Monday, May 14, 2012

ಅನ್ನ ಮತ್ತು ಇತರ ಕತೆಗಳು

ನಟನೆ
ಆತ ಖ್ಯಾತ ನಿರ್ದೇಶಕ.
ಪ್ರತಿಭೆಗಳನ್ನು ಹುಡುಕಿ ತೆಗೆಯುವುದರಲ್ಲಿ ನಿಸ್ಸೀಮ.
ಅತ್ಯುತ್ತಮ ನಟರನ್ನೆಲ್ಲ ಅವನು ಪರಿಚಯಸಿದ್ದ.
ಒಂದು ದಿನ ಅವನ ಮನೆಯ ಕೆಲಸದಾಳು ಬಂದು ಹೇಳಿದ
‘‘ಸ್ವಾಮಿ...ನನ್ನ ಪತ್ನಿ ಅಸೌಖ್ಯದಿಂದ ಮಲಗಿದ್ದಾಳೆ...ಇವತ್ತೊಂದು ದಿನ ರಜ ಕೊಡಿ’’
ನಿರ್ದೇಶಕ ಅವನ ಮುಖವನ್ನು ದಿಟ್ಟಿಸಿ ನೋಡಿ ಹೇಳಿದ ‘‘ಚೆನ್ನಾಗಿ ನಟಿಸುತ್ತೀಯ...ಮುಂದಿನ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡುತ್ತೀಯ?’’

ನಾಲ್ಕು ಸಾಲು
ಅವನು ಕಾದಂಬರಿ ಬರೆಯಲು ಕುಳಿತ.
ತುಸು ಹೊತ್ತಲ್ಲೇ ಇದೊಂದು ಸಣ್ಣ ಕತೆಯಾಗಿ ಮುಗಿಯಬಹುದು ಅನ್ನಿಸಿತು.
ಬರೆಯಲು ಕುಳಿತ.
ನಾಲ್ಕು ಸಾಲು ಬರೆದ.
ಮತ್ತೆ ಬರೆಯಲು ಮುಂದುವರೆದರೆ, ಅರೆ, ಕತೆ ಇಲ್ಲಿಗೆ ಮುಗಿಯಿತಲ್ಲ ಎಂದು ಕಂಗಾಲಾದ.
ಯಾರೋ ಕೇಳಿದರು ‘‘ಕಾದಂಬರಿ ಬರೆಯಲು ಹೊರಟವರು ಬರೇ ನಾಲ್ಕು ಸಾಲಿನ ಕತೆ ಬರೆದು ಮುಗಿಸಿದ್ದೀರಲ್ಲ?’’
ಕತೆಗಾರ ಭರವಸೆಯಿಂದ ಹೇಳಿದ ‘‘ಆ ನಾಲ್ಕು ಸಾಲುಗಳು ಓದುಗರ ಮನದೊಳಗೆ ಮಹಾ ಕಾದಂಬರಿಯಾಗಿ ಬೆಳೆಯಲಿದೆ ಎನ್ನುವ ವಿಶ್ವಾಸ ನನಗಿದೆ’’

ಸಾಲ
‘‘ಛೆ, ತಡವಾಗಿ ಬಂದೆ. ನಿನ್ನೆ ಬಂದು ಕೇಳಿದ್ದಿದ್ದರೆ ಕೊಡುತ್ತಿದ್ದೆ’’ ಸಾಲ ಕೇಳಲು ಬಂದ ಗೆಳೆಯನಲ್ಲಿ ಅವನು ಹೇಳಿದ.
ವಿಚಿತ್ರವೆಂದರೆ, ಸಾಲ ಕೇಳುವ ಎಲ್ಲರೂ ಗೆಳೆಯರಲ್ಲಿ ಒಂದು ದಿನ ತಡವಾಗಿಯೇ ಸಾಲ ಕೇಳುತ್ತಾರೆ. ಯಾಕೆ?

ಮಾವು
ಶಿಷ್ಯನೊಬ್ಬ
ಮಾವು ತಿಂದು ಗೊರಟನ್ನು ಎಸೆಯುತ್ತಿದ್ದ.
ಸಂತ ನಕ್ಕು ಕೇಳಿದ ‘‘ಎಲ್ಲರೊಂದಿಗೆ ಹಂಚಿ ತಿನ್ನ ಬಹುದಿತ್ತಲ್ಲ?’’
‘‘ಒಂದೇ ಒಂದು ಮಾವಿತ್ತು ಗುರುಗಳೇ’’ ಶಿಷ್ಯ ಉತ್ತರಿಸಿದ.
‘‘ಹಂಚುವ ಮನಸ್ಸಿದ್ದರೆ ಆ ಒಂದು ಮಾವನ್ನು ಇಡೀ ಜಗತ್ತಿಗೇ ಹಂಚಬಹುದು’’
‘‘ಹೇಗೆ ಗುರುಗಳೇ?’’
‘‘ಹೀಗೆ...’’ಎನ್ನುತ್ತಾ ಶಿಷ್ಯನು ತಿಂದು ಬಿಟ್ಟ ಗೊರಟನ್ನು ಸಂತ ಆರಿಸಿ ಆಶ್ರಮದ ಅಂಗಳದಲ್ಲಿ ಬಿತ್ತಿದ.

ಕನ್ನಡಿ
ಜಿಪುಣನೊಬ್ಬ ಮುಖ ನೋಡುವ ಕನ್ನಡಿಯನ್ನು ಕೊಂಡ.
ಮನೆಗೆ ತಲುಪುವಷ್ಟರಲ್ಲಿ ಕನ್ನಡಿ ಅವನ ಕೈಯಿಂದ ಬಿದ್ದು ನೂರು ಚೂರಾಯಿತು.
ಯಾರೋ ಹೇಳಿದರು ‘‘ಛೇ, ಕನ್ನಡಿ ಒಡೆದು ಚೂರಾಯಿತಲ್ಲ?’’
ಜಿಪುಣ ಒಡೆದ ಕನ್ನಡಿಯ ಚೂರಲ್ಲೇ ಮುಖ ನೋಡುತ್ತಾ ಹೇಳಿದ ‘‘ಇಲ್ಲ, ಕನ್ನಡಿ ಒಡೆದಿಲ್ಲ. ಅದೀಗ ನೂರಾರು ಕನ್ನಡಿಯಾಗಿದೆ’’
 
ಅನ್ನ
ಪ್ರತಿ ಅನ್ನದ ಅಗುಳಲ್ಲೂ ಉಣ್ಣುವವನ ಹೆಸರಿರುತ್ತದೆಯಂತೆ...
ಆ ಅನ್ನದ ಮೇಲೆ ರಾತ್ರಿಯವರೆಗೂ ಶ್ರೀಮಂತನ ಹೆಸರೇ ಇತ್ತು.
ಹಳಸಿದಾಕ್ಷಣ ಆ ಅನ್ನದ ಅಗುಳ ಮೇಲೆ, ಮನೆಗೆಲಸದ ಹುಡುಗನ ಹೆಸರು ಬರೆಯಲ್ಪಟ್ಟಿತು.

ಅಮ್ಮ
‘‘ಅಮ್ಮನಿಲ್ಲದ ಭೂಮಿ ಹೇಗಿರುತ್ತಿತ್ತು?’’ ಅವನು ಪ್ರಶ್ನಿಸಿದ.
‘‘ಅಮ್ಮನಿಲ್ಲದೆ ಭೂಮಿ ಎಲ್ಲಿರುತ್ತಿತ್ತು?’’ ಇವನು ಪ್ರಶ್ನೆಯನ್ನು ತಿದ್ದಿದ

1 comment: