ಅಂದು ಮುಂಜಾನೆ ಎದ್ದು ನೋಡುತ್ತೇನೆ... ಭಾರತ ಕಾಣೆಯಾಗಿದೆ ಎಲ್ಲಿ ಹೋಯಿತು? ಮಲಗುವವರೆಗೂ ತನ್ನ ತ್ರಿವರ್ಣ ಸೆರಗನ್ನು ಹಾರಿಸುತ್ತ ಬಿಂಕ ಬಿನ್ನಾಣದಿಂದ ಇಲ್ಲೇ ಓಡಾಡುತ್ತಿತ್ತಲ್ಲ ಎಂದು ಹಿತ್ತಲಿಗೆ ಬಂದರೆ... ತೆರೆದ ಮಲದ ಗುಂಡಿಯಲ್ಲಿ ನನ್ನ ದೇಶದ ಹೆಣ ತೇಲುತ್ತಿತ್ತು!
ಈ ಗ್ರೂಫ್ ಫೋಟೋದಲ್ಲಿ ಹಲ್ಲು ಕಿರಿಯುತ್ತಿರುವ ಜೋಕರ್ ಒಬ್ಬ(ಬಲಭಾಗದಲ್ಲಿ) ಇದ್ದಾನಲ್ಲ, ಅದು ನನ್ನ ಫೋಟೋ. ಸುಮಾರು 15 ವರ್ಷಗಳ ಹಿಂದೆ ಮುಂಬೈಯಲ್ಲಿ ಆಡಿದ ಚಂದ್ರಶೇಖರ ಕಂಬಾರ ಅವರ ಸಿರಿಸಂಪಿಗೆ ನಾಟಕದಲ್ಲಿ ಅವಳಿ-ಜವಳಿ ಹಾಸ್ಯಗಾರ ಪಾತ್ರದಲ್ಲಿ ನಾನು ಜವಳಿ ಪಾತ್ರ ವಹಿಸಿದ್ದೆ. ಅವಳಿ ಪಾತ್ರವನ್ನು ನನ್ನ ಗೆಳೆಯ ನವೀನ್ ಸುನಗ ವಹಿಸಿದ್ದರು. ಅವರೀಗ ನಾಟಕ, ಸಿನಿಮ ಅಂತ ಬಿಸಿಯಾಗಿದ್ದಾರೆ. ಸಿರಿಸಂಪಿಗೆ ನಾಟಕದ ರಾಜಕುಮಾರಿ ಪಾತ್ರದಲ್ಲಿ ಹಾ.ಮ. ಕನಕ (ಹಸಿರು ಸೀರೆ ಉಟ್ಟು ರಾಜಕುಮಾರಿ ತರ ಮುದ್ದಾಗಿದ್ದಾರಲ್ಲ, ಅವರೇ,) ನಟಿಸಿದ್ದರು. ಸುರೇಶ ಹಾನಗಲ್ಲಿ ಈ ನಾಟಕವನ್ನು ನಿರ್ದೇಶಿಸಿದ್ದರು. (ಕುಳಿತ ಗಡ್ಡಧಾರಿ ಮೂಗಿಗೆ ಕೈ ಇಟ್ಟಿದ್ದಾರಲ್ಲ ಅವರೇ). ಕೈಯಲ್ಲಿ ಮಗುವನ್ನು ಹಿಡಿದು ಎಡಭಾಗದಲ್ಲಿ ನಿಂತಿದ್ದಾರಲ್ಲ, ಅವರು ರಂಗಕರ್ಮಿ ಗಿರಿಧರ್ ಕಾರ್ಕಳ್, ಈಗವರು ಮೈಸೂರಲ್ಲಿದ್ದಾರೆ.
ಶ್ರೀಮಂತ ನ್ಯಾಯಾಲಯ ಆದೇಶ ನೀಡಿತು ‘‘ಓರ್ವ ಪ್ರತಿ ದಿನ 35 ರೂ. ಖರ್ಚು ಮಾಡುತ್ತಿದ್ದರೆ ಅವನನ್ನು ಶ್ರೀಮಂತನೆಂದು ಕರೆಯಬೇಕು’’ ಅಂತೆಯೇ ರೈತನೊಬ್ಬ 35 ರೂ. ತೆತ್ತು ವಿಷವನ್ನು ಕೊಂಡ. ಮಾಧ್ಯಮಗಳಲ್ಲಿ ಸುದ್ದಿ ‘‘ಶ್ರೀಮಂತ ರೈತನಿಂದ ಸಾಲ ಪಾವತಿಸಲಾಗದೆ ಆತ್ಮಹತ್ಯೆ’’
ಭಯ ಮೀನು ಹಿಡಿಯಲೆಂದು ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಆಗಷ್ಟೇ ದಡ ಸೇರಿದ್ದರು ‘‘ಮೀನು ಕೊಳ್ಳಲೆಂದು ಶ್ರೀಮಂತನೊಬ್ಬ ಕೇಳಿದ ‘‘ಮೀನು ಹಿಡಿಯಲೆಂದು ಹೋದ ಅದೆಷ್ಟು ಮೀನುಗಾರರು ಕಡಲಲ್ಲಿ ಮುಳುಗಿ ಸತ್ತಿದ್ದಾರೆ. ಆದರೂ ನೀವು ಸಮುದ್ರಕ್ಕೆ ಮೀನು ಹಿಡಿಯಲೆಂದು ಹೋಗುತ್ತೀರಲ್ಲ? ನಿಮಗೆ ಭಯವಾಗುವುದಿಲ್ಲವೆ?್ಫ್ಫ ಮೀನುಗಾರ ನಕ್ಕು ಹೇಳಿದ ‘‘ನಿಮ್ಮ ಹಿರಿಯರೆಲ್ಲ ನಿಮ್ಮ ಮನೆಯ ವಿಶಾಲವಾದ ಮಂಚದ ಮೇಲೆ ಮೃತಪಟ್ಟಿದ್ದಾರೆ. ಆದರೂ ನೀವು ನಿದ್ರಿಸುವುದಕ್ಕೆ ಮತ್ತೆ ಅದೇ ಮಂಚದೆಡೆಗೆ ಧಾವಿಸುತ್ತೀರಲ್ಲ, ನಿಮಗೆ ಭಯವಾಗುವುದಿಲ್ಲವೆ?’’
ವೃತ್ತಿ ಅವನ ವೃತ್ತಿಯೇ ಅಪರಾಧಿಗಳನ್ನು ಗಲ್ಲಿಗೇರಿಸುವುದು. ಸುಮಾರು 49 ಜನರನ್ನು ಗಲ್ಲಿಗೇರಿಸಿದ್ದಾನೆ ಅವನು. ಇದೀಗ ಇನ್ನೊಬ್ಬನನ್ನು ಗಲ್ಲಿಗೇರಿಸಿದರೆ 50 ಪೂರ್ತಿಯಾಗುವುದು. ಯಾರೋ ಅವನ ಸಂದರ್ಶನಕ್ಕೆ ಬಂದರು. ‘‘ನೀವು ಇನ್ನು ಒಬ್ಬನನ್ನು ಗಲ್ಲಿಗೇರಿಸಿದರೆ ಅರ್ಧ ಶತಕವಾಗುತ್ತದೆ. ಈ ಬಗ್ಗೆ ನಿಮ್ಮ ಅನಿಸಿಕೆಯೇನು?’’ ಅವನು ನಿರ್ಲಿಪ್ತನಾಗಿ ಹೇಳಿದ ‘‘ನಲ್ವತ್ತ ಒಂಬತ್ತು ಬಾರಿ ನಾನು ಸತ್ತಿದ್ದೇನೆ. ಇನ್ನು 50ನೆ ಬಾರಿ ಸಾಯುವುದರಲ್ಲೇನು ವಿಶೇಷ?’’
ಕನಸಿನ ಅಂಗಡಿ ಅವನೊಬ್ಬ ಸ್ಫುರದ್ರೂಪಿ ತರುಣ. ಅಂಗಡಿಯನ್ನು ತೆರೆದ. ಅಂಗಡಿಗೊಂದು ಬೋರ್ಡು ‘ಇಲ್ಲಿ ನಿಮಗೆ ಬಿದ್ದ ಕನಸುಗಳಿಗೆ ಅರ್ಥ ಹೇಳಲಾಗುತ್ತದೆ’ ಎಲ್ಲರು ತಮ್ಮ ತಮ್ಮ ಕನಸುಗಳೊಂದಿಗೆ ಅಂಗಡಿಗೆ ಮುಗಿ ಬಿದ್ದರು. ಒಬ್ಬ ತರುಣಿ ಒಂದು ತಿಂಗಳಿನಿಂದ ಆ ಅಂಗಡಿಗೆ ಕನಸುಗಳನ್ನು ಹಿಡಿದುಕೊಂಡು ಬರುತ್ತಿದ್ದಳು. ಅವನು ಅವುಗಳಿಗೆ ಅರ್ಥ ಹೇಳಲು ಪ್ರಯತ್ನಿಸುತ್ತಿದ್ದ. ಕೊನೆಗೊಂದು ದಿನ ಹುಡುಗಿ ಸಿಟ್ಟಿನಿಂದ ಹೇಳಿದಳು. ‘‘ನನ್ನ ಕಣ್ಣನೊಮ್ಮೆ ನೀನು ಕಣ್ಣಿಟ್ಟು ನೋಡಿದ್ದರೆ ಸಾಕಿತ್ತು. ನಾ ಕಂಡ, ಕಾಣುತ್ತಿರುವ ಕನಸಿನ ಅರ್ಥ ನಿನಗೆ ತಿಳಿದು ಬಿಡುತ್ತಿತ್ತು’’
ವರ್ಷ ‘‘ತಾತ, ನಿನಗೆ ಎಷ್ಟು ವರ್ಷ?’’ ಮೊಮ್ಮಗು ಕೇಳಿತು ‘‘ಗೊತ್ತಿಲ್ಲ ಮಗು, ಆದರೆ ಕೆಲವು ದಿನಗಳನ್ನು ನಾನು ನೂರಾರು ವರ್ಷ ಬದುಕಿದ್ದೇನೆ’’ ತಾತ ಉತ್ತರಿಸಿದ.
ಋಣ ಪುಟಾಣಿ ಮಗು ಹೇಳಿತು ‘‘ಅಮ್ಯಾ ರಾತ್ರಿ...ನಿನ್ನ ಕಾಲನ್ನು ಒತ್ತಿದ್ದೇನೆ. ನನಗೆ ಅದಕ್ಕಾಗಿ 100 ರೂ. ಪಾಕೆಟ್ ಮನಿ ಕೊಡಬೇಕು’’ ‘‘ಅಯ್ಯೋ ನನ್ನ ಬಂಗಾರ...ಅದರ ಋಣವನ್ನು ಹಣದಿಂದ ಹೇಗೆ ತೀರಿಸಲಿ...ಜೀವನ ಪರ್ಯಂತ ನಿನ್ನ ಸೇವೆ ಮಾಡಿ ಅದರ ಸಾಲವನ್ನು ತೀರಿಸುತ್ತೇನೆ ಆಗದೆ?’’ ತಾಯಿ ಮಗುವಿನ ಕೆನ್ನೆ ಹಿಂಡಿ ಕೇಳಿದಳು.
