ಸಾದತ್ ಹಸನ್ ಮಾಂಟೋ ಬರೆದಿರುವ ಈ ಕತೆಯನ್ನು ಅನುವಾದ ಮಾಡಿರೋದು ಕವಿ, ಪತ್ರಕರ್ತ ದಿ. ಬಿ. ಎಮ್. ರಶೀದ್. " ಪರುಷ ಮಣಿ '' ಕೃತಿಯಿಂದ ಆರಿಸಿ ಕೊಳ್ಳಲಾಗಿದೆ.
ಫೋನ್ ರಿಂಗಣಿಸಿತು.
ಮನಮೋಹನ್ ರಿಸೀವರ್ ಎತ್ತಿಕೊಂಡು ನುಡಿದ: ‘‘ಹಲೋ 44457’’
‘‘ಸಾರಿ ರಾಂಗ್ ನಂಬರ್’’ ಆ ಕಡೆಯ ಹೆಣ್ಣು ಧ್ವನಿ ಫೋನ್ ಕುಕ್ಕಿತು.
ಮನಮೋಹನ್ ರಿಸೀವರ್ ಕೆಳಗಿಟ್ಟು ತಾನು ಓದುತ್ತಿದ್ದ ಪುಸ್ತಕದಲ್ಲಿ ತಲೆ ತೂರಿಸಿದ. ಅವನು ಆ ಪುಸ್ತಕವನ್ನು ಇಪ್ಪತ್ತಕ್ಕೂ ಹೆಚ್ಚು ಸಲ ಓದಿದ್ದಾನೆ! ಅಂದರೆ ಅದರರ್ಥ ಅದೊಂದು ವಿಶೇಷವಾದ ಪುಸ್ತಕವೆಂದೇನೂ ಆಗಿರಲಿಲ್ಲ. ಆ ಕೋಣೆಯಲ್ಲಿದ್ದದ್ದು ಅದೊಂದೇ ಪುಸ್ತಕ! ಅದರ ಕೊನೆಯ ಪುಟ ಕೂಡ ಕಳೆದು ಹೋಗಿತ್ತು.
ಕಳೆದ ಒಂದು ವಾರದಿಂದ ಮನಮೋಹನ ಆ ಆಫೀಸು ಕೋಣೆಯಲ್ಲಿ ವಾಸಿಸುತ್ತಿದ್ದಾನೆ. ಆ ಕೋಣೆ ಅವನ ಗೆಳೆಯನೊಬ್ಬನಿಗೆ ಸೇರಿದ್ದು. ಗೆಳೆಯ ವ್ಯಾಪಾರ ನಿಮಿತ್ತ ದೂರದ ರಾಜ್ಯಗಳಿಗೆ ಪ್ರವಾಸ ಹೋಗಿದ್ದನು. ಹೋಗುವ ಮುಂಚೆ ಮುಂಬೈ ಶಹರದ ಯಾವುದಾದರೂ ಕೊಳಕು ಫುಟ್‌ಪಾತ್ ಮೇಲೆ ಮಲಗಿ ರಾತ್ರಿಗಳನ್ನು ಕಳೆಯುತ್ತಿದ್ದ ಮನಮೋಹನನನ್ನು ಕರೆದು ಆ ಕೋಣೆಯ ಉಸ್ತುವಾರಿ ವಹಿಸಿ ಹೋಗಿದ್ದನು. ಹಾಗಾಗಿ ಸದ್ಯಕ್ಕೀಗ ಆ ಕೋಣೆಯಲ್ಲಿ ಮನೋಹನನದ್ದೇ ಆಧಿಪತ್ಯ.
ಮನಮೋಹನ ಗೊತ್ತು ಗುರಿಯೊಂದೂ ಇಲ್ಲದ ಅಲೆಮಾರಿ. ಉದ್ಯೋಗವನ್ನಾತ ದ್ವೇಷಿಸುತ್ತಿದ್ದ ಕಾರಣದಿಂದ ಅವನು ಕೆಲಸದಿಂದ ದೂರವಿದ್ದ. ಅವನು ಶ್ರಮಿಸಿದ್ದರೆ ಸಿನಿಮಾ ಕಂಪನಿಯೊಂದರ ನಿರ್ದೇಶಕನಾಗುವುದು ಕಷ್ಟವಿರಲಿಲ್ಲ. ಆದರೆ ಇನ್ನೊಬ್ಬನ ಕೈ ಕೆಳಗೆ ದುಡಿಯುವುದೆಂದರೆ ಅವನ ಪಾಲಿಗೆ ಗುಲಾಮಗಿರಿಗೆ ಸಮವಾಗಿತ್ತು. ಮನಮೋಹನ ಒಬ್ಬ ನಿರಪಾಯಕಾರಿಯಾದ ಮನುಷ್ಯನಾಗಿದ್ದನು. ಅವನಿಗೆ ಅವನದೆನ್ನುವ ದೊಡ್ಡ ಖರ್ಚುಗಳೇನೂ ಇರಲಿಲ್ಲ. ನಾಲ್ಕು ಕಪ್ ಟೀ, ಎರಡು ತುಣುಕು ಬ್ರೆಡ್, ಒಂದೆರಡು ಪ್ಯಾಕ್ ಸಿಗರೇಟ್ ಇವು ಅವನ ಒಂದು ದಿನದ ಅಗತ್ಯಗಳಾಗಿದ್ದವು. ಅದಷ್ಟವಶಾತ್ ಅವನ ಈ ಸರಳ ಅವಶ್ಯಕತೆಗಳನ್ನು ಸಂತೋಷದಿಂದಲೇ ಪೂರೈಸಬಲ್ಲ ಅನೇಕ ಸ್ನೇಹಿತರನ್ನು ಅವನು ಹೊಂದಿದ್ದನು. ಅಗತ್ಯ ಬಿದ್ದಲ್ಲಿ ಅದೆಷ್ಟೋ ದಿನಗಳನ್ನು ಆಹಾರವಿಲ್ಲದೆಯೂ ಕಳೆಯಲು ಮನಮೋಹನ ಶಕ್ತನಾಗಿದ್ದನು.
ಮನಮೋಹನ ತನ್ನದೆನ್ನುವ ಕುಟುಂಬವನ್ನಾಗಲೀ, ಆಪ್ತ ನೆಂಟರಿಷ್ಟರನ್ನಾಗಲೀ ಹೊಂದಿರಲಿಲ್ಲ. ಆತ ಬಾಲ್ಯದಲ್ಲೇ ಮನೆಯನ್ನು ತೊರೆದು ಓಡಿ ಬಂದು ಈ ಮಹಾನಗರದ ಮಡಿಲಿಗೆ ಬಿದ್ದವನು ಎಂಬ ಸಂಗತಿಯೊಂದನ್ನು ಬಿಟ್ಟರೆ ಅವನ ಗೆಳೆಯರಿಗೆ ಆತನ ಬಗ್ಗೆ ಹೆಚ್ಚಿನ ಸಂಗತಿಯೇನೂ ಗೊತ್ತಿರಲಿಲ್ಲ. ಅವನ ಬದುಕಿನಲ್ಲಿ ಇನ್ನೊಬ್ಬರು ತಿಳಿಯಬಹುದಾಗಿದ್ದ ‘ಹೆಚ್ಚಿನ ಸಂಗತಿಗಳೂ ಕೂಡ ಬಹಳ ವಿರಳವಾಗಿದ್ದವು. ಮನಮೋಹನ ತನ್ನ ಬದುಕಿನಲ್ಲಿ ಕಳೆದುಕೊಂಡಿದ್ದ ಅನೇಕ ವಸ್ತುಗಳಿದ್ದವು. ಅವುಗಳಲ್ಲಿ ಮುಖ್ಯವಾದುದೆಂದರೆ ಹೆಣ್ಣು! ಅವನು ಆಗಾಗ ತನ್ನ ಸ್ನೇಹಿತರ ಜೊತೆ ತಮಾಷೆಗಾಗಿ ಹೇಳುವುದಿತ್ತು. ‘‘ನಾನೊಂದು ಹೆಣ್ಣನ್ನು ಪ್ರೇಮಿಸಿದ್ದರೆ, ಆಗಲಾದರೂ ನನ್ನ ಬದುಕಿಗೊಂದು ಲಯ ಸಿಗಬಹುದಿತ್ತೋ ಏನೋ’’ ಈ ತಮಾಷೆಯಲ್ಲಿ ಸತ್ಯದ ಪಾಲು ಇಲ್ಲದಿಲ್ಲವೆನ್ನುವುದು ಖುದ್ದು ಮನಮೋಹನನಿಗೇ ಗೊತ್ತಿದೆ. ಮಧ್ಯಾಹ್ನ ಊಟದ ಹೊತ್ತಿಗೆ ಸರಿಯಾಗಿ ಫೋನ್ ಮತ್ತೆ ರಿಂಗಾಯಿತು. ಮನಮೋಹನ ರಿಸೀವರ್ ಎತ್ತಿ ‘‘ಹಲೋ, 44457’’ಎಂದು ಹೇಳಿದ.
