ಒಂದು ಹಳೆಯ ಕವಿತೆ. ನನ್ನ ಪ್ರವಾದಿಯ ಕನಸು ಸಂಕಲನದಲ್ಲಿ ಪ್ರಕಟವಾಗಿದೆ.
ಇರುಳು ಸಾಗರದಂತೆ
ಬಿದ್ದುಕೊಂಡಿರುವಾಗ ಇವನು
ನಿದ್ದೆಯನ್ನು ಬಲೆಯಂತೆ ಬೀಸಿ
ಸ್ವಪ್ನಗಳನ್ನು ಆಯುತ್ತಾನೆ!
ದುರಾಸೆಯ ಹುಡುಗಾ...
ಪುಟ್ಟ ದೋಣಿ ತುಂಬ
ಕನಸುಗಳ ಗೋರುತ್ತಾ ತುಂಬುವನು
ನೆಲೆ ತಪ್ಪಿ, ಇರುಳು ತೋಳು ಎತ್ತಿ ಒಗೆದರೆ
ಹಗಲ ತೀರದಲ್ಲಿ ಪೆಚ್ಚಾಗಿ ಬಿದ್ದುಕೊಳ್ಳುವನು
ಸ್ವಪ್ನಗಳಿಗಾಗಿ ತನ್ನ ನಿದ್ದೆಗಳನ್ನೂ
ಸಾಲಿಗನಂತೆ ಕಾಡುವ
ಹಗಲಿಗಾಗಿ ತನ್ನ ಸ್ವಪ್ನಗಳನ್ನೂ
ಅಡವಿಡುವ ಇವನ
ವೌನದ ತಿಜೋರಿಯಲ್ಲಿ
ಅದೆಷ್ಟು ಸಾಲಪತ್ರಗಳು!
ಠೇವಣಿಯೆಂದಿಟ್ಟ ನಾಳೆಗಳೆಲ್ಲಾ
ಬೊಗಸೆಯಿಂದ ಮಂಜಿನಂತೆ ಕರಗಿ
ಹೋಗುವುದನ್ನು ಕಂಡು
ತಲ್ಲಣಗೊಂಡು
ಅಳುವನು!
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.
ವಾವ್ ಎಂತಹ ಕವಿ ನೀವು. ಭಾವನೆಗಳನ್ನು ಭಾಷೆಗಿಳಿಸುವಾಗ ಜೇನುಣಿಸುವ ರೀತಿ ನಿಮ್ಮದು.
ReplyDeleteಸ್ವಪ್ನಗಳನ್ನು ಆಯುತ್ತಾನೆ.
ಕನಸುಗಳನ್ನು ಗೋರುತ್ತಾ ತುಂಬುವನು.
ಮೌನದ ತಿಜೋರಿಯಲ್ಲಿ.
ಇವೇ ನಿಮ್ಮ ಗುಜರಿ ಅಂಗಡಿಯ ಚಿನ್ನವನ್ನು ತೋರಿಸುತ್ತದೆ.
ಕಾವ್ಯವನ್ನು ಜನ ಮಾನಸಕ್ಕೆ ಹತ್ತಿರ ತರುವುದು ಸಲೀಸು ಕೆಲಸವಲ್ಲ. ಅದು ನಿಮ್ಮಿಂದ ಮಾತ್ರ ಸಾಧ್ಯ.
ಈ ಕವನ ಸಂಕಲನ ಎಲ್ಲಿ ಸಿಗುತ್ತದೆ, ಸ್ವಲ್ಪ ತಿಳಿಸಿರಿ.
ಬೊಂಬಾಟ್...