ನರಕ-ಸ್ವರ್ಗ
ಒಬ್ಬ ಸಜ್ಜನ ಮೃತನಾದ. ಅವನು ಸ್ವರ್ಗವಾಸಿಯಾದ.
ಅವನಿಗೊಮ್ಮೆ ನರಕವನ್ನು ನೋಡುವ ಬಯಕೆಯಾಯಿತು. ನರಕದ ಕಾವಲುಗಾರನಲ್ಲಿ ತೋಡಿಕೊಂಡ.
ಆತ ಅನುಮತಿ ನೀಡಿದ. ಅಂತೆಯೇ ಸಜ್ಜನ ನರಕ ಪ್ರವೇಶಿಸಿದ.
ಏನಾಶ್ಚರ್ಯ. ನರಕ ಸ್ವರ್ಗಕ್ಕಿಂತ ಭಿನ್ನವಾಗಿರಲಿಲ್ಲ.
ಸಜ್ಜನ ಅಚ್ಚರಿಯಿಂದ ಕೇಳಿದ ‘‘ಇದೇನಿದು, ನರಕ ಇಷ್ಟು ಸುಂದರವಾಗಿದೆ...’’
ಕಾವಲುಗಾರ ನಕ್ಕು ನುಡಿದ ‘‘ಯಾಕೆಂದರೆ ನೀನು ಸಜ್ಜನ. ನೀನು ಪ್ರವೇಶಿಸಿದ ಪರಿಣಾಮವಾಗಿ ನರಕ ಸ್ವರ್ಗವಾಗಿ ಪರಿವರ್ತನೆಗೊಂಡಿತು. ನಮ್ಮಲ್ಲಿ ನರಕ, ಸ್ವರ್ಗಗಳಿಲ್ಲ. ಮನುಷ್ಯನೇ ಅದನ್ನು ತನಗೆ ಸಿದ್ಧಪಡಿಸಿಕೊಳ್ಳುತ್ತಾನೆ...’’
ಯೋಜನೆ
ಬಾಲಕಾರ್ಮಿಕ ವಿರೋಧಿ ಚಳವಳಿಯನ್ನು ಜಿಲ್ಲಾಡಳಿತ ಬಿರುಸಿನಿಂದ ಹಮ್ಮಿಕೊಂಡಿತು. ಅದಕ್ಕಾಗಿ ಬೃಹತ್ ಪೋಸ್ಟರ್‌ಗಳನ್ನು ಹಾಕುವ ಯೋಜನೆಯನ್ನು ಸಿದ್ಧಪಡಿಸಿತು. ಬೀದಿ ಬದಿಯಲ್ಲಿ ವಾಸಿಸುತ್ತಿದ್ದ ಮಕ್ಕಳಿಗೆ ಈಗ ಕೈ ತುಂಬಾ ಕೆಲಸ.
ಬಂಗಲೆ
ಬಾಲ್ಯದಲ್ಲಿ ತೀರಾ ಬಡವನಾಗಿ ಬದುಕಿದ್ದ ಆತ ಬೆಳೆದಂತೆ ಭಾರೀ ಬಂಗಲೆಗೆ ಒಡೆಯನಾದ.
ಒಂದು ದಿನ ಗೆಳೆಯನನ್ನು ತನ್ನ ಮನೆಗೆ ಆಹ್ವಾನಿಸಿದ.
ಬಂಗಲೆಯನ್ನು ವೀಕ್ಷಿಸಿ ಗೆಳೆಯ ಕೇಳಿದ ‘‘ನಿನ್ನ ತಂದೆ, ತಾಯಿ ಎಲ್ಲಿದ್ದಾರೆ?’’
ಆತ ನುಡಿದ ‘‘ಅವರು ಹಳೆಯ ಗುಡಿಸಲಲ್ಲೇ ಇದ್ದಾರೆ. ಅವರಿಗೆ ಈ ಬಂಗಲೆಯಲ್ಲಿ ನಿದ್ದೆ ಬರುವುದಿಲ್ಲವಂತೆ’’
ರುಚಿ
‘‘ನಿನಗೆ ನನ್ನ ಅಮ್ಮನ ಹಾಗೆ ಅಡುಗೆ ಮಾಡೋದಕ್ಕೆ ಗೊತ್ತಿಲ್ಲ. ಯಾವುದಕ್ಕೂ ರುಚಿಯಿಲ್ಲ...’’
ಆಗಷ್ಟೇ ಮದುವೆಯಾಗಿದ್ದ ಗಂಡ ಕೂಗಿ ಹೇಳಿದ.
ಕೋಣೆಯೊಳಗಿದ್ದ ಅಮ್ಮ ಖುಷಿಯಿಂದ ನಡುಗಿದಳು.
ಗಂಡ, ಪತ್ನಿಯನ್ನು ನೋಡಿ ಕಣ್ಣು ಮಿಟುಕಿಸಿದ. ಅವಳು ಮುಗುಳು ನಕ್ಕಳು.