‘‘44457?’’ ಮತ್ತೇ ಅದೇ ‘ರಾಂಗ್ ನಂಬರ್ ಹುಡುಗಿ!’
‘‘ಹೌದು’’ ಎಂದು ಅವನು ಉತ್ತರಿಸಿದ.
‘‘ಯಾರು ನೀನು?’’ ಅವಳು ಕೇಳಿದಳು.
‘‘ನಾನು ಮನಮೋಹನ’’
ಅವಳು ಪ್ರತಿಕ್ರಿಯಿಸಲಿಲ್ಲ.
‘‘ನಿನಗೆ ಯಾರ ಜೊತೆ ಮಾತನಾಡಬೇಕಾಗಿತ್ತು?’’ ಅವನು ಕೇಳಿದನು.
‘‘ನಿನ್ನ ಜೊತೆಯಲ್ಲೇ ಎಂದಾದರೆ ಅಡ್ಡಿಯಿದೆಯೇ?’’
‘‘ಇಲ್ಲ...ಖಂಡಿತಾ ಇಲ್ಲ’’
‘‘ನಿನ್ನ ಹೆಸರು ಮದನಮೋಹನ ಎಂದು ಹೇಳಿದೆಯಲ್ಲವೇ?’’
‘‘ಅಲ್ಲಲ್ಲ, ಮನಮೋಹನ’’
‘‘ಮನಮೋಹನ?’’
‘‘ಹೌದು’’
ಅವಳ ಕಡೆಯಿಂದ ಒಂದು ಕ್ಷಣ ವೌನ. ಕೊನೆಗೆ ಆ ವೌನವನ್ನು ಒಡೆದು ಮನಮೋಹನ ಕೇಳಿದನು. ‘‘ನಿನಗೆ ನನ್ನಲ್ಲೇನಾದರೂ ಮಾತಾಡುವುದಿದೆಯೇ?’’
‘‘ಇದೆ ಎಂದಾದರೆ..’’
‘‘ಹಾಗಿದ್ದರೆ ಹೇಳು’’
‘‘ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ನೀನೇ ಯಾಕೆ ಏನಾದರೂ ಹೇಳಬಾರದು...’’
‘‘ಸರಿ ಹಾಗಿದ್ದರೆ, ಕೇಳು’’ ಮನಮೋಹನ ಹೇಳಿದನು ‘‘ಈಗಾಗಲೇ ನಾನು ನನ್ನ ಹೆಸರನ್ನು ನಿನಗೆ ಹೇಳಿರುವೆ. ತಾತ್ಕಾಲಿಕವಾಗಿ ಈ ಆಫೀಸು ಕೋಣೆಯೇ ನನ್ನ ಸಾಮ್ರಾಜ್ಯ. ನಗರದ ಫುಟ್‌ಪಾತ್ ಮೇಲೆ ಮಲಗುತ್ತಿದ್ದ ನಾನು ಕಳೆದ ಒಂದು ವಾರದಿಂದ ಈ ಕೋಣೆಯ ಟೇಬಲ್ ಮೇಲೆ ಮಲಗುತ್ತಿದ್ದೇನೆ.’’
‘‘ಫುತ್‌ಪಾತ್ ಮೇಲೆ ಮಲಗುವಾಗ ಸೊಳ್ಳೆ ಕಾಟದಿಂದ ಹೇಗೆ ಪಾರಾಗುವೆ? ಸೊಳ್ಳೆ ಪರದೆ ಬಳಸುವಿಯಾ ಹೇಗೆ?’’ ಆಕೆ ಕೀಟಲೆಯ ಧ್ವನಿಯಲ್ಲಿ ಕೇಳಿದಳು.
ಮನಮೋಹನ ನಕ್ಕು ಹೇಳಿದ ‘‘ನನ್ನನ್ನು ನಂಬು, ನಾನು ನಿಜವನ್ನೇ ಹೇಳುತ್ತಿದ್ದೇನೆ. ಕಳೆದ ಹತ್ತಾರು ವರ್ಷಗಳಿಂದ ಈ ನಗರದ ಫುಟ್‌ಪಾತ್‌ಗಳಲ್ಲಿ ಮಲಗಿ ನಾನು ರಾತ್ರಿ ಕಳೆಯುತ್ತಿದ್ದೇನೆ. ಈ ಆಫೀಸು ಕೋಣೆಯಲ್ಲಿ ಬದುಕಲು ತೊಡಗಿ ಒಂದು ವಾರವಷ್ಟೇ ಆಯ್ತು.’’
‘‘ಬದುಕುವುದು ಎಂದರೆ ಹೇಗೆ?’’
‘‘ಇಲ್ಲೊಂದು ಪುಸ್ತಕವಿದೆ. ಅದರ ಕೊನೆಯ ಪುಟ ಕಳೆದು ಹೋಗಿದೆ. ಆದರೂ ಅದನ್ನು ಇಪ್ಪತ್ತು ಬಾರಿ ಓದಿ ಮುಗಿಸಿದ್ದೇನೆ. ಆ ಕಳೆದು ಹೋದ ಪುಟದ ಮೇಲೆ ನನ್ನ ಕೈಯ ತೋರುಬೆರಳನ್ನು ಊರಿದರೂ ಕೂಡ ಸಾಕು, ಈ ಪುಸ್ತಕದ ಅಂತ್ಯವನ್ನು ನಾನು ಸಲೀಸಾಗಿ ಹೇಳಿಬಿಡಬಲ್ಲೆ’’
‘‘ನೀನೊಬ್ಬ ಕುತೂಹಲಕರ ಮನುಷ್ಯ’’ಆಕೆ ನುಡಿದಳು. ಮನಮೋಹನ ಮರು ನುಡಿಯಲಿಲ್ಲ. ಅವಳು ಮರಳಿ ಪ್ರಶ್ನಿಸಿದಳು ‘‘ನೀನು ಏನು ಮಾಡುತ್ತಿರುವೆ?’’
‘‘ಅಂದರೆ..?’’ ಅವನು ಕೇಳಿದನು.
‘‘ಅಂದರೆ.. ನಿನ್ನ ಉದ್ಯೋಗವೇನು ಎಂದು ಕೇಳಿದೆ’’
‘‘ಉದ್ಯೋಗವೇ? ಆ ಒಂದು ರಗಳೆ ನನ್ನ ಪಾಲಿಗಿಲ್ಲ. ಕೆಲಸ ಮಾಡಲು ಇಚ್ಛಿಸದ ಒಬ್ಬ ಮನುಷ್ಯ ಯಾವ ಉದ್ಯೋಗವನ್ನು ತಾನೆ ಮಾಡಬಲ್ಲ? ಆದರೂ ನಿನ್ನ ಪ್ರಶ್ನೆಗೆ ನಾನು ಉತ್ತರಿಸುತ್ತೇನೆ. ಹಗಲಿಡೀ ನಾನು ಈ ಶಹರದ ಬೀದಿಗಳಲ್ಲಿ ಅಲೆಯುತ್ತೇನೆ. ಮತ್ತು ರಾತ್ರಿ ನಿದ್ದೆ ಹೋಗುತ್ತೇನೆ.’’
‘‘ನಿನ್ನ ಈ ಥರದ ಬದುಕನ್ನು ನೀನು ಇಷ್ಟ ಪಡುತ್ತಿರುವೆಯಾ?’’
‘‘ತಾಳು, ಇದೊಂದು ಮುಖ್ಯವಾದ ಪ್ರಶ್ನೆ, ಈ ಪ್ರಶ್ನೆಯನ್ನು ಇದುವರೆಗೆ ನನಗೆ ನಾನು ಕೂಡ ಕೇಳಿಕೊಂಡಿರಲಿಲ್ಲ. ನೀನೀಗ ಮೊದಲ ಬಾರಿಗೆ ಈ ಪ್ರಶ್ನೆಯನ್ನು ಎತ್ತಿರುವ ಕಾರಣದಿಂದ ನನ್ನ ನಾನು ಪ್ರಶ್ನಿಸಬೇಕಾಗಿ ಬಂದಿದೆ. ನನ್ನ ಈ ಬದುಕನ್ನು ನಾನು ಪ್ರೀತಿಸುತ್ತಿದ್ದೇನೆಯೇ?’’