ಮಾತು ‘‘ನನ್ನ ಮಗ ತನ್ನ ತಾಯಿಯೊಂದಿಗೆ ಮೊಬೈಲ್ನಲ್ಲಿ ಗಂಟೆಗಟ್ಟಳೆ ಮಾತನಾಡುತ್ತಾನೆ...ನನಗೆ ಅದೇ ಚಿಂತೆಯಾಗಿದೆ’’ ‘‘ತಾಯಿಯೊಂದಿಗೆ ತಾನೆ, ಇದರಲ್ಲಿ ಚಿಂತೆ ಮಾಡುವುದೇನು ಬಂತು? ಮಕ್ಕಳು ತಾಯಿಯೊಟ್ಟಿಗಲ್ಲದೆ ಇನ್ನಾರೊಟ್ಟಿಗೆ ಮಾತನಾಡುತ್ತಾರೆ?’’ ‘‘ಅವನ ತಾಯಿ ಇಹಲೋಕ ತ್ಯಜಿಸಿ ಇಂದಿಗೆ ಹತ್ತು ವರ್ಷಗಳಾದುವು’’
ರಾಜ್ಯ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಘೋಷಿಸಿದ ಸಂದರ್ಭದಲ್ಲಿ ಬರೆದ ಲೇಖನ ಇದು.
ಬ್ಯಾರಿಗಳಿಗೊಂದು ಸಾಹಿತ್ಯ ಅಕಾಡಮಿ ದೊರಕಿದ ಸುದ್ದಿ ಕೇಳಿ ರೋಮಾಂಚಿತನಾದವನಲ್ಲಿ ನಾನೂ ಒಬ್ಬ. ಅದಕ್ಕೆ ಕಾರಣ ನಾನೊಬ್ಬ ಬ್ಯಾರಿ ಸಮುದಾಯದಲ್ಲಿ ಹುಟ್ಟಿದವನು ಎನ್ನುವುದಷ್ಟೇ ಆಗಿರಲಿಲ್ಲ. ‘ಬ್ಯಾರಿ’ ಎನ್ನುವ ಶಬ್ದ ಕಳೆದ ಮೂರು ದಶಕಗಳಿಂದ ಸಾಮಾಜಿಕವಾಗಿ ಅನುಭವಿಸಿಕೊಂಡು ಬಂದ ಕೀಳರಿಮೆ ತುಳಿತ, ಅವಮಾನಗಳ ಕುರಿತಂತೆ ಅರಿವಿರುವವರೆಲ್ಲರಿಗೂ, ಈ ಸುದ್ದಿ ರೋಮಾಂಚನ ತರಿಸಬಲ್ಲುದು. ಕಳೆದ ಮೂರು ದಶಕಗಳಲ್ಲಿ ‘ಬ್ಯಾರಿ’ ಎನ್ನುವ ಶಬ್ದ ಬಳಕೆಯಾಗುತ್ತಿದ್ದುದು ಕರಾವಳಿ ಮುಸ್ಲಿಮರನ್ನು ಅವಮಾನಿಸುವುದಕ್ಕಾಗಿ ಮಾತ್ರವಾಗಿತ್ತು. ‘ಬ್ಯಾರಿ ಬುದ್ದಿ ತೋಜ್ಪಾವೊಡ್ಚಿ (ಬ್ಯಾರಿ ಬುದ್ದಿ ತೋರಿಸಬೇಡ)’ ‘ಮಲ್ಲ ಬ್ಯಾರಿ ಮಾರಾಯ (ಭಯಂಕರ ಬ್ಯಾರಿ ಮಾರಾಯ)’, ‘ದಾನೆಂಬೆ ಬ್ಯಾರಿ (ಏನೋ ಬ್ಯಾರಿ)’ ಮೊದಲಾದ ಪದಗಳು ಕರಾವಳಿಯ ಜನಜೀವನದಲ್ಲಿ ಹೇಗೆ ಅವಿನಾಭಾವವಾಗಿ ಸೇರಿಕೊಂಡಿದ್ದವೋ ಅದನ್ನು ಪ್ರತಿರೋಧಿಸುವ ಆತುರದಲ್ಲಿ ಕರಾವಳಿಯ ಮುಸ್ಲಿಮರು ಕೂಡ ಆ ಐಡೆಂಟಿಟಿಯನ್ನು ಅಷ್ಟೇ ತೀವ್ರವಾಗಿ ತಿರಸ್ಕರಿಸುತ್ತಿದ್ದರು. ‘ಬ್ಯಾರೀಂದ್ ಪನೋಡ್ಚಿ (ಬ್ಯಾರೀಂತ ಕರೀಬೇಡ)’ ‘ನನೋರ ಬ್ಯಾರೀಂದ್ ಪನ್ಗೆ’ (ಧೈರ್ಯ ಇದ್ರೆ ಇನ್ನೊಮ್ಮೆ ಬ್ಯಾರೀಂತ ಹೇಳು)?’ ‘ಅಂವ ಬ್ಯಾರೀಂತ ಕರ್ದ, ಅದಕ್ಕೆ ಹೊಡ್ದೆ’ ‘ಸಾರ್, ‘ಇವ ನನ್ನನ್ನು ಬ್ಯಾರೀಂತ ಕರೀತಿದ್ದಾನೆ’ ಹೀಗೆ ಬ್ಯಾರಿ ಎಂಬ ‘ಐಡೆಂಟಿಟಿ’ಯ ಅವಮಾನದಿಂದ ಪಾರಾಗುವುದಕ್ಕೆ ಒಂದು ತಲೆಮಾರು ಸಾಕಷ್ಟು ಹೆಣಗಾಡಿದೆ. ತನ್ನದೇ ಅಸ್ಮಿತೆಯ ವಿರುದ್ಧ ಹೋರಾಡಿ ಆ ತಲೆಮಾರಿನ ಜನರು ಹುತಾತ್ಮರಾಗಿದ್ದಾರೆ. ತನ್ನದೇ ನೆರಳನ್ನು ತನ್ನ ಶತ್ರುವೆಂಬಂತೆ ಭಾವಿಸಿ, ಅದರಿಂದ ಪಲಾಯನ ಮಾಡಲು ಪ್ರಯತ್ನಿಸಿದ, ವಿಫಲವಾದ ಈ ತಲೆಮಾರಿನ ದುರಂತ ಹೃದಯವಿದ್ರಾವಕವಾದುದು.
ಒಂದೆಡೆ ಈ ತಲೆಮಾರಿಗೆ ತಾವು ಆಡುವ ಭಾಷೆ ಒಂದು ಸ್ವತಂತ್ರ ಭಾಷೆ ಎಂಬ ಅರಿವೇ ಇದ್ದಿರಲಿಲ್ಲ. ‘ನಿಮ್ಮ ಮಾತೃಭಾಷೆ ಯಾವುದು?’ ಎಂದು ಯಾರಾದರೂ ಕೇಳಿದರೆ ಅವರು ‘ಮಲಯಾಳಂ’ ಎಂದು ಹೇಳುತ್ತಿದ್ದರು. ಇತ್ತ ಮಲಯಾಳಂ ಮಾತನಾಡುವವರು ಆ ಭಾಷೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ‘ಬ್ಯಾರಿ’ ಎನ್ನುವ ಪದಕ್ಕೆ ಅಂಜುತ್ತಾ ಬದುಕುತ್ತಿದ್ದ ಈ ತಲೆಮಾರಿಗೆ ತಮ್ಮ ಭಾಷೆಯನ್ನು ‘ಬ್ಯಾರಿ ಭಾಷೆ ’ ಎಂದು ಕರೆಯುವುದಕ್ಕೆ ಧೈರ್ಯ ಸಾಲುತ್ತಿರಲಿಲ್ಲ. ಈ ಭಾಷೆಯನ್ನು ಕರಾವಳಿಯ ಒಂದು ಪ್ರದೇಶದ ಜನರು ‘ನಕ್ಕ್ನಿಕ್ಕ್’ ಭಾಷೆ ಎಂದು ಕರೆಯುತ್ತಿದ್ದರು. ‘ನಕ್ಕ್-ನಿಕ್ಕ್’ ಅಂದರೆ ‘ನನಗೆ-ನಿನಗೆ’ ಎಂದರ್ಥ. ಇದೊಂದು ರೀತಿಯಲ್ಲಿ ಒಂದು ಭಾಷೆಯನ್ನು ‘ಸಾರ್ವತ್ರಿಕ’ವಾಗಿಸುವಲ್ಲಿರುವ ಭಯವನ್ನು, ಕೀಳರಿಮೆಯನ್ನು ಎತ್ತಿ ತೋರಿಸುತ್ತದೆ. ‘ನನಗೆ ಮತ್ತು ನಿನಗೆ’ ಮಾತ್ರ ಅನ್ವಯವಾಗುವ ಒಂದು ಭಾಷೆಯಿದ್ದರೆ ಅದು ‘ಬ್ಯಾರಿ ಭಾಷೆ’ ಮಾತ್ರ ಎಂದು ಹೇಳಬೇಕು. ಒಂದು ಕಡೆ ತನ್ನ ಭಾಷೆಯನ್ನು ಮಲಯಾಳಂ ಎಂದು ಕರೆಯುತ್ತಲೇ ‘ಮಲಯಾಳಂ ಅಂದರೆ ಮಲಯಾಳಂ ಅಲ್ಲ. ಸ್ವಲ್ಪ ವ್ಯತ್ಯಾಸವಿದೆ..’ ಎಂಬಿತ್ಯಾದಿ ಸಮರ್ಥನೆಗಳನ್ನು ವ್ಯಾಖ್ಯಾನಗಳನ್ನು ನೀಡುತ್ತಾ, ತನ್ನದೇ ಭಾಷೆಯ ಕುರಿತು ಒಂದು ತಲೆಮಾರು ಕೀಳರಿಮೆಯಿಂದ ಬದುಕುತ್ತಾ ಬಂತು. ಅನ್ಯಭಾಷಿಕರ ನಡುವೆ ಇಬ್ಬರು ಬ್ಯಾರಿ ಭಾಷೆಯಲ್ಲಿ ಮಾತನಾಡಿದರೆ, ಅದನ್ನು ನೋಡಿ ತಮಾಷೆ ಮಾಡುವ ಸಮುದಾಯದ ನಡುವೆ ಬ್ಯಾರಿಗಳ ಒಂದು ತಲೆಮಾರು ಬದುಕಿದೆ, ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ಕಡತಗಳಲ್ಲಿ ಬ್ಯಾರಿಗಳು ತಮ್ಮ ಭಾಷೆಯ ಹೆಸರನ್ನು ‘ಮಲಯಾಳಂ’ ಎಂದು ಬರೆಯುತ್ತಿದ್ದರು. ಆದರೆ ಅವರು ಮಲಯಾಳಿಗಳಾಗಿರದೆ, ಕರಾವಳಿಯ ತುಳು ಮಣ್ಣಿನ ಮುಸ್ಲಿಮರೇ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಮಲಯಾಳಿಗಳಿಂದ ಈ ಸಮುದಾಯ ಮತ್ತು ಅವರು ಆಡುವ ಭಾಷೆ ತಿರಸ್ಕೃತವಾಗಿದ್ದವು. ಜೊತೆಗೆ, ತಮ್ಮದೇ ನೆಲದ ಜನರಿಂದಲೂ ತಮ್ಮ ಭಾಷೆ ಮತ್ತು ಐಡೆಂಟಿಟಿಯ ಕಾರಣಕ್ಕಾಗಿ ಅವರು ಅವಮಾನಿತರಾಗಿ ಬದುಕಬೇಕಾಗಿತ್ತು. ಕರಾವಳಿಯ ಮುಸ್ಲಿಮರನ್ನು ನಿಂದಿಸಬೇಕೆಂದರೆ ‘ಸೂ..