Monday, May 9, 2011
ಎಲ್ಲಿದ್ದೀಯ ನೀನು?
ಹಾಯ್...!ಎಲ್ಲಿದ್ದೀಯ? ಹೇಗಿದ್ದೀಯ? ಯಾವುದಾದರೊಂದು ಕತೆಯ ಮೂಲಕ ನೀನು ನಿನ್ನ ಇರವನ್ನು ತಿಳಿಸಬಹುದೆಂದು ಕಳೆದ ನಾಲ್ಕುವರ್ಷಗಳಿಂದ ಕನ್ನಡದ ಎಲ್ಲ ಮ್ಯಾಗಜಿನ್ಗಳ ಪುಟಗಳನ್ನು ತಿರುಗಿಸುತ್ತಿದ್ದೇನೆ. ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಯಾವಮ್ಯಾಗಜಿನ್ನಲ್ಲೂ ನಿನ್ನ ಕತೆಯನ್ನು ನೋಡುತ್ತಿಲ್ಲ. ಏನಿದರ ಅರ್ಥ? ಏನಿದರ ಸಂದೇಶ?
ನಿನ್ನ ಒಂದು ಫೋನ್ ನಂಬರಿಗಾಗಿ ಕಳೆದೆರಡು ವರ್ಷಗಳಿಂದ ಹಲವು ಗೆಳೆಯರಲ್ಲಿ ಹಲ್ಲುಗಿಂಜಿದ್ದೇನೆ. ಅವರು ಕಿಸಕ್ಕನೆ ನಕ್ಕರೇ ಹೊರತು, ನಂಬರ್ ಕೊಡಲಿಲ್ಲ. ಫೇಸ್ಬುಕ್ನಲ್ಲಿ ನಿನಗಾಗಿ ಜಾಲಾಡಿದೆ. ಗೂಗಲ್ನಲ್ಲಿ ನಿನ್ನ ಇಮೇಜಿಗಾಗಿ ಹುಡುಕಿದೆ. ಹಳೆಯ ನಂಬರನ್ನೇ ಪದೇ ಪದೇ ಅದುಮಿ ಉತ್ತರಕ್ಕಾಗಿ ಕಾಯುತ್ತಾ ಕುಳಿತೆ. ಯಾರೋ ಹೇಳಿದರು ‘ಆಕೆಗೆ ಮದುವೆಯಾಯಿತು’ ಎಂದು. ಇನ್ಯಾರೋ ಹೇಳಿದರು, ಆಕೆ ಸಿಂಗಾಪುರದಲ್ಲಿದ್ದಾಳೆಂದು. ಅದೊಂದು ಮಾತ್ರ ನನಗೆ ನಿಜ ಅನ್ನಿಸಿತು. ನೀನು ಸದಾ ಮಲ್ಟಿಪ್ಲೆಕ್ಸ್, ಸಿಂಗಾಪುರ ಎಂದೆಲ್ಲ ಧ್ಯಾನಿಸುತ್ತಾ ಇದ್ದವಳು. ಒಂದು ವೇಳೆ ಹೋದರೂ ಹೋದೀಯೇ? ಆದರೆ ನಿನ್ನಲ್ಲಿ ಹೇಳಲೇ ಬೇಕಾಗಿದ್ದ ಒಂದು ಮಾತು ನನ್ನ ನನ್ನ ಗಂಟಲಲ್ಲಿ ಮುಳ್ಲಿನಂತೆ ಸಿಕ್ಕಿಕೊಂಡಿದೆ. ಹೇಳಲೇಬೇಕಾಗಿದೆ. ಎಲ್ಲಿದ್ದೀಯೆ ನೀನು?
