ರಾಜ್ಯದಲ್ಲೇ ಗಮನಿಸಿ. ಬೆಂಗಳೂರು ಮಹಾ ನಗರ ಪಾಲಿಕೆ 200 ಕೋಟಿ ರೂಪಾಯಿ ಸಾಲ ಪಡೆಯಲು ಪಾರಂಪರಿಕ ಕಟ್ಟಡವಾದ ಟೌನ್ ಹಾಲನ್ನು ಅಡವಿಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಬೆಂಗಳೂರು ನೋಡುವುದಕ್ಕೇನೋ ಶ್ರೀಮಂತ. ತನ್ನ ಅದ್ದೂರಿತನಕ್ಕಾಗಿ, ಐಟಿ, ಬಿಟಿಗಾಗಿ ವಿಶ್ವವನ್ನು ಸೆಳೆಯುತ್ತಿದ್ದೇನೆ ಎನ್ನುವ ಕೋಡು ಬೇರೆ. ಆದರೆ ಬೆಂಗಳೂರು ಮಹಾನಗರ ಪಾಲಿಕೆಯ ಸಾಲ ಎಷ್ಟು ಗೊತ್ತೆ? ಮೂರುವರೆ ಸಾವಿರ ಕೋಟಿ ರೂಪಾಯಿ. ಇದೀಗ ಆ ಮೂರುವರೆ ಸಾವಿರ ಕೋಟಿ ರೂಪಾಯಿಯನ್ನು ತೀರಿಸುವ ಮಾರ್ಗವಾಗಿ ಕೆನರಾ ಬ್ಯಾಂಕ್‌ನಿಂದ 200 ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾಗಿದೆ. ಅದಕ್ಕಾಗಿ ತನ್ನ ಹೆಂಡತಿಯ ತಾಳಿಯನ್ನೇ ಅಡವಿಡಲು ಮುಂದಾಗಿದೆ. ಹೌದು. ಬೆಂಗಳೂರು ಟೌನ್ ಹಾಲ್ ಅಥವಾ ಕೆ.ಪಿ.ಪುಟ್ಟಣ್ಣ ಚೆಟ್ಟಿ ಹಾಲ್ ಎನ್ನುವುದು ಬೆಂಗಳೂರು ಎನ್ನುವ ಸುಂದರಿಯ ಕುತ್ತಿಗೆ ಕರಿಮಣಿ ಸರವೇ ಹೌದು. ಇದೀಗ ಗಂಡ ಆ ಕರಿಮಣಿ ಸರವನ್ನೇ ತನ್ನ ಸಾಲಕ್ಕಾಗಿ ಅಡವಿಡಲು ಮುಂದಾಗಿದ್ದಾನೆ.
ಟೌನ್ ಹಾಲ್ ಎನ್ನುವುದು ಅಡವಿಡುವ ಒಂದು ಕಟ್ಟಡವಾಗಿ ಮಾತ್ರ ಬಿಬಿಎಂಪಿ ಅರ್ಥ ಮಾಡಿಕೊಂಡಿದೆ. ಅದರಾಚೆಗೆ ಅದರಲ್ಲಿ ಏನನ್ನು ನೋಡುವ, ಕಾಣುವ ಕಣ್ಣು ನಮ್ಮ ಬಿಬಿಎಂಪಿಗೆ ಇಲ್ಲವಾಗಿದೆ. ಇಂದು ನಮ್ಮ ಬೆಂಗಳೂರು ಯಾಕೆ ಹೃದಯಹೀನವಾಗುತ್ತಿದೆ ಎನ್ನುವುದಕ್ಕೆ ಬಿಬಿಎಂಪಿಯ ಈ ನಿರ್ಧಾರವನ್ನು ಅರ್ಥ ಮಾಡಿಕೊಂಡರೆ ಸಾಕು. ಪುರಭವನ ವೆನ್ನುವುದು ಬೆಂಗಳೂರಿನ ಹೃದಯವಿದ್ದಂತೆ. ಮನುಷ್ಯನ ಮಾತುಗಳು, ಭಾವನೆಗಳು ಕಳೆದ ನೂರು ವರ್ಷಗಳಿಂದ ಇಲ್ಲಿ ಅಂಕುರವೊಡೆದಿವೆ.