Sunday, May 4, 2014

ಸ್ಪೈಡರ್ ಮ್ಯಾನ್-2: ಇನ್ನಷ್ಟು ಆ್ಯಕ್ಷನ್‌ಗಳೊಂದಿಗೆ....

ಈಗಾಗಲೇ ಅಮ್ಯಾಝಿಂಗ್ ಸ್ಪೈಡರ್  ಮ್ಯಾನ್ ಹಾಲಿವುಡ್‌ನಲ್ಲಿ ತನ್ನ ಬಲೆಯನ್ನು ಗಟ್ಟಿಯಾಗಿ ಹರಡಿದ್ದಾನೆ. ಇದೀಗ ಭಾಗ ಎರಡರಲ್ಲಿ ಇನ್ನಷ್ಟು ಖಳರನ್ನು ಮುಖಾಮುಖಿಗೊಳ್ಳುವ ಮೂಲಕ ನೋಡುಗರನ್ನು ಮೂಕ ವಿಸ್ಮಿತಗೊಳಿಸುತ್ತಾನೆ. ಸಾಹಸ ತ್ರೀಡಿಯ ಮೂಲಕ ಈ ಸಾಹಸಗಳನ್ನು ಇನ್ನಷ್ಟು ಹತ್ತಿರಕ್ಕೆ ತಂದಿದ್ದಾರೆ ನಿರ್ದೇಶಕ ಮಾರ್ಕ್‌ವೆಬ್. ಒಂದೆಡೆ ಪೀಟರ್ ಪಾರ್ಕರ್ ಮಗದೊಂದೆಡೆ ಸ್ಪೆೃಡರ್ ಮ್ಯಾನ್ ಹೀಗೆ ಎರಡು ಐಡೆಂಟಿಟಿಯೊಂದಿಗಿನ ಘರ್ಷಣೆಯನ್ನು ತೆರೆದಿಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಈ ಬಾರಿ ಸ್ಪೈಡರ್ನ ಸಾಹಸಗಳ ಮಧ್ಯೆ, ಭಾವನಾತ್ಮಕ ದೃಶ್ಯಗಳನ್ನೂ ಹೆಣೆದಿರುವುದು ನಿರ್ದೇಶಕರ ಹೆಚ್ಚುಗಾರಿಕೆ. ಸ್ಪೆೃಡರ್‌ಮ್ಯಾನ್‌ನ ಸಾಹಸಗಳ ಮುಂದೆ ಅಷ್ಟೊಂದು ಪರಿಣಾಮಕಾರಿಯಾಗಿ ಮುಟ್ಟುವುದಿಲ್ಲವಾದರೂ, ಚಿತ್ರಕ್ಕೊಂದು ಹೊಸ ದಿಕ್ಕನ್ನು ನೀಡಿದೆ.. ಈ ಹಿಂದಿನ ಸ್ಪೆೃಡರ್‌ಮ್ಯಾನ್‌ನ ಮುಗ್ಧತೆ ಅಮ್ಯಾಝಿಂಗ್ ಸ್ಪೆೃಡರ್ ಮ್ಯಾನ್ ಆಗಿ ಕಾಣಿಸಿಕೊಂಡಿರುವ ಗಾರ್ಫೀಲ್ಡ್‌ನಲ್ಲಿ ಇಲ್ಲ. ಆದರೆ ಈತ ಸಾಹಸಕ್ಕೆ ಹೇಳಿ ಮಾಡಿಸಿದಂತೆ, ಲೀಲಾಜಾಲವಾಗಿ ತನ್ನ ಬಲೆಯನ್ನು ಬೀಸುತ್ತಾ ಹೋಗುತ್ತಾನೆ. ತನ್ನ ಪ್ರೇಯಸಿ ಗ್ವೆನ್(ಸ್ಟೋನ್)ಜೊತೆಗಿನ ಸಂಬಂಧಗಳಿಗೂ ಈ ಬಾರಿ ತುಸು ಮಹತ್ವ ನೀಡಿದ್ದಾನೆ.
ಭಾಗ 2 ಎಲ್ಲ ರೀತಿಯಲ್ಲೂ ಭಾಗ ಒಂದನ್ನು ಮೀರಿಸುತ್ತದೆ. ಇಲ್ಲಿ ಖಳರನ್ನು ರೂಪಿಸುವಲ್ಲಿಯೂ ವಿಶೇಷ ತಾಂತ್ರಿಕತೆಯನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಮಾನವೀಯ ಅಂಶದೊಂದಿಗೆ ಇಡೀ ಚಿತ್ರದ ಕತೆಯನ್ನು ನೇಯಲು ಯತ್ನಿಸಲಾಗಿದೆ. ಈ ಕಾರಣದಿಂದಲೇ ಭಾಗ ಎರಡರಲ್ಲಿ ಕೆಲವು ಅನಿರೀಕ್ಷಿತಗಳು ಪ್ರೇಕ್ಷಕರನ್ನು ಎದುರುಗೊಳ್ಳುತ್ತವೆ.

