Tuesday, September 13, 2011
ಗಾಯ ಮತ್ತು ಇತರ ಕತೆಗಳು
ಧ್ಯಾನ
ಶಿಷ್ಯ ಕಣ್ಣು ಮುಚ್ಚಿ ಧ್ಯಾನಸ್ಥನಾಗಿದ್ದ.
ಸಂತ ಹೇಳಿದ. ‘‘ಮೂರ್ಖ...ಯಾಕೆ ಹೇಡಿಯಂತೆ ಕಣ್ಣು ಮುಚ್ಚಿದ್ದೀಯ? ಕತ್ತಲಲ್ಲಿ ಏನನ್ನು ಹುಡುಕುತ್ತಿದ್ದೀಯ? ತೆರೆ ಕಣ್ಣನ್ನು, ನೋಡು ಜಗವನ್ನು. ಬೆಳಕಲ್ಲಿ ಹುಡುಕು’’
ಕೇಳುವುದು!
ಆತ ಹೆಣ್ಣು ನೋಡುವುದಕ್ಕೆ ಹೋಗಿದ್ದ.
ಹೆಣ್ಣನ್ನು ನೋಡಿದವನೇ ಕೇಳಿದ ‘‘ನಿಮಗೆ ಹಾಡುವುದಕ್ಕೆ ಬರುತ್ತದೆಯೆ?’’
ಹೆಣ್ಣು ತಕ್ಷಣ ಮರು ಪ್ರಶ್ನಿಸಿದಳು
‘‘ನಿಮಗೆ ಕೇಳುವುದಕ್ಕೆ ಬರುತ್ತದೆಯೆ?’’
ಮರ
ಒಂದು ಬೀಜ ಯಾರದೋ ಕೈಯಿಂದ ತಪ್ಪಿ ಉದುರಿ ಒದ್ದೆ ಮಣ್ಣಿನ ಮೇಲೆ ಬಿತ್ತು.
ನಾಲ್ಕೇ ದಿನದಲ್ಲಿ ಅದು ಮೊಳಕೆ ಒಡೆಯಿತು.
ಕೆಲವು ಸಮಯ ಕಳೆದರೆ ಗಿಡವಾಗಿ, ಮರವಾಯಿತು.
ಹೂ ಬಿಟ್ಟಿತು...ಹಣ್ಣಾಯಿತು....
ಒಬ್ಬಾತ ಬಂದವನೇ ಘೋಷಿಸಿದ ‘‘ಇದು ನನ್ನ ಮರ’’
ಅಮ್ಮ!
ಒಂದು ಕಡೆ ಕೋಮುಗಲಭೆ ನಡೆಯುತ್ತಿತ್ತು.
ಪುಟಾಣಿಯೊಬ್ಬ ಆ ಗಲಭೆಯಲ್ಲಿ ಸಿಲುಕಿಕೊಂಡ.
ಗುಂಪೊಂದು ಮಗುವನ್ನು ತಡೆದು ಕೇಳಿತು ‘‘ನಿನ್ನದು ಯಾವ ಧರ್ಮ?’’
ಮಗು ಹೇಳಿತು ‘‘ನನಗೆ ನನ್ನ ಅಮ್ಮ ಬೇಕು...’’
‘‘ಹೋಗಲಿ...ನಿನ್ನ ಅಮ್ಮನ ಧರ್ಮವೇನು?’’ ಗುಂಪು ಕೇಳಿತು.
‘‘ಅಮ್ಮ...’’ ಮಗು ಅಳುತ್ತಾ ಉತ್ತರಿಸಿತು.
ಹಿಮಕರಡಿಗಳು
ಒಬ್ಬ ಶಿಷ್ಯ ಬಂದು ಸಂತನಲ್ಲಿ ಹೇಳಿದ ‘‘ಗುರುಗಳೇ...ನಾನು ಹೆಚ್ಚಿನ ಜ್ಞಾನ ಮತ್ತು ತಪಸ್ಸಿಗಾಗಿ ಹಿಮಾಲಯಕ್ಕೆ ಹೋಗಬೇಕೆಂದಿದ್ದೇನೆ...ಅಪ್ಪಣೆಕೊಡಿ...’’
‘‘ಜನವೇ ಇಲ್ಲದಲ್ಲಿ ಜ್ಞಾನಾರ್ಜನೆ ಹೇಗಾಗುತ್ತದೆ ಶಿಷ್ಯ?’’
