Tuesday, December 4, 2012

ಗುರಿತಲುಪದ ತಲಾಶ್

ಒಂದು ಆ್ಯಕ್ಸಿಡೆಂಟಿನ ಸಣ್ಣ ಎಳೆಯನ್ನು ಇಟ್ಟುಕೊಂಡು ತನಿಖೆಗಿಳಿಯುವ ಪೊಲೀಸ್ ಅಧಿಕಾರಿಯೊಬ್ಬ ಒಂದು ಕೊಲೆ ಪ್ರಕರಣವನ್ನು ಬಯಲುಗೆಳೆಯುವುದಲ್ಲದೆ, ತನ್ನೊಳಗಿನ ಸಂಘರ್ಷಗಳಿಂದ ಪಾರಾಗಿ ಹೊಸ ಬದುಕಿಗೆ ಅಣಿಯಾಗುವುದು ತಲಾಶ್ ಚಿತ್ರದ ಮುಖ್ಯ ಕತೆ. ಈ ಕತೆಯ ಕೇಂದ್ರ ಬಿಂದು ಒಬ್ಬ ವೇಶ್ಯೆ. ಆಕೆಯ ಹೆಸರು ರೋಸಿ ಅಥವಾ ಸಿಮ್ರಾನ್(ಕರೀನಾ ಕಪೂರ್). ಈ ಚಿತ್ರದ ಸಸ್ಪೆನ್ಸ್ ಅವಳೇ ಆಗಿದ್ದಾಳೆ.

ಕಣ್ಣೆದುರೇ ನೀರಿನಲ್ಲಿ ಮುಳುಗಿ ಸತ್ತ ಪುಟ್ಟ ಮಗನ ಕುರಿತು ಪಾಪಪ್ರಜ್ಞೆಯಿಂದ ನರಳುವ ಸುರ್‌ಜನ್ ಸಿಂಗ್ ಶೆಖಾವತ್, ಅದರಿಂದ ಪಾರಾಗಲು ರಾತ್ರಿ ನಿದ್ದೆ ಗೆಟ್ಟು  ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿ. ಇಂತಹ ಹೊತ್ತಿನಲ್ಲೇ ಸಿನಿಮಾ ನಟ ಅರ್ಮಾನ್ ಕಪೂರ್ ಒಂದು ನಿಗೂಢ ಅಪಘಾತದಲ್ಲಿ ಸಾಯುತ್ತಾನೆ. ಅದರ ತನಿಖೆಯನ್ನು ಮಾಡುವ ಹಂತದಲ್ಲಿ ಶೆಖಾವತ್ಗೆ ನೆರವವಾಗುವವಳೇ ವೇಶ್ಯೆ ರೋಸಿ. ಇಲ್ಲಿಂದ ಮುಂಬಯಿಯ ಒಂದೊಂದೇ ಪಾತ್ರಗಳನ್ನು ಚಿತ್ರ ಪರಿಚಯಿಸುತ್ತಾ ಹೋಗುತ್ತದೆ. ಒಂದು ರೀತಿಯಲ್ಲಿ ‘ಕಹಾನಿ’ ಚಿತ್ರದಂತೆಯೇ ತಲಾಶ್ ಕೂಡ ಬೆಳೆಯುತ್ತಾ ಹೋಗುತ್ತದೆ. ಅಲ್ಲಿ ಕೊಲ್ಕತಾ ಮುಖ್ಯ ವಸ್ತುವಾದರೆ, ಇಲ್ಲಿ ಮುಂಬಯಿ ರಾತ್ರಿಗಳು ಮುಖ್ಯ ಪಾತ್ರವಹಿಸುತ್ತದೆ. ಆ ರಾತ್ರಿಯ ಜಗಮಗಿಸುವ ಬೆಳಗಿನಲ್ಲೇ ಶೆಖಾವತ್‌ನ ಬದುಕಿನ ತಲಾಶ್ ನಡೆಯುತ್ತದೆ. ಆದರೆ ಕಹಾನಿ ಚಿತ್ರದ ಜನಪ್ರಿಯ ಮಾದರಿಯ ಸಸ್ಪೆನ್ಸ್ ಇಲ್ಲಿಲ್ಲ. ಕಹಾನಿಯ ಕ್ಲೈಮಾಕ್ಸ್ ಸ್ಫೋಟಿಸಿದಂತೆ ಇಲ್ಲಿ ತಲಾಶ್ ಸ್ಫೋಟಿಸುವುದಿಲ್ಲ.


