Thursday, May 17, 2012

ಗೂಡಂಗಡಿಯಲ್ಲಿ ಒಂದು ಗ್ಲಾಸ್ ಚಹಾದ ಜೊತೆಗೆ......

ಕಾಫಿ ಶಾಪೊಂದರಲ್ಲಿ ಚಹಾ ಕುಡಿದು, ನಾಲಗೆ ಕೆಡಿಸಿಕೊಂಡು, ಅಂದೇ ಸಂಜೆ ಬರೆದ ಒಂದು ಪುಟ್ಟ ಲೇಖನ. ಡಿಸೆಂಬರ್ 28, 2007ರಲ್ಲಿ ಬರೆದಿದ್ದು.

 ಒಂದು ಕಾಫಿ ಶಾಪ್‌ನಲ್ಲಿ ಆ ಸಂಜೆಯ ಕೆಲವು ನಿಮಿಷಗಳನ್ನು. ತಣ್ಣಗಿನ ಎಸಿ. ಅದಕ್ಕೆ ಒಪ್ಪಿತವಾಗುವ ವೌನ. ಆ ವೌನದ ಗೂಡೊಳಗೆ ಕುಳಿತು ಪಿಸುಗುಟ್ಟಿತ್ತಿರುವ ಹೊಸ ತಲೆ ಮಾರು. ವೈಟರ್‌ಗಳು ತಮ್ಮದೇ ಆದ ಯುನಿಫಾರ್ಮು ಹಾಕಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ತಿಂಡಿಯ ಐಟಂಗಳನ್ನು ನೋಡಿದೆ. ಪೀಝಾ, ಪಪ್ಸ್, ಕೆಲವು ದುಬಾರಿ ಬಿಸ್ಕತ್‌ಗಳು. ವೈಟರ್ ಹಾಕಿಕೊಂಡ ಯುನಿಫಾರ್ಮುನಂತಹದ್ದೇ ಕಂಪೆನಿ ತಿಂಡಿಗಳು. ಯಾವುದೇ ಕಾಫಿ ಶಾಫ್‌ಗೆ ಹೋದರು, ಕಾಫಿಯ ರುಚಿ ಒಂದೇ. ಯಾಕೆಂದರೇ ಅವೆಲ್ಲವೂ ಒಂದೇ ಕಂಪೆನಿಯದು. ರುಚಿಯೂ ಒಂದೇ.