ಶಿಷ್ಯ ಹೇಳಿದ ‘‘ಹಿಮಾಲಯದಂತಹ ಪುಣ್ಯ ಸ್ಥಳದಲ್ಲಿ ತಪಸ್ಸು ಮಾಡಿದರೆ ಬೇಗ ಜ್ಞಾನೋದಯವಾಗಬಹುದಲ್ಲವೆ?’’
ಸಂತ ಗೊಣಗಿದ ‘‘ಹಿಮಕರಡಿಗಳು ಶತಶತಮಾನಗಳಿಂದ ಹಿಮಾಲಯದಲ್ಲೇ ಬದುಕುತ್ತಿವೆ. ಒಂದೇ ಒಂದು ಹಿಮಕರಡಿಗೂ ಜ್ಞಾನೋದಯವಾದ ಸುದ್ದಿ ನನಗೆ ಈವರೆಗೆ ತಿಳಿದು ಬಂದಿಲ್ಲ’’
ಪ್ರಪಂಚ
ಬೇರೆ ಬೇರೆ ಆಶ್ರಮಗಳಲ್ಲಿ ಕಲಿತ ಶಿಷ್ಯರು ಒಟ್ಟು ಸೇರಿದ್ದರು
ಅವರೆಲ್ಲ ಬೇರೆ ಬೇರೆ ಪಂಥಗಳಿಗೆ ಸೇರಿದವರು.
ಒಬ್ಬ ಹೆಮ್ಮೆಯಿಂದ ಹೇಳಿದ ‘‘ನನ್ನ ಗುರುಗಳು ನನಗಾಗಿ ತಾವು ಬರೆದ ಅಪರೂಪದ ಬೃಹತ್ ಗ್ರಂಥವನ್ನೇ ಬಿಟ್ಟು ಹೋಗಿದ್ದಾರೆ’’
ಇನ್ನೊಬ್ಬ ಹೇಳಿದ ‘‘ನನಗಾಗಿ ನನ್ನ ಗುರುಗಳು ಇಡೀ ವಿದ್ಯಾಸಂಸ್ಥೆಯನ್ನೇ ಬಿಟ್ಟು ಹೋಗಿದ್ದಾರೆ.
ಮಗದೊಬ್ಬ ಹೇಳಿದ ‘‘ನನಗಾಗಿ ನನ್ನ ಗುರುಗಳು ಹೊಸ ಸಿದ್ಧಾಂತವೊಂದನ್ನು ಬಿಟ್ಟು ಹೋಗಿದ್ದಾರೆ.’’
ಒಬ್ಬ ಶಿಷ್ಯ ಸುಮ್ಮಗೆ ಕೂತಿದ್ದ. ಉಳಿದವರೆಲ್ಲ ಕೇಳಿದರು ‘‘ನಿನಗಾಗಿ ನಿನ್ನ ಗುರುಗಳು ಏನು ಬಿಟ್ಟು ಹೋಗಿದ್ದಾರೆ?’’
ಆತ ಉತ್ತರಿಸಿದ ‘‘ನನಗಾಗಿ ಅವರು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ’’
ಆಸೆ
ಸಂತ ಮರಣಶಯ್ಯೆಯಲ್ಲಿದ್ದ.
ಶಿಷ್ಯರೆಲ್ಲ ಅವನ ಸುತ್ತುಗೂಡಿದ್ದರು.
ಒಬ್ಬ ಶಿಷ್ಯ ಕೇಳಿದ ‘‘ಗುರುಗಳೇ ನಿಮ್ಮದೇನಾದರೂ ಅಂತಿಮ ಆಸೆಯಿದೆಯೆ?’’
ಸಂತ ‘‘ಹೂಂ’’ ಎಂದ.
ಎಲ್ಲ ಶಿಷ್ಯರು ಮುತ್ತಿಕೊಂಡು ‘‘ಹೇಳಿ ಗುರುಗಳೇ’’ ಎಂದರು.
‘‘ಸಾಯುವ ಮೊದಲು ನಾನು ಯಾವುದಕ್ಕಾಗಿಯಾದರೂ ಆಸೆ ಪಡಬೇಕು. ಹೇಳಿ, ಅಂತಹ ವಸ್ತುವೇನಾದರೂ ಈ ಜಗತ್ತಿನಲ್ಲಿದೆಯೆ?’’
