ಮೊನ್ನೆ ಜಿದ್ದಾದಿಂದ ನನ್ನ ಗೆಳೆಯ ಬಂದಿದ್ದ. ಬರುವಾಗ ನನಗೆಂದೇ ಒಂದು ಪುಟ್ಟ ವಾಕ್ಮೆನ್ ತಂದಿದ್ದ. ನನ್ನ ಬಾಲ್ಯ ಗೆಳೆಯನೀತ. ನಾವಿಬ್ಬರು ಕಿತ್ತಾಡಿಕೊಂಡಷ್ಟೂ ಯಾರೂ ಕಿತ್ತಾಡಿಕೊಂಡಿಲ್ಲ. ಪ್ರತಿ ಸಂಜೆ ಜಗಳ ಮಾಡುವುದಕ್ಕೆಂದೇ ಊರಿನ ಮೈದಾನ ಸೇರುತ್ತಿದ್ದೆವೋ ಅನ್ನಿಸುತ್ತದೆ ಈಗ. ಸಂಜೆ ಮೈದಾನದಲ್ಲಿ ಆಟ ಮುಗಿಸಿ ರಾತ್ರಿ ಹತ್ತು, ಹನ್ನೊಂದು ಗಂಟೆಯವರೆಗೆ ಹರಟೆಕೊಚ್ಚುತ್ತಿದ್ದೆವು. ಹಾಗೆಯೇ ಸಾಕಷ್ಟು ಬಾರಿ ಕಿತ್ತಾಡಿಕೊಂಡಿದ್ದೇವೆ. ಒಮ್ಮೆಯಂತೂ ಕಿತ್ತಾಡಿಕೊಂಡು ಎರಡು ವರ್ಷ ಮಾತು ಬಿಟ್ಟಿದ್ದೆವು. ನನ್ನನ್ನು ಸಾಕಷ್ಟು ಗೋಳಾಡಿಸಿದವನೀತ. ಯಾರಿಗಾದರೂ ಅಡ್ಡ ಹೆಸರು ಇಡುವುದರಲ್ಲಿ ಈತ ಪ್ರವೀಣ.
ಈತ ಅತ್ಯುತ್ತಮ ವಾಲಿಬಾಲ್ ಮತ್ತು ಕ್ರಿಕೆಟ್ ಆಟಗಾರ. ಕ್ರಿಕೆಟ್ನಲ್ಲಿ ಈತನ ತಂಡ ಸೇರುವುದೆಂದರೆ ನನಗೊಂದು ತರ ಭಯ. ಕ್ಯಾಚ್ ಬಿಟ್ಟಲ್ಲಿ ಆಕಾಶ ಭೂಮಿ ಒಂದು ಮಾಡುತ್ತಿದ್ದ. ಇವನಿಗೆ ಸಿಟ್ಟು ತಲೆಗೇರಿದರೆ ನನ್ನ ಇಡೀ ವಂಶಕ್ಕೇ ಯಥ್ವಾತದ್ವಾ ಬೈಯ್ಯುತ್ತಿದ್ದ. ಒಮ್ಮಿಮ್ಮೆ ಇವನ ಭಯದಿಂದಲೇ ಕ್ಯಾಚ್ ಬಿಡುತ್ತಿದ್ದೆ. ಕೊನೆಕೊನೆಗೆ ಇವನ ಬೈಗಳಿಗೆ ಹೆದರಿಯೇ ನಾನು ಕ್ರಿಕೆಟ್ ಆಡುವುದನ್ನು ಬಿಟ್ಟುಬಿಟ್ಟೆ. ಇಂದು ನನ್ನಲ್ಲಿ ಕ್ರಿಕೆಟ್ ಎಂದರೆ ಜಿಗುಪ್ಸೆ ಬೆಳೆದಿರುವುದಕ್ಕೆ ಇವನ ಪಾಲು ದೊಡ್ಡದಿದೆ. ಅದೇನೇ ಇರಲಿ, ನಮ್ಮಿಬ್ಬರ ಸ್ನೇಹ, ಜಗಳ ಊರಿನಲ್ಲೆಲ್ಲ ತುಂಬಾ ಜನಪ್ರಿಯವಾಗಿತ್ತು.
ಇವನಿಗೆ ಸಾಹಿತ್ಯ, ನಾಟಕ, ಪುಸ್ತಕ ಇತ್ಯಾದಿಗಳ ಗಂಧಗಾಳಿಯಿಲ್ಲ. ಕಾಲೇಜಲ್ಲೂ ಇಂವ ಕ್ರೀಡೆಯಲ್ಲಿ ಮುಂದಿದ್ದರೂ, ಕಲಿಯುವಿಕೆಯಲ್ಲಿ ಹಿಂದಿದ್ದ. ಹೀಗಿರುವಾಗ ಒಮ್ಮೆ ನಮ್ಮ ಯುವಕ ಮಂಡಲದ ವಾರ್ಷಿಕೋತ್ಸವವಿತ್ತು. ಪ್ರತಿ ವಾರ್ಷಿಕೋತ್ಸವಕ್ಕೆ ನಾವೊಂದು ತುಳು ನಾಟಕವನ್ನು ಇಟ್ಟುಕೊಳ್ಳುತ್ತಿದ್ದೆವು. ಅಂದಿನ ನಾಟಕಕ್ಕೆ ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರದ ಅಗತ್ಯವಿತ್ತು. ಕೊನೆಯ ಒಂದು ದೃಶ್ಯದಲ್ಲಿ ಮಾತ್ರ ಈ ಪೊಲೀಸ್ ಅಧಿಕಾರಿ ಕಾಣಿಸಿಕೊಳ್ಳಬೇಕು. ಒಂದೇ ಒಂದು ಡೈಲಾಗ್ ‘ಹ್ಯಾಂಡ್ಸ್ಅಪ್’ ಎಂದು ಖಳನಾಯಕನಿಗೆ ಪಿಸ್ತೂಲ್ ತೋರಿಸಿದರೆ ಸಾಕು. ಈ ಪಾತ್ರಕ್ಕೆ ಉತ್ತಮ ಮೈಕಟ್ಟುಳ್ಳ ನನ್ನ ಗೆಳೆಯನನ್ನೇ ಒಪ್ಪಿಸಲಾಯಿತು. ಎಲ್ಲರ ಒತ್ತಾಯದ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರ ನಿರ್ವಹಿಸಲು ಆತ ಕೊನೆಗೂ ಒಪ್ಪಿದ.