ಹಳೆಯ ಧೂಳುಮುಚ್ಚಿದ ಫೈಲನ್ನು ಕೊಡವಿ ಬಿಡಿಸಿದಾಗ ನನ್ನ ಈ ಕತೆ ಸಿಕ್ಕಿತು.
ನಮ್ಮೂರಿನ ಸಹಕಾರಿ ಸಂಘ ‘ಬ್ಯಾಂಕ್’ ಆಗಿ ಪರಿವರ್ತನೆಗೊಂಡ ಬಳಿಕವೂ ಬಾಳೆಗೊನೆ ವ್ಯಾಪಾರಿ ಅಂದು ಬ್ಯಾರಿ, ಅಡಿಕೆತೋಟದ ಅಂತಪ್ಪ ಶೆಟ್ರು, ಗ್ರಾಮ ಪಂಚಾಯತ್ ಸದಸ್ಯೆ ಬೊಮ್ಮಿಯಂತವರ ಬಾಯಲ್ಲಿ ಊರ ಸೊಸೈಟಿಯಾಗಿಯೇ ಉಳಿದಿತ್ತು. ಈ ಸೊಸೈಟಿಯ ಪಿಗ್ಮಿ ಕಲೆಕ್ಷನ್ನಲ್ಲಿಯೇ ಸುಮಾರು 5 ವರ್ಷ ಬದುಕು ಸವೆಸಿದವನು ನಾನು. ನನಗಿನ್ನೂ ಸ್ಪಷ್ಟವಿದೆ, ಈ 5 ವರ್ಷದಲ್ಲಿ ಒಂದೇ ಒಂದು ಜೋಡು ಚಪ್ಪಲಿಯಿಂದ ನನ್ನ ಬದುಕಿನ ಬಂಡಿಯನ್ನು ಎಳೆದೆ. ಹರಿದು ಚಿಂದಿಯಾಗುವವರೆಗೂ. ಅಲ್ಲಿಂದಈ ಸೊಸೈಟಿಯಲ್ಲಿ ಅಕೌಂಟ್ ನೋಡಲು ಶುರು ಮಾಡಿದೆ.
ನಾನು ಈ ಕುರ್ಚಿಯಲ್ಲಿ ಕುಳಿತು ಸಂಗ್ರಹಿಸಿದ ಠೇವಣಿ, ಎಣಿಸಿದ ದುಡ್ಡು, ಕೊಟ್ಟ ಸಾಲ, ಅವುಗಳಿಗೆ ಎಣಿಸಿದ ಬಡ್ಡಿ ಇವೆಲ್ಲವು ನನ್ನಪಾಲಿನ ಹೆಮ್ಮೆಯ ಸಂಗತಿಗಳಾಗಿದ್ದವು. ಕೆಳಜಾತಿ ಮತ್ತು ಬಡತನದ ಅವಮಾನಗಳನ್ನು ಉಂಡೇ ಬೆಳೆದಿದ್ದ ನನಗೆ ಮೈಯೆಲ್ಲಹಿಡಿಯಾಗಿ, ಕಣ್ಣಲ್ಲಿ ವಿಧೇಯತೆಯನ್ನು ತುಂಬಿಸಿ ಸಾಲಕ್ಕಾಗಿ ನನ್ನ ಮುಂದೆ ನಿಲ್ಲುವ ಸಣ್ಣ ಪುಟ್ಟ ರೈತರನ್ನು ನೋಡುವುದೇ ಬದುಕಿನಸೌಭಾಗ್ಯವಾಗಿತ್ತು.
ಹೀಗೆ ನನ್ನ ಸೌಭಾಗ್ಯದ ಉನ್ನತ ದಿನಗಳಾಗಿತ್ತು ಅದು. ಒಂದು ಮದ್ಯಾಹ್ನದ ಹೊತ್ತು.ಹೊರಗೆ ರಣ ಬಿಸಿಲು.ಬ್ಯಾಂಕ್ನ ಒಳಗೆಬಿಸಿಲಿನ ಧಗೆಯೊಂದಿಗೆ ಹತ್ತು ಹಲವು ಬಗೆಯ ಜನರ ನಿಟ್ಟುಸಿರುಗಳು ಸೇರಿ ಕಚೇರಿಗೆ ಕಚೇರಿಯೇ ಏದುಸಿರು ಬಿಡುತ್ತಿತ್ತು.ಕೊಳೆತಹೆಂಡದಂತಹ ಹಳ್ಳಿಗರ ಬೆವರಿನ ವಾಸನೆಯನ್ನು ಈ ಮಟ ಮಟ ಮಧ್ಯಾಹ್ನ ಹೀರುವುದೆಂದರೆ ಸಾಮಾನ್ಯ ವಿಷಯವಲ್ಲ. ಬ್ಯಾಂಕಿನಮೆನೇಜರರ ಕ್ಯಾಬಿನಿನಲ್ಲಿ ಮಾತ್ರ ಫ್ಯಾನು ತಿರುಗುತ್ತದೆ. ನಾನು ಸಣ್ಣದೊಂದು ರಟ್ಟಿನಿಂದ ಕೈ ಬೀಸಣಿಕೆಯೊಂದನ್ನು ಮಾಡಿ ಆಗಾಗಬೀಸಿಕೊಳ್ಳುತ್ತಿದ್ದೆ. ನನ್ನ ಇಬ್ಬರು ಸಹೋದ್ಯೋಗಿಗಳು ಆಗಲೇ ಊಟದ ನೆಪದಲ್ಲಿ ಕಚೇರಿಯಿಂದ ತೊಲಗಿದ್ದರು. ಇನ್ನೂ ಸ್ಪಷ್ಟವಿದೆನನಗೆ, ಅಂತಹ ಹೊತ್ತಿನಲ್ಲೇ ಆತನ ಪ್ರವೇಶವಾದುದು.
ಇಲ್ಲಿಗೆ ಬರುವ ಹೆಚ್ಚಿನವರದು ನನಗೆ ಪರಿಚಿತ ಮುಖ. ಕಡು ನೀಲಿ ಗೀಟು ಗೀಟಿನ ಲುಂಗಿ ಉಟ್ಟು, ಸಾವಿರ ಕಲೆಗಳನ್ನು ಹೊತ್ತುಮಸುಕಾಗಿರುವ ಅಂಗಿ ಧರಿಸಿ, ತಮ್ಮ ಬೈರಾಸನ್ನು ಕೈಯಲ್ಲಿ ಮುದ್ದೆ ಮಾಡಿ, ಒಳಗೆ ಕಾಲಿಡುವಾಗಲೇ ತಮ್ಮ ದೇಹವನ್ನುಆಮೆಯಂತೆ ಒಳಗೆ ಜಗ್ಗಿ ಬರುವವರನ್ನು ಸಾಲಗಾರರೆಂದು ನಾನು ಪಕ್ಕನೆ ಗುರುತಿಸಿ ಬಿಡುವಷ್ಟು ಪಳಗಿದ್ದೇನೆ. ಮನೆ ಜಪ್ತಿನೋಟೀಸು ದೊರಕಿದ ಬಳಿಕವಷ್ಟೇ ಅವರು ಹೀಗೆ ಮೆಲ್ಲ ಬ್ಯಾಂಕಿನ ಬಾಗಿಲು ತುಳಿಯುತ್ತಾರೆ.
ಇಂಥವರೆಲ್ಲಾ ಬರುವಾಗ ಮೆನೇಜರರು ಬೇಕೆಂದೇ ಮುಖ ಗಂಟಿಕ್ಕಿಕೊಳ್ಳುತ್ತಾರೆ. ‘ಸಸಾರ ಸಿಕ್ಕಿದರೆ ಇಡೀ ಬ್ಯಾಂಕನ್ನೇ ಮುಳುಗಿಸಿಓಡಿ ಹೋಗಲು ಇವರು ರೆಡಿ’ ಎಂದು ಅವರು ಆಗಾಗ ನನಗೆ ಎಚ್ಚರಿಸುತ್ತಾರೆ.