ರಾಜ ರಸ್ತೆ
ಆ ರಾಜ ರಸ್ತೆ ಜಂಬದಿಂದ ಬೀಗುತ್ತಿತ್ತು.
ದೊಡ್ಡ ದೊಡ್ಡ ಕಾರುಗಳು, ಬಸ್ಸುಗಳು ಓಡಾಡುವ ರಸ್ತೆ ನಾನು ಎಂದು ಅಕ್ಕಪಕ್ಕದ ಮರಗಿಡಗಳೊಂದಿಗೆ ಹೇಳಿಕೊಳ್ಳುತ್ತಿತ್ತು.
ಒಂದು ದಿನ ಏನಾಯಿತೆಂದರೆ, ಆ ರಸ್ತೆ ಸೇರುವ ನಗರದ ಅರ್ಥವ್ಯವಸ್ಥೆ ಕುಸಿದು ನಗರ ಪಾಳು ಬಿತ್ತು.
ಕೆಲವೇ ದಿನಗಳಲ್ಲಿ ಆ ರಾಜರಸ್ತೆಯಲ್ಲಿ ಹುಲ್ಲುಗರಿಗಳು ಮೊಳೆಕೆ ಹೊಡೆಯತೊಡಗಿದವು.
ಅಪರೂಪಕ್ಕೆ ಓಡಾಡುವ ಆ ಊರಿನ ಜನರು, ತಾವೇ ನಡೆದು ರೂಪಿಸಿದ ತಮ್ಮದೇ ಕಾಲುದಾರಿಯಲ್ಲಿ ಎಂದಿನಂತೆ ನಡೆದಾಡುತ್ತಿದ್ದರು.
ಧ್ಯಾನ
ಕುಖ್ಯಾತ ಕಳ್ಳನೊಬ್ಬ ಪೊಲೀಸರಿಗೆ ಅಂಜಿ ಸಂತನ ಆಶ್ರಮ ಪ್ರವೇಶಿಸಿದ ‘‘ಸ್ವಾಮಿ, ನಾನೂ ಧ್ಯಾನವನ್ನು ಕಲಿಯಬೇಕು’’
ಸಂತ ಅವಕಾಶ ನೀಡಿದ. ಕಳ್ಳ ಆಶ್ರಮದಲ್ಲಿ ತನಗೆ ಬೇಕಾದಂತೆ ಕಾಲ ಕಳೆಯತೊಡಗಿದ.
ಒಂದು ದಿನ ಸಂತ ಆತನನ್ನು ಕರೆದು ಹೇಳಿದ ‘‘ನಾವು ಏನು ಮಾಡುತ್ತೇವೋ ಅದನ್ನು ಶ್ರದ್ಧೆಯಿಟ್ಟು ಮಾಡುವುದೇ ಧ್ಯಾನ. ಕಳ್ಳತನದಲ್ಲಿರುವ ಶ್ರದ್ಧೆ ಆಶ್ರಮದಲ್ಲಿ ಕಾಣುತ್ತಿಲ್ಲ. ಹೋಗು ಕಳ್ಳತನ ಮಾಡು. ನಿನ್ನ ಪಾಲಿಗೆ ಅದುವೇ ಧ್ಯಾನ’’
ಗಾಳ
ಗಾಳದ ಜೊತೆಗೆ ಆತ ನದಿಗೆ ಮೀನು ಹಿಡಿಯಲು ಹೊರಟ.
ಗಾಳ ಹಾಕಿ ಕೂತ. ನೀರಿನಲ್ಲಿ ಎಳೆದಂತಾಯಿತು.
‘‘ಓಹ್ ಮೀನು ಸಿಕ್ಕಿತು’ ಎಂದು ಸಂಭ್ರಮದಿಂದ ಎದ್ದು ನಿಲ್ಲುವಷ್ಟರಲ್ಲಿ ಆಯ ತಪ್ಪಿ ನದಿಗೆ ಬಿದ್ದ.
ಸಂಜೆಯ ಹೊತ್ತಿಗೆ ಆತನ ಹೆಣವನ್ನು ಎತ್ತಿದರು.
ಪಕ್ಕದಲ್ಲೇ ಇದ್ದ ಗಾಳವನ್ನು ಯಾರೋ ಎತ್ತಿದರೆ ಅದರಲ್ಲೊಂದು ಮೀನು ವಿಲವಿಲ ಒದ್ದಾಡುತ್ತಿತ್ತು.
Yojane, Dhyana n Gaala chennagide ........
ReplyDeleteಸತ್ಯವಾದ ಮಾತು ಏನೇ ಮಾಡಿದರು ಶ್ರದ್ದೆ ಬೇಕೆ ಬೇಕು. ಅದುವೇ ದ್ಯಾನ
ReplyDelete