    ಯಾಕೋ ನನ್ನ ಹದಿಹರೆಯ ನೆನೆಪಾಯಿತು. ಧೋ ಎಂದು ಸುರಿಯುವ ಮಳೆಯಿಂದ ಪಾರಾಗುತ್ತಾ ನಾನು ಸೇರಿಕೊಳ್ಳುತ್ತಿದ್ದ ನನ್ನೂರಿನ ಬಸ್‌ಸ್ಟಾಂಡ್ ಪಕ್ಕದಲ್ಲಿದ್ದ ಅಬ್ಬೂ ಕಾಕನ ಗೂಡಂಗಡಿ. ಅಬ್ಬೂ ಕಾಕನ ಚಹ ಎಂದರೆ ನನಗೆ, ನನ್ನ ಗೆಳೆಯರಿಗೆಲ್ಲಾ ಅತೀವ ಪ್ರೀತಿ. ಹಾಗೆ ನೋಡಿದರೆ ನನ್ನ ಮತ್ತು ನನ್ನ ಗೆಳೆಯರ ಕನಸುಗಳು, ರಾಜಕೀಯ ಚಿಂತನೆಗಳು ಅರಳಿದ್ದು, ಈ ಗೂಡಂಗಡಿಯಲ್ಲೇ. ಅಬ್ಬೂ ಕಾಕನ ತಟ್ಟಿಯ ಅಂಗಡಿ ಎಂದರೆ ಒಂದು ಪುಟ್ಟ ಕ್ಲಾಸ್ ರೂಮ್. ಅಲ್ಲಿರುವ ಉದ್ದನೆಯ ಎರಡು ಬೆಂಚು, ಟೇಬಲ್‌ಗಳು ಸಂಜೆ 5ರ ನಂತರ ನಾನು ಮತ್ತು ನನ್ನ ಗೆಳೆಯರಿಂದ ತುಂಬಿ ಹೋಗುತ್ತಿತ್ತು. ಹಾಗೆಂದು ಅಬ್ಬೂ ಕಾಕನಿಗೆ ನಮ್ಮಿಂದ ಸಖತ್ ವ್ಯಾಪಾರವಾಗುತ್ತ್ತಿತ್ತು ಎಂದೇನಲ್ಲ. ಒಂದು ಟೀಯನ್ನು ಎರಡೆರಡು ಮಾಡಿ ಅದನ್ನೇ ಗಂಟೆಗಟ್ಟಲೇ ಕೈಯಲ್ಲಿ ಹಿಡಿದುಕೊಂಡು ದೇಶದ , ರಾಜ್ಯದ, ಊರಿನ ಸಮಸ್ಯೆಗಳನ್ನು ಚರ್ಚೆ ಮಾಡುತ್ತಿದ್ದೆವು. ಅಬ್ಬೂಕಾಕನಿಗೆ ನಾವೆಂದರೆ ವಿಶೇಷ ಪ್ರೀತಿ. ಈ ಗೂಡಂಗಡಿಗೆ ಅವರೇ ಮಾಲಕರು, ವೈಟರ್, ಕ್ಲೀನರ್ ಎಲ್ಲ. ಅವರೇನೂ ಈ ಕಾಫಿಶಾಫ್‌ನ ವೈಟರ್‌ಗಳಂತೆ ಯೂನಿಫಾರ್ಮ್ ಹಾಕಿಕೊಂಡಿರುತ್ತಿರಲಿಲ್ಲ. ಒಂದು ನೀಲಿ ಗೀಟು ಗೀಟಿನ ಲುಂಗಿ ಉಡುತ್ತಿದ್ದರು. ಮೈ ಮುಚ್ಚಲು ಬಿಳಿ ಬನಿಯಾನ್. ತಲೆಗೊಂದು ನೀರು ದೋಸೆಯ ಟೊಪ್ಪಿ. ನಾವೆಂದರೆ ಅವರಿಗೆ ವಿಶೇಷ ಪ್ರೀತಿ. ಈ ದೇಶದ ರಾಜಕೀಯದ ಕುರಿತಂತೆ ವಿಶೇಷ ಆಸಕ್ತಿ. ನಾವು ಬಂದು ಕುಳಿತರೆ ಅವರು ಒಂದು ಕಿವಿಯನ್ನು ನಮ್ಮ ಚರ್ಚೆಯತ್ತ ಬಿಟ್ಟು ಬಿಡುತ್ತಿದ್ದರು. ನಾವು ಬಂದು ಕುಳಿತರೆ ಸಾಕು, ನಮಗಾಗಿಯೇ ಖಡಕ್ ಚಹಾದ ಸಿದ್ಧತೆ ಮಾಡುತ್ತಿದ್ದರು. ಅನೇಕ ಸಂದರ್ಭದಲ್ಲಿ ಇತರ ಗಿರಾಕಿಗಳನ್ನೇ ನಮಗಾಗಿ ಕಳೆಕೊಳ್ಳುವುದಿತ್ತು. ಯಾಕೆಂದರೆ ಬೆಂಚು ತುಂಬಾ ನಮ್ಮ ಪಟಾಲಂಗಳೇ ತುಂಬುಕೊಂಡಿರುತ್ತಿದ್ದವು. ನಮ್ಮ ಮಾತಿನ ನಡುವೆ ವಿ.ಪಿ.ಸಿಂಗ್ ಹೆಸರು ಬಂದಾಕ್ಷಣ, ಓಡೋಡಿ ಬರುತ್ತಿದ್ದರು. ಅವರ ಪ್ರಕಾರ ಈ ದೇಶದ ನ್ಯಾಯಕ್ಕೆ ಹೇಳಿದ ಮನುಷ್ಯ ವಿ.ಪಿ.ಸಿಂಗ್ ಮಾತ್ರ ಆಗಿದ್ದ. ಯಾಕೆಂದರೆ ಬಾಬರಿ ಮಸೀದಿಗಾಗಿ ಆತ ಅಧಿಕಾರವನ್ನೇ ತ್ಯಾಗ ಮಾಡಿದನಲ್ಲ ಎನ್ನುವುದು ಅವರ ಸಮರ್ಥನೆಯಾಗಿತ್ತು. ಅವರಿಗೆ ನಮ್ಮ ಮಾತಿನ ನಡುವೆ ಒಂದೇ ಒಂದು ಆಸೆ. ವಿ.ಪಿ. ಸಿಂಗ್ ಮತ್ತೆ ಪ್ರಧಾನಿಯಾಗುವ ಚಾನ್ಸ್ ಉಂಟೋ?