ಇಂತವರಲ್ಲಿ ಬಹುಸಂಖ್ಯೆಯಲ್ಲಿ ಸ್ಥಳೀಯ ಸಂತೆಯಲ್ಲಿ ಬಾಳೆಕಾಯಿ, ಮೀನು ವ್ಯಾಪಾರ ಮಾಡುವ ಬ್ಯಾರಿಗಳೇ ಜಾಸ್ತಿ ಎನ್ನುವುದುಮೆನೇಜರರ ಅಭಿಮತ. ವ್ಯಾಪಾರಕ್ಕೆಂದು ಸಾಲ ಕೇಳಲು ಬರುವ ಇವರು ಹಣ ಸಿಕ್ಕಿದರೆ, ಮತ್ತೆ ಬರುವುದು ಜಪ್ತಿ ನೋಟೀಸ್ ಸಿಕ್ಕಿದಬಳಿಕವೇ. ಹಾಗೆಂದು ಇವರು ಮೋಸಗಾರರು ಎನ್ನಲು ಬರುವುದಿಲ್ಲ. ಮರ್ಯಾದೆಗೆ ತುಂಬಾ ಅಂಜುತ್ತಾರೆ. ವ್ಯಾಪಾರದ ಜೂಜಿನಲ್ಲಿಸೋತು ಬಸವಳಿದವರು ಅವರು. ಜಪ್ತಿ ಮಾಡಬಾರದೆಂದು ವಿನೀತರಾಗಿ ಮೆನೇಜರರಿಗೆ ಸುತ್ತು ಬರುತ್ತಾರೆ. ಕೊನೆಗೆ ಅವರಲ್ಲಿದಮ್ಮಯ್ಯ ಗುಡ್ಡೆ ಹಾಕಿ ಇನ್ನೊಂದು ಸಾಲಕ್ಕೆ ಅರ್ಜಿ ಗುಜರಾಯಿಸಿ, ಹಳೆ ಸಾಲದಿಂದ ಮುಕ್ತರಾಗುತ್ತಾರೆ.
ಅಂದು, ಒಳಗೆ ಕಾಲಿಡಬೇಕಾದ ಆತ ಬಾಗಿಲಲ್ಲಿ ಒಳಗೆ ಬರಬೇಕೋ, ಬೇಡವೋ ಎಂಬಂತೆ ನಿಂತಿದ್ದ. ಬಾಗಿಲ ಚೌಕಟ್ಟಿನೊಳಗೆಒಂದು ಪೋಟೋದಂತೆ ಅವನು ಕಾಣಿಸಿಕೊಂಡಿದ್ದ. ದೂಳಿನಿಂದ ಮುಚ್ಚಿ ಹೋದ, ಕಾಲದ ಏಟಿಗೆ ಸಿಕ್ಕು ಮಸುಕಾಗಿದ್ದ ಫೈಲಿನಿಂದಎದ್ದು ಬಂದವನಂತಿದ್ದ.
ನಂತರ ಅಂಜುತ್ತಾ ಒಳಗೆ ಕಾಲಿಟ್ಟ. ನಾನು ನನ್ನ ಒಂದು ಕಣ್ಣನ್ನು ಅವನ ಹಿಂದಯೇ ಛೂ ಬಿಟ್ಟಿದ್ದೆ. ಸೀದಾ ಮೆನೇಜರ್ ಕ್ಯಾಬಿನ್ ಕಡೆನಡೆದವನನ್ನು ಯಾರೋ ತಡೆದರು. ಅವನು ಅವರೊಡನೆ ಏನೋ ವಿಚಾರಿಸಿದ. ಅವರು ನನ್ನೆಡೆಗೆ ಕೈ ತೋರಿಸಿದರು.
ಸೀದಾ ನಾನಿದ್ದಲ್ಲಿಗೆ ಬಂದ. ಕುರುಚಲ ಗಡ್ಡ. ವೀಳ್ಯದೆಲೆ ಜಗಿದು ಕೆಂಪಾಗಿದ್ದ ಹಲ್ಲು. ತಲೆಗೆ ಟುವ್ವಾಲನ್ನು ಬಿಗಿದುಕೊಂಡಿದ್ದ. ವಯಸ್ಸುಮೂವತ್ತೈದಿದ್ದರೂ, ಅಕಾಲದಲ್ಲಿ ಬಂದೆರಗಿದ ವೃದ್ಧಾಪ್ಯ.
ನಾನು ತಲೆ ಬಗ್ಗಿಸಿ ಬರೆಯುತ್ತಿದ್ದೆ.
‘ಧನಿ....’ ಎಂದು ಕರೆದ. ನನಗೆ ಕೇಳಿಸಿರಲಿಲ್ಲ. ಯಾಕೆಂದರೆ ನಾನು ಬರೆಯುವುದರಲ್ಲೇ ಮಗ್ನನಾಗಿದ್ದೆ. ಇನ್ನೊಮ್ಮೆ ’ಧನಿ...’ ಎಂದುಕರೆದ. ತಲೆ ಎತ್ತಿದೆ. ಅಕಾರಣ ಸಿಟ್ಟೊಂದನ್ನು ಕಣ್ಣಲ್ಲಿ ಕುಣಿಸುತ್ತಾ ಅವನತ್ತ ಪ್ರಶ್ನಾರ್ಥಕವಾಗಿ ನೋಡಿದೆ.
ಉತ್ತರವಾಗಿ ಅವನು ಹಲ್ಲು ಕಿರಿದ. ನಾನು ಮತ್ತೆ ತಲೆ ತಗ್ಗಿಸಿ ಬರೆಯಬೇಕು, ಅಷ್ಟರಲ್ಲಿ ಅವರು ಬಾಯಿ ತೆರೆದ.‘ಧನಿ, ಅಡವಿಟ್ಟಚಿನ್ನವನ್ನು ಬಿಡಿಸಿಕೊಂಡು ಹೋಗಲು ಬಂದಿದ್ದೇನೆ....’
ಹಾಗೆಂದು ಹೇಳಿದವನತ್ತ ಥಕ್ಕನೆ ನೋಡಿದೆ. ಆಗ ನಾನೆಲ್ಲಿ ತಪ್ಪಿದೆ ಎನ್ನುವುದು ನನ್ನರಿವಿಗೆ ಬಂತು. ಅವನ ದೇಹದ ವಿನ್ಯಾಸಗಳನ್ನುಕೂಡಿಸಿ, ಕಳೆದು ಅವನ ಕುರಿತು ನಾನು ಪಡೆದುಕೊಂಡು ಉತ್ತರ ತಪ್ಪಾಗಿತ್ತು. ಯಾಕೆಂದರೆ ಅವನ ಕಣ್ಣುಗಳನ್ನೊಮ್ಮೆ ದಿಟ್ಟಿಸಿನೋಡಲು ನಾನು ಮರೆತು ಹೋಗಿದ್ದೆ. ಧಗಿಸುವ ಬೇಸಿಗೆಯ ಬಾವಿಯ ಆಳದಲ್ಲಿ ಹೊಳೆಯುವ ನೀರಿನಂತೆ ಅವನ ಕಣ್ಣುಕುಣಿಯುತ್ತಿತ್ತು. ಕಿಟಕಿಯಿಂದ ತೂರಿ ಬಂದ ಬೆಳಕು ಅಲ್ಲಿ ಚಿನ್ನದಂತೆ ಮಿನುಗುತ್ತಿತ್ತು.
ಈ ಕುರ್ಚಿಯಲ್ಲಿ ಕೂತು ನಾನು ಅನುಭವಿಸಿದ ಮೊದಲ ಸೋಲು ಅದಾಗಿತ್ತು. ಒಪ್ಪಿಕ್ಕೊಳ್ಳಲಾಗದ ಮನಸ್ಸಿನಿಂದ ಒಪ್ಪಿಕ್ಕೊಳ್ಳುತ್ತಾಯಾವ ಚಿನ್ನ?’ ಎನ್ನುತ್ತಾ ಆತನ ಮೇಲೆ ಎಗರಿಬಿದ್ದೆ.
‘ನನ್ನ ಅಮ್ಮನ ಚಿನ್ನ ಧನಿ, ನನ್ನ ಅಮ್ಮನ ಕಿವಿಯ ಚಿನ್ನ.....’ ಆತ ಅದನ್ನು ಎಷ್ಟು ಮೆದುವಾಗಿ ಉಚ್ಚರಿಸಿದ್ದ ಎಂದರೆ, ಮೆಲ್ಲಗೆ ಅವನಿಗೆಅವನೇ ಪಿಸುಗುಟ್ಟಿದಂತಿತ್ತು. ಆಮೇಲೆ ನಿಧಾನಕ್ಕೆ ತನ್ನ ಅಂಗಿಯ ಜೇಬಿನಿಂದ ಟುವ್ವಾಲಿನ ಕಟ್ಟನ್ನು ತೆಗೆದು ಬಿಚ್ಚಿದ. ಅರ್ಧಕ್ಕಧರ್ಜೀರ್ಣವಾಗಿ ಹೋಗಿದ್ದ ಚೀಟಿಯನ್ನು ನಡುಗುವ ಕೈಯಲ್ಲಿ ಬಿಡಿಸಿ, ನನ್ನತ್ತ ಚಾಚಿದ. ಅದು ಬ್ಯಾಂಕಿನಿಂದ ಕಳೆದ ವರ್ಷ ಕಳುಹಿಸಿದಎಚ್ಚರಿಕೆಯ ನೋಟೀಸು. ಸುಮಾರು 5 ವರ್ಷಕ್ಕೂ ಹಿಂದೆ ಅಡವಿಟ್ಟ ಚಿನ್ನ ಅದು. ಮುಸ್ಲಿಂ ಹೆಂಗಸರು ಕಿವಿಯ ಮೇಲ್ಬಾಗದಲ್ಲಿಧರಿಸುವ ಐದು ಜೊತೆ ಅಲಿಕತ್ತುಗಳು. ಸುಮಾರು 4 ಪವನಿನಷ್ಟಾಗುವ ಆ ಚಿನ್ನವನ್ನಿಟ್ಟು ಈತ 4 ಸಾವಿರ ರೂ.ವನ್ನು ಪಡೆದಿದ್ದ. ತಲೆಯೆತ್ತಿ ಅವನ ಮುಖವನ್ನು ದಿಟ್ಟಿಸಿದೆ. ಯಾಕೋ ನನಗಲ್ಲಿ ಆತನ ಒಂದು ಜೊತೆ ಕಣ್ಣು ಮಾತ್ರ ಕಾಣುತ್ತಿತ್ತು.
