ ದೊಳಗೆ ಹಿಗ್ಗುತ್ತಾ ಕೆಲ ದಿನವಾದರೂ ಕಾದಂಬರಿ ಯ ಪುಟಗಳಲ್ಲೇ ಬದುಕಿದ್ದೇನೆ. ನಿಝಾಮುದ್ದೀನ್ ಔಲಿಯಾ, ಸೈಯದ್ ಮದನಿ ದರ್ಗಾ, ಮಹಾತ್ಮ ಗಾಂಧಿ, ಲಾಲ್‌ಕೃಷ್ಣ ಅಡ್ವಾಣಿ, ಉಡುಪಿಯ ಪೇಜಾವರ ಶ್ರೀ, ಧರ್ಮಸ್ಥಳದ ಹೆಗ್ಗಡೆ, ಮಹಾತ್ಮ ಗಾಂಧಿಯ ಹತ್ಯೆ, ನಾಥೂರಾಂ ಗೋಡ್ಸೆ, ಜೋಳಿಗೆ ಬಾಬಾ ಹೀಗೆ... ಕತೆ ಒಳದಾರಿಗಳನ್ನು ಕೊರೆಯುತ್ತಾ, ಹಾವಿನಂತೆ ಹರಿಯುತ್ತಾ, ನದಿ ಯಂತೆ ಬೆಳೆಯುತ್ತಾ ಮುತ್ತುಪ್ಪಾಡಿಯನ್ನು ಸೇರುವ ಪರಿಯೋ ಅದ್ಭುತ. ನಾನೇನೋ ದೂರದ ಲಾಹೋರಿನಲ್ಲಿ ಕತೆ ಆರಂಭ ವಾಗುತ್ತದೆಯೆಂದು ಭಾವಿಸಿದ್ದರೆ, ಅದರ ತಾಯಿ ಬೇರು ಮುತ್ತುಪ್ಪಾಡಿಯ ಆಳಕ್ಕಿಳಿದಿದೆ. ಒಮ್ಮಿಮ್ಮೆ ಅನಿಸುತ್ತದೆ... ಲೇಖಕರ ಆಳದೊಳಗಿನ ಒಂದು ವಿಷಾದ ಇಡೀ ಕಾದಂಬರಿಯನ್ನು ನುಡಿಸುತ್ತದೆ. ತಮಾಷೆಯಾಗಿ ಮುನ್ನಡೆ ಸುತ್ತದೆ. ಅದು ಸುಮಾರು 70-80ರ ದಶಕದಲ್ಲಿ ಕರಾವಳಿಯಾದ್ಯಂತ ಒಂದು ರಾಜಕೀಯ ಬಿರುಗಾಳಿಯನ್ನೆ ಬ್ಬಿಸಿದ ಅವರ ತಮ್ಮನ ಮತಾಂತರ ಘಟನೆಯೇ ಆಗಿರಬಹುದು...ಆ ತಮ್ಮನೇ ಲೇಖ ಕರ ಕೈಯಲ್ಲಿ ಈ ಪರಿಯ ವೇಗದಲ್ಲಿ ಕಾದಂಬರಿ ಯನ್ನು ಬರೆಸುತ್ತಿರಬಹುದು ಅನ್ನಿಸುತ್ತದೆ.
ನಾನು ಸದಾ ಈ ಎಲ್ಲ ಪ್ರಶ್ನೆಗಳನ್ನು ಇಟ್ಟು ಕೊಂಡು ಆಗಾಗ ಬೊಳುವಾರರನ್ನು ಪತ್ರಿಕೆಗಾಗಿ ಮಾತನಾಡಿಸುವುದಿದೆ. ಆದರೆ ಅವರು, ‘ಈಗ ಬೇಡ’ ಎಂದು ಮುಂದೆ ಹಾಕುತ್ತಲೇ ಬಂದಿದ್ದಾರೆ.