ಪತ್ರಿಕಾ ಕಚೇರಿಯ ತುಂಬಾ ನೀನು ಮೇಕಪ್ ಬಾಕ್ಸ್ ಜೊತೆಗೇ ಓಡಾಡುತ್ತಿದ್ದೆ. ಕುಳ್ಳಿಯಾಗಿದ್ದ ನೀನು, ಅದನ್ನು ಮರೆಮಾಚಲು, ಹೈಹೀಲ್ಸ್ ಚಪ್ಪಲಿಯನ್ನು ಹಾಕಿಕೊಂಡು ಕ್ಯಾಟ್ ವಾಕ್ ನಡಿಗೆಯಲ್ಲಿ ನಡೆಯುತ್ತಿದ್ದೆ. ನೀನೆಷ್ಟು ಗಿಡ್ಡ ಎಂದರೆ ‘‘ಈ ಬಾಲಕಾರ್ಮಿಕರನ್ನೆಲ್ಲ ತಂದು ದುಡಿಸುವುದು ಎಷ್ಟು ಸರಿ?’’ ಎಂದು ಕೇಳಿ, ಡೆಸ್ಕಿನಲ್ಲಿದ್ದ ಎಲ್ಲರನ್ನೂ ನಗಿಸುತ್ತಿದ್ದೆ. ‘‘ದಿನಾ ಕೋಂಪ್ಲಾನ್ ಕುಡಿ...ಆರೋಗ್ಯಕ್ಕೆ ಒಳ್ಳೆದು...’’ ಎಂದರೆ ‘‘ನಿನ್ನ ಕರಿ ಮೂತಿಯನ್ನೊಮ್ಮೆ ಕನ್ನಡಿಯಲ್ಲಿ ನೋಡು’’ ಎಂದು ಸಿಡುಕಿ ಅಲ್ಲಿಂದ ಎದ್ದು ಹೋಗುತ್ತಿದ್ದೆ ನೀನು.
‘‘ಅವಳ ಪೇಜಲ್ಲಿ ಯಾವ ತಪ್ಪುಗಳೂ ಇರುವುದಿಲ್ಲ, ನೀಟಾಗಿರುತ್ತೇ...’’ ಸಂಪಾದಕರು ಮೀಟಿನ್ಗಲ್ಲಿ ಆಕೆಯನ್ನೇ ನೋಡುತ್ತಾ ಹೇಳುತ್ತಿದ್ದರೆ ನಾನು ಉರಿ ಉರಿದು ಬೀಳುತ್ತಿದ್ದೆ. ದಿನಾ ಎರಡೆರಡು ಪೇಜುಗಳನ್ನು ಮಾಡಿ ಸುಸ್ತಾಗಿ ಹೋಗುತ್ತಿದ್ದವರು ನಾವು. ಆದರೆ ಒಂದೇ ಒಂದು ಹೊಗಳಿಕೆಯನ್ನು ಪಡೆದುಕೊಂಡವರಲ್ಲ. ಡೆಸ್ಕಿನಲ್ಲಿ ಕೂತು ನೀನು ಪೇಜ್ ನೋಡಿದ್ದಕ್ಕಿಂತಲೂ ಕನ್ನಡಿ ನೋಡಿದ ಹೊತ್ತೇ ಅಧಿಕ.
ಅದೊಂದು ದಿನ ನನ್ನ ಪಕ್ಕದ ಗೆಳೆಯ ನಿನ್ನನ್ನು ನೋಡಿ ‘‘ಥೇಟ್ ಐಶ್ವರ್ಯ ರೈ ಥರಾ ಕಾಣುತ್ತಿದ್ದೀಯ’’ ಎಂದಾಗ ನೀನು ಕತ್ತು ಕೊಂಕಿಸಿ, ಹುಸಿಮುನಿಸಿನಿಂದ ‘‘ಏಯ್, ನಾನು ಅಷ್ಟೂ ಕಪ್ಪಾ?’’ ಎಂದಾಗ ನಿನ್ನ ಹುಂಬ ಆತ್ಮವಿಶ್ವಾಸಕ್ಕೆ ನಾನು ದಂಗಾಗಿದ್ದೆ.
