Tuesday, September 6, 2011

ಕಾಡುವ ಪಾಕಿಸ್ತಾನಿ ಚಿತ್ರ ‘ಬೋಲ್’

ವಾರದ ಹಿಂದೆ ಬಿಡುಗಡೆಯಾದ ಶೊಹೈಬ್ ಮನ್ಸೂರ್ ಅವರ ಪಾಕಿಸ್ತಾನಿ ಚಿತ್ರ ‘ಬೋಲ್’ ನೋಡಿದೆ. ಅದರ ಒಂದು ಪುಟ್ಟ ವಿಮರ್ಶೆಯನ್ನು ಹಂಚಿಕೊಂಡಿದ್ದೇನೆ.


ನಾಟಕೀಯ ಕ್ಷಣದೊಂದಿಗೆ ‘ಬೋಲ್’ ಚಿತ್ರ ತೆರೆದುಕೊಳ್ಳುತ್ತದೆ. ಮರಣ ದಂಡನೆಗೆ ಒಳಗಾಗಿರುವ ಝೈನಬ(ಹುಮೈಮಾ ಮಲಿಕ್) ತನ್ನ ಕೊನೆಯ ಆಸೆಯಾಗಿ, ಗಲ್ಲಿಗೇರುವ ಸಂದರ್ಭದಲ್ಲಿ ಮೀಡಿಯಾ ದೊಂದಿಗೆ ಮಾತನಾಡಲು ಬಯಸುತ್ತಾಳೆ. ಪಾಕಿಸ್ತಾನದ ಅಧ್ಯಕ್ಷರು ಅದಕ್ಕೆ ಅವಕಾಶ ಮಾಡಿಕೊಡುತ್ತಾರೆ. ಮಂಜುಗತ್ತಲಿನ ವಾತಾವರಣ ದಲ್ಲಿ, ನೇಣುಗಂಬದ ಪಕ್ಕದಲ್ಲೇ ಝೈನಬಳಿಗೆ ಮೀಡಿಯಾಗಳ ಜೊತೆ ಮಾತನಾಡಲು, ಅವಕಾಶ ಮಾಡಿಕೊಡಲಾಗುತ್ತದೆ. ಯಾವುದೇ ನ್ಯಾಯಾಲಯದಲ್ಲಿ ಬಾಯಿ ತೆರೆಯದೇ ಮರಣದಂಡನೆಗೆ ತಲೆ ಬಾಗಿದ್ದ ಝೈನಬ ಮೊದಲ ಬಾರಿ ಮಾತನಾಡಲು ಅದೂ ಗಲ್ಲುಗಂಬಕ್ಕೇರುವ ಮುನ್ನ ಮಾತ ನಾಡಲು ನಿರ್ಧರಿಸಿದ್ದಾಳೆನ್ನುವುದು ಪಾಕಿಸ್ತಾನದ ಮೀಡಿಯಾ ಗಳಿಗೆ ಕುತೂಹಲದ ವಿಷಯವಾಗುತ್ತದೆ. ಮರಣದಂಡನೆಯ ದಿನ, ಜೈಲಿನ ಆವರಣದಲ್ಲಿ ಮೀಡಿಯಾಗಳ ದಂಡೇ ನೆರೆಯುತ್ತದೆ. ಪೊಲೀಸ್ ಅಧಿಕಾರಿಯ ಬೆದರಿಕೆ, ಎಚ್ಚರಿಕೆ ಇವುಗಳ ನಡುವೆಯೇ ಝೈನಬ ಮಾತನಾಡುತ್ತಾಳೆ.

