Friday, January 25, 2013

ಮಅದನಿಯ ಕೈಬೆರಳುಗಳಿಗೆ ವ್ಯವಸ್ಥೆ ಜೋಡಿಸಿದ ಕೃತಕ ಉಗುರುಗಳು...!

ಅದು 1992. ಬಾಬರಿ ಮಸೀದಿ ಧ್ವಂಸಗೊಂಡ ಸಮಯ. ನನ್ನೂರಿನ ಮುಸ್ಲಿಮ್ ಹುಡುಗರು ಒಂದು ರೀತಿಯ ಗೊಂದಲ, ಅಸಹಾಯಕತೆ, ಹತಾಷೆಯ ಸ್ಥಿತಿಯಲ್ಲಿದ್ದಂತೆ ಕಂಡಿತ್ತು. ಬಾಬರಿ ಮಸೀದಿ ಧ್ವಂಸವನ್ನು ಹೇಗೆ ಸ್ವೀಕರಿಸಬೇಕು ಎನ್ನುವುದು ಅವರಿಗೆ ಅರ್ಥವಾಗಿರಲಿಲ್ಲ. ಅದನ್ನು ಅರ್ಥ ಮಾಡಿಸುವ ನಾಯಕರೂ ಅವರ ಬಳಿ ಇರಲಿಲ್ಲ. ಇಂತಹ ಸಂದರ್ಭದಲ್ಲೇ ನನ್ನೂರಿನ ಹುಡುಗರ ಕೈಯಲ್ಲಿ ಒಂದೆರಡು ಕ್ಯಾಸೆಟ್‌ಗಳು ಹರಿದಾಡತೊಡಗಿದವು. ಕೆಲವರು ಅದನ್ನು ಗುಟ್ಟಾಗಿಯೆಂಬಂತೆ ಕೇಳುತ್ತಿದ್ದರು. ಒಂದು ದಿನ ನನ್ನ ಆತ್ಮೀಯ ಸ್ನೇಹಿತನ ಬಳಿ ನಾನು ಆ ಕ್ಯಾಸೆಟನ್ನು ನೋಡಿದೆ.

‘‘ಏನದು?’’ ಎಂದು ಕೇಳಿದೆ. ಅವನು ಒಂದು ರೀತಿಯ ನಿಗೂಢತೆಯ ನಗು ನಕ್ಕ. ‘‘ಹೇಳು ಏನದು?’’ ನಿಧಾನಕ್ಕೆ ಬಾಯಿ ಬಿಟ್ಟ. ‘‘ಮಅದನಿಯವರ ಭಾಷಣದ ಕ್ಯಾಸೆಟ್’’ ನನ್ನ ಅಚ್ಚರಿ ತಿಳಿಯಾಗಲಿಲ್ಲ.‘‘ಯಾವ ಮಅದನಿ?’’ ‘‘ಕೇರಳದ ಅಬ್ದುಲ್ ನಾಸರ್ ಮಅದನಿಯವರ ಕ್ಯಾಸೆಟ್’’
 ‘‘ಅದನ್ನು ಇಷ್ಟು ಗುಟ್ಟಾಗಿ ಕೇಳುವ ಅಗತ್ಯ ಏನಿದೆ?’’
 ‘‘ಬಾಬರಿ ಮಸೀದಿ ಧ್ವಂಸದ ಬಗ್ಗೆ ಅವರು ಮಾಡಿದ ಭಾಷಣ ಇದು...’’ ದಿನಕ್ಕೆ ಸರಿಯಾಗಿ ಒಂದು ಹೊತ್ತು ನಮಾಜೂ ಮಾಡದ, ಮಸೀದಿಯ ಕುರಿತಂತೆ ಯಾವ ಕಾಳಜಿಯೂ ಇಲ್ಲದ ಗೆಳೆಯ ಅವನು. ಅಷ್ಟೇಕೆ, ರಾಜಕೀಯದ ಕುರಿತಂತೆಯೂ ಅವನಿಗೆ ವಿಶೇಷ ತಿಳುವಳಿಕೆ ಇದ್ದಿರಲಿಲ್ಲ. ಇಂತಹದರಲ್ಲಿ ಬಾಬರಿ ಮಸೀದಿ ಧ್ವಂಸದ ಕುರಿತಂತೆ ಅವನಿಗಿರುವ ಆಸಕ್ತಿ ಕಂಡು ನನಗೆ ಕುತೂಹಲವಾಯಿತು. ‘‘ನನಗೊಮ್ಮೆ ಕೊಡು’’ ಎಂದು ಆ ಕ್ಯಾಸೆಟನ್ನು ಇಸಿದುಕೊಂಡೆ. ಅಂದು ಮನೆಯಲ್ಲಿ ಆ ಕ್ಯಾಸೆಟನ್ನು ಕೇಳಿದೆ. ಹೀಗೆ ನಾಸರ್ ಮಅದನಿ ಎನ್ನುವ ಒಬ್ಬ ದುರಂತ ನಾಯಕನ ಪರಿಚಯ ಆದುದು ಆಗ. ಆಮೇಲೆ ಹಲವು ಭಾಷಣಗಳನ್ನು ಕ್ಯಾಸೆಟ್‌ಗಳ ಮೂಲಕ ಕೇಳಿಸಿಕೊಂಡೆ.

