Saturday, May 5, 2012

ಪಂಜರ ಮತ್ತು ಇತರ ಕತೆಗಳು

ನಮಸ್ಕಾರ
‘‘ಗುರುಗಳೇ ನನಗೆಲ್ಲರೂ ನಮಸ್ಕರಿಸುತ್ತಿದ್ದಾರೆ. ಅಂದರೆ ನಾನೀಗ ಈ ಊರಿನಲ್ಲಿ ದೊಡ್ಡ ವ್ಯಕ್ತಿಯಾಗಿದ್ದೇನೆ ಎಂದು ಅರ್ಥವಲ್ಲವೆ?’’ ಶಿಷ್ಯ ಕೇಳಿದ.
ಸಂತ ನಕ್ಕು ಉತ್ತರಿಸಿದ ‘‘ಅಲ್ಲ. ಈ ಊರಿನ ಜನರು ದೊಡ್ಡ ವ್ಯಕ್ತಿಗಳಾಗಿದ್ದಾರೆ ಎಂದು ಅರ್ಥ’’

ನಕ್ಷತ್ರ
ಆಕಾಶದಿಂದ ಒಂದು ನಕ್ಷತ್ರ ಭೂಮಿಯ ಮೇಲೆ ಬಿದ್ದಂತಾಯಿತು.
ಹುಡುಕುತ್ತಾ ಹುಡುಕುತ್ತಾ ಕೊನೆಗೂ ಆಕೆಯ ಕಣ್ಣೊಳಗೆ ಅದನ್ನು ನಾನು ನೋಡಿದೆ.

ಕಲಾವಿದೆ
ಖ್ಯಾತ ಕೊಳಲು ವಾದಕನೊಬ್ಬನ ಸಂದರ್ಶನ ನಡೆಯುತತಿತ್ತು.
‘‘ನಿಮ್ಮ ಗುರು ಯಾರು?’’ ಪತ್ರಕರ್ತ ಕೇಳಿದ.
‘‘ಅಮ್ಮ...ನನ್ನ ಅಮ್ಮ ನನ್ನ ಗುರು’’ ಕೊಳಲು ವಾದಕ ಹೇಳಿದ.
‘‘ಅವರೂ ಕೊಳಲು ವಾದಕರಾಗಿದ್ದರೆ?’’
‘‘ಹೌದು...ಒಲೆಯ ಮುಂದೆ ಕಬ್ಬಿಣದ ಊದುಗೊಳವೆಯಿಂದ ನಾದವನ್ನು ಹೊರತೆಗೆಯುತ್ತಿದ್ದ ಮಹಾ ಕಲಾವಿದೆ ಆಕೆ. ತನ್ನ ಅಸ್ತಮಾದ ಎದೆಯಿಂದ ಉಸಿರನ್ನು ಎಳೆಯುತ್ತಾ ಊದುಗೊಳವೆಯ ಮೂಲಕ ಒಲೆಯಲ್ಲಿ ಬೆಂಕಿ ಹಚ್ಚುವುದನ್ನು ನೋಡಿ ನೋಡಿ ನಾನು ಕೊಳಲು ವಾದಕನಾದೆ’’

ಫೋಟೋ
‘‘ನನ್ನ ಫೋಟೋ ಒಂದು ತೆಗೆಯಿರಿ. ತುಂಬಾ ಚೆನ್ನಾಗಿ ಬರಬೇಕು’’ ಆತ ಫೋಟೋಗ್ರಾಫರ್‌ನಲ್ಲಿ ಹೇಳಿದ.
‘‘ನಿಮಗೆ ನಿಮ್ಮ ಫೋಟೋ ಬೇಕೋ, ಅಥವಾ ಚೆನ್ನಾಗಿರುವ ಫೋಟೋ ಬೇಕೋ...ಸ್ಪಷ್ಟವಾಗಿ ಹೇಳಿ’’ ಫೋಟೋಗ್ರಾಫರ್ ಕೇಳಿದ.

ಕೋಲು
‘‘ತಾತಾ...ಎರಡು ಕಾಲಿರುವಾಗ ಮತ್ತೇಕೆ ಕೋಲು ಹಿಡಿದುಕೊಂಡು ಓಡಾಡುತ್ತಿದ್ದೀಯ?’’ ಮೊಮ್ಮಗಳು ಕೇಳಿದಳು.
‘‘ಮತ್ತೆ ಶುರುವಿನಿಂದ ನಡೆಯುವುದನ್ನು ಕಲಿಯುತ್ತಿದ್ದೇನೆ ಮಗಾ’’ ತಾತ ನಕ್ಕು ಉತ್ತರಿಸಿದ.

ಮಳೆ
ಆಕಾಶದ ಉದ್ದಗಲಕ್ಕೆ ದಟ್ಟ ಮೋಡ ಕವಿದಿತ್ತು.
ಅವನೊಬ್ಬ ದಾರಿ ಹೋಕ.
‘‘ಓ ದೇವರೇ ಮಳೆ ಬರದಿರಲಿ...’ ಎಂದ.
ಆದರೆ ಸ್ವಲ್ಪ ಹೊತ್ತಲ್ಲೇ ಧೋ ಎಂದು ಮಳೆ ಸುರಿಯತೊಡಗಿತು.
ಈತ ದೇವರಿಗೆ ಶಪಿಸತೊಡಗಿದ.
ಅವನಿಗೆ ಗೊತ್ತಿರಲಿಲ್ಲ, ಲಕ್ಷಾಂತರ ರೈತರು ಮಳೆ ಬಂದ ಸಂತೋಷದಲ್ಲಿ ದೇವರನ್ನು ಸ್ತುತಿಸುತ್ತಿರುವುದು.

ಪಂಜರ
ಪಕ್ಷಿಗಳೆಂದರೆ ಅವನಿಗೆ ತುಂಬಾ ಇಷ್ಟ. ಅವನದನ್ನು ಪ್ರೀತಿಸುತ್ತಿದ್ದ.
ಆದುದರಿಂದ ಅವನ ಮನೆಯ ತುಂಬಾ ಪಂಜರಗಳು.
ಪಂಜರಗಳಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳು.
‘ಹೌದು, ಪ್ರೀತಿಯೆಂದರೆ ಪಂಜರ ಎಂದು ಗೊತ್ತಿದ್ದರೆ ನಾನಿವನನ್ನು ಪ್ರೀತಿಸುತ್ತಿರಲಿಲ್ಲ’ ಆತನ ಪತ್ನಿ ಹಕ್ಕಿಗಳ ಜೊತೆಗೆ ಪಿಸುಗುಡುತ್ತಿದ್ದಳು.

1 comment:

  1. ತುಂಬಾ ಚೆನ್ನಾಗಿತ್ತು...ಮೊದಲನೆಯದಂತು ಬೊಂಬಾಟ್

    ReplyDelete