ತೀರಾ ನಾಟಕೀಯ ಆರಂಭ ಹಾಗೂ ಅಷ್ಟೇ ನಾಟಕೀಯವಾದ ಮುಕ್ತಾಯ. ಆದರೆ ಇವರೆಡರ ನಡುವೆ ‘ಬೋಲ್’ ಚಿತ್ರ ಕೆಲವು ಹೃದಯಸ್ಪರ್ಶಿ ಸನ್ನಿವೇಶಗಳು ಮತ್ತು ಸಂಘರ್ಷಗಳಿಂದ ನಮಗೆ ಹತ್ತಿರವಾಗುತ್ತದೆ. ಇದು ಒಂದು ಪಾಕಿಸ್ತಾನದ ಕುಟುಂಬದ ಕತೆಯಲ್ಲ. ಇಡೀ ಪಾಕಿಸ್ತಾನದ ಸದ್ಯದ ಸಂದರ್ಭಕ್ಕೆ ಕನ್ನಡಿ ಹಿಡಿಯುವ ಕತೆ. ಇಲ್ಲಿ ಒಂದು ತುದಿಯಲ್ಲಿ ಝೈನಬ. ಇನ್ನೊಂದು ತುದಿಯಲ್ಲಿ ಆಕೆಯ ತಂದೆ ಹಕೀಮ್ ಸಾಹಿಬ್(ಮಂಝರ್ ಸೆಹ್‌ಬಾಯಿ). ಚಿತ್ರ ಇವರ ನಡುವಿನ ಸಂಘರ್ಷದಂತೆ ನಮಗೆ ಭಾಸವಾಗುತ್ತದೆ. ಹಕೀಮ್ ಸಾಹಿಬ್ ಧಾರ್ಮಿಕ ಶೃದ್ಧಾಳು. ಅವರು ದೇವರನ್ನು ಎಷ್ಟು ಹೃದಯಪೂರ್ವಕವಾಗಿ ನಂಬುತ್ತಾರೆಂದರೆ, ಮನೆ ತುಂಬಾ ಬಡತನ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ, ಭ್ರಷ್ಟ ಹಣವನ್ನು ಕೈಯಿಂದ ಮುಟ್ಟುವುದಕ್ಕೂ ಅಂಜುವವರು. ತನ್ನ ದೈನಂದಿನ ಗಿರಾಕಿ ಕಂಜರವಾಡಿಯಲ್ಲಿ ಹೆಣ್ಣುಗಳನ್ನು ಕುಣಿಸಿ ಜೀವನ ಹೊರೆಯುವವನೆಂದು ಗೊತ್ತಾದಾಗ, ಆತ ಕೊಟ್ಟ ಹಣವನ್ನು ಮುಟ್ಟಲಾಗದೆ, ಹೊರಗಿನಿಂದ ಭಿಕ್ಷುಕನನ್ನು ಕರೆಸಿ ಅವನಿಂದಲೇ ಆ ಹಣವನ್ನು ಅಲ್ಲಿಂದ ತೆಗೆಸುವಷ್ಟು ಶೃದ್ಧಾಳು. ಆದರೆ ಮನೆಯಲ್ಲಿ 5 ಹೆಣ್ಣು ಮಕ್ಕಳು. ಇದೇ ಸಂದರ್ಭದಲ್ಲಿ ಆ ಮನೆಯಲ್ಲಿ ಇನ್ನೊಂದು ಮಗುವಿನ ಜನನವಾಗುತ್ತದೆ. ದುರದೃಷ್ಟಕ್ಕೆ ಅದು ಹೆಣ್ಣೂ-ಗಂಡೂ ಅಲ್ಲದ ಮಗು. ಈ ಮಗುವಿನ ಮೂಲಕವೇ ಚಿತ್ರ ವೇಗವನ್ನು ಪಡೆಯುತ್ತದೆ. ಈ ಮಗುವನ್ನು ಹಕೀಮ್ ಸಾಹೇಬ್ ದ್ವೇಷಿಸಲಾರಂಭಿಸುತ್ತಾರೆ. ಸಹೋದರಿಯರು ಮತ್ತು ತಾಯಿಯ ಆಶ್ರಯದಲ್ಲೇ ಮಗು ಬೆಳೆಯುತ್ತದೆ. ಹೆಣ್ಣಿನ ಕುರಿತಂತೆ ಹಕೀಮ್ ಸಾಹೇಬ್‌ಗೆ ತನ್ನದೇ ಆದ ಪೂರ್ವಾಗ್ರಹವಿದೆ. ಆದುದರಿಂದ ಐದೂ ಜನ ಹೆಣ್ಣು ಮಕ್ಕಳು ಮತ್ತು ಹೆಣ್ಣು ಅಲ್ಲ-ಗಂಡೂ ಅಲ್ಲದ ಹುಡುಗನು ಆ ಮನೆಯಲ್ಲಿ ತಮ್ಮ ಭವಿಷ್ಯದ ಕುರಿತಂತೆ ಒಳದಾರಿಗಳನ್ನು ಹುಡುಕಲು ಆರಂಭಿಸುತ್ತಾರೆ. ಅವರೆಲ್ಲರಿಗೆ ಹಿರಿಯಳಾದ ಝೈನಬ ಧ್ವನಿಯಾಗುತ್ತಾಳೆ.

ಮನೆಯ ಬಡತನ ಹೆಚ್ಚಿದಂತೆಲ್ಲ ಅದರ ಪರಿಣಾಮವನ್ನು ಈ ಹೆಣ್ಣುಮಕ್ಕಳೇ ಉಣ್ಣಬೇಕಾಗುತ್ತದೆ. ಆದರೆ ಈ ಬಡತನ ದೇವರ ಕುರಿತಂತೆ ಹಕೀಮ್ ಸಾಹೇಬರ ಭರವಸೆಯನ್ನು ಇಲ್ಲವಾಗಿಸುವುದಿಲ್ಲ. ಪತ್ನಿ ಹೇಳುತ್ತಾಳೆ ‘‘ಇತ್ತೀಚೆಗೆ ಮಾಡಿದ ಅಡುಗೆ ಎಲ್ಲರ ಹೊಟ್ಟೆಗೆ ಸಾಕಾಗುತ್ತಿಲ್ಲ’’
ಹಕೀಮ್ ಸಾಹೇಬ್ ವಿಷಾದದಿಂದ ಹೇಳುತ್ತಾರೆ ‘‘ನೀನು ರುಚಿಯಾಗಿ ಅಡುಗೆ ಮಾಡುತ್ತಿ. ಅದಕ್ಕೆ ಎಲ್ಲರಿಗೂ ಸಾಕಾಗುತ್ತಿಲ್ಲ’’
ತನ್ನೆಲ್ಲ ಶ್ರದ್ಧೆಗಳ ನಡುವೆ ಹಕೀಮ್ ಸಾಹೇಬ್ ಕ್ರಿಕೆಟ್ ಕಮೆಂಟರಿ ಕೇಳುತ್ತಾರೆ. ಪಾಕಿಸ್ತಾನ ಸೋತಾಗ ಹಿರಿಮಗಳ ಅಹಂಕಾರದ ಮಾತುಗಳೇ ಅದಕ್ಕೆ ಕಾರಣ ಎಂದು ರೇಡಿಯೋವನ್ನು ಒಡೆದು ಹಾಕುತ್ತಾರೆ. ಇಂತಹ ಕೆಲವು ಸನ್ನಿವೇಶಗಳು ಚಿತ್ರವನ್ನು ಹೆಚ್ಚು ಆಪ್ತವಾಗಿಸುತ್ತದೆ.