ಒಂದು ದಿನ ಕೃಷಿಯ ಕುರಿತು ಸುದ್ದಿ ಬರೆಯುತ್ತಿದ್ದಾಗ ನೀನು ಕೃತಕವಾದ ಆಘಾತದಿಂದ ‘‘ಅಯ್ಯೋ...ಅಕ್ಕಿ ಬೆಳೆಯುವುದು ಗದ್ದೆಯಲ್ಲಿಯಾ? ನಾನು ಅಕ್ಕಿ ಬೆಳೆಯುವುದನ್ನು ಇಷ್ಟರವರೆಗೂ ನೋಡಿಲ್ಲಪ್ಪ’’ ಎಂದಾಗ ನಾನು ಕೈಯಲ್ಲಿದ್ದ ಪೇಜನ್ನು ಹರಿದು, ಬಾಯಿಗೆ ಬಂದಂತೆ ಒದರಿದ್ದೆ. ‘‘ತಿನ್ನುವ ಅಕ್ಕಿ ಹೇಗೆ ಬೆಳೆಯುತ್ತದೆ ಎನ್ನುವುದು ಗೊತ್ತಿಲ್ಲ ಎನ್ನುವ ನೀನು ಮನುಷ್ಯಳ? ನೀನೊಬ್ಬಳು ಕತೆಗಾರ್ತಿಯ? ಎಲ್ಲಿಂದಲೋ ಕದ್ಕೊಂಡು ಬಂದು ನಿನ್ನ ಕತೆ ಅಂತ ಹೇಳ್ತೀಯ ಅಷ್ಟೇ..’’ ಎಂದಾಗ ನೀನು ಸಿಟ್ಟಿನಿಂದ ‘‘ಏಯ್ ನನ್ನ ಕತೆಯ ಸುದ್ದಿಗೆ ಬಂದರೆಅಷ್ಟೇ...?’’ ಎಂದು ತೋರುಬೆರಳು ತೋರಿಸಿದ್ದಿ.
ಅಲ್ಲ ಕಣೆ? ನಿಜಕ್ಕೂ ನಾನು ನಿನ್ನನ್ನು ಯಾಕೆ ಅಷ್ಟು ದ್ವೇಷಿಸುತ್ತಿದ್ದೆ?
ಅಂದು ಸಂಬಳದ ದಿನ. ‘‘ಸಂಬಳ ಆಯ್ತೆನಾ? ಏಯ್...ನನಗೊಂದು ಚಂದದ ಚಪ್ಪಲಿ ತೆಗೆದುಕೊಡ?’’ ಎಂದಾಗ ನಿನ್ನ ಮುಖಕಪ್ಪಳಿಸುವಂತೆ ‘‘ನಿನಗೆ ತೆಗೆದುಕೊಡುವುದಕ್ಕಿಂತ ನನ್ನ ತಂಗಿಯರಿಗೆ ಎರಡೆರಡು ಚಪ್ಪಲಿ ತೆಗೆದುಕೊಡುತ್ತೇನೆ ಅಷ್ಟೇ..’’ ಎಂದಿದ್ದೆ. ಎಂತಹ ಮೂರ್ಖ ನಾನು. ಯಾವುದಾದರೊಂದು ಒಳ್ಳೆಯ ಚಪ್ಪಲಿ ಅಂಗಡಿಗೆ ಕರೆದೊಯ್ದು ನಿನಗೊಂದು ಜೋಡು ಒಳ್ಳೆಯ ಚಪ್ಪಲಿ ತೆಗೆದೇ ಕೊಡಬಹುದಿತ್ತಲ್ಲ ಎಂದು ಹಪಹಪಿಸುತ್ತಿದ್ದೇನೆ ಕಣೆ......