ಮತ್ತೆ ನೋಟೀಸಿನತ್ತ ಕಣ್ಣಾಯಿಸಿ ಲೆಕ್ಕ ಹಾಕತೊಡಗಿದೆ. ಆತ ಪಡೆದ ನಾಲ್ಕು ಸಾವಿರ ರೂ. ಹಣ ಬಡ್ಡಿಯನ್ನು ನುಂಗುತ್ತಾನುಂಗುತ್ತಾ ನನ್ನ ಮೆದುಳೊಳಗೆ ಬೆಳೆಯ ತೊಡಗಿತು. ಅದರ ಜೊತೆ ಜೊತೆಗೇ ಚಿನ್ನದ ಬೆಲೆಯನ್ನು ಇನ್ನೊಂದು ತಕ್ಕಡಿಯಲ್ಲಿಟ್ಟುತೂಗಿದೆ. ಯಾಕೋ ಮನಸು ದ್ರವವಾಯಿತು. ಆತ ಆ ಚಿನ್ನದ ದುಪ್ಪಟ್ಟು ಬೆಲೆಯನ್ನು ಕಟ್ಟಬೇಕಾಗಿತ್ತು. ಆತ ದುಪ್ಪಟ್ಟು ಹಣಕಟ್ಟಿಅದನ್ನು ಪಡೆದುಕೊಳ್ಳಬೇಕಾದರೂ ಯಾಕೆ?
ಬ್ಯಾಂಕ್ ಸಿಬ್ಬಂದಿ ಎಂಬ ಹೆಮ್ಮೆಯನ್ನು ಮೊದಲು ಬಾರಿ ಪಕ್ಕಕ್ಕಿಟ್ಟು ಮಾತನಾಡ ತೊಡಗಿದೆ ‘ನೋಡಯ್ಯ, ಈ ಚಿನ್ನವನ್ನು ಇನ್ನುಬಿಡಿಸಿ ಏನಾಗಬೇಕಾಗಿದೆ. ಇದಕ್ಕೆ ನೀನು ಕಟ್ಟುವ ಹಣದಿಂದ ಹೊರಗೆ 10 ಪವನ್ ಚಿನ್ನವನ್ನು ಕೊಳ್ಳಬಹುದು....’
ಇಂತಹ ಸಲಹೆಯನ್ನು ಬ್ಯಾಂಕಿನ ಗ್ರಾಹಕನೊಬ್ಬನಿಗೆ ನಾನು ನೀಡಿದ್ದು ಇದೇ ಬಾರಿ. ಆತನ ಕಣ್ಣು ಗಾಳಿಗೆ ಸಿಕ್ಕಿದ ಸೊಡರಿನಂತೆಒಮ್ಮೆ ಮಂಕಾಗಿ ಮತ್ತೆ ಬೆಳಗಿತು. ‘ಎಷ್ಟಾದರೂ ಆಗಲಿ ದನಿ, ನನಗೆ ಆ ಚಿನ್ನ ಬೇಕು...’ ನನ್ನ ಉದಾರತೆಯನ್ನು ಕಾಲಲ್ಲಿಒದ್ದನೇನೋ ಎನ್ನಿಸಿತು. ಸಿಟ್ಟು ಉಕ್ಕಿ ಬಂತು. ಇನ್ನೇನು ಅವನ ಮೇಲೆ ಎರಗಬೇಕು, ಒದ್ದೆಯಾದ ಧ್ವನಿಯೊಂದು ಅವನ ಕಣ್ಣಿಂದಒಸರಿ ಬಂತು. ‘ಅದು ನನ್ನ ಅಮ್ಮನ ಚಿನ್ನ ದನಿ, ನನ್ನ ಅಮ್ಮನ ಕಿವಿಯ ಚಿನ್ನ...’
ಕೈಯಲ್ಲಿ ಧರಿಸಿದ್ದ ಪೆನ್ನು ಯಾಕೋ ಒಮ್ಮೆಲೆ ಭಾರವೆನಿಸಿ ಕೆಳಗಿಟ್ಟೆ. ನನ್ನ ಅವನ ಮಧ್ಯೆ ಸೊಂಟದ ಮಟ್ಟದ ವರೆಗಿನ ಒಂದು ಕೃತಕಗೋಡೆ. ಅಂತರವನ್ನು ಇನ್ನಷ್ಟು ವಿಸ್ತರಿಸುವಂತೆ ನನ್ನ ಫೈಲುಗಳಿರುವ ಟೇಬಲ್.
ಸಾಲದ ಸಂಖ್ಯೆ ನೋಡಿದೆ. ಆತನ ಫೈಲು ಕಪಾಟುಗಳ ಆಳದ ಧೂಳಿನಲ್ಲಿ ಮುಚ್ಚಿ ಹೋಗಿರಬಹುದೇನೋ. ಅಟೆಂಡರ್ಗೋಪಾಲನನ್ನು ಕರೆದು, ಫೈಲು ಗುರುತು ಸಂಖ್ಯೆ, ಹೆಸರನ್ನು ತೋರಿಸಿದೆ. ಫೈಲಿರುವ ಕಪಾಟಿನ ಆಳವನ್ನು ನೆನೆದದ್ದೇ ಆತನಹಣೆಯಲ್ಲಿ ನೆರಿಗೆಗಳು ಸಮುದ್ರದ ಅಲೆಗಳಂತೆ ಏರಿಳಿಯಿತು. ನನ್ನೆದರು ನಿಂತವನನ್ನು ಕೆಕ್ಕರಿಸಿ ನೋಡಿದ.
‘ಇನ್ನರ್ಧ ಗಂಟೆಯಲ್ಲಿ ಈ ಫೈಲು ಬೇಕು’ ಎಂದೆ. ನನ್ನ ಮಾತಿನಲ್ಲಿ ಆತನ ಕರ್ತವ್ಯವನ್ನು ನೆನಪಿಸುವ ಅಧಿಕಾರವಿತ್ತು. ಗೋಪಾಲಮೆತ್ತಗಾಗಿ ಹಳೆ ಫೈಲುಗಳ ಕಪಾಟಿನತ್ತ ನಡೆದ.
ಮತ್ತೆ ಈತನೆಡೆಗೆ ತಿರುಗಿ ‘ಗುರುತು ಚೀಟಿ ತಂದಿದ್ದೀಯ’ ಎಂದೆ. ಆತ ಏನೇನೂ ಗೊತ್ತಾಗದೆ, ಹಲ್ಲು ಕಿರಿದ.
‘ಗುರುತು ಚೀಟಿ, ಗುರುತು ಚೀಟಿ....ತಂದಿದ್ದೀಯ. ಅಡವಿಟ್ಟ ಬಳಿಕ ಅದರ ಗುರುತು ಚೀಟಿಯನ್ನು ಕೊಡ್ತಾರೆ. ಬಿಡಿಸಿಕೊಂಡುಹೋಗುವಾಗ ಅದು ಬೇಕು.ಅದು ತಂದಿದ್ದೀಯ....’
ಅವನು ಅದೊಂದು ವಿಷಯವೇ ಅಲ್ಲವೆಂಬಂತೆ ‘ಆ ಚಿನ್ನವನ್ನು ಎಲ್ಲಿದ್ದರೂ ನಾನು ಗುರುತು ಹಿಡಿಯುತ್ತೇನೆ ದನಿ’ ಎಂದ. ಪ್ರತಿಉತ್ತರಿಸಲಾಗದೆ ನಾನು ವೌನವಾದೆ.