ಹಕೀಮ್ ಸಾಹೇಬರ ಮನೆಯನ್ನೇ ಒತ್ತಿಕೊಂಡು ಶಿಯಾ ಕುಟುಂಬವಿದೆ. ಅದು ವಿದ್ಯಾವಂತ ಕುಟುಂಬ. ಹಕೀಂ ಸಾಹೇಬರ ಹೆಣ್ಣು ಮಕ್ಕಳ ಪಾಲಿಗೆ ಆ ಮನೆಯ ಗೋಡೆಯ ನಡುವಿರುವ ಕಿಟಕಿಯೇ ಭವಿಷ್ಯದ ಬೆಳಕಿಂಡಿ. ಡಾಕ್ಟರ್ ಓದುತ್ತಿರುವ ಆ ಕುಟುಂಬದ ತರುಣ ಮುಸ್ತಫಾ(ಆತಿಫ್ ಇಸ್ಲಾಂ) ಈ ಕುಟುಂಬಕ್ಕೆ ನೆರವಾಗಲು ಪ್ರಯತ್ನಿಸುತ್ತಾನೆ. ಗೋಡೆಗಳ ನಡುವೆ ಬಂಧಿಯಾದ ಹೆಣ್ಣು ಅಲ್ಲ- ಗಂಡೂ ಅಲ್ಲದ ಹುಡುಗನಲ್ಲಿರುವ ಚಿತ್ರಬಿಡಿಸುವ ಪ್ರತಿಭೆಯನ್ನು ಕಂಡು ಲಾರಿಗಳಿಗೆ ಬಣ್ಣ ಹಚ್ಚುವ ಕೆಲಸವೊಂದನ್ನು ಅವನಿಗೆ ಹುಡುಕಿ ಕೊಡುತ್ತಾನೆ. ಇದೆಲ್ಲವನ್ನೂ ಹಕೀಂ ಸಾಹೇಬರ ಕಣ್ಣು ತಪ್ಪಿಸಿಯೇ ಮಾಡಬೇಕಾಗುತ್ತದೆ. ಆದರೆ ಅದೇ ಮುಂದಿನ ದುರಂತಗಳಿಗೆ ಕಾರಣವಾಗುತ್ತದೆ. ಆ ಹುಡುಗನ ಮೇಲೆ ದುಷ್ಕರ್ಮಿಗಳಿಂದ ಬರ್ಬರ ಲೈಂಗಿಕ ದೌರ್ಜನ್ಯ ನಡೆಯುತ್ತದೆ. ಮಾನ ಮರ್ಯಾದೆಗೆ ಅಂಜಿ ಹಕೀಂ ಸಾಹೇಬ್ ತನ್ನ ‘ಮಗ’ನನ್ನು ಒಂದು ರಾತ್ರಿ ಉಸಿರುಗಟ್ಟಿ ಸಾಯಿಸುತ್ತಾರೆ. ಈ ಕೊಲೆಯೊಂದಿಗೆ ಹಕೀಮ್ ಸಾಹೇಬರ ಪತನ ಆರಂಭವಾಗುತ್ತದೆ.