ನಿನ್ನಾವ ಕತೆಯೂ ನನಗೆ ಇಷ್ಟವಾಗುತ್ತಿರಲಿಲ್ಲ. ಕಚೇರಿಯಲ್ಲೆಲ್ಲ...ನೀನು ಅದಾವುದೋ ಭಾಷೆಯ ಕತೆಗಳನ್ನು ಕದಿಯುತ್ತಿದ್ದಿ ಎಂಬ ಗುಲ್ಲು. ನಿನ್ನನ್ನು ಕೆಣಕಲು ನಾನದನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದೆ. ‘‘ಎಷ್ಟು ಒಳ್ಳೆಯ ಕತೆ. ಎಲ್ಲಿಂದ ಕದ್ದಿದ್ದೀಯ ಇದನ್ನು. ಕದಿಯುವ ನಿನ್ನ ಸೃಜನಶೀಲತೆಗೆ ಸಾಟಿಯೇ ಇಲ್ಲ ಕಣೇ...’’ ಎಂದಾಗ ನೀನು ನಿಜಕ್ಕೂ ಕಳ್ಳಿಯಂತೆ ಉರಿ ಉರಿದು ಬೀಳುತ್ತಿದ್ದೆ. ‘‘ನಿನ್ನ ತಂದೆ ಅದಾವುದೋ ಮಹಾರಾಜನ ಹೆಸರು ಇಟ್ಟುಕೊಂಡಿದ್ದಾನೆ ಎನ್ನುವ ಒಂದೇ ಒಂದು ಕಾರಣಕ್ಕೆ ನಿನ್ನನ್ನು ನೀನು ರಾಜಕುಮಾರಿ ಎಂದು ತಿಳಿದುಕೊಳ್ಳುವುದು ತಪ್ಪುಕಣೆ’’ ಎಂದು ಹಲವು ಸಲ ಹೇಳಿದ್ದೆ. ‘‘ನನ್ನ ಅಪ್ಪನ ಸುದ್ದಿಗೆ ಬಂದರೆ ಅಷ್ಟೇ...’’ ಎನ್ನುತ್ತಿದ್ದೆ.
ಅದಾವುದೋ ಕಾರಣಕ್ಕೆ ನಾನು ಹದಿನೈದು ದಿನ ಕಚೇರಿಗೆ ರಜೆ ಹಾಕಿದ್ದೆ. ಮತ್ತೆ ಡೆಸ್ಕಿಗೆ ಬಂದಾಗ ನೀನು ನನ್ನನ್ನು ನೋಡಿ ಕಳ್ಳಿಯ ಹಾಗೆ ತಲೆತಪ್ಪಿಸಿ ಓಡಾಡುತ್ತಿದ್ದೆ. ಮತ್ತೆ ವಿಚಾರಿಸಿದಾಗ ತಿಳಿಯಿತು...ಯಾವುದೋ ನಿಧನ ಸುದ್ದಿಗೆ ಯಾರದೋ ಹೆಸರನ್ನು ಬರೆಯುವ ಬದಲು ನನ್ನ ಹೆಸರು ಬರೆದು ಬಿಟ್ಟಿದ್ದೆ. ಅದು ಕೆಲವು ಎಡಿಶನ್ಗಳಲ್ಲಿ ಪ್ರಕಟವಾಗಿಯೂ ಬಿಟ್ಟಿತ್ತು.
