(ಇದು ಕವಿ, ಪತ್ರಕರ್ತ ದಿವಂಗತ ಬಿ. ಎಂ. ರಶೀದ್ ಅವರ ‘ಪರುಷ ಮಣಿ’ ಸಂಕಲನದಿಂದ ಆಯ್ದ ಕವಿತೆ. 1996ರಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.)
ಅಖಂಡ ಮೌನದೆದೆಯಿಂದ ಕಿತ್ತು ಬಂದ
ಅನಾಥ ಅಕ್ಷರದಂತೆ...
ನೋವಿನ ಸಬಲ ಗೋಡೆಗಳನ್ನು
ಸೀಳಿ ದಿಕ್ಕೆಟ್ಟು ನಿಂತ ಕಣ್ಣೀರಿನಂತೆ...
ನಿನ್ನ ಮಡಿಲೊಳಗೆ ನಾನು ಬಿದ್ದೆ!
ನನ್ನ ಎದೆ, ತುಟಿ, ಗಲ್ಲಗಳೆಲ್ಲಾ ಒದ್ದೆ,
ನಿನಗೆ ನಾನು ಹುಟ್ಟಿದ ನಿಮಿಷ
ತಾಯಿ, ನನಗೆ ಇಪ್ಪತ್ತೈದು ವರುಷ!
ನಾನು ನಿನ್ನೊಳಗಿನವನೋ,
ನೀನು ನನ್ನೊಳಗಿನವಳೋ,
ಆ ಕ್ಷಣದ ಪುಳಕಕ್ಕೆ ಸದ್ದುಗಳಿದ್ದರೆ ನೀನು
ಆಲಿಸುವೆ ಸಂಗೀತದಂತೆ!
ಎಲ್ಲಿ ಬಚ್ಚಿಟ್ಟಿದ್ದೆ ತಾಯಿ, ನಿನ್ನ
ಎಲ್ಲಿ ಬಚ್ಚಿಟ್ಟಿದ್ದೆ ನನ್ನ
ಬಿಸಿಗೆ ಬಿಸಿ ಹುಟ್ಟಿ ತನ್ಮಯತೆಯ ತಣಿಸು
ಎಂಜಲಿಗೆ ಎಂಜಲು ಅಮತ
ಪಡೆದೆ ಮರಳಿ ತವಕದ ಬಿಸಿಯುಸಿರು
ನಿನ್ನೆದೆಗೆ ತುಟಿ ಕೊಟ್ಟು ಬೆಳೆದೆ
ಕೊಟ್ಟಷ್ಟೂ ಹಿಗ್ಗು ನಿನಗೆ
ಹಸಿದ ತಬ್ಬಲಿ ಕೂಸು ನಾನು ಎದೆ ಹಾಲಿಗೆ
ಹಬೆಯಾಡಿದ ದೇಹ, ಹಿಗ್ಗರಳಿ ತೊನೆದ ಮುಖ
ಮುಖದಡಿ ಕೆಳಗೆ ಶಿಖರಾಗ್ರ ತೊಟ್ಟು
ಗಳ ನಡುವೆ ಜಾರಿದರೋ ಕೌತುಕದ ಗವಿ
ಪರವೂರಿನ ದಾರಿ
ಅದಾಗ ನಾನು ಕಣ್ಣು ಬಿಟ್ಟವನೋ,
ಕಗ್ಗಾಡ ನಡುವೆ ಕಣ್ಣು ಕಟ್ಟಿ ಬಿಟ್ಟವನೋ,
ನಿಜ ಹೇಳಿದರೆ ನೀನು ನಂಬಲಾರೆ
ನಾನಂತೂ ಆ ಕ್ಷಣದ ಮಗು!
ನಿನಗೆ ನಾನು ಹುಟ್ಟಿದ ನಿಮಿಷ
ತಾಯಿ, ನನಗೆ ಇಪ್ಪತ್ತೈದು ವರುಷ!
No comments:
Post a Comment