Thursday, May 12, 2011

ಇಲ್ಲೊಂದಿಷ್ಟು ನಮ್ಮ ನಿಮ್ಮ ಕತೆಗಳು...


ಮಾವಿನ ಮರ
ಸದಾ ತುಂಟಾಟದಲ್ಲಿ ಕಳೆಯುತ್ತಿದ್ದ, ಕಲಿಕೆಯಲ್ಲಿ ಹಿಂದುಳಿದಿದ್ದ ಮಗನಿಗೆ ಬೈದು, ಬೈದು ತಂದೆತಾಯಿಗಳು ಸುಸ್ತಾದರು.

ಕೊನೆಗೆ, ‘ಇನ್ನು, ಮಗನಿಗೆ ಬೈಯುವುದು ಬೇಡ. ಅವನ ಮೇಲೆ ಸಿಟ್ಟು ಬಂದರೆ, ಹಿತ್ತಲಲ್ಲಿರುವ ಮಾವಿನ ಮರಕ್ಕೆ ಬೈಯುವ’ ಎಂದು ದಂಪತಿ ನಿರ್ಧರಿಸಿದರು.

ಹಾಗೆಯೇ ಮಗನನ್ನು ಅವನ ಪಾಡಿಗೆ ಬಿಟ್ಟು, ಸಿಟ್ಟು ಬಂದಾಗಲೆಲ್ಲ, ಮಾವಿನ ಮರದ ಸಮೀಪ ಬಂದು ಅದಕ್ಕೆ ಬೈಯತೊಡಗಿದರು.

ಒಂದೇ ತಿಂಗಳಲ್ಲಿ
ಮಾವಿನ ಮರ ಒಣಗಿ, ಸತ್ತೇ ಹೋಯಿತು. ಆದರೆ ಬಾಡಿ ಹೋಗಿದ್ದ ಮಗ, ಒಂದೇ ತಿಂಗಳಲ್ಲಿ ಚಿಗುರು ಬಿಟ್ಟ ಮಾವಿನ ಮರದಂತೆ ನಳನಳಿಸತೊಡಗಿದ.

ಮಗಳು

ಒಬ್ಬ ಖೈದಿ 15 ವರ್ಷ ಜೈಲಲ್ಲಿ ಕಳೆದು ಬಿಡುಗಡೆಗೊಂಡ.
ಅವನಿಗೊಬ್ಬಳು ಪುಟ್ಟ ಮಗಳಿದ್ದಳು. ನೇರ ಮನೆಗೆ ಹೋಗಿ ಆ ಮಗಳನ್ನು ಭೇಟಿ ಮಾಡಬೇಕು...

ಜೈಲಲ್ಲಿ ದುಡಿದು ಜೋಪಾನವಾಗಿಟ್ಟ ಹಣವನ್ನು ಬಿಚ್ಚಿದ.

ಅವಸರವಸರದಲ್ಲಿ ಬಟ್ಟೆಯಂಗಡಿಗೆ ಹೋಗಿ, ಪುಟ್ಟ ಚಿಟ್ಟೆಯಾಕಾರಾದ ಅಂಗಿಯನ್ನು ಮಗುವಿಗಾಗಿ ಕೊಂಡ.

ಮನೆ ತಲುಪುತ್ತಾನೆ.
ಬಾಗಿಲು ತೆರೆಯಿತು.
ಸೀರೆ ಉಟ್ಟ ತರುಣಿಯೊಬ್ಬಳು ಬಾಗಿಲ ಮರೆಯಿಂದ ಇಣುಕಿದಳು.

‘‘ಅಮ್ಮಾ ಅಪ್ಪ ಬಂದ...’’ ಎಂದು ಒಳ ಓಡಿದಳು.


ಪ್ರೀತಿ
ಒಂದು ಸುಂದರವಾದ ಹಾಡು.

ತರುಣಿಯೊಬ್ಬಳ ಕಿವಿಗೆ ಬಿತ್ತು.
ಆ ಹಾಡಿಗೆ ಮನಸೋತ ಅವಳು ಹಾಡುಗಾರನನ್ನು ಪ್ರೀತಿಸತೊಡಗಿದಳು.

