Sunday, December 30, 2012

ಚಪ್ಪಲಿ ಮತ್ತು ನಾನು...

ಬಸ್ಸಲ್ಲಿ ನನಗೆ ಕಿಟಕಿ ಪಕ್ಕದಲ್ಲೇ ಕೂರೋದು ಚಟ. ಅಂದು ಆಫೀಸ್ ಕಡೆಗೆಂದು 2ಸಿ ಬಸ್ಸನ್ನು ಏರಿದ್ದೇ...ಎದುರು ಸೀಟಲ್ಲಿ ಸುಮಾರು ಹತ್ತು ವರ್ಷದ ಹುಡುಗ ಕಿಟಕಿಗೆ ಅಂಟಿ ಕೂತಿದ್ದ. ಹರಿದ ಸ್ಕೂಲ್ ಬ್ಯಾಗ್, ಹರಿದ ಬಟ್ಟೆ, ಕೊಳಕು ಚಡ್ಡಿ....‘‘ಏ ಈ ಕಡೆ ಬಾರೋ...’’ ಎಂದು ಅವನನ್ನು ಎಳೆದು ಅಲ್ಲಿ ನಾನು ಕುಳಿತೆ. ಹುಡುಗ ಮುಖ ಸಪ್ಪಗೆ ಮಾಡಿ ನನ್ನ ಪಕ್ಕದಲ್ಲಿ ಕೂತ.
ಟೈಂಪಾಸ್‌ಗೆ ಒಬ್ಬ ಹುಡುಗ ಸಿಕ್ಕಿದ ಎಂದು ಮಾತಿಗೆ ಶುರು ಹಚ್ಚಿದೆ ‘‘ಏನೋ...ಹೆಸರು?’’
ಅದೇನೋ ಹೇಳಿದ. ಕೇಳಲಿಲ್ಲ ‘‘ಜೋರಾಗಿ ಹೇಳು’’ ಎಂದೆ. ‘‘ರಾಜು’’ ಎಂದ.
‘‘ಎಷ್ಟು ಕ್ಲಾಸು...?’’
‘‘ನಾಲ್ಕನೆ ಇಯತ್ತೆ’’ ಎಂದ. ‘‘ಅಪ್ಪನ ಹೆಸರೇನೋ?’’ ಎಂದು ಕೇಳಿದೆ. ಹುಡುಗ ವೌನವಾದ. ಅಪ್ಪನ ಹೆಸರನ್ನು ಹೇಳೋದು ಅಗೌರವ ಅನ್ನಿಸಿರಬೇಕೋ ಏನೋ...‘‘ಹೇಳೋ...ಅಪ್ಪನ ಹೆಸರೇನು?’’ ಮತ್ತೆ ಕುಕ್ಕಿ ಕೇಳಿದೆ.
‘‘ಯಂಕ್ಟೇಸ’’ ಒಲ್ಲದ ಮನಸ್ಸಿನಿಂದ ಉತ್ತರಿಸಿದ.
‘‘ಏನು ಕೆಲ್ಸ ಮಾಡ್ತಾನೆ...’’ ಹುಡುಗ ವೌನವಾಗಿದ್ದ ‘‘ಹೇಳೋ..ಅಪ್ಪ ಏನು ಕೆಲಸ ಮಾಡ್ತಾನೆ...’’
 ‘‘ಕೂಲಿ ಕೆಲಸ’’ ಹುಡುಗ ಬಾಯಿ ಬಿಟ್ಟ. ಹುಡುಗನನ್ನೊಮ್ಮೆ ಹೆದರಿಸುವುದಕ್ಕೆಂದು ಸುಮ್ಮನೆ ದುರುಗುಟ್ಟಿ ನೋಡಿದೆ. ಅವನು ಹೆದರಿದಂತೆ ಕಾಣಲಿಲ್ಲ. ಅವನಷ್ಟಕ್ಕೆ ಕಾಲಾಡಿಸುತ್ತಾ ಕಿಟಕಿಯ ಕಡೆಗೇ ನೋಡುತ್ತಿದ್ದ. ಆಗ ನನ್ನ ಗಮನಕ್ಕೆ ಬಂತು. ಹುಡುಗನ ಕಾಲಲ್ಲಿ ಚಪ್ಪಲಿ ಇರಲಿಲ್ಲ. ಪುಟ್ಟ ಪಾದ...ಚಪ್ಪಲಿ ಇಲ್ಲದೆ ಇರುವುದು ಯಾಕೋ ನನ್ನನ್ನು ಕಳವಳಕ್ಕೀಡು ಮಾಡಿತು.
‘‘ಏನೋ...ಚಪ್ಪಲಿ ಯಾಕೆ ಹಾಕಿಲ್ಲ...?’’ ಕೇಳಿದೆ.
ಹುಡುಗ ವೌನವಾಗಿದ್ದ. ‘‘ಹೇಳಿದ್ದು ಕೇಳ್ಳಿಲ್ವ? ಸ್ಕೂಲಿಗೆ ಹೋಗೋವಾಗ ಚಪ್ಪಲಿ ಹಾಕೋಬೇಡ್ವಾ...ಚಪ್ಪಲಿ ಏನಾಯ್ತು?’’
‘‘ಹರ್ದೋಯ್ತು?’’ ಹುಡುಗ ಚುಟುಕಾಗಿ ಉತ್ತರಿಸಿದ.
