Thursday, June 9, 2011
ಇನ್ನಷ್ಟು ಕತೆಗಳೊಂದಿಗೆ ಸಂತ...
ರಸ್ತೆ
ಸಂತ ಆ ರಸ್ತೆಯಲ್ಲಿ ಸಾಗುತ್ತಿದ್ದ.
ಸುಂಕದವ ತಡೆದು ಕೇಳಿದ ‘‘ರಸ್ತೆಯ ಸುಂಕವನ್ನು ಕಟ್ಟಿದ್ದೀಯ?’’
‘‘ರಸ್ತೆಗೆ ಸುಂಕವನ್ನೇಕೆ ಕಟ್ಟಬೇಕು?’’ಸಂತ ಅಚ್ಚರಿಯಿಂದ ಕೇಳಿದ.
ಸುಂಕದವ ಹೇಳಿದ ‘‘ನಮ್ಮ ಅರಸರು ಕಟ್ಟಿದ ರಸ್ತೆಯಲ್ಲಿ ನಡೆಯುತ್ತಿದ್ದೀಯ. ಅದಕ್ಕೆ’’
ಅವನು ನಕ್ಕು ಹೇಳಿದ ‘‘ನಮ್ಮ ಗುರಿಯನ್ನು ನಾವು ಮುಟ್ಟಬೇಕಾದರೆ ನಮ್ಮ ರಸ್ತೆಯನ್ನು ನಾವೇ ನಿರ್ಮಾಣ ಮಾಡಿಕೊಳ್ಳಬೇಕು. ನಿಮ್ಮ ಅರಸ ಕಟ್ಟಿದ ರಸ್ತೆಯಲ್ಲಿ ನಾನು ನನ್ನ ಗುರಿಯನ್ನು ಹೇಗೆ ಮುಟ್ಟಿಯೇನು? ನಾನು ನಡೆಯುತ್ತಿರುವುದು ನಾನು ಕಟ್ಟಿದ ರಸ್ತೆಯಲ್ಲಿ’’ ಎನ್ನುತ್ತಾ ಸುಂಕದವನನ್ನು ಬದಿಗೆ ತಳ್ಳಿ ಅವನು ಮುಂದೆ ನಡೆದ.
ಸುಂಕದವ ಒಪ್ಪಲಿಲ್ಲ. ಸಂತನ ಹಿಂದೆಯೇ ಬಂದ.
ಸಂತ ಆತನಿಗೆ ಸ್ಪಷ್ಟ ಪಡಿಸಿದ ‘‘ಈ ರಸ್ತೆ ಅರಸನ ಆಸ್ಥಾನದವರೆಗೆ ಮಾತ್ರ ಹೋಗಬಲ್ಲುದು. ನಾನೋ...ಈ ಭೂಮಿಯ ಕಟ್ಟ ಕಡೆಯ ಅಂಚಿನ ಗುರಿಯನ್ನು ಹೊಂದಿದ್ದೇನೆ. ನಿನ್ನ ಅರಸ ಅಲ್ಲಿಯವರೆಗೂ ರಸ್ತೆ ಕಟ್ಟಿದ್ದಾನೆಯೇ? ಹಾಗಾದರೆ ಮಾತ್ರ ನಾನು ಸುಂಕವನ್ನು ತೆರಬಲ್ಲೆ’’
ಯಜಮಾನ!
ಅದು ಬರಗಾಲದ ಕಾಲ.
ಮಳೆಗಾಲ ಬಂದಿದ್ದರೂ ಮಳೆ ಸುರಿದಿರಲೇ ಇಲ್ಲ.
ಮಳೆಗಾಲ ಮುಗಿಯುತ್ತಾ ಬಂತು. ಹೀಗಾದರೆ ಈ ಬಾರಿ ಅನ್ನ ಆಹಾರಗಳಿಗೆ ಹಾಹಾಕಾರ ಏಳುತ್ತದೆ ಎನ್ನುವುದು ಬೀದಿಯಲ್ಲಿದ್ದ ಸಂತನಿಗೆ ಅರ್ಥವಾಯಿತು.
ಊರಿಗೆ ಊರೇ ಬರಗಾಲದಿಂದ ತತ್ತರಿಸಿದರೆ ಏನು ಮಾಡುವುದು?
ಆಶ್ರಮದ ಗದ್ದೆಗಳಂತೂ ಸಂಪೂರ್ಣ ಸುಟ್ಟು ಹೋಗಿದ್ದವು. ದನಕರುಗಳು ಎಲುಬು ಗೂಡಾಗಿದ್ದವು. ಸಂತ ಕಳವಳಗೊಂಡ.