ಮಗ, ಬೇ.. ಬೋ...ಮಗ’,ಇತ್ಯಾದಿಗಳನ್ನು ಬಳಸಬೇಕೆಂದಿರಲಿಲ್ಲ. ‘ಬ್ಯಾರಿ!’ ಎಂದರೆ ಸಾಕಿತ್ತು. ಬ್ಯಾರಿಗಳು ತಮ್ಮ ಮಸೀದಿಗಳಲ್ಲಿ ‘ವೌಲ್ವಿ’ಗಳಿಂದ ಧರ್ಮ ಪ್ರವಚನ ಮಾಡಿಸಬೇಕೆಂದರೆ ಕೇರಳದಿಂದಲೇ ಮುಸ್ಲಿಯಾರುಗಳನ್ನು ತರಿಸುತ್ತಿದ್ದರು. ಯಾಕೆಂದರೆ ‘ಧರ್ಮಪ್ರವಚನ’ ಬ್ಯಾರಿ ಭಾಷೆಯಲ್ಲಿ ಮಾಡುವುದು ಅವರಿಗೆ ನಿಲುಕುವ ವಿಷಯವಾಗಿರಲಿಲ್ಲ. ‘ಗಂಭೀರ ಮತ ಪ್ರಸಂಗ’ ಏನಿದ್ದರೂ ಅದು ‘ಗಂಭೀರ ಮಲಯಾಳಂ’ನಲ್ಲೇ ನಡೆಯಬೇಕು ಎಂದು ಅವರು ನಂಬಿದ್ದರು. ಧಾರ್ಮಿಕ ವಿಷಯಗಳನ್ನು ಮಲಯಾಳಂನಲ್ಲೇ ಮುಸ್ಲಿಯಾರುಗಳು ಬೋಧಿಸುತ್ತಿದ್ದ ಕಾಲವಿತ್ತು. ಬ್ಯಾರಿ ಭಾಷೆಯನ್ನು ಅಲ್ಲಿ ಬಳಸಲಾಗುತ್ತಿರಲಿಲ್ಲ. ತಮ್ಮದಲ್ಲದ, ಅರ್ಥವಾಗದ ‘ಕಠಿಣ ಮಲಯಾಳಂ’ನಲ್ಲೇ ವಿದ್ಯಾರ್ಥಿಗಳು ಧಾರ್ಮಿಕ ವಿಷಯಗಳನ್ನು ಕಲಿಯುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾರಿ ಭಾಷೆಗೆ ಲಿಪಿಯಿಲ್ಲ. ಬ್ಯಾರಿ ಭಾಷೆಯನ್ನು ಬರೆಯುವುದಕ್ಕೆ ಬಳಕೆ ಮಾಡುವ ಸಂದರ್ಭವೇ ತೀರ ಕಡಿಮೆಯಿತ್ತು. ಆದುದರಿಂದಲೇ ಲಿಪಿಯ ಕುರಿತಂತೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಮದರಸಗಳ ಲೆಕ್ಕಪತ್ರಗಳನ್ನೆಲ್ಲ ಕನ್ನಡದಲ್ಲೇ ಬರೆಯಲಾಗುತ್ತಿತ್ತು. ಬ್ಯಾರಿಗಳು ಮನೆಯಲ್ಲಿ ಬ್ಯಾರಿ ಭಾಷೆ, ಹೊರಗೆ ತುಳು ಭಾಷೆ, ಶಾಲೆ, ಕಚೇರಿಗಳಲ್ಲಿ ಕನ್ನಡ ಹೀಗೆ ಒಂದೇ ಸಂದರ್ಭದಲ್ಲಿ ಹಲವು ಭಾಷೆಗಳನ್ನು ಕಲಿಯಬೇಕಾದ, ಹಲವು ಭಾಷೆಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿತ್ತು. ಇಷ್ಟು ಅವಮಾನ, ಪ್ರತಿಕೂಲ ಪರಿಸ್ಥಿತಿಯ ನಡುವೆ ಒಂದು ಭಾಷೆ ಉಳಿದು ಬೆಳೆದು, ಇದೀಗ ಸರಕಾರದಿಂದ ಸಾಹಿತ್ಯ ಅಕಾಡೆಮಿಯನ್ನು ತನ್ನದಾಗಿಸಿಕೊಂಡಿರುವುದು, ಆ ಭಾಷೆಯ ಸಾಮರ್ಥ್ಯವನ್ನು ಎತ್ತಿ ಹಿಡಿಯುತ್ತದೆ.
ಹಾಗೆಂದು ಬ್ಯಾರಿಗಳು ತಲೆ ತಲಾಂತರದಿಂದ ಹೀನಾಯವಾಗಿ ಬದುಕಿಕೊಂಡು ಬಂದವರಲ್ಲ ಎನ್ನುವುದು ಕೂಡ ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಬರೇ 60 ವರ್ಷಗಳ ಹಿಂದೆ ಬ್ಯಾರಿಗಳು ತುಳು ನಾಡಿನಲ್ಲಿ ಅತ್ಯುನ್ನತ ಬದುಕನ್ನು ಬಾಳಿದವರು. ವ್ಯಾಪಾರ, ಯುದ್ದ, ಬೇಟೆ, ಪಾಳೇಗಾರಿಕೆ, ಶ್ರೀಮಂತಿಕೆ ಎಲ್ಲ ದಿಕ್ಕಿನಲ್ಲೂ ಅವರು ಕರಾವಳಿಯ ಉಳಿದ ತುಳುವರಿಗೆ ನೇರ ಸ್ಪರ್ಧೆಯನ್ನು ನೀಡಿದವರು. ಸೀದಿ ಬ್ಯಾರಿ, ಪೊಡಿಯ ಬ್ಯಾರಿ, ಉಸ್ಮಾನ್ ಬ್ಯಾರಿ ಇಂತಹ ಹೆಸರುಗಳಿಗೆ ಒಂದು ಕಾಲದಲ್ಲಿ ತುಳುವರು ಬಾಗಿ ‘ಸಲಾಂ’ಹೇಳುತ್ತಿದ್ದ ಕಾಲ ಅದು. ರಾಣಿ ಅಬ್ಬಕ್ಕ ದೇವಿಯ ಸೈನ್ಯದಲ್ಲಿ ಬ್ಯಾರಿ ಸೈನಿಕರ ಪಾತ್ರ ವರ್ಣಿಸಳಸದಳವಾದುದು. ಅಬ್ಬಕ್ಕನ ಬೆಂಗಾವಲಾಗಿ ನಿಂತವರು ಬ್ಯಾರಿಗಳು. ‘ಎಣ್ಬೂರಿನ’ ಜೈನ ಅರಸರ ಜೊತೆಗೂ ಬ್ಯಾರಿಗಳ ಸಂಬಂಧ ಅನ್ಯೋನ್ಯವಾಗಿತ್ತು. ಪ್ರತಿ ಊರಲ್ಲೂ ಒಬ್ಬ ಬ್ಯಾರಿ ಪಾಳೇಗಾರನಿದ್ದ. ಒಂದು ಕಾಲದಲ್ಲಿ ಬ್ಯಾರಿಗಳು ಭಾರೀ ದಿನಸಿ ವ್ಯಾಪಾರಿಗಳಾಗಿದ್ದರೆ, ಸ್ಥಳೀಯ ಕೊಂಕಣಿಗಳು ಅವರ ಬಂಡಸಾಲೆಗಳಲ್ಲಿ ಲೆಕ್ಕ ಬರೆಯುತ್ತಿದ್ದರು. ‘ಬ್ಯಾರ್ಲು ಬರೊಂದುಲ್ಲೆರ್ (ಬ್ಯಾರಿಗಳು ಬರುತ್ತಿದ್ದಾರೆ)’ ಎನ್ನುವ ಮಾತು, ಸುತ್ತಲಿನ ಜನರನ್ನು ಸಂಚಲನಗೊಳಿಸುತ್ತಿತ್ತು. ತುಳುವರ ಬದುಕಿನಲ್ಲಿ ಬ್ಯಾರಿಗಳನ್ನು ಕಳೆದರೆ, ತುಳುವರಿಗೆ ಅಸ್ತಿತ್ವವೇ ಇದ್ದಿರಲಿಲ್ಲ. ತುಳು ಪಾಡ್ದನಗಳಲ್ಲಿ ಜಾನಪದಗಳಲ್ಲಿ ಬ್ಯಾರಿಗಳ ಪ್ರಸ್ತಾಪವಿದೆ. ಬಪ್ಪನಾಡಿನಲ್ಲಿ ‘ಬಪ್ಪಬ್ಯಾರಿ’ಯ ಆರ್ಥಿಕ ಸಹಾಯದಿಂದಲೇ ಅಲ್ಲಿಯ ಇಡೀ ಊರು ಅಭಿವೃದ್ಧಿಗೊಂಡಿರುವುದು ಇತಿಹಾಸ. ಅಂದಿನ ಬ್ಯಾರಿಗಳು ತಮ್ಮ ಹೆಸರಿನೊಂದಿಗೆ ಕಡ್ಡಾಯವಾಗಿ ‘ಬ್ಯಾರಿ’ ಎನ್ನುವ ಐಡೆಂಟಿಟಿಯನ್ನು ಸೇರಿಸುತ್ತಿದ್ದರು. ಅದು ಅವರಿಗೆ ಸಮಾಜದಲ್ಲಿ ಘನತೆಯನ್ನು, ಗೌರವವನ್ನು ನೀಡುತ್ತಿತ್ತು. ನೀವು ಎಪ್ಪತ್ತರ ದಶಕದ ಹಿಂದಿನ ಕರಾವಳಿಯ ಯಾವ ಕಡತಗಳಲ್ಲಿ ನೋಡಿದರೂ, ಸ್ಥಳೀಯ ಮುಸ್ಲಿಮರ ಹೆಸರಿನ ಮುಂದೆ ‘ಬ್ಯಾರಿ’ ಎಂದು ಉಲ್ಲೇಖಿಸಿರುವುದನ್ನು ಕಾಣಬಹುದು. ಬ್ಯಾರಿಗಳು ಬ್ರಿಟಿಷರೊಂದಿಗೆ ಮಾತ್ರವಲ್ಲ, ಸ್ಥಳೀಯ ಪುರೋಹಿತಶಾಹಿಗಳೊಂದಿಗೆ, ಪಾಳೇಗಾರರೊಂದಿಗೂ ಸಡ್ಡು ಹೊಡೆದಿದ್ದರು. ಧರ್ಮಸ್ಥಳದ ಹೆಗಡೆ ಕುಟುಂಬದ ವಿರುದ್ಧವೂ ಕೋರ್ಟು, ನ್ಯಾಯ ಎಂದು ಅಲೆದಾಡಿ ಗೆದ್ದ ಅದೆಷ್ಟೋ ಬ್ಯಾರಿಗಳಿದ್ದಾರೆ. ಬ್ಯಾರಿಗಳೊಂದಿಗೆ ಜಿದ್ದಿಗೆ ಬೀಳಲು ಜನರು ಹೆದರುತ್ತಿದ್ದ ಕಾಲ ಅದು.
ಅತಂಹದೊಂದು ಸಮುದಾಯಕ್ಕೆ ಇದ್ದಕ್ಕಿದ್ದಂತೆಯೇ ಯಾಕೆ ಗ್ರಹಣ ಬಡಿಯಿತು? ಅನಂತರದ ಕೆಲವು ತಲೆಮಾರುಗಳು ಯಾಕೆ ತಮ್ಮ ಹೆಸರಿಗೆ ಅಂಜುವಂತಹ ಪರಿಸ್ಥಿತಿ ಎದುರಾಯಿತು?ಇದು ಅತ್ಯಂತ ಕುತೂಹಲಕರವಾಗಿದೆ. ಕಾಲ ಹೇಗೆ ಉರುಳಿತೆಂದರೆ, ಬ್ಯಾರಿಗಳ ಭಂಡಸಾಲೆಯಲ್ಲಿ ಲೆಕ್ಕ ಬರೆಯುತ್ತಿದ್ದವರೆಲ್ಲ ಕ್ರಮೇಣ ಪ್ರಬಲರಾದರು. ಹೆಸರುವಾಸಿಗಳಾಗಿದ್ದ ಬ್ಯಾರಿಗಳ ನಂತರದ ತಲೆಮಾರು ಲೆಕ್ಕ ಬರೆಯುತ್ತಿದ್ದವರನ್ನೇ ಒಡೆಯರೆಂದು ಕರೆಯುವ ಪರಿಸ್ಥಿತಿ ಎದುರಾಯಿತು. ತುಳುನಾಡಿನಲ್ಲಿ ಬ್ರಾಹ್ಮಣ್ಯದ ಪ್ರವೇಶವಾದಂತೆ ಕ್ರಮೇಣ ಬ್ಯಾರಿಗಳು ತುಳುವರಿಗೆ ಅನ್ಯರಾಗತೊಡಗಿದರು. ಬ್ಯಾರಿಗಳ ಅತಿ ಆತ್ಮವಿಶ್ವಾಸ, ‘ಒಂದಾನೊಂದು ಕಾಲದಲ್ಲಿ ನನ್ನಜ್ಜನಿಗೊಂದಾನೆಯಿತ್ತು’ ಎನ್ನುವ ಒಣ ಹುಂಬತನ, ಪಾಳೇಗಾರಿಕೆಯ ಕಾಲದ ಆ ‘ಭ್ರಮೆ’ಗಳಿಂದ ಹೊರಬರಲು ಸಿದ್ಧವಿಲ್ಲದ ಅನಂತರದ ಪೀಳಿಗೆ ಸಮಾಜದಲ್ಲಿ ತಮಾಷೆಗೆ ಗುರಿಯಾಯಿತು. ಶಿಕ್ಷಣದಿಂದ ವಂಚಿತವಾದ ಈ ಪೀಳಿಗೆಗೆ, ಕೈ ತಪ್ಪಿದ ‘ತರವಾಡು ಅಂತಸ್ತಿ’ನಿಂದ ಏಕಾಏಕಿ ಮೀನು ಮಾರುವುದು, ಗುಜರಿ ಹೆಕ್ಕುವುದು ಇತ್ಯಾದಿಯೇ ಅನಿವಾರ್ಯವಾಯಿತು. ಬ್ಯಾರಿಗಳನ್ನು ಏಕಾಏಕಿ ಆಹುತಿ ತೆಗೆದುಕೊಂಡ ಬಡತನ, ನಾಯಕತ್ವದ ಕೊರತೆ ಅವರನ್ನು ಅತಂತ್ರವನ್ನಾಗಿಸಿದವು. ಅವರ ಅಸಹಾಯಕತೆಯನ್ನು ಚೆನ್ನಾಗಿಯೇ ಬಳಸಿಕೊಂಡ ‘ಮೇಲ್ವರ್ಗ’ ಬ್ಯಾರಿಗಳನ್ನು ಕಳ್ಳರನ್ನಾಗಿಯೂ, ಕಾಮುಕನ್ನಾಗಿಯೂ ಬಿಂಬಿಸುವ ಪ್ರಯತ್ನ ನಡೆಸಿತು. ಅದರ ಪರಿಣಾಮ ಎಷ್ಟು ತೀವ್ರವಾಯಿತೆಂದರೆ ಒಂದು ತಲೆಮಾರು ತನ್ನ ಭಾಷೆ, ಐಡೆಂಟಿಟಿಗಾಗಿ ನಾಚಿಕೊಳ್ಳುವಷ್ಟು. ಇದರಿಂದಾಗಿ ಬ್ಯಾರಿ ಭಾಷೆ, ಸಂಸ್ಕೃತಿಯೊಳಗೆ ಅಡಕವಾಗಿದ್ದ ಜಾನಪದಗಳು, ಸಾಹಿತ್ಯಗಳು ಸಂಪೂರ್ಣ ಅವಜ್ಞೆಗೊಳಗಾದವು.
ಇಂತಹ ಒಂದು ಭಾಷೆ ಏಕಾಏಕಿ ಆತ್ಮವಿಶ್ವಾಸದೊಂದಿಗೆ ತಲೆ ಎತ್ತಿ ನಿಂತುದು 90ರ ದಶಕದಲ್ಲಿ. ಕೆಲವು ಬ್ಯಾರಿ ಸಾಹಿತಿಗಳು, ಮುಖಂಡರು ಒಂದಾಗಿ ‘ನಾವೆಲ್ಲ ಬ್ಯಾರಿಗಳು’ ಎಂದು ಘೋಷಿಸಿಕೊಂಡುದು ತುಳುನಾಡಿನ ಜನರಿಗೆ ಅಚ್ಚರಿಯನ್ನು ತಂದಿತ್ತು. ಅಷ್ಟೇ ಅಲ್ಲ, ಬ್ಯಾರಿ ಸಮುದಾಯದ ಜನರಿಗೆ ಇದು ಮೊತ್ತ ಮೊದಲ ಬಾರಿಗೆ ‘ತಮಾಷೆ’ಯಾಗಿ ಕಂಡಿತ್ತು. ಆದರೆ ಕೆಲವು ಮುಖಂಡರು ಸೇರಿ ಮೊತ್ತ ಮೊದಲ ಬ್ಯಾರಿ ಸಮಾವೇಶ ಮಾಡಿದಾಗ, ಅದರಲ್ಲಿ ಸರ್ವ ಬ್ಯಾರಿಗಳು ಒಂದಾಗಿ ತಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸಿದಾಗ ಕರಾವಳಿಯ ಇತರ ಮೇಲ್ವರ್ಣಿಯ ತುಳುವರು ‘ಅಪರಾಧಿಗಳಂತೆ’ ತಲೆ ತಗ್ಗಿಸಿದರು. ಆ ಒಂದು ಸಮ್ಮೇಳನದಲ್ಲಿ ಬ್ಯಾರಿ ಭಾಷೆ, ಸಮುದಾಯ ತನ್ನ ಅವಮಾನ, ಕೀಳರಿಮೆ ಇತ್ಯಾದಿಗಳನ್ನು ಕೊಡವಿ ತಲೆಯೆತ್ತಿ ನಿಂತಿತು. ಅನಂತರ ಬ್ಯಾರಿಗಳು ಮಾಡಿದ ಎಲ್ಲ ಸಮಾವೇಶಗಳು ಉಳಿದ ಸಮಾವೇಷಗಳಿಗೆ ಒಂದು ಮಾದರಿಯಂತಿದ್ದವು. ಪ್ರಪ್ರಥಮ ಬ್ಯಾರಿ ಸಮ್ಮೇಳನದಲ್ಲಿ ಸಭಿಕರಲ್ಲೊಬ್ಬನಾಗಿ ನಾನೂ ಭಾಗವಹಿಸಿದ್ದೆ. ರೋಮಾಂಚಿತನಾಗಿದ್ದೆ. ಈ ಸಮ್ಮೇಳನ ನಡೆದ ಬರೇ ಹತ್ತು ವರ್ಷಗಳಲ್ಲಿ ಬ್ಯಾರಿ ಭಾಷೆ ತನ್ನದೇ ಆದ ಒಂದು ಅಕಾಡಮಿಯನ್ನು ಸರಕಾರದಿಂದ ಗಿಟ್ಟಿಸಿಕೊಂಡಿತು. ಬ್ಯಾರಿ ಭಾಷೆಗೆ ಯಾಕೆ ಅಕಾಡಮಿ ನೀಡುವುದು? ಎಂದು ಕೇಳಿದವರೇ ಬ್ಯಾರಿಗಳ ಒಂದು ಕಾಲದ ಹೀನಾಯ ಸ್ಥಿತಿಗೆ ಕಾರಣರಾದವರು ಎನ್ನುವುದನ್ನು ನಾನಿಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
ಬ್ಯಾರಿ ಭಾಷೆಗೆ ಅಕಾಡಮಿ ನೀಡುವ ಮೂಲಕ 12 ಲಕ್ಷಕ್ಕೂ ಅಧಿಕ ಜನರಿರುವ ಒಂದು ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರಕಾರ ಮಾಡಿದೆ. ಒಂದು ಕಾಲದಲ್ಲಿ ಅವಮಾನ, ಕೀಳರಿಮೆಯ ಬದುಕನ್ನು ಸವೆಸಿದ ಸಮುದಾಯಕ್ಕೆ ನ್ಯಾಯವನ್ನು ನೀಡುವ ಪ್ರಯತ್ನ ಇದಾಗಿದೆ. ಆದುದರಿಂದ ಬ್ಯಾರಿಗಳ ಸಂಭ್ರಮದಲ್ಲಿ ಕರಾವಳಿಯ ತುಳುವರು ಮಾತ್ರವಲ್ಲ ಇಡೀ ಕನ್ನಡಿಗರೇ ಪಾಲುಗೊಳ್ಳಬೇಕು. ಅವರಿಗೆ ಮಾರ್ಗದರ್ಶನವನ್ನು ನೀಡಬೇಕು. ಈ ಮೂಲಕ, ಬ್ಯಾರಿ ಸಮುದಾಯಕ್ಕೆ ಈವರೆಗೆ ಆದ ಅನ್ಯಾಯಕ್ಕೆ ಪಶ್ಚಾತ್ತಾಪ ಪಡಬೇಕು.
ಪ್ರೀತಿ, ಸಂಗೀತ ಮತ್ತು ಬದುಕು ಇವುಗಳನ್ನು ವಿಭಿನ್ನವಾಗಿ ಕಟ್ಟಿಕೊಡುವ ಇಮ್ತಿಯಾಝ್ ಅಲಿ ಅವರ ಇನ್ನೊಂದು ಪ್ರಯತ್ನ ‘ರಾಕ್ಸ್ಟಾರ್’. ಜಬ್ ವಿ ಮೆಟ್ ಮತ್ತು ಲವ್ ಆಜ್, ಕಲ್ನಿಂದ ಇನ್ನೊಂದು ಹಂತ ಬೆಳೆದಿದ್ದಾರೆ ನಿರ್ದೇಶಕರು. ಎಲ್ಲ ಗೋಡೆಗಳನ್ನು ಒಡೆದು ಒಂದಾಗಲು ಹಂಬಲಿಸುವ ಪ್ರೀತಿ ಮತ್ತು ಸಂಗೀತ! ಹಾಗೆಯೇ ಅದರ ಬೆನ್ನು ಹತ್ತಿ ಹರಾಜಕ ಬದುಕನ್ನು ಅಪ್ಪಿಕೊಳ್ಳುವ ರಾಕ್ಸ್ಟಾರ್. ಒಂದು ಅರ್ಥದಲ್ಲಿ ಇಲ್ಲಿ ಕತೆಯೇ ಇಲ್ಲ. ಬರೇ ಭಾವನೆಗಳನ್ನೇ ಸಿನಿಮಾವಾಗಿಸಿದ್ದಾರೆ. ರಾಕ್ಸ್ಟಾರ್ನ ಕೈಬೆರಳ ಸ್ಪರ್ಶದಿಂದ ಆರೋಗ್ಯಪೂರ್ಣವಾಗುವ ನಾಯಕಿ. ನಾಯಕಿಯ ಹಂಬಲಿಕೆಯಿಂದಲೇ ತನ್ನ ಸಂಗೀತದ ತೀವ್ರತೆಯನ್ನು ಮುಟ್ಟುವ ರಾಕ್ಸ್ಟಾರ್. ಆಧುನಿಕ ಮನಸ್ಸುಗಳ ತಳಮಳ, ಮಿಡಿತಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಚಿತ್ರದಲ್ಲಿದೆ. ಒಂದು ರೀತಿಯಲ್ಲಿ ತಂತಿಯ ಮೇಲೆ ನಡೆದಿದ್ದಾರೆ ಇಮ್ತಿಯಾಝ್. ತುಸು ಕಾಲು ಜಾರಿದರೂ ಪ್ರಪಾತಕ್ಕೆ. ಒಬ್ಬ ಖ್ಯಾತ ಸಂಗೀತಗಾರನಾಗಬೇಕಾದರೆ ಆತ ಬದುಕಿನಲ್ಲಿ ನೋವು ತಿನ್ನುವುದು ಅತ್ಯಗತ್ಯವೆ? ಅವನ ಬದುಕು ಅರಾಜಕವಾಗುವುದು ಅನಿವಾರ್ಯವೆ? ಮಧ್ಯಮ ವರ್ಗದಿಂದ ಬಂದ ಜನಾರ್ದನ್ ಜಖರ್ ಗಿಟಾರ್ ಹಿಡಿದು ಅದರಿಂದ ಸಂಗೀತವನ್ನು ಹೊರಡಿಸಲು ಪ್ರಯತ್ನಿಸುವಾಗ ಅವನಿಗೆ ಸಿಗುವ ಸಲಹೆ ಇದು. ಯಾವುದೇ ಸಂಗೀತಗಾರನ ಹಿನ್ನೆಲೆಯನ್ನು ನೋಡು. ಅವನೊಬ್ಬ ಭಗ್ನ ಪ್ರೇಮಿಯಾಗಿರುತ್ತಾನೆ. ಅವನ ಬದುಕು ನೋವಿನ ಕುಲುಮೆಯಿಂದ ಎದ್ದು ಬಂದಿರುತ್ತದೆ. ಆ ಭಗ್ನ ಹೃದಯದಿಂದ ಸಂಗೀತ ಹುಟ್ಟುತ್ತದೆ. ದಿಲ್ಲಿ ಯುನಿವರ್ಸಿಟಿಯ ಕ್ಯಾಂಟೀನ್ನಲ್ಲಿ ಸಮೋಸಾ ಜೊತೆಗೆ ಚಟ್ನಿಗಾಗಿ ಗದ್ದಲ ಎಬ್ಬಿಸುವ ಜನಾರ್ದನ್ಗೆ ಇದು ದೊಡ್ಡ ಸಮಸ್ಯೆಯಾಗುತ್ತದೆ. ನೋವುಗಳಿಲ್ಲದಿರುವುದೇ ಅವನ ನೋವುಗಳಿಗೆ ಕಾರಣ. ತಾನು ಸಂಗೀತಗಾರನಾಗಬೇಕಾದರೆ ನೋವುಗಳು ಬೇಕು. ಅದರ ಹುಡುಕಾಟದಲ್ಲಿ ಮತ್ತಷ್ಟು ಹಾಸ್ಯಾಸ್ಪದನಾಗುತ್ತಾ ಹೋಗುತ್ತಾನೆ ಜನಾರ್ದನ್.
ಹೀರಾ ಎನ್ನುವ ಕಾಲೇಜಿನ ಸ್ಟಾರ್ ಹುಡುಗಿಯನ್ನು ಪ್ರೇಮಿಸುವುದಕ್ಕೆ ಹೊರಟು, ಭಗ್ನ ಪ್ರೇಮಿಯಾಗಲು ಯತ್ನಿಸುತ್ತಾನೆ. ಆದರೆ ಕ್ಯಾಂಟೀನ್ ಮಾಲಕ ಮಾತ್ರ ಆತನಿಗೆ ಛೀಮಾರಿ ಹಾಕುತ್ತಾನೆ. ‘ನೀನು ನಿಜಕ್ಕೂ ಆ ಹುಡುಕಿಯನ್ನು ಪ್ರೀತಿಸಿದ್ದಿದ್ದರೆ ಇಲ್ಲಿ ಚಟ್ನಿಗಾಗಿ ಜಗಳ ಮಾಡುತ್ತಾ ಕಾಲ ಹರಣ ಮಾಡುತ್ತಿರಲಿಲ್ಲ’ ಎನ್ನುತ್ತಾನೆ. ಆದರೆ ಪ್ರೀತಿಯ ಕುರಿತ ಈ ಹುಡುಗಾಟವೇ ಆ ಹುಡುಗಿಯನ್ನು ಅವನಿಗೆ ಹತ್ತಿರವಾಗಿಸುತ್ತದೆ. ಹೀರಾ ಮೇಲ್ದರ್ಜೆಯ ಹುಡುಗಿ ಎನ್ನುವುದು ಜನಾರ್ದನ್ ಕಲ್ಪನೆ. ಆದರೆ ಆ ಕಲ್ಪನೆಯನ್ನು ಒಂದು ದಿನ ಹೀರಾ ಒಡೆದು ಹಾಕುತ್ತಾಳೆ. ತನಗೆ ದಿಲ್ಲಿಯ ಕಳಪೆ ಥಿಯೇಟರ್ನಲ್ಲಿ ‘ಜಂಗ್ಲಿಜವಾನಿ’ ಎನ್ನುವ ಕಳಪೆ ಚಿತ್ರ ನೋಡಬೇಕಾಗಿದೆ. ಹೋಗೋಣವೆ? ಎಂದು ನಾಯಕನಲ್ಲಿ ಕೇಳುತ್ತಾಳೆ. ಇಲ್ಲಿಂದ ಅವರ ಸ್ನೇಹ ತೆರೆದುಕೊಳ್ಳುತ್ತದೆ. ದಿಲ್ಲಿಯ ಕತ್ತಲ ಮೂಲೆಗಳಲ್ಲಿ ಬಚ್ಚಿಟ್ಟುಕೊಂಡಿರುವ ಗಂಧೀ ಬದುಕಿನಲ್ಲಿರುವ ಸ್ವಾತಂತ್ರವನ್ನು ಅವರಿಬ್ಬರು ಕದ್ದು ಮುಚ್ಚಿ ಅನುಭವಿಸುತ್ತಾರೆ. ಹೆಂಡ ಕುಡಿಯುತ್ತಾರೆ. ಹೋಗಬಾರದ, ನೋಡಬಾರದ ಸ್ಥಳಗಳನ್ನೆಲ್ಲ ನೋಡುತ್ತಾರೆ. ಹೀರಾಳ ಮದುವೆ ದಿನ ಹತ್ತಿರವಾಗುತ್ತದೆ. ಆಕೆಯ ಮದುವೆಯಲ್ಲಿ ಪಾಲ್ಗೊಳ್ಳಲು ನಾಯಕ ಕಾಶ್ಮೀರಕ್ಕೆ ತೆರಳುತ್ತಾನೆ. ಅಲ್ಲಿ ತಾನವಳನ್ನು ಕಳೆದುಕೊಳ್ಳುತ್ತಿರುವುದು ಅವನಿಗೆ ಮನವರಿಕೆಯಾಗುತ್ತದೆ. ಮದಿರಂಗಿ ಹಾಕಿದ ಕೈಗಳನ್ನು ಮುಂದಿಟ್ಟು ತನ್ನನ್ನು ತಬ್ಬಿಕೋ ಎಂದು ಅವಳು ಹೇಳುತ್ತಾಳೆ. ನಾಯಕ ಮೆದುವಾಗಿ ತಬ್ಬಿಕೊಳ್ಳುತ್ತಾಳೆ. ‘‘ಇನ್ನೂ ಗಟ್ಟಿಯಾಗಿ’’ ಎನ್ನುತ್ತಾಳೆ ಮದುಮಗಳು.
ಅಲ್ಲಿಂದ ಮರಳಿದ ಜನಾರ್ದನ್ ನಿಧಾನಕ್ಕೆ ಮನೆಯಲ್ಲೂ ತಿರಸ್ಕೃತನಾಗುತ್ತಾ ಹೋಗುತ್ತಾನೆ. ಗಿಟಾರ್ ಅವನ ಜೊತೆಯಾಗುತ್ತಾನೆ. ಕಳ್ಳತನದ ಸುಳ್ಳು ಆರೋಪ ಹೊತ್ತು ಮನೆಯಿಂದ ಹೊರಗಟ್ಟಿದಾಗ ಅವನು ದಿಲ್ಲಿಯ ದರ್ಗಾ ಸೇರುತ್ತಾನೆ. ಅಲ್ಲಿ ಹಾಡುತ್ತಾ ಕಾಲ ಕಳೆಯುತ್ತಾನೆ. ಬದುಕು ಅವನನ್ನು ತಿರಸ್ಕರಿಸಿದಂತೆ, ಸಂಗೀತ ಅವನೊಳಗೆ ತೀವ್ರಗೊಳ್ಳುತ್ತಾ ಹೋಗುತ್ತದೆ. ಮುಂದೆ ವಿದೇಶದಲ್ಲಿ ಹೀರಾಳನ್ನು ಅವನು ಮತ್ತೆ ಭೇಟಿ ಮಾಡುತ್ತಾನೆ. ಕಟ್ಟುಪಾಡಿನ ಜಗತ್ತಿನಲ್ಲಿ ಅವಳು ಬಂಧಿಯಾಗಿರುತ್ತಾಳೆ. ಆರೋಗ್ಯ ಕೆಟ್ಟಿರುತ್ತದೆ. ಮಾನಸಿಕ ವೈದ್ಯರನ್ನು ಬೇಟಿಯಾಗಲೆಂದು ಹೊರಟಾಗ ನಾಯಕ ಎದುರಾಗುತ್ತಾನೆ. ನಾಯಕನ ಭೇಟಿಯಿಂದ ಆಕೆ ಮತ್ತೆ ಅರಳುತ್ತಾಳೆ. ಇನ್ನೊಮ್ಮೆ ಆಕೆಯನ್ನು ಅವಳ ಮನೆಯಲ್ಲಿ ಭೇಟಿ ಮಾಡುವ ಪ್ರಯತ್ನ ಅವನನ್ನು ಅಪರಾಧಿಯನ್ನಾಗಿಸುತ್ತದೆ. ಇದು ಜಾರ್ಡನ್ಗೆ ಹೊಸ ಇಮೇಜ್ ನೀಡುತ್ತದೆ. ಆತ ಜೈಲು ಸೇರುತ್ತಾನೆ. ಜೈಲಿನಿಂದ ಬಿಡುಗಡೆಯ ಹಂಬಲ ಅವನ್ನು ಇನ್ನಷ್ಟು ಸಂಗೀತದ ಆಳಕ್ಕೆ ಒಯ್ಯುತ್ತದೆ. ‘‘ಈ ನಗರದಲ್ಲಿ ಒಮ್ಮೆ ದಟ್ಟ ಕಾಡಿತ್ತು. ಇಲ್ಲಿರುವ ಮರಗಳನ್ನು ಕಡಿದು ನಗರ ಮಾಡಲಾಯಿತು. ಮರವನ್ನು ಕಡಿಯುವಾಗ ಎರಡು ಜೋಡಿ ಪಾರಿವಾಳಗಳು ಇಲ್ಲಿಂದ ಹಾರಿ ಹೋದವು. ಅದನ್ನು ಯಾರಾದರೂ ಕಂಡಿರಾ...’’ ಸಂಗೀತಗಾರನ ಬಿಡುಗಡೆಯ ಹಂಬಲ. ಎಲ್ಲ ಗೋಡೆಗಳನ್ನು ಮುರಿದು ಪ್ರೀತಿಯಲ್ಲಿ ಒಂದಾಗುವ ತಹತಹಿಕೆ...ಸದ್ದಾಹಕ್ ಹಾಡು...ನಾಯಕನ ಒಳಗಿನ ಸ್ವಾತಂತ್ರದ ಕನಸುಗಳಿಗೆ ರೆಕ್ಕೆ ಕಟ್ಟುತ್ತದೆ. ನಾಯಕನ ವರ್ಚಸ್ಸಿಗೆ ಕಪ್ಪು ಬಣ್ಣ ಬಳಿದಂತೆ ಆತನ ಅಭಿಮಾನಿಗಳು ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತಾರೆ. ನಾಯಕ ಜರ್ಝರಿತನಾದಷ್ಟು ಆತನ ಸಂಗೀತ ಉತ್ಕಟ ಹಂತವನ್ನು ತಲುಪುತ್ತದೆ.
ಎಲ್ಲ ಸಭ್ಯ, ಸಂಪ್ರದಾಯದ ಗೋಡೆಗಳನ್ನು ಒಡೆದು ನಾಯಕನ ಸ್ಪರ್ಶಕ್ಕೆ ಹಂಬಲಿಸುವ ಹೀರಾ...ಹಾಗೆಯೇ ಆ ಬೆಂಕಿಯ ಪ್ರೀತಿಯಲ್ಲಿ ಧಗಧಗಿಸುವ ನಾಯಕನ ಸಂಗೀತ ಇವನ್ನು ಇಟ್ಟುಕೊಂಡು ಇಮ್ತಿಯಾಝ್ ಅಲಿ ಮಾಡಿರುವ ಪ್ರಯತ್ನವನ್ನು ನಾವು ಮೆಚ್ಚಬೇಕಾಗಿದೆ. ರಣ್ಬೀರ್ ಕಪೂರ್ಗೆ ಇದೊಂದು ವಿಭಿನ್ನ ಅವಕಾಶ. ಮುಗ್ಧ ವಿದ್ಯಾರ್ಥಿಯಾಗಿಯೂ, ರಾಕ್ಸ್ಟಾರ್ ಆಗಿಯೂ ಕಪೂರ್ ಮಿಂಚುತ್ತಾರೆ. ಹೀರಾ ಪಾತ್ರದಲ್ಲಿ ನರ್ಗೀಸ್ ಫಖ್ರಿ ಪರವಾಗಿಲ್ಲ ಎನ್ನುವಂತೆ ನಟಿಸಿದ್ದಾರೆ. ಎ. ಆರ್. ರಹಮಾನ್ ಸಂಗೀತ ಚಿತ್ರದ ಧ್ವನಿಯಾದರೆ, ಅನಿಲ್ ಮೆಹ್ತಾ ಅವರ ಕ್ಯಾಮರಾವರ್ಕ್ ಒಟ್ಟು ಚಿತ್ರದ ದೇಹ. ತುಡಿಯುವ ಪ್ರೇಮ ಚಿತ್ರದ ಆತ್ಮ.
ಹಾಗೆಂದು ಚಿತ್ರ ಪರಿಪೂರ್ಣವಾಗಿದೆ ಎಂದರ್ಥವಲ್ಲ. ಚಿತ್ರವನ್ನು ಇನ್ನಷ್ಟು ತೀವ್ರವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಗಂಧಿ ಜಗತ್ತಿನ ಪರಿಚಯ ನಿರ್ದೇಶಕರಿಗೆ ತುಸು ಕಡಿಮೆ ಅನ್ನಿಸುತ್ತದೆ. ಸುಂದರ ಕಾಶ್ಮೀರವನ್ನು ಕಟ್ಟಿಕೊಡುವಷ್ಟು ಉತ್ಸಾಹ ಆ ಗಂಧೀ ಜಗತ್ತನ್ನು ಕಟ್ಟಿಕೊಡುವಲ್ಲಿ ಕ್ಯಾಮರಾಗಳಿಗಿದ್ದಂತಿಲ್ಲ. ನಾಯಕಿಯ ಅಭಿನಯ ಇನ್ನಷ್ಟು ಪಕ್ವವಾಗಬೇಕಾಗಿತ್ತು ಅನ್ನಿಸುತ್ತದೆ. ತಣ್ಣಗೆ ಜುಳು ಜುಳು ಹರಿಯುವ ಈ ಚಿತ್ರದಲ್ಲಿ ವಿಶೇಷ ತಿರುವುಗಳಿಲ್ಲ. ಆದರೆ ವಿಭಿನ್ನ ದೃಷ್ಟಿಯಿದೆ. ಅದಕ್ಕಾಗಿ ನಿರ್ದೇಶಕರನ್ನು ಅಭಿನಂದಿಸಬೇಕು.
ಹೆಣ್ಣು ದೈವ ಅದು ಭೂಸುಧಾರಣೆಯ ಕಾಲ. ಹೊಲ ಉಳುತ್ತಿರುವವರೇ ಹೊಲದೊಡೆಯರಾಗುತ್ತಿರುವ ಕಾಲ. ಆ ಸಂದರ್ಭದಲ್ಲಿ ಭೂತದ ಕೋಲದಲ್ಲಿ ದೈವವೊಂದು ಕುಣಿಯುತ್ತಾ ‘‘ಯಾರೂ ಧನಿಗಳ ಭೂಮಿಯನ್ನು ಕಬಳಿಸಬಾರದು’’ ಎಂದು ಕೂಗಿತಂತೆ. ಆದರೆ ಭೂಮಿ ಪಡೆದ ರೈತರೆಲ್ಲ ಭೂತಕ್ಕೆ ಅಲ್ಲೇ ತಿರುಗಿ ಬಿದ್ದರು. ‘‘ದೈವಕ್ಕೆ ಎದುರಾಡುತ್ತೀರಾ?’’ ಭೂತ ಕೇಳಿತು. ‘‘ಸದ್ಯಕ್ಕೆ ನೀನು ನಮ್ಮ ಧನಿಗಳ ದೈವ. ನಮ್ಮ ದೈವ ಹೆಣ್ಣು ಭೂತ. ಅದರ ಹೆಸರು ಇಂದಿರಾಗಾಂಧಿ’’ ಎಂದವರೇ ಭೂತಕ್ಕೆಂದು ತಂದ ಕೋಳಿಯೊಂದಿಗೆ ತಮ್ಮ ತಮ್ಮ ಮನೆಗಳಿಗೆ ಮರಳಿದರಂತೆ.
ಕೊಲೆ ಹಾಡುಹಗಲಲ್ಲೇ ಅಲ್ಲೊಂದು ಕೊಲೆಯಾಯಿತು. ಪೊಲೀಸ್ ಅಧಿಕಾರಿ ಬಂದು ಕೇಳಿದ ‘‘ಕೊಲೆಯನ್ನು ಯಾರಾದರೂ ನೋಡಿದವರಿದ್ದಾರೆಯೋ?’’ ಯಾರೂ ತುಟಿ ಬಿಚ್ಚಲಿಲ್ಲ. ಅಪರಾಧಿ ಅಲ್ಲೇ ಇದ್ದರೂ ಸಾಕ್ಷಿ ನುಡಿಯಲು ಹಿಂದೇಟು ಹಾಕಿದರು. ಅಧಿಕಾರಿ ವಿಷಾದದಿಂದ ಹೇಳಿದ ‘‘ಈ ಕೊಲೆಯನ್ನು ಯಾರೋ ಒಬ್ಬ ಮಾಡಿರಬೇಕು ಎಂದು ತಿಳಿದಿದ್ದೆ. ಈಗ ನೋಡಿದರೆ ಈ ಕೊಲೆಯನ್ನು ನೀವೆಲ್ಲ ಜೊತೆ ಸೇರಿ ಮಾಡಿದ್ದೀರಿ’’
ಮೊತ್ತ ಮೊದಲು ಅಪರಾಧಿಯನ್ನು ನ್ಯಾಯಾಧೀಶರು ಕೇಳಿದರು ‘‘ಇಷ್ಟು ಕೊಲೆ ಮಾಡಿದ್ದೀಯಲ್ಲ...ಹೇಗೆ ಸಾಧ್ಯವಾಯಿತು?’’ ಅವನು ಹೇಳಿದ ‘‘ಮೊತ್ತ ಮೊದಲು ಒಂದು ಕೊಲೆ ಮಾಡಿದೆ. ಆ ಬಳಿಕ ಕೊಲೆ ಮಾಡುವುದು ಕಷ್ಟವಾಗಲಿಲ್ಲ’’ ‘‘ನೀನು ಮಾಡಿದ ಮೊದಲ ಕೊಲೆ ಯಾರದು?’’ ‘‘ಮೊತ್ತ ಮೊದಲು ನಾನು ಕೊಂದದ್ದು ನನ್ನನ್ನು’’
ಪತ್ರಕರ್ತ ಪತ್ರಕರ್ತನೊಬ್ಬ ಪೊಲೀಸ್ ಸ್ಟೇಶನ್ಗೆ ಫೋನ್ ಮಾಡಿದ ‘‘ಸಾರ್...ಏನಿದೆ ಕ್ರೈಂ ವಿಶೇಷ?’’ ‘‘ವಿಶೇಷ ಏನು ಇಲ್ಲ ಸಾರ್, ಒಂದು ಸಣ್ಣ ಆಕ್ಸಿಡೆಂಟ್ ಅಷ್ಟೇ’’ ಪೊಲೀಸ್ ಪೇದೆ ಉತ್ತರಿಸಿದ. ‘‘ಹೌದಾ...ಡೆತ್ ಆಗಿದಾ?’’ ಪತ್ರಕರ್ತ ಕೇಳಿದ. ‘‘ಹೌದು ಒಂದು ಡೆತ್ ಆಗಿದೆ. ಸ್ಕೂಟರ್ಗೆ ಬಸ್ ಡಿಕ್ಕಿ’’ ‘‘ಬರೇ ಒಂದು ಮಾತ್ರಾನ, ಬೇರೇನೂ ವಿಶೇಷ ಇಲ್ವಾ?’’ ‘‘ಇಲ್ಲಾ ಸಾರ್...ಅಷ್ಟೇ...’’ ‘‘ಏನು ಪೊಲೀಸರಪ್ಪ ನೀವು...ಒಂದು ದಿನಾನೂ ವಿಶೇಷ ಸುದ್ದಿ ಕೊಡಲ್ಲ. ಹೀಗೇ ಆದರೆ ನಾವು ಪತ್ರಿಕೆಯೋರು ಏನನ್ನು ಪ್ರಿಂಟ್ ಮಾಡಬೇಕು...’’ ಪತ್ರಕರ್ತ ಫೋನ್ ಕುಕ್ಕಿದ. ತುಸು ಹೊತ್ತಲ್ಲೇ ಮನೆಯಿಂದ ಪತ್ರಕರ್ತನಿಗೆ ಫೋನ್ ಬಂತು ‘‘ಅಪ್ಪನ ಸ್ಕೂಟರ್ ಆಕ್ಸಿಡೆಂಟ್ ಆಗಿದೆ...ಬೇಗ ಬಾ....’’