‘‘ಉತ್ತರ ಏನಾಗಿದೆ?’’
‘‘ಯಾವ ಉತ್ತರವೂ ಸಿಗುತ್ತಿಲ್ಲ. ಯಾವುದಕ್ಕೂ ಇನ್ನು ಸ್ವಲ್ಪ ಕಾಲ ಬದುಕಿ ಆಮೇಲೆ ತೀರ್ಮಾನಕ್ಕೆ ಬರುವುದು ಒಳ್ಳೆಯದೇನೋ?’’
ಆಕೆ ನಕ್ಕಳು.
‘‘ನಿನ್ನ ನಗು ಸುಂದರವಾಗಿದೆ’’ ಮನಮೋಹನ ಹೇಳಿದ.
‘‘ಥ್ಯಾಂಕ್ಸ್’’ ತುಸು ಲಜ್ಜೆಯೊಂದಿಗೆ ನುಡಿದು ಆಕೆ ಫೋನ್ ಕೆಳಗಿಟ್ಟಳು. ಆಕೆ ರಿಸೀವರ್ ಕೆಳಗಿಟ್ಟ ಅದೆಷ್ಟು ಹೊತ್ತಿನ ಬಳಿಕವೂ ಮನಮೋಹನ ರಿಸೀವರ್ ಕೈಯಲ್ಲಿಡಿದು ನಿಂತೇ ಇದ್ದನು. ಅವನ ತುಟಿಗಳಲ್ಲಿ ಉಲ್ಲಾಸಕರವಾದ ನಗುವೊಂದು ಚಿಗುರೊಡೆಯುತ್ತಿತ್ತು.
ಮರುದಿನ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಫೋನ್ ಮೊಳಗತೊಡಗಿತು. ಗಾಢ ನಿದ್ದೆಯಲ್ಲಿ ಮುಳುಗಿ ಹೋಗಿದ್ದ ಮನಮೋಹನನನ್ನು ಫೋನ್ ಸದ್ದು ಬಡಿದೆಬ್ಬಿಸಿತು. ಅವನೊಮ್ಮೆ ಜೋರಾಗಿ ಆಕಳಿಸಿ ರಿಸೀವರ್ ಎತ್ತಿ ನುಡಿದನು.
‘‘ಹಲೋ 44457’’
‘‘ಗುಡ್‌ಮಾರ್ನಿಂಗ್, ಮನಮೋಹನ್ ಸಾಬ್’’
‘‘ಗುಡ್‌ಮಾರ್ನಿಂಗ್...ಓ, ಇದು ನೀನು.. ಇಷ್ಟೊಂದು ಬೆಳಗ್ಗೆಯೇ’’
‘‘ಗಾಢ ನಿದ್ದೆಯಲ್ಲಿದ್ದೆಯಾ..?’’ ಆಕೆ ಕೇಳಿದಳು.
‘‘ಹೌದು, ನಾನು ಈ ಕೋಣೆಯಲ್ಲಿ ಬದುಕಲು ಬಂದು ಸರ್ವನಾಶವಾಗುತ್ತಿದ್ದೇನೆ. ನಾನು ಪುನಃ ಫುಟ್‌ಪಾತ್‌ಗೆ ಮರಳಿದಾಗ ಕಷ್ಟದಲ್ಲಿ ಬೀಳಲಿದ್ದೇನೆ’’
‘‘ಏನು ಸಮಸ್ಯೆ?’’
‘‘ಫುಟ್‌ಪಾತ್‌ನಲ್ಲಿ ಮಲಗಿದಾಗ ಬೆಳಗ್ಗೆ ಕಡಿಮೆಯೆಂದರೂ ಐದು ಗಂಟೆಗೇ ಏಳಬೇಕಾಗುತ್ತದೆ’’
‘‘ಆಕೆ ನಕ್ಕಳು.’’
‘‘ಇದೇನು ಒಮ್ಮಿಂದೊಮ್ಮೆಲೆ ಫೋನ್ ಮಾಡಿದೆ ನೀನು’’ ಆತ ಕೇಳಿದನು.
‘‘ನಿನ್ನೆ ನೀನು ನನ್ನ ನಗು ಸುಂದರವಾಗಿದೆಯೆಂದು ಯಾಕೆ ಹೇಳಿದೆ?’’
‘‘ಇದೆಂತಹಾ ಮೂರ್ಖ ಪ್ರಶ್ನೆ. ಸುಂದರವಾದದ್ದು ಮಾತ್ರ ಹಾಗೆಂದೇ ಗುರುತಿಸಲ್ಪಡುತ್ತದೆ’’
‘‘ಹಾಗೇನೂ ಇಲ್ಲ..’’
‘‘ಈ ಕುರಿತು ಯಾವ ಮೊಂಡು ತರ್ಕವೂ ಅಗತ್ಯವಿಲ್ಲ. ನೀನು ಸುಂದರವಾಗಿ ನಕ್ಕೆ ಎಂದಾದಲ್ಲಿ ನಾನು ಹಾಗೆಂದು ಹೇಳಿಯೇ ತೀರುವೆನು’’
‘‘ಒಂದು ವೇಳೆ ನಾನು ನೇಣು ಹಾಕಿಕೊಂಡೆ ಎಂದಾದಲ್ಲಿ..’’
‘‘ಎಂದಾದಲ್ಲಿ...’’
‘‘ನಿನಗೆ ದುಃಖವಾಗಬಹುದೇ..?’’
‘‘ನನಗೇನಾಗಬಹುದೋ ಅದನ್ನು ನಾನೀಗಲೇ ಹೇಳುವುದು ಅಸಾಧ್ಯ. ಆದರೆ ಒಂದು ಮಾತಂತೂ ಸತ್ಯ. ನಿನ್ನ ನಗು ಚೆನ್ನಾಗಿಲ್ಲವೆಂದರೆ ಅದು ನನ್ನ ಒಳ್ಳೆಯ ಅಭಿರುಚಿಗೆ ದ್ರೋಹವೆಸಗಿದ ಹಾಗೆ, ಅಷ್ಟೇ’’ ಅವನು ಗಂಭೀರವಾಗಿ ಹೇಳಿದನು.
ಆಕೆ ಕ್ಷಣ ಹೊತ್ತು ವೌನ ವಹಿಸಿದಳು. ಬಳಿಕ ನುಡಿದಳು. ‘‘ನಿನ್ನ ಒಳ್ಳೆಯ ಅಭಿರುಚಿಯನ್ನು ನಾನು ಅನುಮಾನಿಸಿದ್ದರೆ ಕ್ಷಮೆಯಿರಲಿ. ಈಗ ನೀನು ನಿನ್ನ ಆ ಒಳ್ಳೆಯ ಅಭಿರುಚಿಯ ಕುರಿತು ಸ್ವಲ್ಪ ಹೇಳುವವನಾಗು’’
‘‘ಏನು ಹೇಳಲಿ..?’’
‘‘ಅಂದರೆ ನಿನ್ನ ಹವ್ಯಾಸಗಳೇನೆಂದು ಹೇಳು’’
‘‘ನಾನೊಬ್ಬ ಒಳ್ಳೆ ಫೊಟೋಗ್ರಾಫರ್ ಎನ್ನುವುದನ್ನು ಬಿಟ್ಟರೆ ಬೇರೇನೂ ಇಲ್ಲ’’ ಅವನು ಉತ್ತರಿಸಿದನು.
‘‘ಅದೊಂದು ಒಳ್ಳೆಯ ಹಾಬಿ. ಹಾಗಿದ್ದರೆ ನೀನೊಂದು ಒಳ್ಳೆಯ ಕ್ಯಾಮರವನ್ನೂ ಹೊಂದಿರಬೇಕಲ್ಲ?’’
‘‘ಕ್ಯಾಮರವೇ ಇಲ್ಲದ ಕ್ಯಾಮರಾಮನ್ ನಾನು. ಕ್ಯಾಮರ ಬೇಕಾದಾಗ ಗೆಳೆಯನೊಬ್ಬನಿಂದ ಇಸಿದುಕೊಳ್ಳುವೆನು. ನಾನು ಸ್ವಲ್ಪ ಹಣ ಸಂಪಾದಿಸಿದಲ್ಲಿ ಖಂಡಿತಾ ಒಂದು ಕ್ಯಾಮರಾ ಕೊಳ್ಳುವೆನು’’
‘‘ಯಾವ ಕ್ಯಾಮರಾ?’’