ಆದರೆ, ಇತ್ತೀಚೆಗೆ ಕಾದಂಬರಿ ಮುಕ್ಕಾಲಂಶ ಮುಗಿದಿರುವುದೂ, ಎಲ್ಲಕ್ಕಿಂತ ಮುಖ್ಯವಾಗಿ ಸುಮಾರು ಒಂದು ಸಾವಿರ ಪುಟಗಳ ಮಹಾ ಕಾದಂಬರಿಯಾಗಿ ಅದು ಸಿದ್ಧಗೊಳ್ಳುತ್ತಿರುವು ದರಿಂದ ‘ಕಾದಂಬರಿಯ ಕುರಿತಂತೆ ಪತ್ರಿಕೆಯ ಜೊತೆಗೆ ಮಾತನಾಡಲೇಬೇಕು’ ಎಂದು ಬೆಂಬಿದ್ದೆ. ಕಾದಂಬರಿ ಶೀಘ್ರದಲ್ಲೇ ಮುಂದಿನ ಜನವರಿ 30ರಂದು ಮಹಾತ್ಮಾ ಗಾಂಧೀಜಿ ಹುತಾತ್ಮರಾದ ದಿನದಂದು ಬಿಡುಗಡೆ ಯಾಗುವ ಸಾಧ್ಯತೆಯಿರುವುದು ಇದೀಗ ಸಾಹಿತ್ಯವಲಯದಲ್ಲಿ ಸುದ್ದಿ. ಈ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳನ್ನು ದೂರವಾಣಿಯಲ್ಲೇ ಅವರ ಮುಂದಿಟ್ಟೆ. ಆ ಎಲ್ಲ ಪ್ರಶ್ನೆಗಳಿಗೆ ಒಂದು ಪುಟ್ಟ ಪತ್ರದ ಮೂಲಕ ಅವರು ಉತ್ತರಿಸಿದ್ದು ಹೀಗೆ. ಪುಟ್ಟ ಪತ್ರ ಅದಾದರೂ ಚಾಂದಜ್ಜನ ನೆಲಮಾಳಿಗೆಯ ರಹಸ್ಯ ತಿಜೋರಿಯ ಕಡೆಗೆ ಸಾಗುವ ಒಳದಾರಿಯ ನೀಲ ನಕ್ಷೆಯೊಂದು ಅದರಲ್ಲಿದೆ.
ಪ್ರಿಯ ಬಶೀರ್,
ವಂದನೆಗಳು. ಕೆಲವು ತಿಂಗಳುಗಳಿಂದ ಕಾದಂಬರಿಯೊಂದನ್ನು ಬರೆಯಲು ಶುರುಮಾಡಿದ್ದೇನೋ ಹೌದು; ಆದರೆ ಅದು ಎಲ್ಲಿಗೆ ಹೋಗಿ ಮುಟ್ಟೀತು ಎಂಬ ಬಗ್ಗೆ ಯಾವುದೇ ಸೂಚನೆ ಸಿಗದಿ ರುವ ಕಾರಣ, ನಿಮ್ಮ ಯಾವುದೇ ಪ್ರಶ್ನೆಗೆ ಈಗ ಉತ್ತರಿಸಿದರೂ, ಅದು ಮುಂದೆ ನಿಜವಾಗದಿರುವ ಸಾಧ್ಯತೆಗಳೇ ಹೆಚ್ಚು. ಆದ್ದ ರಿಂದ ‘ಕ್ರಿಸ್‌ಮಸ್ ಡಿಸ್ಕೌಂಟ್ ಸೇಲ್’ ಮುಗಿಯುವವರೆಗೆ ಕಾಯುವುದು ಒಳ್ಳೆಯದು.