ಅಂದು ಬೀದಿಯಲ್ಲಿ ಎಲ್ಲರ ಮುಖಗಳು ಕಳಾಹೀನವಾಗಿದ್ದವು.
ಆದರೆ ಇದ್ದಕ್ಕಿದ್ದಂತೆ ಒಬ್ಬ ಕರಿಯ ಗುಲಾಮ ನಗುತ್ತಾ ತನೆಗೆದುರಾಗುತ್ತಿರುವುದನ್ನು ಸಂತ ಕಂಡ.
ಆತನ ಮುಖದಲ್ಲಿರುವ ಮಂದಸ್ಮಿತ ಅವನನ್ನು ಅಚ್ಚರಿಗೊಳಿಸಿತು.
ಸಂತ ಕೇಳಿದ ‘‘ಇಡೀ ಊರು ಬರಗಾಲದಿಂದ ಭಯಭೀತವಾಗಿದೆ. ಆದರೆ ನೀನು ಮಾತ್ರ ಆರಾಮವಾಗಿದ್ದೀಯಲ್ಲ...’’
ಗುಲಾಮ ಹೇಳಿದ ‘‘ ನನ್ನ ಯಜಮಾನ ಒಂದು ಸಾವಿರ ಎಕರೆ ಭೂಮಿಯ ಯಜಮಾನ. ಎರಡು ವರ್ಷಕ್ಕೆ ಆಗುವಷ್ಟು ಧಾನ್ಯ ಅವನಲ್ಲಿ ಸಂಗ್ರಹವಿದೆ. ನನಗೆ ಬೇಕಾದ ಆಹಾರ ಅವನು ನೀಡದೇ ಇರುತ್ತಾನೆಯೆ?’’
ಸಂತನಿಗೆ ನಾಚಿಕೆಯಾಯಿತು.
ತನ್ನ ಶಿಷ್ಯರನ್ನು ಕರೆದು ಹೇಳಿದ ‘‘ನೋಡಿ, ಇವನೇ ಇನ್ನು ಮುಂದೆ ನಮ್ಮೆಲ್ಲರ ಗುರು. ನಮ್ಮ ಯಜಮಾನನೋ ಇಡೀ ಬ್ರಹ್ಮಾಂಡಕ್ಕೆ ಒಡೆಯ. ನಮ್ಮ ಯಜಮಾನನ ಸಂಗ್ರಹವೋ ಎಂದೂ ಮುಗಿಯದೇ ಇರುವುದು. ಆದರೆ ನಾವು ಅವನ ಮೇಲೆ ಭರವಸೆಯಿಡದೆ ಸುಮ್ಮ ಸುಮ್ಮಗೆ ಹೆದರಿ ಬಿಟ್ಟೆವು. ಹೋಗೋಣ... ನಮ್ಮ ಗದ್ದೆಯಲ್ಲಿ ಕೈಲಾದ ದುಡಿಮೆ ಮಾಡೋಣ. ಅವನ ಖಜಾನೆಯ ಬಾಗಿಲನ್ನು ತಟ್ಟೋಣ... ಒಂದು ಸಾವಿರ ಎಕರೆ ಭೂಮಿಯ ಈತನ ಯಜಮಾನ ಈತನ ಕೈ ಬಿಡುವುದಿಲ್ಲವೆಂದಾದರೆ, ನಮ್ಮ ಯಜಮಾನರ ಕುರಿತಂತೆ ನಮಗೇಕೆ ನಿರಾಸೆ?’’
ಭೂಮಿ ಮತ್ತು ನೀರು
ತುಂಡು ಭೂಮಿಗಾಗಿ ಎರಡು ರಾಜರು ಯುದ್ಧಕ್ಕೆ ನಿಂತರು.
ಯಾವ ಕಾರಣಕ್ಕೂ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಇಕ್ಕೆಡೆಯ ಸೈನಿಕರು ಚೀರಿದರು. ‘‘ನಮ್ಮ ಭೂಮಿ...ನಮ್ಮ ಭೂಮಿ’’ ಎಂದು ಒಬ್ಬರ ಮೇಲೆ ಒಬ್ಬರು ಎರಗಿದರು.
ಈಟಿ ಚುಚ್ಚಿತು. ರಕ್ತ ಚಿಮ್ಮಿತು.
ಎರಡೂ ಬಲಾಢ್ಯ ಸೈನ್ಯಗಳೇ. ಉಭಯ ದಳಗಳೂ ಹಗಲು ರಾತ್ರಿ ಹೋರಾಡಿದವು.
ಸೈನಿಕರೆಲ್ಲ ಕೈ, ಕಾಲು ಕಳೆದುಕೊಂಡು ಗಾಯಗಳ ನಡುವೆ ಚೀರ ತೊಡಗಿದರು.
ಅಂದ ಹಾಗೆ, ಭೂಮಿ ಭೂಮಿ ಎಂದು ಚೀರಿ ಯುದ್ಧಕ್ಕಿಳಿದ ಅವರೆಲ್ಲ ‘ನೀರು...ನೀರು...’ ಎಂದು ಸಾವಿನ ಮನೆಯ ಅಂಚಿನಲ್ಲಿ ಕುಳಿತು ಹಳಹಳಿಸತೊಡಗಿದ್ದರು.
ಅವರಾರೂ ‘ಭೂಮಿ ಭೂಮಿ’ ಎನ್ನದಿರುವುದು ವಿಶೇಷವಾಗಿತ್ತು.
ಪಾಸು-ಫೇಲು
ಶಾಲೆಯಲ್ಲಿ ಫಲಿತಾಂಶ ಹೊರಬಿತ್ತು.
ಮೇಷ್ಟ್ರು ಹೇಳಿದರು ‘‘ನೀನು ಪಾಸು’’
ಹುಡುಗ ಕುಣಿಯುತ್ತಾ ಶಾಲೆಯಿಂದ ಹೊರ ಬಿದ್ದ.
ದಾರಿಯಲ್ಲಿ ಹೀಗೆ ನಡೆಯುತ್ತಾ ಹೋಗುವಾಗ ಒಂದು ಮರ ಕೇಳಿತು... ‘‘ನನ್ನನ್ನು ನೀನು ಹತ್ತ ಬಲ್ಲೆಯಾ?’’
ಹುಡುಗ ‘‘ಇಲ್ಲ’’ ಎಂದ.
ತಲೆ ಕುಣಿಸುತ್ತಿದ್ದ ಹೂವಿನ ಗಿಡ ಕೇಳಿತು ‘‘ಈ ಹೂವಿನ ಹೆಸರು ಬಲ್ಲೆಯಾ?’’
ಹುಡುಗ ‘‘ಇಲ್ಲ’’ ಎಂದ.
ಅಲ್ಲೇ ಬಿದ್ದಿದ್ದ ಸೈಕಲ್ ಕೇಳಿತು ‘‘ನನ್ನನ್ನು ನೀನು ತುಳಿಯ ಬಲ್ಲೆಯ?’’
ಹುಡುಗ ‘‘ಇಲ್ಲ’’ ಎಂದ.
ಮುಂದೆ ನದಿಯೊಂದು ಎದುರಾಯಿತು. ಕೇಳಿತು ‘‘ನನ್ನನ್ನು ನೀನು ಈಜಬಲ್ಲೆಯಾ?’’
ಹುಡುಗ ‘‘ಇಲ್ಲ’’ ಎಂದ. ತೂಗಾಡುತ್ತಿದ್ದ ಮಾವಿನ ಗೊಂಚಲು ಕೇಳಿತು ‘‘ನನ್ನನ್ನು ನೀನು ಉದುರಿಸಬಲ್ಲೆಯ?’’
ಹುಡುಗ ‘‘ಇಲ್ಲ’’ ಎಂದ.
ಎದುರಾದ ಬೆಟ್ಟ ಕೇಳಿತು ‘‘ನನ್ನನ್ನು ನೀನು ಏರ ಬಲ್ಲೆಯ?’’
ಹುಡುಗ ‘‘ಇಲ್ಲ’’ ಎಂದ.
ಬದುಕು ಹೇಳಿತು ‘‘ಹಾಗಾದರೆ ನೀನು ಫೇಲು’’
ಸಿದ್ಧತೆ
ಸಂತ ಆಶ್ರಮದ ಹಿತ್ತಲಲ್ಲಿ ತರಕಾರಿ ತೋಟದ ಮುಂದೆ ನಿಂತಿದ್ದ.
ನೀರಿನ ಕೊರತೆಯಿಂದ ಗಿಡಗಳು ಕೆಂಪಾಗಿದ್ದವು.
ಸಂತನ ಬಳಿಗೆ ಶಿಷ್ಯ ಓಡೋಡಿ ಬಂದ. ‘ಗುರುಗಳೇ, ಪರ್ಷಿಯಾದ ಶ್ರೇಷ್ಠ ಸಂತನೊಬ್ಬ ನಮ್ಮ ಆಶ್ರಮದೆಡೆಗೆ ಬರುತ್ತಿದ್ದಾರೆ...’