‘‘ಎಕ್ಸಕ್ಟಾ. ಅದು ನನ್ನ ಇಷ್ಟದ ಕ್ಯಾಮರ’’
ಆಕೆ ತುಸು ಹೊತ್ತು ಮಾತಾಡಲಿಲ್ಲ. ಬಳಿಕ ಹೇಳಿದಳು: ‘‘ನಾನು ಬೇರೆಯೇ ಒಂದು ವಿಚಾರವನ್ನು ಯೋಚಿಸುತ್ತಿದ್ದೇನೆ.’’
‘‘ಏನು ಹೇಳು’’
‘‘ನೀನು ನನ್ನ ಹೆಸರನ್ನಾಗಲೀ, ನನ್ನ ಫೋನ್ ನಂಬರನ್ನಾಗಲೀ ಕೇಳಲೇ ಇಲ್ಲವಲ್ಲ?’’
‘‘ನನಗದರ ಅಗತ್ಯವಿದೆಯೆಂದು ಅನಿಸುವುದಿಲ್ಲ’’ಆತ ಹೇಳಿದ.
‘‘ಯಾಕಿಲ್ಲ?’’
‘‘ನಿನ್ನ ಹೆಸರು ಏನಾಗಿದ್ದರೂ ಅದರಲ್ಲೇನಿದೆ? ನನ್ನ ಫೋನ್ ನಂಬರ್ ನಿನ್ನಲ್ಲಿದೆ. ಅಷ್ಟು ಸಾಲದೆ? ನಾನು ನಿನಗೆ ಫೋನ್ ಮಾಡಬೇಕೆಂದು ನೀನು ಬಯಸಿದ ದಿನ ನಿನ್ನ ಫೋನ್ ನಂಬರನ್ನು ನನಗೆ ತಿಳಿಸಲು ಯಾವ ಅಡ್ಡಿಯೂ ಇಲ್ಲ.’’
‘‘ಇಲ್ಲ, ನಾನು ತಿಳಿಸುವುದಿಲ್ಲ’’
‘‘ನಿನ್ನಿಷ್ಟ. ನಾನಾಗಿಯಂತೂ ಕೇಳಲಾರೆ’’
‘‘ಖಂಡಿತಾ ನೀನೊಬ್ಬ ವಿಚಿತ್ರ ಮನುಷ್ಯ’’ ಎಂದು ಅವಳು ಫೋನ್ ಕೆಳಗಿಟ್ಟಳು. ಮನಮೋಹನ ನಸುನಕ್ಕು ಮುಖ ತೊಳೆಯಲು ಹೊರಟ. ಅವನು ಹೊರಗಡೆ ಹೊರಡುವ ಸಲುವಾಗಿ ಉಡುಪು ಧರಿಸತೊಡಗಿದನು. ಆತ ಇನ್ನೇನು ಹೊರಗಡೆ ಕಾಲಿಡಬೇಕೆನ್ನುವ ಹೊತ್ತಿಗೆ ಸರಿಯಾಗಿ ಫೋನ್ ಪುನಃ ರಿಂಗಾಯಿತು. ಮನಮೋಹನ್ ರಿಸೀವರ್ ಎತ್ತಿ ನುಡಿದ ‘‘ಹಲೋ, 44457’’
‘‘ಮಿ. ಮನಮೋಹನ್?’’ ಮತ್ತೆ ಅವಳು!
‘‘ನಿನಗೆ ನನ್ನಿಂದೇನಾಗಬೇಕಿತ್ತು?’’ ಅವನು ಪ್ರಶ್ನಿಸಿದನು.
‘‘ನಾನು ನಿನಗೊಂದು ವಿಚಾರ ಹೇಳಬೇಕಾಗಿತ್ತು. ಇನ್ನು ಮುಂದೆ ನಿನಗೆ ನಾನು ಕಾಟ ಕೊಡಲಾರೆ’’
‘‘ಅದು ಖಂಡಿತಾ ಒಳ್ಳೆಯ ವಿಚಾರ’’
‘‘ನಾನು ತಿಂಡಿ ತಿನ್ನಲು ಕೂತಾಗ, ನಿನ್ನನ್ನು ಕಾಡಿಸುವುದು ಸರಿಯಲ್ಲ ಎಂದು ನನಗೆ ಹೊಳೆಯಿತು. ನೀನು ತಿಂಡಿ ತಿಂದೆಯಾ?’’
‘‘ಇಲ್ಲ. ನಿನ್ನ ಫೋನ್ ಬಂದಾಗ ನಾನು ಹೊರಗೆ ಹೊರಟಿದ್ದೆನಷ್ಟೇ’’
‘‘ಓ, ನನ್ನಿಂದ ನಿನಗೆ ತೊಂದರೆಯಾಯಿತು’’
‘‘ತೊಂದರೆಯೇನೂ ಇಲ್ಲ. ಯಾಕೆಂದರೆ ನನ್ನ ಕಿಸೆಯಲ್ಲಿ ನಯಾ ಪೈಸೆಯೂ ಇಲ್ಲ. ಇವತ್ತು ಬೆಳಗಿನ ಉಪಹಾರ ನನಗೆ ದಕ್ಕುತ್ತದೆ ಎನ್ನುವ ಯಾವ ಭರವಸೆಯೂ ಇಲ್ಲ.’’
‘‘ನೀನು ಹಾಗೆಲ್ಲಾ ಯಾಕೆ ಮಾತಾಡುವೆ? ನಿನ್ನ ನೀನು ನೋಯಿಸಿಕೊಂಡು ಸಂತೋಷಪಡುತ್ತಿರುವೆಯಾ?’’
‘‘ಖಂಡಿತಾ ಇಲ್ಲ, ಇರುವುದನ್ನು ಹೇಳಿದೆ ಅಷ್ಟೇ’’
‘‘ನಿನಗೆ ನಾನು ಸ್ವಲ್ಪ ಹಣ ಕಳಿಸಲೇ?’’
‘‘ನನ್ನ ಸಾಲಗಾರರ ಪಟ್ಟಿಗೆ ಇನ್ನೊಂದು ಹೆಸರು ಸೇರಿದಂತಾಗುತ್ತದೆ’’
‘‘ಹಾಗಿದ್ದರೆ ಕಳಿಸಲಾರೆ’’
‘‘ನಿನ್ನಿಷ್ಟ’’ ಎಂದು ಹೇಳಿ ಮನಮೋಹನ ಫೋನ್ ಕೆಳಗಿಟ್ಟು ಹೊರನಡೆದನು. ಮೆಟ್ಟಿಲು ಇಳಿಯುತ್ತಿದ್ದಂತೇ ಮನಮೋಹನ ಎಡಪಕ್ಕೆಯನ್ನು ಒತ್ತಿ ಹಿಡಿದುಕೊಂಡನು. ಕಳೆದ ಕೆಲವು ತಿಂಗಳಿಂದ ಅವನ ಎಡಪಕ್ಕೆಯಲ್ಲಿ ಅಸಾಧಾರಣವಾದ ನೋವೊಂದು ಆಗಾಗ ಕಾಣಿಸಿಕೊಳ್ಳುತ್ತಿತ್ತು. ಯಾರಾದರೂ ವೈದ್ಯರಿಗೆ ತೋರಿಸಬೇಕೆಂದು ಅವನು ಅಂದುಕೊಳ್ಳುವುದಿದ್ದರೂ ಅವನು ಬದುಕಿನಲ್ಲಿ ರೂಢಿಸಿಕೊಂಡು ಬಂದ ದಿವ್ಯ ನಿರ್ಲಕ್ಷದಿಂದಾಗಿ ಅದು ಇದುವರೆಗೂ ಸಾಧ್ಯವಾಗಿರಲಿಲ್ಲ. ತುಸುಹೊತ್ತು ಮೆಟ್ಟಲಲ್ಲೇ ಕೂತು ಸಾವರಿಸಿಕೊಂಡ ಮನಮೋಹನ ‘ಇದು ಸುಲಭದಲ್ಲಿ ತಳ್ಳಿ ಹಾಕುವಂತಹ ನೋವಲ್ಲ’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡನು.
