ಮೊನ್ನೆ ಜಿದ್ದಾದಿಂದ ನನ್ನ ಗೆಳೆಯ ಬಂದಿದ್ದ. ಬರುವಾಗ ನನಗೆಂದೇ ಒಂದು ಪುಟ್ಟ ವಾಕ್‌ಮೆನ್ ತಂದಿದ್ದ. ನನ್ನ ಬಾಲ್ಯ ಗೆಳೆಯನೀತ. ನಾವಿಬ್ಬರು ಕಿತ್ತಾಡಿಕೊಂಡಷ್ಟೂ ಯಾರೂ ಕಿತ್ತಾಡಿಕೊಂಡಿಲ್ಲ. ಪ್ರತಿ ಸಂಜೆ ಜಗಳ ಮಾಡುವುದಕ್ಕೆಂದೇ ಊರಿನ ಮೈದಾನ ಸೇರುತ್ತಿದ್ದೆವೋ ಅನ್ನಿಸುತ್ತದೆ ಈಗ. ಸಂಜೆ ಮೈದಾನದಲ್ಲಿ ಆಟ ಮುಗಿಸಿ ರಾತ್ರಿ ಹತ್ತು, ಹನ್ನೊಂದು ಗಂಟೆಯವರೆಗೆ ಹರಟೆಕೊಚ್ಚುತ್ತಿದ್ದೆವು. ಹಾಗೆಯೇ ಸಾಕಷ್ಟು ಬಾರಿ ಕಿತ್ತಾಡಿಕೊಂಡಿದ್ದೇವೆ. ಒಮ್ಮೆಯಂತೂ ಕಿತ್ತಾಡಿಕೊಂಡು ಎರಡು ವರ್ಷ ಮಾತು ಬಿಟ್ಟಿದ್ದೆವು. ನನ್ನನ್ನು ಸಾಕಷ್ಟು ಗೋಳಾಡಿಸಿದವನೀತ. ಯಾರಿಗಾದರೂ ಅಡ್ಡ ಹೆಸರು ಇಡುವುದರಲ್ಲಿ ಈತ ಪ್ರವೀಣ.
ಈತ ಅತ್ಯುತ್ತಮ ವಾಲಿಬಾಲ್ ಮತ್ತು ಕ್ರಿಕೆಟ್ ಆಟಗಾರ. ಕ್ರಿಕೆಟ್‌ನಲ್ಲಿ ಈತನ ತಂಡ ಸೇರುವುದೆಂದರೆ ನನಗೊಂದು ತರ ಭಯ. ಕ್ಯಾಚ್ ಬಿಟ್ಟಲ್ಲಿ ಆಕಾಶ ಭೂಮಿ ಒಂದು ಮಾಡುತ್ತಿದ್ದ. ಇವನಿಗೆ ಸಿಟ್ಟು ತಲೆಗೇರಿದರೆ ನನ್ನ ಇಡೀ ವಂಶಕ್ಕೇ ಯಥ್ವಾತದ್ವಾ ಬೈಯ್ಯುತ್ತಿದ್ದ. ಒಮ್ಮಿಮ್ಮೆ ಇವನ ಭಯದಿಂದಲೇ ಕ್ಯಾಚ್ ಬಿಡುತ್ತಿದ್ದೆ. ಕೊನೆಕೊನೆಗೆ ಇವನ ಬೈಗಳಿಗೆ ಹೆದರಿಯೇ ನಾನು ಕ್ರಿಕೆಟ್ ಆಡುವುದನ್ನು ಬಿಟ್ಟುಬಿಟ್ಟೆ. ಇಂದು ನನ್ನಲ್ಲಿ ಕ್ರಿಕೆಟ್ ಎಂದರೆ ಜಿಗುಪ್ಸೆ ಬೆಳೆದಿರುವುದಕ್ಕೆ ಇವನ ಪಾಲು ದೊಡ್ಡದಿದೆ. ಅದೇನೇ ಇರಲಿ, ನಮ್ಮಿಬ್ಬರ ಸ್ನೇಹ, ಜಗಳ ಊರಿನಲ್ಲೆಲ್ಲ ತುಂಬಾ ಜನಪ್ರಿಯವಾಗಿತ್ತು.