ಬಾಬರಿ ಮಸೀದಿ ಧ್ವಂಸವನ್ನು ಅತ್ಯಂತ ಭಾವುಕವಾಗಿ ಕಟ್ಟಿಕೊಡುವ ಮಲಯಾಳಂ ಭಾಷಣಗಳು ಅವು. ಭಾರತೀಯ ಸಂವಿಧಾನದ ವೈಫಲ್ಯವನ್ನು, ಮುಸ್ಲಿಮರಿಗಾದ ಅನ್ಯಾಯವನ್ನು, ಆರೆಸ್ಸೆಸ್ ಮಾಡುತ್ತಿರುವ ದೌರ್ಜನ್ಯವನ್ನು ಅತ್ಯಂತ ತೀವ್ರ ರೀತಿಯಲ್ಲಿ ಅವುಗಳು ಮಂಡಿಸುತ್ತಿದ್ದವು. ನಾನು ಈ ಭಾಷಣದ ನಡುವೆ ಒಂದು ಸೈಕಿಕ್ ಅಂತರವನ್ನು ಕಾಪಾಡಿಕೊಂಡಿದ್ದರಿಂದ ಅದು ನನ್ನ ಮೇಲೆ ಯಾವುದೇ ಪರಿಣಾಮವನ್ನು ಬೀರಲಿಲ್ಲ. ಆದರೆ ನನ್ನ ಗೆಳೆಯರಿಗೆ ಮಾತ್ರ ಹೇಳಿದೆ ‘‘ಬಾಬರಿ ಮಸೀದಿ ಧ್ವಂಸಕ್ಕೆ ಈ ಕ್ಯಾಸೆಟ್ ಪರಿಹಾರವಲ್ಲ. ಈ ದೇಶ ನಮ್ಮದು. ಈ ದೇಶದ ಸಂವಿಧಾನ ನಮಗೆ ಅದರ ವಿರುದ್ಧ ಪ್ರತಿಭಟನೆಗೆ ನೂರಾರು ಬಾಗಿಲುಗಳನ್ನು ತೆರೆದುಕೊಟ್ಟಿದೆ. ನಮ್ಮ ಸಂವಿಧಾನವೇ ನಮಗೆ ಪರಿಹಾರ...’’