ಚಿತ್ರ ತೀವ್ರತೆಯನ್ನು ಪಡೆದುಕೊಳ್ಳುವುದೂ ಇಲ್ಲಿಂದಲೇ. ಒಂದೆಡೆ ತನ್ನ ವೈಯಕ್ತಿಕ ಶ್ರದ್ಧೆ, ನಂಬಿಕೆ, ಇನ್ನೊಂದೆಡೆ ಸಾಮಾಜಿಕ ಗೌರವ ಇವರೆಡರ ಸಂಘರ್ಷದಲ್ಲಿ ಹಕೀಂ ಸಾಹೇಬ್ ಜರ್ಝರಿತರಾಗುತ್ತಾರೆ. ಕೊಲೆಯನ್ನು ಮುಚ್ಚಿ ಹಾಕಲು ಪೊಲೀಸರಿಗೆ 2 ಲಕ್ಷ ರೂ. ನೀಡಬೇಕಾಗುತ್ತದೆ. ಆಗ ಅದೇ ಹಕೀಂ ಸಾಹೇಬ್ ಅನಿವಾರ್ಯವಾಗಿ ವೇಶ್ಯಾವಾಟಿಕೆಯನ್ನು ನಡೆಸುತ್ತಿರುವ ಕಂಜರ್‌ನ ಮುಖಂಡನನ್ನು ಹುಡುಕಿ ಕೊಂಡು ಹೋಗಬೇಕಾ ಗುತ್ತದೆ. ತನ್ನ ನಂಬಿಕೆ, ಶ್ರದ್ಧೆಯನ್ನು ಕಾಯುವ ಭರದಲ್ಲೇ ಅವರು ಪತನದೆಡೆಗೆ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದಂತೆಯೇ ಹಿರಿ ಮಗಳು ಝೈನಬ, ಮನೆಯ ಗೌರವವನ್ನು ಉಳಿಸುವ ಇನ್ನೊಂದು ಬಾಗಿಲನ್ನು ತೆರೆಯುವ ಪ್ರಯತ್ನವನ್ನು ಮಾಡುತ್ತಾಳೆ. ಇದು ತಂದೆ ಮಗಳ ನಡುವಿನ ತೀವ್ರ ತಿಕ್ಕಾಟಕ್ಕೆ ಕಾರಣವಾಗುತ್ತದೆ. ಹಕೀಂ ಸಾಹೇಬ್ ಪತನದ ಆಳಕ್ಕಿಳಿದಂತೆ ಹೆಚ್ಚು ಹೆಚ್ಚು ಹಿಪಾಕ್ರೆಟ್ ಆಗ ತೊಡಗುತ್ತಾರೆ. ತನ್ನ ಅಸಹಾಯಕತೆಗೆಲ್ಲ ಮನೆಯ ಹೆಣ್ಣು ಮಕ್ಕಳನ್ನೇ ಹೊಣೆ ಮಾಡುತ್ತಾರೆ. ಅಂತಿಮವಾಗಿ ಹಕೀಂ ಸಾಹೇಬ್ ಕಂಜರ್‌ವಾಡಾದಲ್ಲಿ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಅಲ್ಲಿನ ತರುಣಿಯನ್ನು ಗುಟ್ಟಾಗಿ ಮದುವೆಯಾಗಬೇಕಾಗುತ್ತದೆ. ಅಲ್ಲಿ ಅವರಿಗೆ ಹೆಣ್ಣು ಮಗು ಹುಟ್ಟುತ್ತದೆ. ಹೆಣ್ಣು ಮಗುವಿನ ಜನನ ಕಂಜರ್‌ವಾಡಿಯ ಜನರಿಗೆ ಸಂಭ್ರಮ ತರುತ್ತದೆ. ಯಾಕೆಂದರೆ ಅವರ ಬದುಕು ನಡೆಯುವುದೇ ಹೆಣ್ಣು ಮಗುವಿನ ಮೂಲಕ. ಆದರೆ ಹಕೀಮ್ ಸಾಹಿಬ್ ತನ್ನ ಎರಡನೆ ಪತ್ನಿಯ ಸಹಾಯದಿಂದ ಆ ಮಗುವನ್ನು ಕದ್ದು ಮನೆಗೆ ತರುತ್ತಾರೆ. ಮಗುವನ್ನು ಹುಡುಕಿ ಕಂಜರ್‌ನ ಗೂಂಡಾಗಳು ಬಂದಾಗ ಭವಿಷ್ಯವನ್ನು ನೆನೆದು ಹಕೀಂ ಸಾಹೇಬ್ ಮಗುವನ್ನೇ ಕೊಲ್ಲಲು ಮುಂದಾಗುತ್ತಾರೆ. ಝೈನಬ್ ಅದಕ್ಕೆ ಆಸ್ಪದ ನೀಡುವುದಿಲ್ಲ. ಈ ಸಂಘರ್ಷದಲ್ಲಿ ಝೈನಬ ಕೈಯಲ್ಲಿ ತಂದೆಯ ಕೊಲೆ ನಡೆಯುತ್ತದೆ.

