Wednesday, January 9, 2013

ದೇಶದ್ರೋಹಿಯಾಗಿದ್ದರೆ ನನ್ನ ಮಗನ ಹೆಣವನ್ನು ನಾನು ನೋಡಲಾರೆ!!!

ಆಕೆಯ ಹೆಸರು ಸಫಿಯತ್. 2008ರ ಸಂದರ್ಭದಲ್ಲಿ ಈ ಅನಕ್ಷರಸ್ಥ ತಾಯಿಯ ಹೆಸರು ಕೇರಳದ ಮಾಧ್ಯಮಗಳಲ್ಲಿ ಕೇಂದ್ರ ಬಿಂದುವಾಯಿತು. ಕೇರಳ ಮಾತ್ರವಲ್ಲ, ದೇಶದ ಇಡೀ ಮುಸ್ಲಿಮರ ಪಾಲಿನ ‘ದೇಶಪ್ರೇಮ’ದ ಸಂಕೇತವಾದರು. ಒಂದೇ ಒಂದು ಕಾರಣಕ್ಕಾಗಿ. ಆಕೆ ತನ್ನ ಮಗನ ಹೆಣವನ್ನು ನೋಡಲು ನಿರಾಕರಿಸಿದರು.

2008ರಲ್ಲಿ ನಡೆದ ಘಟನೆ ಅದು. ಕೇರಳದ ನಾಲ್ವರು ತರುಣರು ಜಮ್ಮು ಕಾಶ್ಮೀರದಲ್ಲಿ ಬರ್ಬರವಾಗಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದರು. ಅವರು ಲಷ್ಕರೆ ತಯ್ಯಿಬಾ ಉಗ್ರರಾಗಿದ್ದು, ಪೊಲೀಸರ ವಿರುದ್ಧ ದಾಳಿ ನಡೆಸುವ ಸಂದರ್ಭದಲ್ಲಿ ಹತ್ಯೆಗೀಡಾದರು ಎಂದು ಪೊಲೀಸ್ ಇಲಾಖೆ ಹೇಳಿತು. ಅಷ್ಟೇ ಅಲ್ಲ, ಉಗ್ರವಾದಕ್ಕೆ ಸಂಬಂಧಿಸಿ, ಕಾಶ್ಮೀರ ಮತ್ತು ಕೇರಳದ ನಡುವೆ ದಾರಿ ತೆರೆದದ್ದು ಅದೇ ಮೊದಲ ಬಾರಿ. ಇದನ್ನೇ ನೆಪವಾಗಿಟ್ಟುಕೊಂಡು ಪೊಲೀಸರು ಕೇರಳದ ಹಲವರನ್ನು ಬಂಧಿಸಿದರು. ಈ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಫಯಾಝ್ ಎಂಬ 22 ವರ್ಷದ ತರುಣನ ತಾಯಿಯೇ ಸಫೀಯತ್. ಕಾಶ್ಮೀರದಲ್ಲಿ ನಾಲ್ವರು ತರುಣರು ಹತ್ಯೆಯಾದ ವಿವರಗಳು ಮಾಧ್ಯಮಗಳಲ್ಲಿ ‘ರೋಮಾಂಚಕಾರಿ’ ಯಾಗಿ ವರದಿಯಾಗುತ್ತಿರುವ ಸಂದರ್ಭದಲ್ಲಿ ಇನ್ನೊಂದು ರೋಮ್ಯಾಂಟಿಕ್ ಹೇಳಿಕೆ ಈ ತಾಯಿಯ ಬಾಯಿಯಿಂದ ಹೊರ ಬಿತ್ತು. ‘‘ದೇಶದ್ರೋಹಿಯಾಗಿದ್ದರೆ ನನ್ನ ಮಗನ ಹೆಣವನ್ನು ನಾನು ನೋಡುವುದಿಲ್ಲ’’ ಕೊನೆಗೂ ಸಫಿಯತ್ ತನ್ನ ಮಗನ ಹೆಣವನ್ನು ನೋಡಲಿಲ್ಲ. ಫಯಾಝ್‌ನ ಮೃತದೇಹ ವನ್ನು ಪೊಲೀಸರು ಜಮ್ಮುಕಾಶ್ಮೀರದಲ್ಲೆಲ್ಲೋ ದಫನ ಮಾಡಿದರು.