‘‘ಎಷ್ಟು ಸಮಯವಾಯಿತು ಹರ್ದು?’’ ಹುಡುಗ ಮತ್ತೆ ವೌನವಾದ. ‘‘ಏಯ್ ಬಾಯಿ ಬರಲ್ವಾ...? ಚಪ್ಪಲಿ ಹರ್ದು ಎಷ್ಟು ಸಮಯ ಆಯ್ತು?’’
‘‘ಒಂದು ವರ್ಸ...’’
ನನ್ನ ಎದೆ ಒಮ್ಮೆ ಹಾರಿತು ‘‘ಅಂದ್ರೆ...ಒಂದು ವರ್ಷದಿಂದ ಚಪ್ಪಲಿ ಹಾಕದೆ ಓಡಾಡ್ತ ಇದ್ದೀಯ...ಯಾಕೆ ಹೊಸ ಚಪ್ಪಲಿ ತೆಗೀಲಿಲ್ಲ...?’’
ಹುಡುಗ ಮತ್ತೆ ವೌನ. ‘‘ಯಾಕೋ ತೆಗೀಲಿಲ್ಲ?’’
‘‘ಹೀಗೆ....’’
‘‘ಹೀಗೆ ಅಂದ್ರೆ...ಯಾಕೆ ತೆಗೀಲಿಲ್ಲ...ಹೇಳು?’’
‘‘ಹೀಗೆ...’’ ಎಂದು ಮತ್ತೆ ಉತ್ತರಿಸಿದ. ಸ್ವಲ್ಪ ಹೊತ್ತು ವೌನವಾಗಿದ್ದೆ. ಮತ್ತೆ ಕೇಳಿದೆ ‘‘ಯಾಕೆ ತೆಗೀಲಿಲ್ಲ...ದುಡ್ಡಿರ್ಲಿಲ್ವ?’’
ಹುಡುಗ ವೌನವಾಗಿದ್ದ. ಅವನ ಮುಖವನ್ನು ಸ್ಪಷ್ಟವಾಗಿ ನೋಡಿದೆ. ಹುಡುಗನೊಳಗೊಂದು ಗಾಂಭೀರ್ಯವಿದೆ. ಆತ್ಮಾಭಿಮಾನವಿದೆ ಅನ್ನಿಸಿತು. ಬಸ್ಸು ಚಲಿಸುತ್ತಲೇ ಇತ್ತು. ನನ್ನ ಇಳಿಯುವ ಸ್ಟಾಪ್ ಹತ್ತಿರವಾಗುತ್ತಿತ್ತು. ಕಿಸೆಯಿಂದ ನೂರು ರೂಪಾಯಿ ತೆಗೆದು ಹೇಳಿದೆ ‘‘ನೋಡು...ಈ ನೂರು ರೂಪಾಯಿಯಿಂದ ಚಪ್ಪಲಿ ತೆಗೋ...’’ ಎಂದೆ. ಅವನು ನನ್ನ ಮುಖವನ್ನು ನೋಡಿದ. ಅವನ ಕಣ್ಣಲ್ಲಿ ಹೊಳಪಿತ್ತು. ಅಥವಾ ಬೆಳಕಿತ್ತು. ತೆಗೆದುಕೊಳ್ಳಬೇಕೋ...ಅಥವಾ ತಮಾಷೆಯೋ ಎಂಬ ಪ್ರಶ್ನೆಯೂ ಅಲ್ಲಿತ್ತು. ನಾನು ನೂರು ರೂಪಾಯಿಯನ್ನು ಅವನ ಕಿಸೆಗೆ ಹಾಕಿ ಹೇಳಿದೆ ‘‘ಮರ್ಯಾದೆಯಲ್ಲಿ ಈ ನೂರು ರೂಪಾಯಿಯಿಂದ ಚಪ್ಪಲಿ ತೆಗೋ ಬೇಕು. ಅಪ್ಪಂಗೆ ಕೊಟ್ಟು ಚಪ್ಪಲೀನೇ ತಗಳೋಕೆ ಹೇಳ್ಬೇಕು. ಏನಾದ್ರೂ...ಅಪ್ಪಂಗೆ ಕೊಡದೆ ಐಸ್‌ಕ್ರೀಮ್...ಅದು ಇದೂಂತ ಖರ್ಚು ಮಾಡಿದ್ರೆ...ನಿನ್ ಶಾಲೆಗೆ ಬಂದು ಮೇಷ್ಟ್ರಲ್ಲಿ ಕಂಪ್ಲೇಂಟ್ ಮಾಡ್ತೀನಿ ಅಷ್ಟೇ...ಗೊತ್ತಾಯ್ತ?...ಇನ್ನೊಮ್ಮೆ ಬರೋವಾಗ ನಿನ್ನ ಕಾಲಲ್ಲಿ ಚಪ್ಪಲಿ ಇರ್ಲೇ ಬೇಕು....’’ ಖಡಕ್ಕಾಗಿ ನುಡಿದೆ. ಹುಡುಗ ತಲೆಯಾಡಿಸಿದ. ಅಷ್ಟರಲ್ಲಿ ನನ್ನ ಸ್ಟಾಪ್ ಬಂತು. ನಾನು ಇಳಿದೆ.
 