   ಅಬ್ಬೂ ಕಾಕನನನ್ನು ನಾವೆಲ್ಲರೂ ಕಾಕ ಎಂದು ಕರೆಯತ್ತಿದ್ದೆವು. ನಮ್ಮ ಪಾಲಿಗೆ ಅವರು ಬರೇ ಚಹಾ ತಯಾರಿಸುವ ಕಾಕ ಮಾತ್ರ ಆಗಿರಲಿಲ್ಲ. ನಮ್ಮ ರಾಜಕೀಯ ಚಿಂತನೆಗಳ ಸಹಭಾಗಿಯಾಗಿದ್ದರು. ನಾವು ಇಂದಿರಾ ಗಾಂಧಿಗೆ ಬೈದರೆ, ಅವರಿಗೆ ಅತೀವ ಸಿಟ್ಟು ಬರುತ್ತಿತ್ತು. ಈ ದೇಶ ಇವತ್ತಿಗೂ ಇಂದಿರಾ ಗಾಂಧಿಯ ಹೆಸರು ಹೇಳಿ ಬದುಕುತ್ತಿರುವುದು ಎನ್ನುವುದು ಅವರ ವಾದ. ದೂರದ ಕೊಕ್ಕಡಕ್ಕೆ ಇಂದಿರಾ ಗಾಂಧಿ ಬಂದಾಗ ಅಲ್ಲಿ ವಾಸವಿರುವ ಅವರ ತಾಯಿ ಇಂದಿರಾ ಗಾಂಧಿಗೆ ಹೂಮಾಲೆ ಹಾಕಿದರಂತೆ. ಇಂದಿರಾ ಗಾಂಧಿ ಅವರ ತಾಯಿಯ ಕೆನ್ನೆ ಮುಟ್ಟಿದರಂತೆ. ಇವುಗಳನ್ನೆಲ್ಲಾ ಪ್ರತಿ ಬಾರಿಯೂ ನಮ್ಮ ಚರ್ಚೆಯ ನಡುವೆ ತರುತ್ತಿದ್ದರು. ನಮ್ಮ ಮೇಲೆ ಅದೆಷ್ಟು ಪ್ರೀತಿಯಿದ್ದರೂ, ಕಮ್ಯುನಿಸ್ಟರು ಎಂದು ಬೈಯುತ್ತಿದ್ದರು. ನಾವು ಒಮ್ಮಿಮ್ಮೆ ಕಮ್ಯುನಿಸ್ಟರಿಗೆ ಛೀಮಾರಿ ಹಾಕುವಾಗ ಹಾಗಾದರೆ ನೀವು ಕಮ್ಯುನಿಸ್ಟ್ ಅಲ್ವಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದರು.

