Monday, December 24, 2012

ಮೈಸೂರ್ ಪಾಕ್ ಮತ್ತು ಇತರ ಕವಿತೆಗಳು

ಗಾಯ
ಹಳೆಗಾಯಗಳೆ ಬೇಗ
ಒಣಗಿಬಿಡಿ
ಹೊಸ ಗಾಯಗಳಿಗೆ
ತುಸು ಜಾಗ ಕೊಡಿ!
2
ಮೈಸೂರ್ ಪಾಕ್
ಈದ್ ದಿನ ಮುಸ್ತಫಾ
ಕಚೇರಿಯಲ್ಲಿ
ಮೈಸೂರ್ ಪಾಕ್ ಹಂಚಿದ....
ಮೈಸೂರ್ ಏನೋ
ಚೆನ್ನಾಗಿದೆ
ಆದರೆ "ಪಾಕ್'' ಕುರಿತಂತೆ
ಕೆಲವರಿಗೆ
ಸಣ್ಣದೊಂದು ಅನುಮಾನ...
3
ಹಾರ್ಮೋನಿಯಂ
ಕುರುಡನೊಬ್ಬ ಹಾರ್ಮೋನಿಯಂನ್ನು
ಅದ್ಭುತವಾಗಿ ನುಡಿಸುತ್ತಿದ್ದ.
ಅದೆಷ್ಟೋ ಕಾಲದ
ಬಳಿಕ ಅವನಿಗೆ ಕಣ್ಣು ಬಂತು
ಇದೀಗ ಅದೇ ಹಾರ್ಮೋನಿಯಂ
ಕೀ ಬೋರ್ಡ್ ಮುಂದೆ
ಅವನ ಬೆರಳುಗಳು
 ತಡವರಿಸುತ್ತಿವೆ....!
ಕಣ್ಣು ಮುಚ್ಚದೆ ಅವನು
ಹಾರ್ಮೋನಿಯಂ ನುಡಿಸಲಾರ!!
4
ಬಾಹುಗಳು
ಗೆಳೆಯನ ಬಾಹುಗಳಲ್ಲಿ
ಆಸರೆಗೆಂದು ಅವಳು ಧಾವಿಸಿದಳು..
ಸುತ್ತಿಕೊಂಡ ತೋಳುಗಳು
ನಿಧಾನಕ್ಕೆ ಬಂಧನಿಕೆಯಂತೆ
ಬಿಗಿಯಾಗ ತೊಡಗಿದವು...
ಶತಮಾನಗಳ ಬಳಿಕ
ಆ ತೋಳನ್ನು ಬಿಡಿಸಿದಾಗ
ಸತ್ತು ಹೋದ ಮರಗಳಂತೆ
ಅಲ್ಲಿ ನೂರಾರು ಅಸ್ಥಿ ಪಂಜರಗಳು...!
5
ಅನಾಥ ಹೆಣ
ರೈಲ್ವೆ ಹಳಿಯ ಮೇಲೆ
ಒಂದು ಅನಾಥ ಹೆಣ ಸಿಕ್ಕಿದೆ....
ಶರ್ಟ್ ಮೇಲೆ
ಅಂಬೇಡ್ಕರ್ ಟೈಲರ್
ಅಂಗಡಿಯ ಹೆಸರಿದೆ...
ಬೆನ್ನಿಗೆ ಚುಚ್ಚಿದ ಚೂರಿಯ  ಮೇಲೆ
ಮೋದಿ ಕಂಪೆನಿಯ ಲಾಂಛನವಿದೆ...
ಅಂದ ಹಾಗೆ ಈ ರೈಲ್ವೆ ಹಳಿ
ಗುಜರಾತ್ ಕಡೆಗೆ ಹೋಗುತ್ತದೆ.....
6
ಸ್ಫೋಟ
ಹೀಗೊಂದು ವಿಚಿತ್ರ ಕನಸು....
ಸಬ್ಸಿಡಿಯಿಲ್ಲದೆ ಖಾಲಿ ಬಿದ್ದಿದ್ದ
ಬಡವರ ಮನೆಯ ಗ್ಯಾಸ್ ಸಿಲಿಂಡರ್ಗಳು
ಇದ್ದಕ್ಕಿದ್ದಂತೆಯೇ ಸ್ಫೋಟಗೊಂಡವು
ಆ ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ
ಸರಕಾರಗಳೆಲ್ಲ
ಛಿದ್ರ ಛಿದ್ರವಾಗಿ ಬಿದ್ದಿವೆ..!!

No comments:

Post a Comment