***
ಕಚೇರಿಗೆ ಹೋದದ್ದೆ ನನ್ನ ಮಾನವೀಯತೆಯನ್ನು, ಹೃದಯವಂತಿಕೆಯನ್ನು ನಾನು ನನ್ನ ಗೆಳೆಯನಲ್ಲಿ ಹಂಚಿಕೊಂಡೆ. ‘‘ಮನಸ್ಸು ತಡೆಯಲಿಲ್ಲ. ನೂರು ರೂಪಾಯಿ ಕೊಟ್ಟು ಚಪ್ಪಲಿ ತೆಗೋ ಎಂದೆ ಕಣೋ..’’ ಎಂದು ವಿವರಿಸಿದೆ.
ನನ್ನ ಕತೆ ಕೇಳಿ ಗೆಳೆಯ ಕಿಸಕ್ಕನೆ ನಕ್ಕ. ‘‘ಅಲ್ವೋ...ಚಪ್ಪಲಿ ಹಾಕೋದು...ಹಾಕದೇ ಇರೋದು ಅವರಿಗೆ ವಿಷಯವೇ ಅಲ್ಲ...ಆ ಹಣವನ್ನು ಹುಡುಗ ಮಜಾ ಮಾಡ್ತಾನೆ...ಇಲ್ಲಾ ಅವನಪ್ಪ ತಗೊಂಡು ಹೆಂಡ ಕುಡೀತಾನೆ...ಹೆಂಡದ ಅಮಲಲ್ಲಿ ನಿನಗೆ ಒಂದಿಷ್ಟು ಉಗೀತಾನೆ...ತನ್ನ ಸ್ನೇಹಿತರ ಜೊತೆಗೆ ಆಡ್ಕೊಂಡು ನಗ್ತಾನೆ....ಅಷ್ಟೇ...ಆ ಹುಡುಗನಿಗೆ ಭಿಕ್ಷೆ ಬೇಡುವುದನ್ನು ಕಲಿಸಿದೆ ನೀನು...ಅವನಿನ್ನೆಂದೂ ಚಪ್ಪಲಿ ಹಾಕಲ್ಲ...ತಿಳ್ಕೋ...ಎಲ್ಲರ ಕೈಯಲ್ಲಿ ಚಪ್ಪಲಿಗೆ ದುಡ್ಡು ಕೇಳೋಕೆ ಶುರು ಮಾಡ್ತಾನೆ...’’
ಹೌದಲ್ಲ ಅನ್ನಿಸ್ತು. ಆ ಹುಡುಗನ ಕುರಿತಂತೆ ಮೈಯೆಲ್ಲ ಕುದಿಯ ತೊಡಗಿತು.
 