ಎಂಭತ್ತು ದಾಟಿದ್ದ ಮುದುಕನೊಬ್ಬ ಹೇಳಿರುವು ದನ್ನೆಲ್ಲ, ಅವನ ಮಾತುಗಳಲ್ಲೇ ಬರೆಯಲು ಶುರುಮಾಡಿ ಸಿಕ್ಕಿಹಾಕಿಕೊಂಡಂತಾಗಿದೆ. ಅವನ ಮಾತುಗಳಲ್ಲಿ ನಿಜ ಯಾವುದು? ಕಲ್ಪನೆ ಯಾವುದು? ಎಂಬುದನ್ನು ತೀರ್ಮಾನಿಸಲಾಗದೆ ತಲೆ ಹನ್ನೆರಡಾಣೆಯಾಗಿದೆ. ಅರುವತ್ತಕ್ಕೇ ಅರುಳು ಮರುಳು ಅಂತಾರೆ. ಅಂಥದ್ದರಲ್ಲಿ, ಎಂಭತ್ತು ದಾಟಿದವನನ್ನು ಇಡಿಯಾಗಿ ನಂಬುವುದು ಹೇಗೆ? ಉದಾಹರಣೆಗೆ, ಇಬ್ಬರು ಪಂಜಾಬಿ ಯುವತಿಯರನ್ನು ಲಾಹೋರಿನ ಕ್ಯಾಂಪ್ ತಲುಪಿಸಲು ಲಾರಿ ಹತ್ತಿದವನನ್ನು, ಆ ಲಾರಿಯವರು ಸೀದಾ ವಾಘಾ ಗಡಿ ದಾಟಿಸಿ, ದೆಹಲಿಯ ಕ್ಯಾಂಪಿಗೆ ಕರೆದು ತಂದು ಬಿಟ್ಟರಂತೆ. ಆ ದಿನಗಳಲ್ಲಿ ಯಾರಿಗೂ ಗೊತ್ತಿಲ್ಲದಿದ್ದ ದೆಹಲಿಯ ಹಝ್ರತ್ ನಿಝಾಮುದ್ದೀನ್ ದರ್ಗಾದ ನೆಲ ಮಾಳಿಗೆಯಲ್ಲಿ, ಜೋಳಿಗೆ ಬಾಬಾ ಎಂಬ ಫಕೀರನೊಡನೆ ಒಂದು ವರ್ಷ ಇದ್ದನಂತೆ. ಮುಂದೆ ಗುಲ್ಬರ್ಗಾದ ಖ್ವಾಜಾ ಬಂದೇ ನವಾಜ್ ದರ್ಗಾದಲ್ಲಿದ್ದವನಿಗೆ, ರಜಾಕಾರರ ಗಲಾಟೆಯ ಕಾರಣದಿಂದ ಅಲ್ಲಿಂದ ಹೊರಟು ಬರಬೇಕಾಯಿತಂತೆ. ಅಲ್ಲೇ ಇದ್ದ ದಿನಗಳಲ್ಲಿ ‘ಎನಗಿಂತ ಕಿರಿಯರಿಲ್ಲ’ ಎಂಬ ಪಾಳುಬಿದ್ದ ಶಿಲಾ ಫಲಕ ಓದಿಸುವ ಮೂಲಕ, ಜೋಳಿಗೆ ಬಾಬಾ ಕನ್ನಡ ಕಲಿಸಿದನಂತೆ. ಅದೆಲ್ಲ ಹೋಗಲಿ, ಅಂತಹಾ ವಿಶೇಷಗಳೇನೂ ಅಲ್ಲ. ಆದರೆ, ಅವತ್ತು ಜುಮಾ ನಮಾಝಿನ ದಿನ ದೆಹಲಿಯ ಬಿರ್ಲಾ ಭವನದಲ್ಲಿ ಮಹಾತ್ಮಾ ಗಾಂಧೀಜಿಯವರ ಕೊಲೆಯಾ ಗುತ್ತಿದ್ದಾಗ ಇವನು ಬರೇ ಎರಡು ಮಾರು ದೂರದಲ್ಲಿದ್ದನಂತೆ. ಅದನ್ನಾದರೂ ನಂಬಬಹುದು. ಆದರೆ, ಗಾಂಧಿಯನ್ನು ಕೊಂದವನನ್ನು ಅದೇ ದಿನ ಬೆಳಗ್ಗೆ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಕಣ್ಣಾರೆ ನೋಡಿದ್ದನಂತೆ. ಅಷ್ಟು ಮಾತ್ರವಲ್ಲ, ಅವನ ಖಾಕಿ ಚಡ್ಡಿಯೊಂದನ್ನು ಅರುವತ್ತು ವರ್ಷಗಳಿಂದ ತನ್ನ ಪೆಟ್ಟಿಗೆಯಲ್ಲಿ ಇಟ್ಟುಕೊಂಡಿದ್ದನಂತೆ. ಯಾರಾದರೂ ನಂಬುವ ಮಾತುಗಳಾ ಇವು?