 ಸಾಹಸ, ನಟನೆ ಹಾಗೂ ಭಾವನಾತ್ಮಕ ಸನ್ನಿವೇಶಗಳನ್ನು ಗಾರ್ಫೀಲ್ಡ್ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಇಲ್ಲಿಯೂ ಸ್ಪೆೃಡರ್ ಮ್ಯಾನ್ ಪಾಲಕರ ಕತೆಗೆ ಒತ್ತು ನೀಡಲಾಗಿದೆ. ಕಳೆದ ಬಾರಿಗಿಂತ ಹೆಚ್ಚು ವಿವರಗಳಿವೆ. ಮತ್ತು ಅವರಿಂದಲೇ ಚಿತ್ರ ಆರಂಭವಾಗುತ್ತದೆ. ಪಾರ್ಕರ್‌ನ ಹೆತ್ತವರು-ರಿಚಾರ್ಡ್ ಹಾಗೂ ಮೇರಿಯ ಕತೆಯ ಸಣ್ಣ ತುಣುಕು ಇಲ್ಲಿ ಮುಂದುವರಿಯುತ್ತದೆ. ತಾನು ಹಾಗೂ ತನ್ನ ಹೆಂಡತಿ ತರಾತುರಿಯಲ್ಲಿ ಏಕೆ ಕಾಲುಕೀಳಬೇಕಾಯಿತು ಎಂದು ವಿವರಿಸುವ ಪ್ರಯತ್ನದಲ್ಲಿ ರಿಚಾರ್ಡ್ ವೀಡಿಯೊ ಸಂದೇಶವೊಂದನ್ನು ಮುದ್ರಿಸುತ್ತಾನೆ. ಅವರು ತಮ್ಮ ವಿಮಾನದ ಮೇಲಾದ ಹತ್ಯಾಯತ್ನದಿಂದಲೂ ಪಾರಾಗಲು ಪ್ರಯತ್ನಿಸುತ್ತಾರೆ. ಅವರ ಕಿರಿಯ ಮಗನನ್ನು ಆಂಟ್ ಮೇರಿ ಹಾಗೂ ಆಕೆಯ ಗಂಡನ ಪಾಲನೆಯಲ್ಲಿ ಬಿಟ್ಟಿರುತ್ತಾರೆ. ಓಸ್ಕೋರ್ಪನ ನಿಗೂಢ ಪ್ರಯೋಗಗಳ ಹಿಂದಿರುವ ರಹಸ್ಯವನ್ನು ಭೇದಿಸಲು ಸಹಾಯ ಮಾಡಬಲ್ಲ ಈ ಸಂದೇಶವನ್ನು ಪೀಟರ್ ಪತ್ತೆ ಹಚ್ಚುತ್ತಾನೆಯೇ? ಇದು ಈ ಬಾರಿಯ ಸ್ಪೆೃಡರ್ ಮ್ಯಾನ್‌ನ ಸವಾಲುಗಳು.

ಚಿತ್ರದಲ್ಲಿ ಇಬ್ಬರು ಖಳರನ್ನು ಸ್ಪೆೃಡರ್ ಮ್ಯಾನ್ ಎದುರಿಸಬೇಕಾಗುತ್ತದೆ. ಆದರೆ ಈ ಇಬ್ಬರೂ ಪರಿಸ್ಥಿತಿಗೆ ಸಿಲುಕಿ ಖಳನಾಯಕರಾದವರು. ಆದುದರಿಂದ ಅವರನ್ನು ಸಂಪೂರ್ಣವಾಗಿ ವಿರೋಧಿಸುವಂತಿಲ್ಲ. ಆದರೂ ಜಗತ್ತನ್ನು ಉಳಿಸಲು ಸ್ಪೆೃಡರ್ ಮ್ಯಾನ್ ಅವರೊಂದಿಗೆ ಹೋರಾಡಲೇ ಬೇಕಾಗುತ್ತದೆ. ಮ್ಯಾಕ್ಸ್ ಡಿಲ್ಲೋ ಒಂದು ಆಕಸ್ಮಿಕ ಅಪಘಾತದಲ್ಲಿ ಆತ ಇಲೆಕ್ಟ್ರೋ ಆಗಿ ಮಾರ್ಪಾಡಾಗುತ್ತಾನೆ. ಅಪಾರ ಶಕ್ತಿಯನ್ನು ತನ್ನದಾಗಿಸಿಕೊಂಡು ವ್ಯವಸ್ಥೆಗೆ ಸಮಸ್ಯೆಯಾಗುತ್ತಾನೆ. ಇನ್ನೊಂದು ಕಡೆ, ಓಕ್ಸೋರ್ಪ್ ಸಂಸ್ಥೆಯ ಹ್ಯಾರಿ ತನ್ನ ತಂದೆಯ ವಂಶಪಾರಂಪರ್ಯ ಕಾಯಿಲೆಯಿಂದ ಪಾರಾಗಲು ಯತ್ನಿಸಿ, ಇನ್ನೊಂದು ಹಸಿರು ದೈತ್ಯನಾಗುತ್ತಾನೆ. ಇವರನ್ನು ಸ್ಪೆೃಡರ್ ಅದು ಹೇಗೆ ಎದುರಿಸುತ್ತಾನೆ ಎನ್ನುವುದೇ ಚಿತ್ರದ ಜೀವಾಳ. ಆ್ಯಕ್ಷನ್ ದಶ್ಯಗಳು ಉಸಿರು ಬಿಗಿಹಿಡಿಯುವಂತಹವುಗಳಾಗಿದ್ದು, ಸಮಯ ಓಡುತ್ತಿದ್ದರೂ, ಚಿತ್ರ ಎಳೆಯಲ್ಪಡುವುದಿಲ್ಲ. ಈ ಸಾಹಸದ ಜೊತೆಗೆ ಸಣ್ಣದೊಂದು ಪ್ರೇಮದ ಎಳೆ ಚಿತ್ರದ ಕತೆಗೆ ಮಾನವೀಯ ಚೌಕಟ್ಟನ್ನು ನೀಡುತ್ತದೆ. ಒಟ್ಟಿನಲ್ಲಿ ಸ್ಪೆೃಡರ್ ಮ್ಯಾನ್ ಈ ಬಾರಿಯೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ.

No comments:

Post a Comment