 ಒಂದನ್ನು ನಾವು ಸ್ಪಷ್ಟವಾಗಿಟ್ಟುಕೊಳ್ಳಬೇಕಾಗಿದೆ. ಇದು ಜನಪ್ರಿಯ ಮಾದರಿಯ ಸಸ್ಪೆನ್ಸ್ ಥ್ರಿಲ್ಲರ್ ಅಲ್ಲ. ಇದರ ಜೊತೆಗೆ ಹೇಳಬೇಕಾದುದನ್ನು ಹೇಳುವ ಸಂದರ್ಭದಲ್ಲಿ, ನಿರ್ದೇಶಕಿ ಚಿತ್ರದಲ್ಲಿ ಬಿಗಿಯನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ನಿಜವಾದ ಚಿತ್ರ-ಕತೆಯಲ್ಲಿರುವ ತೊಡಕುಗಳು. ಅಲ್ಲಲ್ಲಿ ಚಿತ್ರದ ನಿರೂಪಣೆ ಬೋರ್ ಎನಿಸುತ್ತದೆ. ಆದುದರಿಂದಲೇ ತಲಾಶ್ ಚಿತ್ರ ಒಟ್ಟು ಸಿನಿಮಾವಾಗಿ ಇಷ್ಟವಾಗುವುದಕ್ಕಿಂತ, ಇಲ್ಲಿನ ಕೆಲವು ಬಿಡಿ ಬಿಡಿ ಪಾತ್ರಗಳು ಕಟ್ಟಿಕೊಡುವ ದೃಶ್ಯಗಳಷ್ಟೇ ನಮ್ಮನ್ನು ಹೆಚ್ಚು ತಟ್ಟುತ್ತವೆ. ಒಂದು ಸಸ್ಪೆನ್ಸ್ ಚಿತ್ರದ ನಿರೀಕ್ಷೆಯಿಟ್ಟು ಚಿತ್ರವನ್ನು ನೋಡುತ್ತಾ ಹೋದರೆ, ಕ್ಲೈಮಾಕ್ಸ್‌ನ ನಿರಾಸೆ ನಮ್ಮನ್ನು ಎತ್ತಿ ಕುಕ್ಕುತ್ತದೆ. ಚಿತ್ರ ಏನೋ ಹೇಳಲು ಹೋಗಿ ದಾರಿ ತಪ್ಪಿ ಬಿಟ್ಟಿತೆ ಎಂಬ ಅನಿಸಿಕೆ ಚಿತ್ರಮಂದಿರದಿಂದ ಹೊರತೆರಳುವ ನಮ್ಮನ್ನು ಕಾಡುತ್ತದೆ. ತಲಾಶ್ ತನ್ನ ನಿಜವಾದ ಗುರಿಯನ್ನು ತಲುಪಿಲ್ಲವೆಂಬ ಭಾವನೆ ನಮ್ಮನ್ನು ಕಾಡುತ್ತದೆ.


 ಇಲ್ಲಿ ನಾಯಕ ಶೆಖಾವತ್ ಬರೇ ಕೊಲೆಯನ್ನು ಪತ್ತೆ ಮಾಡುವುದಕ್ಕಾಗಿ ಇರುವ ಅಧಿಕಾರಿಯಲ್ಲ. ಒಂದು ಭಿನ್ನ ಮನಸ್ಥಿತಿಯುಳ್ಳ, ಸ್ವಂತ ವ್ಯಕ್ತಿತ್ವವುಳ ಪೊಲೀಸ್ ಅಧಿಕಾರಿ ಆತ. ಆ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ ಆಮಿರ್ ಅಭಿನಂದನಾರ್ಹರು. ಆಮಿರ್ ಬಿಟ್ಟರೆ, ಚಿತ್ರದ ಇನ್ನೊಂದು ಹೆಗ್ಗಳಿಕೆ ನವಾಜುದ್ದೀನ್ ಸಿದ್ದೀಕಿ. ಪಿಂಪ್‌ನ ಪಾತ್ರಕ್ಕೆ ಗರಿಷ್ಠ ನ್ಯಾಯವನ್ನು ನೀಡಿದ್ದಾರೆ ಅವರು. ಶೆಖಾವತ್ ಪತ್ನಿಯ ಪಾತ್ರದಲ್ಲಿ ರಾಣಿ ಮುಖರ್ಜಿ ಸಹನೆಯಿಂದ ನಟಿಸಿದ್ದಾರೆ. ಪಾತ್ರದ ಗಾಂಭೀರ್ಯಕ್ಕೆ ಒಪ್ಪುವಂತಿದೆ ಅವರ ವ್ಯಕ್ತಿತ್ವ. ರಾಮ್ ಸಂಪತ್ ಸಂಗೀತ ಅಲ್ಲಲ್ಲಿ ಕುಂಟುವ ಚಿತ್ರವನ್ನು ಮುನ್ನಡೆಸುತ್ತದೆ. ಫರ್ಹಾನ್ ಅಖ್ತರ್ ಸಂಭಾಷಣೆ ಹರಿತವಾಗಿದೆ. ತಲಾಶ್ ತನ್ನ ಗುರಿಯನ್ನು ತಲುಪದೇ ಇದ್ದರೂ, ಒಂದು ಒಳ್ಳೆಯ ಚಿತ್ರ ಕೊಡುವ ಪ್ರಯತ್ನ ಮಾಡಿದ್ದಾರೆಂಬ ಕಾರಣಕ್ಕೆ ತಂಡವನ್ನು ಅಭಿನಂದಿಸಬೇಕಾಗಿದೆ.

No comments:

Post a Comment