ಆದರೆ ಅಚ್ಚರಿಯೆಂದರೆ, ಮೊನ್ನೆ ಮೊನ್ನೆ ‘ಗೂಗಲ್’ ನೋಡುತ್ತಿದ್ದಾಗ, ವಿಭಜನೆಯ ದಿನಗಳಲ್ಲಿ ಲಾಹೋರಿನಲ್ಲಿದ್ದ ಟ್ರಿಬ್ಯೂನ್ ಪತ್ರಿಕೆಯವರು, ತಮ್ಮ ಕಚೇರಿಯ ಸಿಬ್ಬಂದಿ ಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಬರುವಾಗ ಬೇರೆ ಕೆಲವರನ್ನೂ ಕರೆದುಕೊಂಡು ಬಂದದ್ದು ಗೊತ್ತಾಯಿತು. ಇತ್ತೀಚೆಗೆ ‘ಆಗಾ ಖಾನ್ ಫೌಂಡೇಶನ್’ನವರು ನಿಝಾಮುದ್ದೀನ್ ದರ್ಗಾದಲ್ಲಿ ಉತ್ಖನನ ನಡೆಸುತ್ತಿದ್ದಾಗ ನಿಝಾಮುದ್ದೀನ್ ಔಲಿಯಾ ಬಳಸುತ್ತಿದ್ದ ನೆಲಮಾಳಿಗೆ ಪತ್ತೆಯಾಯಿತು ಎಂಬ ಮಾಹಿತಿ ಸಿಕ್ಕಿತ್ತು; ಹಾಗಾದರೆ ಈ ಮುದುಕ ಪೂರ್ತಿ ಸುಳ್ಳು ಹೇಳಲಿಲ್ಲವೇನೋ ಎಂಬ ಅನುಮಾನ ಶುರುವಾಗಿತ್ತು. ‘ಎನಗಿಂತ ಕಿರಿಯರಿಲ್ಲ’ ಎಂಬ ಪದವನ್ನು ಬಸವಣ್ಣನವರ ಕಾಲದಲ್ಲಿ ಕಲಬುರ್ಗಿಯ ಸುತ್ತಮುತ್ತ ಕೆಲವರು ಬಳಸುತ್ತಿದ್ದರು ಎಂಬುದಾಗಿ ಡಾ. ಚಿದಾನಂದ ಮೂರ್ತಿಯವರು ಹೇಳಿದ್ದಾರೆಂದು ಯಾವುದೋ ಒಂದು ಪುಸ್ತಕದಲ್ಲಿ ಓದಿದಾಗ, ಈ ಮುದುಕ ಹೇಳಿದ್ದು ನಿಜವಿರಬಹುದೇನೋ ಅಂತ ಅನ್ನಿಸತೊಡಗಿತ್ತು. ಗಾಂಧೀಜಿಯವರ ಕೊಲೆಯಾದದ್ದು ಶುಕ್ರವಾರ; ಕೊಂದವರು ಆವತ್ತು ದೆಹಲಿಯ ರೈಲ್ವೆ ನಿಲ್ದಾಣದ ಆರನೆಯ ನಂಬರಿನ ಕೋಣೆಯೊಂದನ್ನು ಬಾಡಿಗೆಗೆ ಪಡೆದು ಉಳಕೊಂಡಿದ್ದರು ಇತ್ಯಾದಿ ಮಾಹಿತಿಗಳು, ಸ್ವತ: ನಾಥೂರಾಮ್ ಗೋಡ್ಸೆಯವರು ಬರೆದ ಪುಸ್ತಕದಲ್ಲೇ ಓದಲು ಸಿಕ್ಕಾಗ, ಆ ಮುದುಕ ಹೇಳಿದ್ದೆಲ್ಲವೂ ಸತ್ಯ; ಸತ್ಯವನ್ನಲ್ಲದೆ ಬೇರೇನನ್ನೂ ಹೇಳಲಿಲ್ಲ ಎಂಬುದಂತೂ ಖಾತ್ರಿಯಾಗಿತ್ತು.