ಮನಮೋಹನ ಮರಳಿ ಕೋಣೆಗೆ ಸೇರಿದಾಗ ರಾತ್ರಿ ಬಹಳ ತಡವಾಗಿತ್ತು. ಅವನ ಮನಸ್ಸನ್ನಿಡೀ ಆ ಹುಡುಗಿಯೇ ತುಂಬಿಕೊಂಡಿದ್ದಳು. ಆಕೆಯೋರ್ವ ವಿದ್ಯಾವಂತ ತರುಣಿ ಎನ್ನುವುದರಲ್ಲಿ ಅವನಿಗೆ ಯಾವ ಸಂಶಯವೂ ಇರಲಿಲ್ಲ. ಆಕೆಯ ನಗುವಿನಲ್ಲೇ ಆಕೆಯ ಸಕಲ ಸೌಂದರ್ಯಗಳೂ ಅಡಗಿದಂತಿತ್ತು. ರಾತ್ರಿ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಫೋನ್ ಮೊಳಗಿತು.
‘‘ಹಲೋ 44457’’
‘‘ಇದು ಮನಮೋಹನ್ ತಾನೇ?’’ ಅವಳು!
‘‘ಹೌದು ಮಾತಾಡುತ್ತಿದ್ದೇನೆ’’
‘‘ನಾನು ಬೆಳಗಿನಿಂದ ಇಡೀ ದಿನ ಫೋನ್ ಮಾಡುತ್ತಿದ್ದೆ. ನೀನು ಎಲ್ಲಿ ಹಾಳಾಗಿ ಹೋಗಿದ್ದೆ?’’
‘‘ನನಗೆ ನೌಕರಿಯಿಲ್ಲ ಎಂದಾದರೂ ನನಗೂ ಮಾಡಲು ಕೆಲಸಗಳಿವೆ’’
‘‘ಎಂತಹ ಕೆಲಸ?’’
‘‘ಅಲೆಯುವುದು’’
‘‘ಎಷ್ಟೊತ್ತಿಗೆ ಬಂದೆ?’’
‘‘ಸುಮಾರು ಒಂದು ಗಂಟೆ ಕಳೆಯಿತು’’
‘‘ನನ್ನ ಫೋನ್ ಬಂದಾಗ ನೀನು ಏನು ಮಾಡುತ್ತಿದ್ದೆ?’’
‘‘ಟೇಬಲ್ ಮೇಲೆ ಮಲಗಿ ನೀನು ನೋಡಲು ಹೇಗಿರಬಹುದೆಂದು ಊಹಿಸಲು ಯತ್ನಿಸುತ್ತಿದ್ದೆ.’’
‘‘ಹೇಗಿದ್ದೇನೆ ನಾನು?’’
‘‘ಇಲ್ಲ ನಿನ್ನ ಸ್ವರವೊಂದನ್ನು ಬಿಟ್ಟು ನನಗೇನನ್ನೂ ಊಹಿಸಲು ಕೂಡ ಸಾಧ್ಯವಾಗುತ್ತಿಲ್ಲ.’’
‘‘ಆ ಪ್ರಯತ್ನವನ್ನು ಬಿಟ್ಟು ಬಿಡು. ನಾನು ಬಹಳ ಕುರೂಪಿ’’
‘‘ಹಾಗಿದ್ದಲ್ಲಿ ದಯವಿಟ್ಟು ನೀನು ನೇಣು ಹಾಕಿಕೊಳ್ಳಬಹುದು. ಕುರೂಪವೆಂದರೆ ನನಗೆ ದ್ವೇಷ’’
‘‘ಇಲ್ಲ, ಇಲ್ಲ, ನಾನು ಸುಂದರಿ. ನಿನ್ನ ದ್ವೇಷಕ್ಕೆ ಗುರಿಯಾಗುವುದು ನನ್ನಿಂದ ಸಾಧ್ಯವಿಲ್ಲ’’
ತುಸು ಹೊತ್ತು ಅವರಿಬ್ಬರು ಏನನ್ನೂ ಮಾತಾಡದೆ ತಮ್ಮಿಬ್ಬರ ನಡುವೆ ನೆಲೆಸಿದ ವೌನವನ್ನೇ ಆಲಿಸಿದರು. ಬಳಿಕ ಅವಳು ಕೇಳಿದಳು ‘‘ನಾನು ನಿನಗೋಸ್ಕರ ಒಂದು ಹಾಡನ್ನು ಹಾಡಲೇ?’’
‘‘ಖಂಡಿತಾ ಹಾಡು’’
ಆಕೆ ತನ್ನ ಮದು ಕಂಠವನ್ನು ಇನ್ನೂ ಕೋಮಲವಾಗಿಸಿ ಹಾಡತೊಡಗಿದಳು. ಆ ಹಾಡಿನ ಅಲೆಯಲ್ಲಿ ತುಯ್ದು ಹೋದ ಮನಮೋಹನ ‘‘ನೀನು ಅದ್ಭುತವಾಗಿ ಹಾಡುತ್ತಿ’’ ಎಂದು ಉದ್ಗರಿಸಿದನು.
‘‘ಥ್ಯಾಂಕ್ಸ್’’ ಹೇಳಿ ಆಕೆ ಫೋನ್ ಕೆಳಗಿಟ್ಟಳು.
ರಾತ್ರಿ ಇಡೀ ಅವಳ ದೇವ ಕಿನ್ನರಿಯಂತಹ ಕಂಠ ಅವನ ಮೈ ಮನಸ್ಸನ್ನು ಆವರಿಸಿತು. ಬೆಳಗ್ಗೆ ಸಾಮಾನ್ಯವಾಗಿ ಏಳುವುದಕ್ಕಿಂತಲೂ ಬೇಗನೇ ಎದ್ದ ಮನಮೋಹನ ಆಕೆಯ ಫೋನಿಗಾಗಿ ಕಾದು ಕೂತನು. ಆದರೆ ಆ ಇಡೀ ದಿವಸ ಫೋನ್ ತಣ್ಣಗಿತ್ತು. ಮನಮೋಹನ ಪ್ರಕ್ಷುಬ್ಧನಂತೆ ಕೋಣೆಯಿಡೀ ಶತಪಥ ನಡೆದಾಡತೊಡಗಿದನು. ಆತ ಇಪ್ಪತ್ತು ಬಾರಿ ಓದಿ ಮುಗಿಸಿದ್ದ ಆ ಪುಸ್ತಕವನ್ನು ಕೂತು ಮತ್ತೊಮ್ಮೆ ಓದಿದನು. ಕೆಂಡದ ಮೇಲೆ ಕೂತವನಂತೆ ಮನಮೋಹನ ದಿನವಿಡೀ ಚಡಪಡಿಸುತ್ತಿದ್ದ. ಸಂಜೆ ಸುಮಾರು ಏಳು ಗಂಟೆಗೆ ಫೋನ್ ರಿಂಗಾಯಿತು. ಆತ ಧಾವಿಸಿ ಬಂದು ರಿಸೀವರ್ ಎತ್ತಿಕೊಂಡನು. ‘‘ಹಲೋ ಮನಮೋಹನ್, ಹೇಗಿದ್ದೀಯಾ?’’ ಅವಳು ಕೇಳಿದಳು.
‘‘ಇಡೀ ದಿನ ಎಲ್ಲಿ ಹೋಗಿದ್ದೇ?’’ ಎಂದು ಆತ ತೀಕ್ಷ್ಮವಾಗಿ ಕೇಳಿದನು.
‘‘ಏಕೆ?’’ ಆಕೆಯ ಸ್ವರ ತುಸು ಕಂಪಿಸಿತು.
‘‘ನಿನ್ನ ಫೋನ್‌ಗಾಗಿ ಇಡೀ ದಿನ ನಾನಿಲ್ಲಿ ಕಾಯುತ್ತಿದ್ದೆ. ನಿನಗೆ ಗೊತ್ತೇ? ಈ ದಿನ ನನ್ನ ಜೇಬಿನಲ್ಲಿ ಸಾಕಷ್ಟು ದುಡ್ಡಿದ್ದರೂ ಕೂಡ ನಾನು ಕಾಫಿಯನ್ನಾಗಲೀ, ತಿಂಡಿಯನ್ನಾಗಲೀ ತಿನ್ನಲು ಹೊರಗೆ ಹೋಗಲಿಲ್ಲ.’’
‘‘ನಾನು ನನಗೆ ಬೇಕಾದಾಗ ಫೋನ್ ಮಾಡುತ್ತೇನೆ. ನೀನು...’’