ಆವರೆಗೆ ಫಯಾಝ್‌ನ ಹೆಣವನ್ನು ಕುಕ್ಕಿ ತಿಂದ ಮಾಧ್ಯಮಗಳು, ಇದೀಗ ಸಫಿಯತ್‌ರ ಹೇಳಿಕೆಯ ಸುತ್ತ ರೋಮಾಂಚಕ ವರದಿಗಳನ್ನು ತಯಾರಿಸ ತೊಡಗಿದವು. ಈ ದೇಶದ ಎಲ್ಲಾ ಮುಸ್ಲಿಮರನ್ನು ಪ್ರತಿನಿಧಿಸುವ ದೇಶಪ್ರೇಮಿ ತಾಯಿಯಾಗಿ ಆಕೆಯನ್ನು ಬಿಂಬಿಸಿ, ಮಾಧ್ಯಮಗಳಲ್ಲಿ ಸಾಲು ಸಾಲಾಗಿ ವರದಿ ಬಂದವು. ದೇಶವೆಂದರೇನು, ರಾಜ್ಯವೆಂದರೇನು, ದೇಶಪ್ರೇಮವೆಂದರೇನು, ಉಗ್ರವಾದ ಎಂದರೇನು ಇತ್ಯಾದಿಗಳ ಬಗ್ಗೆ ಒಂದಿನಿತು ಅರಿವಿಲ್ಲದ ಸಫಿಯತ್ ಏಕಾಏಕಿ ದೇಶಪ್ರೇಮದ ಮಾತುಗಳನ್ನಾಡಿ ಮುಸ್ಲಿಮ್ ಮಹಿಳೆಯರ ನಡುವೆ ತಾರೆಯಾಗಿ ಬೆಳಗತೊಡಗಿದರು. ಮುಸ್ಲಿಮರು, ಮುಸ್ಲಿಮ್ ಸಂಘಟನೆಗಳು ಸಫಿಯತ್‌ರ ನಿರ್ಧಾರವನ್ನು ಬಾಯಿ ತುಂಬ ಹೊಗಳ ತೊಡಗಿದವು. ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್‌ನ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಕೂಡ, ಸಫಿಯತ್‌ರ ದೇಶಪ್ರೇಮವನ್ನು ಅಭಿನಂದಿಸಿದರು. ಕೆಲವೇ ದಿನಗಳಲ್ಲಿ ಎಲ್ಲರೂ ಇದನ್ನು ಮರೆತರು. ಮಾಧ್ಯಮ ಗಳು ಬೇರೆ ಎನ್‌ಕೌಂಟರ್‌ಗಳ ವಾಸನೆ ಹಿಡಿದು ಹೊರಟವು. ಸಫಿಯತ್ ಮತ್ತೆ ಈ ದೇಶದ ಕೋಟಿ ಕೋಟಿ ಅನಕ್ಷರಸ್ಥ ತಾಯಂದಿರಲ್ಲಿ ಒಬ್ಬರಾಗಿ ಕಳೆದುಹೋದರು.

 ಎರಡು ವರ್ಷಗಳ ಬಳಿಕ, ಇದೇ ತಾಯಿಯನ್ನು ಮಾಧ್ಯಮವೊಂದು ಸಂದರ್ಶಿಸಿತು. ಆಗ ಆಕೆ ಹೇಳಿದ ಮಾತೋ.. ಒಬ್ಬ ಅಪ್ಪಟ ತಾಯಿಯ ಹೃದಯದ ಮಾತಾಗಿತ್ತು. ‘‘ಯಾವ ತಾಯಿ ಯಾದರೂ ತನ್ನ ಮಗನ ಹೆಣವನ್ನು ನೋಡುವುದಿಲ್ಲ ಎಂದು ಹೇಳುವುದಕ್ಕೆ ಸಾಧ್ಯವಿದೆಯೆ’’ ಎಂಬ ಪ್ರಶ್ನೆಯನ್ನು ಅವರು ಹಾಕಿದರು. ಅಂದಿನ ಸನ್ನಿವೇಶ ನನ್ನಿಂದ ಆ ಮಾತನ್ನು ಹೇಳಿಸಿತೇ ಹೊರತು, ಅದು ನನ್ನ ಮಾತಲ್ಲ ಎಂದು ಬಿಟ್ಟರು. ಒಂದೆಡೆ ಪೊಲೀಸರ ಕೆಂಗಣ್ಣು, ಪದೇ ಪದೇ ಪೊಲೀಸರ ಆಗಮನ, ನೆರೆಮನೆ, ಸಮಾಜದ ಕೆಟ್ಟ ನೋಟ, ಪೇಪರ್‌ಗಳಲ್ಲಿ, ಟಿ.ವಿ.ಗಳಲ್ಲಿ ಚಿತ್ರವಿಚಿತ್ರ ವರದಿಗಳು...ಇವೆಲ್ಲವನ್ನು ನೋಡುತ್ತಾ ನನಗೆ ಅಂತಹ ಹೇಳಿಕೆಯನ್ನು ನೀಡದೇ ವಿಧಿಯೇ ಇರಲಿಲ್ಲ ಎಂದು ಅಳತೊಡಗಿದ್ದರು ಸಫಿಯತ್. ತನ್ನ ಮಗನ ಮುಖವನ್ನು ನೋಡುವುದಕ್ಕೆ ಅವರು ಆ ಕ್ಷಣದಲ್ಲೂ ಹಪಹಪಿಸುತ್ತಿದ್ದರು.

 ರಾಜದ್ರೋಹ, ದೇಶಪ್ರೇಮ ಎಂಬಿತ್ಯಾದಿ ಶಬ್ದಗಳು ರಾಜಕೀಯವಾದುದು. ಆದರೆ ತಾಯ್ತನವೆನ್ನುವುದು ರಾಜಕೀಯೇತರವಾದುದು. ಅದು ಅಪ್ಪಟ ಹೃದಯಮುಖಿಯಾದುದು. ಇಂದಿನ ಕ್ಷುದ್ರ ರಾಜಕಾರಣ, ಒಬ್ಬ ತಾಯಿಯ ಬಾಯಿಯಲ್ಲೂ ರಾಜಕಾರಣದ ಮಾತುಗಳನ್ನು ಬಲವಂತವಾಗಿ ಹೇಗೆ ಕಕ್ಕಿಸುತ್ತದೆ ಎನ್ನುವುದಕ್ಕೆ ಸಫಿಯತ್ ಹೃದಯವಿದ್ರಾವಕ ಉದಾಹರಣೆ ಯಾಗಿದ್ದಾರೆ. ಒಬ್ಬ ಮಗ ಕಳ್ಳನಾಗಿರಬಹುದು. ಅಥವಾ ಉಗ್ರವಾದಿಯೇ ಆಗಿರಬಹುದು. ಒಬ್ಬ ತಾಯಿಗೆ ಆತ ಮಗನೇ ಹೌದು. ಅವನೆಂತಹ ದುಷ್ಟನಾಗಿದ್ದರೂ ಅವನನ್ನು ನೋಡುವ ಕಟ್ಟ ಕಡೆಯ ಅವಕಾಶವನ್ನು ತಪ್ಪಿಸುವುದು ಅಥವಾ ಅಂತಹ ಗಳಿಗೆಯನ್ನು ರಾಜಕೀಕರಣಗೊಳಿಸಿ ರೋಮಾಂಚಕವಾಗಿ ವರದಿ ಮಾಡು ವುದು ಅತ್ಯಂತ ಕ್ರೌರ್ಯವಾದುದು. ಆ ಕ್ರೌರ್ಯಕ್ಕೆ ಇಂದು ಸಫಿಯತ್ ಮಾತ್ರವಲ್ಲ, ಅಂತಹ ನೂರಾರು ತಾಯಂದಿರು ಬಲಿಯಾಗುತ್ತಿದ್ದಾರೆ. ಮಾಧ್ಯಮಗಳು ಅತ್ಯಂತ ನಿಷ್ಕರುಣಿ ಹೃದಯ ದಿಂದ ಇವುಗಳಿಗೆ ‘ದೇಶಪ್ರೇಮ’ದ ಹೆಸರು ಕೊಟ್ಟು ಬಣ್ಣಿಸುತ್ತವೆ. ಆಕೆಯ ಸಂದರ್ಶನ ಮಾಡುತ್ತವೆ. ಕೊನೆಗೂ ಅದು ಆಕೆ ಆಡುವ ಮಾತುಗಳೆಲ್ಲ ಆಕೆಯ ಮಾತಲ್ಲ, ಮಾಧ್ಯಮ ಗಳೇ ಅವರ ಬಾಯಿಯಿಂದ ಹೊರಡಿಸಿದ ಮಾತು ಎನ್ನುವುದು ಮುಚ್ಚಿ ಹೋಗುತ್ತದೆ. ಯಾವತಾ ್ತದರೂ ಒಂದು ದಿನ ಆಕೆಯ ಖಾಸಗಿ ಕ್ಷಣದಲ್ಲಿ ಅವಳ ಹೃದಯವನ್ನು ಮುಟ್ಟಿದಾಗ, ಆಕೆಯ ಒಳಗಿನ ನಿಜವಾದ ಮಾತುಗಳು ಹೊರಬರ ಬಹುದು.

ಮಕ್ಕಳು ಎಷ್ಟೇ ಕ್ರೂರವಾದ ತಪ್ಪುಗಳನ್ನು ಮಾಡಿರಲಿ. ಅದಕ್ಕಾಗಿ ಅವರ ತಾಯಂದಿರಿಗೆ ಶಿಕ್ಷೆ ವಿಧಿಸುವ ಯಾವ ಹಕ್ಕೂ ನಮ್ಮ ಸಮಾಜಕ್ಕಾಗಲಿ, ಕಾನೂನಿಗಾಗಲಿ ಇಲ್ಲ. ಉಗ್ರವಾದ, ದೇಶದ್ರೋಹವೆಂಬಿತ್ಯಾದಿ ರಾಜಕಾರಣಕ್ಕೆ ಯಾವ ತಾಯಂದಿರೂ ಬಲಿಪಶುವಾಗಬಾರದು. ಮೃತ ನಾದ ಬಳಿಕ, ಹೆಸರನ್ನು ಕಳೆದುಕೊಂಡು ಬರೇ ಹೆಣವಾಗಿ ಬಿದ್ದುಕೊಂಡಿರುವ ಆ ದೇಹಕ್ಕೆ ಒಂದು ಘನತೆಯಿದೆ. ಮನುಷ್ಯರಾಗಿ, ನಾಗರಿ ಕರಾಗಿ ಆ ಘನತೆಯನ್ನು ಅದಕ್ಕೆ ನೀಡಲೇಬೇಕು. ಮಗನ ಹೆಣವನ್ನು ಕಟ್ಟ ಕಡೆಗೊಮ್ಮೆ ನೋಡುವ ಅವಕಾಶ ತಾಯಿಗೆ ಸಿಗಲೇಬೇಕು. ಸರಕಾರ, ಸಮಾಜ ಅದಕ್ಕೆ ದೊಡ್ಡ ಮನಸ್ಸಿನಿಂದ ಅನುವು ಮಾಡಿಕೊಡಬೇಕು.