ಒಂದು ತಿಂಗಳಿರುವಾಗಲೇ ಆತ ಆ ಪಾತ್ರದ ಆ ಒಂದೇ ಒಂದು ಡೈಲಾಗ್ ‘ಹ್ಯಾಂಡ್ಸ್ಅಪ್’ನ್ನು ಬಾಯಿಪಾಠ ಮಾಡಲು ಶುರು ಮಾಡಿದ. ಅವನ ಆತಂಕ, ಸಿದ್ಧತೆ ಒಂದು ತಮಾಷೆಯೇ ಆಗಿತ್ತು. ಕೊನೆಗೂ ನಾಟಕದ ದಿನ ಬಂದೇ ಬಿಟ್ಟಿತು. ನಾಟಕವೇನೋ ಚೆನ್ನಾಗಿ ಬಂತು. ಕೊನೆಯ ದೃಶ್ಯದಲ್ಲಿ ಈತನೂ ಪ್ರವೇಶ ಮಾಡಿದ. ಆದರೆ ಪಿಸ್ತೂಲ್ತೋರಿಸುವಾಗ ತನ್ನ ಆ ಒಂದು ಡೈಲಾಗನ್ನು ಮರೆತೇ ಬಿಟ್ಟಿದ್ದ. ‘‘ಹ್ಯಾಂಡ್ಸ್ಪ್’ ಎಂದು ಹೇಳುವ ಬದಲಿಗೆ ಆತ ‘ಶಟಪ್’ ಎಂದು ಹೇಳಿ ಬಿಟ್ಟಿದ್ದ.ಅವನ ತಪ್ಪು ಡೈಲಾಗ್ ನಮ್ಮಂತಹ ಕೆಲವರಿಗಷ್ಟೇ ಗೊತ್ತಾಗಿತ್ತು. ನಾವೆಲ್ಲ ನಕ್ಕಿದ್ದೇ ನಕ್ಕಿದ್ದು.
ಮೊನ್ನೆ ಅದನ್ನು ಆತನಿಗೆ ನೆನಪಿಸಿ, ಮತ್ತೊಮ್ಮೆ ಜೊತೆಯಾಗಿ ನಕ್ಕೆವು.
ಇತ್ತೀಚೆಗೆ ನನ್ನ ಗೆಳೆಯನನ್ನು ನೋಡಲೆಂದು ಆಸ್ಪತ್ರೆಗೆ ಹೋದಾಗ ಅವರ ಭೇಟಿಯಾಯಿತು. ಅವರೆಂದರೆ ಇನ್ನಾರೂ ಅಲ್ಲ, ನನಗೆ ಮದರಸದಲ್ಲಿ ಕಲಿಸಿದ ಗುರುಗಳು. ತುಂಬಾ ಅಂದರೆ ತುಂಬಾ ಹಿಂದೆ...ನನಗೆ ಕುರ್ಆನ್ ಜೊತೆಗೆ ಬದುಕಿನ ಒಳಿತುಕೆಡುಕುಗಳನ್ನು ಕೆಲಕಾಲವಾದರೂ ಕಲಿಸಿದವರು.ನೋಡಿದಾಕ್ಷಣ ನನಗೆ ಅವರ ಮುಖ ಪರಿಚಯವಾಯಿತು. ಮೂಲತಃ ಕೇರಳದವರು. ಬಹುಶಃ ಕಾಸರಗೋಡಿರಬೇಕು. ನನಗವರ ಹೆಸರು ಗೊತ್ತಿಲ್ಲ. ವೃದ್ಧಾಪ್ಯ ಅವರ ಮುಖವನ್ನು ಜರ್ಜರಿತ ಗೊಳಿಸಿತ್ತು. ಕುಳಿತದಲ್ಲೇ ಯಾವುದೋ ಯೋಚನಾ ಲಹರಿಯಲ್ಲಿದ್ದರು. ನಾನು ನೇರ ಅವರ ಮುಂದೆ ನಿಂತು ‘ಅಸ್ಸಲಾಂ ಅಲೈಕುಂ’ ಅಂದೆ. ಅವರು ಬೆಚ್ಚಿಬಿದ್ದವರಂತೆ ತಲೆಯೆತ್ತಿ ‘ವಅಲೈಕು ಸಲಾಂ’ ಎಂದರು. ಅಷ್ಟೇ. ಬಿಳಿ ಲುಂಗಿ ಉಟ್ಟು, ಬಟ್ಟೆ ಧರಿಸಿ, ಬಿಳಿ ಮುಂಡಾಸು ಧರಿಸಿದ ಮುಸ್ಲಿಯಾರುಗಳಿಗೆ ಸಲಾಂ ಹೇಳುವುದು ಒಂದು ಪರಿಪಾಠ. ಹಾಗೆಯೇ ಇವನಾರೋ ಸಲಾಂ ಹೇಳಿರಬೇಕೆಂದು ಮತ್ತೆ ತನ್ನ ಲೋಕದೊಳಗೆ ಇಳಿದರು. ನನ್ನ ನೆನಪಿರಲಿಕ್ಕಿಲ್ಲ ಎಂಬ ಅನುಮಾನದಿಂದ ನಾನು ಅಲ್ಲಿಂದ ಹೊರಟೆ.