ಅವಳ ಮಾತನ್ನು ಅರ್ಧದಲ್ಲೇ ತಡೆದ ಮನಮೋಹನ ‘‘ನೋಡು, ಬೇಕಿದ್ದರೆ ನಮ್ಮ ಈ ವ್ಯವಹಾರವನ್ನು ಇಲ್ಲಿಗೇ ಮುಗಿಸಿಬಿಡೋಣ. ಅಥವಾ ಯಾವ ಸಮಯಕ್ಕೆ ನೀನು ಫೋನ್ ಮಾಡುತ್ತೀಯಾ ಎಂದು ಸರಿಯಾಗಿ ನನಗೆ ಹೇಳು. ಈ ಕಾಯುವ ಕೆಲಸ ಯಾವ ಶತ್ರುವಿಗೂ ಬೇಡ’’
‘‘ಮೋಹನ್, ನಾನು ನಿನ್ನಲ್ಲಿ ಕ್ಷಮೆ ಬೇಡುವೆನು. ನಾಳೆಯಿಂದ ಬೆಳಗ್ಗೆ ಮತ್ತು ಸಂಜೆ ಕರಾರುವಕ್ಕಾಗಿ ಫೋನ್ ಮಾಡುವೆನು’’ ಅವಳು ಭರವಸೆ ಕೊಟ್ಟಳು.
‘‘ಅದಾಗಬಹುದು’’ ಅವನೂ ಸಮ್ಮತಿಸಿದನು.
‘‘ನೀನು ನನ್ನ ಫೋನಿಗಾಗಿ ಹೀಗೆ ಕಾಯುತ್ತಿರಬಹುದೆಂದು ನಾನು ಭಾವಿಸಿರಲಿಲ್ಲ’’
‘‘ಕಾಯುವುದು ನನ್ನ ತಾಳ್ಮೆಗೆ ಮೀರಿದ ವಿಷಯ. ಇಂತಹ ಹೊತ್ತಿನಲ್ಲಿ ನಾನು ನನ್ನನ್ನೇ ಶಿಕ್ಷಿಸಿಕೊಳ್ಳುವೆನು.’’
‘‘ಅದು ಹೇಗೆ..?’’
‘‘ನೋಡು, ನೀನು ಬೆಳಗಿನಿಂದ ಫೋನ್ ಮಾಡಲಿಲ್ಲ. ನನಗೆ ಹೊರಗೆ ಹೋಗಬಹುದಿತ್ತಾದರೂ ಹೋಗಲಿಲ್ಲ. ಅಸಾಧ್ಯ ಅಸಹನೆಯಿಂದ ರೇಗುತ್ತಾ ಇಡೀ ದಿನ ಇಲ್ಲೇ ಕಳೆದೆ’’
‘‘ನಾನು ಬೇಕೆಂದೇ ಫೋನ್ ಮಾಡಲಿಲ್ಲ’’ಆಕೆ ಹೇಳಿದಳು.
‘‘ಯಾಕೆ?’’
‘‘ನಾನು ಫೋನ್ ಮಾಡದೇ ಹೋದಲ್ಲಿ ನಿನಗೆ ಸಂಕಟವಾಗುವುದೇ ಎಂದು ತಿಳಿಯಬೇಕಾಗಿತ್ತು.’’
‘‘ನೀನು ಬಹಳ ತುಂಟಿ. ನಾನೀಗ ತುರ್ತಾಗಿ ಹೊರಗೆ ಹೋಗಬೇಕಾಗಿದೆ. ಏನನ್ನಾದರೂ ತಿನ್ನದೇ ಹೋದರೆ ನನ್ನ ಪ್ರಾಣ ಹೋಗಿ ಬಿಡಬಹುದು.’’
‘‘ಬೇಗ ಬರುವಿಯಲ್ಲ?’’
‘‘ಹೆಚ್ಚೆಂದರೆ ಅರ್ಧಗಂಟೆಯೊಳಗೆ’’
ಮನಮೋಹನ ಹೇಳಿದ ಮಾತಿಗೆ ಸರಿಯಾಗಿ ಅರ್ಧಗಂಟೆಯೊಳಗೆ ಕೋಣೆಗೆ ಮರಳಿದನು. ಆಕೆ ಫೋನ್ ಮಾಡಿದಳು. ಅವರಿಬ್ಬರು ಸುಮಾರು ಹೊತ್ತು ಮಾತಾಡಿಕೊಂಡರು. ಹಿಂದೆ ಹಾಡಿದ ಹಾಡನ್ನು ಪುನಃ ಒಮ್ಮೆ ಹಾಡಲು ಮನಮೋಹನ ಅವಳಲ್ಲಿ ವಿನಂತಿಸಿಕಂಡನು. ಆಕೆ ಹಾಡಿದಳು.
ಈಗ ಆಕೆ ದಿನವೂ ಬೆಳಗ್ಗೆ ಮತ್ತು ಸಂಜೆ ತಪ್ಪದೇ ಫೋನ್ ಮಾಡುತ್ತಿದ್ದಳು. ಕೆಲವೊಮ್ಮೆ ಅವರಿಬ್ಬರು ಗಂಟೆಗಟ್ಟಳೆ ಹೊತ್ತು ಮಾತಾಡುವುದಿತ್ತು. ಹಾಗಿದ್ದರೂ ಮನಮೋಹನ ಅವಳ ಹೆಸರನ್ನಾಗಲೀ, ಅವಳ ಫೋನ್ ನಂಬರನ್ನಾಗಲೀ ಅವಳಲ್ಲಿ ಕೇಳಲಿಲ್ಲ. ಆರಂಭದಲ್ಲಿ ಆಕೆ ಹೇಗಿರಬಹುದೆಂದು ಕಲ್ಪಿಸಿಕೊಳ್ಳಲು ಆತ ಪ್ರಯತ್ನಿಸಿದ್ದಿತು. ಆದರೆ ದಿನ ಕಳೆದಂತೆ ಅದರ ಅಗತ್ಯ ಅವನಿಗೆ ಕಾಣದಾಯಿತು. ಅವಳ ದೇವರಾಗದಂತಹ ಸ್ವರವೇ ಅವನ ಪಾಲಿಗೆ ಎಲ್ಲವೂ ಆಗಿತ್ತು. ಅವಳ ಮುಖ, ಅವಳ ಆತ್ಮ, ಅವಳ ದೇಹ, ಎಲ್ಲವೂ!
ಅವಳು ಮತ್ತೊಮ್ಮೆ ಅವನಲ್ಲಿ ಕೇಳಿದಳು: ‘‘ಯಾಕೆ ಮೋಹನ್, ನನ್ನ ಹೆಸರನ್ನೇ ನೀನು ಕೇಳುತ್ತಿಲ್ಲ?’’
‘‘ಯಾಕೆಂದರೆ ನಿನ್ನ ಸ್ವರವೇ ನಿನ್ನ ಹೆಸರು’’ ಅವನು ಉತ್ತರಿಸಿದ.
ಮತ್ತೊಂದು ದಿನ ಅವಳು ಕೇಳಿದಳು: ‘‘ಮೋಹನ್, ಹಿಂದೆ ನೀನು ಯಾರನ್ನಾದರೂ ಪ್ರೀತಿಸಿದ್ದೀಯಾ?’’
‘‘ಇಲ್ಲ’’
‘‘ಯಾಕೆ?’’
‘‘ಈ ಪ್ರಶ್ನೆಗೆ ಉತ್ತರಿಸಬೇಕಿದ್ದರೆ ಈವರೆಗಿನ ನನ್ನ ಬದುಕಿನ ತುಣುಕುಗಳನ್ನೆಲ್ಲಾ ಕಣ್ಣ ಮುಂದೆ ಬಿಡಿಸಬೇಕಾಗುತ್ತದೆ. ಆದರೆ ಅಲ್ಲಿ ಕಾಣ ಸಿಗಬಹುದಾದ ಮಹಾ ಶೂನ್ಯತೆಯನ್ನು ಕಂಡು ನನ್ನ ಎದೆ ಒಡೆದು ಹೋಗಬಹುದು.’’
‘‘ಹಾಗಿದ್ದರೆ ಬಿಟ್ಟುಬಿಡು’’
ಹೀಗೆ ಒಂದು ತಿಂಗಳು ಕಳೆಯಿತು. ಒಂದು ದಿನ ಗೆಳೆಯನ ಪತ್ರ ಮನಮೋಹನನ ಕೈಗೆ ತಲುಪಿತು. ಗೆಳೆಯ ತನ್ನ ವ್ಯವಹಾರಗಳನ್ನು ಮುಗಿಸಿಕೊಂಡು ಇನ್ನು ಒಂದು ವಾರದೊಳಗೆ ಮುಂಬೈಗೆ ಮರಳುವವನಿದ್ದನು. ಅಂದು ಸಂಜೆ ಆಕೆ ಫೋನ್ ಮಾಡಿದಾಗ ಮನಮೋಹನ ಹೇಳಿದನು: ‘‘ನನ್ನ ಈ ಸಾಮ್ರಾಜ್ಯ ಕೊನೆಯಾಗುವ ಗಳಿಗೆ ಹತ್ತಿರ ಬರುತ್ತಿದೆ.’’