***
ಇದು ನಡೆದು ಒಂದು ವಾರವಾಗಿರಬಹುದು. ಮತ್ತೊಮ್ಮೆ ಅದೇ 2ಸಿ ಬಸ್ಸಲ್ಲಿ ಆ ಹುಡುಗನನ್ನು ನೋಡಿ ಬಿಟ್ಟೆ. ಅದೇ ಹರಿದ ಸ್ಕೂಲ್ ಬ್ಯಾಗ್. ಕೊಳಕು ಬಟ್ಟೆ, ಹರಿದ ಚೆಡ್ಡಿ. ಕಾಲಲ್ಲಿ....ಓಹ್...ಕಾಲಲ್ಲಿ ನೋಡಿದರೆ ಚಪ್ಪಲಿ ಇಲ್ಲ! ನನಗೆ ಸಿಟ್ಟು ಉಕ್ಕಿ ಬಂತು. ‘‘ಏಯ್ ಇಲ್ಲಿ ಬಾರೋ...’’ ಕರೆದೆ. ಅವನು ನನ್ನನ್ನು ನೋಡಿದ್ದೇ ಅಡಗಿಕೊಳ್ಳ ತೊಡಗಿದ. ನಾನೇ ಎದ್ದು ಅವನ ಕಿವಿ ಹಿಡಿದು ನನ್ನ ಪಕ್ಕ ಕೂರಿಸಿದೆ.
‘‘ಲೋ...ದುಡ್ದೇನು ಮಾಡಿದೆ...?’’ ಅವನು ಅಳುಮುಖ ಮಾಡಿದ್ದ. ನನ್ನ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ.
‘‘ಹೇಳು...ದುಡ್ಡೇನು ಮಾಡಿದೆ...? ಇಲ್ಲಾಂದ್ರೆ...ನಾಳೆ ನಿನ್ನ ಶಾಲೆಗೇ ಬಂದು ಕಂಪ್ಲೇಂಟ್ ಮಾಡ್ತೀನಿ....ಹೇಳೋ...ಆ ನೂರು ರೂಪಾಯಿ ಏನು ಮಾಡಿದೆ...?’’
ಹುಡುಗನಲ್ಲಿ ಉತ್ತರವೇ ಇರಲಿಲ್ಲ. ಅವನು ನನ್ನ ಮುಖವನ್ನೇ ನೋಡುತ್ತಿದ್ದ.
‘‘ಉತ್ತರ ಹೇಳದೇ ಇದ್ರೆ ಬಾರಿಸಿ ಬಿಡ್ತೇನೆ...’’ ಎಂದೆ.
ಈಗ ಬಾಯಿ ಬಿಟ್ಟ ‘‘ದುಡ್ಡು ಅಪ್ಪಂಗೆ ಕೊಟ್ಟೆ’’
‘‘ಚಪ್ಪಲಿ ಯಾಕೆ ತೆಗೀಲಿಲ್ಲ ಆ ಬೋಳಿಮಗ?’’
ಹುಡುಗ ಅಳುಧ್ವನಿಯಲ್ಲಿ ಉತ್ತರಿಸಿದ ‘‘ಮನೇಲಿ ಅಕ್ಕಿ ಮುಗಿದು ಎರಡು ದಿನ ಆಗಿತ್ತು. ಆ ದುಡ್ಡಲ್ಲಿ ಅಪ್ಪ ಅಕ್ಕಿ ತಂದ. ರಾತ್ರಿ ನಾನು, ಅಪ್ಪ, ಅವ್ವ, ತಮ್ಮ, ತಂಗಿ ಎಲ್ಲ ಸೇರಿ ಊಟ ಮಾಡಿದ್ವು’’
ಬಸ್ಸು ಚಲಿಸುತ್ತಲೇ ಇತ್ತು. ಹೊರಗಿನ ಗಾಳಿ, ಧೂಳು ಮುಖಕ್ಕೆ ಅಪ್ಪಳಿಸುತ್ತಿತ್ತು. ಯಾವುದೂ ನನ್ನ ಅರಿವಿಗೆ ಬರುತ್ತಿರಲಿಲ್ಲ. ಹುಡುಗನ ಮುಖ ನೋಡುವುದಕ್ಕೂ ಅಂಜಿಕೆ.
ಅಷ್ಟರಲ್ಲಿ ಹುಡುಗನೇ ಹೇಳಿದ ‘‘ಸಾರ್...ನಿಮ್ಮ ಸ್ಟಾಪ್ ಬಂತು...’’

