ಬದುಕಿಗೆ ಸ್ಫೂರ್ತಿಯಾಗುವ ಬದುಕು
ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್‌ರ ಆಸಕ್ತಿ , ಬದುಕು ಸಾಹಿತ್ಯವಾಗಿರುವುದರಿಂದಲೋ ಏನೋ, ಗಣಿತ, ವಿಜ್ಞಾನ ಇವೆಲ್ಲವನ್ನೂ ಸ್ವಾರಸ್ಯಕರವಾಗಿ ಕಟ್ಟಿಕೊಡುವ ಕಲೆ ಗೊತ್ತಿದೆ. ‘ಏಳು ಸಾವಿರ ವರ್ಷ ಬದುಕಿದ ಮನುಷ್ಯ’ ರೋಹಿತ್ ಚಕ್ರತೀರ್ಥ ಅವರ ಇನ್ನೊಂದು ಕುತೂಹಲಕ ಕೃತಿ. ಇದೊಂದು ರೀತಿಯಲ್ಲಿ ಬಿಡಿಬಿಡಿಯಾಗಿರುವ ವ್ಯಕ್ತಿ ಚಿತ್ರಗಳ ಸಂಗ್ರಹ. ಆದರೆ ಎಲ್ಲ ವ್ಯಕ್ತಿಗಳ ಬೇರು ತಮ್ಮ ವ್ಯಕ್ತಿತ್ವದ ಮೂಲಕ ಎಲ್ಲೋ ಒಂದೆಡೆ ಸಂದಿಸುತ್ತದೆ ಎನ್ನಿಸುತ್ತದೆ. ಆದುದರಿಂದಲೇ ಇಲ್ಲಿರುವ ವ್ಯಕ್ತಿಗಳು ಬೇರೆ ಬೇರೆಯಾಗಿದ್ದರು, ಎಲ್ಲೋ ಒಬ್ಬರು ಮತ್ತೊಬ್ಬರಿಗೆ ಸಂಬಂಧಿಸಿದವರು ಅನ್ನಿಸಿ ಬಿಡುತ್ತದೆ. ಇದು ಈ ಕೃತಿಯ ಹೆಗ್ಗಳಿಕೆಯೂ ಹೌದು.
ಏಳು ಸಾವಿರ ವರ್ಷ ಬದುಕಿದ ಮನುಷ್ಯ ಪಾಲ್ ಏರ್ಡಿಶ್ ಕುರಿತಂತೆ ಇಲ್ಲೊಂದು ಕುತೂಹಲಕಾರಿ ಬರಹವಿದೆ. ಇದೊಂದು ರೀತಿಯಲ್ಲಿ ವಾಸ್ತವವೂ ಹೌದು. ಪುರಾಣವೂ ಹೌದು. ಒಬ್ಬ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದನ್ನು ನಿರ್ಧರಿಸುವುದು ಹೇಗೆ? ಅವನು ಮಾಡಿದ ಕೆಲಸದ ಮೂಲಕವೋ ಅಥವಾ ಆಯಸ್ಸಿನ ಮೂಲಕವೋ. ಎಪ್ಪತ್ತು ಮಹಾನ್ ಸಾಧಕರು ಪ್ರತಿಯೊಬ್ಬರೂ ನೂರು ನೂರು ವರ್ಷ ಕೂತು ಮಾಡುವಷ್ಟು ಕೆಲಸ ಮಾಡಿ, ತಾತ್ವಿಕವಾಗಿ ಏಳು ಸಾವಿರ ವರ್ಷ ಬದುಕಿ ಹೋದ ಮನುಷ್ಯನ ಕುರಿತಂತೆ ರೋಹಿತ್ ಇಲ್ಲಿ ಕಟ್ಟಿಕೊಡುತ್ತಾರೆ. ಇವರ ಜೊತೆ ಜೊತೆಗೆ ಖರಸೇಟ್ಜಿ, ಟಾ, ರೋನಾಲ್ಡ್, ರಾಮಾನುಜನ್, ಸತ್ಯೇನ್ ಬೋಸ್...ಹೀಗೆ ಈ ಜಗತ್ತಿನಲ್ಲಿ ದೊಡ್ಡ ದೊಡ್ಡ ಸಾಧನೆಯನ್ನು ಮಾಡಿ, ವಯಸ್ಸನ್ನು ಮೀರಿ ಬದುಕಿದವರ ಕುರಿತಂತೆ ಚಕ್ರತೀರ್ಥ ಅವರು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುತ್ತಾರೆ. ಇವರೆಲ್ಲರ ಬದುಕು ಓದುಗನಲ್ಲಿ ಬದುಕುವ ಸ್ಫೂರ್ತಿಯೊಂದು ಬಿತ್ತುವುದರಲ್ಲಿ ಅನುಮಾನವಿಲ್ಲ.