‘ಐದು ಜೊತೆ ಅಲಿಕತ್ತುಗಳು ದನಿ. ಐದು ಜೊತೆ .....ಪ್ರತಿ ಅಲಿಕತ್ತಿನಲ್ಲೂ ಐದೈದು ಜಾಲರಿಗಳು ದನಿ. ಒಂದೊಂದು ಜಾಲರಿಗಳಲ್ಲೂತೂಗುವ; ಹತ್ತಿರದಲ್ಲಿ ಕಣ್ಣಿಟ್ಟು ನೋಡಿದರಷ್ಟೇ ತಿಳಿಯುವ ಬಾತುಕೋಳಿಗಳು. ಅಮ್ಮನಿಗೆ ನನ್ನ ಅಜ್ಜಿ ತನ್ನ ಕಿವಿಯಿಂದಲೇ ತೆಗೆದುಹಾಕಿದ ಅಲಿಕತ್ತುಗಳಂತೆ ಅದು. ನನ್ನ ಅಪ್ಪ ಕೇಳಿದ್ದನ್ನೆಲ್ಲಾ ತೆಗೆದು ಕೊಟ್ಟ ಅಮ್ಮ ಬೋಳು ಬೋಳಾದಳು. ಕೊನೆಗೆ ಉಳಿದದ್ದು ಈಅಲಿಕತ್ತುಗಳು. ಅದನ್ನು ಮಾತ್ರ ತೆಗೆದು ಕೊಡಲು ಒಪ್ಪಲಿಲ್ಲವಂತೆ ಅವಳು. ಕೊನೆಗೆ ಅಪ್ಪ ರೋಗ ಹಿಡಿದು ಮಲಗಿದಾಗಲೂ ಕೂಡ; ಮದ್ದಿನ ಹಣಕ್ಕೂ ಈ ಅಲಿಕತ್ತನ್ನು ಬಿಚ್ಚಿಕೊಡಲಿಲ್ಲವಂತೆ ನನ್ನ ಅಮ್ಮ....’
‘
ಅವನು ತಾನು ಅಡವಿಟ್ಟ ಚಿನ್ನದ ಗುರುತನ್ನು ಹೇಳುತ್ತಿದ್ದ. ನಿಧಾನಕ್ಕೆ ನನ್ನೆದುರು ಒಂದು ಸಣ್ಣ ಗೋಡೆ ಇದೆ ಎನ್ನುವ ಸೂಚನೆಯೂಇಲ್ಲದಂತೆ ಅದನ್ನು ದಾಟಿ ಬಂದಿದ್ದ. ಬೆಳಕು ಸಾಲದೆಂದು ತಲೆ ಮೇಲೆ ಉರಿಯುತ್ತಿದ್ದ ಟ್ಯೂಬ್ ಲೈಟ್ನ ಬೆಳಕುಗಳೆಲ್ಲವನ್ನು ಮುಚ್ಚಿಹಾಕಿ, ತನಗೆ ತಾನೆ ಸಾರ್ವಭೌಮನಂತೆ ಅವನ ಕಣ್ಣೊಳಗಿನ ಚಿಮಿಣಿ ದೀಪ ನಿಧಾನಕ್ಕೆ ನನ್ನನ್ನು ಆವರಿಸುತ್ತಿತ್ತು.
‘ಅಲಿಕತ್ತುಗಳಿಲ್ಲದ ಅಮ್ಮನನ್ನು ನಾನು ನೋಡಿದ್ದೇ ಇಲ್ಲ ದನಿ’ ಹಳೆಯ ಮರದ ಛತ್ರಿಯನ್ನು ಬಿಡಿಸುವಂತೆ ಅವನು ತನ್ನನೆನಪುಗಳನ್ನು ನಿಧಾನಕ್ಕೆ ಬಿಡಿಸತೊಡಗಿದ.
‘ಅನ್ನ ಬಡಿಸುವುದಕ್ಕೆಂದು ಅಮ್ಮ ಬಾಗುವಾಗ ನಾನು ಅಮ್ಮನ ಕಿವಿಯಲ್ಲಿ ತೂಗುವ ಆ ಬಾತುಕೋಳಿಗಳನ್ನೇ ಗಮನಿಸುತ್ತಿದ್ದೆ. ಒಂದುಕಿವಿಯಲ್ಲಿ ಅಷ್ಟ್ಟೂ ಬಾತುಕೋಳಿಗಳು ಒಟ್ಟಿಗೆ ತೂಗುವುದು, ಎಷ್ಟು ಚಂದ ಇತ್ತು ದನಿ. ಆ ಬಾತು ಕೋಳಿಗಳನ್ನು ನೋಡುನೋಡುತ್ತಲೇ ನಾನು ಮನೆಯಲ್ಲಿ ನಾಲ್ಕು ಬಾತುಕೋಳಿಗಳನ್ನು ತಂದು ಸಾಕಿದ್ದೆ. ಮೊದ ಮೊದಲು ಅಮ್ಮ ಹುಟ್ಟುವಾಗಲೇ ಆಅಲಿಕತ್ತುಗಳೊಂದಿಗೆ ಹುಟ್ಟಿರಬೇಕು ಎಂದು ನಂಬಿದ್ದೆ.ನಾನೊಮ್ಮೆ ಆಡುವುದಕ್ಕೆ ಆ ಅಲಿಕತ್ತು ಬೇಕು ಎಂದು ಹಟ ಹಿಡಿದಾಗ ಅವಳುಹೇಳಿದಳು,ಅದನ್ನೂ ಎಂದೂ ಕಿವಿಯಿಂದ ತೆಗೆಯಬಾರದು ಅಂತ ಹೇಳಿ ಅವಳ ಉಮ್ಮ ಅದನ್ನು ಕಿವಿಗೆ ಸಿಕ್ಕಿಸಿದ್ದಳಂತೆ......’
‘ಅಮ್ಮನ ಕಿವಿಗೆ ಅಲಿಕತ್ತು ತೊಡಿಸಿದ್ದೇ ಅವಳ ಮದುವೆಯ ಹಿಂದಿನ ರಾತ್ರಿ. ನನ್ನ ಮನೆಗೆ ಕಾಲಿಡುವುದಾದರೆ 5 ಪವನುಅಲಿಕತ್ತುಗಳೊಂದಿಗೇ ಕಾಲಿಡಲಿ ಎಂದು ಮದುಮಗನ ತಾಯಿ ಹಲ್ಲು ಕಚ್ಚಿ ಹಟ ಹಿಡಿದಾಗ ನನ್ನ ಅಜ್ಜಿ ಮನಸ್ಸಿಲ್ಲದ ಮನಸ್ಸಿನಿಂದತನ್ನ ಕಿವಿಯಲ್ಲಿ ತೂಗುತ್ತಿದ್ದ ಅಲಿಕತ್ತುಗಳನ್ನು ಕಳಚಿ, ಮಗಳ ಕಿವಿಗೆ ಚುಚ್ಚಿದಳಂತೆ.
ಗಂಡನ ಮನೆಗೆ ಕಾಲಿಟ್ಟ ನಾಲ್ಕೇ ನಾಲ್ಕು ದಿನಗಳಲ್ಲಿ, ಅಮ್ಮನ ಕಿವಿಯಲ್ಲಿ ತೂಗುತ್ತಿದ್ದ ಅಲಿಕತ್ತುಗಳನ್ನು ಕಂಡು ಮಾರು ಹೋದಅವಳ ಅತ್ತೆಯ ಕಣ್ಣಲ್ಲಿ ಆಸೆ ಕುಣಿಯ ತೊಡಗಿತಂತೆ.
‘ನನ್ನ ಮುದ್ದು ಸೊಸೆಯೇ....ನನ್ನ ಚಿನ್ನದಂತಹ ಮಗಳೇ..’ ಎಂದು ಹೋದಲ್ಲಿ ಬಂದಲ್ಲಿ ಅಮ್ಮನನ್ನು ಮುದ್ದು ಮಾಡುತ್ತಾ ಒಂದು ದಿನಕೇಳಿಯೇ ಬಿಟ್ಟಳಂತೆ. ಅಮ್ಮ ಜಪ್ಪೆಂದರೂ ಒಪ್ಪಲಿಲ್ಲ. ಸೊಸೆಯ ದುರಾಸೆಯಿಂದ ಕೆಂಡವಾದ ಅತ್ತೆ ಮಗನ ಮೂಲಕಕೇಳಿಸಿದಳಂತೆ ,‘ಊಹುಂ.....ನನ್ನ ಪ್ರಾಣ ಕೊಂಡು ಹೋಗುವ ಅಝ್ರಾಯಿಲ್ ಮಲಾಯಿಕ್ ಬಂದು ಕೇಳಿದರೂ ಈ ಅಲಿಕತ್ತಕೊಡುವವಳಲ್ಲ’ ಎಂದು ಎಲ್ಲರಿಗೂ ಕೇಳಿಸುವಂತೆ ಅಬ್ಬರಿಸಿ ನುಡಿದಳಂತೆ ಅಮ್ಮ.