ಶಿಷ್ಯನ ಮಾತು ಕೇಳಿ ‘‘ಹೌದೆ?’’ ಎಂದು ಕೇಳಿ ತನ್ನ ಕೆಲಸದಲ್ಲಿ ಮಗ್ನನಾದ.
‘‘ಗುರುಗಳೇ, ಆ ಶ್ರೇಷ್ಠ ಸಂತರು ನಿಮ್ಮನ್ನು ಭೇಟಿಯಾಗಲು ಬರುತ್ತಿದ್ದಾರೆ. ಅವರನ್ನು ಸ್ವಾಗತಿಸಲು ನಾವು ಸಿದ್ಧರಾಗಬೇಡವೆ?’’
‘‘ಹೌದೌದು ಸಿದ್ಧರಾಗಬೇಕು. ಕೊಟ್ಟಿಗೆಯಲ್ಲಿ ಹದಿನೈದು ಗುದ್ದಲಿಗಳಿವೆ. ಅವುಗಳನ್ನು ತಕ್ಷಣ ತಾ. ಒಂದು ಶ್ರೇಷ್ಠ ಸಂತರಿಗೆ, ಉಳಿದದ್ದು ಅವರ ಶಿಷ್ಯರಿಗೆ. ಇಂದು ನಾವೆಲ್ಲ ಒಟ್ಟು ಸೇರಿ, ಅರ್ಧದಲ್ಲಿ ನಿಂತಿರುವ ಬಾವಿಯನ್ನು ತೋಡಿ ಮುಗಿಸೋಣ...’’
ಛೇ!
ಅದು ಧ್ಯಾನದ ಹೊತ್ತು.
ಸಂತ ಮತ್ತು ಶಿಷ್ಯರು ಮುಂಜಾನೆ ಎಂದಿನಂತೆ ಧ್ಯಾನಕ್ಕೆ ಅಣಿಯಾದರು.
ಸಂತನ ಪ್ರೀತಿಯ ಶಿಷ್ಯ ಮಾತ್ರ ಇನ್ನೂ ಎದ್ದಿರಲಿಲ್ಲ.
ಶಿಷ್ಯನ ನಿದ್ದೆ ಅದೆಷ್ಟು ಆಳವಾಗಿತ್ತೆಂದರೆ ಸಂತನಿಗೆ ಆ ನಿದ್ದೆಯನ್ನು ಕಲಕುವ ಮನಸ್ಸಾಗಲಿಲ್ಲ. ಆದುದರಿಂದ ತನ್ನ ಉಳಿದ ಶಿಷ್ಯರೊಂದಿಗೆ ಧ್ಯಾನವನ್ನು ಮುಗಿಸಿದ.
ಧ್ಯಾನ ಮುಗಿದ ಹೊತ್ತಿಗೆ ಶಿಷ್ಯನಿಗೆ ಎಚ್ಚರಿಕೆಯಾಯಿತು.
ನೋಡಿದರೆ ಧ್ಯಾನದ ಹೊತ್ತು ಕಳೆದಿತ್ತು.
ಆಗಾಧ ನಿರಾಶೆ, ಪಶ್ಚಾತ್ತಾಪ, ದುಃಖದಿಂದ ಶಿಷ್ಯ ‘‘ಛೇ...!’’ ಎಂದು ಉದ್ಗರಿಸಿದ.
ಅದನ್ನು ಆಲಿಸಿದ ಸಂತ ಆಸೆಯಿಂದ ಶಿಷ್ಯನ ಬಳಿ ಬಂದು ಕೇಳಿದ ‘‘ಶಿಷ್ಯ, ನನ್ನ ಜೀವಮಾನದಲ್ಲಿ ನಾನು ಮಾಡಿದ ಧ್ಯಾನದ ಪ್ರತಿಫಲವನ್ನೆಲ್ಲ ನಿನಗೆ ಕೊಡುತ್ತೇನೆ. ಬದಲಿಗೆ ನೀನೀಗ ಉದ್ಗರಿಸಿದ ‘ಛೇ...!’ ಎನ್ನುವ ಉದ್ಗಾರದ ಪ್ರತಿಫಲವನ್ನು ನನಗೆ ಕೊಡುವೆಯ?’’
Subscribe to:
Post Comments (Atom)
ಈ ಕಥೆಗಳ ಸಂತ ಯಾರೆಂದು ತಿಳಿಯಬಹುದಾ
ReplyDeleteಅದ್ಬುತ ಕಥೆಗಳು
ಚೆನ್ನಾಗಿವೆ ಸರ್.
ReplyDelete