ನಾಚಿಕೆ ಮಹಾ ವಂಚಕನೊಬ್ಬನನ್ನು ಬಂಧಿಸಿ ಒಯ್ಯುತ್ತಿದ್ದರು. ಆದರೆ ಅವನು ಯಾವ ಅಂಜಿಕೆಯೂ ಇಲ್ಲದೆ ನಗು ನಗುತ್ತಾ ಅವರ ಹಿಂದೆ ನಡೆಯುತ್ತಿದ್ದ. ಅದನ್ನು ನೋಡಿ ಸಂತ ಹೇಳಿದ ‘‘ತನ್ನ ಅಪರಾಧಕ್ಕಾಗಿ ಸ್ವಯಂ ನಾಚಿಕೊಳ್ಳದವನನ್ನು ಯಾವ ಜೈಲೂ ಶಿಕ್ಷಿಸಲಾರದು’’
ಲೆಕ್ಕ ಮೇಷ್ಟ್ರು ಲೆಕ್ಕ ಪಾಠ ಹೇಳಿ ಕೊಡುತ್ತಿದ್ದರು. ಹುಡುಗನೊಬ್ಬನನ್ನು ನಿಲ್ಲಿಸಿ ಕೇಳಿದರು ‘‘ನನ್ನ ಕೈಯಲ್ಲಿ ಹತ್ತು ರೊಟ್ಟಿ ಇದೆ. ಎರಡು ರೊಟ್ಟಿಯನ್ನು ನಾನು ನಮ್ಮ ಮನೆಯ ನಾಯಿಗೆ ಹಾಕುತ್ತೇನೆ. ಈಗ ನನ್ನಲ್ಲಿ ಉಳಿದ ರೊಟ್ಟಿ ಎಷ್ಟು?’’ ಹುಡುಗ ವಿಷಾದದಿಂದ ಕೇಳಿದ ‘‘ಸಾರ್ ನಾಯಿಗೆ ಹಾಕುವ ಆ ಎರಡು ರೊಟ್ಟಿಯನ್ನು ನನಗಾದರೂ ಕೊಡಬಾರದೆ?’’ ಮೇಷ್ಟ್ರು ಸಿಟ್ಟಾದರು ‘‘ನಾನು ರೊಟ್ಟಿಯನ್ನು ಯಾರಿಗೆ ಹಾಕುತ್ತೇನೆ ಎನ್ನುವುದು ಮುಖ್ಯವಲ್ಲ. ನನ್ನ ಕೈಯಲ್ಲಿ ಎಷ್ಟು ರೊಟ್ಟಿಯಿದೆ ಅದಕ್ಕೆ ಉತ್ತರಿಸು’’ ಹುಡುಗ ಅಷ್ಟೇ ಕಟುವಾಗಿ ಉತ್ತರಿಸಿದ ‘‘ಮನೆಯಲ್ಲಿ ಹಸಿದು ಕೆಲಸ ಮಾಡುತ್ತಿರುವ ನನ್ನ ಅಮ್ಮನಿಗೆ ನಿಮ್ಮ ಕೈಯಲ್ಲಿರುವ ಎಂಟು ರೊಟ್ಟಿಗಿಂತ, ನೀವು ನಾಯಿಗೆ ಹಾಕಿದ ಎರಡು ರೊಟ್ಟಿ ತುಂಬಾ ಮುಖ್ಯ’’ ಮೇಷ್ಟ್ರು ಹತಾಶೆಯಿಂದ ಹೇಳಿದರು ‘‘ಇದು ಕಲ್ಪನೆ ಕಣೋ...’’ ಹುಡುಗನೂ ಅಷ್ಟೇ ಹತಾಶೆಯಿಂದ ಕೇಳಿದ ‘‘ಕಲ್ಪನೆಯಲ್ಲಾದರೂ ಆ ಎರಡು ರೊಟ್ಟಿಯನ್ನು ನನ್ನ ತಾಯಿಗೆ ನೀಡಬಾರದೆ?’’
ಅನುಭವ ಲಾರಿ ಚಾಲಕರ ಸಂದರ್ಶನ ನಡೆಯುತ್ತಿತ್ತು ಚಾಲಕನಲ್ಲಿ ಆತ ಕೇಳಿದ ‘‘ಚಾಲಕ ವೃತ್ತಿಯಲ್ಲಿ ಎಷ್ಟು ವರ್ಷ ಅನುಭವವಿದೆ?’’ ‘‘ನನ್ನ ಬದುಕಿನಲ್ಲಿ ಕೆಲವು ಸೆಕೆಂಡುಗಳು ನನಗೆ ನೂರಾರು ವರ್ಷಗಳ ಅನುಭವವನ್ನು ನೀಡಿದೆ’’ ಆ ವೃದ್ಧ ಚಾಲಕ ನುಡಿದ.
ಸೀತೆ ‘‘ಬೆಂಕಿಗೆ ಹಾರಿಯೂ ಸೀತೆ ಹೇಗೆ ಬದುಕಿದಳು?’’ ತಾಯಿಯ ಬಳಿ ಮಗ ಕೇಳಿದ. ‘‘ನಾನು ಪ್ರತಿದಿನ ಬದುಕುತ್ತಿಲ್ಲವೆ ಮಗಾ...ಹಾಗೆ’’ ತಾಯಿ ಉತ್ತರಿಸಿದಳು ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.
ಮುಕ್ತಿ ರಾಜಕಾರಣಿ ಅದೊಂದು ಸ್ಲಂಗೆ ಭೇಟಿ ನೀಡಿದ. ಸಾವಿರಾರು ಗುಡಿಸಲುಗಳಿರುವ ಸ್ಲಂ ಅದು. ಅಲ್ಲಿನ ಬಡತನ, ಕಷ್ಟ ಕಂಡು ರಾಜಕಾರಣಿ ತುಂಬಾ ನೊಂದುಕೊಂಡ. ತಕ್ಷಣ ತನ್ನ ಜೊತೆಗಿದ್ದ ಅಧಿಕಾರಿಗೆ ಆದೇಶಿಸಿದ ‘‘ಈ ಬಡತನ, ನೋವಿಗೆ ಮುಕ್ತಿ ಕೊಡಿ. ಇವರನ್ನು ಮೇಲೆತ್ತಿ ಮುಂದಿನ ವರ್ಷ ಬಂದಾಗ ಇಲ್ಲಿ ಬಡತನ ಅನ್ನೋದೆ ಇರಬಾರದು’’ ಅಧಿಕಾರಿ ‘‘ಸರಿ ಸಾರ್’’ ಎಂದ. ಮರುದಿನ ಆ ಸ್ಲಂಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಅಷ್ಟೂ ಬಡವರು ಸುಟ್ಟು ಬೂದಿಯಾದರು. ಮುಂದಿನ ವರ್ಷ ಅಲ್ಲಿ ತಲೆಯೆತ್ತಿದ್ದ ಕಾಂಪ್ಲೆಕ್ಸ್ನ್ನು ಉದ್ಘಾಟಿಸಲು ಆ ರಾಜಕಾರಣಿ ಬಂದಾಗ, ಅಲ್ಲೆಲ್ಲ ಶ್ರೀಮಂತರೇ ರಾರಾಜಿಸುತ್ತಿದ್ದರು. ರಾಜಕಾರಣಿ ಅಧಿಕಾರಿಯನ್ನು ಮೆಚ್ಚುಗೆಯಿಂದ ನೋಡಿದ.