ಚಿಗುರು ಬಿಟ್ಟಿವೆ. ಅರಳಿ, ಕಾಯಾಗಿ, ಹಣ್ಣಾಗಿ ಫಲಕೊಟ್ಟಿವೆ. ಇಲ್ಲಿ ಅನುರಣಿಸಿದ ಗೆಜ್ಜೆಗಳ ಸದ್ದುಗಳು, ಘೋಷಣೆಗಳು, ಮಹಾ ಹಿರಿಯರ ಭಾಷಣಗಳು, ರಾಜಕೀಯ ನಿರ್ಧಾರಗಳು ಅನಾವರಣಗೊಂಡ ಸ್ಥಳ ಪುರಭವನ. ಬೆಂಗಳೂರಿನ ಹೃದಯದ ಧ್ವನಿಗೆ ಈ ಟೌನ್‌ಹಾಲ್ ವೇದಿಕೆಯಾಗಿದೆ. ಅಂತಹ ವೇದಿಕೆಯನ್ನೇ ಇದೀಗ ಬರೇ 200 ಕೋಟಿ ರೂಪಾಯಿ ಸಾಲಕ್ಕಾಗಿ ಕೆನರಾ ಬ್ಯಾಂಕಿಗೆ ಅಡವಿಡಲು ಹೊರಟಿದೆ.
ಬೆಂಗಳೂರು ಟೌನ್‌ಹಾಲ್‌ಗೆ ದೊಡ್ಡ ಇತಿಹಾಸವಿದೆ. ಅದು ತಲೆಯೆತ್ತಿದ್ದು ಇಂದು ನಿನ್ನೆಯಲ್ಲ. 1933ರಲ್ಲಿ ಕೃಷ್ಣ ರಾಜೇಂದ್ರ ಒಡೆಯರ್ ಅವರು ಈ ಟೌನ್‌ಹಾಲ್‌ಗೆ ಶಿಲಾನ್ಯಾಸ ಮಾಡಿದರು. ಇದರ ಎಂಜಿನಿಯರ್ ಇನ್ನಾರೂ ಅಲ್ಲ. ದಿವಾನರಾಗಿದ್ದ ಸರ್ ಮಿರ್ಝಾ ಇಸ್ಮಾಯೀಲ್. ಅಂದ ಹಾಗೆ, ಕಟ್ಟುವ ಸಂದರ್ಭದಲ್ಲಿ ಇದರ ಒಟ್ಟು ಅಂದಾಜು ವೆಚ್ಚ ಎಷ್ಟು ಗೊತ್ತೆ? 1,75,000 ರೂಪಾಯಿ. ಎರಡೇ ಎರಡು ವರ್ಷದಲ್ಲಿ ಈ ಕಟ್ಟಡ ನಿರ್ಮಾಣ ಪೂರ್ತಿಯಾಯಿತು. ಸೆಪ್ಟಂಬರ್ 11, 1935 ರಂದು ಕಂಠೀರವ ನರಸಿಂಹ ರಾಜ ಒಡೆಯರ್ ಈ ಕಟ್ಟಡವನ್ನು ಉದ್ಘಾಟಿಸಿದರು. ಒಡೆಯರ ಕಣ್ಗಾವಲಿನಲ್ಲೇ ಮುಂದೆ ಕಟ್ಟಡಕ್ಕೆ ಒಂದು ಅಂತಸ್ತು ದೊರಕಿತು. ಎರಡು ಬಾರಿ ಈ ಕಟ್ಟಡ ಪುನರ್ನವೀಕರಣಗೊಂಡಿದೆ.