ನವಕರ್ನಾಟಕ ಪ್ರಕಾಶನ(ದೂರವಾಣಿ-22203580) ಹೊರತಂದಿರುವ ಕೃತಿಯ ಮುಖಬೆಲೆ 70 ರೂ.
------------
ಪ್ರಕೃತಿ ಎಂಬ ಅದ್ಭುತ
ನ್ಯಾಶನಲ್ ಜಿಯೋಗ್ರಫಿ ಎನ್ನುವ ಅದ್ಭುತ ಚಾನೆಲ್‌ನ್ನು ಪ್ರೀತಿಸದವರಿಲ್ಲ. ಜಗತ್ತನ್ನು, ಪ್ರಕೃತಿಯನ್ನು, ಪ್ರಾಣಿ, ಪಕ್ಷಿಗಳನ್ನು ಆ ಚಾನೆಲ್ ಹೃದಯಸ್ಪರ್ಶಿಯಾಗಿ ಮನುಷ್ಯನ ಮುಂದಿಟ್ಟಿದೆ. ಅಂತಹದೊಂದು ಚಾನೆಲ್‌ನಿಂದ ಸ್ಫೂರ್ತಿ ಪಡೆದವರಂತೆ, ರೋಹಿತ್ ಚಕ್ರತೀರ್ಥ ‘ದೇವ ಕೀಟದ ರತಿ ರಹಸ್ಯ’ ಎನ್ನುವ ಪುಟ್ಟ ಕೃತಿಯೊಂದನ್ನು ರಚಿಸಿದ್ದಾರೆ. ಜನಪ್ರಿಯ ವಿಜ್ಞಾನ ಲೇಖನಗಳ ಸರಮಾಲೆಗಳಲ್ಲಿ ಈ ಕೃತಿಯೂ ಒಂದು. ನಿಸರ್ಗದ ಸೌಂದರ್ಯದಿಂದ ವಂಚಿತನಾಗುತ್ತಾ, ಹೆಚ್ಚು ಹೆಚ್ಚು ಒಂಟಿಯಾಗಿ ಬದುಕುವುದೇ ಸದ್ಯಕ್ಕೆ ನಾಗರಿಕತೆಯ ಲಕ್ಷಣಗಳೆಂದು ನಾವು ಭಾವಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಪರಿಸರದ ಅದ್ಭುತಗಳನ್ನು, ಸೌಂದರ್ಯವನ್ನು ತನ್ನ ನವಿರಾದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಲೇಖಕರು. ಬೆಂಕಿಯೊಳಗೆ ವೀರಾಗ್ರಣಿಯಂತೆ ನುಗ್ಗುವ ರೋಬೊಟ್ ನೊಣ, ಮನುಷ್ಯರ ಆರೋಗ್ಯಕ್ಕಾಗಿ ಪ್ರಾಣ ತ್ಯಾಗ ಮಾಡುವ ಇಲಿಗಳು, ಕ್ಯಾನ್ಸರಿಗೆ ಸೆಡ್ಡು ಹೊಡೆವ ಹೆಗ್ಗಣ, ಸ್ತ್ರೀಲೋಲನನ್ನೇ ಆರಿಸುವ ಬಿನ್ನಾಣಗಿತ್ತಿ ಹೆಂಗಪ್ಸಿ, ಡೋಡೋ ಎಂಬ ಮೊದ್ದು ಹಕ್ಕಿ ನಾಶವಾದ ಬೆನ್ನಿಗೇ ಸರ್ವನಾಶವಾದ ಕ್ಯಾಲ್ವರಿ ವೃಕ್ಷ....ಹೀಗೆ ಪ್ರಕೃತಿಯ ಚೋದ್ಯಗಳನ್ನು ಮೊಗೆದು ಕೊಡುತ್ತದೆ ಈ ಪುಸ್ತಕ. ಒಂದಕ್ಕಿಂತ ಒಂದು ಸ್ವಾರಸ್ಯಕರವಾದ ಬರಗಳು ಇಲ್ಲಿವೆ. ಪ್ರಕೃತಿಯೊಳಗಿನ ಜೀವಿಗಳು ನಮಗಿಂತಲೂ ಹೆಚ್ಚು ಅದ್ಭುತ, ಆಧುನಿಕವಾಗಿರುವ, ಸಂವೇದನಾಶೀಲವಾಗಿರುವ ಅಂಶವನ್ನು ರೋಹಿತ್ ಕಟ್ಟಿಕೊಡುತ್ತಾರೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿ ಮುಖಬೆಲೆ 55 ರೂ.
No comments:
Post a Comment