  ‘‘ಯಾವ ತಾಯಿಯಾದರೂ ತನ್ನ ಮಗನ ಹೆಣವನ್ನು ನೋಡದಿರುತ್ತಾಳೆಯೇ’’ ಎಂಬ ಸಫಿಯತ್‌ರ ಮಾತುಗಳು ಕೆಲವು ಯುವಕರನ್ನು ತಟ್ಟಿದವು. ದೇಶಪ್ರೇಮ, ರಾಜದ್ರೋಹವೆನ್ನುವ ರಾಜಕೀಯಕ್ಕೆ ಬಲಿಪಶುವಾದ ಸಫಿಯತ್‌ನ ವಿಷಾದ ಅವರೊಳಗೆ ಹಾಡಿನ ರೂಪ ತಳೆದವು. ಕಾಫಿ ಶಾಪ್‌ನಲ್ಲಿ ಕಾಫಿ ಕುಡಿಯುತ್ತಾ ಅವರು ಈ ಕುರಿತಂತೆ ಮಾತುಕತೆ ನಡೆಸಿದರು. ಸಫಿಯತ್‌ನ ಗಂಡ ಅಂದರೆ ಹತ್ಯೆಗೀಡಾದ ಫಯಾಝ್‌ನ ತಂದೆ ಯನ್ನು ಭೇಟಿ ಯಾದರು. ಅವರ ಒಳಗಿನ ಮಾತನ್ನು ಕೇಳುತ್ತಾ ಕೇಳುತ್ತಾ ಅವರೊಳಗೆ ಒಂದು ಕಲ್ಪನೆ ಮೊಳಕೆ ಹೊಡೆಯಿತು. ರಾಜದ್ರೋಹಿ ಆರೋಪದಲ್ಲಿ ಹತ್ಯೆ ಗೀಡಾದ ಮಗನ ತಂದೆಯ ಹತಾಶ ಮಾತುಗಳೇ ರಾಕ್ ಹಾಡಿನ ರೂಪ ಪಡೆಯಿತು.. ಒಂದು ವಿಭಿನ್ನ ಮಾಪಿಳ್ಳೆ ಹಿಪ್ ಹಾಪ್ ಆ ತರುಣರಲ್ಲಿ ಹುಟ್ಟಲು ಕಾರಣವಾಯಿತು. ಅದಕ್ಕೆ ಅವರು ‘ನೇಟಿವ್ ಬಾಪಾ’ ಎಂದು ಹೆಸರಿಟ್ಟರು. ಬಾಪಾ ಎಂದರೆ ತಂದೆ. ಉಗ್ರಗಾಮಿಯೆಂದು ಕೊಲ್ಲಲ್ಪಟ್ಟ ಮಗನ ತಂದೆಯೀತ. ಅನಕ್ಷರಸ್ಥ ಮಾಪಿಳ್ಳೆ. ಆದರೆ ಊರನವರೆಲ್ಲರಿಗೂ ಬೇಕಾದಾತ. ಅವನು ತನ್ನ ಸಂಕಟಗಳನ್ನು, ಮಗನ ಕುರಿತ ನೆನಪುಗಳನ್ನು ಹೆಕ್ಕಿ, ಕೇಳುಗನ ಮುಂದಿಡುತ್ತಾ ಹೋಗುತ್ತಾರೆ. ಅದಕ್ಕೆ ಪೂರಕವಾಗಿ, ನಾಲ್ವರು ತರುಣರು ರಾಕ್ ಮೂಲಕ ‘ಉಗ್ರವಾದ’ದ ಹಿಂದಿರುವ ಒಳಹೊರಗಿನ ರಾಜಕೀಯಗಳನ್ನು ತೆರೆದಿಡುತ್ತಾ ಹೋಗುತ್ತಾರೆ. ‘ನೇಟಿವ್ ಬಾಪಾ’ ಆಲ್ಬಮ್ ಇದೀಗ ಕೇರಳ ಮಾತ್ರವಲ್ಲ, ಭಾಷೆಯ ಗಡಿದಾಟಿ ಹೃದಯಗಳನ್ನು ತಲುಪುತ್ತಿದೆ. ನೇಟಿವ್ ಬಾಪಾನ ಪಾತ್ರದಲ್ಲಿ ಮಾಮು ಕೋಯ, ತಂದೆಯ ಮಾತುಗಳನ್ನು ಹೃದಯಂ ಗಮವಾಗಿ ನಿರೂಪಿಸುತ್ತಾ ಹೋಗುತ್ತಾರೆ. ಮಗನ ಕುರಿತ ಅಪ್ಯಾಯಮಾನ ಮಾತುಗಳು, ಹಾಗೆಯೇ ಮಾಧ್ಯಮಗಳ ವರದಿಗಳ ಕುರಿತ ಆತನ ವ್ಯಂಗ್ಯಗಳು ಹೃದಯವಿರುವ ಸಮಾಜವನ್ನು ಇರಿಯಲೇ ಬೇಕು. ಬಾಲ್ಯದಲ್ಲಿ ಸಣ್ಣ ಪಟಾಕಿಗೂ ಹೆದರುತ್ತಿದ್ದ ನನ್ನ ಮಗುವಿನ ಕೈಯಲ್ಲಿ ಇದೀಗ ಅದೇನೋ ಬೋಂಬು ಸಿಕ್ಕಿದೆ ಎನ್ನುವ ಪತ್ರಿಕಾ ವರದಿಯನ್ನು ಅತ್ಯಚ್ಚರಿಯಿಂದ ಹೇಳುವ ನೇಟಿವ್ ಬಾಪಾ, ಚಳಿಗೆ ಹೊದ್ದುಕೊಳ್ಳಲೆಂದು ನನ್ನ ಶಾಲನ್ನು ಕೊಟ್ಟಿದ್ದೆ.. ಇದೀಗ ಪತ್ರಿಕೆಯಲ್ಲಿ ನೋಡಿದರೆ, ಆ ಶಾಲಿನಲ್ಲಿ ಅದೇನೋ ಅರಬೀ ಅಕ್ಷರ ಗಳಿವೆಯಂತೆ. ಅಷ್ಟೇ ಅಲ್ಲ. ಆ ಶಾಲಿನಲ್ಲಿ ಅವನು ಬಾಂಬನ್ನು ಸುತ್ತಿಕೊಂಡಿದ್ದನಂತೆ...’’ ಎಂದು ಗದ್ಗದನಾಗಿ ತೋಡಿಕೊಳ್ಳುತ್ತಾನೆ ನೇಟಿವ್ ಬಾಪಾ. ‘ನೇಟಿವ್ ಬಾಪಾ’ ಹಾಡಿನ ಸಂಗೀತದಲ್ಲಿ ಒಂದು ರೀತಿಯ ತೀವ್ರತೆಯಿದೆ. ಅದು ನೇರವಾಗಿ ನಮ್ಮ ಹೃದಯಕ್ಕೇ ನುಗ್ಗುತ್ತದೆ. ನೂರಾರು ಫಯಾಝ್‌ಗಳ ತಾಯಿ ಮತ್ತು ತಂದೆಯರ ನೋವನ್ನು ಈ ಆಲ್ಬಂ ದೇಶದ ಮುಂದಿಟ್ಟಿದೆ.