ಎಷ್ಟೋ ಹುಡುಗರಿಗೆ ನನ್ನ ಕೈಲಾದಷ್ಟು ನಾನು ಮನವರಿಕೆ ಮಾಡಿಸಿದ್ದೆ. ಕೆಲವರು ನನ್ನನ್ನು ‘‘ಗಾಂಧಿ...’’ ಎಂದು ತಮಾಷೆಯೂ ಮಾಡಿದ್ದರು. ಅವರಿಗೆ ಗಾಂಧಿಯ ಕುರಿತಂತೆ ಹೇಳಿದ್ದೆ. ‘‘ಗಾಂಧಿಯನ್ನು ಕೊಂದವರೂ ಆರೆಸ್ಸೆಸ್ಸಿಗರು. ಗಾಂಧಿ ಒಬ್ಬ ಶ್ರೇಷ್ಠ ಹಿಂದು. ಮುಸ್ಲಿಮರು ಸರ್ವನಾಶವಾಗುತ್ತಿರುವ ಕಾಲದಲ್ಲಿ ಅವರನ್ನು ರಕ್ಷಿಸಿದ್ದು ಗಾಂಧಿ. ಇದನ್ನು ನಾವು ನೆನಪಿನಲ್ಲಿಡೋಣ. ನಮಗೆ ಬೇಕಾಗಿರುವುದು ನಾಸರ್ ಮಅದನಿಯಲ್ಲ, ಗಾಂಧೀಜಿ’’ ಎಂದೂ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೆ. ಕೆಲವೊಮ್ಮೆ ತಮಾಷೆಯ ವಸ್ತುವೂ ಆಗಿದ್ದೆ. ಕೆಲವು ಹುಡುಗರು ಅದಾಗಲೇ ನಾಸರ್ ಮಅದನಿಯ ಭಾಷಣದಲ್ಲಿ ಕೊಚ್ಚಿ ಹೋಗಿದ್ದರು.
ಭಾಷಣಗಳಲ್ಲಿ ನಾಸರ್ ಮಅದನಿ ಎಲ್ಲೂ ಹಿಂಸೆಯ ಬಗ್ಗೆ ಮಾತನಾಡಿರಲಿಲ್ಲ. ಆದರೆ ಬಾಬರಿ ಮಸೀದಿಯ ಧ್ವಂಸವನ್ನು ಅವರು ಭಾವುಕವಾಗಿ ನಿರೂಪಿಸಿದ ರೀತಿ ಪರೋಕ್ಷವಾಗಿ ಹಿಂಸೆಯನ್ನೇ ಪ್ರೇರೇಪಿಸುತ್ತಿತ್ತು.ಇಂದು ಕರ್ನಾಟಕದ ಜೈಲಿನಲ್ಲಿ ಸಾವು-ಬದುಕಿನ ನಡುವೆ ಜಗ್ಗಾಡುತ್ತಿರುವ ನಾಸರ್ ಮಅದನಿಯ ಮೊತ್ತ ಮೊದಲ ವ್ಯಕ್ತಿತ್ವ ಇದು. ಅವರು ಕೇರಳದ ಆಚೆಯ ಜನರಿಗೆ ಪರಿಚಯವಾದುದೇ ಬಾಬರಿ ಮಸೀದಿ ಧ್ವಂಸದ ಬಳಿಕ. ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಮುಸ್ಲಿಮರನ್ನು ಮುನ್ನಡೆಸಲು ಒಬ್ಬ ಶ್ರೇಷ್ಠ ನಾಯಕ ಹುಟ್ಟಿ ಬರಲೇಬೇಕಾಗಿತ್ತು.

ಅದಾಗಲೇ ಇದ್ದ ಮುಸ್ಲಿಮ್ ನಾಯಕರು ರಾಷ್ಟ್ರೀಯ ಪಕ್ಷಗಳು ಎಸೆದ ಬಿಸ್ಕೆಟ್‌ಗಳನ್ನು ತಿನ್ನುತ್ತಾ, ತನ್ನ ಮಕ್ಕಳು, ಮೊಮಕ್ಕಳಿಗೆ ಆಸ್ತಿ ಮಾಡುವುದರಲ್ಲಿ ಮಗ್ನರಾಗಿದ್ದರು. ಅವರು ಮುಸ್ಲಿಮ್ ತರುಣರ ಹತಾಶೆಗೆ ಸ್ಪಂದಿಸಲಿಲ್ಲ. ಆ ಶೂನ್ಯ ವಾತಾವರಣದಲ್ಲಿ ಕೇರಳ ಮತ್ತು ಕರಾವಳಿ ಭಾಗದ ಭಾಗಶಃ ಮುಸ್ಲಿಮರು ನಾಸರ್ ಮಅದನಿಯಲ್ಲಿ ಆ ನಾಯಕನನ್ನು ಹುಡುಕಿದರು. ಅವರ ಭಾಷಣಗಳಿಗೆ ಕಿವಿಯಾದರು. ಆದರೆ ನಾಸರ್ ಮಅದನಿಯ ಅಷ್ಟೂ ಭಾಷಣಗಳಲ್ಲಿ ದೇಶದ್ರೋಹದ ಒಂದು ಮಾತುಗಳಿರಲಿಲ್ಲ ನಿಜ. ಆದರೆ ಅವರ ಭಾವೋದ್ವೇಗದ ಮಾತುಗಳು, ಅನಕ್ಷರಸ್ಥ ಯುವಕರನ್ನು ತಪ್ಪು ಹಾದಿಗೆ ಒಯ್ಯುವ ಸಾಧ್ಯತೆ ಇತ್ತು ಎನ್ನುವುದನ್ನು ಮಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ.