ಅವರಿಗೆ ನನ್ನ ನೆನಪಿಲ್ಲದೇ ಇರುವುದಕ್ಕೂ ಒಂದು ಕಾರಣವಿದೆ. ಸಾಧಾರಣವಾಗಿ ಅಂದು(ಇಂದೂ ಕೂಡ) ನಮ್ಮ ಮದರಸದಲ್ಲಿ ಒಬ್ಬ ವೌಲವಿ ಹೆಚ್ಚೆಂದರೆ ಒಂದು ವರ್ಷ ಬಾಳಿಕೆ ಬರುತ್ತಿದ್ದರು. ಅಷ್ಟರಲ್ಲೇ ಜಮಾತಿನ ಯಾರಾದರೊಬ್ಬ ಏನಾದರೂ ಒಂದು ನೆಪದಿಂದ ಅವರನ್ನು ಓಡಿಸುತ್ತಿದ್ದರು. ಈ ಮುಸ್ಲಿಯಾರರು ಕನಿಷ್ಟ ಹೆಚ್ಚೆಂದರೆ ಎಂಟು ತಿಂಗಳು ಬಾಳಿಕೆ ಬಂದಿರಬಹುದು. ಆದರೆ ಇವರನ್ನು ನಾನು ನೆನೆದುಕೊಳ್ಳಲು ಕಾರಣವಿದೆ. ಈ ಮುಸ್ಲಿಯಾರರಿಗೆ ನಾನು ಕುರ್ಆನ್ ಪಠಿಸುವುದನ್ನು ತುಂಬಾ ಆಸ್ವಾದಿಸುತ್ತಿದ್ದರು. ಅವರು ಹೇಳಿಕೊಟ್ಟಂತೆಯೇ ತುಂಬಾ ರಾಗವಾಗಿ ಪಠಿಸುತ್ತಿದ್ದೆ. ಅಚ್ಚ ಮಲಯಾಳದಲ್ಲಿ ಅವರು ಮಾತನಾಡುತ್ತಿದ್ದರೂ, ಆ ಮಾತಿನಲ್ಲಿ ನನ್ನ ಕುರಿತಂತೆ ಅವರಿಗಿದ್ದ ವಾತ್ಸಲ್ಯವನ್ನು ನಾನು ಗುರುತಿಸುತ್ತಿದ್ದೆ. ಬಹುಶಃ ಮದರಸದಲ್ಲಿ ನನ್ನನ್ನು ಇಷ್ಟಪಟ್ಟ ಒಬ್ಬರೇ ಒಬ್ಬ ಮುಸ್ಲಿಯಾರರೆಂದರೆ ಇವರೇ ಇರಬೇಕು. ಶಾಲೆಯಲ್ಲಿ ನನ್ನನ್ನು ಇಷ್ಟಪಡುತ್ತಿದ್ದ ಒಬ್ಬ ಮೇಷ್ಟ್ರಿರಿದ್ದರು. ಅವರ ಹೆಸರು ನಾರಾಯಣ ಮಾಷ್ಟ್ರು. ಅವರಂತೆಯೇ ಈ ಮುಸ್ಲಿಯಾರ್ ಕೂಡ ನನ್ನನ್ನು ಇಷ್ಟಪಡುತ್ತಿದ್ದರು. ಆದರೆ, ಇಂದು ಈ ಆಸ್ಪತ್ರೆಯಲ್ಲಿ ಮಾತ್ರ ನಾವು ಪರಸ್ಪರ ಅಪರಿಚಿತರಂತೆ ಸಂಧಿಸಿದೆವು. ***
ನಮ್ಮ ಮದರಸದಲ್ಲಿ ಇಬ್ಬರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಒಬ್ಬ ಮುಸ್ಲಿಯಾರ್. ಅಂದರೆ, ತುಸು ಹೆಚ್ಚು ಕಲಿತವರು. ನಮಾಝ್ನ ನೇತೃತ್ವವನ್ನು ವಹಿಸಿಕೊಳ್ಳುವುದು, ಶುಕ್ರವಾರ ಜುಮ್ಮಾ ನಮಾಝ್ನ ಸಂದರ್ಭದಲ್ಲಿ ಪ್ರವಚನವನ್ನು ನೀಡುವುದು ಇತ್ಯಾದಿ ಮುಖ್ಯ ಕೆಲಸ ಇವರಿಗೆ. ಇವರಿಗೆ ಹೆಚ್ಚೆಂದರೆ ಆಗ ಎರಡು ಸಾವಿರ ರೂಪಾಯಿ ಸಂಬಳವಿತ್ತು. ಇವರಿಗೆ ಸಹಾಯಕರಾಗಿ ಒಬ್ಬ ಮುಕ್ರಿಯನ್ನು ನೇಮಿಸುತ್ತಿದ್ದರು. ಮಸೀದಿ ನೆಲ ಒರೆಸುವುದು, ಮಸೀದಿಯ ಕೆರೆಯಲ್ಲಿ ನೀರು ಖಾಲಿಯಾಗದಂತೆ ನೋಡಿಕೊಳ್ಳುವುದು ಇತ್ಯಾದಿ ಇತ್ಯಾದಿ ಇವರ ಕೆಲಸ. ಬೆಳಗ್ಗೆ ಮದರಸದಲ್ಲಿ ಒಂದನೆ ಮತ್ತು ಎರಡನೆ ಮಕ್ಕಳಿಗೆ ಈ ಮುಕ್ರಿಯೇ ಕಲಿಸುತ್ತಿದ್ದರು. ಮುಕ್ರಿಗೆ ಹೆಚ್ಚೆಂದರೆ ಮುನ್ನೂರು ರೂಪಾಯಿ ಸಂಬಳ. ಉಳಿದ ಮುಖ್ಯ ತರಗತಿಗಳ ಉಸ್ತುವಾರಿಯನ್ನು ಮುಸ್ಲಿಯಾರ್ ನೋಡಿಕೊಳ್ಳುತ್ತಿದ್ದರು.ಇವರಿಗೆ ಊಟವನ್ನು ಪ್ರತಿದಿನ ಮನೆ ಮನೆಯಿಂದ ತರಲಾಗುತ್ತಿತ್ತು. ನಮ್ಮ ಜಮಾತಿನಲ್ಲಿ ಆಗ ಸುಮಾರು 60 ಮನೆಗಳಿದ್ದವು. ಆಯ್ದ 30 ಮನೆಗಳನ್ನು ಗುರುತಿಸಲಾಗುತ್ತಿತ್ತು. ತಿಂಗಳಿಗೊಮ್ಮೆ ಒಂದೊಂದು ಮನೆಗೆ ಊಟದ ಜವಾಬ್ದಾರಿ ಬೀಳುತ್ತಿತ್ತು. ಮನೆಯ ತಾಯಂದಿರಿಗೆ ಈ ಊಟದ ದಿನ ಹತ್ತಿರ ಬರುತ್ತಿದ್ದಂತೆಯೇ ತಲೆ ಬಿಸಿ. ‘‘ನಾಳೆ ಮೊಯ್ಲಿರಿಗೆ ಊಟದ ದಿನ. ಎಂತ ಮಾಡುವುದೂಂತ ಗೊತ್ತಾಗುವುದಿಲ್ಲ...’’ ಸಾಧಾರಣವಾಗಿ ಕೋಳಿ, ಅಥವಾ ಮೀನು ಪದಾರ್ಥಗಳನ್ನೇ ಮಾಡಿಕೊಡುತ್ತಿದ್ದೆವು. ತಿಂಗಳಿಗೊಮ್ಮೆ ತಾನೆ. ಆದರೆ ಈ ಮೊಯ್ಲೆರುಗಳಿಗೆ ಪ್ರತಿದಿನ ಕೋಳಿ ತಿಂದು ತಿಂದೂ ಸಾಕಾಗುತ್ತಿತ್ತು.