ಗಾಯ
ವೈದ್ಯರು ಕೇಳಿದರು ‘‘ಯಾವುದೇ ಇರಿತದ ಗಾಯ ಕಾಣ್ತಾ ಇಲ್ವಲ್ಲ?’’
‘‘ಇಲ್ಲ ಸಾರ್ ತುಂಬಾ ನೋವಾಗುತ್ತಿದೆ...ಡಾಕ್ಟರ್...ಏನಾದ್ರು ಮಾಡಿ...’’
‘‘ಗಾಯ ಆದದ್ದು ಹೇಗೆ’’
‘‘ಗೆಳೆಯನೊಬ್ಬ ಇರಿದ ಡಾಕ್ಟರ್’’
‘‘ಹೌದಾ? ಯಾವುದರಿಂದ?’’
‘‘ಮಾತಿನಿಂದ....’’
ಚಿಟ್ಟೆ
ಅದೊಂದು ಪರೀಕ್ಷೆ ಹಾಲ್.
ಎಲ್ಲರೂ ಬೆವರುತ್ತಾ, ಬೆದರುತ್ತಾ ಗಂಭೀರವಾಗಿ ಪರೀಕ್ಷೆ ಬರೆಯುತ್ತಿದ್ದರು.
ಅಷ್ಟರಲ್ಲಿ ಅಲ್ಲಿಗೆ ಹಾರುತ್ತಾ ಒಂದು ಬಣ್ಣದ ಚಿಟ್ಟೆ ಬಂತು.
‘‘ಚಿಟ್ಟೆ’’ ಯಾರೋ ಪಿಸುಗುಟ್ಟಿದರು.
ಎಲ್ಲರ ದೃಷ್ಟಿ ಚಿಟ್ಟೆಯಕಡೆಗೆ.
ಒಮ್ಮೆಲೆ ಕಲರವ
ಸೆಕ್ಷನ್ ಉಲ್ಲಂಘಿಸಿ ಆ ಪರೀಕ್ಷೆ ಹಾಲಿಗೆ ಬಂದು ಎಲ್ಲರ ಪರೀಕ್ಷೆಯ ಭಯವನ್ನು ತನ್ನ ರೆಕ್ಕೆಯೊಳಗೆ ಕಟ್ಟಿಕೊಂಡು ಚಿಟ್ಟೆ ನಿಧಾನಕ್ಕೆ ಹಾರಿ ಹೋಯಿತು.
ಈಗ ಎಲ್ಲರೂ ನಗು ನಗುತ್ತಾ ಪರೀಕ್ಷೆ ಬರೆಯತೊಡಗಿದರು.
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.
Subscribe to:
Post Comments (Atom)
ಬಷೀರ್..ನನಗೆ ನನ್ನ ಐದು ವರ್ಷದ ಪ್ರಾಯದಲ್ಲಿ ಆದ ಗಾಯ ಅದು. ಇನ್ನೂ ವಾಸಿಯಾಗಲೇ ಇಲ್ಲ. ಅದಕ್ಕೆ ಯಾವ ವೈದ್ಯರೂ, ಯಾವ ಮದ್ದು ಇನ್ನೂ ಸಿಗಲಿಲ್ಲ. ಅದು " ಕಳ್ಳ.... ನೀನು ನಮ್ಮ ಅನ್ನ ಕದ್ದ ಕಳ್ಳ" ಅಂತ... ನನಗೆ ಹಸಿವಾದಾಗಲೆಲ್ಲಾ ಈ ಗಾಯ ತುಂಬಾ ನೋವಾಗುತ್ತದೆ....! ವಾಸಿಯಾಗುವುದಿಲ್ಲ ಅಲ್ವಾ?
ReplyDeleteಬಶೀರ್ ಕೆಲವಂತೂ ತುಂಬಾ ಮಾರ್ಮಿಕವಾಗಿದೆ. ನಿಮ್ಮ ಶೈಲಿ ತುಂಬಾ ಉತ್ತಮವಾದದ್ದು ಅನ್ನಿಸುತ್ತಿದೆ. ಅಮ್ಮ ಮತ್ತೆ ಮರ ಎನ್ನುವ ಶೀರ್ಷಿಕೆಗಳ ಬರಹ ಅಂತೂ ಎಲ್ಲಾ ಸೌಂದರ್ಯಗಳನ್ನು ಪಡೆದ ಬರಹ ..
ReplyDelete