ಮದುವೆಯಾಗಿ ನಾಲ್ಕೇ ನಾಲ್ಕು ದಿನಗಳಲ್ಲಿ ಗಂಡನಿಗೆ ಹೀಗೊಂದು ಎದುರುತ್ತರ ಕೊಟ್ಟು ಮತ್ತೆ ತನ್ನ ತಾಯಿಯ ಮನೆ ಸೇರಿದಅಮ್ಮ ಮರಳಿ ಗಂಡನ ಮನೆ ಸೇರಿದ್ದು, ಅತ್ತೆ ಕಣ್ಣು ಮುಚ್ಚಿದ ಬಳಿಕವೇ.....’
ಬ್ಯಾಂಕಿನಿಂದ ಚಿನ್ನವನ್ನು ಬಿಡಿಸುವಲ್ಲಿ ಇದೆಲ್ಲಾ ಬಹಳ ಮಹತ್ವವಾದುದು ಎಂಬಂತೆ ಅವನು ಎಲ್ಲವನ್ನು ಬಿಡಿಸಿಡುತ್ತಿದ್ದರೆ, ನಾನೂಕೂಡ ಅದನ್ನು ಒಪ್ಪಿಕೊಂಡವನಂತೆ ಕೇಳಿಸಿಕೊಳ್ಳುತ್ತಿದ್ದೆ.
ನಾನೀಗ ಬಿಳಿ ಹಾಳೆಯೊಂದನ್ನು ಎತ್ತಿ ಗುರುತು ಚೀಟಿ ಕಳೆದು ಹೋದ ಕುರಿತು ಅರ್ಜಿಯನ್ನು ಸಿದ್ದ ಪಡಿಸತೊಡಗಿದೆ. ಸಾಲದಸಂಖ್ಯೆಯೂ ಸೇರಿದಂತೆ ಅಂಕಿಅಂಶಗಳು ಬೇಕಾದಲ್ಲಿ ಖಾಲಿ ಜಾಗವನ್ನು ಬಿಟ್ಟು ಅವನ ಹೆಬ್ಬೆಟ್ಟು ಕೇಳಿದೆ. ಅವನು ತನ್ನ ಹೆಬ್ಬೆಟ್ಟನ್ನುನೀಲಿಗೆ ಅದ್ದಿ, ಬಿಳಿ ಹಾಳೆಯ ಮೇಲೆ ಒತ್ತಿ ಹಿಡಿದು ನನ್ನ ಮುಖವನ್ನು ನೋಡಿದ; ತೆಗೆಯಲೋ, ಬೇಡವೋ ಎನ್ನುವಂತೆ.
ನಾನು ‘ಸಾಕು’ ಎಂದದ್ದೇ, ಬಿಳಿ ಹಾಳೆಗೆ ಅಂಟಿದ್ದ ಹೆಬ್ಬೆಟ್ಟನ್ನು ಎತ್ತಿ, ಅದು ಬಿಡಿಸಿದ ಚಿತ್ತಾರವನ್ನೇ ನೋಡ ತೊಡಗಿದ. ಪಕ್ಕದಲ್ಲಿದ್ದಪ್ಲಾಸ್ಟಿಕ್ ಸ್ಟೂಲೊಂದನ್ನು ಎಳೆದು, ಕೂರು ಎಂದೆ. ನನ್ನ ಔದಾರ್ಯತೆಗೆ ಕುಗ್ಗಿ, ಸಂಕೋಚದಿಂದ ಹಿಡಿಯಾದ ಆತ ‘ಬೇಡ ದನಿ’ ಎಂದ.
ಈತನನ್ನು ಕೂರಲು ಇನ್ನಷ್ಟು ಒತ್ತಾಯಿಸುವುದು ನನ್ನ ಸ್ಥಾನಕ್ಕೆ ದುಬಾರಿ ಅನ್ನಿಸಿತು. ಸುಮ್ಮಗಾದೆ. ಅವನಿಗೆ ಇನ್ನೂ ಹೇಳಲಿಕ್ಕಿದ್ದವು. ನನಗೂ ಇನ್ನೂ ಏನೇನೋ ಕೇಳಿಸಿಕೊಳ್ಳುವುದಕ್ಕಿದೆ ಅನ್ನಿಸಿ ಅವನ ಮುಖ ನೋಡಿದೆ. ತಾನು ಬಿಡಿಸಿಕೊಳ್ಳಲು ಹೊರಟಿರುವಅಲಿಕತ್ತುಗಳು ಎಷ್ಟು ಮಹತ್ವದ್ದು ಎನ್ನುವುದನ್ನು ಅವನಿಗೆ ಇನ್ನಷ್ಟು ಬಿಡಿಸಿ ಹೇಳಲಿಕ್ಕಿದೆ ಅನ್ನುವುದು ಹೊಳೆಯಿತು. ಹೇಳುಅನ್ನುವಂತೆ ಕಣ್ಣ ರೆಪ್ಪೆಯನ್ನೊಮ್ಮೆ ಬಡಿದೆ.
‘ಅಮ್ಮನ ಕಾಲ ಗೆಜ್ಜೆ, ಸೊಂಟದ ಬೆಳ್ಳಿಯ ಚೈನು, ಸುಮಾರು ಅರ್ಧರ್ಧ ಪವನು ತೂಗುವ ಕೈಯ ಚಿನ್ನದ ಬಳೆ ಎಲ್ಲಾ ಅಮ್ಮ ಗದ್ದೆಕೆಲಸಕ್ಕೆ ಹೋಗಿ,ಬೀಡಿಕಟ್ಟಿ ಮಾಡಿದವುಗಳು ದನಿ. ಅವೆಲ್ಲವನ್ನೂ ಅಪ್ಪ ಕೇಳಿದಾಗಲೆಲ್ಲಾ ತೆಗೆತೆಗೆದು ಕೊಟ್ಟಳು. ಅಪ್ಪನಿಗೋಅಮ್ಮನ ಕಿವಿಯಲ್ಲಿ ತೂಗುವ ಅಲಿಕತ್ತುಗಳ ಮೇಲೆಯೇ ಕಣ್ಣು. ಆದರೆ ಆ ಅಲಿಕತ್ತಿಗಾಗಿ ನಾಲ್ಕೇ ದಿನಗಳಲ್ಲಿ ಅತ್ತೆಯೊಂದಿಗೆ ಅಮ್ಮಹೂಡಿದ ಯುದ್ಧ, ಅಪ್ಪನನ್ನು ಮಾತುಗಳನ್ನು ಒತ್ತಿ ಹಿಡಿದಿತ್ತು.
ಆದರೂ ಒಮ್ಮಮ್ಮೆ ಅಲಿಕತ್ತಿನ ಮೇಲೆ ಆಸೆ ಉಕ್ಕಿದಾಗ, ಬೀಡಿ ಕಟ್ಟುತ್ತಿದ್ದ ಅಮ್ಮನ ಪಕ್ಕ ಕೂತು ತನ್ನ ಕೈ ಬೆರಳುಗಳನ್ನುಮೃದುವಾಗಿ ಅಲಿಕತ್ತುಗಳ ಮೇಲೆ ಸವರುತ್ತಾ, ಅದರಲ್ಲಿ ತೂಗುವ ಬಾತುಕೋಳಿಗಳನ್ನು ಎಣಿಸುತ್ತಾ ತಾನು ಮಾಡಲಿರುವವ್ಯಾಪಾರವನ್ನು , ಅದರಿಂದ ತನಗೆ ಬರಲಿರುವ ಲಾಭವನ್ನು ಅಮ್ಮನಿಗೆ ವಿವರಿಸುತ್ತಿದ್ದ.
‘ಕಳೆದ ಬಾರಿ ಅಡಿಕೆಗೆ ಏಕಾಏಕಿ ದರ ಇಳಿಯದಿದ್ದರೆ, ನಿನ್ನ ಕಾಲ ಚೈನು, ಕೈ ಬಳೆ ಏನು, ಮೈ ತುಂಬಾ ಬಂಗಾರವನ್ನುತೋಡಿಸಬಹುದಿತ್ತು. ಹಾಗೆಂದೇ ಕನಸು ಕಂಡಿದ್ದೆ...ಕಿವಿಯಲ್ಲಿರುವ ಅಲಿಕತ್ತುಗಳಿಗಿಂತ ಚಂದದ ಅಲಿಕತ್ತನ್ನು ನೋಡಿ ಇಟ್ಟಿದ್ದೆ. ಆದರೆಈ ಬಾರಿ ಕಳೆದ ಬಾರಿಯ ಅಡಿಕೆ ವ್ಯಾಪಾರದಂತೆ ಆಗುವುದಿಲ್ಲ. ಈಗ ನಾನು ಒಣಮೀನು ಕೊಂಡು ಸಂಗ್ರಹಿಸಿಟ್ಟರೆ,ಬರುವಮಳೆಗಾಲಕ್ಕೆ ನೋಡು, ಬರುವ ಮಳೆಗಾಲಕ್ಕೆ ಬಂಗಾರ ,ಬಂಗಾರವಾಗಿ ಬಿಡುತ್ತದೆ...’