ಆದ್ದರಿಂದ, ಆವತ್ತು ರಾತ್ರಿ ಅವನು ಏನೆಲ್ಲ ಹೇಳಿದ್ದನೋ, ಅರುವತ್ತು ವರ್ಷಗಳ ಕತೆ ಅದು, ಅವನ್ನೆಲ್ಲ ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ ಚಾಚೂ ತಪ್ಪದೆ ಬರೆಯುತ್ತಿರುವುದರಿಂದ ಬರವಣಿಗೆ ಸಾವಿರ ಪುಟಗಳಿಗೆ ಹತ್ತಿರವಾಗುತ್ತಿದೆ. ಅವನು ಒಂದು ರಾತ್ರಿಯಲ್ಲಿ ಹೇಳಿದ್ದ ಕತೆ ಸಾವಿರ ಪುಟಗಳಾಗುವುದು ಹೇಗೆ? ಎಂದು ನೀವು ಪ್ರಶ್ನೆ ಕೇಳಿದರೆ ನಾನೇನು ಹೇಳಲಿಕ್ಕಾ ಗ್ತದೆ? ಯುದ್ಧ ಭೂಮಿಯಲ್ಲಿ ಶಸ್ತ್ರ ಸನ್ನದ್ಧರಾಗಿರುವ ಯೋಧರೆಲ್ಲ ಬಿಲ್ಲು ಎದೆಯೇರಿಸಿ, ಈಟಿ, ಗದೆಗಳನ್ನೆತ್ತಿ ಬೀಸಲು ರೆಡಿಯಾಗಿದ್ದ ಸಮಯದಲ್ಲಿ, ಶ್ರೀಕೃಷ್ಣ ಪರಮಾತ್ಮನು ಅಷ್ಟು ಪುಟಗಳಷ್ಟು ಭಗವದ್ಗೀತೆಯನ್ನು ಬೋಧಿಸಲು ಆಗುತ್ತದಾ? ಎಂದು ಕೆಲವರು ‘ಪೆದಂಬು ಪ್ರಶ್ನೆ’ ಕೇಳುತ್ತಾರಲ್ಲ, ಹಾಗಿದೆ ನಿಮ್ಮ ಪ್ರಶ್ನೆ.
‘‘ನೀವು ಸತ್ಯವನ್ನು ಸುಳ್ಳುಗಳ ಜೊತೆ ಬೆರೆಸಬೇಡಿರಿ ಹಾಗೂ ಗೊತ್ತಿರುವ ಸತ್ಯವನ್ನು ಮರೆಮಾಚಬೇಡಿರಿ.’’ ಇದು ಚಾಂದಜ್ಜನವರ ಸ್ವಂತ ಹೇಳಿಕೆಯಲ್ಲ; ಹಾಗಂತ ‘ಕುರ್‌ಆನ್’ನಲ್ಲಿ ಉಂಟೆಂದು ಅವರೇ ಹೇಳಿದ್ದು. ನನ್ನದು ಒಂದು ರೀತಿಯಲ್ಲಿ ಗಣಪತಿಯ ರೋಲು; ವ್ಯಾಸ ಹೇಳಿದ್ದನ್ನು ಅವನು ಬರೆದುಹಾಕಿದಂತೆ, ಚಾಂದಜ್ಜನವರು ಹೇಳಿದ್ದನ್ನು ನಾನು ಬರೆಯುತ್ತಿದ್ದೇನೆ. ಕರಾಚಿಯಲ್ಲಿದ್ದಾಗಿನ ದಿನಗಳಲ್ಲಿ ತನ್ನ ಜೊತೆ ಕ್ರಿಕೆಟ್ ಆಡುತ್ತಿದ್ದ ಹುಡುಗ ಲಾಲ್ ಕಿಶನ್‌ನನ್ನೇ ಲಾಲ್ ಚಂದ್ ಎಂದೇ ಆಗೆಲ್ಲ ಗೆಳೆಯರು ಕರೆಯುತ್ತಿದ್ದಂತೆ, ಈಗಿನ ಲಾಲ್ ಕೃಷ್ಣ ಅಡ್ವಾಣಿಯವರು ಎಂಬುದಾಗಿ ‘ಕಾನತ್ತೂರು ದರ್ಗಾ’ದ ಮೇಲೆ ಆಣೆ ಹಾಕಿ, ಪ್ರಮಾಣ ಮಾಡಿದ್ದವರು ಚಾಂದಜ್ಜ. ದೇಶ ವಿಭಜನೆಯ ಆತಂಕದ ಆ ದಿನಗಳಲ್ಲಿ ಲಾಲ್‌ಚಂದ್‌ನಿಗಾಗಿ ದೆಹಲಿಯ ಮೂಲೆ ಮೂಲೆಗಳನ್ನು ತಲಾಶ್ ಮಾಡಿದ್ದರಂತೆ. ‘ಸಂಘ’ದ ಆಫೀಸಿಗೂ ಹೋಗಿ ವಿಚಾರಿಸಿದ್ದರಂತೆ. ಒಂದು ವೇಳೆ, ಲಾಲ್ ಚಂದ್ ಆಗೇನಾದರೂ ಸಿಕ್ಕಿರುತ್ತಿದ್ದರೆ, ತನ್ನನ್ನು ಮಾತೃ ಭೂಮಿಗೆ ವಾಪಸು ಕಳುಹಿಸಲು ಖಂಡಿತವಾಗಿ ಉಪಕಾರ ಮಾಡುತ್ತಿದ್ದ ಎಂದು ಕೊನೆಯವರೆಗೂ ನಂಬಿದ್ದವರು ಚಾಂದಜ್ಜ.
ಆದರೆ, ಕಾಲ ಎಲ್ಲವನ್ನೂ ಬದಲಿಸುತ್ತದೆ; ಮಾತೃಭೂಮಿ ಯನ್ನು ಕೂಡಾ. ಮೊನ್ನೆ ಮೊನ್ನೆ, ಕ್ಯಾಲಿಫೋರ್ನಿಯಾದಲ್ಲಿರುವ ಚಾಂದಜ್ಜನವರ ಮೊಮ್ಮಗಳು ಬಂದಿದ್ದವಳು, ‘ನೀನು ಬಂದು ಜೊತೆಯಲ್ಲಿರು’ ಎಂದು ಕಣ್ಣೀರು ಹಾಕಿದಾಗಲೂ, ‘ನನ್ನ ಮುತ್ತುಪ್ಪಾಡಿ’ಯನ್ನು ‘ಬಿಟ್ಟು ಬರುವುದಿಲ್ಲ’ ಎಂದಿದ್ದ ಇವರಿಗೆ ಈಗ ಕೆಲವರು, ‘ನೀನು ಪಾಕಿಸ್ತಾನಕ್ಕೆ ಹೋಗು’ ಎಂದು ಹೇಳಿದಾಗ -ಅದು ಕುಶಾಲಿಗೇ ಇರಬಹುದು- ಹೇಗಾಗಿರಬೇಡ?
-ಬೊಳುವಾರು
ಕನ್ವರ್ಟ್ ಮಾಡುವಾಗ ವಾಕ್ಯಗಳಲ್ಲಿ ಕೆಲವು ತಪ್ಪುಗಳು ನುಸುಳಿವೆ. ಉದಾಹರಣೆಗೆ ಸ್ವಾತಂತ್ರ್ಯಕ್ಕೆ ಯ ಅಡಿ ಒತ್ತು ಬಿದ್ದಿಲ್ಲ. ಕ್ಷಮಿಸಬೇಕು-ಬಶೀರ್
Subscribe to:
Post Comments (Atom)
ನಾವು ಸ್ವಾತಂತ್ರ್ಯಕ್ಕೆ ಯಾವಾಗಲೂ ‘ಒತ್ತು’ ಕೊಡುವವರೇ ಅಲ್ಲ ಬಶೀರ್ ! ಇರಲಿ, ಬರಹ ಓದಿ ಒಂಥರಾ ಖುಷಿ ಹಾಗೂ ಸಂಕಟವಾಯಿತು.
ReplyDelete- ಹರೀಶ್ ಕೇರ
thank u hareesh
ReplyDelete