ಬಾಬರಿ ಮಸೀದಿ ಧ್ವಂಸದ ಕುರಿತಂತೆ ಮಾಡಿದ ಭಾಷಣದ ವಿರುದ್ಧ ಅವರ ಮೇಲೆ ಕೇಸೂ ದಾಖಲಾಗಿತ್ತು. ಆದರೆ ಎಲ್ಲ ಕೇಸುಗಳೂ ವಜಾಗೊಂಡವು. ‘‘ವಾಜಪೇಯಿ, ಅಡ್ವಾಣಿಯವರನ್ನು ವಿಮರ್ಶೆ ಮಾಡುವುದು ಧಾರ್ಮಿಕ ನಿಂದನೆ ಅಲ್ಲ. ಅದು ರಾಜಕೀಯ ಮಾತುಗಳು’’ ಎಂದು ನ್ಯಾಯಾಲಯ ಹೇಳಿತು. ನಾಸರ್ ಮಅದನಿಯನ್ನು ಕೇರಳದ ಮುಸ್ಲಿಮರು ನಾಯಕರನ್ನಾಗಿ ಸ್ವೀಕರಿಸಲು ಪ್ರಧಾನ ಪಾತ್ರವೇ ಬಲಪಂಥೀಯ ಸಂಘಟನೆಗಳದ್ದು ಎಂದರೆ ನೀವು ನಂಬುತ್ತೀರ?

ಕೇರಳದಲ್ಲಿ ಒಬ್ಬ ಮುಸ್ಲಿಮ್ ರಾಜಕಾರಣಿ ನಾಯಕನಾಗುವುದು ಅಷ್ಟು ಸುಲಭವಲ್ಲ. ಯಾಕೆಂದರೆ, ಮುಸ್ಲಿಮರು ಮುಸ್ಲಿಮ್ ಲೀಗ್, ಕಮ್ಯುನಿಷ್ಟ್, ಕಾಂಗ್ರೆಸ್ ಎಂದು ಸಮಸಮವಾಗಿ ಒಡೆದು ಹೋಗಿದ್ದರು. ಮಅದನಿಯನ್ನು ಅಷ್ಟು ಸುಲಭವಾಗಿ ಸ್ವೀಕರಿಸುವ ವಾತಾವರಣವೂ ಕೇರಳದಲ್ಲಿ ಇರಲಿಲ್ಲ. 1990ರ ದಶಕದಲ್ಲಿ ಅಡ್ವಾಣಿ, ತೊಗಾಡಿಯಾ ಸೇರಿದಂತೆ ಎಲ್ಲ ಕ್ಷುದ್ರ ಶಕ್ತಿಗಳು ಮತಾಂಧತೆಯ ಮೂಲಕ ಇಡೀ ದೇಶವನ್ನು ಕೊಚ್ಚಿ ಹಾಕಿದ ಕಾಲ. ಅವರ ಭಾಷಣಗಳು ಮೆದು ಎದೆಯ ಮೇಲೆ ವಿಷ ಬೀಜಗಳಾಗಿ ಊರಿದವು. ಅದು ದೇಶಾದ್ಯಂತ ಮುಸ್ಲಿಮರ ಮೇಲೆ ತನ್ನ ಪ್ರಭಾವವನ್ನು ಬೀರ ತೊಡಗಿತ್ತು.