ಆದರೆ ಎಲ್ಲಾ ದಿನಗಳು ಒಂದೇ ತರಹ ಇರುತ್ತದೆಯೆಂದು ಹೇಳಲಾಗುವುದಿಲ್ಲ. ಮೊಯ್ಲರಿನ ಮೇಲೆ ಏನಾದರೂ ಸಿಟ್ಟು ಬಂತೋ, ‘ಬುತ್ತಿಯಲ್ಲಿ ಗಂಜಿ ಮತ್ತು ಚಟ್ನಿ’ಯನ್ನು ತುಂಬಿಕೊಡುವುದಿದೆ. ಸಾಧಾರಣವಾಗಿ ಮೊಯ್ಲಿರುಗಳ ಜೊತೆಗೆ ಜಮಾತಿನ ಜನರಿಗೆ ಜಗಳವಾಗುವುದು ಮಕ್ಕಳ ವಿಷಯದಲ್ಲಿ. ಮದರಸದಲ್ಲಿ ಪಾಠ ಕಲಿಸುವಾಗ ಮಕ್ಕಳಿಗೇನಾದರು ಹೊಡೆದರೆ, ಅದನ್ನು ಮಕ್ಕಳು ಮನೆಗೆ ಹೊತ್ತು ಕೊಂಡು ಹೋದರೆ, ಒಂದು ದೊಡ್ಡ ಜಗಳವೇ ನಿರ್ಮಾಣವಾಗಿ ಬಿಡುತ್ತಿತ್ತು. ಒಂದೋ ಬಾಲಕನ ತಂದೆ ನೇರವಾಗಿ ಮದರಸದ ತರಗತಿಗೆ ನುಗ್ಗಿ ಗಲಾಟೆ ಮಾಡುತ್ತಿದ್ದ. ಅಥವಾ ವಾರದ ಮೀಟಿಂಗ್ನಲ್ಲ್ಲಿ ಮಸೀದಿ ಪ್ರೆಸಿಡೆಂಟ್ನ ಮುಂದೆ ‘‘ನನ್ನ ಮಗನಿಗೆ ಸುಮ್ಮ ಸುಮ್ಮನೆ ಹೊಡೆದಿದ್ದಾನೆ ಅಂವ. ಅವನನ್ನು ಮನೆಗೆ ಕಳುಹಿಸದೇ ಇದ್ದರೆ ನಾನು ತಿಂಗಳ ಊಟ ಕೊಡುವುದಿಲ್ಲ...ಕೋಳಿ ತಿಂದು ತಿಂದು ಚರ್ಬಿ ಅವನಿಗೆ...’’ ಬೆದರಿಕೆ ಹಾಕುತ್ತಿದ್ದ. ಮಾತು ಏಕವಚನಕ್ಕಿಳಿಯುತ್ತಿತ್ತು. ಮಕ್ಕಳ ವಿಷಯದಲ್ಲೇ ಹಲವು ಮುಸ್ಲಿಯಾರುಗಳು ಬಂದ ಬಸ್ನಲ್ಲೇ ವಾಪಸ್ ಹೋದದ್ದಿದೆ. ಬಡವರ ಮಕ್ಕಳಿಗೆ ಹೊಡೆದರೆ ಅದು ಹೆಚ್ಚು ಸುದ್ದಿಯಾಗುವುದಿಲ್ಲ. ಆದರೆ ಮಸೀದಿ ಪ್ರೆಸಿಡೆಂಟ್ ಅಥವಾ ಸೆಕ್ರಟರಿಯ ಮಕ್ಕಳಿಗೇನಾದರೂ ತಪ್ಪಿ ಮುಸ್ಲಿಯಾರರ ಬೆತ್ತದೇಟು ಬಿತ್ತೆಂದರೆ, ಆ ಮುಸ್ಲಿಯಾರರ ಗತಿ ಕೆಟ್ಟಿತೆಂದೇ ಅರ್ಥ. ಆದುದರಿಂದ ಸಾಧಾರಣವಾಗಿ ಯಾವುದೇ ಮುಸ್ಲಿಯಾರರು ನಮ್ಮ ಮಸೀದಿಗೆ ಬಂದರೂ ಅವರು ಹೋಗುವುದಕ್ಕೆ ಗಂಟುಮೂಟೆಯೊಂದಿಗೆ ರೆಡಿಯಾಗಿಯೇ ಬರುತ್ತಾರೆ.