‘‘ಯಾಕೆ?’’
‘‘ನನ್ನ ಗೆಳೆಯ ಇನ್ನೊಂದು ವಾರದೊಳಗೆ ಇಲ್ಲಿಗೆ ಮರಳಲಿದ್ದಾನೆ’’
‘‘ಫೋನ್ ಇರುವ ಬೇರೆ ಗೆಳೆಯರಾರು ನಿನಗಿಲ್ಲವೇ?’’
‘‘ಬೇಕಾದಷ್ಟಿದ್ದಾರೆ. ಆದರೆ ಅವರ ನಂಬರ್ ನಿನಗೆ ಕೊಡಲಾರೆ’’
‘‘ಯಾಕೆ?’’
‘‘ನಿನ್ನ ಸ್ವರವನ್ನು ನನ್ನ ಒಬ್ಬನನ್ನು ಬಿಟ್ಟು ಬೇರೆ ಯಾರೂ ಕೇಳುವುದು ನನಗಿಷ್ಟವಿಲ್ಲ’’
‘‘ಯಾಕೆ?’’
‘‘ನನಗೆ ಅಸೂಯೆಯಾಗುತ್ತದೆ’’
‘‘ಮತ್ತೆ ನಾವೇನು ಮಾಡೋಣ?’’
‘‘ನೀನೇ ಹೇಳು’’
‘‘ನಿನ್ನ ಸಾಮ್ರಾಜ್ಯ ಕೊನೆಯಾಗುವ ಕಡೆಯ ದಿನ ನಾನು ನನ್ನ ಫೋನ್ ನಂಬರನ್ನು ನಿನಗೆ ನೀಡುತ್ತೇನೆ.’’
ಅವನಿಗೆ ಒಮ್ಮೆಲೆ ನಿರಾಳವಾಯಿತು.ರಿಸೀವರ್ ಕೆಳಗಿಟ್ಟು ಅವನು ಮತ್ತೆ ಅವಳ ಚಿತ್ರವನ್ನು ಕಲ್ಪಿಸಿಕೊಳ್ಳಲು ಯತ್ನಿಸಿದನು. ಅವಳ ಆ ದಿವ್ಯ ಸ್ವರವನ್ನು ಬಿಟ್ಟರೆ ಬೇರೇನೂ ಹೊಳೆಯಲಿಲ್ಲ. ಇದ್ದಕ್ಕಿದ್ದಂತೆಯೇ ಅವಳನ್ನೊಮ್ಮೆ ಕಾಣುವ ಆಸೆ ಅವನಲ್ಲಿ ಉತ್ಕಟವಾಯಿತು.
ಮರುದಿನ ಆಕೆ ಫೋನ್ ಮಾಡಿದಾಗ ‘‘ನಿನ್ನನ್ನು ನೋಡಬೇಕೆನ್ನುವ ಕುತೂಹಲ ನನ್ನಲ್ಲಿ ಹುಟ್ಟಿದೆ’’ ಎಂದು ಅವನು ಹೇಳಿದನು.
‘‘ನೀನು ನನ್ನನ್ನು ಯಾವಾಗ ಬೇಕಿದ್ದರೂ ನೋಡಬಹುದು. ಬೇಕಿದ್ದರೆ ಈ ದಿನವೇ’’ ಅವಳು ನುಡಿದಳು.
‘‘ಬೇಡ, ಈ ದಿನವೇ ಬೇಡ. ನಿನ್ನನ್ನು ನೋಡುವ ದಿನ ನಾನು ಹೊಸ ಬಟ್ಟೆಗಳನ್ನು ಧರಿಸಿರಬೇಕು. ನನಗೆ ಕೆಲವು ಹೊಸ ಬಟ್ಟೆಗಳನ್ನು ತರುವಂತೆ ನನ್ನ ಗೆಳೆಯನಿಗೆ ಇಂದೇ ತಿಳಿಸುವೆನು.’’
‘‘ಓ, ನೀನು ಸಣ್ಣ ಮಗುವಿನಂತೆ ಆಡುತ್ತಿರುವೆ. ಅಂದ ಹಾಗೆ ನಾವಿಬ್ಬರು ಭೇಟಿಯಾದ ದಿನ ನಾನು ನಿನಗೊಂದು ಉಡುಗೊರೆ ಕೊಡುವೆನು.’’
‘‘ನಿನ್ನನ್ನು ಭೇಟಿಯಾಗುವುದಕ್ಕಿಂತ ದೊಡ್ಡ ಉಡುಗೊರೆ ಈ ಜಗತ್ತಿನಲ್ಲಿ ನನಗೆ ಬೇರೊಂದಿಲ್ಲ’’
‘‘ನಾನು ನಿನಗಾಗಿ ಒಂದು ಎಕ್ಸಕ್ಟಾ ಕ್ಯಾಮರಾ ಖರಿದಿಸಿದ್ದೇನೆ’’
‘‘ಓಹ್’’
‘‘ಆದರೆ ಒಂದು ಷರತ್ತಿದೆ. ಆ ಕ್ಯಾಮರಾದಿಂದ ನೀನು ನನ್ನದೊಂದು ಫೊಟೋ ತೆಗೆಯಬೇಕು.’’
‘‘ಅದನ್ನೆಲ್ಲಾ ನಾವು ಭೇಟಿಯಾದ ದಿನ ನಾನು ತೀರ್ಮಾನಿಸುತ್ತೇನೆ.’’
‘‘ನಾಳೆ ಮತ್ತು ನಾಳಿದ್ದು ಎರಡು ದಿನ ನಾನು ನಿನಗೆ ಫೋನ್ ಮಾಡುವುದಿಲ್ಲ’’ ಅವಳು ನುಡಿದಳು.
‘‘ಏಕೆ?’’
‘‘ನಾನು ಮನೆಯಲ್ಲಿರುವುದಿಲ್ಲ. ನಾನು ನನ್ನ ಸದಸ್ಯರೊಂದಿಗೆ ನಗರದಿಂದ ಹೊರಗೆ ಪಿಕ್‌ನಿಕ್ ಹೋಗುತ್ತಿದ್ದೇನೆ. ಕೇವಲ ಎರಡು ದಿನಗಳಿಗೋಸ್ಕರ’’
ಮರುದಿನ ಇಡೀ ದಿವಸ ಮನಮೋಹನ ಸುಮ್ಮನೇ ಆ ಆಫೀಸು ಕೋಣೆಯಲ್ಲಿಯೇ ಕುಳಿತು ಕಳೆದನು. ಆಕೆಯ ಸ್ವರ ವಿನ್ಯಾಸದ ಎಳೆಗಳನ್ನೇ ಪೋಣಿಸಿ ಆಕೆಯ ವ್ಯಕ್ತಿತ್ವವನ್ನು ನೇಯುವ ಪ್ರಯತ್ನದಲ್ಲಿ ತೊಡಗಿದ. ಆ ಒಂದು ದಿನ ಹಾಗೆಯೇ ಕಳೆದು ಹೋಯ್ತು. ಅದರ ಮರುದಿವಸ ಮನಮೋಹನನಿಗೆ ಸಣ್ಣಗೆ ಜ್ವರ ಕಾಣಿಸಿಕೊಂಡಿತು. ಆತನ ಮೈಯಿಡೀ ಕೊರಡಿನಂತೆ ಜಡಗಟ್ಟಿ ಹೋಗಿತ್ತು. ಆಕೆ ಪೋನ್ ಮಾಡದ ಶೂನ್ಯತೆಯೇ ತನ್ನ ಈ ಸ್ಥಿತಿಗೆ ಕಾರಣವಾಗಿರಬಹದೆಂದು ಅವನು ಮೊದಲು ಯೋಚಿಸಿದನು. ಆದರೆ ಮಧ್ಯಾಹ್ನವಾಗುತ್ತಿದ್ದಂತೇ ಜ್ವರ ಏರತೊಡಗಿತ್ತು. ಅವನ ದೇಹವಿಡೀ ಕುಲುಮೆಯಂತೆ ನಿಗಿ ನಿಗಿಸತೊಡಗಿತು. ಕಣ್ಣುಗಳೆರಡೂ ಭಗಭಗನೇ ಉರಿಯುತ್ತಿರುವಂತೆ ಅವನಿಗೆ ಭಾಸವಾದವು.