ಹಕೀಮ್ ಸಾಹಿಬ್ ಪಾತ್ರದಲ್ಲಿ ಮಂಝರ್ ಸೆಹ್‌ಬಾಯಿ ಅದ್ಭುತವಾಗಿ ನಟಿಸಿದ್ದಾರೆ. ಅವರ ಒಳ ಸಂಘರ್ಷಗಳನ್ನು ಚಿತ್ರ ಅದ್ಭುತವಾಗಿ ಕಟ್ಟಿಕೊಡುತ್ತದೆ. ಹಕೀಮ್ ಸಾಹೇಬ್ ಪಾತ್ರವನ್ನು ಎಲ್ಲೂ ಕಪ್ಪು ಬಿಳುಪಾಗಿ ಕಟ್ಟಿ ಕೊಟ್ಟಿಲ್ಲ. ಅವರೊಳಗಿನ ಕ್ರೌರ್ಯ ವಿಜ್ರಂಬಿಸುವ ಕ್ಲೈಮಾಕ್ಸ್ ಸಂದರ್ಭದಲ್ಲೂ ಅವರ ಪರವಾದ ಸಣ್ಣದೊಂದು ಅನುಕಂಪ ನಮ್ಮಿಂದ ವ್ಯಕ್ತವಾಗಿ ಬಿಡುತ್ತದೆ. ಆದರೆ ಝೈನಬ್ ಪಾತ್ರ ಒಂದಿಷ್ಟು ಕೃತಕವಾಗಿದೆ. ಅವಳ ಮೂಲಕ ಕೆಲವು ಸಂದೇಶಗಳನ್ನು ಪಾಕಿಸ್ತಾನಕ್ಕೆ ನೀಡುವುದು ನಿರ್ದೇಶಕರ ಉದ್ದೇಶವಾಗಿರುವುದೂ ಇದಕ್ಕೆ ಕಾರಣವಾಗಿರಬಹುದು. ಅದು ಚಿತ್ರದ ಸಹಜ ನಡೆಗೆ ಒಂದಿಷ್ಟು ಅಡ್ಡಿ ಉಂಟು ಮಾಡುತ್ತದೆ. ಹೆಣ್ಣೂ ಅಲ್ಲದ, ಗಂಡೂ ಅಲ್ಲದ ಮುಗ್ಧ ಸೈಫುಲ್ಲಾ ಪಾತ್ರದಲ್ಲಿ ಅಮೃ ಹೃದಯಸ್ಪರ್ಶಿಯಾಗಿ ನಟಿಸಿದ್ದಾರೆ. ವಿದ್ಯಾವಂತ ತರುಣ ಮುಸ್ತಫಾ ಪಾತ್ರಕ್ಕೆ ಆತಿಫ್ ಇಸ್ಲಾಮ್ ಜೀವ ತುಂಬಿದ್ದಾರೆ. ಆದರೆ ಆಯೆಶಾ(ಮಹಿರಾ ಖಾನ್) ಸೆಲೆಬ್ರಿಟಿಯಲ್ಲಿ ಭಾಗವಹಿಸುವುದು, ಮುಸ್ತಫಾ ಜೊತೆ ಸೆಲೆಬ್ರಿಟಿಯಲ್ಲಿ ಹಾಡುವುದು, ಗಿಟಾರ್ ನುಡಿಸುವುದು ತೀರಾ ಅಸಹಜವಾಗಿದೆ. ಚಿತ್ರದ ಓಟಕ್ಕೂ, ಸಂದೇಶಕ್ಕೂ ಅದು ಧಕ್ಕೆ ತಂದಿದೆ. ಚಿತ್ರದ ಕೊನೆಯಲ್ಲಿ ಝೈನಬಳಿಗೆ ಮರಣದಂಡನೆಯಾಗುತ್ತದೆ. ಬಳಿಕ ಇಡೀ ಕುಟುಂಬವನ್ನು ಹೆಣ್ಣು ಮಕ್ಕಳೇ ಮುನ್ನಡೆಸುವುದು, ಗೌರವದ ಜೀವನ ನಡೆಸುವುದು, ತಾವು ನಡೆಸುವ ಪುಟ್ಟ ಕ್ಯಾಂಟೀನಿಗೆ ಝೈನಬಳ ಹೆಸರಿಟ್ಟು ಅದನ್ನು ಬೆಳೆಸುವುದು...ಹೀಗೆ ದುರಂತದ ನಡುವೆಯೇ ಆಶಾವಾದದೊಂದಿಗೆ ಚಿತ್ರ ಮುಗಿಯುತ್ತದೆ.