ನಿನಗೆ ಒಂದು ಹಟವಿತ್ತು. ‘ನೀನು ಒಳ್ಳೆಯ ಕತೆಗಾರ್ತಿ ಎನ್ನುವುದನ್ನು ನಾನು ಒಪ್ಪಿಕೊಳ್ಳಬೇಕು’ ಎಂಬ ಹಟ. ಆದರೆ ಯಾವತ್ತೂ ನಾನು ನಿನ್ನ ಕತೆಯನ್ನುಹೊಗಳುವ ಸಾಹಸಕ್ಕೆ ಹೋಗಿರಲಿಲ್ಲ. ಕಚೇರಿ ಬಿಟ್ಟು ಎಲ್ಲರಿಗೂ ವಿದಾಯ ಹೇಳುವ ದಿನಗಳಲ್ಲಿ, ನಿನಗೊಂದು ಕೃತಿಯನ್ನು ಕೊಟ್ಟಿದ್ದೆ. ಅದರಲ್ಲಿ ‘ಮೆಚ್ಚಿನ ಕತೆಗಾರ್ತಿ’ಯೆಂದು ಬರೆ’ ಎಂದು ಒತ್ತಾಯಿಸಿದ್ದೆ. ಕೆಟ್ಟ ಕತೆಗಾರ್ತಿಗೆ ಎಂದು ಬರೆದೇ ಅದನ್ನು ಕೊಟ್ಟಿದ್ದೆ. ಆಗಷ್ಟೇ ಬಿಡುಗಡೆಗೊಂಡ ನಿನ್ನ ಕೃತಿಯನ್ನು ‘ದ್ವೇಷಪೂರ್ವಕ’ ಎಂದು ಬರೆದು ನನಗೆ ಕೊಟ್ಟು ನೀನು ಸೇಡು ತೀರಿಸಿಕೊಂಡಿದ್ದೆ.. ಇದಾದಬಳಿಕ ನೀನು ಎಲ್ಲೋ ಕಳೆದು ಹೋದೆ. ಯಾವುದೋ ಒಂದು ಪತ್ರಿಕೆಯಲ್ಲಿ ನಿನ್ನ ಕತೆ ನೋಡಿದೆ. ಬಳಿಕ ಬರೆಯುವುದು ನಿಲ್ಲಿಸಿಯೇಬಿಟ್ಟೆಯೇನೋ, ಅಥವಾ ನೀನು ಯಾವ ಕತೆಗಾರನಿಂದ ಕದಿಯುತ್ತಿದ್ದೆಯೋ ಆ ಕತೆಗಾರನೇ ಸತ್ತು ಹೋದನೆ? ನನ್ನ ಏಕಾಂತದಲ್ಲಿಈ ಎಲ್ಲ ಪ್ರಶ್ನೆಗಳು ಹಿತವಾಗಿ ಕಾಡುತ್ತಿದೆ. ಅದೇ ಹಳೆಯ ಮೊಬೈಲ್ ನಂಬರನ್ನು ಮತ್ತೆ ಮತ್ತೆ ಅದುಮುತ್ತಿದ್ದೇನೆ. ‘ಸ್ವಿಚ್ಡ್ ಆಫ್’ ಬರುತ್ತಿದೆ. ಅದನ್ನು ನಿನ್ನ ಧ್ವನಿಯೆಂದೇ ನಂಬಿದ್ದೇನೆ ನಾನು. ಎಲ್ಲಿದ್ದೀಯ ನೀನು?
ನಿನ್ನಲ್ಲಿ ಹೇಳಲೇ ಬೇಕಾಗಿದ್ದ ಒಂದು ಮಾತು ನನ್ನ ಗಂಟಲಲ್ಲಿ ಮುಳ್ಲಿನಂತೆ ಸಿಕ್ಕಿಕೊಂಡಿದೆ. ಹೇಳಲೇಬೇಕಾಗಿದೆ. ಎಲ್ಲಿದ್ದೀಯೆ ನೀನು?
Subscribe to:
Post Comments (Atom)
ಚೆನ್ನಾಗಿದೆ.
ReplyDeleteaakeyannu nodalu nanagu manassaagide....
ReplyDeleteಒಳ್ಳೆ ಪ್ರೇಮ ಕಥೆಯಾಗುತ್ತೆ.... ಯಾರು ಮಾರಾಯ ಈ ಕುಳ್ಳಿ, ಕರ್ಕಿ, ರಾಜಕುಮಾರಿ.....
ReplyDeleteಕಥೆ ಚೆನ್ನಾಗಿದೆ
ReplyDeleteನಿಮ್ಮ ಆ ಪ್ರೀತಿಯ ಕೆಟ್ಟ ಕಥೆಗಾರ್ತಿ , ಬೇಗ ಸಿಂಗಾಪುರದಿಂದ ಹಿಂದಿರುಗಲಿ
ನಿಮ್ಮ ಗಂಟಲಿನ ಮುಳ್ಳು ಅದಸ್ತು ಬೇಗ ಹೊರಗೆ ಬರಲಿ