ಇವನಿಗೆ ಸಾಹಿತ್ಯ, ನಾಟಕ, ಪುಸ್ತಕ ಇತ್ಯಾದಿಗಳ ಗಂಧಗಾಳಿಯಿಲ್ಲ. ಕಾಲೇಜಲ್ಲೂ ಇಂವ ಕ್ರೀಡೆಯಲ್ಲಿ ಮುಂದಿದ್ದರೂ, ಕಲಿಯುವಿಕೆಯಲ್ಲಿ ಹಿಂದಿದ್ದ. ಹೀಗಿರುವಾಗ ಒಮ್ಮೆ ನಮ್ಮ ಯುವಕ ಮಂಡಲದ ವಾರ್ಷಿಕೋತ್ಸವವಿತ್ತು. ಪ್ರತಿ ವಾರ್ಷಿಕೋತ್ಸವಕ್ಕೆ ನಾವೊಂದು ತುಳು ನಾಟಕವನ್ನು ಇಟ್ಟುಕೊಳ್ಳುತ್ತಿದ್ದೆವು. ಅಂದಿನ ನಾಟಕಕ್ಕೆ ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರದ ಅಗತ್ಯವಿತ್ತು. ಕೊನೆಯ ಒಂದು ದೃಶ್ಯದಲ್ಲಿ ಮಾತ್ರ ಈ ಪೊಲೀಸ್ ಅಧಿಕಾರಿ ಕಾಣಿಸಿಕೊಳ್ಳಬೇಕು. ಒಂದೇ ಒಂದು ಡೈಲಾಗ್ ‘ಹ್ಯಾಂಡ್ಸ್‌ಅಪ್’ ಎಂದು ಖಳನಾಯಕನಿಗೆ ಪಿಸ್ತೂಲ್ ತೋರಿಸಿದರೆ ಸಾಕು. ಈ ಪಾತ್ರಕ್ಕೆ ಉತ್ತಮ ಮೈಕಟ್ಟುಳ್ಳ ನನ್ನ ಗೆಳೆಯನನ್ನೇ ಒಪ್ಪಿಸಲಾಯಿತು. ಎಲ್ಲರ ಒತ್ತಾಯದ ಮೇರೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ ನಿರ್ವಹಿಸಲು ಆತ ಕೊನೆಗೂ ಒಪ್ಪಿದ. ಒಂದು ತಿಂಗಳಿರುವಾಗಲೇ ಆತ ಆ ಪಾತ್ರದ ಆ ಒಂದೇ ಒಂದು ಡೈಲಾಗ್ ‘ಹ್ಯಾಂಡ್ಸ್‌ಅಪ್’ನ್ನು ಬಾಯಿಪಾಠ ಮಾಡಲು ಶುರು ಮಾಡಿದ. ಅವನ ಆತಂಕ, ಸಿದ್ಧತೆ ಒಂದು ತಮಾಷೆಯೇ ಆಗಿತ್ತು. ಕೊನೆಗೂ ನಾಟಕದ ದಿನ ಬಂದೇ ಬಿಟ್ಟಿತು. ನಾಟಕವೇನೋ ಚೆನ್ನಾಗಿ ಬಂತು. ಕೊನೆಯ ದೃಶ್ಯದಲ್ಲಿ ಈತನೂ ಪ್ರವೇಶ ಮಾಡಿದ. ಆದರೆ ಪಿಸ್ತೂಲ್‌ತೋರಿಸುವಾಗ ತನ್ನ ಆ ಒಂದು ಡೈಲಾಗನ್ನು ಮರೆತೇ ಬಿಟ್ಟಿದ್ದ. ‘‘ಹ್ಯಾಂಡ್ಸ್‌ಪ್’ ಎಂದು ಹೇಳುವ ಬದಲಿಗೆ ಆತ ‘ಶಟಪ್’ ಎಂದು ಹೇಳಿ ಬಿಟ್ಟಿದ್ದ. ಅವನ ತಪ್ಪು ಡೈಲಾಗ್ ನಮ್ಮಂತಹ ಕೆಲವರಿಗಷ್ಟೇ ಗೊತ್ತಾಗಿತ್ತು. ನಾವೆಲ್ಲ ನಕ್ಕಿದ್ದೇ ನಕ್ಕಿದ್ದು.
ಮೊನ್ನೆ ಅದನ್ನು ಆತನಿಗೆ ನೆನಪಿಸಿ, ಮತ್ತೊಮ್ಮೆ ಜೊತೆಯಾಗಿ ನಕ್ಕೆವು.
ಅಭ್ಯಾಸಬಲ!
ReplyDeleteಗೆಳೆತನ ಮಧುರ .... ಅದರ ನೆನಪು ಅಮರ ..
ReplyDelete