ಪಾಕಿಸ್ತಾನ ಸದ್ಯದ ಸಂದರ್ಭದಲ್ಲಿ ಎದುರಿಸುತ್ತಿರುವ ಸಂಘರ್ಷವನ್ನೇ ಹಕೀಂ ಸಾಹೇಬರ ಕುಟುಂಬದ ಮೂಲಕ ತೆರೆದಿಟ್ಟಿದ್ದಾರೆ ನಿರ್ದೇಶಕ ಶೊಹೈಬ್ ಮನ್ಸೂರ್. ಒಂದೆಡೆ ನಂಬಿಕೆ, ಇನ್ನೊಂದೆಡೆ ಬಡತನ, ಜೊತೆಗೆ ಬೀಸುತ್ತಿರುವ ಆಧುನಿಕ ಗಾಳಿ. ಪಾಕಿಸ್ತಾನದ ಸಾಮಾಜಿಕ ಬದುಕಿನಲ್ಲಿ ಇದರಿಂದ ಎದ್ದಿರುವ ತಳಮಳಗಳು, ವ್ಯವಸ್ಥೆಗೆ ಸವಾಲಾಗಿರುವ ಪ್ರಶ್ನೆಗಳು...ಎಲ್ಲವನ್ನೂ ಈ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಮನ್ಸೂರ್. ಸಣ್ಣ ಪುಟ್ಟ ದೋಷಗಳಿದ್ದರೂ, ಚಿತ್ರ ನಮ್ಮನ್ನು ಬಹುಕಾಲ ಕಾಡುತ್ತದೆ. ಇದೇ ‘ಬೋಲ್’ ಚಿತ್ರದ ಹೆಗ್ಗಳಿಕೆ. ಚಿತ್ರ ಮುಗಿಯುವುದು ಝೈನಬಳ ಪ್ರಶ್ನೆಗಳೊಂದಿಗೆ. ಆ ಪ್ರಶ್ನೆಗೆ ಉತ್ತರ ಕಂಡು ಕೊಳ್ಳಲು ಪಾಕಿಸ್ತಾನದ ಅಧ್ಯಕ್ಷರು ವಿಶೇಷ ಸಭೆ ಕರೆಯಲು ನಿರ್ಧರಿಸುವ ಸನ್ನಿವೇಶ ನಿರ್ದೇಶಕರ ಬುದ್ಧಿವಂತಿಕೆಗೆ ಹಿಡಿದ ಕನ್ನಡಿಯಾಗಿದೆ.

3 comments:

  1. ಒಂದು ಪ್ರತೇಕ ಜಗತ್ತನ್ನು ನೋಡಿದ ಅನುಭವವಾಯಿತು ಬಷೀರ್. ಬದುಕು ಕಣ್ಣೀರಿನ ಸ್ಪರ್ಶಕೆ ಮನ್ನಣೆ ನೀಡುತ್ತಿಲ್ಲ ಆನ್ನೋದು ಈ ನಿಮ್ಮ ವಿವರಣೆ ಓದಿದಾಗ ಅವುಚಿಕೊಳ್ಳುವಂತಾಯಿತು.ಬರಹಕ್ಕಿಂತ ಆ ಮನುಷ್ಯರ ವ್ಯವಸ್ಥೆಗಳು ಪುನಃ ಪುನಃ ಆಲೋಚಿಸುವಂತೆ ಮಾಡುತ್ತಿದೆ.

    ReplyDelete
  2. namaste, nimma oppige ideyendu bhavisi e lekhanavannu saangatya.wordpress.com nalli prakatisutteve. dayavittu nimma email id kalisiri saangatya@gmail.com
    preetiyinda
    saangatya balaga

    ReplyDelete
  3. ಸಾಂಗತ್ಯ ಅವರೇ ಖಂಡಿತ ಬಳಸಿಕೊಳ್ಳಿ. ನನ್ನ ಇ ಮೇಲ್ bmbasheer12 @ gmail .com , ಯಾವುದನ್ನೇ ಪ್ರಕಟಿಸಲು ನನ್ನ ಅನುಮತಿ ಬೇಕಾಗಿಲ್ಲ. ಆದರೆ, ಆ ಲೇಖನದ ಕೆಳಗಡೆ, ನನ್ನ ಹೆಸರನ್ನೋ, ಬ್ಲಾಗಿನ ಹೆಸರನ್ನೋ ಬಳಸಿ. ನನಗೂ ಪ್ರಕಟಿಸಿದ ವಿಷಯ ತಿಳಿಸಿದರೆ ನಾನೂ ನೋಡಿದಂತಾಗುತ್ತದೆ.

    ReplyDelete