ಗೊಬ್ಬರ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಸಿಟ್ಟಿನಿಂದ ಹೇಳಿದ ‘‘ನಿನ್ನ ತಲೆಯಲ್ಲಿರುವುದು ಗೊಬ್ಬರ’’ ವಿದ್ಯಾರ್ಥಿ ಸಂತೋಷದಿಂದ ಉತ್ತರಿಸಿದ ‘‘ನಿಜ. ನನ್ನ ತಲೆಯಲ್ಲಿರುವುದು ಗೊಬ್ಬರ. ಅಲ್ಲಿ ಬೀಜ ಬಿತ್ತಿ ಬೆಳೆ ತೆಗೆಯುವುದು ನಿಮ್ಮ ಕೆಲಸ. ಅದನ್ನು ಮಾಡಿ’’
ಪವಾಡ ಸಂತ ಆಶ್ರಮದ ಗಿಡಕ್ಕೆ ನೀರೆರೆಯುತ್ತಿದ್ದ. ಆಗ ಅಲ್ಲಿಗೊಬ್ಬ ಅಪರಿಚಿತ ಬಂದು ಕೇಳಿದ ‘‘ಸ್ವಾಮಿ...ಈ ಆಶ್ರಮದ ಗುರುಗಳು ಪವಾಡ ಮಾಡುತ್ತಾರಂತೆ ಹೌದ?’’ ಸಂತ ನಕ್ಕು ‘‘ಹೌದು’’ ಎಂದ. ಅಪರಿಚಿತನಿಗೆ ಸಂತೋಷವಾಯಿತು. ‘‘ಅವರು ಮಾಡಿರುವ ಒಂದು ಪವಾಡವನ್ನು ಹೇಳಿ...’’ ಕುತೂಹಲದಿಂದ ಕೇಳಿದ. ಸಂತ ಹೇಳ ತೊಡಗಿದ ‘‘ನಿಜಕ್ಕೂ ಅದೊಂದು ದೊಡ್ಡ ಪವಾಡ. ಒಂದು ದಿನ ಅವರೊಂದು ಬೀಜವನ್ನು ತಂದರು. ಆಮೇಲೆ ಅದನ್ನು ಮಣ್ಣಲ್ಲಿ ಬಿತ್ತಿದರು. ಪ್ರತಿದಿನ ನೀರು ಹಾಕತೊಡಗಿದರು. ನೋಡನೋಡುತ್ತಿದ್ದಂತೆಯೇ ಒಂದು ಮಣ್ಣನ್ನು ಸೀಳಿ ಬೀಜದಿಂದ ಸಸಿಯೊಂದು ಮೊಳಕೆಯೊಡೆಯಿತು. ಪವಾಡ ಇಲ್ಲಿಗೆ ಮುಗಿಯುವುದಿಲ್ಲ...ಗುರುಗಳು ಅದಾವುದೋ ಮಂತ್ರದ ನೀರು ಹಾಕುತ್ತಿರಬೇಕು. ಸಸಿ ಕೆಲವೇ ದಿನಗಳಲ್ಲಿ ಗಿಡವಾಯಿತು. ಒಂದೆರಡು ವರ್ಷಗಳಲ್ಲೇ ಮರವಾಯಿತು. ಒಂದು ದಿನ ನೋಡಿದರೆ ಮರ ತುಂಬಾ ಹಣ್ಣುಗಳು. ಆ ಹಣ್ಣುಗಳು ಅದೆಷ್ಟು ಸಿಹಿ ಅಂತೀರಾ? ಆಹಾ...ಆ ಒಂದು ಪುಟ್ಟ ಬೀಜದೊಳಗಿಂದ ಅವರು ಒಂದು ದೊಡ್ಡ ಮರವನ್ನೇ ಹೊರತೆಗೆದರು. ಅಷ್ಟೇ ಅಲ್ಲ, ಮರದಿಂದ ಅಷ್ಟೂ ಸಿಹಿಸಿಹಿಯಾದ ಹಣ್ಣುಗಳನ್ನು ಹೊರತೆಗೆದರು. ಆ ಪವಾಡವನ್ನು ನೋಡಿ ಊರ ರೈತರೆಲ್ಲ ಅವರ ಭಕ್ತರಾದರು...’’
ಭಕ್ತಿ ಶಿಷ್ಯ ಕೇಳಿದ ‘‘ಗುರುಗಳೇ ಭಕ್ತಿ ಎಂದರೇನು?’’ ಸಂತ ನಕ್ಕು ಹೇಳಿದ ‘‘ಭಕ್ತಿ ಎಂದರೆ ಜೂಜು. ಒಮ್ಮೆ ಈ ಜೂಜಿಗಿಳಿದರೆ ಸಾಕು, ಒಂದೊಂದನ್ನೇ ಒತ್ತೆಯಿಟ್ಟು ಕಳೆದುಕೊಳ್ಳುತ್ತಾ ಹೋಗುತ್ತೀರಿ...ಕಳೆದುಕೊಳ್ಳುವುದರಲ್ಲೇ ಈ ಜೂಜಿನ ಮಜ ಇರುವುದು’’
ಹಬ್ಬ ‘‘ನಾಳೆ ಹಬ್ಬ’’ ಆ ಶ್ರೀಮಂತ ಮನೆಯ ಹುಡುಗ ಸಂಭ್ರಮದಿಂದ ಹೇಳಿದ. ‘‘ಹೌದಾ?’’ ಬಡ ಹುಡುಗೂ ಉದ್ಗರಿಸಿದ. ನಾಳೆ ಏನೋ ವಿಶೇಷ ಇರಬೇಕು ಎಂದು ಸಂತೋಷಪಟ್ಟ. ಮರುದಿನ ಶ್ರೀಮಂತ ಹುಡುಗ ಬೇಸರದಿಂದ ಹೇಳಿದ ‘‘ಹಬ್ಬದಲ್ಲಿ ಏನೂ ವಿಶೇಷವೇ ಇರಲಿಲ್ಲ. ನಮ್ಮ ಮನೆಯಲ್ಲಿ ಯಾವತ್ತೂ ಬಿರಿಯಾನಿ. ನಿನ್ನೆಯೂ ಬಿರಿಯಾನಿ ಮಾಡಲಾಗಿತ್ತು. ಯಾವತ್ತೂ ಹೊಸ ಬಟ್ಟೆಯೇ ಹಾಕುತ್ತಿದ್ದೆ. ನಿನ್ನೆಯೂ ಹೊಸಬಟ್ಟೆಯನ್ನೇ ಹಾಕಿದೆ. ಏನಿದೆ ಹಬ್ಬದಲ್ಲಿ ವಿಶೇಷ?’’ ಬಡಹುಡುಗನೂ ಅಷ್ಟೇ ಬೇಸರದಿಂದ ಹೇಳಿದ ‘‘ಹೌದು, ನಮ್ಮ ಮನೆಯಲ್ಲೂ ಹಬ್ಬದಲ್ಲಿ ಏನೂ ವಿಶೇಷವೇ ಇರಲಿಲ್ಲ. ಯಾವತ್ತೂ ಗಂಜಿಯೇ ಕುಡಿಯುತ್ತಿದ್ದೆವು. ನಿನ್ನೆಯೂ ಗಂಜಿಯನ್ನೇ ಕುಡಿದೆವು. ಯಾವಾಗಲೂ ಹರಿದ ಹಳೆಯ ಬಟ್ಟೆಯೇ ಹಾಕುತ್ತಿದ್ದೆವು. ನಿನ್ನೆಯೂ ಅದನ್ನೇ ಹಾಕಿದೆವು. ಏನಿದೆ ಹಬ್ಬದಲ್ಲಿ ವಿಶೇಷ?’’
ಕೊರಗು ಸಂತನ ಬಳಿ ಶಿಷ್ಯ ದುಃಖದಿಂದ ಹೇಳಿದ ‘‘ಗುರುಗಳೇ, ನಾನು ಇಂದು ಬೆಳಗ್ಗೆ ದೇವರ ಪ್ರಾರ್ಥನೆಯನ್ನು ಮರೆತು ನಿದ್ರಿಸಿ ಬಿಟ್ಟೆ. ನಾನೇನು ಮಾಡಲಿ?’’ ಸಂತ ಹೇಳಿದ ‘‘ದೇವರ ಪ್ರಾರ್ಥನೆ ಮಾಡಿದೆ ಎಂದು ಹೆಮ್ಮೆಯಿಂದ ತಿರುಗಾಡುವವನಿಗಿಂತ, ಪ್ರಾರ್ಥನೆ ಮಾಡಿಲ್ಲವೆಂದು ಕೊರಗುವವನೇ ದೇವರಿಗೆ ಹೆಚ್ಚು ಇಷ್ಟ. ಚಿಂತೆ ಮಾಡಬೇಡ’’
ಹಗ್ಗ ಸಂತನ ಆಶ್ರಮದ ತೋಟಕ್ಕೆ ಕಳ್ಳನೊಬ್ಬ ನುಗ್ಗಿದ. ಶಿಷ್ಯರೆಲ್ಲ ಸೇರಿ ಅವನನ್ನು ಹಿಡಿದರು. ಅವನೋ ಬಲಾಢ್ಯ. ಅವನನ್ನು ಕೊತ್ವಾಲನಿಗೆ ಒಪ್ಪಿಸಲು ಕೈಕಾಲು ಕಟ್ಟುವುದು ಅಗತ್ಯವಿತ್ತು. ಶಿಷ್ಯನೊಬ್ಬ ಆಶ್ರಮಕ್ಕೆ ಬಂದು ಹಗ್ಗಕ್ಕಾಗಿ ಹುಡುಕಾಡತೊಡಗಿದ. ಸಂತ ಕೇಳಿದ ‘‘ಏನು ಹುಡುಕುತ್ತಿದ್ದೀಯ?’’ ‘‘ಕಳ್ಳನನ್ನು ಕಟ್ಟಿ ಹಾಕಲು ಹಗ್ಗ’’ ‘‘ಪ್ರೀತಿ, ಸ್ನೇಹ, ಬಂಧುತ್ವದ ಹಗ್ಗದಿಂದ ಅವನನ್ನು ಕಟ್ಟಿ ಹಾಕಿ. ಅದು ಎಂದಿಗೂ ಕಡಿಯದಷ್ಟು ಗಟ್ಟಿಯಾದ ಹಗ್ಗ’’ ಸಂತ ಸಲಹೆ ನೀಡಿದ.
ದಿಕ್ಕು ಒಂದು ನದಿಯ ದಿಕ್ಕನ್ನು ತಿರುಗಿಸುವುದಕ್ಕೆ ಅವರು ಹೊರಟರು. ಹಲವು ವರ್ಷಗಳ ಬಳಿಕ ದಿಕ್ಕೇನೋ ಬದಲಾಯಿತು. ಆದರೆ ನದಿಯದ್ದಲ್ಲ, ಜನರದು. ನದಿಯ ದಿಕ್ಕು ಎಂದಿನಂತೆ ಸಮುದ್ರದ ಕಡೆಗೇ ಇತ್ತು. ಆದರೆ ಜನರ ದಿಕ್ಕು ಚೆಲ್ಲಾಪಿಲ್ಲಿಯಾಗಿತ್ತು.
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.
ಒಂದು ಹಳೆಯ ಕವಿತೆ. ನನ್ನ ಪ್ರವಾದಿಯ ಕನಸು ಸಂಕಲನದಲ್ಲಿ ಪ್ರಕಟವಾಗಿದೆ.
ಇರುಳು ಸಾಗರದಂತೆ ಬಿದ್ದುಕೊಂಡಿರುವಾಗ ಇವನು ನಿದ್ದೆಯನ್ನು ಬಲೆಯಂತೆ ಬೀಸಿ ಸ್ವಪ್ನಗಳನ್ನು ಆಯುತ್ತಾನೆ!
ದುರಾಸೆಯ ಹುಡುಗಾ... ಪುಟ್ಟ ದೋಣಿ ತುಂಬ ಕನಸುಗಳ ಗೋರುತ್ತಾ ತುಂಬುವನು ನೆಲೆ ತಪ್ಪಿ, ಇರುಳು ತೋಳು ಎತ್ತಿ ಒಗೆದರೆ ಹಗಲ ತೀರದಲ್ಲಿ ಪೆಚ್ಚಾಗಿ ಬಿದ್ದುಕೊಳ್ಳುವನು
ಸ್ವಪ್ನಗಳಿಗಾಗಿ ತನ್ನ ನಿದ್ದೆಗಳನ್ನೂ ಸಾಲಿಗನಂತೆ ಕಾಡುವ ಹಗಲಿಗಾಗಿ ತನ್ನ ಸ್ವಪ್ನಗಳನ್ನೂ ಅಡವಿಡುವ ಇವನ ವೌನದ ತಿಜೋರಿಯಲ್ಲಿ ಅದೆಷ್ಟು ಸಾಲಪತ್ರಗಳು!
ಠೇವಣಿಯೆಂದಿಟ್ಟ ನಾಳೆಗಳೆಲ್ಲಾ ಬೊಗಸೆಯಿಂದ ಮಂಜಿನಂತೆ ಕರಗಿ ಹೋಗುವುದನ್ನು ಕಂಡು ತಲ್ಲಣಗೊಂಡು ಅಳುವನು! ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.