ಹಾಡಿದವನನ್ನು ಹುಡುಕಿ ನಡೆದಳು.
ಕೊನೆಗೂ ಹಾಡುತ್ತಿರುವವನು ಸಿಕ್ಕಿದ.
ಅವನೊಬ್ಬ ಕುರೂಪಿ. ಕುಷ್ಠ ರೋಗ ಪೀಡಿತನಾಗಿದ್ದ.

ತರುಣಿ ತನ್ನಲ್ಲ್ಲಿದ್ದ ಒಂದು ರೂಪಾಯಿ ನಾಣ್ಯವನ್ನು ಅವನ ಮುಂದೆ ಎಸೆದು, ಅಲ್ಲಿಂದ ನಡೆದಳು.


ತೊರೆ

ದೂರದಿಂದ ಒಂದು ತೊರೆ ತನ್ನೆಡೆಗೆ ಬರುವುದು ನೋಡಿತು, ಆ ವಿಶಾಲ ನದಿ.

ನದಿ ಕೂಗಿ ಹೇಳಿತು ‘‘ಸಣ್ಣ ಪುಟ್ಟ ತೊರೆಗಳೆಲ್ಲ ನನ್ನನ್ನು ಸೇರಬಾರದು. ನಾನು ನದಿ. ತೊರೆಗಳಿಗೆ ಇಲ್ಲಿ ಪ್ರವೇಶವಿಲ್ಲ’’

ತೊರೆಗಳೆಲ್ಲ ತಮ್ಮ ದಿಕ್ಕುಗಳನ್ನು ಬದಲಿಸಿ ಒಂದು ಸೇರಿದವು.

ಒಟ್ಟು ಸೇರಿ ಅವುಗಳೇ ದೊಡ್ಡ ನದಿಯಾದವು.
ತೊರೆಯ ಬಲವಿಲ್ಲದ ನದಿ, ಈಗ ತೀರಾ ಬಡಕಲಾಗಿ, ತೊರೆಗಿಂತಲೂ ಸೂಪೂರವಾಗಿ ದಾರಿ ಮಧ್ಯೆಯೇ ಇಲ್ಲವಾಯಿತು.


ನರ್ತನ

ಒಂದು ಕಾಗೆ ಮತ್ತು ನವಿಲು ಭೇಟಿ ಮಾಡಿತು.

ನವಿಲು ಕೇಳಿತು.
‘‘ಎಲ್ಲಿಗೆ ಹೊರಟೆ?’’ ‘‘ನಮ್ಮ ಕುಟುಂಬದೊಳಗೆ ಒಂದು ಸಮಾರಂಭವಿದೆ. ಅಲ್ಲಿ ನರ್ತಿಸುವುದಕ್ಕೆ ಹೊರಟಿದ್ದೇನೆ?’’ ನವಿಲಿಗೆ ಅಶ್ಚರ್ಯವಾಯಿತು.
ಕಾಗೆ ನರ್ತಿಸುವುದೇ?
ನವಿಲು ಕುತೂಹಲದಿಂದ ಕೇಳಿತು ‘‘ನಾನು ಬರಲೇ, ನರ್ತಿಸುವುದಕ್ಕೆ’’
ಕಾಗೆ ಒಪ್ಪಿತು.
ಇಬ್ಬರು ಕಾಗೆಗಳ ಸಮಾರಂಭಕ್ಕೆ ಹೋದರು. ಕಾಗೆಗಳೇ ಪ್ರೇಕ್ಷಕರು.

ಮೊದಲು ನವಿಲು ನರ್ತಿಸಿತು. ಕಾಗೆಗಳೆಲ್ಲ ಪರಸ್ಪರ ವಿಚಿತ್ರವಾಗಿ ನೋಡತೊಡಗಿದವು. ಬೇಸರದಿಂದ ಆಕಳಿಸತೊಡಗಿದವು.

ಬಳಿಕ ಕಾಗೆ ನರ್ತಿಸಿತು. ಈಗ ಕಾಗೆಗಳೆಲ್ಲ ಹುಚ್ಚೆದ್ದು ಚಪ್ಪಾಳೆ ತಟ್ಟಿದವು. ‘ವನ್ಸ್‌ಮೋರ್’ ಎಂದವು.
ಕಾಗೆಗಳ ಲೋಕದಲ್ಲಿ ಕಾಗೆ ಮಾತ್ರ ನರ್ತಿಸಬೇಕು ಎನ್ನುವುದು ನವಿಲಿಗೆ ತಡವಾಗಿ ಹೊಳೆಯಿತು.