ಅಪ್ಪ ಮಾತನಾಡುತ್ತಿದ್ದರೆ ಅಮ್ಮನ ಮುಖದಲ್ಲಿ ಒಂದು ಸಣ್ಣ ಪ್ರತಿಕ್ರಿಯೆಯೂ ಇರುತ್ತಿರಲಿಲ್ಲ. ಯಾಂತ್ರಿಕವಾಗಿ ಸರಸರನೇಬೀಡಿಯನ್ನು ಸುತ್ತಿ ಸುತ್ತಿ ಹಾಕುತ್ತಿದ್ದಳು.ಬೀಡಿಕಟ್ಟುವಾಗ ಅಮ್ಮ ಒಂದು ಸಣ್ಣ ಬೈತ್ನ್ನಾದರೂ ಹಾಡುತ್ತಿದ್ದರೆ ಅವಳ ಮನಸ್ಸು ತುಸುಖುಷಿಯಲ್ಲಿದೆ ಎಂದು ಅಪ್ಪನಿಗೆ ಒಂದು ಧೈರ್ಯ. ಆದರೆ ಈ ತರ ಅಮ್ಮ ವೌನವಾಗಿ, ಕಲ್ಲಲ್ಲಿ ಕೆತ್ತಿದ ಹಾಗೆ ಮುಖ ಮಾಡಿ ಕುಳಿತರೆಅಪ್ಪನ ಎಲ್ಲಾ ಧೈರ್ಯವೂ ಉಡುಗುತ್ತಿತ್ತು. ಒಮ್ಮಿಮ್ಮೆ ಅಪ್ಪ ಸುಮ್ಮ ಸುಮ್ಮಗೆ ಹೆದರಿಸಲು ನೋಡುತ್ತಿದ್ದ ‘ನಾನು ಸತ್ತುಹೋಗುತ್ತೇನೆ. ಆಗ ನಿನಗೆ ಕಿವಿ ತುಂಬಾ ಅಲಿಕತ್ತು, ಕೊರಳು ತುಂಬಾ ಚಿನ್ನ ಹಾಕಿ ಕುಣಿಯ ಬಹುದಲ್ವಾ.....’
ಅಮ್ಮ ಬಾಯಿ ತುಂಬಾ ಹಾಕಿದ್ದ ಎಲೆ ಅಡಿಕೆಯನ್ನು ‘ತೂಫ್..’ ಅಂತ ಉಗುಳಿ ಹೇಳುತ್ತಿದ್ದಳು ‘...ಸಾಯುವವರನ್ನು ಹಿಡಿದು ನಿಲ್ಲಿಲ್ಲಿಕ್ಕೆನಾನು ಯಾರು.....?’
ಮೇಲಿದ್ದ ಮಲಾಯಿಕುಗಳು ಅಮ್ಮನ ಮಾತಿಗೆ ‘ಆಮೀನ್’ ಎಂದು ಹೇಳಿದರೋ ಎಂಬಂತೆ ಒಂದು ದಿನ ಅಪ್ಪ ಹಾಸಿಗೆಹಿಡಿದನೋ.....ಅಮ್ಮನ ದುಡಿಮೆಯೆಲ್ಲಾ ಅಪ್ಪನ ರೋಗಕ್ಕೆ ಸಂದಾಯವಾಗತೊಡಗಿತು. ಕೊನೆಗೆ ಡಾಕ್ಟರು ಅಪ್ಪಉಳಿಯಬೇಕಾದರೆ ಆತ ಹೊಟ್ಟೆ ಅಪರೇಷನ್ ಆಗಬೇಕೆಂತಲೂ ...ಕಡಿಮೆಯೆಂದರೂ ಐದು ಸಾವಿರ ಬೇಕೆಂತಲೂ ಹೇಳಿದಾಗಅಮ್ಮ ಹೈರಾಣಾದಳು.ಅಮ್ಮ ಹಾಸಿಗೆಯಲ್ಲಿ ಮಲಗಿದ್ದ ಅಪ್ಪನನ್ನೇ ನೋಡುತ್ತಿದ್ದರೆ, ಅಪ್ಪ ಆಕೆಯ ಕಿವಿಯಲ್ಲಿ ತೂಗುತ್ತಿದ್ದಅಲಿಕತ್ತುಗಳನ್ನೇ ನಿರ್ಲಿಪ್ತ ಕಣ್ಣುಗಳಿಂದ ನೋಡುತ್ತಿದ್ದ.
ಹೀಗೆ ಒಬ್ಬರನ್ನೊಬ್ಬರು ಮೂರು ನಾಲ್ಕು ದಿನ ಬಿಡದೇ ನೋಡಿರಬೇಕು, ಒಂದು ದಿನ ಇನ್ನು ಸಾಧ್ಯವಿಲ್ಲ ಎಂಬಂತೆ ಅಮ್ಮಅಬ್ಬರಿಸಿದಳು ‘ಸಾಯಲೇ ಬೇಕೆಂದಿದ್ದರೆ ಸಾಯುವವರು ಸಾಯಲಿ. ಈ ಕಿವಿಯ ಅಲಿಕತ್ತು ಮಾತ್ರ ತೆಗೆದುಕೊಡುವವಳಲ್ಲ.....’
ಮಲಗಿದಲ್ಲಿಂದಲೇ ಅಮ್ಮನನ್ನು ನಿರ್ಲಿಪ್ತವಾಗಿ ನೋಡುತ್ತಿದ್ದ ಅಪ್ಪ ಅಂದು ಸಂಜೆಯೇ ಅಮ್ಮನಿಗೆ ತಲಾಖ್ ಹೇಳಿ ಬಿಟ್ಟ.
ಗಂಡನ ಮನೆಯಿಂದ ತನ್ನೆಲ್ಲಾ ಸರಕುಗಳನ್ನು ಗೋಣಿಯೊಂದರಲ್ಲಿ ತುಂಬಿಸಿದ ಅಮ್ಮ, ನನ್ನನ್ನು ಇನ್ನೊಂದು ಕೈಯಲ್ಲಿ ಹಿಡಿದುತವರಿಗೆ ನಡೆದೇ ಬಿಟ್ಟಳು. ದಾರಿಯುದ್ದಕ್ಕೂ ಅಮ್ಮ ಅಳುತ್ತಿದ್ದಳು ದನಿ.....ಎನ್ನುತ್ತಾ ಆತ ಕಣ್ಣೋರೆಸಿಕೊಂಡ .
‘ಅಮ್ಮ ತವರು ಮನೆ ಮುಟ್ಟುವಷ್ಟರಲ್ಲಿ ಅಪ್ಪ ತೀರಿದ ಸುದ್ದಿ ತಲುಪಿತ್ತು ದನಿ. ಯಾರದೋ ಸಾವಿನ ಸುದ್ದಿ ಕೇಳಿದವಳಂತಿದ್ದ ಅಮ್ಮ, ಅಂದು ಸಂಜೆ ನನ್ನನ್ನು ಚೆನ್ನಾಗಿ ಬಿಸಿ ನೀರಿನಲ್ಲಿ ಮೀಯಿಸಿ ಮಲಗಿಸಿದಳು. ರಾತ್ರಿಯಿಡೀ ಅಮ್ಮ ಹೆಣದಂತೆ ನಿದ್ರಿಸಿದ್ದಳು.’
ಅಷ್ಟರಲ್ಲಿ ಅಟೆಂಡರ್ ಗೋಪಾಲ್ ಧೂಳಿನಲ್ಲಿ ಮುಚ್ಚಿ ಹೋಗಿದ್ದ ಫೈಲೊಂದನ್ನು ತಂದವನೇ, ನಮ್ಮ ಸಮೀಪದಲ್ಲೇ ಧೂಳನ್ನು ತಟ್ಟಿಸಿಟ್ಟನ್ನು ತೀರಿಸಿಕೊಂಡ. ‘ಭುಕ್’ ಎಂದು ಆವರಿಸಿದ ಧೂಳಿನಿಂದ ಕೆಮ್ಮು ಕರುಳಿಂದ ಕಿತ್ತು ಬಂತು. ಗೋಪಾಲನೂ ಕೆಮ್ಮ ತೊಡಗಿದರಿದ್ರದು’್ದ ಎಂದ. ನನ್ನೆದುರು ನಿಂತಾತ ಮಾತ್ರ ಏನೂ ಆಗದವನಂತೆ ಆ ಧೂಳಿನ ಪರಿಮಳವನ್ನು ಹೀರ ತೊಡಗಿದ್ದ.