    ಅಬ್ಬೂಕಾಕನ ಗೂಡಂಗಡಿಯಲ್ಲಿ ಮನೆಯಲ್ಲಿ ಮಾತ್ರ ಸಿಗಬಹುದಾದ ಆತ್ಮೀಯತೆಯಿತ್ತು. ಅವರ ಫೇಮಸ್ ಐಟಂಗಳ ರುಚಿಯೇ ಬೇರೆ. ನೀರು ದೋಸೆ, ಕಲ್ತಪ್ಪವನ್ನು ಮೀನು ಸಾರಿನ ಜೊತೆ ಬಡಿಸಿದರೆಂದರೆ ಅದರ ಮುಂದೆ ಯಾವ ಪೀಝಾವು ನಿಲ್ಲಲಾರದು. ಅಷ್ಟು ಸಣ್ಣ ಗೂಡಂಗಡಿಯಲ್ಲಿ ಇಡ್ಲಿ, ಕಲ್ತಪ್ಪ, ನೀರು ದೋಸೆ ಎಲ್ಲವನ್ನು ಮಾಡಿಡುತ್ತಿದ್ದರು. ತಿನ್ನುವಾಗ ಪ್ರೀತಿಯಿಂದ ‘ತಿನ್ನಿ ಮಕ್ಕಳೇ ತಿನ್ನಿ’ ಎನ್ನುತ್ತಿದ್ದರು. ಆ ಗೂಡಂಗಡಿಯಲ್ಲಿ ಹಲವರು ವಾರಕ್ಕೊಮ್ಮೆ ದುಡ್ಡು ಪಾವತಿಸುತ್ತಿದ್ದರು. ಅದಕ್ಕಾಗಿಯೇ ಒಂದು ಲೆಕ್ಕ ಪುಸ್ತಕ ಇಟ್ಟಿದ್ದರು. ಅನೇಕರು ದುಡ್ಡು ಕೊಡದೆ ಕೈಕೊಟ್ಟಿದ್ದರು. ಹಲವರು ಹಿಂದಿನ ಬಾಕಿ ಇಟ್ಟುಕೊಂಡೇ ಮತ್ತೆ ಬಂದು ತಿಂದು ಹೋಗುತ್ತಿದ್ದರು. ಕೇಳಿದವರಿಗೆ ಇಲ್ಲ ಎನ್ನುತ್ತಿರಲಿಲ್ಲ. ಬಹಳ ಕಷ್ಟಪಟ್ಟು ಹಿಂದಿನ ಬಾಕಿ ಕೇಳುತ್ತಿದ್ದರು.

     ಈಗಲೂ ಅಷ್ಟೇ ಎಲ್ಲಾದರೂ ಒಂದು ಸಣ್ಣ ಗೂಡಂಗಡಿ ಕಂಡರೆ ಅದರೊಳಗೆ ನುಗ್ಗುತ್ತೇನೆ. ಅಲ್ಲಿರುವ ವ್ಯಕ್ತಿಯಲ್ಲಿ ಅಬ್ಬೂಕಾಕನನ್ನು ಕಾಣಲು ಪ್ರಯತ್ನಿಸುತ್ತೇನೆ. ಅಲ್ಲಿರುವ ವೈವಿಧ್ಯಮಯ ತಿಂಡಿಗಳನ್ನು ಆತ್ಮೀಯವಾಗಿ ಆಸ್ವಾದಿಸುತ್ತೇನೆ. ಒಂದು ಗೂಡಂಗಡಿಗಿಂತ, ಇನ್ನೊಂದು ಗೂಡಂಗಡಿಯ ತಿಂಡಿಗಳ ರುಚಿಯೇ ಬೇರೆ. ಚಹಾದಲ್ಲೂ ಅಷ್ಟೇ. ಅವರು ಇಟ್ಟುಕೊಳ್ಳುವ ಗ್ಲಾಸಿನ ಆಕಾರದಲ್ಲೂ ಅಷ್ಟೇ ವೈವಿಧ್ಯತೆ. ಅಬ್ಬೂಕಾಕನ ಗೂಡಂಗಡಿಯ ಗ್ಲಾಸ್‌ನ ಚಂದವೇ ಬೇರೆ. ಪ್ಲೇನ್ ಗ್ಲಾಸ್‌ಗೆ ಕೆಂಪು ದೊಡ್ಡ ಆಕಾರದ ಹೂವುಗಳು ಸುತ್ತಿಕೊಂಡಿರುತ್ತವೆ. ಆ ಗ್ಲಾಸ್‌ಗಳಲ್ಲಿ ಕುಡಿದರೇನೆ ನಮಗೆ ತೃಪ್ತಿ. ನಮ್ಮ ಮನೆಗಳಲ್ಲಿ ಅವಸಾನದ ಅಂಚಿನಲ್ಲಿರುವ ತಿಂಡಿಯ ವೈವಿಧ್ಯಗಳು ಅಲ್ಪಸ್ವಲ್ಪ ಜೀವಂತ ಉಳಿದುಕೊಂಡಿರುವುದು ಈ ಗೂಡಂಗಡಿಗಳಲ್ಲಿ ಮಾತ್ರ. ಇಂದಿಗೂ ನಾನು ನೋಡುವ ಗೂಡಂಗಡಿಗಳಲ್ಲಿ ಯಾರಾದರು ನಾಲ್ಕು ತರುಣರೋ, ಹಿರಿಯರೋ ಒಂದು ಗ್ಲಾಸ್ ಚಹದ ಜೊತೆಗೆ ಹರಟೆ ಕೊಚ್ಚುತ್ತಿರುತ್ತಾರೆ. ಅವರಲ್ಲಿ ನನ್ನ ಹದಿಹರೆಯದ ದಿನಗಳನ್ನು ಹುಡುಕುವ ಪ್ರಯತ್ನ ಮಾಡುತ್ತೇನೆ. ಈ ಗೂಡಂಗಡಿಗಳು ಒಂದು ರೀತಿಯಲ್ಲಿ ಆ ಊರಿನ ಜೀವಂತಿಕೆಯ ಸಂಕೇತ. ಯಾಕೆಂದರೆ, ಆ ಊರಿನ ಹಿರಿಯರನ್ನು, ಯುವಕರನ್ನು ಒಂದೆಡೆ ಸೇರಿಸುವ ಕ್ಲಬ್‌ಗಳು ಈ ಗೂಡಂಗಡಿ. ಅದು ಬರೇ ವ್ಯಾಪಾರವನ್ನಷ್ಟೇ ಗುರಿಯಾಗಿಸಿಕೊಂಡಿರುವುದಿಲ್ಲ. ಚಹಾದ ಜೊತೆಗೆ ಸ್ನೇಹವನ್ನು, ಆತ್ಮೀಯತೆಯನ್ನು ಗೂಡಂಗಡಿಗಳು ಹಂಚುತ್ತವೆ. ಒಂದು ಊರಿನ ವೈವಿಧ್ಯಮಯ ಆಲೋಚನೆಗಳಿಗೆ ಆ ಗೂಡಂಗಡಿಗಳು ವೇದಿಕೆಯಾಗುತ್ತವೆ.