ಬೆಂಗಳೂರಿನಲ್ಲಿ ಹಾಲ್‌ಗಳು ಹೇಗೆ ದುಬಾರಿಯಾಗುತ್ತಿವೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಖಾಸಗಿ ಹಾಲ್‌ಗಳು ಜನ ಸಾಮಾನ್ಯರಿಗೆ ಎಟಕುವುದು ತೀರಾ ಕಷ್ಟ ಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ಈ ಟೌನ್ ಹಾಲ್ ಜನರ ಪಾಲಿನ ಧ್ವನಿಯಾಗಿ, ಸಹಸ್ರಾರು ಸಮಾರಂಭಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿ ಪೊರೆದಿದೆ. ಈ ವೇದಿಕೆಯಲ್ಲೇ ಹತ್ತು ಹಲವು ಚಳವಳಿಗಳು ಹುಟ್ಟಿಕೊಂಡಿವೆ. ಈ ಪುರಭವನ ಸರಕಾರದ ನಿರ್ಲಕ್ಷದಿಂದ ಈಗಾಗಲೇ ಕುಪೋಷಣೆಗೆ ಒಳಗಾಗಿದೆ. ಸೀಟುಗಳು ಹರಿದಿವೆ. ಹೊರಗಿನ ವೈಭವ, ಒಳ ಹೊಕ್ಕರೆ ಕಾಣ ಸಿಗುವುದಿಲ್ಲ. ಆದರೂ ಜನರು ತಮ್ಮ ಕಾರ್ಯಕ್ರಮಕ್ಕಾಗಿ ಪುರ ಭವನವನ್ನೇ ಬಯಸುತ್ತಾರೆ. ಕಾರಣ ಸ್ಪಷ್ಟ. ಜನಸಾಮಾನ್ಯರ ಕಾರ್ಯಕ್ರಮಕ್ಕೆ ಸುಲಭದಲ್ಲಿ ದಕ್ಕುವ ಹಾಲ್ ಇದೊಂದೆ. ಇದನ್ನೇ ಬ್ಯಾಂಕಿಗೆ ಅಡವಿಟ್ಟರೆ, ಪರೋಕ್ಷವಾಗಿ ಜನರ ಧ್ವನಿಯನ್ನೇ ಅಡವಿಟ್ಟಂತೆ. ರಾಜ್ಯದ ಸಾಂಸ್ಕೃತಿಕ, ರಾಜಕೀಯ ಧ್ವನಿಯನ್ನೇ ಒಂದು ಬ್ಯಾಂಕಿಗೆ ಒಪ್ಪಿಸಿದಂತೆ. ಸರಿ. 200 ಕೋಟಿ ರೂಪಾಯಿಗೆ ಟೌನ್ ಹಾಲನ್ನು ಬಿಬಿಎಂಪಿ ಅಡವಿಟ್ಟಿತು ಎಂದೇ ಇಟ್ಟುಕೊಳ್ಳೋಣ. ಅದನ್ನು ಬಿಡಿಸಿಕೊಳ್ಳುವ ಸಾಧ್ಯತೆಯಾದರೂ ಬಿಬಿಎಂಪಿಗಿದೆಯಾ ಎನ್ನುವುದು ಮತ್ತೊಂದು ಪ್ರಶ್ನೆ. ಈಗಾಗಲೇ ಮೂರುವರೆ ಸಾವಿರ ಕೋಟಿ ರೂಪಾಯಿ ಸಾಲವನ್ನು ಹೊಂದಿದೆ. ಸಾಲ ತೀರಿಸುವುದಕ್ಕಾಗಿ ಮತ್ತಷ್ಟು ಸಾಲವನ್ನು ಮಾಡಲು ಬಿಬಿಎಂಪಿ ಹೊರಟಿದೆ. ಹೀಗಿರುವಾಗ, ಟೌನ್‌ಹಾಲನ್ನು ಬ್ಯಾಂಕಿಗೆ ಅಡಿವಿಟ್ಟರೆ ಯಾವ ಮೂಲದಿಂದ ಅದನ್ನು ಮತ್ತೆ ಬಿಡಿಸಿಕೊಳ್ಳುತ್ತದೆ? ಬಿಡಿಸಿಕೊಳ್ಳುವ ಮೂಲದ ಬಗ್ಗೆ ಒಂದಿಷ್ಟು ತಲೆಕೆಡಿಸಿಕೊಳ್ಳದೇ ಅಡವಿಡುವಷ್ಟು ನಿಕೃಷ್ಟವಾದ ಕಟ್ಟಡವೆಂದು ಟೌನ್ ಹಾಲನ್ನು ಬಿಬಿಎಂಪಿ ಭಾವಿಸಿದೆ ಎಂದಾಯಿತು.