ಮನಮೋಹನ ಟೇಬಲ್ ಮೇಲೆ ಅಂಗಾತ ಬಿದ್ದುಕೊಂಡನು. ಸಮುದ್ರವನ್ನೇ ಒಂದು ಗುಟುಕಿಗೆ ಹೀರಿ ಬಿಡುವಂತಹ ಬಾಯಾರಿಕೆಯಿಂದ ಅವನು ಇಡೀ ದಿನ ನೀರು ಕುಡಿಯುತ್ತಲೇ ಇದ್ದನು. ಎದೆಯಲ್ಲಿ ಸುತ್ತಿಗೆಯಲ್ಲಿ ಬಾರಿಸಿದಂತಹ ಭಯಂಕರ ನೋವು! ಸಂಜೆಯಾಗುತ್ತಿದ್ದಂತೆ ಆತನ ಸ್ಥಿತಿ ಇನ್ನಷ್ಟು ಹದಗೆಟ್ಟಿತು. ಅವನ ತಲೆಯೊಳಗೆ ಸಾವಿರಾರು ಟೆಲಿಫೋನ್‌ಗಳು ಏಕ ಕಾಲಕ್ಕೆ ಮೊಳಗಿದಂತೆ ಸದ್ದುಗಳು ಮೊಳಗತೊಡಗಿದವು. ಮನಮೋಹನ ಉಸಿರು ಸಿಕ್ಕಿಕೊಂಡವನಂತೆ ಚಡಪಡಿಸತೊಡಗಿದನು. ರಾತ್ರಿಯಿಡೀ ಅರೆನಿದ್ರೆ-ಅರೆ ಎಚ್ಚರದ ನಡುವೆ ಮುಳುಗೇಳುತ್ತಾ ಮನಮೋಹನ ಕನವರಿಸುತ್ತಾ ಕಳೆದನು.
ಮರುದಿನ ಬೆಳಗ್ಗೆ ಎಚ್ಚರವಾದಾಗ ಮನಮೋಹನನಿಗೆ ಕಣ್ಣುಗಳನ್ನಷ್ಟೇ ತೆರೆದು ಅತ್ತಿತ್ತ ಹೊರಳಿಸುವುದು ಸಾಧ್ಯವಾಯಿತು. ಅವನ ದೇಹ ಗಾಣಕ್ಕೆ ಕೊಟ್ಟ ಕಬ್ಬಿನಂತೆ ಸೂತ್ರ ಕಳೆದುಕೊಂಡಿತ್ತು. ಎದೆ ನೋವಿನಿಂದ ತೋಯ್ದು ಹೋಗಿತ್ತು. ಬಹಳ ಕಷ್ಟದಿಂದ ಆತ ಉಸಿರಾಡುತ್ತಿದ್ದನು.
ಅಷ್ಟರಲ್ಲಿ ಫೋನ್ ರಿಂಗಾಯಿತು. ಆದರೆ ಆ ಸದ್ದು ಅವನಿಗೆ ಕೇಳಿಸದಾಗಿತ್ತು. ಅವನ ಕಿವಿಗಳಿಗೆ ಕಿವುಡು ಸಂಭವಿಸಿತ್ತು. ಟೆಲಿಫೋನ್ ಅದೆಷ್ಟೋ ಹೊತ್ತಿನ ತನಕ ಮೊಳಗುತ್ತಲೇ ಇತ್ತು. ಮತ್ತೆ.. ಮತ್ತೆ...
ನಡುವೆ ಒಂದು ಕ್ಷಣ ರಿಂಗುಣಿಸುವ ಸದ್ದು ಆತನಿಗೆ ಕೇಳಿದಂತಾಯಿತು. ಮನಮೋಹನ ಬಹು ಪ್ರಯಾಸದಿಂದ ಮೇಲೆದ್ದು ಕೂತನು. ಅವನ ಪಾದಗಳು ಲಯ ಕಳೆದುಕೊಂಡಿದ್ದವು. ನಡುಗುವ ಕಾಲುಗಳು ಹೆಜ್ಜೆಗಳಿಗೆ ಸ್ಥಿರತೆ ನೀಡಲು ಅಸಹಾಯಕವಾಗಿದ್ದವು. ಗೋಡೆಯನ್ನು ಆಧರಿಸಿಕೊಂಡು ತಡವರಿಸುತ್ತಾ ಟೆಲಿಫೋನ್ ಬಳಿಗೆ ಬಂದ ಆತ ನಡುಗುವ ಕೈಗಳಿಂದ ರಿಸೀವರ್ ಎತ್ತಿಕೊಂಡನು. ಆತನ ನಾಲಗೆ ಮರದಂತೆ ಒಣಗಿ ಹೋಗಿತ್ತು. ನಾಲಗೆಯನ್ನು ತುಟಿಯ ಮೇಲೆ ತರಲು ಇನ್ನಿಲ್ಲದ ಪಾಡು ಪಟ್ಟ ಮನಮೋಹನ, ಪ್ರಯಾಸದಿಂದ ‘‘ಹಲೋ’’ಅಂದನು.
‘‘ಹಲೋ, ಮೋಹನ್’’
‘‘ಮೋಹನ್ ಮಾತಾಡುತ್ತಿದ್ದೇನೆ’’ ಅವನ ಧ್ವನಿ ಬಾವಿಯ ಆಳದಿಂದ ಬರುವಂತಿತ್ತು.
‘‘ಮೋಹನ್, ನೀನು ಮಾತಾಡ್ತಿರೋದು ನನಗೆ ಕೇಳಿಸುತ್ತಿಲ್ಲ. ಗಟ್ಟಿಯಾಗಿ ಹೇಳು’’
ಅವನು ಏನೇನೋ ಹೇಳಲು ಪ್ರಯತ್ನಿಸಿದನು. ಆದರೆ ಅವನ ಸ್ವರ ಗಂಟಲಲ್ಲೇ ಉಡುಗಿ ಹೋಗುತ್ತಿತ್ತು.
‘‘ನಾವು ಯೋಚಿಸಿದ್ದಕ್ಕಿಂತಲೂ ಬೇಗನೇ ಮನೆಗೆ ಮರಳಿದೆವು. ಕಳೆದ ಕೆಲವು ಗಂಟೆಗಳಿಂದ ನಾನು ನಿನಗೆ ರಿಂಗ್ ಮಾಡುತ್ತಲೇ ಇದ್ದೇನೆ. ಎಲ್ಲಿ ಹೋಗಿದ್ದೆ ನೀನು?’’ ಅವಳು ನುಡಿದಳು.
ಮನಮೋಹನನ ತಲೆ ಗಿರಗಿಟ್ಟಿಯಂತೆ ಗಿರಗಿರ ತಿರುಗತೊಡಗಿತು.
‘‘ಮೋಹನ್, ಏನಾಯ್ತು? ಯಾಕೆ ನೀನು ಏನೂ ಹೇಳುತ್ತಿಲ್ಲ’’ ಆಕೆ ಪ್ರಶ್ನಿಸಿದಳು. ಅವನು ಬಹಳ ಕಷ್ಟಪಟ್ಟು ನುಡಿದ: ‘‘ನನ್ನ ಸಾಮ್ರಾಜ್ಯ ಈ ದಿನ ಕೊನೆಗಾಣಲಿದೆ’’
ಆತನ ತುಟಿಯಿಂದ ರಕ್ತ ಹೊರ ಹೊಮ್ಮಿ ಕೆನ್ನೆಯ ಮೇಲೆ ಇಳಿಯಿತು.
‘‘ಹಾಗಿದ್ದರೆ ಮೋಹನ್, ನನ್ನ ನಂಬರ್ ಬರೆದುಕೋ..50314...50314..ನಾಳೆ ಬೆಳಗ್ಗೆ ನಿನ್ನ ಫೋನ್‌ಗಾಗಿ ಕಾಯುತ್ತಿರುತ್ತೇನೆ. ಫೋನ್ ಮಾಡಲು ಮರೆಯಬೇಡ’’ ಆಕೆ ಫೋನ್ ಕೆಳಗಿಟ್ಟಳು.
ಮನಮೋಹನ ಟೆಲಿಫೋನ್ ಮೇಲೆ ಕುಸಿದು ಬಿದ್ದನು. ಕಾರಂಜಿಯಂತೆ ಅವನ ಬಾಯಿಂದ ಹೊರಚಿಮ್ಮಿದ ರಕ್ತ ನೆಲದ ಮೇಲೆ ಮಡುಗಟ್ಟತೊಡಗಿತು.
ಮೂಲ: ಸಾದತ್ ಹಸನ್ ಮಂಟೊ

No comments:
Post a Comment