ಇಂದು ಗೂಡಂಗಡಿಗಳು ನಗರಗಳಿಗೆ ಒಂದು ಸಮಸ್ಯೆಯಾಗಿದೆ. ಅವರ ಪ್ರಕಾರ ಈ ಗೂಡಂಗಡಿಗಳು ನಗರದ ಸೌಂಧರ್ಯಕ್ಕೆ ಧಕ್ಕೆ ತರುತ್ತಿವೆ. ಕಾಫಿ ಶಾಫ್‌ಗಳು, ಪೀಝಾಹಟ್‌ಗಳು, ಬೃಹತ್ ಹೊಟೇಲ್‌ಗಳ ಸಂಚಿನಿಂದಾಗಿ ಈ ಗೂಡಂಗಡಿಗಳು ನೆಲೆ ಕಳೆದುಕೊಳ್ಳುತ್ತಿವೆ. ಇದರ ಜೊತೆಗೆ ತಿಂಡಿಗಳ ಗ್ರಾಮೀಣ ಸೊಗಡು, ಚಹಾದಲ್ಲಿರುವ ಆತ್ಮೀಯ ಪರಿಮಳವೂ ಇಲ್ಲವಾಗುತ್ತಿವೆ. ವೈವಿಧ್ಯತೆ ನಾಶವಾಗಿ, ನಮ್ಮನ್ನೆಲ್ಲಾ ವಿವಿಧ ಕಂಪೆನಿಗಳ, ಬ್ರಾಂಡ್‌ಗಳ ಚಹಾ, ಕಾಫಿಗಳ ಋಣಕ್ಕೆ ಬಲಿ ಬೀಳಿಸಲಾಗುತ್ತಿದೆ. ಕಾಫಿಶಾಫ್‌ಗಳಲ್ಲಿ ಯಾವುದೋ ಕಂಪೆನಿಯ ಚಹಾ, ಕಾಫಿ, ತಿಂಡಿ ಸಿಗಬಹುದು. ಆದರೆ ತಂದೆಯಂತಹ ಅಬ್ಬುಕಾಕನ ಆತ್ಮೀಯತೆ, ಪ್ರೀತಿ ಮಾತ್ರ ಸಿಗಲಾರದು.
ಡಿಸೆಂಬರ್ 28, 2007

1 comment:

  1. ಅದ್ಭುತ ಲೇಖನ ಸರ್. ನಿಮ್ಮ ಲೇಖನ ಓದುತ್ತಿದ್ದಂತೆ ಮೈಸೂರಿನಲ್ಲಿ ಮೆಡಿಕಲ್ ಮಾಡುತ್ತಿದ್ದಾಗ ಹೋಗುತ್ತಿದ್ದ ಗಣೇಶ ಟೀ ಶಾಪ್ ನೆನಪಾಯಿತು. ಮೈಸೂರಿನಲ್ಲಿ ಆಗಲೂ ಈಗಲೂ ಬಹಳಷ್ಟು ಮಾರವಾಡಿಗಳ ಟೀ ಅಂಗಡಿಗಳಿವೆ. ಒಂದು ಚಾನೋ ಬಾದಾಮಿ ಹಾಲೋ ತೆಗೊಂಡು ಸಿಗರೇಟ್ ಹಚ್ಚಿ ಲೋಕದ ಸಮಸ್ತ ಸಮಸ್ಯೆಗಳನ್ನೂ ನಮ್ಮ ತಲೆಹರಟೆ ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದ ದಿನಗಳು ನೆನಪಾದವು. ನಂತರ ಪಯಣಿಸಿದ್ದು ಗುಲ್ಬರ್ಗಕ್ಕೆ. ಅಲ್ಲಿ ಇಂಥ ಅಂಗಡಿಗಳು ಕಡಿಮೆಯಾದರೂ ಗುಲ್ಬರ್ಗ ವಿಶ್ವವಿದ್ಯಾಲಯದ ಎದುರಿಗಿದ್ದ ಅಂಗಡಿಯಲ್ಲಿನ ಚಾ, ಮಂಡಕ್ಕಿ ಮಿರ್ಚಿ ಭಜ್ಜಿ ಮರೆಯುವುದುಂಟೆ. ಪ್ರತಿ ಊರಿಗೂ ಒಂದು ವಿಶೇಷವಿರುತ್ತದೆ, ಆ ವಿಶೇಷತೆ ಇಂದು ಎಲ್ಲೆಡೆಯೂ ಕಂಡು ಬರುವ ಒಂದೇ ರೀತಿಯ ಒಂದೇ ಕಂಪನಿಯ ಹೋಟೆಲುಗಳಿಂದ ಮರೆಯಾಗುತ್ತಿರುವುದು ವಿಷಾದನೀಯ.
    ಅಶೋಕ್. ಕೆ. ಆರ್

    ReplyDelete