7 comments:

  1. ಸರ್ ನಾನು ಶಾಲೆಗೆ ಹೊಗೋವಾಗ, ಚಪ್ಪಲಿ ಆಸೆ ಇದ್ರು ಹಾಕ್ಕೊಳೋಕೆ ಸಾದ್ಯ ಆಗ್ಲಿಲ್ಲ, ಈ ಕಥೆ ಓದಿ ನನಗೆ ನನ್ನ ಬಾಲ್ಯ ನೆನಪಾಯ್ತು, ತುಂಬಾ ಚೆನ್ನಾಗಿದೆ.

    ReplyDelete
  2. ಎಸ್ ಎಸ್ ಎಲ್ ಸಿ ತನಕ ಉಡುಪಿಯ ನಮ್ಮ ಮನೆಯಿಂದ ಬ್ರಹ್ಮಾವರ ಮಾಬುಕಳದ ನೆಂಟರ ಮನೆಯ ತನಕ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ಸಲೀಸಾಗಿ ನಡೆದ ನೆನಪು ಒತ್ತರಿಸಿ ಬಂತು. ಮೊನ್ನೆ ಸ್ವಂತ ಕಾರಿನಲ್ಲಿ ಅದೇ ದಾರಿಯಲ್ಲಿ ಸಾಗುವಾಗ ಆ ಡಾಮರು ರಸ್ತೆಯನ್ನು ನೋಡಿದಾಗ ನಲವತ್ತು ವರ್ಷಗಳ ಹಿಂದಿನ ದೃಶ್ಯ ಕಣ್ಣಿಗೆ ಕಟ್ಟಿದಂತಿತ್ತು ....................

    ReplyDelete
  3. ‘‘ಸಾರ್...ನಿಮ್ಮ ಸ್ಟಾಪ್ ಬಂತು...’’ --ಅದೇ ದುರಂತ... ನೂರು ರುಪಾಯಿಗೇ ನಮ್ಮ ನಿಲ್ದಾಣ. ಅದರಿಂದಾಚೆ ನಮಗೇನೂ ತೋಚದು...

    ReplyDelete