ಒಮ್ಮೆ ಹೀಗಾಯಿತು. ನಮ್ಮೂರಿಗೆ ಹೊಸ ಮುಸ್ಲಿಯಾರರ ನೇಮಕವಾಯಿತು. ಮುಸ್ಲಿಯಾರರಿಗೆ ರಾತ್ರಿಯ ಹೊತ್ತು, ರೊಟ್ಟಿಯೋ, ದೋಸೆಯೋ ಆಗಬೇಕು. ಅನ್ನ ಇಳಿಯುವುದಿಲ್ಲ. ಅದಕ್ಕಾಗಿ ಮದರಸದ ಮಕ್ಕಳ ಮುಂದೆ, ರಾತ್ರಿ ‘ನನಗೆ ಅನ್ನ ಆಗುವುದಿಲ್ಲ. ಒಂದೋ ನಾಷ್ಟ ಆಗಬೇಕು. ನಾಷ್ಟಕೊಡುವುದಕ್ಕೆ ಆಗುವುದಿಲ್ಲಾಂತಾದ್ರೆ ಅನ್ನ ನನಗೆ ಬೇಡ. ಗಂಜಿ, ಚಟ್ನಿಯೇ ಸಾಕು’ ಎಂದು ಬಿಟ್ಟರು. ಆದರೆ, ಮಕ್ಕಳು ಮನೆಯಲ್ಲಿ ಹೇಳುವಾಗ ಮಾತ್ರ ವಿಷಯ ಬದಲಾಯಿತು. ‘‘ಹೊಸ ಮೊಯ್ಲಿರಿಗೆ ಅನ್ನ, ಕೋಳಿಸಾರು ಬೇಡವಂತೆ. ಗಂಜಿ ಚಟ್ನಿಯೇ ಇಷ್ಟವಂತೆ’’ ಸರಿ, ಎಲ್ಲ ಹೆಂಗಸರು ತುಂಬಾ ಸಂತೋಷದಿಂದ ರಾತ್ರಿಗೆ ಗಂಜಿ ಚಟ್ನಿ ಮಾಡಿಕೊಡತೊಡಗಿದರು. ಮೊಯ್ಲಿರಿಗೋ ಗಂಜಿ ಕುಡಿದು ಕುಡಿದು ಸಾಕಾಯಿತು. ವರ್ಷಕ್ಕೊಮ್ಮೆ ಮಸೀದಿಯ ವತಿಯಿಂದ ರಾತ್ರಿ ಏಳು ದಿನಗಳ ಮತಪ್ರಸಂಗವನ್ನು ಹಮ್ಮಿಕೊಳ್ಳುತ್ತಾರೆ. ಹೆಂಗಸರೂ ಈ ಮತಪ್ರಸಂಗ ಕೇಳಲು ಬರುತ್ತಾರೆ. ಮೊಯ್ಲಾರರು ಈ ಸಮಯವನ್ನು ಸರಿಯಾಗಿಯೇ ಬಳಸಿಕೊಂಡರು. ಮತ ಪ್ರಸಂಗ ಮಾಡುತ್ತಾ ಮಾಡುತ್ತಾ ಮಧ್ಯದಲ್ಲೇ ತನ್ನ ಊಟದ ಪ್ರಸ್ತಾಪವನ್ನೂ ಮಾಡಿ ಬಿಟ್ಟರು ‘‘ಈ ಊರಿನ ಹೆಂಗಸರು ಭಯಂಕರ. ನಾಷ್ಟ ಕೊಡುವುದಕ್ಕಾಗುವುದಿಲ್ಲವಾದರೆ ಗಂಜಿ ಸಾಕು ಎಂದರೆ...ಗಂಜಿಯನ್ನೇ ಪ್ರತಿ ದಿನ ಕೊಡುತ್ತಿದ್ದಾರೆ...’’ ಸಂದೇಶ ತಲುಪುವಲ್ಲಿಗೆ ತಲುಪಿಸಿತು. ಹೆಂಗಸರೆಲ್ಲ ಪಿಸಪಿಸನೆ ಒಬ್ಬರಿಗೊಬ್ಬರು ಮಾತನಾಡುತ್ತಾ ನಗತೊಡಗಿದರು. ಮರುದಿನದಿಂದ ರಾತ್ರಿ ನಾಷ್ಟದ ವ್ಯವಸ್ಥೆಯಾಯಿತು.
ಒಮ್ಮೆ ಒಂದು ಘಟನೆ ನಡೆಯಿತು. ನಾನಾಗ ಬಹುಶಃ ಮದರಸದ ಮೂರನೆ ತರಗತಿಯಲ್ಲಿರಬೇಕೆನ್ನಿಸುತ್ತದೆ. ಬೆಳಗ್ಗೆ ಮುಸ್ಲಿಯಾರರಿಗೆ ತಂದ ಬುತ್ತಿಯಲ್ಲಿ ಪುಂಡಿ ತಂದಿದ್ದರು. ಮುಸ್ಲಿಯಾರರಿಗೇಕೋ ಪುಂಡಿ ಇಳಿಯುತ್ತಿರಲಿಲ್ಲ. ಸರಿ, ಅವರು ಬೆಳಗ್ಗೆ ನಾಷ್ಟ ಮಾಡದೆಯೇ ಮದರಸದೊಳಗೆ ಬಂದರು. ನಮಗೆಲ್ಲ ಆತಂಕ. ‘ಮೊಯಿಲಾರ್ ನಾಷ್ಟ ಮಾಡಲಿಲ್ಲವಂತೆ’ ‘ಪಾಪ, ಪುಂಡಿ ಮಾಡಿದ್ದಂತೆ’ ‘ಯಾರಾದರೂ ಮುಸ್ಲಿಯಾರರಿಗೆ ಪುಂಡಿ ಮಾಡಿ ಕೊಡುತ್ತಾರ?’ ನಮ್ಮಾಳಗೆ ಗುಸುಗುಸು ಪಿಸಿಪಿಸಿ. ಅಷ್ಟರಲ್ಲೇ ನನ್ನ ಪಕ್ಕದಲ್ಲಿ ಕುಳಿತ ಜಮಾಲ್ ಎನ್ನುವ ಹುಡುಗ ಅಳತೊಡಗಿದ. ನೋಡಿದರೆ, ಅವತ್ತು ಮೊಯಿಲಾರಿಗೆ ಜಮಾಲ್ನ ಮನೆಯಿಂದ ಊಟ. ಜಮಾಲ್ ಬಿಕ್ಕುತ್ತಾ ಬಿಕ್ಕುತ್ತಾ ಹೇಳಿದ ‘‘ಮನೆಯಲ್ಲಿ ತಾಯಿಗೆ ಉಷಾರಿರಲಿಲ್ಲ...ಅದಕ್ಕೆ ಅಕ್ಕ ಪುಂಡಿ ಮಾಡಿದ್ದು....’’ ಎಂದೆಲ್ಲಾ ಸಮಜಾಯಿಶಿ ನೀಡತೊಡಗಿದ. ನಾವೆಲ್ಲ ಅವನನ್ನು ವಿಲನ್ನನ್ನು ನೋಡಿದಂತೆ ನೋಡಿದೆವು. ಅವನು ಕೊಟ್ಟ ಕಾರಣ ಸಕಾರಣ ಎಂದು ನಮಗ್ಯಾರಿಗೂ ಅನ್ನಿಸಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮುಸ್ಲಿಯಾರರು ಪಾಪ ನಾಷ್ಟವೇ ಮಾಡಿರಲಿಲ್ಲ. ಬರಿ ಹೊಟ್ಟೆಯಲ್ಲಿದ್ದಾರೆ. ತಾಯಿಗೆ ಉಷಾರಿಲ್ಲ ಅಂತ ಹೇಳಿ ಯಾರಾದರೂ ‘ಪುಂಡಿ’ ಮಾಡಿಕೊಡುತ್ತಾರ? ನಾವೆಲ್ಲ ಅವನನ್ನು ಕೆಕ್ಕರಿಸಿ ನೋಡಿದೆವು. ಅಂದಿಡೀ ಅವನು ಅಳುತ್ತಲೇ ಇದ್ದ.
ಮಾವಿನ ಮರ ಸದಾ ತುಂಟಾಟದಲ್ಲಿ ಕಳೆಯುತ್ತಿದ್ದ, ಕಲಿಕೆಯಲ್ಲಿ ಹಿಂದುಳಿದಿದ್ದ ಮಗನಿಗೆ ಬೈದು, ಬೈದು ತಂದೆತಾಯಿಗಳು ಸುಸ್ತಾದರು. ಕೊನೆಗೆ, ‘ಇನ್ನು, ಮಗನಿಗೆ ಬೈಯುವುದು ಬೇಡ. ಅವನ ಮೇಲೆ ಸಿಟ್ಟು ಬಂದರೆ, ಹಿತ್ತಲಲ್ಲಿರುವ ಮಾವಿನ ಮರಕ್ಕೆ ಬೈಯುವ’ ಎಂದು ದಂಪತಿ ನಿರ್ಧರಿಸಿದರು. ಹಾಗೆಯೇ ಮಗನನ್ನು ಅವನ ಪಾಡಿಗೆ ಬಿಟ್ಟು, ಸಿಟ್ಟು ಬಂದಾಗಲೆಲ್ಲ, ಮಾವಿನ ಮರದ ಸಮೀಪ ಬಂದು ಅದಕ್ಕೆ ಬೈಯತೊಡಗಿದರು. ಒಂದೇ ತಿಂಗಳಲ್ಲಿ ಮಾವಿನ ಮರ ಒಣಗಿ, ಸತ್ತೇ ಹೋಯಿತು.ಆದರೆ ಬಾಡಿ ಹೋಗಿದ್ದ ಮಗ, ಒಂದೇ ತಿಂಗಳಲ್ಲಿ ಚಿಗುರು ಬಿಟ್ಟ ಮಾವಿನ ಮರದಂತೆ ನಳನಳಿಸತೊಡಗಿದ.
ಮಗಳು ಒಬ್ಬ ಖೈದಿ 15 ವರ್ಷ ಜೈಲಲ್ಲಿ ಕಳೆದು ಬಿಡುಗಡೆಗೊಂಡ. ಅವನಿಗೊಬ್ಬಳು ಪುಟ್ಟ ಮಗಳಿದ್ದಳು. ನೇರ ಮನೆಗೆ ಹೋಗಿ ಆ ಮಗಳನ್ನು ಭೇಟಿ ಮಾಡಬೇಕು... ಜೈಲಲ್ಲಿ ದುಡಿದು ಜೋಪಾನವಾಗಿಟ್ಟ ಹಣವನ್ನು ಬಿಚ್ಚಿದ. ಅವಸರವಸರದಲ್ಲಿ ಬಟ್ಟೆಯಂಗಡಿಗೆ ಹೋಗಿ, ಪುಟ್ಟ ಚಿಟ್ಟೆಯಾಕಾರಾದ ಅಂಗಿಯನ್ನು ಮಗುವಿಗಾಗಿ ಕೊಂಡ. ಮನೆ ತಲುಪುತ್ತಾನೆ.ಬಾಗಿಲು ತೆರೆಯಿತು. ಸೀರೆ ಉಟ್ಟ ತರುಣಿಯೊಬ್ಬಳು ಬಾಗಿಲ ಮರೆಯಿಂದ ಇಣುಕಿದಳು. ‘‘ಅಮ್ಮಾ ಅಪ್ಪ ಬಂದ...’’ ಎಂದು ಒಳ ಓಡಿದಳು.