ಟೌನ್ ಹಾಲ್‌ನ ಬೆಲೆಯನ್ನು ಕೇವಲ ಹಣದಿಂದ ಅಳೆಯುವುದಕ್ಕೆ ಸಾಧ್ಯವಿಲ್ಲ. ಭೌತಿಕವಾಗಿಯೂ ಟೌನ್ ಹಾಲ್ ಅಪಾರ ಬೆಲೆಬಾಳುತ್ತದೆ. ಹಾಗೆಯೇ ಹಣದಾಚೆಗೂ ಬೆಲೆಬಾಳುವಂತಹ ಕಟ್ಟಡ ಟೌನ್ ಹಾಲ್. ನಾಳೆ ಈ ಕಟ್ಟಡ ಬ್ಯಾಂಕ್‌ನ ಪಾಲಾದರೆ ಅದರಿಂದ ಆಗುವ ನಷ್ಟ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಒಬ್ಬನೇ ಒಬ್ಬ ಸದಸ್ಯ ಬಿಬಿಎಂಪಿಯಲ್ಲಿ ಇಲ್ಲದಿರುವುದು ಬೆಂಗಳೂರಿನ ಜೊತೆಗೆ ನಾಡಿನ ದುರದೃಷ್ಟವೇ ಸರಿ.ಟೌನ್‌ಹಾಲ್ ಬ್ಯಾಂಕಿನ ಪಾಲಾದರೆ, ನಾಳೆ ಅಲ್ಲೊಂದು ದೊಡ್ಡ ಮಾಲ್ ತಲೆಯೆತ್ತೀತು. ಅಥವಾ ಅದನ್ನು ಇನ್ನಾರೋ ಶ್ರೀಮಂತರು ಹರಾಜು ಕೂಗಿ ಅಲ್ಲಿ ಖಾಸಗಿಯಾದ, ಐಶಾರಾಮಿಯಾದ ಒಂದು ಹಾಲನ್ನು ಕಟ್ಟಿಸಿ ಯಾರು. ಆದರೆ ಅದರೊಳಗೆ ಜನಸಾಮಾನ್ಯರಿಗೆ ಪ್ರವೇಶಿಸಲು ಕಷ್ಟಸಾಧ್ಯವಾದೀತು. ಒಂದು ಪುಸ್ತಕ ಬಿಡುಗಡೆ, ಯಾವುದೋ ಅರಂಗೇಟ್ರಂ ಅಥವಾ ನೃತ್ಯ ಕಾರ್ಯಕ್ರಮಗಳನ್ನು ಖಾಸಗಿ ಹಾಲ್‌ನಲ್ಲಿ ನಡೆಸಲು ಜನಸಾಮಾನ್ಯರಿಗೆ ಅಸಾಧ್ಯ.
ಹೀಗಿರುವಾಗ, ಅವರೆಲ್ಲ ಮುಂದಿನ ದಿನಗಳಲ್ಲಿ ಬೆಂಗಳೂರಿನ ಯಾವುದಾದರೂ ಬಯಲಿನಲ್ಲಿ ಅಥವಾ ಬನಪ್ಪ ಪಾರ್ಕ್‌ನಲ್ಲಿ ತಮ್ಮ ಕಾರ್ಯ ಕ್ರಮಗಳನ್ನು ನಡೆಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಈ ಅಡವು ಪ್ರಕರಣದ ಹಿಂದೆ ಖಾಸಗಿ ಭೂಗಳ್ಳರು, ಹಣವಂತರು ಭಾಗಿ ಯಾಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ. ಅವರೆಲ್ಲರೂ ಇದರ ಹರಾಜಿಗಾಗಿ ರಣಹದ್ದು ಗಳಂತೆ ಕಾದು ಕುಳಿತಿದ್ದಾರೆ. ಯಾವ ಕಾರಣಕ್ಕೂ ಟೌನ್ ಹಾಲ್ ಇವರ ಬಾಯಿಗೆ ಬೀಳು ವಂತಾಗಬಾರದು.ಈ ಕಾರಣದಿಂದ ಬೆಂಗಳೂರಿನ ಜನರು ಮಾತ್ರವಲ್ಲ, ಸಾಂಸ್ಕೃತಿಕ, ರಾಜಕೀಯ, ಸಾಹಿತ್ಯಕ ಗುರಿಗಳುಳ್ಳ ಎಲ್ಲರೂ ಟೌಲ್‌ಹಾಲ್ ಅಡವಿಡುವುದನ್ನು ವಿರೋಧಿಸಬೇಕಾಗಿದೆ. ಆ ಮೂಲಕ ಬೆಂಗಳೂರಿನ ಘನತೆ ಯನ್ನು ಉಳಿಸಲು ಮುಂದಾಗ ಬೇಕಾಗಿದೆ. ಅದೆಷ್ಟು ಸಾಂಸ್ಕೃತಿಕ ವೈವಿಧ್ಯತೆಗಳನ್ನು, ಜನಪರ ಚಳವಳಿಗಳನ್ನು ಪೊರೆದ ಟೌನ್ ಹಾಲ್ ರಕ್ಷಣೆಗೆ ಈಗ ಜನರೇ ಮುಂದಡಿಯಿಡಬೇಕಾಗಿದೆ.
ಜನರ ಆಲೋಚನೆಗಳನ್ನು ರೂಪಿಸಲು ಈ ಒಂದು ಟೌನ್ ಹಾಲ್ ಸಾಕಾಗುವುದಿಲ್ಲ. ಇಂತಹ ಇನ್ನೊಂದು ಟೌನ್‌ಹಾಲ್ ತಲೆಯೆತ್ತುವ ಅಗತ್ಯವಿದೆ. ಹಾಗೆಯೇ ಈಗಿರುವ ಟೌನ್‌ಹಾಲನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು. ಹೆಚ್ಚು ಹೆಚ್ಚು ಚಟುವಟಿಕೆಗಳು ನಡೆಸಲು ಆಸ್ಪದ ನೀಡಬೇಕು. ಬಿಬಿಎಂಪಿಯ ಸಾಲವನ್ನು ತೀರಿಸಲು ಬೇರೆ ಹಲವು ಮಾರ್ಗಗಳಿವೆ.
ಐಟಿಗಳಿಗೆ, ಬಿಟಿಗಳಿಗೆ ನೀಡುವ ಸವಲತ್ತಿಗೆ ಪ್ರತಿಯಾಗಿ ವಿಶೇಷ ತೆರಿಗೆಯನ್ನು ಅವರಿಂದ ವಸೂಲು ಮಾಡಲಿ. ಹಾಗೆಯೇ ಬಿಬಿಎಂಪಿಯ ಅಕ್ರಮ ಒತ್ತುವರಿಗಳನ್ನು ಸರಿಪಡಿಸಿದರೆ, ಅರ್ಧ ಸಾಲವನ್ನು ತೀರಿಸಬಹುದು. ಹೆಂಡತಿಯ ತಾಳಿಯನ್ನು ಒತ್ತೆಯಿಟ್ಟರೆ, ಪರೋಕ್ಷವಾಗಿ ತನ್ನ ಮಾನ, ಮರ್ಯಾದೆಯನ್ನು ಒತ್ತೆಯಿಟ್ಟಂತೆ. ಇನ್ನಾದರೂ ಬಿಬಿಎಂಪಿ ಇದನ್ನು ಅರ್ಥ ಮಾಡಿಕೊಳ್ಳಬೇಕು.
No comments:
Post a Comment