‘ ಫೈಲನ್ನು ಬಿಡಿಸಿದೆ. ನಿಧಾನಕ್ಕೆ ಖಾಲಿ ಹಾಳೆಯಲ್ಲಿ ಅವನು ತೆಗೆದ ಸಾಲವನ್ನು ಬರೆದಿಟ್ಟು ಅಸಲು, ಬಡ್ಡಿಯನ್ನು ಲೆಕ್ಕಿಸತೊಡಗಿದೆ. ಯಾಕೋ ಎಂದಿನ ಉತ್ಸಾಹ ಇದ್ದಿರಲಿಲ್ಲ.
ಅವನು ಕೊಡಬೇಕಾದ ಮೊತ್ತವನ್ನು ಹಾಳೆಯ ಕೊನೆಯಲ್ಲಿ ಬರೆದು ಅವನ ಮುಂದಿಟ್ಟೆ. ಆತ ಅದನ್ನು ಕಣ್ಣೆತ್ತಿಯೂ ನೋಡಲಿಲ್ಲ. ತನ್ನಲುಂಗಿಯೊಳಗಿನ ಗೀಟು ಗೀಟು ಚಡ್ಡಿಯಿಂದ ಟವೆಲಿನ ಕಟ್ಟೊಂದನ್ನು ಹೊರತೆಗೆದು ನನ್ನ ಟೇಬಲಿನ ಮೇಲಿಟ್ಟು ಬಿಡಿಸಿದ. ಬೆವರಿನಿಂದ ಒದ್ದೆಯಾದ ನೋಟುಗಳು ಮುದ್ದೆಯಾಗಿ ಮಲಗಿತ್ತು.
‘ಎಣಿಸಿ ದನಿ.....’ಎಂದ.
ನೂರು, ಐವತ್ತೂ, ಹತ್ತು ಹೀಗೆ ಎಲ್ಲಾ ಬಗೆಯ ನೋಟುಗಳು ಸೇರಿಕೊಂಡಿತ್ತು. ಹಣವನ್ನು ಎಣಿಸುವಾಗ ನನ್ನ ಕೈ ನಡುಗುತ್ತಿತ್ತು. ಲಕ್ಷಗಟ್ಟಳೆ ಎಣಿಸಿದ ನನ್ನ ಕೈ ಹೀಗೇಕೆ ವರ್ತಿಸುತ್ತಿದೆ ಎನ್ನುವುದು ನನಗರ್ಥವಾಗುತ್ತಿರಲಿಲ್ಲ. ಎಣಿಸಿ ನೋಡಿದರೆ ಕಟ್ಟ ಬೇಕಾದಹಣಕ್ಕೆ ಇನ್ನೂ ಎರಡು ಸಾವಿರ ರೂ. ಕಡಿಮೆಯಿದೆ. ಇನೊಮ್ಮೆ ಎಣಿಸಿದೆ. ಊಹುಂ...
ಅವನನ್ನು ದಿಟ್ಟಿಸಿದೆ. ಇನ್ನೇನು ಚಿನ್ನ ಸಿಕ್ಕಿಯೇ ಬಿಟ್ಟಿತು ಎಂಬ ಸಂಭ್ರಮ ಅಲ್ಲಿ ಕುಣಿಯುತ್ತಿತ್ತು. ಗಂಟಲಲ್ಲಿ ಏನೋಸಿಕ್ಕಿಕೊಂಡಂತಾಗಿ ಸಣ್ಣಗೆ ಕೆಮ್ಮಿ, ‘ಚಿನ್ನ ಸಿಗಬೇಕಾದರೆ ಇನ್ನೂ ಎರಡು ಸಾವಿರ ರೂ.ಬೇಕಪ್ಪ....’ ಎಂದೆ.
ಆತ ಅರ್ಥವಾಗದೆ ನನ್ನ ಮುಖವನ್ನೇ ನೋಡಿದ.‘ಎರಡು ಸಾವಿರ ರೂ. ಕಡಿಮೆ ಇದೆ. ಏನು ಮಾಡ್ತೀಯ...?’ ಅವನಿಗೆ ಅರ್ಥವಾಗುವಹಾಗೆ ಕಟ್ಟ ಬೇಕಾದ ಹಣವನ್ನು, ಅವನು ತಂದ ಹಣವನ್ನು ವಿವರಿಸಿ ಹೇಳಿದೆ. ಅವನ ಮುಖ ನಿರ್ಜೀವವಾಗಿತ್ತು. ಕಣ್ಣ ರೆಪ್ಪೆ ಮುಚ್ಚಿತೆರೆದ ರಭಸಕ್ಕೆ ಅಲ್ಲಿ ಮಿನುಗುತ್ತಿದ್ದ ಬೆಳಕೂ ಆರಿ ಹೋಗಿತ್ತು.
‘ಇನ್ನೂ ಆಗಬೇಕಾ...’ ಅವನಷ್ಟಕ್ಕೆ ಗೊಣಗಿದ.
‘ನೋಡು...ಈ ಹಣ ನಿನ್ನಲ್ಲೇ ಇರಲಿ. ಇನ್ನೂ ಎರಡು ಸಾವಿರ ರೂ.ಕೈಯಲ್ಲಿ ಸೇರಿದಾಗ ಬಂದು ಕಟ್ಟು...’ ಅಷ್ಟೂ ಹಣವನ್ನು ಆಟುವ್ವಾಲಲ್ಲಿ ಕಟ್ಟಿ ಅವನ ಕೈಗಿಡಲು ನೋಡಿದೆ.
ಚೇಳು ಕಚ್ಚಿಸಿಕೊಂಡವನಂತೆ ಅವನು ಕೈಯನ್ನು ಹಿಂದಕ್ಕೆ ತೆಗೆದ.‘ಬೇಡಾ’ ಎಂದು ಅವನಿಗೆ ಅವನೇ ಪಿಸುಗುಟ್ಟಿದ.
‘ಬಿಡಿಸಿ ತಂದೇ ತರುವೆ ಎಂದು ಅಮ್ಮನಿಗೆ ಹೇಳಿದ್ದೆ...’ ಒಣಗಿದ ಧ್ವನಿಯಲ್ಲಿ ಹೇಳಿದ..‘ದನಿ ಇಷ್ಟನ್ನು ಇಟ್ಟುಕೊಂಡು ಏನಾದರೂಮಾಡ್ಲ್ಲಿಕ್ಕೆ ಆಗುವುದಿಲ್ವಾ...’ ಎನ್ನುತ್ತಾ ನನ್ನನ್ನು ವಿನೀತವಾಗಿ ನೋಡಿದ.
ನಾನು ಏನನ್ನೋ ಬರೆಯುವ ನೆಪದಲ್ಲಿ ತಲೆ ತಗ್ಗಿಸಿದೆ.
‘ದನಿ ಇದಿಷ್ಟನ್ನು ಸಾಲಕ್ಕೆ ಸಂದಾಯ ಮಾಡಿಕೊಳ್ಳಿ. ನಾಳೆ, ನಾಡಿದ್ದರಲ್ಲಿ ಉಳಿದ ಹಣದೊಂದಿಗೆ ಬಂದು ಬಿಡಿಸಿಕೊಳ್ಳುವೆ’
ನಾನು ಪಕ್ಕನೆ ತಲೆ ಎತ್ತಿದೆ. ಈತ ಭಾವುಕತೆಯಿಂದ ತನ್ನ ಚಿನ್ನ, ಹಣ ಎರಡನ್ನೂ ಕಳೆದು ಕೊಳ್ಳುತ್ತಿದ್ದಾನೆ ಎಂದು ಮನಸ್ಸುಆತಂಕಗೊಂಡಿತು. ಅವನಿಗೆ ಅರ್ಥವಾಗುವ ಹಾಗೆ ಬಿಡಿಸಿ ಹೇಳಿದೆ
‘ನೋಡು.....ಇಷ್ಟು ಹಣವನ್ನು ಕಟ್ಟಿ ನಾಳೆ ಎರಡು ಸಾವಿರ ರೂ.ವನ್ನು ಕಟ್ಟಲಾಗದಿದ್ದಲ್ಲಿ ನೀನು ಹಣ, ಚಿನ್ನ ಎರಡನ್ನು ಕಳೆದುಕೊಳ್ಳಬೇಕಾದೀತು. ಈ ಹಣವನ್ನು ಕೊಂಡು ಹೋಗಿ, ಎರಡು ಸಾವಿರದೊಂದಿಗೆ ಒಟ್ಟಿಗೇ ಕಟ್ಟು’ ಎಂದೆ.