ಪ್ರೀತಿ ಒಂದು ಸುಂದರವಾದ ಹಾಡು. ತರುಣಿಯೊಬ್ಬಳ ಕಿವಿಗೆ ಬಿತ್ತು. ಆ ಹಾಡಿಗೆ ಮನಸೋತ ಅವಳು ಹಾಡುಗಾರನನ್ನು ಪ್ರೀತಿಸತೊಡಗಿದಳು. ಹಾಡಿದವನನ್ನು ಹುಡುಕಿ ನಡೆದಳು.ಕೊನೆಗೂ ಹಾಡುತ್ತಿರುವವನು ಸಿಕ್ಕಿದ. ಅವನೊಬ್ಬ ಕುರೂಪಿ. ಕುಷ್ಠ ರೋಗ ಪೀಡಿತನಾಗಿದ್ದ. ತರುಣಿ ತನ್ನಲ್ಲ್ಲಿದ್ದ ಒಂದು ರೂಪಾಯಿ ನಾಣ್ಯವನ್ನು ಅವನ ಮುಂದೆ ಎಸೆದು, ಅಲ್ಲಿಂದ ನಡೆದಳು.
ತೊರೆ ದೂರದಿಂದ ಒಂದು ತೊರೆ ತನ್ನೆಡೆಗೆ ಬರುವುದು ನೋಡಿತು, ಆ ವಿಶಾಲ ನದಿ. ನದಿ ಕೂಗಿ ಹೇಳಿತು ‘‘ಸಣ್ಣ ಪುಟ್ಟ ತೊರೆಗಳೆಲ್ಲ ನನ್ನನ್ನು ಸೇರಬಾರದು. ನಾನು ನದಿ. ತೊರೆಗಳಿಗೆ ಇಲ್ಲಿ ಪ್ರವೇಶವಿಲ್ಲ’’ ತೊರೆಗಳೆಲ್ಲ ತಮ್ಮ ದಿಕ್ಕುಗಳನ್ನು ಬದಲಿಸಿ ಒಂದು ಸೇರಿದವು. ಒಟ್ಟು ಸೇರಿ ಅವುಗಳೇ ದೊಡ್ಡ ನದಿಯಾದವು. ತೊರೆಯ ಬಲವಿಲ್ಲದ ನದಿ, ಈಗ ತೀರಾ ಬಡಕಲಾಗಿ, ತೊರೆಗಿಂತಲೂ ಸೂಪೂರವಾಗಿ ದಾರಿ ಮಧ್ಯೆಯೇ ಇಲ್ಲವಾಯಿತು.
ನರ್ತನ ಒಂದು ಕಾಗೆ ಮತ್ತು ನವಿಲು ಭೇಟಿ ಮಾಡಿತು. ನವಿಲು ಕೇಳಿತು.‘‘ಎಲ್ಲಿಗೆ ಹೊರಟೆ?’’‘‘ನಮ್ಮ ಕುಟುಂಬದೊಳಗೆ ಒಂದು ಸಮಾರಂಭವಿದೆ. ಅಲ್ಲಿ ನರ್ತಿಸುವುದಕ್ಕೆ ಹೊರಟಿದ್ದೇನೆ?’’ನವಿಲಿಗೆ ಅಶ್ಚರ್ಯವಾಯಿತು. ಕಾಗೆ ನರ್ತಿಸುವುದೇ? ನವಿಲು ಕುತೂಹಲದಿಂದ ಕೇಳಿತು ‘‘ನಾನು ಬರಲೇ, ನರ್ತಿಸುವುದಕ್ಕೆ’’ಕಾಗೆ ಒಪ್ಪಿತು. ಇಬ್ಬರು ಕಾಗೆಗಳ ಸಮಾರಂಭಕ್ಕೆ ಹೋದರು. ಕಾಗೆಗಳೇ ಪ್ರೇಕ್ಷಕರು. ಮೊದಲು ನವಿಲು ನರ್ತಿಸಿತು. ಕಾಗೆಗಳೆಲ್ಲ ಪರಸ್ಪರ ವಿಚಿತ್ರವಾಗಿ ನೋಡತೊಡಗಿದವು. ಬೇಸರದಿಂದ ಆಕಳಿಸತೊಡಗಿದವು. ಬಳಿಕ ಕಾಗೆ ನರ್ತಿಸಿತು. ಈಗ ಕಾಗೆಗಳೆಲ್ಲ ಹುಚ್ಚೆದ್ದು ಚಪ್ಪಾಳೆ ತಟ್ಟಿದವು. ‘ವನ್ಸ್ಮೋರ್’ ಎಂದವು.ಕಾಗೆಗಳ ಲೋಕದಲ್ಲಿ ಕಾಗೆ ಮಾತ್ರ ನರ್ತಿಸಬೇಕು ಎನ್ನುವುದು ನವಿಲಿಗೆ ತಡವಾಗಿ ಹೊಳೆಯಿತು.
ನೀರು! ‘‘ಆತ ಅದೆಷ್ಟು ಶ್ರೀಮಂತನೆಂದರೆ ಹಣವನ್ನು ನೀರಿನಂತೆ ಚೆಲ್ಲುತ್ತಿದ್ದಾನೆ...’’ ಇನ್ನೊಂದು ಇಪ್ಪತ್ತು ವರ್ಷದ ಬಳಿಕ ಈ ಮಾತು ಯಾವ ರೂಪ ಪಡೆಯಬಹುದು? ‘‘ಆತ ಅದೆಷ್ಟು ಮೂರ್ಖನೆಂದರೆ ನೀರನ್ನು ಹಣದಂತೆ ಚೆಲ್ಲುತ್ತಿದ್ದಾನೆ...’’