1 comment:

  1. ನಿಜ ಬಷೀರರೇ,
    ಎಲ್ಲವೂ ಮೀಡೀಯಾ ಹೈಫೇ, ಪಾಪ ತಸ್ಲಿಮಾಳನ್ನು ನಿಮ್ಮ ಧರ್ಮದವರು ಸಾರ್ವಜನಿಕವಾಗಿ ಹೊಡೆದದ್ದು ಮತ್ತು ಪೋಲೀಸರು ಕೇವಲ ಹದಿನೈದು ನಿಮಿಷಗಳಷ್ಟು ಸುಮ್ಮನಿದ್ದರೆ ನೂರು ಕೋಟಿ ಹಿಂದೂಗಳನ್ನು ಖತಂ ಮಾಡುತ್ತೇನೆ ಎನ್ನುವ ಅಕ್ಬರುದ್ಧೀನ್ ಓವೈಸಿ ಎಂತಹವರು ತುಂಬಾ ಒಳ್ಳೆಯವರು. ಆಂಧ್ರ ಅಸೆಂಬ್ಲಿಯಲ್ಲಿ ಬಾಂಬೆಯಲ್ಲಿ ನಡೆದ ಉಗ್ರರ ದಾಳಿಯ ವಿಷಯ ಬಂದಾಗ ಇಂಹವೆಲ್ಲಾ ಸಹಜ ಘಟನೆಗಳು ಎಂದು ಹಲ್ಲು ಕಿಸಿಯುವ ಇಂತಹ ಎಂ. ಎಲ್. ಏ. ಗಳು ದೇಶಭಕ್ತರು. ಇಂತಹವರ ಬಗ್ಗೆ ಏಕೆ ನಿಮ್ಮ ಗುಜರೀ ಅಂಗಡಿ ಮೌನವಾಗಿರುತ್ತದೆ? ತಾಯಿಯ ಮಾನವೀಯ ಹಕ್ಕುಗಳ ಕುರಿತಾಗಿ ಮಾತನಾಡುವ ನೀವು ಉಗ್ರರು ಇನ್ನೊಬ್ಬ ತಾಯಿಯ ಮಕ್ಕಳನ್ನು ಸಾಯಿಸಿದಾಗ ಆ ತಾಯಿಗೆ ಉಂಟಾಗುವ ನೋವಿನ ಕುರಿತು ಆಲೋಚಿಸಿದ್ದೀರಾ. ನಿಮ್ಮ ಈ ಲೇಖನಗಳು ಪರೋಕ್ಷವಾಗಿ ಉಗ್ರರನ್ನು ಬೆಂಬಲಿಸುವಂತೆಯೇ ಇವೆ. ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಎಲ್ಲ ದೇಶಬಾಂಧವರನ್ನು ಸಮಾನ ದೃಷ್ಟಿಯಿಂದ ನೋಡುವದನ್ನು ಕಲಿತುಕೊಳ್ಳಿ.

    ReplyDelete