‘ಬೇಡ ದನಿ...’ಎನ್ನುತ್ತಾ ಆ ಹಣವನ್ನು ಟೇಬಲಿಂದ ನನ್ನೆೆಡೆಗೆ ತಳ್ಳಿದ.
‘ಚಿನ್ನದೊಂದಿಗೆ ಬಂದೇ ಬರುವೆ ಎಂದು ಅಮ್ಮನಿಗೆ ಹೇಳಿದ್ದೆ. ನನ್ನ ಜೀವವೊಂದಿದ್ದರೆ ಉಳಿದ ಹಣದೊಂದಿಗೇ ಬರುತ್ತೇನೆ ದನಿ’ ಎಂದವನೇ ಹೊರಡುವ ತಯಾರಿ ನಡೆಸಿದ.
****
ಈ ಘಟನೆಗೆ ದಿನಗಳು ಬಡ್ಡಿ, ಚಕ್ರ ಬಡ್ಡಿಗಳಾಗಿ ಬಿದ್ದಿವೆ. ಹೀಗೆ ಕುರ್ಚಿಯಲ್ಲಿ ಕುಳಿತು ಯಾವುದೋ ಅಸಲಿಗೆ ಬಡ್ಡಿಯನ್ನುಕೂಡಿಸುತ್ತಿರುವಾಗ ಬಾಗಿಲ ಬಳಿ ಯಾರೋ ಪಕ್ಕನೆ ಹಾದಂತೆ ಅನ್ನಿಸಿ ಆಗಾಗ ತಲೆ ಎತ್ತಿ ನೋಡುತ್ತಿರುತ್ತೇನೆ. ಗೋಡೆಗೆ ತೂಗುಬಿಟ್ಟಪೋಟೋ ಇಲ್ಲದ ಖಾಳಿ ಚೌಕಟ್ಟಿನಂತಿರುವ ಬಾಗಿಲು ನನ್ನನ್ನು ಅಣಕಿಸುತ್ತಿತ್ತು.
ಕೂತಲ್ಲೇ ಒಮ್ಮಮ್ಮೆ ನನಗೆ ಆ ಚಿನ್ನದ ಅಲಿಕತ್ತುಗಳನ್ನು ನೋಡುವ ಆಸೆ ಹುಟ್ಟುವುದು. ಅದರಲ್ಲಿ ತೂಗುವ ಐದೈದುಜಾಲರಿಗಳು.ಜಾಲರಿಗಳಲ್ಲಿ ತೂಗುವ ಬಾತುಕೋಳಿಗಳನ್ನು ಎಣಿಸಿ ನೋಡಬೇಕೆಂಬ ಆಸೆಯನ್ನು ಅಲ್ಲಿಗೆ ಒತ್ತಿ ಹಿಡಿಯುತ್ತಿರುತ್ತೇನೆ.
ಜೀವವಿದ್ದರೆ ಎರಡು ಸಾವಿರ ರೂ.ಗಳೊಂದಿಗೆ ಮರಳಿ ಬಂದೇ ಬರುವೆ ಎಂದು ಹೋದಾತ ಮರಳಿ ಬಂದೇ ಬರುವ ಎನ್ನುವ ನನ್ನಧೈರ್ಯಕ್ಕೆ ಹಲವು ಸಮರ್ಥಿಸಿಕೊಳ್ಳಲಾಗದ ಕಾರಣಗಳಿವೆ.
ಪ್ರತಿದಿನವು ಕಚೇರಿಗೆ ಸಿದ್ದತೆ ನಡೆಸುವಾಗಲೂ ಈ ದಿನ ಅವನು ಬಂದೇ ಬರುವ ದಿನ ಅನ್ನಿಸುತ್ತಿತ್ತು. ಆ ಚಿನ್ನವನ್ನು ಅವನಬೊಗಸೆಯಲ್ಲಿಟ್ಟು, ಅದು ಅವನ ಕಣ್ಣಲ್ಲಿ ಪ್ರತಿಫಲಿಸುವುದನ್ನೊಮ್ಮೆ ನೋಡಬೇಕು ಎಂಬ ನನ್ನ ಸ್ವಭಾವಕ್ಕೆ ಸಲ್ಲದ ಆಸೆಯನ್ನುಈಡೇರಿಸಿಕೊಳ್ಳುವ ಚಪಲದಿಂದ ಕಚೇರಿಗೆ ದಾವಿಸುತ್ತೇನೆ.
ಊಹುಂ .....ಅವನು ಬಂದಿರುವುದಿಲ್ಲ. ತಲೆ ಎತ್ತಿ ನೋಡಿದರೆ ಒಂದು ಅಪರಿಚಿತ ಮುಖ. ತನ್ನ ಕೈಯಲ್ಲಿದ್ದ ಪೊಟ್ಟಣವೊಂದನ್ನು ನನ್ನಟೇಬಲ್ನ ಮೇಲಿಟ್ಟು ‘ಈ ಚಿನ್ನಕ್ಕೆ ಎಷ್ಟು ಸಾಲ ಸಿಗಬಹುದು ಸ್ವಾಮಿ’ ಎಂದು ಕೇಳುತ್ತದೆ.
ನನ್ನ ನಾಲ್ಕೂವರೆ ರೂಪಾಯಿಯ ಪೆನ್ನನ್ನು ಕೈಗೆತ್ತಿಕ್ಕೊಂಡು ಆ ಚಿನ್ನದ ಅಂದಾಜು ಬೆಲೆಯನ್ನು ಕಟ್ಟ ತೊಡಗುತ್ತೇನೆ. ಆ ಸಂದರ್ಭನನ್ನ ಕೈಗಳು ಕಂಪಿಸುತ್ತಿರುವುದು ಯಾಕೇ? ನನ್ನ ಎದೆ ಬಡಿತ ನನಗೇ ಕೇಳಿಸುವಷ್ಟು ಜೋರಾಗಿ ಬಡಿಯುತ್ತಿರುವುದಾದರೂಯಾಕೇ?
ಕತೆ ನಿಜಕ್ಕೂ ಚೆನ್ನಾಗಿದೆ. ಒಬ್ಬರ ಕಷ್ಟವಾದ್ದರಿಂದ ಚೆನ್ನಾಗಿದೆ ಅನ್ನಲೂ ಮನಸ್ಸು ಬಾರದು. ಇಷ್ಟು ಪ್ರತಿಭಾವಂತ ಕತೆಗಾರರು (ನಿಮಗೊಬ್ಬರಿಗೆ ಹೇಳುತ್ತಿಲ್ಲ) ಇಂತ ಮನಸ್ಸು ಹಾಳುಮಾಡುವ ಕತೆಗಳನ್ನೇ ಯಾಕೆ ಮತ್ತೆ ಮತ್ತೆ ಬರೆದು ಹೃದಯ ಹಿಂಡುತ್ತಾರೋ? ಜೀವನದಲ್ಲಂತೂ ಗೋಳು ಇದ್ದದ್ದೇ. ಕನಿಷ್ಟ ಕತೆಗಳಲ್ಲಾದರೂ ಧನಾತ್ಮಕ ಅಂಶಗಳಿದ್ದು ನಮ್ಮಂತವರ ಬೆನ್ನು ತಟ್ಟಬಾರದೇ? ಅಥವಾ ಓದುಗರಿಗಿಂತಲೂ, ಇಂತ ಗೋಳು ಕತೆಗಳಿಗೆ ಪ್ರಶಸ್ತಿ ನೀಡುವ ಸಾಹಿತ್ಯ ವಲಯವೇ ಮುಖ್ಯವಾಯಿತೇ? ಈ ಕಮೆಂಟು ಯಾರು ಬರೆದರೆಂಬುದು ಮುಖ್ಯವಲ್ಲವೆಂದುಕೊೞುತ್ತೇನೆ! ದಯವಿಟ್ಟು ವಯಕ್ತಿಕವಾಗಿ ತೆಗೆದುಕೊೞಬೇಡಿ.
ReplyDeleteಆತ್ಮೀಯ ಹೆಸರಿಲ್ಲದ ಗೆಳೆಯರೇ, ನಿಮ್ಮ ಅಭಿಪ್ರಾಯ ನನ್ನದೂ ಹೌದು. ಆದರೇನು ಮಾಡೂದು? ಎಡವಿದ ಕಾಲ ಬೆರಳಿಗೆ ಮತ್ತೆ ಮತ್ತೆ ಎಡವೂದು ಯಾಕೆ? ನೋವಿರುವ ಹಲ್ಲಿನ ಕಡೆಗೇ ನಾಲಗೆ ಮತ್ತೆ ಮತ್ತೆ ಹೊರಳೂದು ಯಾಕೆ? ನನಗೂ ಗೊತ್ತಿಲ್ಲ.
ReplyDelete