ಆಟ ಸೋಲು ನಿಶ್ಚಿತವಾಗಿತ್ತು. ಆದರೂ ಆಟಗಾರರು ಆಡಲೇ ಬೇಕಾಗಿತ್ತು. ಬದುಕೇ ಹೀಗೆ.ಕೆಲವೊಮ್ಮೆ ಸೋಲು ಘೋಷಣೆಯಾಗಿ ಬಿಡುತ್ತದೆ. ಆದರೆ ಆಟದ ಬಯಲಿನಿಂದ ಹೊರಗೆ ಹೋಗುವಂತಿಲ್ಲ.ಆಡಲೇ ಬೇಕು. ಇಂತಹ ಆಟ ತುಂಬ ಕಷ್ಟ. ಆದರೆ ಆಟಗಾರನ ಸಾಮರ್ಥ್ಯವನ್ನು ನಿರ್ಧರಿಸುವುದು ಇಂತಹದೇ ಆಟ. ಭಿಕ್ಷೆ ಅವಳು ಭಿಕ್ಷೆ ಬೇಡುತ್ತಿದ್ದಳು. ‘‘ಅಣ್ಣಾ....ಭಿಕ್ಷೆ ಕೊಡಿ’’ ಆತ ಧನಿಕ. ಹೂಂಕರಿಸಿ ಹೇಳಿದ ‘‘ಕೈಕಾಲಿದೆಯಲ್ಲ, ಮತ್ತೇಕೆ ನಿನಗೆ ಭಿಕ್ಷೆ ನೀಡಬೇಕು? ಅರ್ಹರಿಗಷ್ಟೇ ನಾನು ಭಿಕ್ಷೆಯನ್ನು ಕೊಡುತ್ತೇನೆ’’ ಆಕೆ ಅಬ್ಬರಿಸಿ ಕೇಳಿದಳು ‘‘ಭಿಕ್ಷೆಯನ್ನು ಅರ್ಹರಿಗೆ ಮಾತ್ರ ನೀಡಬೇಕೆಂಬ ನಿಯಮವಿದ್ದಿದ್ದರೆ, ದೇವರು ನಿನಗೇಕೆ ಇಷ್ಟು ಧನಸಂಪತ್ತನ್ನು ಕೊಡುತ್ತಿದ್ದ?’’
ಈ ಅನಿ ನನ್ನ ಆತ್ಮೀಯರೊಬ್ಬರ ಮಗ. ಮೊನ್ನೆ ಫೇಸ್ಬುಕ್ನಲ್ಲಿ ಅಚಾನಕ್ಕಾಗಿ ಸಿಕ್ಕಿ ‘ಹಾಯ್ ಬಶೀರ್ ಮಾಮ’ ಅಂದ. ಚೆಂದವಾಗಿ ಚಿತ್ರ ಬಿಡಿಸುವ, ಡ್ಯಾನ್ಸ್ ಕಲಿತಿರುವ ಅನಿ ಈಗ ದೂರದ ಸಿಂಗಾಪುರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾನೆ. ಫೇಸ್ಬುಕ್ನಲ್ಲೇ ಒಂದಿಷ್ಟು ಮಾತನಾಡಿದೆವು. ತಾನೇ ಬರೆದ ಒಂದು ಇಂಗ್ಲಿಷ್ ಥೀಸಿಸ್ನ್ನು ಕಳುಹಿಸಿದ. ನನ್ನ ಇಂಗ್ಲಿಷ್ ಅಷ್ಟಕ್ಕಷ್ಟೇ. ಆದರೂ ಅದನ್ನು ಓದಿದೆ. ‘ಅಪ್ಪಟ ಮಾನವೀಯ ಸಂದೇಶ’ವೊಂದು ಆ ಥೀಸಿಸ್ನಲ್ಲಿ ಬಚ್ಚಿಟ್ಟುಕೊಂಡಿರುವುದು ಮತ್ತು ನಾನು ‘ಮಗು’ವೆಂದು ಭಾವಿಸಿದ ಅನಿ ಇದನ್ನೆಲ್ಲ ಯೋಚಿಸುತ್ತಿರುವುದು ನೋಡಿ ನನಗೆ ಅಚ್ಚರಿಯಾಯಿತು. ಕನ್ನಡಕ್ಕೆ ತರಲು ಪ್ರಯತ್ನಿಸಿ ಕೈ ಬಿಟ್ಟೆ. ಈ ಅನಿ ಅಥವಾ ಅನಿರುದ್ಧ ಹಿಂದೊಮ್ಮೆ ತಮಾಷೆಗೆಂದು ಫೋನಿನಲ್ಲಿ ‘‘ಹಲೋ...ಮಗು, ನಾನು ದೇವರು ಮಾತನಾಡುತ್ತಿದ್ದೇನೆ’’ ಎಂದು ನನ್ನನ್ನು ದಂಗು ಬಡಿಸಿದ್ದ. ಆ ದಿನ ರಾತ್ರಿ ಯಾಕೋ ನಾನು ದಟ್ಟ ವಿಷಾದದಲ್ಲಿ ಒಂದು ಕವಿತೆ ಬರೆದಿದೆ.(ಸುಮಾರು ಹತ್ತು ವರ್ಷದ ಹಿಂದೆ). ಬಳಿಕ ಅದು ಪಿ. ಲಂಕೇಶರ ‘ಲಂಕೇಶ್ ಪತ್ರಿಕೆ’ಯಲ್ಲ್ಲಿ ಪ್ರಕಟಗೊಂಡಿತು. ಮೊನ್ನೆ ಫೇಸ್ಬುಕ್ನಲ್ಲಿ ಅನಿ ಆ ಕವಿತೆಯನ್ನು ನೆನೆಸಿಕೊಂಡ. ನಾನು ಎರಡು ವರ್ಷ ಕೊಡಗಿನಲ್ಲಿದ್ದಾಗ ಅನಿ ಮತ್ತು ಅವನ ತಂದೆ, ತಾಯಿಯರು ನನಗೆ ತೋರಿಸಿದ ಪ್ರೀತಿಯ ನೆನಪಿಗಾಗಿ ಆ ಕವಿತೆಯನ್ನು ಇಲ್ಲಿ ನಿಮ್ಮಾಂದಿಗೆ ಹಂಚಿಕೊಂಡಿದ್ದೇನೆ. ಕವಿತೆಯ ಹೆಸರು ‘ಅನಿ ಮತ್ತು ದೇವರು’.