ನೀರು!
‘‘ಆತ ಅದೆಷ್ಟು ಶ್ರೀಮಂತನೆಂದರೆ ಹಣವನ್ನು ನೀರಿನಂತೆ ಚೆಲ್ಲುತ್ತಿದ್ದಾನೆ...’’

ಇನ್ನೊಂದು ಇಪ್ಪತ್ತು ವರ್ಷದ ಬಳಿಕ ಈ ಮಾತು ಯಾವ ರೂಪ ಪಡೆಯಬಹುದು?

‘‘ಆತ ಅದೆಷ್ಟು ಮೂರ್ಖನೆಂದರೆ ನೀರನ್ನು ಹಣದಂತೆ ಚೆಲ್ಲುತ್ತಿದ್ದಾನೆ...’’

ಆಟ
ಸೋಲು
ನಿಶ್ಚಿತವಾಗಿತ್ತು.
ಆದರೂ ಆಟಗಾರರು ಆಡಲೇ ಬೇಕಾಗಿತ್ತು.

ಬದುಕೇ ಹೀಗೆ.
ಕೆಲವೊಮ್ಮೆ ಸೋಲು ಘೋಷಣೆಯಾಗಿ ಬಿಡುತ್ತದೆ.
ಆದರೆ ಆಟದ ಬಯಲಿನಿಂದ ಹೊರಗೆ ಹೋಗುವಂತಿಲ್ಲ.
ಆಡಲೇ ಬೇಕು.
ಇಂತಹ ಆಟ ತುಂಬ ಕಷ್ಟ.

ಆದರೆ ಆಟಗಾರನ ಸಾಮರ್ಥ್ಯವನ್ನು ನಿರ್ಧರಿಸುವುದು ಇಂತಹದೇ ಆಟ.

ಭಿಕ್ಷೆ

ಅವಳು ಭಿಕ್ಷೆ
ಬೇಡುತ್ತಿದ್ದಳು. ‘‘ಅಣ್ಣಾ....ಭಿಕ್ಷೆ ಕೊಡಿ’’
ಆತ ಧನಿಕ. ಹೂಂಕರಿಸಿ ಹೇಳಿದ ‘‘ಕೈಕಾಲಿದೆಯಲ್ಲ, ಮತ್ತೇಕೆ ನಿನಗೆ ಭಿಕ್ಷೆ ನೀಡಬೇಕು? ಅರ್ಹರಿಗಷ್ಟೇ ನಾನು ಭಿಕ್ಷೆಯನ್ನು ಕೊಡುತ್ತೇನೆ’’

ಆಕೆ ಅಬ್ಬರಿಸಿ ಕೇಳಿದಳು ‘‘ಭಿಕ್ಷೆಯನ್ನು ಅರ್ಹರಿಗೆ ಮಾತ್ರ ನೀಡಬೇಕೆಂಬ ನಿಯಮವಿದ್ದಿದ್ದರೆ, ದೇವರು ನಿನಗೇಕೆ ಇಷ್ಟು ಧನಸಂಪತ್ತನ್ನು
ಕೊಡುತ್ತಿದ್ದ?’’

5 comments:

  1. ಸರ್, ತುಂಬಾ ಒಳ್ಳೆಯ ಕಥೆಗಳು ..
    ಹಂಚಿದಕ್ಕೆ ಧನ್ಯವಾದಗಳು

    ReplyDelete
  2. good writings basheer bhai keep it up
    khalid

    ReplyDelete
  3. This comment has been removed by the author.

    ReplyDelete
  4. ಸರ್, 'ಪ್ರೀತಿ' ಹೆಸರಿನಲ್ಲಿರುವ 'ಜ್ಹಲಕ್' ಜನ್ನನ 'ಯಶೋಧರ ಚರಿತೆ'ಯ ಕ್ಲೈಮಾಕ್ಸ್ ಬದಲಾಯಿಸಿದಂತಿದೆ...

    ReplyDelete
  5. Nimma angadige beti kottaga thumba khushiyagutthade..

    ReplyDelete