ಇಂತಹ ಸಂದರ್ಭದಲ್ಲಿ ಕೇರಳದ ಜನರು ಇದಕ್ಕೊಂದು ಪರ್ಯಾಯದ ನಿರೀಕ್ಷೆಯಲ್ಲಿದ್ದಂತಿತ್ತು. ಮುಸ್ಲಿಮ್ ಲೀಗ್ ಅಪ್ಪಟ ರಾಜಕೀಯ ಪಕ್ಷವಾಗಿದ್ದುದರಿಂದ ಅದಕ್ಕಿಂತ ಭಿನ್ನವಾಗಿ ಇನ್ನೊಂದು ತೊಗಾಡಿಯಾ, ಅಡ್ವಾಣಿಯ ಹುಡುಕಾಟದಲ್ಲಿ ಕೆಲ ಯುವ ತರುಣರು ಇದ್ದರು. ಆಗ ಕೇರಳದಲ್ಲಿ ಎದ್ದು ಬಂದವರು ಮಅದನಿ.ಇವರ ಹೆಸರು ಅಬ್ದುಲ್ ನಾಸರ್. ಮಅದನಿ ಎನ್ನುವುದು ಇವರ ಹೆಸರಲ್ಲ. ಧಾರ್ಮಿಕ ಶಿಕ್ಷಣ ಇವರಿಗೆ ನೀಡಿರುವ ಪದವಿ ಅದು. ಧಾರ್ಮಿಕ ಉಪನ್ಯಾಸಗಳನ್ನು ನೀಡಿ ಖ್ಯಾತರಾಗುತ್ತಾ ಆಗುತ್ತಾ...ನಿಧಾನಕ್ಕೆ ಅಲ್ಲಿಂದ ರಾಜಕೀಯ ಭಾಷಣಗಳೆಡೆಗೆ ಹೊರಳಿದರು.ತೊಗಾಡಿಯ, ಅಡ್ವಾಣಿಯವರ ಭಾಷಣಗಳಿಗೆ ತಮ್ಮ ಭಾಷಣಗಳ ಮೂಲಕ ಉತ್ತರ ಕೊಡಲು ಹೊರಟರು. ಅದು ಎಲ್ಲಿಯವರೆಗೆ ಎಂದರೆ, 1991ರಲ್ಲಿ ಆರೆಸ್ಸೆಸ್ ಎನ್ನುವ ಬಲಪಂಥೀಯ ಉಗ್ರ ಸಂಘಟನೆಗೆ ಪರ್ಯಾಯವಾಗಿ ಐಎಸ್‌ಎಸ್ ಎನ್ನುವ ಸಂಘಟನೆಯನ್ನು ಸ್ಥಾಪಿಸುವ ಮೂಲಕ. ಆರೆಸ್ಸೆಸ್ ಚಡ್ಡಿ ಹಾಕಿ ಕವಾಯತು ನಡೆಸತೊಡಗಿದರೆ, ಕೇರಳದಲ್ಲಿ ಐಎಸ್‌ಎಸ್ ಪ್ಯಾಂಟು ಹಾಕಿ ಕವಾಯತು ನಡೆಸತೊಡಗಿತು. ಅದಾಗಲೇ ಆರೆಸ್ಸೆಸ್ ಕೇರಳದಲ್ಲಿ ಹಿಂಸಾಚಾರದ ನೀಲ ನಕ್ಷೆಯನ್ನು ಸಿದ್ಧ ಪಡಿಸಿತ್ತು.

ಇಂತಹ ಒಂದು ಸಂದರ್ಭದಲ್ಲೇ ನಾಸರ್ ಮಅದನಿಯ ಮೇಲೆ ಬಾಂಬ್ ದಾಳಿ ನಡೆಯಿತು. ಮೇಲ್ನೋಟಕ್ಕೆ ಇದು ಆರೆಸ್ಸೆಸ್ ನಡೆಸಿದ ದಾಳಿ ಎನ್ನುವು ಸಾಬೀತಾಗಿದ್ದರೂ, ಅದಕ್ಕೆ ಯಾವ ಸಾಕ್ಷಿಗಳೂ ಇಲ್ಲದೇ ಇದ್ದುದರಿಂದ ಇಂದಿಗೂ ಈ ದಾಳಿಯ ಕುರಿತಂತೆ ಗೊಂದಲಗಳಿವೆ. ಈ ದಾಳಿಯಲ್ಲಿ ನಾಸರ್ ಮಅದನಿ ತನ್ನ ಕಾಲೊಂದನ್ನು ಶಾಶ್ವತವಾಗಿ ಕಳೆದುಕೊಂಡರು. ಆದರೆ ಆ ಒಂದು ಕಾಲಿಗೆ ಬದಲಾಗಿ ಕೇರಳದಲ್ಲಿ ಲಕ್ಷಾಂತರ ತರುಣರನ್ನು ತಮ್ಮ ಬಗಲಲ್ಲಿ ಹಾಕಿಕೊಂಡರು. ಬಹುಶಃ ನಾಸರ್ ಮಅದನಿಯ ಮೇಲೆ ಈ ಬಾಂಬ್ ದಾಳಿ ನಡೆಯದೇ ಇದ್ದಿದ್ದರೆ ಅವರು ಹತ್ತು ಹಲವು ನಾಯಕರಲ್ಲಿ ಒಬ್ಬರಾಗಿ ಉಳಿದು ಬಿಡುತ್ತಿದ್ದರೋ ಏನೋ.ಪರೋಕ್ಷವಾಗಿ ಆರೆಸ್ಸೆಸ್ ಸಂಘಟನೆ ಈ ಅನುಮಾನಾಸ್ಪದ ದಾಳಿಯನ್ನು ಹಮ್ಮಿಕೊಳ್ಳುವ ಮೂಲಕ ನಾಸರ್ ಮಅದನಿಯನ್ನು ಒಬ್ಬ ನಾಯಕನಾಗಿಸಿ ಬಿಟ್ಟಿತು. ಕೇರಳದಲ್ಲಿ ಐಎಸ್‌ಎಸ್ ಜನಪ್ರಿಯವಾದುದೇ ಇದರ ಬಳಿಕ. ಬಳಿಕ ಅವರ ಒಂಟಿ ಕಾಲೇ ಜನರನ್ನು ಒಟ್ಟು ಸೇರಿಸಲು ಸಹಾಯ ಮಾಡಿತು. ಬಾಬರಿ ಮಸೀದಿ ಧ್ವಂಸವಾದುದೇ ಕೇರಳದ ತರುಣರು ಸಹಸ್ರಾರು ಸಂಖ್ಯೆಯಲ್ಲಿ ಐಎಸ್‌ಎಸ್ ಸೇರತೊಡಗಿದರು.

ಕರಾವಳಿಯಲ್ಲೂ ಈ ಐಎಸ್‌ಎಸ್ ಕಾಲಿಟ್ಟಿತ್ತಾದರೂ, ತರುಣರು ಯೂನಿಫಾರ್ಮ್ ಹಾಕಿ ಕವಾಯತು ನಡೆಸುವುದನ್ನು ಇಲ್ಲಿನ ಸಜ್ಜನ ಮುಸ್ಲಿಮರೇ ಟೀಕಿಸತೊಡಗಿದರು. ಕೆಲವರು ತಮಾಷೆಯನ್ನೂ ಮಾಡತೊಡಗಿದರು. ಇದು ಈ ಭಾಗದಲ್ಲಿ ಒಂದು ಹಾಸ್ಯಾಸ್ಪದವಾಗಿಯಷ್ಟೇ ಸುದ್ದಿಯಾಯಿತು. ಆದರೆ ಕೆಲವು ತರುಣರ ಆಳದಲ್ಲಿ ಮಾತ್ರ ಮಅದನಿ ಹೊರಳಾಡುತ್ತಿದ್ದರು. ಬಾಬರಿ ಮಸೀದಿ ಧ್ವಂಸವಾದುದರ ಬೆನ್ನಿಗೇ ಈ ಐಎಸ್‌ಎಸ್ ನಿಷೇಧಕ್ಕೊಳಗಾಯಿತು. ಮದನಿ ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಜೈಲು ಪಾಲಾದರು.

ಜೈಲು ಮಅದನಿಯ ಪಾಲಿಗೆ ಆತ್ಮ ವಿಮರ್ಶೆಗೆ ಸೂಕ್ತವಾದ ಸ್ಥಳವಾಗಿತ್ತು ಅನ್ನಿಸುತ್ತದೆ ನನಗೆ. ಯಾಕೆಂದರೆ ಅಲ್ಲಿ ಹಿಂಬಾಲಕರಿಂದ ಅವರು ಒಂಟಿಯಾಗುತ್ತಿದ್ದರು. ಪ್ರತಿ ಬಾರಿ ಜೈಲು ಸೇರಿ ಹೊರಬಂದಾಗ ಅವರು ಇನ್ನಷ್ಟು ಪಕ್ವವಾಗುತ್ತಿದ್ದರು. 1993ರಲ್ಲಿ ಜೈಲಿನಿಂದ ಹೊರ ಬಂದವರೇ ಮೊದಲಿಗಿಂತ ವಿವೇಕತನದಿಂದ ಕೆಲಸ ಮಾಡಿದರು. ಹಿಂದುಳಿದವರ್ಗವನ್ನು, ದಲಿತರನ್ನು ಸಂಘಟಿಸುವ ಕೆಲಸಕ್ಕಿಳಿದರು. ಅದರ ಫಲವಾಗಿಯೇ ಹುಟ್ಟಿದ್ದು ಪೀಪಲ್ ಡೆಮಾಕ್ರಟಿಕ್ ಪಾರ್ಟಿ.

ಕೇರಳದ ರಾಜಕಾರಣಿಗಳಿಗೆ ಮಅದನಿ ನಿಜವಾದ ಉಗ್ರ ಎಂದು ಅನಿಸತೊಡಗಿದ್ದು ಆಗ. ಮುಸ್ಲಿಮ್ ಲೀಗ್ ಸೇರಿದಂತೆ ಎಲ್ಲ ಪಕ್ಷಗಳು ಮಅದನಿ ವಿರುದ್ಧ ಒಂದಾದದ್ದು ಕೂಡಾ ಆಗಲೇ. ಮಅದನಿ ಪಿಡಿಪಿಯನ್ನು ಸಂಘಟಿಸಿದ ರೀತಿ ಅವರೆಲ್ಲರಿಗೂ ತಲೆನೋವಾಗಿತ್ತು. ಪಿಡಿಪಿಯ ರಾಜ್ಯ ಹಿರಿಯ ಉಪಾಧ್ಯಕ್ಷ ಅಂದಿನ ಸ್ವಾಮಿ ವರ್ಕಲ ರಾಜ್ ಆಗಿದ್ದರು. ಅವರು ಸ್ಥಳೀಯ ದೇವಸ್ಥಾನದ ಧರ್ಮದರ್ಶಿಯಾಗಿದ್ದರು. ಕೇಸರಿ ಉಟ್ಟೇ ಓಡಾಡುತ್ತಿದ್ದರು. ಪಕ್ಷದ ಪ್ರಮುಖ ಹುದ್ದೆಯಲ್ಲಿ ಹಿಂದೂ, ಕ್ರಿಶ್ಚಿಯನ್ನರನ್ನೂ ಸೇರಿಸಿಕೊಂಡಿದ್ದರು.

ಬಹುಶಃ ಮಅದನಿ ದ್ವೇಷದ ಮಾತುಗಳನ್ನು ಬಿತ್ತುತ್ತಾ ತೊಗಾಡಿಯ ಥರ ಓಡಾಡುತ್ತಿದ್ದರೆ ರಾಜಕೀಯ ಪಕ್ಷಗಳು ಅವರನ್ನು ಮುಟ್ಟುತ್ತಿರಲಿಲ್ಲವೋ ಏನೋ. ಮತಾಂಧ, ಉಗ್ರವಾದಿ ಮಅದನಿಯನ್ನು ಅಲ್ಲಿನ ಎಲ್ಲ ಪಕ್ಷಗಳೂ ಸಹಿಸಿಕೊಳ್ಳುತ್ತಿದ್ದವು. ಆದರೆ ಆ ಇಮೇಜಿನಿಂದ ಹೊರಬಂದು, ಅಹಿಂದ ಶಕ್ತಿಯನ್ನು ಒಂದಾಗಿಸಿ, ಒಂದು ಪಕ್ಷವನ್ನು ಕಟ್ಟುವ ಪ್ರಯತ್ನ ಮಾಡುತ್ತಿದ್ದಾಗ, ಎಲ್ಲ ಪಕ್ಷಗಳಿಗೂ ಮಅದನಿ ಒಬ್ಬ ಮತಾಂಧ, ಉಗ್ರವಾದಿ ಎನ್ನುವುದು ನೆನಪಾಯಿತು. ಬಿಜೆಪಿ, ಆರೆಸ್ಸೆಸ್ ಸೇರಿದಂತೆ ಕೇರಳದ ಎಲ್ಲ ಪಕ್ಷಗಳು ಸೇರಿ ಮಅದನಿಯನ್ನು ಜೈಲು ಸೇರಿಸುವ ನಕ್ಷೆಯೊಂದನ್ನು ಹಾಕಿದವು. ಕೊನೆಗೆ ಅದರಲ್ಲಿ ಯಶಸ್ವಿಯೂ ಆದವು.

(ಮುಂದಿನ ಗುರುವಾರಕ್ಕೆ ಮುಂದುವರಿಯುವುದು)

No comments:

Post a Comment